ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Friday 30 December 2011

ಓ ಮನಸೆ....

ಓ ಮನಸೆ, ನನ್ನ ಕನಸೆ
ಒಮ್ಮೆ ನೀ ನಗು
ಹಡೆ ನೆಮ್ಮದಿಯೆಂಬ ಮಗು
ಹೋದದ್ದು ಹೋಗಲಿ
ಆಗುವುದೆಲ್ಲ ಆಗಲಿ
ಮಳೆ ಹನಿಗಳೊಂದಿಗೆ ಬೆರೆತು
ಕುಣಿ ಕುಣಿದು ಅತ್ತುಬಿಡು

ನೀನೆ ನನ್ನ ನಗು ಎಂದವರು
ಹೃದಯದಲ್ಲಲೆಯೆಬ್ಬಿಸಿಬಿಟ್ಟರು
ಅದನ್ನು ಬಲ್ಲೆ, ಆದರೂ
ಯಾರೋ ಮುಡಿದ ಹೂ
ನಿನಗೇತಕೆ?
ದಿಗಂತದಾಚೆಗೆ ತೇಲಿಹೋಗಿ
ಒಬ್ಬನೇ ಕುಳಿತೊಮ್ಮೆ ನಕ್ಕುಬಿಡು

ಬಾಳು ಬದುಕಲು ಬಿಡುತ್ತಿಲ್ಲ
ಎಂಬ ನಿನ್ನ ದೂರು
ಒಪ್ಪದ ತಕರಾರು
ಮುಂದಿನ ದಾರಿಯಲ್ಲಿ
ಸಾವಿರ ಮುಳ್ಳಿದ್ದರೇನು
ಕಬ್ಬಿಣದ ಚಪ್ಪಲಿ ಹಾಕಿಕೊಂಡು
ಹಾಗೆ ಹೊಸಕಿಬಿಡು

ನಿನ್ನ ಸುತ್ತ ಹೂ ಚೆಲ್ಲುತ್ತಿದೆ
ಹಸಿರ ರಾಶಿ, ಮೇಘವರ್ಷ
ಕೈ ಹಿಡಿಯಲು
ಎದೆ ಚುಚ್ಚಲು ಯಾರೂ ಇಲ್ಲ
ನಿನ್ನದೇ ಲೋಕ
ನಿನ್ನವರು, ದೂರದಲ್ಲಿ
ನಗುತಿರುವರು
ಅವರ ಪಾಡಿಗವರಿರಲಿ
ನಿನ್ನ ಪಾಡಿಗೆ ನೀನೊಮ್ಮೆ ನಕ್ಕುಬಿಡು
ಪ್ಲೀಸ್....

ಹೊಸ ವರ್ಷ...

ಹೊಸತೇನಿದೆ?
ಎಲ್ಲಾ ಹಳತೆ
ಬಟ್ಟೆ ಬದಲಿಸಿದಂತೆ
ಜನವರಿ ಒಂದರಂತೆ

ಪೊರೆ ಕಳಚಿಟ್ಟ ಸರ್ಪ
ಎದೆಗೂಡಿದ ದರ್ಪ
ಒಣನೆಲ ನುಂಗಿದ ಜಲ
ಮರದ ಮೇಲಿನ ಫಲ
ಎಲ್ಲೋ ಬತ್ತಿ, ಅಲ್ಲೆಲ್ಲೋ ಸುತ್ತಿ
ಮತ್ತೆ ಬಂದು ಸಿಕ್ಕಿಕೊಂಡವೆ

ಹಿತ್ತಾಳೆಗೆ ಚಿನ್ನದ ನೀರು
ಮುಖಕ್ಕೆ ಸ್ನೋ ಪೌಡರು
ಮದುವಣಗಿತ್ತಿಗೆ ರೇಷ್ಮೆ ಸೀರೆ
ಕತ್ತಲೆಗೆ ಚಂದ್ರನಾಸರೆ
ಬಣ್ಣ ಬದಲಾವಣೆಗಷ್ಟೆ
ಮತ್ತೆ ಮೊದಲಿನಂತಾಗಲಷ್ಟೆ

ಹೊಸ ವರ್ಷಕ್ಕೆ ಹೊಸತೇನಿಲ್ಲ
ಹಳೆಗೋಡೆಗೆ ಬಣ್ಣ ಮೆತ್ತೋಣ
ದ್ವೇಷಿಗಳೊಂದಿಗೆ ಕೂಡೋಣ
ಅಲ್ಲಲ್ಲಿರುವ ಕಸವ ಗುಡಿಸೋಣ

ಕ್ಯಾಲ್ಕ್ಯುಲೇಟರ್... (ಅವಧಿಯಲ್ಲಿ ಪ್ರಕಟವಾಗಿದ್ದ ಕವಿತೆ)

ತಲೆಮೇಲೆ ನಾಲ್ಕು ಬಿಟ್ಟರೂ
ಸರಿಯಾದ ಉತ್ತರ ಹೇಳುತ್ತದೆ
ನನ್ನ ಮುದ್ದು ಕ್ಯಾಲ್ಕ್ಯುಲೇಟರ್
ಇದ್ದರೆ ಸಾಕು ಬ್ಯಾಟರಿ ಪವರ್!

ಮೊನ್ನೆ ಒಂದು ತಂದಿದ್ದೆ
ಕೇವಲ ಇಪ್ಪತ್ತು ರೂಗಳು
ಬಿಳಿ ಬಣ್ಣದ ಅಟಿಕೆ
ಪ್ರಶ್ನಿಗಳಿಗೆ ಉತ್ತರ ಮುದ್ರಿಕೆ
ನಾಲಗೆ ತುಂಬಾನೆ ಜೋರು
ತಟ್ಟನೆ ಉತ್ತರ ಹೇಳುವ ಖಬರು!

ಹೀಗೆ ಒಂದು ಘಂಟೆ ಹಿಂದೆ
ಗಣಿತಸೂತ್ರದ್ದೊಂದು ಲೆಕ್ಕ
ಮೆದುಳಿನಲ್ಲಿ ಕಲೆಸಿದ್ದೆ
ಕೊನೆಯ ಹಂತ ಮಾತ್ರ
ಕ್ಯಾಲ್ಕ್ಯುಲೇಟರ್ ಗೆಂದು ಇರಿಸಿದ್ದೆ!

ಕೊನೆಗೂ ಕೈ ಕೊಟ್ಟಿತು
ಸರಿಯಾದ ಉತ್ತರ ಬರಲಿಲ್ಲ
ಪುಸ್ತಕದುತ್ತರಕ್ಕೆ ಹೊಂದಲಿಲ್ಲ
ಅದೆಲ್ಲಿತ್ತೋ ಕೋಪ, ನೆಲಕ್ಕೆಸೆದು
ಎರಡು ಹೋಳು ಮಾಡಿಬಿಟ್ಟೆ!

ಬುದ್ಧಿವಂತ ಕ್ಯಾಲ್ಕ್ಯುಲೇಟರ್
ಒಬ್ಬ ದಡ್ಡನ ಕೈಗೆ ಸಿಕ್ಕಿ ಓಳಾಗಿಹೋಯಿತು!

Wednesday 28 December 2011

ಆಣತಿ

ಪ್ರಾಣಿ ಕೊಲ್ಲದ ಜನರು
ಸಸ್ಯಾಹಾರಿಗಳಿವರು
ಜೀವವಿರುವ ಸಸ್ಯ ತಿಂದರು
ಸೊಪ್ಪಿನ ಸಾರು
ಜೊತೆಗೆ ಕೆನೆಮೊಸರು
ಕೆಚ್ಚಲ ಹಾಲು ಕರೆದರು

ತತ್ತಿಗರ್ಭ
ನಾಲಗೆ ಮೇಲಿನ ರುಚಿ
ಹೋದದ್ದು ಒಂದು ಕೋಳಿ
ಒಂದು ಶೇಂಗಾ ಪೊರಟೆಯೊಳಗೆ
ಎರಡು ಬೀಜ
ಅವಳಿ ಜವಳಿ ಸಾವು
ಎಲ್ಲರೂ ಕೊಲೆಗಡುಕರೇ
ಪಕ್ಷಪಾತಿಗಳಷ್ಟೇ!

ಜಿಂಕೆ ತಿಂದ ಹುಲಿ
ಹಿಕ್ಕೆ ಹಿಕ್ಕಿತು
ಜಿಂಕೆ ತಿನ್ನುವ ಹುಲ್ಲು
ಬೆಳೆಯಲು
ಮತ್ತೊಂದು ಕೊಬ್ಬಬೇಕಲ್ಲ!
ಆವಿಯಾದ ನೀರು
ಮಳೆಯಾಗಿ ಸುರಿಯಿತು
ಲೋಕಕ್ಕೆಲ್ಲ
ಹರಡಬೇಕಲ್ಲ

ಬದುಕೊಂದು ವೃತ್ತದೊಳಗಿನ
ವೃತ್ತಾಂತ
ಸರಿ ಎಂದದ್ದಷ್ಟು
ಅದಕ್ಕೆ ಎದೆಗೊಟ್ಟು ನಿಂತ
ಮತ್ತಷ್ಟು ತಪ್ಪುಗಳಾದವು
ಸರಿ ತಪ್ಪುಗಳ ಸರಮಾಲೆ
ಮಾನವ ನಿರ್ಮಿತ ಬಲೆ
ಜೀವನವೆಂಬುದೊಂದು ಅಣತಿ

Tuesday 27 December 2011

ನನ್ನ ಗೆಳತಿಗೊಂದು ಗಂಡು ಬೇಕು... (ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿತ)

ಬಿಳಿ ಆಗಸದ ಸೀರೆಸೆರಗಿನಲ್ಲಿ
ಕೋಟಿ ನಕ್ಷತ್ರದುಂಗುರಗಳು
ಸೆರಗ ಹಾಸಿ ಕಣ್ಣರಳಿಸಿ ನಿಂತರೆ
ಹಸಿರ ರಾಶಿ, ಬೆಟ್ಟ ಗುಡ್ಡ
ಭೋರ್ಗರೆದ ನೀರ
ಬೆಣ್ಣೆ ನೊರೆಯು ನಿನ್ನ ಹಣೆಯಲ್ಲಿ

ನಿನ್ನೆ ಸಂಜೆ ಬಿಡದೇ ಸುರಿದ
ಬಿರು ಬಿರು ಬಿರುಗಾಳಿ ಮಳೆಗೆ
ಅಳಿಸಿಹೋಗಿದೆ ನೊಸಲ ಬಿಂದಿಗೆ
ಹೊಡೆದ ಕೈಗಾಜುಗಳು ರಕ್ತ ಹೀರಿ
ಲೋಕರೂಢಿ ದಾರ್ಷ್ಯ ಮೀರಿ
ತಾಳಿ ಕಿತ್ತಿದ್ದಾರೆ, ಮೊನ್ನೆಯಷ್ಟೇ ಇತ್ತು

ಆದರೂ ಅವಳ ಮೊಗದಂಚಿನ
ರವಿಕಿರಣ ಮೈಬಟ್ಟೆ ಕಳಚಿಲ್ಲ
ಮರಳು ಗಾಡಿನ ಓಯಸಿಸ್ ಅವಳು
ಒಮ್ಮೊಮ್ಮೆ ಸಮುದ್ರವಾಗುವಳು
ಕುಡಿಯಲು ಮಾತ್ರ ತೊಟ್ಟು ನೀರಿಲ್ಲ
ಬಿಳಿ ಸೀರೆಯುಟ್ಟರೆ ಲಕ್ಷಣವಲ್ಲ

ಕಾಮದ ವಾಸನೆಗೆ ದುಂಬಿ ಬಂತು
ಅವಳಿಗೆ ಹಳೆ ಗಂಡನ ವಾಸನೆ
ಮೊನ್ನೆ ಮೊನ್ನೆ ಗಿಳಿ ಕಚ್ಚಿದ್ದ ಹಣ್ಣು
ಸ್ವಲ್ಪ ಎಂಜಲಾಗಿ ಹೊಳೆವ ಕಣ್ಣು
ಮುರುಟಿರುವ ಹೂವಾಗಿದ್ದಾಳೆ, ಮುದುಡಿಲ್ಲ
ನನ್ನ ಗೆಳತಿಗೊಂದು ಗಂಡು ಬೇಕು

ಶ್ವೇತ ಸೀರೆಯಂಚಿನಲ್ಲಿ
ಬದುಕಿನ ಕಪ್ಪು ಮಸಿ ಮೆತ್ತಿದೆ
ಬೋಳು ಕೈ ಜೊತೆ ಬರಿದು ಹಣೆ
ಸಾವಿನವಸರಕ್ಕೆ ಯಾರು ಹೊಣೆ?
ಶುದ್ಧ ಮನಸ್ಕ ಹೆಣ್ಣುಮಗಳಿಗೆ
ಗಂಡು ಬೇಕು ಗಂಡನಾಗಲು

Sunday 25 December 2011

ಐ ಹೇಟ್ ಯೂ...

ಬಂದರು ಸೈನಿಕರು
ಅನಾಸಿನ್, ಡೋಲೋಪರ್
ವಿಕ್ಷ್ ಆಕ್ಷನ್ 500
ಆಂಕ್ಸಿಟ್ ನಿದ್ದೆ ಮಾತ್ರೆಯೊಂದಿಗೆ
ಅಮೃತಾಂಜನ್ ಡಬ್ಬ
ಹಿಡಿದು ಬಂದ ಒಬ್ಬ
ಬೀದಿಯಲ್ಲೀಗ ಕರ್ಪ್ಯೂ ಜಾರಿಯಾಗಿದೆ
ಅಲ್ಲ್ಲಲ್ಲಿ ಗುಂಡಿನ ಸದ್ದು
ನನ್ನೆದೆಯಲ್ಲೀಗ ಉದ್ವಿಗ್ನ ಪರಿಸ್ಥಿತಿ

ತಾಲಿಬಾನ್ ಎದೆ ನನ್ನದು
ಹೆಣಗಳೂಳುವ ಮಸಣವಿದು
ಅವಳಿಗಾಗಿ ಅಳುತ್ತಿರುವೆ
ಅವಳಿಲ್ಲದೆ ಸಾವಿಗೆ ಕಾದಿರುವೆ

ಏನೇ ಆಗಲಿ

ನನ್ನನ್ನೊಂಟಿ ಮಾಡಿ ಹೋಗಬಾರದಿತ್ತು ನೀನು..

Monday 19 December 2011

ಸಕ್ಕರೆ ಹರಳು...

ದನದ ಕೊಬ್ಬಲ್ಲೇ ಉಳಿಸಿ
ಸಕ್ಕರೆ ಕರಗಿಸಿತಿರುವೆ
ಮತ್ತೆ ಬರದದು
ಸಿಕ್ಕಿದೆ ಮತ್ತೊಂದು ಹರಳು
ಕರಗುವ ಸಕ್ಕರೆಗೋ
ಮೈ ಕರಗಿಸಿಕೊಳ್ಳುವ ತವಕ

ಪಾರ್ಕ್ ಅರಗಿನ ಬೆಂಚಿನಲ್ಲಿ
ತಡಿ ಪೊದೆ ನೆರಳಲ್ಲಿ
ದೂರದೂರಿನ ಲಾಡ್ಜ್ ಗಳಲ್ಲಿ
ಅಲ್ಲಲ್ಲಿ ಉಚಿತವಾಗಿ ಸಿಕ್ಕ
ಸರ್ಕಾರಿ ಸೇವೆಗಳಲ್ಲಿ
ಸಿಕ್ಕಿ ನರಳಿದೆ ಇಳೆಯನ್ನು
ಸೂರ್ಯನೆಡೆಗೆಳೆದ ಪ್ರೀತಿ

ಆಗ್ರಾದ ತಾಜ್ ಮಹಳಲೊಳಗೆ
ಷಹಜಹಾನ್ ಅಳುತ್ತಿದ್ದಾನೆ
ಮಮ್ತಾಜ್ ಳ ಪುಪ್ಪುಸ ಹಿಡಿದು
ಆಗಷ್ಟೇ ಕೊಯ್ದ ಚೆಂಗುಲಾಬಿಗಳಿಗೆ
ಭಗ್ಗನೆ ಬುಗಿಲೆದ್ದ ಅಗ್ನಿ
ಕೆಂಡದೊಳಗಣ ಹಸಿ ಹಸಿ ಬಿಸಿ

ಅಲ್ಲೊಬ್ಬ ದೇವದಾಸ್
ಕುಡಿದೇ ಸತ್ತ ಪಾರ್ವತಿಗೆ
ವ್ಯರ್ಥ ಸಮಯಕ್ಕಳುತ್ತಿದ್ದಾನೆ
ದೃಷ್ಟಿ ಬದಲಿಸಿ
ಅರೆಕ್ಷಣ ದಂಗಾದರೂ
ಕೊಡವಿಕೊಂಡುಗಿದು ಹೋದ

ಒಂದರೆಗಳಿಗೆಯ ವಿಷಯ
ವಿಷಹೂಡಿ ಹಾವಾಡಿಸಿತು
ಕಕ್ಕಿದ ಕಣ್ಮಂಜು ಮೈಏರೇ
ಬಾಳೇ ಕೆಸರೆರೆಚಿದ ತೊರೆ
ರವಿಯ ನುಂಗುವ ತವಕದಿ
ಕೆರೆ ನೀರು ಖಾಲಿ ಖಾಲಿ

ಕಣ್ಣೇ ಕಾಮಕ್ಕೆ ಮೂಲವೇ
ಹೆಣ್ಣೇ ನೀ ಕರಗದ ಒಲವೇ?
ನಾಲಗೆ ಮೇಲಿಟ್ಟ ಸಕ್ಕರೆ
ನಾಚಿ ನೀರಾದರೂ ತಿಂದ
ಜಿಹ್ವೆಗೆ ಸ್ಮರಿಸುವ ಸ್ಮೃತಿಯಿರಲಿ
ಅದನಾಯುವ ತಾಳ್ಮೆ ನಿನಗಿರಲಿ

Sunday 18 December 2011

ಐಶ್ವರ್ಯ ರೈ ಕರೆ ಮಾಡಿದ್ದಳು..


ಕೆನ್ನೆ ಮೇಲೆ ಕೆಸರು
ಮುಸುರೆ ತೊಳೆದಳು ಪುಟ್ಟಿ
ಹೊಸತು ಕನಸು ಕಾಣುವ
ಪುರುಷೋತ್ತಿಲ್ಲ

ಮಿಣುಕು ಹುಳ ಅಣಕಿಸಲು
ಇರುಳ ಮಸಿ ಮೆತ್ತಿಕೊಂಡು
ಅರಳುಗಣ್ಣಲ್ಲಿ ನೋಡಿದವು
ಕೆಸರು ಹರಿಸಿದ ತೊರೆಯಲ್ಲಿ
ಪ್ಲಾಸ್ಟಿಕ್ ವಸ್ತು,ಅವಕ್ಕೆ ಮುತ್ತು
ಕಸದಿಂದಲೇ ಸಂಜೆಯ ತುತ್ತು

ಅಲ್ಲಲ್ಲಿ ಅಳುತ್ತಿದ್ದವು
ಕಂದಮ್ಮಗಳು
ಕಾಮ ಕಸಿವಿಸಿಗೊಂಡು
ಕಸದಲ್ಲಿ ಬಿದ್ದ ಪಾಪಗಳು!

ಬೆಂಕಿ ಬಿದ್ದಿದೆ ಅಮ್ಮನೆದೆಗೆ
ಒಲೆಗೆ ಮಾತ್ರ ಅಟ್ಟಿಲ್ಲ
ಸೌದೆಯಿದ್ದರಷ್ಟೇ ಸಾಕೆ?
ಹುಟ್ಟಿಸಿದ ಈ ಮಹಾತ್ಮ
ಮನೆ ಮೆಟ್ಟಿದರೆ ಅದೇ ಜಗಳ
ಮೂಲೆಯಲ್ಲಿ ಕುಳಿತು ಬಾಡಿತೊಂದು ಮನ

ನಾನೇ ಮುಟ್ಟಲು ಹೇಸುವ ಬೂಟು
ಅವುಗಳು ಮುಟ್ಟಿ ಎದೆ ತಟ್ಟಿದವು
ಗಲ್ಲಿ ಗಲ್ಲಿಯಲ್ಲಿ, ಬಸ್ ನಿಲ್ದಾಣದಲ್ಲಿ
ಕೈಚಾಚಿ ನಿಂತಿವೆ
ಕನಸುಗಳ ಹೊತ್ತು
ಅಲೆದಾಡುವವರ ನೋಡುತ್ತಾ
ಮುತ್ತಿದ ನೊಣಗಳ ಕೊಲ್ಲುತ್ತಾ
ನೀರು ಕಾಣದೆ ನೂರು ದಿನವಾಯ್ತು
ನಾರುತ್ತವೆ ಕೊಳೆ ಪದರವ ಹೊತ್ತು

ಅಲ್ಲ...!!!

ಹಲ್ಲು ಮೂಡಿಲ್ಲ, ಗಲ್ಲ ಚಿಗುರಿಲ್ಲ
ಬೆಲ್ಲದಂತ ಮೊಣಕೈ ಬಿಡಿಸಿಲ್ಲ
ಅರೆ ತೆರೆದ ಕಣ್ರೆಪ್ಪೆಯೊಳು
ಮಿಣ ಮಿಣ ಮಿಣುಕುವ ಕಣ್ಣು
ಹುಟ್ಟಿ ಮೂರು ದಿನವಾಗಿಲ್ಲ
ಆಗಲೇ ಐಶ್ವರ್ಯ ರೈ ಹೆಣ್ಣು ಕುಡಿಯ
ಭಾವ ಚಿತ್ರಕ್ಕೈದು ಕೋಟಿಯಂತೆ!

ಮೊನ್ನೆ ಕರೆ ಮಾಡಿದ್ದಳು
ನೋಡಲೆಂದು ಹೋಗಿದ್ದೆ

ಅವಳ ಮನೆಯ ಗೋಡೆಯ ಮೇಲೆಲ್ಲ
ಈ ಮಕ್ಕಳುಗಳ ಚಿತ್ರವೇ ಇತ್ತು
ಆಕಳಿಸುತ್ತಾ ಅಳುತ್ತ ನಿಂತಿದ್ದವು
ಬಾಳ ಮಂಪರಿನಲ್ಲಿ....

ತಳವಿಲ್ಲದವರು...

ಆಡಿಕೊಳ್ಳುವವರೆಲೆಯಡಿಕೆ ಬಾಯಲ್ಲಿ
ಹುಟ್ಟಿದ ಶತ ಹೊಲಸು ಕಥೆಯಲ್ಲಿ
ನಿಮ್ಮನ್ನೆಲ್ಲ ಕಂಡೆ

ಇವರೋ ರೇಷ್ಮೆ ಸೀರೆಯುಟ್ಟವರ
ಮೇಲೆ
ಹರಿದ ಸೀರೆ ಕಥೆ ಕಟ್ಟಿದವರು
ಹರಿದ ಸೀರೆಯುಟ್ಟವರಿಗೆ
ಹರಿದವರವರೇ ಎಂದು
ಬೊಂಬೆ ಕೆತ್ತಿಕೊಟ್ಟವರು
ಸೆರಗು ಜಾರಿದ್ದು ಕಂಡು
ಮರ್ಯಾದೆಯನ್ನು
ಸೆರೆಮನೆಗೆ ಹಂಚಿದವರು
ಗಂಡ ಹೆಂಡತಿ ನಡುವೆ
ಕೆಂಡ ಸುರಿದು
ಹಾಯಿರಿ ಎಂದು ದೇವರ
ಹೆಸರಿಟ್ಟವರು
ಅಕ್ಕನ ಜೊತೆ ಒಂಟವನ
ಪಕ್ಕವೇ ನಿಂತು
ಸಂಬಂಧಕ್ಕೆ ಕೆಸರೆರೆಚಿದವರು
ಗಾಂಧಿ ಗಾದಿಗೆ
ಹಿಂಸೆಯ ಟೊಂಕ ಕಟ್ಟಿ
ಹರಿದ ನೆತ್ತರಿಗೆ ಬೆರಳಜ್ಜಿ
ಕುಂಕುವ ಇಟ್ಟುಕೊಂಡವರು
ಶುದ್ಧ ಬುದ್ಧನಲ್ಲಿ ನಿರ್ಬುದ್ಧತೆ
ತಂದ ಸಿದ್ಧ ಕೊಳಕು ಹಸ್ತರು
ತಳವಿಲ್ಲದವರು ತಳ ಸುಡುವವರು
ಮಗು ನಗುವಿನ ಸುಳ್ಳು ಮೊಗದವರು

ಜಾತಿ ಜಾತಿಯೆಂದು
ನೀತಿ ಕೊಂದು
ದೇಶ ದೇಶದ ನಡುವೆ
ದ್ವೇಷ ತಂದು
ಮತ ಮತದ ನಡುವೆ
ಪಂಥ ಬಂದು
ಇತಿಹಾಸವನ್ನು ಕೊಡಲಿಯಲ್ಲಿ
ಕೊಚ್ಚಿದವರು
ಹಿಂಸೆ ಪಿಪಾಸುಗಳು
ಬಂಧನದ ಗಟ್ಟಿಗಂಟು ಬಿಚ್ಚಿ
ಚಂದ್ರಗೆ ಸೂರ್ಯನ ತಂದು
ನೂರ್ಕಾಲ ಬಾಳಿ ಎಂದವರು

ಒಂದು ಹೃದಯ
ಮತ್ತೊಂದೆದೆಗೆ ಸೋತಿರಲು
ಆ ಸೋಲನ್ನು ನುಂಗಿ
ಗೆಲವು ಕಂಡೆವೆಂದು ಬೀಗುವವರು
ಇಷ್ಟಪಟ್ಟವನ ಭಾವ
ಗೋರಿಯೊಳಗೆ ಹೂತು
ಅನಿಷ್ಟಕ್ಕೆ ಕತ್ತು ಕೊಡಿಸಿ
ಕಷ್ಟದಲ್ಲಿ ಬಾಳುವಾಗ, ಉಬ್ಬಸದಿ
ಮತ್ತೆ ಮತ್ತೆ ನಕ್ಕವರು
ದೇವದಾಸನಿಗೆ ಪಾರ್ವತಿಯನ್ನು
ತರದೇ ಕೈಗೆ ಮದಿರೆ ನೀಡಿ
ರೋಮಿಯೋ ಜೂಲಿಯಟ್ ಮುಂದೆ
ನಿಗಿ ನಿಗಿ ಬೆಂಕಿ ಸುರಿದು
ತಾಜ್ ಮಹಲ್ ಗೆ
ಕತ್ತಲಲ್ಲಿ ಮಸಿ ಬಳಿಯುವವರು
ಭಗ್ಗೆನ ಬೆಂಕಿ ಹಚ್ಚಿದವರು

ನಾವೆಲ್ಲ ಇಲಿಗಳಿವರಿಗೆ
ಪ್ರಾಣಸಂಕಟದರಿವಿಲ್ಲದ ಮಾರ್ಜಾಲ
ಹನಿಮಳೆಯಿವರಲ್ಲ
ಸುನಾಮಿಯ ಕೊಳೆ
ತೊಳೆಯುತ್ತೇವೆಂದು ಒಂದು ಕಟ್ಟು ಬೀಡಿಯಲ್ಲಿ
ಪ್ರಪಂಚವನ್ನುರಿದವರು
ಅನುಭೂತಿಗಳ ಕೊಚ್ಚೆಯಲ್ಲಿ ಹೊಸಕಿ
ಬಾಡದ ಮೊಲ್ಲೆಯೊಂದಿಗೆ
ಕೂಡದ ಪರಿಮಳದ ಹಂಗಿಗೆ
ಬದುಕ ತಳ್ಳಿಸಿದವರು

Sunday 11 December 2011

ಎಲ್ಲಿಂದ ಎಲ್ಲಿಗೆ??

ಕ್ಷಣಿಕ ಸುಖದಾಸರೆಗೆ
ಎರಡು ಚೈತನ್ಯ ಕಲೆತು
ಜೀವವೊಂದು ನಲಿಯಿತು
ಎಲ್ಲಿತ್ತು? ಕಾಡುವ ಪ್ರಶ್ನೆ

ಬಂದ ಜೀವ ಸಾವಿಗೆ ಕಾದು
ಬೊಗಸೆ ನೀರಲಿ ಜೀವ ಕಂಡು
ಹಸಿವಿನ ತ್ರಾಣಕ್ಕೆ ಅನ್ನವಿಕ್ಕಿ
ಉಪ್ಪಿಗೆ ನಾಲಗೆ ಚಪ್ಪರಿಸಿ
ಕಾಮ ಕ್ರೋದಕ್ಕೆ ಬಲಿಯಾಗಿ
ಎದ್ದು ಬಿದ್ದು ಓಡುತ್ತಿತ್ತು
ಅರಿವಿಗೆಟುಕದ ಮತ್ತೊಂದು ಪ್ರಶ್ನೆ

ಹೀಗೆ ಎರಡು ದಿನ ಸಾಗಿರಲು
ಮೂರನೇ ದಿನ ಬೆನ್ನು ಬಾಗಿ
ಕತ್ತಿನಿಂದ ನೊಗ ಕಳಚಿ
ಸುಸ್ತಾಗಿ ಬಿದ್ದಿರಲು, ಶಯನ
ಇಲ್ಲಿಗೆ ಬಂದದ್ದೋ ಏಕೋ ಏನೋ
ತಿಳಿಯದೆ ಹೊರಟಿತು ಜೀವನ್ಮರಣ
ಎಲ್ಲಿಗೆ? ಮತ್ತೆ ಕಾಡುವ ಪ್ರಶ್ನೆ

Friday 9 December 2011

ಬನ್ನಿ ಇವನನ್ನು ಪರಿಚಯಿಸುತ್ತೇನೆ...


ಪಡಸಾಲೆಯಲ್ಲಿ ಪವಡಿಸಿ
ಇಣುಕುವ ಬಾಗಿಲ ಬಳಿ
ನನ್ನೊಡನೆ ಹುಟ್ಟಿದ ತಳಿ
ನಾವು ಅವಳಿ ಜವಳಿ
ಬನ್ನಿ ಇವನನ್ನು ಪರಿಚಯಿಸುತ್ತೇನೆ

ಊರೆಲ್ಲ ಸುತ್ತಿ ಯಾರ್ಯಾರನ್ನೋ
ಕೊಲ್ಲುವುದವನ ಕೆಲಸ
ಕಪ್ಪೆಯೂರ ಹಾವು
ನಮ್ಮ ಮನೆಯೆಲ್ಲರೆದೆಗೂ
ಕೊಳ್ಳಿ ಇಟ್ಟಿದ್ದಾನೆ ಮಳ್ಳ
ಕೈಗೆ ಸಿಗದೆ ಹರಿವ ಹಳ್ಳ

ನೆರೆಮನೆಯ ರಂಗವ್ವನ
ತಾಳಿ ಎಳೆದ ಮೊನ್ನೆ
ಎದುರು ಮನೆಯ ರಂಗಿಯ
ಮದರಂಗಿ ಮಗುವನ್ನು
ನೀರಿಗೆಸೆದ, ಅವಳ ಕತ್ತಿಗೂ
ಹಗ್ಗ ಬಿಗಿದು ಹೆದರಿ ಓಡಿದ್ದ

ಹೆತ್ತಮ್ಮನನ್ನೋ ಎಂದೋ
ನುಂಗಿ, ತೋರಿಸಿ ತನ್ನ ಭಂಗಿ
ಅಪ್ಪನೆದೆಗೊದ್ದು ಕದ್ದೋಡಿದ್ದ
ನಿಜಕ್ಕೂ ಅವನೊಬ್ಬ ಕಳ್ಳ
ಸತ್ಯರೂಪಿ ಹೇಳನು ಸುಳ್ಳ
ತುಂಬುವನು ನನ್ನರಿವಿನ ಬಳ್ಳ

ಒಮ್ಮೆ ತಂಗಾಳಿಯಲ್ಲಿ ಹೊರನಿಂದು
ನನ್ನ ರಕ್ತಿಯನ್ನು ಎಲ್ಲೆಲ್ಲೂ ಕಂಡೆ
ಹಸಿರ ಹಾಸಿ ಮಲಗಿ
ನೀರಿನೊಳಿಣುಕಿ
ಎಲ್ಲರ ಕತ್ತು ಹಿಡಿದದುಮಿದ್ದನು
ಹತ್ತಿರ ಸುಳಿಯದ ಹಾವವನು
ಕಪ್ಪೆಯಪ್ಪನು, ಬಳಿ ಸಾರೇ ನುಂಗುವನು

ಹೆಂಡ ಕುಡಿಯನೊಳಗಿರುವನು
ಧೂಮದ ರಕ್ಕಸ
ವಾಹನದ ವೇಗದ ರಾಕ್ಷಸ
ಕೈಯಲ್ಲಿ ಹಿಡಿದೊಂದು ಹಗ್ಗ
ತೋರಿಸಿಕೊಡುವನು ಕೆಲವರಿಗೆ ಸಗ್ಗ

ನನ್ನಣ್ಣನೆಂಬುವ ಖುಷಿಯೋ
ಕೊಲೆಗಡುಕನೆಂಬ ವಿರಸವೋ
ಅರಿಯದೆ ಕಂಡೆನು ಸೋಲು
ಕೈಬೆರಳ ನುಲಿದ ತಿಳಿನೂಲು
ಹೆತ್ತಮ್ಮನಾಣೆ ನಾವು ಅವಳಿ ಜವಳಿ
ನನ್ನ ದೇಹಕ್ಕೆ ಹೆಸರಿಟ್ಟವರು ನೀವು
ಅವನ ಹೆಸರು ಯಮ ಉಸುರಿದ ಸಾವು

Thursday 8 December 2011

ಸಿಕ್ಕ ಸಿಕ್ಕ ಹೂಗಳ ಆಯ್ದು ತಂದೆ...

ಅಲ್ಲಿ ಇಲ್ಲಿ ಗಲ್ಲಿಯಲ್ಲಿ, ಬೇಲಿಯಲ್ಲಿ
ಮಾರುಕಟ್ಟೆಯ ಮೊಗಸಾಲೆಯಲ್ಲಿ
ಚೆಂಗುಲಾಬಿ, ಸಂಪಿಗೆಯಸಳು
ಕನಕಾಂಬರ ಜಾಜಿ ಮಲ್ಲಿಗೆಯರಳು
ಬಿರಿದು ಬಿಕರಿಗೆ ನಿಂತಳುತ್ತಿದ್ದವು
ಇನ್ನೂ ಮುಡಿಗಿಡದ ಎಳಸು ಹೂವು

ಹೊಟ್ಟೆ ತೀಟೆಗೆ, ಬಟ್ಟೆ, ತಾವಿಗೆ
ಕಂಡವರು ಕೊಂಡವರು
ಸಿಹಿಯುಂಡವರ ವಾಂಛೆ ಕಟ್ಟೆಗೆ
ಭೋರ್ಗರೆಸಿದ ಜಲಪಾತಕ್ಕೆ
ಹೊಸಕಿಹೋದವು ಚೆಂಗುಲಾಬಿಗಳು
ಬೆಂಕಿಯೂರಲ್ಲಿ ಬೆವರು ಸುರಿಸಿ

ಕೊಯ್ದು ದಾರಕ್ಕವನು ಪೋಣಿಸಿ
ಹಾದಿ ಬೀದಿಯವರಿಗೆ ಕಾಣಿಸಿ
ಮಾರಲಿಟ್ಟವರದು ಚೇಳುಮೊಗ
ಹೊತ್ತು ಗಂಜಿಗೆ, ತುತ್ತು ಜೀವಕ್ಕೆ
ಮಧುಮಂಚದಲ್ಲಿ ವಿಷಪ್ರಾಷನ
ಅತ್ತಿತು ಕಾಡು ಸಂಪಿಗೆ, ಬಾಡಿ ಮೆಲ್ಲಗೆ

ತೂ.. ಈ ಹೂಕಟ್ಟುವ ಮಾರಾಯ್ತಿ
ತೆನೆಕಟ್ಟಲಿಲ್ಲ, ಮೊನೆ ಕಾಣಿಸಲಿಲ್ಲ
ದೇವರ ಹಾರದ ಗೆಳತಿಯೊಡಗೂಡಿ
ಒಡನಾಡಿಯಾಗುವಲ್ಲಿದ್ದೆ, ಪಾಪಿಯವಳು
ಕೈಜಾರಿಸಿ ಬೀಳಿಸಿ ಬೀಳಿಸಿಬಿಟ್ಟಳು
ವಿಷಯವಾಸನೆಯ ವಿಷಕೂಪಕ್ಕೆ

ಅಲ್ಲಿನೋಡಿ ನಶ್ವರ ಬೀಜದೊಗಲು
ಒಳಗಿರುವನಂತೆ ಈಶ್ವರ ಕಾಯಲು
ಒಂದು ಮೊಳೆಸಿ ನೂರು ಹುಟ್ಟಿಸಿ
ಮತ್ತೆ ಬೆಳೆಸಿ ಕೊಂಡೊಯ್ಯುವುದು
ಅಸಮನಾತೆಯಲ್ಲಿ ತೂಗುವುದು
ಮ್.. ಇದರ ಬಗ್ಗೆ ಮತ್ತೆ ಮಾತನಾಡೋಣ

ಒಮ್ಮೊಮ್ಮೆ ಕಾಲಿಗೆ ಸಿಕ್ಕುತ್ತವೆ ಮೊಲ್ಲೆ
ನಾಸಿಕದಂಗಿಗೆ ಉಗಿಯುತ್ತೇನೆ ಅಲ್ಲೆ
ಎದುರು ಗುಡಿಯಲ್ಲಿ ಪೂಜೆಗಷ್ಟು ಹೂಗಳು
ಕೊಳೆತ ಇವು ಕಾಲಿಗೆ ಸಿಕ್ಕ ಹೆಣಗಳು
ಜಗವನ್ನು ಕಾಯೋ ಪರಾಕು ತಂದೆ
ಪೂಜೆಗೆಂದು ಸಿಕ್ಕ ಸಿಕ್ಕ ಹೂಗಳ ಆಯ್ದು ತಂದೆ!

Monday 5 December 2011

ಕೆಲವು ಜಿಜ್ಞಾಸೆಗಳು (ಹಾಗೇ ಸುಮ್ಮನೆ)



ಉಪ್ಪಿಗೆರಡರ್ಥ
ಒಂದು ಉಪ್ಪು, ಮಗದೊಂದು ರುಚಿ
ಸಪ್ಪೆಗೇಕೊಂದರ್ಥ!
ವಿರುದ್ಧಾರ್ಥಕವೇ?
ಹಾಗಾದರೆ ನಾಲಗೆ ಹೇಳಿದ್ದು ಹುಸಿಯೇ?
ಸಪ್ಪೆಯಪ್ಪನಾರು?

ಬಿಸಿಲಿನಲ್ಲೊಮ್ಮೆ ನಿಂತು
ಕರಿಯ ಕರಿಯನಾದ
ಬಿಳಿಯನೂ ಕರಿಯನಾದ
ಹಾಗಾದರೆ ಗೌರವವರ್ಣ?
ಕಪ್ಪಾಗುವು ಬಿಳಿಯೋ
ಬಿಳಿಯಾಗದ ಕಪ್ಪೋ?

ಚೂರು ಬಿಡದೇ
ಬೆಳಕನ್ನು ಕತ್ತಲೆ ನುಂಗುವುದು
ನಾಲ್ಕು ಗೋಡೆ ಇದ್ದರೆ ಸಾಕು
ಬೆಳಕಿಗೆ ದಾರಿಯಿಲ್ಲ
ಕತ್ತಲೆಯದೇ ಜಯ
ಕಣ್ಣಾ ಮುಚ್ಚಾಲೆಯಾಟದಲ್ಲಿ

ಬಟ್ಟಲ ತಣ್ಣನೆ ನೀರು
ದಾಹ ನೀಗಿಸಿತು
ಅದೇನು ದಾಹ?
ಗಾಯಕ್ಕೊಂದು ಅಳು
ನಗುವಿನ ನಾವಿಕ?
ನಮ್ಮ ಕೊಲೆಪಾತಕ?

ಜಗದ ಆವೇಗ
ಬೆಳಕಿನ ವೇಗಕ್ಕೆ ಸಿಗದ ರಾಗ
ಬೂದಿ ಉಡುಗಿ ಮುಟ್ಟಲು
ಕೆಂಡದೊಳಗಣ ಬಿಸಿ
ಮುಟ್ಟಿದ್ದು ಕಾಣದಿದ್ದರೆ
ಮನವೇ ಜಿಜ್ಞಾಸೆಯ ಮೂಟೆ

ರಂಜಕದ ಕಡ್ಡಿಗಳು... (ತರಂಗದಲ್ಲಿ ಪ್ರಕಟವಾಗಿದ್ದ ಕವಿತೆ)


ಮಗುವಿನ ನುಗುವಿನ
ಸುಳ್ಳು ಮೊಗದಲ್ಲಿ
ಹಿಕ್ಕೆಯಿಕ್ಕಿದ ಖಗದಲ್ಲಿ
ಹಾದಿಬೀದಿಯ ಜನರೆದೆಯಲ್ಲಿ
ಪರಾಕು ಮಾರಮ್ಮನ
ಬಲಿಕಂಬದ ನೆತ್ತರಲ್ಲಿ
ಹಿಟ್ಲರ್ ನ ಜಾಗ ಮೊಗೆದು
ಮರೆದ ರಕ್ತ ಪಿಪಾಸುಗಳ
ಒಣಗಿದ ಒಡೆದ ಕವಲು ನಿಯಮಗಳಲ್ಲಿ

ದುಡಿಯುತಿರುವ ಮನೆಯೊಳಗೆ
ಹತ್ತಿಹಣ್ಣಿನೊಡಲು ತುಂಬಿ
ಅಲ್ಲಿಂದಿಲ್ಲಿಗೆ ತಂದು ಹಾಕಿ
ರಕ್ತ ಹೀರುವ ಜಿಗಣೆಗಳು
ಕಚ್ಚುವ ಶಕ್ತಿಯಿರದೆ ಬೊಗಳಿ
ಬೊಗಳದೇ ನೂರೆಂಟು ಗಾಯಮಾಡಿ
ಹುಟ್ಟಿಸಿದ ಮರಿ ಕುನ್ನಿಗಳನ್ನು
ಮುಕ್ಕಿದ ಶ್ವಾನ ನಂಬಿಕೆಯಲ್ಲಿ

ಮೂಗಿಗೆ ಕಾಮದ ಬಣ್ಣ ಬಳಿದು
ಕೊಳೆತು ರಸ್ತೆಯಲ್ಲಿ ಬಿದ್ದು
ಹೊಸಕಿಹೋದ ಮಲ್ಲಿಗೆಯೊಡಲ
ಸಲುಗೆಯ ನುಂಗಿದ ರಾಕ್ಷನಲ್ಲಿ
ನೆರೆಮನೆಗೆ ಹೊರೆಯಾಗಿ ನಿಂತು
ಬೆಳೆದ ಮರವನ್ನು ಕತ್ತರಿಸಿ
ರಕ್ತ ತೊಟ್ಟಿಕ್ಕಿಸಿದ ಕುಡುಗೋಲಿನಲ್ಲಿ
ಹೊಳೆದಲುಗಿನಲ್ಲಿ, ಪ್ರಭೃತಿಯಟ್ಟಹಾಸದಲ್ಲಿ

ಅಲ್ಲಿ ಇಲ್ಲಿ ಗಲ್ಲಿಯಲ್ಲಿ, ನನ್ನಲ್ಲಿ, ನಿನ್ನಲ್ಲಿ
ಅವನೆದೆ ಸುಟ್ಟ ಅವಳೆದೆಯಲ್ಲಿ
ಇತಿಹಾಸದ ಕರಾಳ ನಿದ್ದೆಯಲ್ಲಿ
ಟಾಮ್ ನನ್ನು ಕಾಡುವ ಜೆರ್ರಿಯ
ಪುಂಡ ಹುಡುಗಾಟಿಕೆಯಲ್ಲಿ
ಗಾಳಿಯಲ್ಲಿ ನಿಂತಾಗ ಕಾಣ್ವ ಪ್ರತಿ
ಜೀವ ಸೆಟೆಸಿದ ಎದೆಯಲ್ಲಿ
ಸುಡುತ್ತಿದ್ದವು ದೇವ ನೀಡದ
ರಂಜಕದ ಕಡ್ಡಿಗಳು ಗೀಚಿಕೊಂಡು
ನೂರಾರು ಮಂದಿ, ಹೊತ್ತಿಸಿ ದೊಂದಿ,
ಅಡ್ಡಾಡುತ್ತಿದ್ದರು, ಕೊಳ್ಳಿದೆವ್ವಗಳ ದೊಂದುಭಿ

ಹಚ್ಚಿ ಹಬ್ಬಿಸಿ ಕೇರಿ ಕೇರಿಗೆ
ಎರಚಿ ಸೀಮೆಎಣ್ಣೆ ಊರಿಗೆ
ನಡೆವ ದಾರಿಯಗೆದು, ತೊಡೆದರು
ಲೋಕಕ್ಕನ್ಯಾಯವ ಹಡೆದರು
ಪಾಪದ ಕೂಸುಗಳವು
ರಂಜಕದ ಕಡ್ಡಿಯ ಪೆಟ್ಟಿಗೆಯಲ್ಲಿ
ನೆಗೆದು ನೆಗೆದು ಗೀಚಿಕೊಂಡವು
ಭಂಡ ಗಂಡ, ಅಮ್ಮ ಸೇರಿ
ಸೊಸೆ ಕೊಂದು ಮತ್ತೊಂದ ತಂದಂತೆ

ಕಾಣ್ವ ಕಣ್ಣಿಗೊಂದು ದೇವ
ಬೇಡ್ವ, ಬೇಡಿ ತೊಡೆವ ಮಾನವ
ಕಾಣದೇ ಬೇಡದೆ ನೆಮ್ಮದಿ
ಅರುಹಿದ ಕೋಟಿ ಜೀವ
ಇದೆಲ್ಲವ ಕೊಂದು ಮೆರೆದ
ಜಗತ್ತು ನುಂಗಿದ ದುಷ್ಟಭಾವ
ಪ್ರಳಯಕ್ಕೇನು ದಿನಬಾಕಿಯಿಲ್ಲ
ಮರೆತ ಕೃಷ್ಣ ತನ್ನ ಸೊಲ್ಲ
ಗುಹೆಯಾಗಿದೆ ಜಗ, ಗುಹೇಶ್ವರನಿರುವನೆಂಬ
ನಂಬಿಕೆಯಲ್ಲಿ, ವೀಣೆಯಾಗಿ
ವೈಣಿಕನ ಬೆರಳಿಲ್ಲದೆ, ಕಾಯುತ್ತ

Wednesday 30 November 2011

ಕಾಣಿಸಿಕೊಂಡ...

ಚೂರು ಕಾಗದ ಸಾಕು
ಕಾಣದ ಗಾಳಿಯರಿಯಲು
ಮಿಣುಕು ದೀಪ್ತಿಯಲ್ಲಿದೆ
ಅದರೊಡಲ ನಿಜ ಶಕ್ತಿ

ತಂತಿಯೊಂದನ್ನಿಟ್ಟುಕೊಂಡು
ಮನೆಗೆ ಬೆಳಕ ತಂದ
ಚಿನ್ನದ ಹಾಳೆಯಲ್ಲಿ
ಅಣು ಬೇಧಿಸಿದಾತ

ಮೂರು ನಿಮಿಷವನ್ನು
ಮೂರು ದಿನ ಮಾಡಿದನೊಬ್ಬ
ಮೂರು ದಿನವನ್ನೂ
ಮೂರು ನಿಮಿಷ ಮಾಡಿಹೋದ
ಕಾಣದ ಕಾಲದೊಡನೆ
ಎಷ್ಟೊಂದು ಆಟ

ಪ್ರಪಂಚವೇ ಆಶ್ಚರ್ಯಗಳ
ಮೂಟೆ, ನಾನೂ ಒಬ್ಬ
ಮರೆಮಾಚಿ ನಿಂದ ದೇವ
ಇರುವುದ ಹಿಡಿದು
ಇಲ್ಲದಿದುದ ಕಂಡ ಮಾನವ

ಕಾಣದ ಕೈವಲ್ಯಗಳಿಗೆ ಚಿಹ್ನೆ
ಚಿಹ್ನೆ ಚಿಹ್ನೆ ಬೆರೆಸಿ
ಕೂಡಿಸಿ ಕಳೆಯಿಸಿ ಕೊರತೆಯ ನೀಗಿಸಿ
ಅದರಾಟ ಕಂಡು ಸವಾಲೆಸೆದ
ಒಪ್ಪಿಕೊಂಡ ಆ ಸೂಕ್ಷ್ಮ
ಮಾನವನನ್ನಪ್ಪಿಕೊಂಡಿತು

Sunday 27 November 2011

ನಮ್ಮ ಬೀದಿಯ ರಾಜ್ಯೋತ್ಸವ...

ನಮ್ಮ ಬೀದಿಯಲ್ಲಿ ನಡೆಯಿತು
ಕನ್ನಡ ರಾಜ್ಯೋತ್ಸವ,ನಿನ್ನೆ!
ಆರಕ್ಕೆ ನಿಗದಿಯಾಗಿತ್ತು
ಎರಡೇ ಘಂಟೆ ತಡ ಅಷ್ಟೆ

ಅಬ್ಬರದಬ್ಬರ ಸಂಗೀತ
ನಿಮಗೆ ಗೊತ್ತಲ್ಲ, ಅದೇ ಹಾಡುಗಳು
ಇಷ್ಟೇನಾ ಪಂಕಜ
ಒಬ್ಬ ಒಬ್ಬ ಒಬ್ಬ ಪರಮಾತ್ಮ

ನಡುನಡುವೆ ಅಪ್ಸರೆಯರು
ನಡುವ ಬಳುಕಿಸಿದರು
ಅವರ ಹಾವಭಾವಕ್ಕೆ
ಹಾದಿಬೀದಿ ಪೋಲಿ ಹುಡುಗರ ದಂಡು

ಕುಡಿತದ ಗಮ್ಮತ್ತು, ಹೆಂಡದ
ತುಟಿಯಲ್ಲಿ ಕನ್ನಡವ್ವನಿಗೆ ಮುತ್ತು
ಪಾಪ, ಅತ್ತವು ಮರೆಯಲ್ಲಿ
ಕವಿವರ್ಯರ ಪಟ, ಕನ್ನಡದ ಸ್ವತ್ತು

ಕಾರ್ಯಕ್ರಮದ ಕೊನೆ ಬಂದಿತು
ಇನ್ನೇನೂ ಮತ್ತದೇ ಒಡೆದಾಟ
ನಾಲಗೆ ಎಕ್ಕಡಗಳಾದವು
ಸುಲಲಿತವಾಗಿ ಹರಿದಾಡಿದವು ಬೈಗುಳಗಳು

ಲೋಕದ ಡೊಂಕ ನಾವ್ಯಾಕೆ
ತಿದ್ದಬೇಕು, ಎನಿಸಿತಪ್ಪ ಒಂದು ಕ್ಷಣ
ಹೆಂಡದ ವಾಸನೆ ಕನ್ನಡದ ಕಂಪನ್ನು
ನುಂಗಿತ್ತು, ತಾಯಿ ಅಳುತ್ತಿದ್ದಳು

ಕುಡಿದು ತೇಗಿ ಗುದ್ದಾಡಿದರು
ಮೈಮಾಟ ನೋಡಿಕೊಂಡು ನೆಗೆಯಲು
ಮನೆ ಮನೆಯ ದುಡ್ಡು, ನಡುವೆ
ಹತ್ತಾರು ಜನಗಳು ಅತಿಥಿಗಳು, ಪೋಲೀಸರ ಆತಿಥ್ಯಕ್ಕೆ

ಎಲ್ಲಾರೂ ಅಷ್ಟೆ...

ನಿನ್ನನ್ನೊಮ್ಮೆ ನೋಡಬೇಕು
ಎಂದುಕೊಂಡಾಗಲೆಲ್ಲ
ನನ್ನ ಸುತ್ತ ಮಲ್ಲಿಗೆ ಸುರಿಯುತ್ತದೆ

ನಿನ್ನ ಮುಖಚಿತ್ರ
ಮೂಡಿ ಬಂದಾಗಲೆಲ್ಲ
ನೂರು ಕೋಗಿಲೆ ಕೂಗುತ್ತವೆ

ನಿನ್ನ ಪ್ರೀತಿ ಬೊಗಸೆಯಲ್ಲಿ
ಹಿಡಿಯಲಾಗದೇ ಸೋತಿದ್ದೆ
ಬೊಗಸೆ ಬರೀ ಕಣ್ಣೀರು ಹಿಡಿಯಲೇ?

ಕಣ್ಣಿಂದ ಜಾರಿದ ಹನಿಯ
ಒಣ ನೆಲ ನುಂಗಲಿಲ್ಲ
ನಾ ಪಡೆದದ್ದು, ನೀ ನೀಡಿದ್ದು

ಬದುಕಿಗರ್ಥ ತೋರಿಸಿ
ಅಪಾರ್ಥ ಮಾಡಿ ಹೊರಟೆ
ಆದರೂ ನೀನು ಬದುಕಲಿಲ್ಲವಲ್ಲ!!

Wednesday 23 November 2011

ಡಾಂಬಿಕನಾಗಬೇಡ...

(ಇಂದು ಸತ್ಯ ಬಯಲು ಮಾಡಲು ನಿಂತಾಗ ಆದ ಪರಿಸ್ಥಿತಿಯ ವಿವರಣೆ ಇದು. ಸನ್ಯಾಸಿಯೊಬ್ಬನನ್ನು ಪೂಜಿಸಲು ನಿಂತು ಮಹಾನ್ ವ್ಯಕ್ತಿಗಳ ಜಯಂತಿ, ದೇಶದ ಸಂಭ್ರಮಾಚರಣೆ ನಗಣ್ಯ ಮಾಡಿ ಆತನನ್ನು ಕೊಂಡುಕೊಳ್ಳಲು ನಿಂತಾಗ ನನ್ನ ಕೆಲವು ಪ್ರಶ್ನೆಗಳು)

ಪೂಜಿಸಲವನೊಬ್ಬನೇ ಕಂಡನೇ?
ಗಾಂಧಿ ನೆಹರು ನೆನಪಾಗಲಿಲ್ಲವೇ?
ಭಗತ್, ಸುಖದೇವ್, ರಾಜ್, ಅಣ್ಣ?
ದೇವರ ಮನೆಯಲ್ಲಿ ಹೆಂಡತಿಗೆ
ಗಂಡ ಒದೆಯಲು
ದೂರದ ಗಡಿಯಲ್ಲಿ ನಿಂತ
ಸೈನಿಕರು ನಿನ್ನನ್ನು ಕಾಯಲಿಲ್ಲವೇ
ಅವರ ಮೊಗವನ್ನೊಮ್ಮೆ ಕಾಣು
ಈ ಪ್ರಶ್ನೆ ಇಡುವವರು ನಿಂದಕರೆ?

ದೇವಸ್ಥಾನದೆದುರಲ್ಲಿ
ನೂರಾರು ತಿರುಕರು
ಚಪ್ಪಲಿ ಕಾಯಲಷ್ಟು ಜನ
ಅದ ಕದಿಯಲಷ್ಟು ಜನ
ಎಂಜಲನ್ನಕ್ಕೆ ನೂರು ಕೈ
ಯಾತನೆಯ ಕೊಚ್ಚೆಯಲ್ಲಿ ಬಿದ್ದು
ಬಾಡಿಲ್ಲವೇ ಮಲ್ಲಿಗೆ ನೂರು

ಪವಾಡ ನೋಡಿ ಮರುಳಾದರು
ಬಯಲು ಮಾಡಿದವರಿಗುರುಳಾದರು
ಮುರಿದ ಮೂಳೆ ಜೋಡಿಸಿದ ದೇವ
ಮುರಿದುಕೊಳ್ಳುವಾಗೆಲ್ಲಿದ್ದ?
ಖಾಯಿಲೆ ಗುಣಪಡಿಸಿದಾತನಿಗೆ
ಬಂದದ್ದು ನಿಲುಕಲಿಲ್ಲವೇಕೆ?
ಇವೇ ಪವಾಡ ರಹಸ್ಯ ಬಯಲು

ಸುಳ್ಳನ್ನು ಸತ್ಯ ಮಾಡಬೇಡ
ಮುರಿಯಲು ವಿಜ್ಞಾನ ತುದಿಗಾಲಲ್ಲಿ
ಸೆಟೆದು ನಿಂತಿದೆ
ದೇವನೆಂಬುವನೊಬ್ಬ ನಾಮವಿಲ್ಲದ
ನಿರ್ವಿಕಾರ ಅಶರೀರ
ಜಗತ್ತಿನ ಸಮತೋಲನದಲ್ಲಿದ್ದಾನೆ
ನಿನ್ನ ನಂಬಿಕೆ ನಿನ್ನ ಕಾಯಲಿ
ಬೀದಿಗೆ ತಂದದನು ಡಾಂಬಿಕನಾಗಬೇಡ

Monday 21 November 2011

ವಿಕೃತ ಮನೆ

ವಿಕೃತ ಮನೆ

ಬಾಗಿಲೆದೆಯಲ್ಲಿ ಹೃದಯ
ಪಕ್ಕದಲ್ಲೇ ಅಶ್ಲೀಲ ಭಿತ್ತರ!
ಕಣ್ಮುಚ್ಚುವುದೋ ಬಿಡುವುದೋ
ತೂಕಡಿಸಿ ತೊಟ್ಟಿಕ್ಕುವ ನೀರು
ಡಬ್ಬ ತುಂಬಿಸುವ ಅವಸರ

ಎಡ ಬಲ ಹಿಂದೆ ಮುಂದೆ
ಬಿಟ್ಟಿಲ್ಲ ತುಂಟ ಮಕ್ಕಳು
ಬೀದಿ ಗೌರಮ್ಮನ ಹೆಸರು
ನೀವೂ ಸಂಧಿಸಬಹುದು
ಪಕ್ಕದಲ್ಲೇ ಫೋನ್ ನಂಬರು!

ಬಂದ ಕೆಲಸವೇ ಮರೆತೆ
ಕುಳಿತುಬಿಟ್ಟೆ ಏನೋ ವ್ಯಥೆ
ಹೊರಗೆ ಹೊಟ್ಟೆ ನುಲಿದಿತ್ತು
ಒಳಗೆ ವಾಂಛೆ ಬಿರಿದಿತ್ತು
ಸುಮ್ಮನೆ ಮನಸ್ಸು ಕೆಡಿಸಿತ್ತು!

ಪ್ರೀತಿಯನ್ನೊಬ್ಬ ಕೂಗಿದ್ದನಲ್ಲಿ
ಕಾಮದನುಭವ ಗೀಚಿದ್ದನೊಬ್ಬ
ನನಗೊಂದು ಅವಕಾಶ ಸಿಕ್ಕಿತ್ತು
ಮೂರು ಭಿತ್ತಿ, ಏಕ ದ್ವಾರ
ಕತ್ತಲೆಯಲ್ಲಷ್ಟು ಸತ್ಯ ಮಿಥ್ಯ

ಐದು ನಿಮಿಷ ಐವತ್ತಾಯಿತು
ನನ್ನಂತವರು ನೂರು ಜನ
ಕಾಯಲಿಲ್ಲ ಹೊರಟೇಬಿಟ್ಟಿತು
ನನ್ನೂರಿನ ಬಸ್, ಸಾಕಪ್ಪ
ಬಸ್ ನಿಲ್ಚಾಣದ ಮಲದ ಮನೆಯ ಸಹವಾಸ

Sunday 20 November 2011

ಹೀಗೂ ಉಂಟೆ...

ನನ್ನವಳು ಸ್ನಾನ ಮಾಡಿ
ನೀರನ್ನೇ ತೊಳೆದುಬಿಟ್ಟಳು
.
.
.
.
.
ಎಂದೊಂದು ಕವಿತೆ ಬರೆದಿದ್ದೆ
ಇಷ್ಟು ದಿನ ಅದೆಲ್ಲಿದ್ದರೋ
ಓಡೋಡಿ ಬಂದರು ಕಾರ್ಪೋರೇಷನ್ನವರು
ಟೆಂಡರ್ ಕೊಡಲು
ಬಿಡದೊಪ್ಪಿಸಿ
ತಾತ್ಕಾಲಿಕವಾಗಿ
ಕೆಂಗೇರಿಯನ್ನೇ ಬರೆದುಕೊಟ್ಟರು

ಕಾಣದ್ದು ಕಾಣಿಸಿಕೊಂಡ...

ಕಾಗದದ ಚೂರು ಸಾಕು
ಗಾಳಿಯಿರುವಿಕೆನ್ನರಿಯಲು
ಮಿಣುಕು ದೀಪವೇ ಸಾಕು
ಅದರ ಶಕ್ತಿ ತಿಳಿಯಲು
ತಂತಿಯೊಂದು ಸಾಕು
ಬೆಳಕನ್ನಿಡಿದಿಟ್ಟುಕೊಳ್ಳಲು!

ಚಿನ್ನದ ಹಾಳೆ ಸಾಕಾಯಿತು
ಅಣು ಬೇಧಿಸಲಾತನಿಗೆ
ಕಾಣದ್ದನ್ನು ಕಾಣಿಸಿಕೊಂಡ
ಪಾರಮಾರ್ಥವಲ್ಲವೇ ವಿಜ್ಞಾನ
ಬೆಸೆದು ನಿಂತಿತು ಗಣಿತ ತೋರಿಸಲು
ಕಾಣದ ವಸ್ತುವಿನಾಯಾಮ

ಮೂರು ನಿಮಿಷವನ್ನು
ಮೂರ ಘಂಟೆ ಮಾಡಿಕೊಂಡನೊಬ್ಬ
ಮೂರು ದಿನವನ್ನು
ಮೂರು ನಿಮಿಷವೂ ಮಾಡಿಹೋದ
ಕಾಲ ಕಾಣಲಿಲ್ಲ
ಆದರೂ ಆಟವಾಡಿಸಿಹೋದ

ಒಬ್ಬ ಭಗವಂತ ಜಗ ಬೆಳಗಲಿ
ಕಂಡು ಹೋಗಬೆಕಲ್ಲವೆ ಮಕ್ಕಳ
ಕಾಣಲಿಲ್ಲ, ಕಾಣದಿರಲಿಲ್ಲ
ಪ್ರಪಂಚವೇ ಆಶ್ಚರ್ಯಗಳ ಮೂಟೆ
ನಾನೂ ಒಬ್ಬ, ನಿನೂ ಒಬ್ಬ
ಬೆರಳಿನಾಟ ನೋಡು ಸಾಕು

ಕಾಣದ ಕೈವಲ್ಯಗಳಿಗೆ ಚಿಹ್ನೆ
ಚಿಹ್ನೆ ಚಿಹ್ನೆ ಬೆರೆಸಿ
ಕೂಡಿಸಿ ಕಳೆಯಿಸಿ ಕೊರತೆಯ ನೀಗಿಸಿ
ಅದರಾಟ ಕಂಡು ಸವಾಲೆಸೆದ
ಒಪ್ಪಿಕೊಂಡ ಸೂಕ್ಷ್ಮ
ಮಾನವನನ್ನಪ್ಪಿಕೊಂಡಿತು

ಪುಂಸತ್ವದ ಮಕ್ಕಳು...

ಪುಂಸತ್ವದ ಮಕ್ಕಳು...

ಅಲ್ಲೊಬ್ಬಳು ಹೆತ್ತರೆ
ಪ್ರಪಂಚಕ್ಕೆಲ್ಲ ಹೊಸಗೆ
ಹುಟ್ಟಿದ್ದು ಮಂಗ
ಹಡೆದವಳು ಸಾರಂಗ
ಸಾರಂಗದ ಹಿಕ್ಕೆಯೂ
ಫಸಲಿಗೆ ರಸದೂಟ
ಹೆತ್ತದ್ದು ಗಂಡಸೇ?

ನಾನೋ ತುಂಬು ಗರ್ಭಿಣಿ
ರಾತ್ರೋರಾತ್ರಿ ಪ್ರಸವ
ಕೊಸರುತ್ತಿದೆ ನೋವು
ಕವಿತೆಯೊಂದ ಹೆರಲು
ಹುಟ್ಟಿದ ಮಕ್ಕಳೆಲ್ಲ
ಸತ್ತರು ಸರತಿಯಲ್ಲಿ
ಹಳಸಲು ಭಿಕ್ಷೆ, ಮುಷ್ಟಿ ಕೂಳಿಲ್ಲ

ಪದಗಳ ದುಡಿವ ಗಂಡ
ಹದ ಮಾಡುವುದು
ಕಲಿತಿಲ್ಲ
ಶಾಯರಿ ಸುರಿಸಿ
ನಗುವ ಮಗು ನೀಡಲಿಲ್ಲ

ಮಿಲನಕ್ಕೆರಡಾದರೂ
ಸಿಂಬಳ ಸುರಿಸಿ
ಯಾರೂ ಮುಟ್ಟಲಿಲ್ಲ
ತೊಗಲಿಲ್ಲದ ಪಕಳೆ
ಮತ್ತೆ ಮತ್ತೆ ಹುಟ್ಟುತ್ತಿವೆ
ಪುಂಸತ್ವದ ಮಕ್ಕಳು
ಭ್ರೂಣಹತ್ಯೆ ಮಹಾಪಾಪ

ಆದರೆ ಅವಳಿಜವಳಿ
ಕಸದ ತೊಟ್ಟಿಗೊಂದು
ವ್ಯಂಗ್ಯದ ಬುಟ್ಟಿಗೊಂದು
ಮತ್ತೆ ಹೆರಿಗೆಬೇನೆ
ಎಷ್ಟು ಹೆರಲವ್ವ
ಒಂದು ಮುದ್ದು ಮಗುವಿಗೆ
ಕೆನ್ನೆ ಲೊಚಗುಡಬೇಕು
ಮುಟ್ಟಿದವನು ಮತ್ತೆ ಮುಟ್ಟಿ
ಕೆನ್ನೆ ಕಿವಿ ಕಚ್ಚಿ
ಅಸೂಯೆ ಪಡಬೇಕು
ಬೀದಿಯಲ್ಲಿ ತುಂಟನಾಗಿರಲೆಂದರೆ
ಎಲ್ಲರೂ ಒದೆಯುವವರೇ

ತುಂಬಿದುದರದೊಳಗಿರುವ
ನನ್ನ ಮುಂದಿನ ಮಗುವನ್ನು
ಬೆಳೆಸುವೆನೆದೆ ಸೆಟೆಸಿ
ಹುಟ್ಟಿ ಹುಲಿಯಾಗಿ
ಕಟ್ಟುವನು, ಹೌದು ಕಟ್ಟುವನು
ಕುಟ್ಟಿ ಕುಟ್ಟಿ ಹದಕ್ಕೆ ತರುವನು

ತೆಗಳಿದವ ಬಾಯಿಗೆ
ಅಂಟಾಗಿ, ಹೃದಯಕ್ಕೆ ನಂಟಾಗಿ
ಬಾಳುವನು
ಜಗವ ಗೆಲ್ಲುವನು
ನನ್ನ ಮಗನು, ಜಗವಾಗುವನು
ಜಗವಾಗಿ ನಗುವನು
ಮಿಲನದುತ್ತಂಗದಲ್ಲಿ

ಗರತಿ - ಸವತಿ

ಈ ಬೀದಿಯಿಂದಾ ಬೀದಿಗೆ
ಪಯಣ ಪ್ರತಿದಿನ ರವಿಗೆ
ಇಲ್ಲೊಂದು ಸರತಿ
ಅಲ್ಲೊಂದು ಸರತಿ
ಬೆಳಕು ಚೆಲ್ಲುವನಧಿಪತಿ
ಇಬ್ಬರು ಸತಿ
ಸದ್ಯಕ್ಕೆ ಅತ್ತಕಡೆಯವಳು ಗರತಿ
ಇತ್ತ ಕಡೆಯವಳು ಸವತಿ

ಅಳಲೊಲ್ಲಳು ಇತ್ತಕಡೆಯವಳು
ಕಣ್ಣೀರೊರೆಸಿ
ಸುರಿಯುತ್ತಿದ್ದಾನೆ ಬೆಳದಿಂಗಳು
ಶಶಿಗನ್ನಡಿ, ಬಾನಾಡಿ
ಸೂರ್ಯನೆದೆ ಮುನ್ನುಡಿ
ಪ್ರತಿಫಲಿಸಿ ರವಿಯ ಕಿರಣ ಕಿಡಿ

ಬ್ಯಾಲೆನ್ಸ್...

ತಲೆ ಬುರುಡೆ ಕೊಚ್ಚಿದ ಚಚ್ಚಿದ
ಕೊತ್ವಾಲನಿಗೇನು ಗೊತ್ತು ಬ್ಯಾಲೆನ್ಸ್
ಎಳನೀರು ಬುರುಡೆ ಕೊಚ್ಚಿದ
ಮಾಚನ ಕತ್ತಿ ಹಿಡಿದ ಕೈಗೆ ಗೊತ್ತು ಆ ಸೆನ್ಸ್

ಆತ ತಲೆ ಬುರುಡೆ ಕೊಚ್ಚಿದ್ದು
ಜೀವ ತೆಗೆಯಲು
ಹನಿ ರಕ್ತದೊಳಗೆ ಗಹ ಗಹಿಸಿ
ಕೊನೆಗಾಣಿಸಿ ನಗಲು

ಈತನದೂ ಅದೇ ಕಥೆ ಅಲ್ಲ ಜೀವನ
ಕೈನಲ್ಲಿಣುಕುತ್ತಿರುತ್ತದೆ ನೋವು
ಸಮತೋಲನ ಕಾಯುತ್ತಾನೆ ಕಣ್ಣಲ್ಲಿಟ್ಟು ಠಾವು

ಇನ್ನೊಬ್ಬನ ಜೀವವೂ ‘ಅವನ ಜೀವವೆ'
ಬೇರೆಯವರ ಮನೆಗೆ ಬಿದ್ದರೆ ಬೆಂಕಿಯಂತೆ
ನಮ್ಮ ಮನೆಗೆ ಬಿದ್ದರೆ ಸುಡುವ ಬೆಂಕಿಯೆಂಬ ಚಿಂತೆ

ಅವಳಿಗಾಗಿ - ಹಾಗೇ ಸುಮ್ಮನೆ

ಸಂಜೆ ರವಿಯೊಂದಿಗೆ
ಅವಳಿಗಾಗಿ ಕಾದೆ
ಬರಲೇ ಇಲ್ಲ
ಅವಳ ಭಾವನೆಗಳನ್ನು
ಮಣ್ಣಿನಲ್ಲಿ ಹೂಳಲು ಹೋದೆ
ಮಳೆ ಬಂದು ತಡೆಯಿತು
ಹನಿ ಹನಿ ಮಳೆಯಲ್ಲಿ
ಅವಳ ಮುಖವನ್ನೇ ಕಂಡೆ
ಇದ್ದಕ್ಕಿದ್ದಂತೆ ನಕ್ಕಳು
ಮಳೆ ಜೋರಾಯಿತು
ಪ್ರತಿಹನಿಯಲ್ಲೂ ಅವಳನ್ನೇ
ನೋಡುತ್ತಾ ಕುಳಿತೆ
-
ಬದುಕಿಗರ್ಥ
ಕೊಟ್ಟವಳು ನೀನೆ
ಅಪಾರ್ಥ ಮಾಡಿ
ಹೋದವಳೂ ನೀನೆ
ಅರ್ಥ ಅಪಾರ್ಥದ
ನಡುವೆ ನಾನು
ಬಲೆಗೆ ಸಿಕ್ಕಿದ ಮೀನು
-
ಕಣ್ಣಿಂದ ಜಾರಿದ
ಒಂದೇ ಒಂದು ಹನಿ
ಕೋಟಿ ನೋವನ್ನು ಹೇಳಿತ್ತು
ಕೆನ್ನೆ ತಬ್ಬಲು ಹವಣಿಸಿತು
ಕೆನ್ನೆಗೂ ಸಿಗದ ಹನಿ
ಒಣ ನೆಲದ ಮೇಲೆ ಬಿದ್ದು
ನೆಲವೂ ನುಂಗಲಿಲ್ಲ
ನಾ ಪಡೆದದ್ದು, ನೀ ನೀಡಿದ್ದು
-
ನಿನ್ನ ನಗುವಿಗೆ
ಕಾದು ಕುಳಿತಿದ್ದೆ
ಬೆಳದಿಂಗಳ ಸುರಿಸಿ
ಚಂದ್ರ ನನ್ನನ್ನು
ಸೆಳೆಯಲು ಹೊಂಚಿದ
ನಾನು ಸೋಲಲಿಲ್ಲ
ನೀನು ನಕ್ಕೆ
ಚಂದ್ರನೇ ಸೋತುಹೋದ
-
ಅವನು ನಿನಗಿಷ್ಟವೇ
ಒಪ್ಪಿಕೊಂಡು ಸಂತಸದಿಂದಿರು
ನನಗೆ ನೀನಿಷ್ಟ
ಒಪ್ಪಿಕೊಂಡು
ದುಖದಿಂದಿರುತ್ತೇನೆ
-
ನಿನ್ನ ಗಲ್ಲ
ಅಲ್ಲ ಬೆಲ್ಲ
ಮಧು ಸುರಿದ
ಎಳೆ ಕುಸುಮ ನೀನು
ನಾನಂತು ದುಂಬಿಯಾದೆ
ಮುಡಿಗಿಟ್ಟುಕೊಂಡವರು
ಓಡಿಸಿಬಿಟ್ಟರು

-

ಮನೆ ಮುಂದಿನ ಬಾಳೆ
ನಿನ್ನನ್ನೇ ಹೋಲುವುದಲ್ಲ ಎಂದೊಡನೆ
ಮೇಲೆ ಕುಳಿತಿದ್ದ ಪತಂಗ ಸುಟ್ಟುಹೋಯಿತು
ನಾ ನಕ್ಕು ನೋಡುತ್ತಿದ್ದಂತೆ
ಮಳೆ ಬಂದು ಬಿಸಿ ನೆಲ ತಂಪಾಗಿ
ನಿನ್ನೆದೆಯೊಳಗಿನ ಸ್ವಾರ್ಥ ಕುಣಿಯುತ್ತಿತ್ತು

ಬಾಳೆ ಕಂಬದ ಕನ್ನಡಿಯೊಳಗೆ
ನನ್ನದೇ ನಗು
ನಾನೂ ಹಾಗೆಯೇ, ಸ್ವಲ್ಪ ಸ್ವಾರ್ಥಿ...

-

ನಾನೊಬ್ಬ ವಿಚಿತ್ರ ಕುರುಡ
ಮಣ್ಣಲ್ಲಿ ಮಣ್ಣಾಗಿ ಹೋಗುವ
ಈ ಕಣ್ಣಿಗೆ
ನಿನ್ನ ಬಿಟ್ಟು ಬೇರೇನೂ ಕಾಣದು
ಆದರೂ
ಜಗತ್ತನ್ನೇ ಅಳೆಯಬಲ್ಲೆ
ನಿನ್ನಲ್ಲೇ ಜಗತ್ತನ್ನು ಕಂಡು ಅನುಭವವುಂಡವನು ನಾನು

-

ನೀನೇ ಹೋದಮೇಲೆ
ನನಗೇಕೆ ಬೇಕು ಎರಡನೇ ಹೆಂಡತಿ
ನಿನ್ನ ನೆನಪೇ ನಿನ್ನ ಸವತಿ

-

ಇಂದು ಅವಳಿಗೆ ಎಲ್ಲಾ
ವಿಚಾರವನ್ನು ಹೇಳಲು ಹೊರಟಿರುವೆ!
ಒಪ್ಪಿದರೆ ಭಾವನೆಯೊಂದನ್ನು ಹಡೆದಂತೆ
ಒಪ್ಪದಿದ್ದರೆ ಮುಗ್ದ ಮನಸ್ಸೊಂದನ್ನು ಒಡೆದಂತೆ!

ತವಕ...

ಹಕ್ಕಿ ಉಲಿಯಿತೆ
ಅವಳ ಕಣ್ಣಲ್ಲಿ
ಮತ್ತೇಕೆ ತೇಲಿಹೋದೆ
ಮೇಘಗಳ ಗುಂಪಲ್ಲಿ

ಜೇನು ಜಿನುಗಿತೆ
ಅವಳ ತುಟಿಯಲ್ಲಿ
ಮತ್ತೇಕೆ ಮಧು ಹೀರಿದೆ
ಭ್ರಮರನಾಗಿ ಪುಷ್ಪಸರಧಿಯಲಿ

ದುರಂತ ಕಥೆ ಹೇಳಿತೆ
ಕರಿಮೋಡ ಮುಂಗುರುಳು
ಮತ್ತೇಕೆ ಬೆವರುತಿರುವೆ
ಕೊರೆವ ಚಳಿಯ ಬೆಳಗಿನಲಿ

ಅಲ್ಲಿ ಇಲ್ಲಿ ಎಲ್ಲಾದರೂ ಸಿಕ್ಕು
ಓರೆನೋಟ ಬೀರಿದ್ದಳೆ
ಮತ್ತೇಕೆ ಬೇಡದ ಬಡಾಯಿ
ಭ್ರಮೆಯರಮನೆಯಲ್ಲಿ

ಎದೆಗೂಡಲ್ಲಿ ಎಂದಾದರೂ
ತನ್ನೊಲುಮೆ ಸುರಿದು ಪಿಸುಗುಟ್ಟಿದ್ದಳೇ
ಮತ್ತೇಕೆ ನಿಲ್ಲದ ಸವಾರಿ
ಕನಸೆಂಬ ಕಾಣದ ಕುದುರೆಯಲ್ಲಿ

ನಾಲ್ಕು ಹೂ...

ನಾಲ್ಕು ಹೂವು ಕೊಯ್ದು ತಂದೆ
ಒಂದು ಮುಡಿಗೆ, ಇನ್ನೊಂದು ಕಾಲಡಿಗೆ
ಮತ್ತೊಂದು ದೇವರ ಗುಡಿಗೆ
ಉಳಿದಿದ್ದು ಹೆಣದ ಮರೆವಣಿಗೆಗೆ
ಹಿತ್ತಲಿನ ಬೇಲಿಯಲ್ಲಿ ಬೆಳೆದು
ಕತ್ತಲಿನ ಮೌನದಲ್ಲಿ ನಲಿದು
ನೆರೆಮನೆಗೆ ದಿನ ನೆರಳಾಗಿ
ಮುಡಿಯೇರಿ ನಲಿಯಿತೊಂದು

ಅರಳು ಹೂಗಳು ಹಲವು
ಸುಟ್ಟ ಬೆಟ್ಟದ ಬೂದಿಯಲ್ಲಿ
ಕೆರೆಯ ದಂಡೆಯ ಕೊಳಕಿನಲ್ಲಿ
ಕೆಸರಿನ ತೊಟ್ಟಿಕ್ಕಿದ ನೀರಿನಲ್ಲಿ
ವಿದ್ಯುತ್ ಕಂಬದ ಬುಡದಲ್ಲಿ
ಕೈಗಳ ಕಾಮದ ವಾಂಛೆಯಲ್ಲಿ
ಪೋಲಿದನಗಳ ಬಾಯಿಯಲ್ಲಿ
ಮುದುಡದಿದ್ದರೂ ಕಾಲಿಗೆ ಸಿಕ್ಕಿದ್ದೊಂದು

ಹುಟ್ಟಿನೊಂದಿಗೆ ಸಾವು
ಹಟ್ಟಿಯಲ್ಲಿ ಮುರಿದ ಹಂದರ
ತೊಗಲಿನ ಚಾದರದಡಿ ಆತ್ಮ
ಮೋಡಗಳಾಚೆ ತೂರಿತು
ಸುಖವ ತೊರೆದ ಕುಸುಮವೊಂದು
ಆತ್ಮನಿಗಲ್ಲ ಒಣಗಿದ ಎದೆಗೆ

ಪಂಚಾಕ್ಷರಿ ತಾರಕಕ್ಕೇರಿರಲು
ಗಂಟೆಗಳ ನಿನಾದದ ಸವಿ
ಪಾದದಡಿಯಲ್ಲಿ ಪಾವನವಾಗಿ
ದಿಕ್ಕಿಗೆ ಪರಿಮಳ ಪಸರಿಸಿ
ಭಗವಂತನನು ತೋರಿಸಿತೊಂದು
ಪಾರಮಾರ್ಥದ ನೆರಳಿನಲ್ಲಿ ಮಿಂದು

ಮುಡಿದ ಹೂ ಜಾರಿತ್ತು
ಕಾಲಿನ ಹೂ ಸತ್ತಿತ್ತು
ದೇವರ ಹೂ ಬಾಡಿತ್ತು
ಹೆಣದ ಹೂ ಗುಂಡಿಯಲ್ಲಿತ್ತು
ಬೀಜ ಒಡೆದು ಕೋಗಿಲೆ ಕೂಗಿ
ಚೈತ್ರ ಚಿಗುರಿ ಶಲಾಕ ಉದುರಿ
ನಕ್ಕವು ಹಲವು ಹೂ ಮುಖವ ತೋರಿ
ಕಾಲಚಕ್ರನ ಕೈಗೆ ಸವೆಸುವ ಕೆಲಸ

ನೀನು....

ಸೀರೆ ಸೆರಗು ಮಾಡಿದ್ದು
ನೋಡಲೆಂದು ನನ್ನವಳು ಕದ್ದು
ಬಿಂದಿಗೆ ಮಾಡಿದ್ದು
ಅದನ್ನು ಹೊರಲೊಂದು ಸೊಂಟ ಮೂಡಿದ್ದು
ಬರಲೆಂದು ನೀರಿಗೆ ಮುಂಜಾನೆ ಎದ್ದು

ಅಲ್ಲೆಲ್ಲೋ ಕುಳಿತು, ಯೋಚಿಸಿ
ಭಗವಂತನವಳನ್ನು ಕೊರೆದು ಮತ್ತೆ ಯೋಚಿಸಿ
ಬಳುಕುವ ಕತ್ತು ಕೆತ್ತಿ
ಹೊಳಪು ಮೆತ್ತಿ
ಓರೆ ನಯನ ಹೊರಳಿಸಿ
ಕರಿಮೋಡ ಮುಂಗುರುಳು ಜಾರಿಸಿ
ಅಡಿ ಮುಡಿ ನಡುವೆ
ಕ್ಷೀರಸ್ನಾನ ಮಾಡಿಸಿ, ಮೃದು ತೊಡಿಸಿ
ಆ ನಗ್ನತೆ ಭಗ್ನಗೊಳ್ಳದಿರಲೊಂದು
ಉದ್ದನೆಯ ಸೀರೆ ಉಡಿಸಿ
ಕೈಮುಗಿದು ಪ್ರಾರ್ಥಿಸುತ್ತಿದ್ದೆನ್ನ
ಮುಂದೆ ನಿಲ್ಲಿಸಿದ, ಸಲ್ಲಿಸಿದ, ನಲಿಸಿದ

ತುಟಿ ಮೇಲೊಂದು ಮಧು ಚೆಲ್ಲಿದ ಹೂವಿದೆ
ಹೇಗೆ ಎತ್ತುಕೊಳ್ಳಲಿ ಎಂಬ ತವಕ
ನನ್ನ ತುಟಿಗೂ ಎಂತದೋ ನಡುಕ

ಬನ್ನಿರಪ್ಪ ಬನ್ನಿ..

ಬನ್ನಿರಪ್ಪ ಬನ್ನಿ, ಓಡೋಡಿ ಬನ್ನಿ
ಅಕ್ಕ ನೀವು ಬನ್ನಿ, ಬನ್ನಿ ಹಿರಿಯರೆ
ಇಲ್ಲೊಬ್ಬ ಸತ್ತಿದ್ದಾನೆ ನೋಡಿ
ಚಟ್ಟಕಟ್ಟಿ ಭವ್ಯ ಮೆರವಣಿಗೆ
ಬಂದು ಕೂಡಿಕೊಳ್ಳಿ, ಬನ್ನಿ

ಸುಕ್ಕುಗಟ್ಟಿದ ಬದುಕನ್ನು ನುಂಗಿ
ನೂರು ಎಕ್ಕಡ ನೆಕ್ಕಿ ಗದ್ದುಗೆ ಏರಿ
ಸತ್ಯವನ್ನತ್ಯಾಚಾರ ಮಾಡಿದವನು
ಉಂಡ ಮನೆಗೆ ಊಸುಬಿಟ್ಟ
ಭಂಡನಿವನು ಎಚ್ಚರವಾಗಿಬಿಟ್ಟಾನು
ಬನ್ನಿ ಹೂತುಬಿಡೋಣ

ಬದುಕೊಂದು ದಿನ ಅತ್ತಿತ್ತು
ಅತ್ತು ಅತ್ತು ಇವನ ಹೆತ್ತಿತ್ತು
ಇಂದು ಸತ್ತನಪ್ಪ
ಸಾವಿರ ಜನರ ರಕ್ತ ಕುಡಿದು
ಮಸಣದ ಮೇಲೆ ಮನೆ ಕಟ್ಟಿದ್ದ
ಕೇರಿ ಕೇರಿಯ ಮುಂಡೆಯರು
ಇವನ ಹೆಂಡಿರಂತೆ
ಅವರೂ ಕುಣಿಯುತ್ತಿದ್ದಾರೆ

ಊರೆ ನುಂಗಿದ್ದ
ಮಾರಿಯನ್ನು ಬಿಡದೆ
ನೂರು ಮಲ್ಲಿ ಗೆ ಬಾಡಿಸಿ
ಇಂದು ನಾರುತ್ತಿದ್ದಾನೆ
ಬನ್ನಿ ಬನ್ನಿ ಅನ್ಯಾಯವನ್ನು
ಹೂತು ಸಂಭ್ರಮಿಸೋಣ

ಮರೆಯದೇ ಶ್ರಾದ್ಧಕ್ಕೆ ಬಂದುಬಿಡ್ರಪ್ಪ
ನರಕಕ್ಕೆ ಹೋಗದೆ
ಮಣ್ಣಲ್ಲೂ ಕೊಳೆಯದೆ
ನನ್ನ ಮನೆ ಸೂರಿನಲ್ಲಿ ಉಳಿದುಬಿಟ್ಟಾನು?
ಆಯಿತು, ಆಯಿತು, ಒಪ್ಪಿಕೊಂಡೆ
ತಿಥಿಗೆ ಅವನ ಭಾವಚಿತ್ರವಿಡುವುದಿಲ್ಲ
ನನಗೂ ಮುಖ ನೋಡಲಿಷ್ಟವಿಲ್ಲ ಮಾರಾಯ್ರೆ
ರಾಮ ರಾಮ ಸಾಕಪ್ಪ ಇವನಾಟ

Wednesday 16 November 2011

ನಲ್ಲೆ
ಸಂಜೆ ಸೂರ್ಯ
ಪಡುವಣ ದಿಗಂತದೆದೆಯಲ್ಲಿ
ಬಣ್ಣಚೆಲ್ಲಿ ನಕ್ಕರೆ
ನಿನ್ನ ನೆನಪಾಗುತ್ತದೆ
ಯಾಕೆಂದರೆ
ಮುಂಜಾನೆ ಹೀಗೆ ಕಣ್ಣುಮಿಟುಕಿಸಿ
ಮಧ್ಯಾಹ್ನ ನೆತ್ತಿ ಸುಟ್ಟಿದ್ದು
ಮರೆಯಲಾಗುತ್ತಿಲ್ಲ...

ಪಕ್ಕದಲ್ಲೇ ಇರುವ ಪಾಪಾಸುಕಳ್ಳಿಯ
ಮುಳ್ಳುಗಳಿಂದ
ಮೈಮೇಲೆ ಗೀಚಿಕೊಂಡ
ಆ ಕರಾಳ ನೆನಪುಗಳು
ಉಮ್ಮಳಿಸಿ ಉಮ್ಮಳಿಸಿ ಬಂದು
ತೊಟ್ಟಿಕ್ಕಿಸಿದ ಕಣ್ಣೀರನ್ನು
ಕೆನ್ನೆ ತಬ್ಬಲು ಹವಣಿಸಿದೆ
ಕೆನ್ನೆಗೂ ಸಿಗದ ಹನಿಯನ್ನು
ನೆಲ ನುಂಗದೆ ಅಣಕಿಸಿದೆ
ನೀ ನೀಡಿದ್ದು ನಾ ಪಡೆದದ್ದು

Tuesday 15 November 2011

ನನ್ನವಳು

ನನ್ನವಳು...

ಮಣ್ಣಲ್ಲಿ ಬೆರೆತು, ಬೀಜ ಮೊಳೆತು
ಗಿಡ ಮರವಾಗಿ ನಿಂತು
ಫಲ ಮೈದುಂಬಿ ತೊನೆವಾಗ
ನನ್ನವಳು ನೆನಪು ಒತ್ತರಿಸುತ್ತದೆ

ಸೃಷ್ಪಿಯು ಕಣ್ಣರಳಿಸಿದಾಗ
ಎಲ್ಲಿಂದಲೋ ಬಂದು ನೆಲವನ್ನಪ್ಪಿ
ರಾಶಿ ಇರುಳನ್ನು ನುಂಗಿ
ಎದೆಯಂಗಳಕ್ಕೆ ಬೆಳದಿಂಗಳ ಚುಕ್ಕೆ-
ಯಿಟ್ಟು ಮೆರೆದು ಮೊರೆಯುತ್ತಾಳೆ

ಆಗಮನದೇದುಸಿರಿಗೆ
ಮೋಡ ಒಡೆದು ಭೂ ಮೈ ತೊಳೆದು
ಜಗ ಸೀರೆಯುಟ್ಟು, ಹಸಿರುಬೊಟ್ಟಿಟ್ಟು
ಎಳೆ ಕಂದನಂತೆ ನೆಗೆ ನೆಗೆದು
ಅವಳ ಸೌಂದರ್ಯವನ್ನೆಲ್ಲ ಮೊಗೆಯುತ್ತದೆ

ಸೀರೆಗೊಂದು ಸೆರಗು ಮಾಡಿದ್ದು
ನೋಡಲವಳೆಂದು ಕದ್ದು
ಬಳಕುವ ಕತ್ತು ಮಾಡಿದ್ದು
ಅವಳೊಮ್ಮೆ ತಿರುಗಿ ನೋಡಿದ್ದು
ಎರಡು ಕೂಡಿಯೇ ಅಂಕುರವಾದದ್ದು

ನನ್ನೆದೆಯ ಭಕ್ತಿ
ನಿಷ್ಕಲ್ಮಶ ಜಗತ್ತಿಗವಳೇ ಶಕ್ತಿ

Monday 14 November 2011

ಪೆಟ್ಟಿಗೆ ಒಡೆದರು...

ಜಡಿದ ಬೀಗ ಮುರಿದು
ಪೆಟ್ಟಿಗೆ ಒಡೆದರು
ಇದ್ದ ಸೊತ್ತು
ಕದ್ದೊಯ್ದರು
ಸದ್ದಿಲ್ಲದೇ ಬಂದ ಕಳ್ಳರು

ಅದರಲ್ಲೇನಿತ್ತು?
ಕೊಟ್ಟವನಿಗೆ ಗೊತ್ತು
ಅಮ್ಮನ ಬೆಂಡೋಲೆ
ಹೆಂಡತಿಯ ಬೊಟ್ಟು
ಅಣ್ಣನ ವಜ್ರದುಂಗುರ
ಕಂದನ ನಡುದಾರ
ಮನೆಯ ನೆಮ್ಮದಿ
ಪೆಟ್ಟಿಗೆಯಾಗಬೇಕು ಬೂದಿ

ಏನೇ ಆಗಲಿ
ಸೊತ್ತು ಹೋಯಿತು
ಸುಮ್ಮನೇಕೆ ದೂರು
ಪೆಟ್ಟಿಗೆ ಹರಿದು ಕೊಡುವರು
ಪಟ್ಟಕ್ಕದನು ಕೂರಿಸಿ
ಅಳುವುದೊಂದೇ ಬಾಕಿ
ಕಳ್ಳ ಸಿಗನಮ್ಮ

ಸೊತ್ತಿಗಾಗಿ
ಸುತ್ತ ಅತ್ತು
ಯಾರೋ ಬಂದು
ಭಜನೆ ಮಾಡಿ
ಬೆಂಕಿಯುಗುಳಿ
ಊರ ಕರೆದರು

ಜಿರಲೆ ಗೂಡು
ಪೆಟ್ಟಿಗೆಯಲ್ಲಿ ಹಿಕ್ಕೆ
ವ್ಯಸನ ನಾಥ
ಸ್ವತ್ತು ಇಲ್ಲ
ಸುಟ್ಟು ಬಿಡಿ
ಕೆಟ್ಟು ಕೊಳೆವ
ಮಲ್ಲಿಗೆ ಯಾತಕ್ಕೆ?

ಬಿಡಲೊಲ್ಲರು
ಮಾಯಾಪೆಟ್ಟಿಗೆ
ಮುಡಿದ ಗುಲಾಬಿ
ಬಾಡಿ ಜಾರಿತು
ಆಗಷ್ಟೆ ಕೊಯ್ದಿದ್ದು
ಮೂಗು ಮುಚ್ಚಿ
ಧರಣಿಗೊಪ್ಪಿಸಿ
ಮನೆಗೆ ಬಂದು
ಒಂದು ದೀಪ ಇಟ್ಟು
ಕಳ್ಳನ ಕರುಣೆಗೆ ಕಾದರು
ಅವರೋ ಅಲ್ಲೇ ಇದ್ದರು
ಮುಂದಿನ ಮನೆಗೆ
ಕನ್ನವಿಡಲು ಹೊಂಚಿದ್ದರು

ಜಿಜ್ಞಾಸೆ...

ಉಪ್ಪಿಗೆರಡರ್ಥ
ಒಂದು ಉಪ್ಪು
ಮತ್ತೊಂದು ರುಚಿ
ಸಪ್ಪೆಗೇಕೊಂದರ್ಥ?
ಸಪ್ಪೆಗೆ ಮನೆಯಿಲ್ಲ
ಅದೊಂದು ವಿರುದ್ಧಾರ್ಥಕ
ಎಂದುಕೊಳ್ಳಲೇ?
ನಾಲಗೆ ಮೇಲೆ
ಕೂರುವುದೇಕೆ?

ಬಿಸಿಲಿನಲ್ಲಿ ನಿಂತು
ಕಪ್ಪು ಕಪ್ಪಾಯಿತು
ಬಿಳಿಯೂ ಕಪ್ಪಾಯಿತು
ಅದಿದಾಗುವಾಗ
ಯಾವುದು ಹೆಚ್ಚು
ಬಿಳಿ ಗೌರವವರ್ಣವೇ?
ಬಿಳಿಜಗತ್ತನ್ನು
ತಿಮಿರ ನುಂಗಿತು
ಚೂರು ಬಿಡದೆ
ನಾಲ್ಕು ಗೋಡೆ
ದಾಟುವ ಶಕ್ತಿ
ಬೆಳಕಿಗೆಲ್ಲಿದೆ?

ಬಾಯಲ್ಲವೇ
ಗದ್ದಲ ಮಾಡಿದ್ದು
ಮೌನಕ್ಕೆ ಸೂರು?
ಅದಿರುವುದಂತು ಸತ್ಯ
ಮನೆಗೆ ಬೆಳಕು
ತಂತಿಯಲ್ಲಿ ಹರಿದ
ವಿದ್ಯುತ್ ನಿಂದ
ಚೀಲದೊಳಗೆ
ಸಿಗದ ಕೋಳಿ
ದಾಹವಾದಾಗ
ನೀರು ಕುಡಿದೆ
ಚೊಂಬಲ್ಲಿತ್ತು ನೀರು
ಅದೇನದು ದಾಹ
ಗಾಯಕ್ಕೊಂದು ಅಳು
ನಗುವಿಗೇನು?
ಆದರೂ ನಕ್ಕಿದ್ದು ಸತ್ಯ

ಜಗವನ್ನರಿತವನ್ಯಾರು?
ಬೆಳಕಿನ ವೇಗಕ್ಕೂ
ಸಿಗದದು
ಸಿಗುವುದೂ ಬೇಡ
ಮುಟ್ಟುವುದೆಲ್ಲ
ಕಾಣುವುದು ಸುಳ್ಳು
ಕಂಡದ್ದು ಮುಟ್ಟದಿದ್ದರೆ
ಮನವೇ ಜಿಜ್ಞಾಸೆ

Saturday 12 November 2011

ಸಮತೋಲನ...

ಕಣ್ಣಿನ ನಡುವೆ
ಮೂಗನ್ನಿಟ್ಟು
ಅದರಡಿ ಬಾಯಿಟ್ಟು
ಕೈ ತುದಿಯಲ್ಲಿ
ಐದು ಬೆರಳು ಮೂಡಿಸಿ
ನಕ್ಕನವನು
ಬೆರಳಿಗನ್ನವ ತೋರಿಸಿ
ಮೂಗಿಗೆ ವಾಸನೆ
ಗ್ರಹಿಸಿ
ಬಾಯಿಗನ್ನವನಿಡುವುದು
ಕಣ್ಣು
ಮೂಗು ಬೆನ್ನಿಗಿದ್ದು
ಬಾಯಿ ಮಂಡಿಗಿರೆ
ಕೈ ಸುತ್ತಿಸಿ ಬಾಯಿಗೆ
ತರಬೇಕಾಗಿತ್ತು
ತುತ್ತು ಅನ್ನಕ್ಕೆ ಅಷ್ಟು ಹೊತ್ತು

ಕೈಎರಡು ಕೂಡಿಸಿ
ಬೊಗಸೆ ಮೂಡಿಸಿದ
ಜಲದಾಹ ಇಂಗಲು
ಅವೆರೆಡು ಕಳೆದು
ದುಡಿದನು ತಿನ್ನಲು
ನಾಸಿಕದಲ್ಲಷ್ಟು ಕೇಶ
ಸ್ವಚ್ಚ ಗಾಳಿಗೆ
ಗೋಡೆ ಧೂಳಿಗೆ
ತೊಗಲಿನ ತುದಿಗೆ
ಚೂಪು ಕೂದಲು
ಕಣ್ರೆಪ್ಪೆ ಕಾವಲುಗಾರ
ಕನಸಿನೂರಿನ ಮಹಾದ್ವಾರ

ಹೆಬ್ಬೆರಳು ಹೆಬ್ಬೆಟ್ಟು
ಕೈಬೆರಳ ನಾಯಕನೊಬ್ಬ
ಮತ್ತೊಬ್ಬ ಕಾಲು
ನಡೆಸುವ ಸೇವಕ
ರಾಶಿ ಹಿಡಿಯಲಾಗದಿವನಿರದಿರೆ
ಕೊಂಚ ಕ್ರಮಿಸಲಾಗದವನಿರದಿರೆ


ಪೀಳಿಗೆಯಿಂದ ಪೀಳಿಗೆಗೆ
ತನ್ನ ಸೃಷ್ಠಿ ಉಳಿಯಬೇಕಲ್ಲ
ಕಾಮವೆಂಬ ಪ್ರೇಮವಿಟ್ಟ
ಕಣ್ಣು ಕಣ್ಣು ನೋಡಲು
ತುಟಿ ತುಟಿ ಕೂಡಲು
ಕಾಮತೃಷೆಯಂಗಗಳ
ಗೊಂಬೆಗಳ ನಡುವೆ ಇಟ್ಟ
ಬ್ರಹ್ಮ ಕೆತ್ತಿದಂಗಗಳ
ತಾಳ್ಮೆಯೊಡಗೂಡಿ ಜೋಡಿಸಿ
ಸಮತೋಲನ ಕೊಟ್ಟ
ಹೌದು ಸಮತೋಲನ ಕೊಟ್ಟ
ಸಮತೋಲನ

ಕುದುರೆ ಹತ್ತಿಸಿ ಹಗ್ಗ ಹಿಡಿಸಿ
ಜೀವಾತ್ಮನನ್ನು ತಂದ
ಪರಮಾತ್ಮನನ್ನು ಮರೆತ
ವೇಗದ ಸವಾರಿ ಜೀವಾತ್ಮನದು
ಅಲ್ಲೆಲ್ಲೋ ಕಾದಿದ್ದು
ಹತ್ತಿರ ಬಂದಂತೆ ಕೊಂದ

ಕೋಟಿ ಕೋಟಿ
ಬೊಂಬೆಗಳೊಳಗೆ ಸಮತೋಲನವನ್ನು
ಕೆತ್ತಿ ಮೆರೆದಿದ್ದ ಮೌನವಾಗಿ

Monday 7 November 2011

ಗೃಹಪ್ರವೇಶ...

ಇಲ್ಲೊಂದು ಗೃಹಪ್ರವೇಶ
ಇಟ್ಟಿಗೆಯಲ್ಲವದು ಚಿನ್ನದ ಗಟ್ಟಿ
ಬಣ್ಣ ತುಂಬಿದ ಗೋಡೆಗೆ
ಹೂಹರಡಿ ಮನೆ ಬೆಳಗಿದರು
ನಾಲ್ಕಂತಸ್ತು ಏರಿತ್ತು
ಊರಿನ ಜನರ ರಕ್ತದಲ್ಲಿ

ಹುಳಿಹೆಂಡ ತಿಳಿಗಾಸಿಗೆ
ಮತವನ್ನೇ ದಾನ ಮಾಡಿ
ಮನೆಬಾಗಿಲಿಗೆ ತೋರಣ
ಬರಲೆಂದು ಕಾದವರು
ಹಾದಿಬೀದಿಯ ಬದಿಯಲ್ಲಿ
ಎಂಜಲು ಹೆಕ್ಕಿ ತಿಂದವರು
ಅಂಬಲಿ ಇಲ್ಲದೆ ಪ್ರತಿದಿನ
ಸಿಂಬಳ ಸುರಿಸಿದವರು
ಎಕ್ಕಡ ಹೊಲೆದು ನೊಂದ
ಮೂರು ಕಾಸಿನವರು
ಕಾಲಕಸವನ್ನು ಹೆಕ್ಕಿ
ಕಕ್ಕಸು ತೊಳೆದವರು
ಕತ್ತಲ ಕೋಣೆಯಲ್ಲಿ
ಬೆತ್ತಲೆಯಾಗಿ ಅತ್ತವರು
ಬಾಗಿಲ ಬಳಿ ಕಾದು
ನಾಯಿಯಾದವರು
ಮುಷ್ಟಿ ಕೂಳಿಗಾಗಿ
ಅಷ್ಟುದಿನವ ಕಳೆದು
ಸದ್ದಿಲ್ಲದೇ ಸತ್ತವರು
ಮಾನ ಮುಚ್ಚಿಕೊಳ್ಳಲು
ಗೇಣುದ್ದ ಬಟ್ಟೆ ಇಲ್ಲದೇ
ದಾಸರಂತೆ ವೇಷ ತೊಟ್ಟವರು
ಹರ್ಷದ ಒಂದು ತುತ್ತಿಗೆ
ವರ್ಷವೆಲ್ಲ ಕಣ್ಣು ಬಿಟ್ಟವರು
ಜಡಿಮಳೆಗೆ ಚರಂಡಿ
ಕೊಚ್ಚಿದ ಕೆಸರು ನೀರು
ರಸ್ತೆಯ ನೂರು ಗಾಯ
ರೈತನ ಮುರುಟಿದ ಬೆಳೆ
ಮನೆಮನೆಯ ಕತ್ತಲು
ಬಣಗುಟ್ಟ ಕಛೇರಿಗಳು
ಚಕ್ಕೆಯುದುರಿ ಬೆತ್ತಲೆಯಾಗಿ
ಅರ್ಧ ನಿಂತ ಮರಗಳು
ನೂರು ಮಾತನಾಡಿದವು
ಕಣ್ಣೀರ ಕೋಡಿಯಲ್ಲಿ
ದೆವ್ವವಾಗಿ ಸಂಚರಿಸುತ್ತ
ಆ ಮನೆಯ ಎಲುಬುಗಳಲ್ಲಿ

ಇವನೊಬ್ಬ ಜಿಗಣೆ
ಎಲ್ಲರ ರಕ್ತ ಹೀರಿ
ಹೊಟ್ಟೆ ಉಬ್ಬಿಸಿ ನಿಂತಿದ್ದ
ಕೇಳುವವರು ಕಾಲಡಿಯಲ್ಲಿ
ಜನರಿಂದ ಗೆದ್ದು
ಅವರನ್ನೇ ಒದ್ದು
ಎಲ್ಲವನ್ನೂ ನುಂಗಿದ್ದ...
ಮತ್ತೆ ಗೆದ್ದು ಬೀಗಿದ್ದ!!!

Sunday 16 October 2011

ಮತ್ತೆ ಅತ್ತೆ....

ಇರುಳ ತೆರೆ ಬೆಳಕಿನಲಿ
ಮೌನದ ಜಗ ಜಾತ್ರೆಯಲಿ
ಅಲೆ ತೊಯ್ದು ನಕ್ಷತ್ರ
ಎನ್ನ ಮನವ ಕೂಗಿರಲು
ನಿನ್ನ ನೆನಪಿನಲ್ಲಿ ಅಳುತ್ತಿದ್ದೆ

ನೀಲಾಂಬರ ಸ್ವಚ್ಚಚಾದರ
ಅರವಳಿಕೆಯ ಎಚ್ಚರ
ದಿಗಂತದ ದೇವಗಣಕ್ಕೆ
ನಿನ್ನ ಮುಖಲಾಂಚನ
ಮನ ನಿನ್ನ ಬಯಸಿತ್ತು
ಸತ್ಯವರಿಯದೇ ಮತ್ತೆ ಅತ್ತೆ

ಕಾಂತಮೊಗದವಳು ಏಕಾಂತ
ಮರೆಸಿ, ನನ್ನನ್ನಪ್ಪಿದಳು
ಹಾಲ್ಗೆನ್ನೆ, ಪುಟ್ಟಕಂಗಳೊಡತಿ
ನಿನ್ನಂತೆ ಇರುವಳು
ನಿನ್ನ ಮುದ್ದುಮಗಳು
ನಿನ್ನ ಸಾವನ್ನು ಮರೆಸಿದವಳು

ಒಂದು ಅಳು...

ಮರ ಕಡಿದು ನೆಲ ಅಗೆದು
ಡಾಂಬರು ಮೆತ್ತಿ
ಬಸ್ಸು ರೈಲು ಓಡಿಸಿ
ಆಕಾಶಕ್ಕೆ ಗೋಡೆ ಎಬ್ಬಿಸಿ
ಅಂಗಡಿ ನೂರಾದವು
ಜನಜಾತ್ರೆ ನೂಕು ನುಗ್ಗಲು
ಅಡಿಯಿಡಲು ನೆಲವಿಲ್ಲ
ಮುಡಿಸಿಂಗಾರ ಉಳಿದಿಲ್ಲ
ಕಾಡಿದ ಜಗದೋಟಕ್ಕೆ
ಬೇಡಿಕೆಯ ಕುದುರೆ
ಓಡಿ ಓಡಿ ಸುಸ್ತಾಗಿರಲು
ನಕ್ಕವು ಎರಡು ಮರ
ಒಂದಕ್ಕೆ ವರ್ಷ ನೂರು
ಇನ್ನೊಂದಕ್ಕೆ ಹತ್ತು ಕಡಿಮೆ

ಬರಿದೆ ದಾರಿಯಲ್ಲಿ
ನಡೆದವರಿಗೆ ನೆರಳು
ಹೂಹಣ್ಣು ತೊಗಟೆ
ಕೆಳಗೆ ಕುಳಿತು ಹರಟೆ
ಒಳಗೆ ನಕ್ಕ ಮರಕ್ಕೆ
ಭವಿಷ್ಯದಲ್ಲಿ ದಿಗಿಲು
ಅದಕ್ಕೆ ಬೇಲಿ ಕೈ
ಚಕ್ಕೆಯುದುರಿ ಭಿತ್ತಿಪತ್ರ
ಹೂತ ಪಾದ ಮುರಿದು
ಕೈಕಾಲು ಕತ್ತರಿಸಿ
ವಿದ್ಯುತ್ ತಂತಿ ಪೋಣಿಸಿ
ಬಿಸಿಲಿನಲ್ಲಿ ನಿಂತರು
ಬುಡಕ್ಕೆ ಉಚ್ಚೆ ಉಯ್ದು
ಬಂಧುಬಳಗವ ನುಂಗಿದರು
ಎಲ್ಲ ಕಳೆದುಕೊಂಡು ಮೆರೆದರು

Tuesday 11 October 2011

ಮತ್ತೆ ಹೊಲೆದೆ

ಹರಿದ ಸೀರೆಯ ಮನಸ್ಸನ್ನು
ಹೊಲೆಯಲು ಸೂಜಿ ತಂದೆ
ಚುಚ್ಚಿದಂತೆ ಮತ್ತೆ ಮತ್ತೆ ಅಯ್ಯಯ್ಯೋ ಎನ್ನುತ್ತಿತ್ತು
ರೈಲಿನಂತೆ ಕೊರೆದ ದಾರ
ಮುಗಿಸಿ ಹರವಿ ನೋಡಿದೆ
ಮೊದಲ ಗಂಟು ಮತ್ತೆ ಬಿಚ್ಚಿಹೋಗಿತ್ತು

ಅಲ್ಲೆಲ್ಲೋ ಯಾರೋ
ಚೀಲವೊಂದನ್ನು ದಬ್ಬಳದಲ್ಲಿ ಹೊಲೆಯುತ್ತಿದ್ದರು
ಎದುರು ಮನೆಯ ಬಾಗಿಲಿಗೆ
ಸುತ್ತಿಗೆ ಬಡಿದು ಚಿಲಕ ಸಿಕ್ಕಿಸಿದ್ದರು
ಕಣ್ಣೀರೊರೆಸಿ ಜೋರಾಗಿ ನಕ್ಕೆ
ಗಟ್ಟಿ ಗಂಟು ಬೆಸೆದು ಮತ್ತೆ ಹೊಲೆದೆ

ಮಳೆ ಬರುತ್ತಿದೆ ಇಲ್ಲಿ....

ಮಳೆ ಬರುತ್ತಿದೆ ಇಲ್ಲಿ
ಹೃದಯಮೋಡ ಸುರಿಸಿದ
ಹನಿ ಹನಿಯು ನಿನ್ನ
ನೆನಪಾಗಿ ಕಾಡಿದೆ
ಕಣ್ಣೀರಾಗಿ ನದಿ ಹರಿದು
ಕೆರೆ ಕಟ್ಟೆ ತುಂಬಿದೆ

ಆ ಕೆರೆಯನ್ನೇ ಬಸಿದು
ನೀರು ಹರಿಸಿಕೊಂಡರು
ತುಟಿ ಬಿರಿದ ನೆಲ
ಕೀಳುಜಾತಿಯ ಕಟ್ಟೆ
ಇಲ್ಲದ ಹಾವನ್ನು
ಕೊಲ್ಲುವ ಭರದಲ್ಲಿ
ರಾಡಿ ಎಬ್ಬಿಸಿಬಿಟ್ಟರು

ಆ ಮನೆಯಲ್ಲಿ ಮತ್ತೆ ಹುಟ್ಟಬೇಡ
ಈ ಮನೆಯನ್ನು ಮತ್ತೆ ಮೆಟ್ಟಬೇಡ
ಅರ್ಥ ಮಾಡಿಕೊಳ್ಳದ ಈ ಮನೆ ಯಾಕೆ?
ಹೊಂದಿಕೊಳ್ಳದ ಆ ಮನೆ ಬೇಕೇ?
ಉಯ್ಯಾಲೆಯಲ್ಲಿ ನನ್ನ ನೆನಪೇ ಇರಲು
ಆ ಮನೆಯವರು ನಿತ್ಯ ಸತ್ತರು
ಹಾಗೆ ಮಾಡಿಬಿಟ್ಟು, ಹೀಗಾಗಿ ಹೋಯಿತಲ್ಲ
ಎಂದು ಈ ಮನೆಯವರು ಸುಮ್ಮನೆ ಅತ್ತರು
ಹೂವೆರಡನ್ನು ಹರಾಜಿಗೆ ಇಟ್ಟರು

Sunday 2 October 2011

ಕಾಯಬೇಕಿತ್ತು...

ಮುದ್ದಾದೆರಡು ಮಗು ಹೆತ್ತು
ಎಲ್ಲರೊಪ್ಪುವ ಹೆಸರಿಟ್ಟು
ಆಡಿಸಿ ಬೆಳೆಸಿ ಕಲಿಸಿ
ಮೊಮ್ಮಕ್ಕಳಿಗೆ ಮೂರು ಮುತ್ತು ಕೊಟ್ಟು
ನಂತರ ಹೋಗಬಹುದಿತ್ತು
ಮಾಡುವುದು ಇನ್ನೂ ಇತ್ತು

ಚಂದ್ರನೆದೆಯಲ್ಲಿ ಬೆಳದಿಂಗಳ
ರಂಗವಲ್ಲಿ ಇಕ್ಕಿ
ಅವನಿಗೊಮ್ಮೆ ಕಣ್ಣು ಮಿಟುಕಿಸಿ
ಹರಿವ ನದಿಯೊಂದಿಗೆ ಹರಿದು
ಅದರಿಕ್ಕೆಲಗಳ ಮರದಂಬಿನಲ್ಲಿ
ಒಬ್ಬರಿಗೊಬ್ಬರೂ ತೂಗಿ
ಅಲ್ಲೇ ಕೂಡಿಕೊಳ್ಳಬಹುದಿತ್ತು

ಅವರವರ ಹಣೆಬರಹವೆಂದುಸುರಿದವನಾರು?
ನಿನ್ನ ಹಣೆ ಬರೆದ ಲೇಖನಿ
ನನ್ನ ಬೆರಳ ಸಂಧಿಯಲ್ಲಿತ್ತು
ತಪ್ಪು ಅಚ್ಚನ್ನು ಅಳಿಸಿ
ಚಿತ್ತಾರವಿಟ್ಟು ಮತ್ತೆ ಬರೆಯುತ್ತಿದ್ದೆ
ಕಾಯಬೇಕಿತ್ತು, ಬದುಕಿನೊಲೆಯಲ್ಲಿ
ನೀ ಬೇಯಬೇಕಿತ್ತು

ಒಂಟಿಪಯಣವಲ್ಲ ನಿನ್ನದು
ಜಂಟಿಪಯಣ
ನಾ ನೇವರಿಸಿದ ತಲೆ
ಮುತ್ತಿಕ್ಕಿದ ಕಣ್ಣು
ಸವರಿದ ಮೈ ಕೈ ಈ ರೀತಿ
ಅನಾಥವಾಗಿ ಮಣ್ಣಡಿಯಲ್ಲಿ ಕೊಳೆಯಬಾರದಾಗಿತ್ತು

Saturday 1 October 2011

ಮನಸ್ಸು ಬಗ್ಗಡವಾಗಿ
ಬೇಸರದುಸಿರಿನಲಿ ಮಲಗಿದ್ದಾಗ
ಇದ್ದಕ್ಕಿದ್ದಂತೆ ಮನೆದೀಪ ಹೊತ್ತಿಕೊಂಡಿತು
ಯಾರೋ ಎದೆ ತಟ್ಟಿದರು

ಕನಸೋ ನನಸೋ ನಂಬಲಾಗಲಿಲ್ಲ!
ಹೊಸ್ತಿಲ ಬಳಿ ಅವಳೇ ನಿಂತಿದ್ದಳು
ಅಪ್ಪಿಕೊಳ್ಳಲು ಓಡಿದೆ
ಇರುಳ ತಿಳಿ ಬೆಳಕಿನಲಿ
ಹಾಗೆ ಕರಗಿ ಮಾಯವಾದಳು

ನೋವು ಇಮ್ಮಡಿಗೊಂಡು
ತಿಂಗಳ ಬೆಳಕಿನಂಗಳಕ್ಕೆ ಬಂದೆ
ಆಶ್ಚರ್ಯ!
ಚಂದ್ರನ ಬೆಳದಿಂಗಳಾಗಿ
ಮೈಮೇಲೆಲ್ಲಾ ಸುರಿದಳು!

Friday 30 September 2011

ಅಳಿದ ಪ್ರೀತಿ...

ಅಂಗಡಿಯಿಂದ ಅಗ್ಗ ತಂದ
ಜಾತಿ ಹುರುಳಿಗೆ ಕೊರಳೊಡ್ಡಿದ
ಹಗ್ಗ ಬೇಡ ಸೀರೆ ಸಾಕು ಎಂದು
ಅವಳೂ ಹೊರಡಲು ಸಿದ್ಧ
ಯಾರು ಒಂಟಿ ಬಿಡಲಿಲ್ಲ

ನೂರು ದಾರಿ ಸವೆಸಿ
ಎರಡು ಹೃದಯ ಕಲೆತು
ಬಾಳ ಹೊತ್ತಿಗೆಯಲ್ಲಿ ಕನಸಿನ
ಪುಟ ನೂರು ಬಾರಿ ತೆರೆದು
ನಕ್ಕು ಸಂತಸದಿ ಕಣ್ಣೀರು ಇಟ್ಟು
ಒಂದಾದ ಹೃದಯಗಳಲ್ಲಿ ಒಂದೆಲ್ಲಿ?

ಎಂತು ಜಾತಿ ರಕ್ತ ಒಂದೆ ಇರಲು
ಅವನಿಗಿಂತ ಗುಣವಂತ
ರೂಪವಂತ, ಸಿರಿವಂತ
ಹುಡುಕಿ ತರುತ್ತೇವೆ ಎಂದರು
ಕೋಟಿ ಇದ್ದರೇನು, ಅವನಿಲ್ಲವಲ್ಲ

ಹಿಡಿದ ಕೈ ತಾಳಿ ಕಟ್ಟಲಿಲ್ಲ
ತನ್ನ ಮೈ ಹಾಸಿಗೆ ಸೇರಲಿಲ್ಲ
ಅವನ ಮುಖ ಮಾಸಿ ಮಾಯವಾಗಲಿಲ್ಲ
ಮೂರು ದಿನ ಮುಗಿದಿಲ್ಲ
ತವರ ಹೊಸ್ತಿಲ ತುಳಿದರು

ಅಳುತ ಕುಳಿತರು ಹೆತ್ತವರು
ಮಗಳ ಭವಿಷ್ಯ ತುಳಿದವರು
ಮೂರು ಗೇಣಿನ ನರಕ
ಕಣ್ಣ ಮುಂದೆ
ತನ್ನ ಹೃದಯದ ಚಿತ್ರ
ಬಿಡಿಸಿಕೊಂಡು ಮುಂದೆ ನಡೆದಳು
ನಮ್ಮಪ್ಪನಿಗೆ ಇಬ್ಬರು ಹೆಂಡಿರು
ದೇಶಕ್ಕೇನೂ ನಷ್ಟವಿಲ್ಲ
ಕಾರಣ ಚಿಕ್ಕಮ್ಮನಿಗೆ ಮಕ್ಕಳಿಲ್ಲ

ಹಾದರಕ್ಕೆ ಹುಟ್ಟಿದ ಮಗು...

ಹಾದರಕ್ಕೆ ಹುಟ್ಟಿದ ಮಗುವೊಂದು
ಕೊಚ್ಚೆಯಲ್ಲಿ ಬಿದ್ದಿತ್ತು
ಅದರೆದೆಯಲ್ಲಿ ಇಂದಿನ ರಾಜಕೀಯ
ಎಂಬ ಹೆಸರಿತ್ತು...!!!

ಹುಟ್ಟಿದ ಆ ಮಗು
ಮೆಟ್ಟಿದ ಮನೆಯಲ್ಲಿರಲಿಲ್ಲ
ಕೇರಿ ಕೇರಿ ಸುತ್ತಿ ಬಳಸಿ
ಕುಲಗೆಡಿಸಿತ್ತು ಬೀದಿ ಪರಿಮಳವ
ಹಂಚಿ ಹಬ್ಬಿಸಿ ಹಾದರವ..!!!

ಸಂತಸದ ಹಾದಿ...

ಎಮ್ಮೆಗೂ ಗೊತ್ತು
ಪೈಥಾಗೊರಸ್ ಪ್ರಮೇಯ
ಒಮ್ಮೆ ಗಮನಿಸಿ
ಅದು ಕೆರೆ ಸುತ್ತಿ
ದಡ ಸೇರುವುದಿಲ್ಲ
ನೀರಿಗೆ ಇಳುಗಿ
ಹಾಗೆ ನಡೆದುಬಿಡುತ್ತದೆ

ಇರುವೆಗಳಿಗೂ ಗೊತ್ತು
ಜೀವನದ ಶಿಸ್ತು
ಅವು ಅಡ್ಡ ದಿಡ್ಡಿ
ಸಿಕ್ಕಂತೆ ಓಡುವುದಿಲ್ಲ
ಒಂದರ ಹಿಂದೆ ಮತ್ತೊಂದು
ನಡೆವವು ಸಕ್ಕರೆ ತಿಂದು

ಜಿಂಕೆಗೂ ಗೊತ್ತು
ಬಳುಕುವ ವಯ್ಯಾರ
ಬಳುಕಿ ನಡೆದು
ಒಮ್ಮೆ ಹಾರಿದರೆ
ನೋಡಲೆಂತು ಚಂದ

ಆನೆಗೂ ಗೊತ್ತು
ನಡೆವ ಗಾಂಭೀರ್ಯ
ತೂಗಿ ನಡೆದರೆ
ಅನುಸರಿಸುವ ಆಸೆ
ನಾಚಿಕೆಯ ವರಸೆ

ಓದದ ಪ್ರಾಣಿಗಳು
ಖುಷಿಯಿಂದ ನಡೆಸಿವೆ
ತಮ್ಮದೇ ಜೀವನ
ಎಲ್ಲ ತಿಳಿದುಕೊಂಡು
ಎಲ್ಲೋ ಸಿಲುಕಿಕೊಂಡು
ಸಂತಸ ಅಳಿದುಕೊಂಡು
ಸುಮ್ಮನೆ ಕೊರಗಿದೆ ಮನ

Thursday 29 September 2011

ಪ್ರಯಾಣ....

ಪ್ರಯಾಣ....
(ಕಳೆದ ವಾರ ನನ್ನೂರು ಮೈಸೂರಿನಿಂದ ನಾನಿರುವ ಚಿಕ್ಕಮಗಳೂರಿಗೆ ಹೊರಡುವಾಗ ಬಸ್ಸಿನ ಮೂಲಕ ಕಂಡ ದೃಶ್ಯಗಳು)

ಹಾಗೆ ಬರುವಾಗ
ಮೊದಲು ಕಂಡಿತು ಅರಸ್ ಕಾರ್
... ಅದರೊಳಗೆ ಟಾಟಾ ಫೈನಾನ್ಸ್
ಸಾಲ ಕೊಟ್ಟು ವಸ್ತು ಕೊಡುವ ಸ್ಥಳ
ಮತ್ತೆ ಒಂದು ಮೈಲಿ ಸಾಗಿದರೆ
ಹಳೆ ಕಾರುಗಳ ಗುಜರಿ ಅಂಗಡಿ
ಅದರ ಪಕ್ಕದಲ್ಲೇ ಮಣಪ್ಪುರಂ ಗೋಲ್ಡ್
ಮನೆ ಚಿನ್ನಕ್ಕೆ ಮನೆ ಮಾರುವ ಸಾಲ
ಇನ್ನು ಮುಂದೆ ಸಾಗಿದರೆ ವೃದ್ಧಾಶ್ರಮ
ಸದ್ಯಕ್ಕೆ ಸೀಟುಗಳು ಖಾಲಿ ಇಲ್ಲ
ಅಲ್ಲಿಗೆ ಮುಗಿಯಿತು ಶ್ರೀಮಂತಿಕೆಯ ಆಟ

ಹತ್ತು ಮೈಲು ಮುಗಿದು ಸೂರ್ಯ ನೆತ್ತಿಗೆ ಬಂದ
ಹೊಲ ಉಳುತ್ತಿದ್ದ ರೈತರು ಕಂಡರು
ಪಕ್ಕದಲ್ಲೇ ಗದ್ದೆಗೆ ನೀರು ಬಿಟ್ಟ ಜನ
ಸ್ವಲ್ಪ ಮುಂದೆ ಬೀಜ ಎರಚಿ ಬಿತ್ತನೆ
ಕೊನೆಗೂ ಸಿಕ್ಕಿತು ಅರ್ಧಂಬರ್ಧ ಫಸಲು
ಇವರೆಲ್ಲ ಸೇರಿ ಒಂದು ವರ್ಷದ ಕೂಳು ಕಂಡರು
ಅಲ್ಲಿಗೆ ಮುಗಿಯಿತು ರೈತನ ಪಾಡು

ಹಳ್ಳಿಯೊಳಗೆ ಬಸ್ ನುಗ್ಗಿತು
ತೂರಾಡಿ ರೋಡಿಗೆ ಹಾರುವ ಜನ
ಎಲ್ಲೆಲ್ಲು ಇಟ್ಟುಕೊಂಡವರ
ಕಟ್ಟುಕೊಂಡವರ ಸುದ್ದಿ
ಎರಡು ಟೀ ಮೂರು ಬೀಡಿ
ಆಲದ ಅಡಿಯಲ್ಲಿ ಗೊರಕೆ ನಿದ್ದೆ
ಬೀದಿಯಲ್ಲಿ ಮೂರು ಗುಂಪು
ಮೂರು ಪಕ್ಷ, ಮೂರು ರಾಜಕೀಯ
ಪ್ರಪಂಚದ ತತ್ವ ಜ್ಞಾನಿಗಳಂತೆ ಇವರು
ಇಬ್ಬರು ಹೆಂಡಿರ ಮುದ್ದಿನ ಜನಗಳು
ಪಾಪ ಮಣ್ಣಿನ ಗೋಡೆಯ ನಡುವೆ
ರಾಗಿ ಬೀಸಿ ಕೂಳು ತೋರಿದ ಹೆಂಗಸರು
ಸಂಸಾರ ತೂಗಿ ಜಗದಲ್ಲಿ ಮೆರೆದರು
ಇಷ್ಟಕ್ಕೆ ಮುಗಿಯಿತು ಹಳ್ಳಿಯ ಜೀವನ

ಕೊನೆಗೂ ಸಿಕ್ಕಿತು ಕೆಲಸದ ಊರು
ಯಾಕೆ ತಡ ಎಂದು ನೂರು ಫೋನು
ಬಾಕಿ ಇದ್ದದ್ದು ಮೂರೇ ನಿಮಿಷ
ನಡೆಯಲಾಗಲಿಲ್ಲ, ಓಡಲು ಶುರು ಮಾಡಿದೆ
ಮತ್ತೆ ಪ್ರಾರಂಭವಾಯಿತು ನನ್ನ ಜೀವನ

ಮೌನ ಪ್ರೀತಿ...

ಮರಳಿನ ಮೇಲೆ
ನಿನ್ನದೇ ಚಿತ್ತಾರ
ಸುಲಲಿತ ಸುಂದರಿ
ಅಲೆಯ ವೇಗಕೆ ಅಲೆಮಾರಿ
ನೀಲ ಆಕಾಶದ ಉಸಿರಿನಲಿ
ನಿನ್ನದೇ ಒರಟುತನ
ಅಲೆಬಲೆಯ ಸೆಲೆಯಲ್ಲಿ
ಕೊಚ್ಚಿಹೋಯಿತು ಆ ಸಿರಿ
ಕತ್ತಲ ಮನೆಯ ತಿಳಿದೀಪ
ನಿನ್ನ ಸೂಕ್ಷ್ಮತೆಯ ಮುಖ
ಬೆಳಕಿನ ಹೊಗೆಯ ವಾಸನೆಗೆ
ಮಾಸಿಹೋಯಿತು, ಬಿಡಿಸಲಾಗದು

ಅರಿಯದ ಭಾವಕೆ
ಒಲುಮೆಯ ಚೀರಿಕೆ
ಎದೆಯ ತುಡಿತದ
ತಬಲಾ ವಾದನವ
ನುಡಿಸುವ ಬೆರಳು
ಹಿಡಿದಿರಲು ಕೊರಳು
ಸ್ಪರ್ಶದ ಅನುಭೂತಿಗೆ
ಸಾವಿನಲ್ಲೂ ಸೋತಿರಲು
ಯಮ ನಕ್ಕು ಕ್ಷಮಿಸಿಬಿಟ್ಟ
ನನ್ನ ಪ್ರೀತಿ ಸಾಯುವುದಿಲ್ಲ

Wednesday 28 September 2011

ಕರಗಿಹೋದಳು...

ಕಷ್ಟಪಟ್ಟ ಮರಹತ್ತಿ
ಮೂರು ಕಾಡಸಂಪಿಗೆ ಕೊಯ್ದು ತಂದೆ
ಒಂದು ಹೂವನ್ನೂ ಮುಡಿಯಲಿಲ್ಲ
ನಿಶೆಯಲ್ಲಿ ಹಾಗೆ ಕರಗಿಹೋದಳು

ಎಲ್ಲಿಂದಲೋ ಬಂದು ಸೃಷ್ಟಿಯ
ಕಣ್ಣರಳಿಸಿದಳು, ನೆಲವನ್ನು
ಗಟ್ಟಿಯಾಗಿ ಅಪ್ಪಿದಳು
ಏನೇ ಆದರೂ ರಾಶಿ ಇರುಳನ್ನು
ನುಂಗದ ತಿಳಿ ಹಣತೆಯಾದಳು

ಸುಟ್ಟುಹೋದ ಎದೆಗೆ
ಮಂಕುಕವಿದ ರಾತ್ರಿ ನೂರು
ವರ್ತಮಾನದಲ್ಲಿ ನಿದ್ದೆ
ಕೈ ಜಾರಿದ ಭವಿಷ್ಯದಾಸರೆ
ಒಬ್ಬಳಿಗಾಗಿ ಎಲ್ಲಾ ಕಳೆದುಕೊಂಡು ಒಬ್ಬಂಟಿಯಾದೆ

ಈಗಲೂ ಅಲ್ಲಿ ಇಲ್ಲಿ ಸಿಗುತ್ತಾಳೆ
ನನ್ನನ್ನು ನೋಡಿ ಸುಮ್ಮನೆ ನಗುತ್ತಾಳೆ
ಮುಟ್ಟಲು ಹೋದರೆ ಸುಟ್ಟುಬಿಡುತ್ತಾಳೆ
ನೆನಪುಗಳು ನಕ್ಷತ್ರಗಳಾಗಿ ಉದುರುತ್ತಿರುತ್ತವೆ

ಹೀಗಿರಲು...

ಸ್ನೇಹ ಮೇಳೈಸಿರಲು
ವಾದಕ್ಕೆಲ್ಲಿದೆ ಜಾಗ
ಹಾಸ್ಯ ಹೊಕ್ಕಿರಲು
ನೋವಿಗೆಲ್ಲಿದೆ ಮಾರ್ಗ
ಮನುಷ್ಯ ತನ್ನನ್ನು ತಾನು
ಅರ್ಥೈಸಿಕೊಂಡಿರಲು
ಶ್ರೀಮಂತಿಕೆಗೆಲ್ಲಿದೆ
ನುಸುಳುವ ಹುನ್ನಾರ?

ಪ್ರೀತಿ ಮಾಡಿರಲು
ದ್ವೇಷಕ್ಕೆಲ್ಲಿದೆ ಹುಟ್ಟು
ಮೌನ ತಾಳಿರಲು
ಜಗಳಕ್ಕೆಲ್ಲಿದೆ ಆಸ್ಪದ
ಎಲ್ಲ ತಿಳಿದವನಿಲ್ಲ
ಎಂದರಿತರೆ ಗರ್ವಕ್ಕೆಲ್ಲಿದೆ
ಮೆರೆದಾಡುವ ಉತ್ಸಾಹ?

ಹುಟ್ಟು ನಿಗೂಢ
ಎಂದು ತಿಳಿಯಲು
ಸಾವಿಗೆಲ್ಲಿದೆ ನೋವು
ಇರುವುದು ಮೂರೇ
ದಿನ ಎಂದರಿಯಲು
ನಗುವಿಗೆಲ್ಲಿದೆ ಬರ
ಹೊತ್ತೊಯ್ಯುವುದು
ಬರೀ ಶೂನ್ಯ ಎಂದು
ಇಂದು ತಿಳಿಯಲ್
ಕಣ್ಣ ಮುಂದೆಲ್ಲಿದೆ ಆಸೆ?

Monday 26 September 2011

ದೇವರು

ನಮ್ಮ
ಕಟ್ಟಡದಲ್ಲಿ
ನೂರಾರು
ನಲ್ಲಿಗಳು
ನೀರು
ಬಂದದ್ದು
ಮಾತ್ರ
ಒಂದೇ
ಟ್ಯಾಂಕ್ ನಿಂದ
ಮನೆಯ
ಮೇಲಿತ್ತು

ಎರಡು ಮುಖ...

ಹೇಯ್ ಕನ್ನಡಿಯೇ
ನನ್ನ ರೂಪದ ಮುನ್ನುಡಿಯೇ
ನಾಚಿ ನೀರಾಗಿದೆ ಕೆನ್ನೆ
ಉದ್ದ ಕೂದಲೆಳೆದು
ಕಟ್ಟಿದ ಎರಡು ಜಡೆ
ಹುಲ್ಲು ಹಾಸಿಗೆ ನಡುವಿನ ದಾರಿ ಬೈತಲೆ
ಸೈನಿಕರು ನಿಂತಂತೆ ಹಲ್ಲು ಸಾಲು
ಮುಖಕ್ಕೆ ಫೇರ್ ಅಂಡ್ ಲವ್ಲಿ
ಮೈ ತುಂಬಾ ಪರಿಮಳ ಸೆಂಟು
ಬಿಳಿ ಆಕಾಶದ ನಡುವೆ ಹೊಳೆದ ಸೂರ್ಯ
ಹಣೆಯ ಮೇಲೆ ಸಿಂಧೂರ
ವಜ್ರ ಮೂಗುತಿ, ಕಿವಿಗೆ ಬೆಂಡೋಲೆ
ನಿನ್ನೆ ತಂದ ಕಾಂಜಿವರಂ ಸೀರೆ
ನನ್ನಿಂದ ಹೊಳೆಯಿತು ಹೂವಿನ ಚಿತ್ತಾರ
ಮೈ ಕೈ ತುಂಬಿಕೊಂಡ ಅಮಲು
ಕನ್ನಡಿಯೇ ಮಧುರ ನಿನ್ನ ಸಿಹಿ ಸತ್ಯ

ಹೇಯ್ ಕನ್ನಡಿಯೇ
ಮುಂದಿನ ಸತ್ಯದ ಮುನ್ನುಡಿಯೇ
ನಾಚದೆ ಸುಕ್ಕುಗಟ್ಟಿತು ಕೆನ್ನೆ
ಕೈ ಕತ್ತಿನಲ್ಲಿ ಸೀರೆ ನೆರಿಗೆ
ತಲೆ ತುಂಬಾ ಬಿಳಿ ಕೂದಲು
ಬಾಚಣಿಗೆ ತುಂಬಾ ಅದೇ ಕೂಡಲು
ಉದ್ದದ ಜಡೆ ಮೋಟಾಯಿತು
ಕಣ್ಣುಗಳು ಒಳ ಹೋಗಿ
ದೃಷ್ಟಿ ನೆಡಲಾಗದೆ ಸೋತಿದೆ
ಈ ಲಕ್ಷಣಕ್ಕೆ ಬೂದು ಬಣ್ಣದ ಸೀರೆ
ಹೂವಿನ ಚಿತ್ತಾರಕ್ಕೆ ನಾನೇ ದೃಷ್ಟಿ ಬೊಟ್ಟು
ನೆಗೆದ ಯವ್ವನ ಮುಗಿದು ತೀರಿತು
ಮುದಿತನದ ಕತ್ತಲು ಓಡಿ ಕೂಡಿತು
ಮೈ ಕೈ ನಲ್ಲಿ ಸಾವು ತುಂಬಿತು

ನಗು ಅಳುವಿನ ಗೊಂದಲದಲ್ಲಿ...

ಅಳುವ ಮುಚ್ಚಲು
ಕೆಲವರು ನಗುತ್ತಾರೆ
ಆದರೂ ಕಣ್ಣಿನ ಗೋಡೆ
ತಡೆಯದು ಅಶ್ರುಧಾರೆ
ಕಣ್ಣೀರಿನೊಡಗೂಡಿದ ಆ
ನಗುವಿನಲ್ಲಿ ಗಟ್ಟಿತನ ಇಣುಕುತ್ತದೆ.

ಅಳು ಬರದಿದ್ದರು
ಕೆಲವರು ಅಳುತ್ತಾರೆ
ಆದರು ಅಳಲು ಬರದೆ
ಮತ್ತೆ ಮತ್ತೆ ಸೋಲುತ್ತಾರೆ
ಆ ಅಳುವಿನಲ್ಲಿ ಆಸೆ
ಲಾಭ ಎದ್ದು ಇಣುಕುತ್ತದೆ

ಕೆಲವರು ನಗಲಾಗದೆ
ಅಳಲಾಗದೆ ತೊಳಲಾಡುತ್ತಾರೆ
ನಗುತ್ತಲೇ ಇರುತ್ತಾರೆ
ಮನಸ್ಸಿಗೆ ಏನೊ ತುಂಬಿ
ಕೂಡಲೆ ಅಳು ಚೆಲ್ಲುತ್ತದೆ
ಕಣ್ಣು ತೂಕದ ಆ ದ್ವಂದ್ವದಲ್ಲಿ
ಅವರ ಮಂಕುತನ ಇಣುಕುತ್ತದೆ

ಕೆಲವರು ಸುಖದ ಸುಪ್ಪತ್ತಿಗೆಯ
ವ್ಯರ್ಥ ಲಾಲಸೆಯಲಿ ಮಿಂದು
ನಕ್ಕು ನಕ್ಕು ಅಳುವನ್ನು ಕಂಡಿರದಿರುತ್ತಾರೆ
ಮನಸ್ಸಿಗೆ ಸುಡುವ ಕಿಚ್ಚು ತುಂಬಿದಾಗ
ತಾಳಲಾಗದೆ ಸಾವಿನ ಸಂಚು ಇಣುಕುತ್ತದೆ
ಅತ್ತವನಿಗಲ್ಲವೆ ನಗುವಿನ ರುಚಿ

ಶುದ್ಧ ಪ್ರೀತಿ...

ನಿನ್ನ ಕಣ್ಣುಗಳಿಂದ
ಸಾಗರವೇ ಧುಮ್ಮಿಕ್ಕಿತು
ಎಂತು ಪ್ರೀತಿಯ ಪರಿ
ನಿನ್ನ ಹೃದಯದೊಳಗೆ
ಭೂಮಾತೆ ಮಲಗಿದ್ದಳು
ಎಂತು ಮಮತೆಯ ಸಿರಿ

ನಾ ನಡೆದಾಗ ನೆರಳಾದೆ
ಕೊರಳಾದೆ, ಮರುಳಾದೆ
ಒಳಗಣ್ಣು ತೆರೆದಾಗ
ನೀ ಬಂದೆ ತಾಯಾದೆ
ಗೆರೆಬಿಚ್ಚಿ ನವಿಲಾದೆ
ಚಿತ್ತಾರ ತುಂಬಿ ಬಣ್ಣವಾದೆ
ಕೆರೆಯಾದೆ, ತೊರೆಯಾದೆ
ವಿಧ ವಿಧವು ನೀನಾದೆ

ಮರೆತಾಗ ನೆನಪಾದೆ
ನೆನೆದಾಗ ನೀರಾದೆ
ನೀರಾಗಿ ಭೋರ್ಗರೆದೆ
ಭೋರ್ಗರೆದು ಒಳ ಹರಿದೆ
ಒಳಗನಸು ತಿಳಿಗೊಳಿಸಿ
ಮಳೆಯಾಗಿ ನಾ ನೆನೆದೆ
ಮಳೆ ಭೂಮಿ ತೊಳೆದು
ಇಳೆಯ ಹಸಿರು ನೀನಾದೆ
ಹಸಿರಾಗಿ ಉಸಿರಾದೆ
ನಿನ್ನೊಳಗೆ ನಾ ಇಣುಕಿ
ಜಗಸುಖದ ಕೈ ಹಿಡಿದೆ

Sunday 18 September 2011

ಕವಿತೆಗಳ ಹಾದಿಯಲ್ಲಿ

ಕವಿತೆಗಳ ಹಾದಿಯಲ್ಲಿ
ಸಾಗಿರುವ ನಿಮ್ಮ ಬಂಡಿಯಲ್ಲಿ
ಕುಳಿತುಕೊಳ್ಳಲು ಒಂದಿನಿತು
ಜಾಗ ನೀಡಿ
ದುಡ್ಡು ಕೇಳಲು ನೀವು
ಬಂಡಿಯ ನಿರ್ವಾಹಕನಲ್ಲ
ನೀಡಲು ನಾನೇನು
ಪ್ರಯಾಣಿಕನಲ್ಲ

ಸ್ನೇಹದ ಕೊಂಡಿಯಲ್ಲಿ
ನೀವು ತೂಗುತಿದ್ದಿರಿ
ಆತ್ಹ್ಮೀಯನಿಗೆ ಬೇಸರವಯಿತೇನೋ
ಎಂದೆನಿಸಿ ನಾನು ಕೂಡಿಕೊಂಡೆ

ಯೋಚಿಸಿ ನೋಡಿ...

ಮಾನವ ಮಹಾನಗರ ಕಟ್ಟಿದ
ಗಗನ ಚುಂಬಿ ಕಟ್ಟಡಗಳು
ನಿಲ್ಲಲು ಜಾಗವೇ ಇಲ್ಲ
ಸಿಕ್ಕ ಜಾಗದಲ್ಲಿ ನಿಂತರೆ
ಕಟ್ಟಡದ ತುದಿ ಕಾಣದು
ಸಮತೋಲನ ಕೋನ ಇಲ್ಲ
ಕಷ್ಟ ಪಟ್ಟು ಮೆಟ್ಟಿಲು ಹತ್ತಿ
ಕೆಳ ಹಿಣುಕಿದರೆ ನೆಲ ಕಾಣದು

ದೊಡ್ಡ ಮನೆಗಳು ಕಂಡವು
ಒಳ ಹೊಕ್ಕು ನೋಡಿದರೆ
ಗಂಡ, ಹೆಂಡತಿ, ಮಗು
ಅದೇ ಸಣ್ಣ ಸಂಸಾರ

ಎಲ್ಲೆಲ್ಲು ಜ್ಞಾನ ತುಂಬಿತ್ತು
ಆದರೂ ನಿರ್ಧಾರಕ್ಕೆ ಬರದ ಜನ
ಅಂಗಡಿ ತುಂಬೆಲ್ಲ ಔಷಧಗಳು
ಆಸ್ಪತ್ರೆ ತುಂಬಾ ರೋಗಿಗಳು
ಜನಗಳು ಆಸೆಗಳನ್ನು ಗುಣಿಸಿದ್ದರು
ಆದರೆ ಮೌಲ್ಯವನ್ನು ಕಳೆದಿದ್ದರು
ಅತಿಯಾಗಿ ಮಾತನಾಡುತಿದ್ದರು
ಕಡಿಮೆ ಪ್ರೀತಿಸುತಿದ್ದರು
ಹೆಚ್ಚೆಚ್ಚು ದ್ವೆಶಿಸುತಿದ್ದರು

ಚಂದ್ರನ ಎದೆ ತಟ್ಟಿ ಬಂದಿದ್ದರು
ಪಕ್ಕದ ಬೀದಿಯನ್ನೇ ದಾಟಲಾಗುತ್ತಿಲ್ಲ
ನೆರೆಮನೆ ಮಂದಿಯ ಮುಖ ಕಂಡಿಲ್ಲ
ಹೊರ ಜಗತ್ತಿಗೆ ಅಡಿ ಇಟ್ಟ ಜನಗಳಿಗೆ
ಒಳ ಜಗತ್ತು ಕೈಗೆ ಸಿಗಲೇ ಇಲ್ಲ
ದುಡ್ಡು ಕೂಡಿ ಕೂಡಿ ಬೆಳೆಯುತ್ತಿತ್ತು
ಗುಣ ಕಳೆದು ಕಳೆದು ಕರಗುತ್ತಿತ್ತು
ಸ್ವಾತಂತ್ರ್ಯ ಕಣ್ಣಿಗೆ ಕಾಣುತಿತ್ತು
ನಗುವಿನಲ್ಲಿ ಅದೇ ಕೊರತೆ ಇತ್ತು
ಗಲ್ಲಿ ಗಲ್ಲಿಯಲ್ಲೂ ತಿಂದಷ್ಟು ಊಟ
ಆದರೂ ಅಪೌಷ್ಟಿಕತೆಯಿಂದ ಸತ್ತ ಮಕ್ಕಳು

ಒಂದು ಮನೆಯಲ್ಲಿ ಎರಡು ಸಂಬಳ
ಎಲ್ಲರೆದರು ಸಂತಸದ ಗೃಹಪ್ರವೇಶ
ಒಳ ಹೊಕ್ಕಿದರೆ ಎರಡು ಮನೆ
ನಡುವೆ ನ್ಯಾಯಾಂಗದಿಂದ ವಿಚ್ಛೇದನ
ಮಕ್ಕಳು ಅರ್ಧನಾರೀಶ್ವರರು

ಹೊರಗಣ್ಣಿಗೆ ಜಗತ್ತು ನಗುತಿತ್ತು
ಒಳಗಣ್ಣಲ್ಲಿ ಜಗವದು ಸೊರಗಿತ್ತು..

ಅಗೋಚರ...

ಇರುಳ ಹೊರಳಿಕೆಯಲ್ಲಿ
ಮನೆಗಳಿಗೆ ದರಿದ್ರ ನಿದ್ದೆ
ನಿಶಬ್ದದ ಸವಿ ನೀರವತೆ
ಅನುಭವಿಸಿದೆ ಆರ್ದ್ರತೆ
ಆದರೆ ಕಣ್ಣಿಗೆ ಕಾಣಲಿಲ್ಲ

ಮನದ ಕಾರ್ಮೋಡದೊಳಗೆ
ಕೋಟಿ ನಕ್ಷತ್ರ ಶಯನ
ಹಾದು ಹೋದ ನೆಮ್ಮದಿ
ಸ್ವಲ್ಪದರಲ್ಲೇ ಪಕ್ಷಿಗೂಡು
ನನ್ನ ಮುಂದೆ ನಿಲ್ಲಲಿಲ್ಲ

ತಂತಿಯಿಂದ ಹರಿದು ಸಾಗಿ
ಬೆಳಕು ಮನೆಯ ಕೂಡಿತು
ಗೋಡೆ ಮೇಲೆ ಚೀಲ ಹಾಸಿ
ಅದರ ಚೂರು ಹಿಡಿಯಲಿಲ್ಲ
ಹರಿದ ಪರಿ ಗೋಚರಿಸಲಿಲ್ಲ

ಹರಿವ ನದಿಗೆ ಅಡ್ಡಗೋಡೆ
ಸಿಡಿದ ಬಾವಿ, ಹೃದಯಾಘಾತ
ಕುಡುಗೋಲಿನ ಅಲಗಿನಲ್ಲಿ
ಮೇಲೆ ನಿಂತ ಮುಷ್ಠಿಬುದ್ಧಿ
ನೆಗೆದ ಜೀವ ಕಾಣಲಿಲ್ಲ!

ಕಣ್ಣು ಕೂಡಿ, ತುಟಿ ಸೇರಿ
ನಡುವಲ್ಲಿ ಕಾಮ ಘರ್ಷಣೆ
ಬಯಕೆ ಬೆವರು ಕಲೆತು
ಜೀವವೊಂದು ಮೊಳೆಯಿತು
ಅದೆಲ್ಲಿತ್ತೋ ತಿಳಿಯಲಿಲ್ಲ

ಮನೆಯ ಸೂರಿನಲ್ಲಿ ಮಲಗಿ
ಒಂಬತ್ತು ದಿನ ಅಲ್ಲೇ ತಂಗಿ
ಲೋಕ ಬಿಟ್ಟು ಮತ್ತೆ ಬಂದು
ಗೂಡು ಹುಡುಕಿ ಒಳಗೆ ಸಾರಿ
ಪುನರ್ಜನ್ಮ, ಮನವು ನಂಬಲಿಲ್ಲ

ಪಯಣ ಮುಗಿಸಿ ವಿಮಾನ ಹತ್ತಿದೆ..

ಬಂದದ್ದು ಬೆಳ್ಳಂಬೆಳಗ್ಗೆ
ತಂಗಿದ್ದು ಮೂರು ದಿನ
ಕಂಡದ್ದು ಬೆಳಕು ಮತ್ತು
ಅದರ ಅಂಚು ಕತ್ತಲು

ಸಿಕ್ಕವರು ನೂರು ಜನ
ನಕ್ಕವರು ಮೂರೇ ಜನ
ಹೊಕ್ಕವರು ಎರಡೇ ಜನ
ಹೊತ್ತವರು ನಾಲ್ಕು ಜನ

ದುಡಿದದ್ದು ಲೆಕ್ಕವಿಲ್ಲ
ಉಳಿದದ್ದು ಗೊತ್ತೇ ಇಲ್ಲ
ಅಳಿದದ್ದು ಬರಲೇ ಇಲ್ಲ
ಈಗ ಅದ್ಯಾವುದು ನೆನಪಿಲ್ಲ

ಮೂರು ದಿನ ಮುಗಿಯಿತು
ತಂದ ವಿಮಾನ ಕರೆಯಿತು
ಬೆಂಕಿಗೆ ಮನೆ ಸುಟ್ಟಿತು
ಮಂದಿ ಗುಂಪು ಹೊರಟಿತು

ಕೊರಗಿದವು ನೂರು ಮನ
ಹೆಂಡತಿ, ಮಗು, ನನ್ನ ಜನ
ಮರೆಸಿಬಿಟ್ಟಿತು ಕಾಲ ಚಲನ
ಹೊತ್ತವರಿಗೆ ಜೀವ ನಮನ