ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Wednesday, 26 December 2012

ಅವಸಾನ...

ನಾನು ಓದಿದ ಈ ಶಾಲೆಯ ಮುಂದಿನ ರಸ್ತೆ ಬದಿಯಲ್ಲಿ ಒಂದು ಆಲದಮರವಿತ್ತು. ಅಷ್ಟಗಲ ಹರಡಿಕೊಂಡಿದ್ದ ಹಳೆಕಾಲದ ಮರದ ಕೆಳಗಿನ ಕಲ್ಲಿನಕಟ್ಟೆಯ ಮೇಲೆ ದಿನಕ್ಕೆ ನೂರಾರು ಜನಗಳು ಮಲಗಿ ಮೈಕೈ ನೋವನ್ನು ನೀಗಿಸಿಕೊಳ್ಳುತ್ತಿದ್ದರು. ಹೊಲ ಗದ್ದೆಗಳಿಗೆ ಕೂಲಿ ಕಂಬಳಕ್ಕೆ ಹೋಗುತ್ತಿದ್ದ ಹೆಂಗಸರು ತೂಕಲಿಗೆ ಮುದ್ದೆ ಮುರಿದುಕೊಂಡು ಇದೇ ಜಾಗದಲ್ಲಿ ಮೊದಲು ಸೇರಿ ನಂತರ ಕೆಲಸ ಹಂಚಿಕೊಂಡು ಸಾಗುತ್ತಿದ್ದರು. ಭಾನುವಾರ ಬಂತೆಂದರೆ ಸಾಕು ಇದೇ ಮರದ ಕೆಳಗೆ ಒದ್ದಾಡುವುದೇ ನಮ್ಮ ಕೆಲಸವಾಗುತ್ತಿತ್ತು. ಹತ್ತದಿನೈದು ವರ್ಷದ ಹಿಂದೆ ಗೋಲಿ ಆಟಕ್ಕೆ ಅಗೆದಿದ್ದ ಗುಂಡಿ ಇಂದು ಮುಚ್ಚಿಹೋಗಿದೆ, ಆ ಕಲ್ಲಿನ ಮೇಲೆ ಹುಲಿಮನೆ ಆಟವಾಡಲು ಕೊರೆದಿದ್ದ ತ್ರಿಭುಜಾಕಾರದ ಚಿತ್ರ ಮಸಕು ಮಸಕಾಗಿ ಹಾಗೇ ಇದೆ. ಜಿದ್ದಿಗೆ ಬಿದ್ದು ನನ್ನೊಂದಿಗೆ ಆ ಆಟವಾಡುತ್ತಿದ್ದ ಸಿದ್ಧರಾಜು ಇಂದಿಲ್ಲ. ಈ ಜಾಗವನ್ನೇ ಆವರಿಸಿಕೊಂಡು ನೆರಳು ನೀಡಿ ನೂರಾರು ಜನರನ್ನು, ದಣಿದವರನ್ನು ತನ್ನ ಮಡಿಲಿನಲ್ಲಿ ಮಲಗಿಸಿಕೊಂಡ ಮರವೂ ಇಲ್ಲ. ಈ ಮೊದಲು ಊರಿಗೆ ಬಂದು ಐದು ವರ್ಷವಾದ ಕಾರಣವೋ ಏನೋ ಈ ಜಾಗವೆಲ್ಲ ನನಗೆ ಬೋಳು ಬೋಳಾಗಿ ಕಾಣುತ್ತಿದೆ. ಆಲದ ಮರ ಆವರಿಸಿಕೊಂಡಿದ್ದ ಜಾಗವನ್ನೆಲ್ಲ ಇಂದು ಮೊಬೈಲ್ ಟವರ್ ಗಳು ನುಂಗಿಹಾಕಿವೆ. ಆ ಮರದಡಿಯಲ್ಲಿ ಜೊತೆಗೆ ಅಡ್ಡಾಡಿದ ಒದ್ದಾಡಿದ ಗೆಳೆಯರು ಎದೆಯಲ್ಲಿ ಒಂದು ನೆನಪನ್ನು ಕೊರೆದಿಟ್ಟು ಅದೆಲ್ಲೆಲ್ಲಿಗೂ ಹೊರಟುಹೋಗಿದ್ದಾರೆ. ಕೆಲವರು ಅಕಾಲಿಕವಾಗಿ ಸತ್ತುಹೋಗಿದ್ದಾರೆ. ‘ಕಾಳಯ್ಯ ಈಜಲು ಹೋಗಿ ತೀರಿಕೊಂಡ’ ಎಂಬ ಮಾತು ಬಾಯಿಂದ ಬಾಯಿಗೆ ಹರಡಿ ಪಟ್ಟಣದಲ್ಲಿದ್ದ ನನ್ನ ಕಿವಿಗೆ ಬಿದ್ದರೂ ಅದಾವ ಸೋಮಾರಿತನದ ಹಿಡಿತವೋ ಏನೋ ಆತನ ಮುಖವನ್ನು ನೋಡಲು ಬರಲಾಗಲಿಲ್ಲ. ಅರ್ಧರಾತ್ರಿಯಾದೊಡನೆ ಎಚ್ಚರಗೊಳ್ಳುತ್ತಿದ್ದ ಸಿದ್ಧರಾಜು ಕಾಡಿನಿಂದ ಶ್ರೀಗಂಧ ಕದ್ದೊಯ್ಯುತ್ತಿರುವಾಗ ಅದಾರದೋ ಹೊಲದ ಕರೆಂಟ್ ತಂತಿಗೆ ಕಾಲುಕೊಟ್ಟು ಕೊನೆಗೆ ಕತ್ತಿಗೆ ಹಗ್ಗ ಸುತ್ತುಕೊಂಡಂತೆ ಬೆಟ್ಟದ ತಪ್ಪಲಿನ ಮರದ ಕೆಳಗೆ ದೊರಕಿದಾಗಲೂ ಕೆಲಸದ ನೆಪದಿಂದ ಬರಲಿಲ್ಲ. ಈ ಕಲ್ಲಿನ ಎದೆಯಲ್ಲಿರುವ ಹುಲಿಮನೆ ಆಟದ ಪಂಜರದ ಮೇಲೆ ಅವನ ಕೈ ಗುರುತಿದೆ, ನನ್ನ ಅವನ ಬುದ್ಧಿವಂತಿಕೆ ಚತುರತೆ ಎದ್ದು ಕಾಣುತ್ತದೆ.
ಆ ಕಲ್ಲಿನ ಮೇಲೆ ಕುಳಿತುಕೊಂಡೊಡನೆ ಒಂದು ರೀತಿಯ ಭಾವುಕತೆ ಮತ್ತು ಖಾಲಿತನ ನನ್ನನ್ನು ಆವರಿಸಿಕೊಂಡು ಒಂದು ಹತ್ತು ಹೆಜ್ಜೆಯ ಮುಂದಿನ ಪ್ರಪಂಚ ಬೇಡವಾಯಿತು. ಮರದ ನೆರಳ ತಂಪು ನೆತ್ತಿಗೆ ಬೀಳಲಿಲ್ಲವೆಂಬುದೇ ಬೇಸರ.

“ಏನಪ್ಪಾ, ಚೆನ್ನಾಗಿದಿಯಾ?” ಯಾರೋ ಕೇಳಿದರು. ಕಣ್ಣು ಕಾಣದ ವಯಸ್ಸಿನಲ್ಲೂ ಆತ ನನ್ನನ್ನು ಗುರುತಿಸಿಕೊಂಡರೂ ನನಗೆ ಆತನ ಸುಳಿವು ಹತ್ತಿರಕ್ಕೆ ಹೋಗುವವರೆವಿಗೂ ದೊರಕಲಿಲ್ಲ. ಕಪ್ಪಾಗಿರುವ ಕಾರಣದಿಂದ ಎಲ್ಲರೂ ಆತನನ್ನು ‘ಕರಗಣ್ಣ’ ಎಂದು ಕರೆಯುತ್ತಿದ್ದರು. ಆ ಕಾಲದಲ್ಲಿ ಅಷ್ಟು ಸದೃಢನಾಗಿದ್ದವನು ಈಗ ತೀವ್ರ ಕೃಶನಾಗಿದ್ದಾನೆ. ಒಂದು ಕಾಲದಲ್ಲಿ ಷರ್ಟಿನ ಎರಡು ಜೇಬಿನ ತುಂಬಾ ಬರಿ ಕಾಗದಗಳನ್ನೇ ತುಂಬಿಕೊಂಡು ಒಂದೈದು ಪೆನ್ನುಗಳನ್ನು ತುರುಕಿಕೊಂಡಿರುತ್ತಿದ್ದ. ಕೈಯಲ್ಲಿ ಒಂದು ರೇಡಿಯೋ ಹಿಡಿದುಕೊಂಡು ಕನ್ನಡ, ತಮಿಳು, ತೆಲುಗು, ಇಂಗ್ಲೀಷ್, ಹಿಂದಿ ವಾರ್ತೆಯನ್ನೆಲ್ಲಾ ಗಮನವಿಟ್ಟು ಕೇಳಿ ಅರ್ಥವಾಗದಿದ್ದರೂ ಏನೇನೋ ಭಾಷಾಂತರಿಸಿ ಊರಿನ ಜನರಿಂದ ಸೈ ಎನಿಸಿಕೊಂಡಿದ್ದವ. ಇಟ್ಟುಕೊಂಡ, ಕಟ್ಟುಕೊಂಡವರ ಒಡೆದ ಸಂಸಾರಗಳನ್ನೆಲ್ಲಾ ಚಾವಡಿಯ ಮೇಲೆ ಕುಳಿತು ತೀಕ್ಷ್ಣವಾಗಿ ಮಾತನಾಡಿ ಪರಿಹರಿಸುತ್ತಿದ್ದವ, ಸಾಧ್ಯವಾಗದಿದ್ದಾಗ ಹೆಂಡತಿಗೆ ಗಂಡನ ಕಡೆಯಿಂದ ಐದು ಸಾವಿರ ಕೊಡಿಸಿ ತಾಳಿ ಕೀಳಿಸಿಬಿಡುತ್ತಿದ್ದ.

“ಚೆನ್ನಾಗಿದ್ದೇನೆ, ನೀವು ಹೇಗಿದ್ದೀರಿ” ಎಂದೆ.
“ಶಿವ ಮಡಗ್ದಂಗಿದ್ದೀನಪ್ಪ” ಎಂದವನೇ ತಲೆ ಕೆರೆದುಕೊಂಡ.
“ಹೇಳಿ” ಎಂದೆ.
“ಒಂದೈದ್ರುಪಾಯಿ ಇದ್ರೆ ಕೊಡಪ್ಪ, ಒಂದ್ ಕಟ್ಟು ಗಣೇಶ ಬೀಡಿ ತಕ್ಕೋತಿನಿ” ಅಂದ. ಆತನ ಮನೆಯಲ್ಲಿ ನಾನು ಅದೆಷ್ಟೋ ಬಾರಿ ಹೊಟ್ಟೆ ತುಂಬಾ ಉಪ್ಹೆಸರು ಮುದ್ದೆ ತಿಂದಿದ್ದೇನೆ. ಒಂದು ದಿನವೂ ಬೇಸರಿಸಿಕೊಳ್ಳದೆ ಬಡಿಸಿದವರು ಇಂದು ಕೇವಲ ಐದು ರೂಪಾಯಿಗೆ ಕೈಚಾಚಿದ್ದು ಕಂಡು ಬೇಸರವಾದರೂ ಕೊನೆಗೆ ಖರ್ಚಿಗೆ ಇಟ್ಟುಕೊಳ್ಳಿ ಎಂದು ಐವತ್ತು ರೂಪಾಯಿಯನ್ನೇ ಕೊಟ್ಟೆ.
“ನಿಮ್ಮ ಮಗ ಧಾಮೋಧರ ಹೇಗಿದ್ದಾನೆ, ಎಲ್ಲಿದ್ದಾನೆ ಈಗ?” ದುಡ್ಡು ಸಿಕ್ಕಿದ್ದೇ ಖುಷಿಯಾದ ಆತನನ್ನು ಕೇಳಿದೆ.
“ಅಯ್ಯೋ, ಅವನು ಆ ಕೆಳ್ಗಲ್ ಕೇರಿ ಮೂಲೆ ಮನೆ ವೆಂಕ್ಟನ್ ಹೆಂಡತಿ ಜೊತೆ ಓಡಿಹೋಗಿ ತಮಿಳುನಾಡು ಕಾಫಿ ತೋಟದಲ್ಲಿ ಸೇರಿಕೊಂಡವ್ನೆ ಅಪ್ಪ, ಈ ಊರಿಗೆ ಬಂದ್ರೆ ಅವನನ್ನ ಬುಟ್ಟಾರ ಜನಗೋಳು” ಎಂದಾಗ ಈ ರೀತಿಯ ಎಡವಟ್ಟುಗಳಿಗೆ ತಲೆಕೊಟ್ಟು ಊರು ಬಿಟ್ಟುಹೋದ, ಪವಿತ್ರವಾಗಿ ಪ್ರೀತಿಸಿ ಕೊನೆಗೆ ಇಟ್ಟುಕೊಂಡವರು ಎಂಬ ಪಟ್ಟ ಹೊತ್ತುಕೊಂಡ ಎಷ್ಟೋ ಗೆಳೆಯರು ನೆನಪಿಗೆ ಬಂದರು.

“ಅದ್ಸರಿ, ನೀನು ಮದುವೆ ಆಗೋದಿಲ್ವೇ?, ಪಟ್ಟಣಕ್ಕೆ ಸೇರಿ ನೀನು ಇನ್ನೂ ಹೀಗೆ ಉಳ್ಕೊಂಡಿದ್ಯಾ, ನೀನು ಆಗ ಹೊತ್ತು ತಿರುಗಾಡ್ತಿದ್ದ ಕೂಸುಗಳಿಗೆಲ್ಲಾ ಈಗ ಒಂದೊಂದು ಮಕ್ಕಳಾಗಿದೆ” ಆತ ಕೇಳಿದ
“ಆಗೋಣ ಬಿಡಿ ಅಣ್ಣಯ್ಯಾ, ಅವರೆಲ್ಲಾ ಅವಸರಕ್ಕೆ ಬಿದ್ದು ಮದುವೆ ಆದವರು. ನಾವು ಪಟ್ಟಣದಲ್ಲಿರುವವರು ಅವರಂತೆ ಅವಸರಕ್ಕೆ ಬೀಳಲು ಸಾಧ್ಯವೇ” ಎಂದು ಹೇಳಿದನೇ ಮತ್ತೆ ಆ ಕಲ್ಲಿನ ಮೇಲೆ ಕುಳಿತುಕೊಂಡೆ.

ಮದುವೆ ಎಂಬ ಈ ಪದ ನನ್ನ ಕಿವಿಗೆ ಬಿದ್ದರೆ ರೇಖಾ ನೆನಪಾಗುತ್ತಾಳೆ. ಇದೇ ಶಾಲೆಯ ಆವರಣದಲ್ಲಿ ಒಬ್ಬರಿಗೊಬ್ಬರು ಮದುವೆಯ ಆಟ ಆಡಿದ್ದೆವು. ನಮ್ಮಿಬ್ಬರನ್ನು ಹಸೆಮಣೆ ಮೇಲೆ ಕೂರಿಸಿ ಮದುವೆ ಮಾಡಿದ್ದ ಇತರೆ ಗೆಳೆಯರು ಆಟವೆಂಬುದನ್ನು ಮರೆಯುವಷ್ಟು ಗಂಭೀರವಾಗಿ ಆಗಾಗ ಈ ಮದುವೆಯನ್ನು ನೆರವೇರಿಸುತ್ತಿದ್ದರು. ಪ್ರೀತಿ ಪ್ರೇಮ ಎಂಬ ಕಿಂಚಿತ್ತೂ ಅರಿವಿಲ್ಲದ ಆ ಕಾಲದಲ್ಲಿ ಆಕೆಗೆ ಹಳೆಯ ಜಾಮೆಟ್ರಿ ಬಾಕ್ಸ್ ಜೊತೆಗೆ ನಾಲ್ಕಾಣೆಯ ಒಂದು ಪಾವಲಿಯನ್ನು ನೀಡಿದ್ದೆ. ಬಹುದಿನಗಳವರೆವಿಗೂ ಆಕೆ ಅದನ್ನು ತನ್ನೊಡನೆ ಇಟ್ಟುಕೊಂಡಿದ್ದಳು. ನಂತರದ ದಿನಗಳಲ್ಲಿ ನಮ್ಮಿಬ್ಬರ ನಡುವೆ ಬಿರುಗಾಳಿಯಾಗಿ ಬಂದವನು ಲಕ್ಷ್ಮಣ್. ನಿನ್ನೆ ಬಸ್ಸಿನಿಂದ ಹೊರಗೆ ಹೆಜ್ಜೆ ಇಟ್ಟಾಗ ಆತ ತೂರಾಡಿಕೊಂಡು ಮೇಲೆ ಬಿದ್ದಾಗ ಯಾಕೋ ತುಂಬಾ ಕನಿಕರ ಹುಟ್ಟಿತ್ತು. ಇದೇ ಲಕ್ಷ್ಮಣ್, ಆಕೆ ತುಂಬಾ ಜೋಪಾನವಾಗಿಟ್ಟುಕೊಂಡಿದ್ದ ನವಿಲುಗರಿಯೊಂದನ್ನು ತುಂಡು ಮಾಡಿ ನನ್ನ ಪುಸ್ತಕದಲ್ಲಿ ಇಟ್ಟಿದ್ದ. ಇದೇ ವಿಚಾರವಾಗಿ ಮುನಿಸಿಕೊಂಡಿದ್ದ ಆಕೆ ಆ ನಾಲ್ಕಾಣೆ ಪಾವಲಿಯನ್ನು ನನ್ನ ಮುಖಕ್ಕೆ ಎಸೆದುಹೋಗಿದ್ದಳು.

ಈ ಶಾಲೆಯ ಗೋಡೆಗಳು ಇನ್ನೂ ಹಾಗೇ ಇವೆ. ಅಂದು ಎಳೆ ಹುಡುಗನಾಗಿದ್ದವನು ಇಂದು ಬೆಳೆದು ಮುಂದೆ ಕುಳಿತಿರಬಹುದು. ಆದರೆ, ಆ ಗೋಡೆಗೆ ನಾನಿನ್ನೂ ಚಿಕ್ಕವನೆ. ಪಾಳುಬಿದ್ದ ಶಾಲೆಯ ಈ ಸ್ತಬ್ಧಗೋಡೆಗಳು ನನ್ನ ಬುದ್ಧಿಯನ್ನು ತೀಡಿ ತೀಕ್ಷ್ಣಗೊಳಿಸಿದ ಗುರುಗಳನ್ನು ನೆನಪಿಸುತ್ತದೆ, ಈ ಅಂಗಳದಲ್ಲಿ ಚೆಲ್ಲಿಕೊಂಡಿದ್ದ ಗೆಳೆಯರು ಅಷ್ಟೇ ಚಿಕ್ಕವರಾಗಿ ನನ್ನನ್ನು ಕೂಗುತ್ತಿದ್ದಾರೆ. ಅಂದು ಇಲ್ಲೆಲ್ಲಾ ನಲಿದಾಡಿದ ಎದೆಯಲ್ಲಿ ಒಂದು ಗುರುತನ್ನು ಮೂಡಿಸಿದ ಹುಡುಗಿಯರ ಮಕ್ಕಳು ಇಲ್ಲೆಯೇ ಆಡುತ್ತಿವೆ ಎನಿಸುತ್ತಿದೆ. ಆದರೆ, ಈ ಮುಗ್ದ ಮಕ್ಕಳೊಂದಿಗೆ ನನ್ನ ಕುಡಿಗಳು ಸೇರಿಕೊಂಡು ಈ ತಂಪಿನಲ್ಲಿ ಎಲ್ಲಾ ಮರೆತು ಹಳ್ಳಿಯ ಸೊಗಡಿನಲ್ಲಿ ಬೆಳೆಯಲಿ ಎಂದುಕೊಳ್ಳಲಾರೆ.

ಅಸಲಿಯಾಗಿ ಅದು ನನ್ನಿಂದ ಸಾಧ್ಯವೇ?

ನಿನ್ನೆ ಸಂಜೆ ಈ ಹಳ್ಳಿಗೆ ಬಂದು ಹತ್ತು ನಿಮಿಷವಾಗಿರಲಿಲ್ಲ, “ವಯಸ್ಸಾಗಿದೆ, ಮದುವೆ ಮಾಡಿಕೊಳ್ಳಲು ನಿನಗೇನು ದಾಡಿ” ಅಜ್ಜಿ ಒಂದೇ ಸಮನೆ ಸಂಚಿ ಹುಡುಕುತ್ತಾ ಗೊಣಗಿಕೊಂಡಳು.
“ಏನಪ್ಪಾ, ಹುಡುಗಿ ನೋಡೋದೇ? ಮೊನ್ನೆ ರಾಮಣ್ಣನ ಮದುವೆಗೆ ಹೋಗಿದ್ದಾಗ ಒಂದೊಳ್ಳೆ ಸಂಬಂಧ ಗೊತ್ತು ಮಾಡಿಬಂದಿದ್ದೇನೆ” ಅಣ್ಣ ಕೇಳಿಕೊಂಡ.
“ಅವನು ಯಾರನ್ನಾದರೂ ಪ್ರೀತಿಸಿರಬಹುದು ಇಲ್ಲ ಪಟ್ಟಣದಲ್ಲಿ ನಮಗೆಲ್ಲರಿಗೂ ತಿಳಿಯದಂತೆ ಒಂದು ಸಂಸಾರ ಹೂಡಿರಬಹುದು, ಆದುದರಿಂದಲೇ ಮದುವೆಗೆ ಒಪ್ಪಿಗೆ ನೀಡದೆ ಈ ರೀತಿಯಾಗಿ ಆಡುತ್ತಿದ್ದಾನೆ” ಪಕ್ಕದ ಮನೆಯವಳು ತನ್ನದೂ ಒಂದು ಸೊಲ್ಲಿರಲಿ ಎಂದು ನನ್ನ ಮುಖ ನೋಡುತ್ತ ಹೇಳಿದಳು.
“ಮಗನೇ, ನಾ ಸಾಯುವ ಮೊದಲೇ ನಿನ್ನ ಮದುವೆ ನೋಡಿಬಿಡುತ್ತೇನೆ, ಈ ಹಳ್ಳಿಯಲ್ಲಿಯೇ ನಿನ್ನ ಮದುವೆಯಾಗಬೇಕು ಕಂದ”, ಗೂರಲು ರೋಗದಿಂದ ಬಳಲಿ ಮೇಲೆ ಹಾರುತ್ತಿದ್ದ ಜೀವಪಕ್ಷಿಯನ್ನು ಹಿಡಿದುಕೊಂಡ ಅಪ್ಪ ಕಷ್ಟಪಟ್ಟು ನುಡಿದ.
“ನಿನ್ನೆಯಷ್ಟೇ ಬಸಣ್ಣ ಫೋನ್ ಮಾಡಿದ್ದ, ಚಿಕ್ಕಕ್ಕನ ಮಗಳು ಓದಿಕೊಂಡಿದ್ದಾಳಂತೆ, ನೋಡಲೂ ಚೆನ್ನಾಗಿದ್ದಾಳೆ, ಅವರಲ್ಲಿ ಹತ್ತೆಕರೆ ಜಮೀನು ಒಳ್ಳೆ ಆಸ್ತಿ ಇದೆ. ನಿನ್ನೆ ಅವರ ಮನೆಗೆ ಹೋಗಿ ಮಾತನಾಡ್ಕೊಂಡು ಬಂದಿದ್ದೇನೆ, ನಿಮ್ಮ ಮಗಳೇ ನನ್ನ ಸೊಸೆ ಎಂದು ಹೇಳಾಗಿದೆ, ಅವರು ಬೆಳಗ್ಗೆಯಿಂದಲೂ ಫೋನಾಯಿಸಿ ‘ಬೇಗ ತಿಳಿಸಿ, ಅದ್ಯಾರೋ ಕಂಡಕ್ಟರ್ ಬಂದು ನೋಡಿಕೊಂಡು ಹೋಗಿದ್ದಾರೆ’ ಎಂದು ಕೇಳುತ್ತಲೇ ಇದ್ದಾರೆ. ನೀನು ಈ ರೀತಿ ಆಡ್ತಾ ಇರೋದಾದ್ರೂ ಯಾಕೆ ಅಂತ ಗೊತ್ತಾಗ್ತಾ ಇಲ್ಲಪ್ಪ?” ಸಿಟ್ಟು ಮಾಡಿಕೊಂಡ ಅಮ್ಮ ‘ಚೆ’ ಎಂದುಕೊಂಡಳು.

“ದಯವಿಟ್ಟು ಸ್ವಲ್ಪ ಸಮಯ ಕೊಡಿ, ಅವಸರ ಬೇಡ, ನಾನೇನೂ ಈಗ ಹುಚ್ಚನಂತೆ ಬೀದಿ ಬೀದಿ ಅಲೆಯುತ್ತಿಲ್ಲವಲ್ಲ, ನೆರೆ ಕೂದಲು ಬಂದು ಚರ್ಮವೆಲ್ಲಾ ಸುಕ್ಕುಗಟ್ಟಿಹೋಯಿತೇನೋ ಎಂಬಂತೆ ಆಡುವುದೇಕೆ? ಕೂಡಲೇ ಮದುವೆ ಬಗ್ಗೆ ತಿಳಿಸುತ್ತೇನೆ” ಎಂದು ಹೇಳಿ ಮನೆಯಿಂದ ಹೊರ ನಡೆದಿದ್ದೆ.

“ಏನಪ್ಪಾ, ಪಟ್ಟಣಕ್ಕೆ ಹೋದದ್ದೇ ನಮ್ಮನ್ನ ಮರೆತುಬುಟ್ಟಾ?” ಯಾವುದೋ ಪರಿಚಿತ ದ್ವನಿ ಕಿವಿಗೆ ಬಿದ್ದಿತು. ಕೂಲಿ ಮುಗಿಸಿ ಬರುತ್ತಿದ್ದ ನಮ್ಮ ಬೀದಿಯ ಹೆಂಗಸರ ದಂಡೆ ನನ್ನ ಹಿಂದೆ ನಿಂತಿತ್ತು.
“ಚೆನ್ನಾಗಿದ್ದೇನೆ, ನೀವುಗಳು?” ಎಂದೆ.
“ನಮ್ಮದೇನಪ್ಪ, ಕೂಲಿ ಮಾಡಿದರೆ ಉಣ್ಣುವುದು, ಇಲ್ಲದಿದ್ದರೆ ಶಿವನಿಷ್ಟ ಅಂದ್ಕೊಂಡು ನೀರು ಕುಡಿಯುವುದು” ಎಂದಳೊಬ್ಬಳು
“ಪಟ್ಣಕ್ಕೆ ಹೋಗಿ ನೀನು ಕೆಡಲಿಲ್ಲ, ಒಂದು ಸೈಟ್ ತೆಗೆದುಕೊಂಡಿದ್ದಿಯಂತೆ, ಅದೆಷ್ಟೋ ಲಕ್ಷ ದುಡ್ಡನ್ನ ಬ್ಯಾಂಕಿನಲ್ಲಿಟ್ಟಿದ್ದೀಯಂತಲ್ಲಪ್ಪ, ತಣ್ಗಿರು” ಎಂದಳು ಗಂಗವ್ವ. ಈಕೆ ನಮ್ಮ ನೆರೆಮನೆಯಾಕೆ. ನಮ್ಮಮ್ಮ ದಿನಕ್ಕೊಮ್ಮೆಯಾದರೂ ಈಕೆಯ ಬಳಿ ನನ್ನ ವಿಚಾರವೆತ್ತಿ ಬರಿ ಈ ರೀತಿಯ ಸುಳ್ಳನ್ನು ಹೇಳುವುದೇ ಆಯಿತು.
"ಇದೇಕೆ? ಮದುವೆ ಆಗೋಲ್ವೇ?" ಮತ್ತದೇ ಪ್ರಶ್ನೆ ಎದುರಾಗಿದ್ದೇ "ನೀವೆಲ್ಲಾ ನಡೆಯಿರಿ, ಬೀದಿಗೇ ಬಂದು ಮಾತನಾಡುತ್ತೇನೆ" ಎಂದು ಕಳುಹಿದೆ.

ಈ ಕೆರೆ ನೋಡಿ, ಮಳೆಗಾಲ ಬಂದಾಗ ತುಂಬಿಕೊಳ್ಳುತ್ತದೆ, ಬೇಸಿಗೆ ಬಿಸಿಗೆ ಬೆತ್ತಲಾಗಿ ನೆಲ ಬಿರಿಯುತ್ತದೆ. ಅಲ್ಲಿದ್ದ ಕೆಲವು ಜೀವರಾಶಿಗಳು ಅವಸಾನಗೊಳ್ಳುತ್ತವೆ. ಹಾವು, ಚೇಳುಗಳು ಬಿಲ ಸೇರಿಕೊಳ್ಳುತ್ತವೆ. ಅದೆಲ್ಲಿಗೋ ಜೀವ ಹಾರಿ, ಮಾಂಸ ಕರಗಿ ಬಿದ್ದಿರುವ ಕಪ್ಪೆಯ ಅಸ್ಥಿಪಂಜರ ಈ ಜಗತ್ತಿಗೆ ಅಕಾರಣವಾಗಿ ಬಂದ ಒಂದು ಜೀವ ಕಾರಣವಿಲ್ಲದೇ ಕುಣಿದಾಡಿ, ನೆಗೆದಾಡಿ ಕೊನೆಗೆ ಕಾರಣ ಉಳಿಸದೇ ಸತ್ತುಹೋಗುವ ಕುರುಹನ್ನಿಟ್ಟುಕೊಂಡಿದೆ. ಅದೆಲ್ಲಿಂದ ಬಂತು, ಹೊದದ್ದಾದರೂ ಎಲ್ಲಿಗೆ ಎಂಬ ಪ್ರಶ್ನೆಗೆ ಆ ಎಲುಬು ಉತ್ತರಿಸದು, ಬದಲಾಗಿ ಈ ಜೀವನದ ಖಾಲಿತನವನ್ನು, ಇಂದು ನಮ್ಮನ್ನೆಲ್ಲಾ ಅಪ್ಪಿಕೊಂಡು ಬಿಗಿದಿರುವ ಸಂಬಂಧಗಳೊಳಗಿನ ಕೆಲವು ದಿನಮಾತ್ರದ ಆಕರ್ಷಣೆಯನ್ನು ಕನ್ನಡಿಯಾಗಿ ತೋರಿದೆ.

ಈ ಕೆರೆಯೆಂಬುದೂ ಬದುಕಿನಂತೆ ಎಲ್ಲಾ ಬದಲಾವಣೆಗೆ ಹೊಂದಿಕೊಳ್ಳುವ ಒಂದು ವೃತ್ತಾಂತ, ಇದೇ ವೃತ್ತಾಂತದಲ್ಲಿ ಹುಟ್ಟಿ ಸಾಯುವ ಕಪ್ಪೆಯಂತೆ ನಾನೂ ಕೂಡ ಇದೇ ಹಳ್ಳಿಯಲ್ಲಿ ಬದುಕಿಬಿಡಬೇಕಾಗಿತ್ತು. ಪಟ್ಟಣದ ಗೊಂದಲದ ಕಾರಣವಾಗಿ ದಿನಕ್ಕೆ ಡಝನ್ ಗಟ್ಟಲೇ ಸಿಗರೇಟ್ ಸೇದುವ ಬದಲು, ನನಗೆ ಈಜು ಕಲಿಸಿದ ಈ ಕೆರೆಯ ದಂಡೆಯಲ್ಲಿ ಕುಳಿತು ಒಂದು ಮೋಟುಬೀಡಿ ಸೇದಿ ಸಂಜೆಯಾದಂತೆ ಉಂಡು ಪಡಸಾಲೆಯಲ್ಲಿ ಮಲಗಿಬಿಡಬಹುದಾಗಿತ್ತು. ಮೈಗಂಟಿಕೊಳ್ಳುವ ಈ ಪ್ಯಾಂಟ್ ಷರ್ಟ್ ಬದಲು ಒಂದೆರಡು ಪಂಚೆಯಲ್ಲಿ ಜೀವನ ಕಳೆಯಬಹುದಿತ್ತು. ಹಳ್ಳಿಬಿಟ್ಟು ಯೋಚಿಸದ ಯಾವಳೋ ಒಬ್ಬಳನ್ನು ಮದುವೆಯಾಗಿ ಈ ಹೊತ್ತಿಗೆ ಒಂದೆರಡು ಮಕ್ಕಳೊಂದಿಗೆ ಕಾಲ ಕಳೆಯಬಹುದಿತ್ತು. ಎಲ್ಲೆಲ್ಲಿಯೂ ಬಸ್ಸು, ಸ್ಕೂಟರ್ ತುಂಬಿಕೊಂಡು ಯಾವಾಗಲೂ ಹೊಗೆ ಉಗುಳುವ, ಸಣ್ಣ ಸಣ್ಣ ವಸ್ತುವಿನ ವ್ಯಾಪಾರಕ್ಕೂ ದೊಡ್ಡ ದೊಡ್ಡ ಮೋಸ ಮಾಡುವ, ಮುಖ ನೋಡಿ ಮಣೆ ಹಾಕುವ ಪಟ್ಟಣವನ್ನು ಕನಸಿನಲ್ಲಿ ತುಂಬಿಕೊಳ್ಳುವ ಹಳ್ಳಿಗರು ಹಳ್ಳಿಯ ಈ ಸುಪ್ತ ಆಪ್ತ ವಾತಾವರಣವನ್ನು ಮರೆತುಬಿಡುತ್ತಾರೆ. ಪ್ಯಾಂಟ್, ಟೀ ಷರ್ಟ್, ಬೆಲ್ಟ್ ಹಾಕಿಕೊಂಡು ಅಸ್ವಾಭಾವಿಕವಾಗಿ ಮಾತನಾಡುವುದನ್ನೇ ನಾಗರಿಕತೆಯ ಪರಮಾವಧಿ ಎಂದುಕೊಳ್ಳುತ್ತಾರೆ. ಅಲ್ಲಿನ ಖರ್ಚನ್ನು ಲೆಕ್ಕವಿಟ್ಟುಕೊಳ್ಳದೇ ಬಂಡಿಯಷ್ಟು ದುಡಿಯಬಹುದೆಂಬ ಭ್ರಮೆಯ ಅಲಗಿನರಮನೆಯಲ್ಲಿ ತೇಲುತ್ತಾರೆ. ಒಂದಷ್ಟು ಜನ ಉದ್ಧಾರವಾದರೆ, ಒಂದಷ್ಟು ಜನ ಹಳ್ಳಿಯ ಮಡಿಲನ್ನು ಮತ್ತೆ ಅಪ್ಪಿಕೊಳ್ಳುತ್ತಾರೆ. ಒಂದಷ್ಟು ಜನ ಮೆಜೆಸ್ಟಿಕ್‍ನಂತಹ ಕತ್ತಲ ಕೂಪದೊಳಗೆ ಮೈ ಬೆತ್ತಲು ಮಾಡಿಕೊಳ್ಳುತ್ತಾರೆ. ನನ್ನಂತೆ ಏಡ್ಸ್ ನಂತಹ ಮಹಾಮಾರಿಗೆ ಸುಲಭವಾಗಿ ತುತ್ತಾಗಿಬಿಡುತ್ತಾರೆ!

ಅಷ್ಟಕ್ಕೇ ದೊಡ್ಡಪ್ಪನ ಫೋನ್ ಬಂದಿತ್ತು. "ಹಲೋ" ಎಂದೆ.
"ಎಲ್ಲಿದ್ದೀಯಪ್ಪಾ? ಮನೆ ಹತ್ರ ಬೇಗ ಬಾ, ಮದುವೆ ಬಗ್ಗೆ ಮಾತನಾಡಬೇಕು" ಎಂದ ದೊಡ್ಡಪ್ಪನ ಮಾತು ಕೇಳಿ ಮತ್ತಷ್ಟು ಕಿರಿಕಿರಿಯಾಯಿತು.
ಏನೂ ಮಾತನಾಡದೆ ಫೋನಿಡುವಷ್ಟರಲ್ಲಿ "ಏಡ್ಸ್ ವಿರುದ್ಧ ಜಾಗೃತಿ ಮೂಡಿಸುವ ಶಿಬಿರಕ್ಕೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗಿದೆ" ಎಂಬ ಸಂದೇಶ ಬಂತು. ಕೊನೆಗೂ ನನ್ನ ತಪ್ಪು ಅಲ್ಪ ಸ್ವಲ್ಪವಾದರೂ ಸರಿದಾರಿ ಹಿಡಿಯಿತು!

Sunday, 9 December 2012

ಸ್ತಬ್ದ ಭಾವಗಳು...

1.
ಮುಂಜಾನೆ ಚಳಿಗದುರಿ ಮೌನವಾಗಿ
ಮಲಗಿದೆ ರಸ್ತೆ
ಪೇಪರ್ ಮಾರುತ್ತಿದ್ದ ಹುಡುಗ
ಹಂಚಿದ್ದಾನೆ ತನ್ನ ವ್ಯಥೆ!

2.
ಮೈಕೊರೆವ ಚಳಿಗೆ ಹರಿದ ಕಂಬಳಿ
ಎಳೆದುಕೊಂಡಿತು ಅಜ್ಜ
ಮನಸ್ಸು ಮುದುಡಿದೆ, ಹೇಳಲು
ಪದಗಳಿಲ್ಲ, ನಡುಗುವ ಸಜ

3.
ಆ ಏಕಮುಖ ಸಂಚಾರದ ದಾರಿಯಲ್ಲಿ
ಮಗುವಿನೊಂದಿಗೆ ತಾಯಿ
ಮುಂದೆ ಹೋದವಳು ಹಿಂದೆ ಬರಳು
ಬೊಗಳಿದೆ ಬೀದಿನಾಯಿ

4.
ರಾತ್ರಿ ಒಂದೇ ಹಾಸಿಗೆಯಲ್ಲಿ ನಡೆದ
ಜಗಳಕ್ಕಿನ್ನೂ ಕುದಿವ ಮನ
ಮುಂಜಾನೆಯ ಚಳಿಗೂ ಕಿಚ್ಚಿಟ್ಟಿದೆ
ಮನೆಯೊಳಗೇ ಸ್ಮಶಾಣ

5.
ಬಸ್ ನಿಲ್ದಾಣದಲ್ಲಿ ಮಲಗಿದ್ದವನಿಗೆ
ಸೂರ್ಯೋದಯದ ತವಕ
ದೊಣ್ಣೆಯ ಏಟಿಗೂ ಏಳಲಿಲ್ಲ
ತೀರದ ಮೈ ಕೈ ನಡುಕ

6.
ಚಳಿ ಮುಗಿದು ಬಿಸಿಲು ನೆತ್ತಿ ಸುಟ್ಟರೂ
ಇವರುಗಳು ಮೌನಿಗಳು
ಹೇಳಿಕೊಳ್ಳಲು ಪದ ಭಂಡಾರವಿಲ್ಲ
ಕಣ್ಣಿಲ್ಲದ ಅಂಧ ಕವಿಗಳು

Tuesday, 4 December 2012

ಮೌನ ದ್ವಂದ್ವ

ಚೂರು ಕೆಲಸ ಮಾಡದಿದ್ದರೂ, ಚೀರಿ ಚೀರಿಯೇ ಎದೆ ಕಟ್ಟಿದಂತಾಗಿತ್ತು ಶಾಂತಮ್ಮಳಿಗೆ. ಮನೆಯನ್ನು ಅಚ್ಚುಕಟ್ಟುಗೊಳಿಸಲು ಮನೆಯಾಳುಗಳಿಗೆ ಹೇಳುವುದರಲ್ಲಿಯೂ ಇಷ್ಟು ಸುಸ್ತಾಗುತ್ತದೆ ಎಂದು ಆಕೆಗೆ ತಿಳಿದಿರಲಿಲ್ಲ. ಇವಳುಪಸ್ಥಿತಿ ಇರದಿದ್ದರೆ ಕೆಲಸದಾಳುಗಳು ಒಂದೆರಡು ಘಂಟೆ ಮೊದಲೇ ಮನೆ ಗುಡಿಸಿ, ತೊಳೆದು, ಅದು ಇದು ಜೋಡಿಸುವ ಕೆಲಸ ಮಾಡಿ ಮುಗಿಸಿಬಿಡುತ್ತಿದ್ದರು. ಅಷ್ಟಕ್ಕೆ ಶಾಂತಮ್ಮಳ ಗಂಡ ಲಕ್ಷ್ಮೀಶಭಟ್ಟರು ‘ಸಾಂಬಾರಿಗೆ ಉಪ್ಪೇ ಇಲ್ಲವಲ್ಲೇ’ ಎಂದು ಒಂದೇ ಸಮನೆ ಕೂಗಿಕೊಂಡರು. ‘ಈ ಅಡುಗೆಯವಳು ನಿಮ್ಮ ದೂರದ ಸಂಬಂಧಿ ಎಂದು ಇಟ್ಟುಕೊಂಡಿದ್ದೀರೋ ಹೇಗೆ? ಇಂಗು ತೆಂಗು ಎಲ್ಲವೂ ಇದ್ದರೂ ಊಟಕ್ಕೆ ರುಚಿ ಹತ್ತಿಸಲು ಬರದ ಮಂಗ, ಬೇರೆಯವಳನ್ನು ನೋಡಿಕೊಳ್ಳೋಣವೆಂದರೂ ನೀವು ತುಟಿ ಬಿಚ್ಚುವುದಿಲ್ಲ’ವೆಂದು ಶಾಂತಮ್ಮ ರೇಗಿಕೊಂಡಳು.

ಶಾಂತಮ್ಮಳ ಮೊದಲ ಮಗಳಾದ ಕಾವ್ಯಳನ್ನು ನೋಡಿ ಸಂಬಂಧ ಗೊತ್ತು ಮಾಡಿಕೊಂಡು ಹೋಗಲು ಇಂದು ದೂರದ ಮಂಗಳೂರಿನಿಂದ ಹುಡುಗನ ಮನೆಯವರು ಬರುವುದರಲ್ಲಿದ್ದರು. ಹುಡುಗನ ಹೆಸರು ಲಂಬೋಧರ. ಹುಡುಗನ ಮನೆಯವರು ಆ ಮಂಗಳೂರಿನಲ್ಲಿಯೇ ಅತಿ ಹೆಚ್ಚು ಸಂಭಾವಿತರಲ್ಲದೇ ಅಪಾರಮಟ್ಟದ ಆಸ್ತಿಪಾಸ್ತಿ ಹೊಂದಿರುವವರು. ಸಾವಿರಾರು ಎಕರೆ ಜಮೀನಲ್ಲದೇ, ಮಂಗಳೂರಿನಲ್ಲಿ ಹತ್ತಿಪ್ಪತ್ತು ಕಾಂಪ್ಲೆಕ್ಸ್ ಗಳನ್ನು ಕಟ್ಟಿಸಿಕೊಳ್ಳುವುದಲ್ಲದೇ ಒಂದಷ್ಟು ಹೋಟೆಲ್ ನಡೆಸುತ್ತಿದ್ದರು. ತಿಂಗಳಿಗೆ ಕೋಟಿ ಕೋಟಿ ಲಾಭ ಗಳಿಸುವ ಜನ, ಜೊತೆಗೆ ರಾಜಕೀಯ ಕ್ಷೇತ್ರದಲ್ಲಿಯೂ ಅಷ್ಟೇ ಹೆಸರು ಮಾಡಿ, ಮನೆಮಂದಿಯೆಲ್ಲಾ ಒಮ್ಮೊಮ್ಮೆ ಸ್ಥಳೀಯ ಶಾಸಕರಾಗಿದ್ದರು. ಲಂಭೋದರನ ತಂದೆ ವೆಂಕಟೇಶಭಟ್ಟರ ಕುಟುಂಬವೆಂದರೆ ಮಂಗಳೂರಿನಲ್ಲಿ ಏನೋ ವಿಶಿಷ್ಟವಾದ ಗತ್ತು-ಗಾಂಭೀರ್ಯವಿದೆ. ಅವರಿಂದ ಋಣ ತಿಂದ ಅನೇಕ ಹಳ್ಳಿಗಳಿವೆ, ಬಡ ಜನರು ತಮ್ಮ ಹೊಟ್ಟೆ ಹೊರೆದಿದ್ದಾರೆ. ಹತ್ತಿಪ್ಪತ್ತು ತಲೆಮಾರು ಕುಳಿತು ಉಣ್ಣುವಷ್ಟು ಆಸ್ತಿ ಮಾಡಿದವರೊಂದಿಗೆ ಕೆಲವು ಪುರಾವೆಯಿಲ್ಲದ ಊಹಾಪೋಹ ಮಾತುಗಳೂ ಅಂಟಿಕೊಂಡಿರುತ್ತವೆ ಎಂಬುದು ವಿಧಿಲಿಖಿತವೇನೋ? ಹಾಗೆಯೇ, ಈತನ ಬಳಿ ಇರುವ ಸಾವಿರಾರು ಎಕರೆ ಅಡಿಕೆ, ತೆಂಗಿನ ತೋಟಗಳೆಲ್ಲಾ ಇವನ ತಾತ ಬಡಬಗ್ಗರಿಂದ ಕಿತ್ತುಕೊಂಡಿದ್ದು ಎಂಬ ಅಪವಾದವೂ ಇದೆ. ಮಂಗಳೂರಿನ ದಕ್ಷಿಣದಂಚಿನಲ್ಲಿರುವ ಹತ್ತಾರು ಎಕರೆಯ ಅವನ ಮನೆ ಮೈದಾನವೆಲ್ಲಾ ಒಬ್ಬ ಬಡವನಿಗೆ ಸೇರಬೇಕು ಎಂಬ ವ್ಯಾಜ್ಯ ಇನ್ನೂ ಕೋರ್ಟಿನಲ್ಲಿ ರೆಕ್ಕೆ ಮುರಿದು ಬಿದ್ದಿದೆ. ದಾವೆ ಹೂಡಿದವರಿಗೆ ತಮ್ಮ ರಾಜಕೀಯ ಶಕ್ತಿ ಬಳಸಿಕೊಂಡು ಒಂದಷ್ಟು ಹಿಂಸೆಯೂ ಕೊಟ್ಟಾಗಿದೆ. ವೆಂಕಟೇಶಭಟ್ಟರ ಇಬ್ಬರು ಮಕ್ಕಳಲ್ಲಿ ಮೊದಲನೆಯವ ದಾಮೋಧರ. ಹೆಚ್ಚು ಓದಿಕೊಳ್ಳದಿರುವ ಕಾರಣ ಅಪ್ಪನ ಆಸ್ತಿ ಮತ್ತು ಉದ್ಯಮಗಳ ಹಣ ನಿರ್ವಹಣೆ ಮಾಡುವ ದೊಡ್ಡ ಹೊಣೆಗಾರಿಕೆ ಅವನ ಮೇಲಿದೆ. ಮಾಂಸ ಕಂಡರೆ ಒಮ್ಮೆಲೆ ಎಗರುವ ನಾಯಿಗಳಂತೆ ಇವನ ಸುತ್ತ ಸದಾ ಗೆಳೆಯರ ದಂಡೇ ಇರುತ್ತದೆ. ಅವನು ಹಲ್ಲುಕಿಸಿದು ಒದರುವ ನಗು ತರಿಸದ ಜಾಳು ಜಾಳು ಮಾತಿಗೂ ಎಲ್ಲರೂ ಕಿಸಕ್ಕನೇ ಜೋರಾಗಿ ನಕ್ಕುಬಿಡುತ್ತಾರೆ. ಎರಡನೆಯ ಮಗ ಲಂಬೋಧರ ಅಮೇರಿಕಾದಲ್ಲಿ ಓದಿ ಬಂದವನು, ಪ್ರತಿಷ್ಠಿತ ಕಂಪನಿಯೊಂದರಲ್ಲಿ ಲಕ್ಷಾಂತರ ರೂಪಾಯಿ ಸಂಬಳಕ್ಕೆ ನಿಂತಿರುವವನು. ಅವನು ದುಡಿದ ದುಡ್ಡಿನಲ್ಲಿ ಒಂದು ರೂಪಾಯಿಯೂ ಮನೆಗೆ ತಲುಪಿಲ್ಲ, ಬೇಕಾಗಿಯೂ ಇಲ್ಲ. ತನ್ನ ಸಂಬಳದಲ್ಲಿ ಬಟ್ಟೆ ಬದಲಿಸಿದಂತೆ ತಿಂಗಳಿಗೊಂದು ದುಬಾರಿ ಬೈಕ್ ಗಳನ್ನು ಕೊಂಡುಕೊಳ್ಳುತ್ತಾನೆ. ಹೊಸ ಮಾದರಿ ಕಾರ್ ಗಳು ಮಾರ್ಕೆಟ್ ಒಳಗಡೆ ಬಂದರೆ ಮೊದಲು ಕೊಂಡುಕೊಳ್ಳಲು ಹವಣಿಸುವ ಹುಡುಗ. ಇಷ್ಟೆಲ್ಲಾ ಶೋಕಿ ಇರುವವನಿಗೆ ವೇಶ್ಯೆಯರ ಹುಚ್ಚಿರುವುದಿಲ್ಲವೇ? ವಾರಕ್ಕೊಬ್ಬಳು ಅವನ ಮಗ್ಗುಲಲ್ಲಿರಬೇಕೆಂಬುದು ಅವನ ಗೆಳೆಯರ ಗುಸು ಗುಸು ಅಂಬೋಣ. ಇಂದಿನ ಜನಗಳಿಗೆ ಹಣವಿದ್ದರೆ ಸಾಕು ಗುಣ ಮೇಲ್ಮಟ್ಟದಂತೆ ಕಾಣುತ್ತದೆ ಎಂಬುದು ಜನಜನಿತ. ಇಷ್ಟೆಲ್ಲಾ ವಿಚಾರಗಳು ಸಾರ್ವಜನಿಕವಾಗಿ ಬೂದಿಯೊಳಗಿನ ಕೆಂಡದಂತಿದ್ದರೂ ಲಂಬೋಧರನಿಗೆ ಹೆಣ್ಣು ಕೊಡಲು ಅನೇಕ ಸಂಬಂಧಿಗಳು ದುಂಬಾಲು ಬೀಳುತ್ತಿದ್ದರು. ನಾಲ್ಕಾಣೆ ಕೊಟ್ಟು ತಂದ ಚಾಕೋಲೇಟ್ ಸಂಪೂರ್ಣವಾಗಿ ನಮ್ಮ ಹಕ್ಕಿನಲ್ಲಿರುತ್ತದೆ, ಇನ್ನೂ ನಾವು ಹುಟ್ಟಿಸಿದ ಮಕ್ಕಳು ನಾವು ಗುರುತು ಮಾಡಿದ ಹುಡುಗನನ್ನು ಮರುಮಾತನಾಡದೆ ಮದುವೆ ಮಾಡಿಕೊಳ್ಳಬೇಕೆಂಬುದು ಅವರೆಲ್ಲರುವಾಚ. ಅವನು ತೀರಿಕೊಂಡರೂ, ವಿಚ್ಛೇದನ ನೀಡಿದರೂ ಕರಗದಷ್ಟು ಆಸ್ತಿ ದೊರಕುವುದೆಂಬ ಅತಿಯಾಸೆ ಕೆಲವರದು.

ಶಾಂತಮ್ಮ ಮತ್ತು ಲಕ್ಷ್ಮೀಶಭಟ್ಟರು ಎಲ್ಲವನ್ನೂ ಆಣಿಗೊಳಿಸಿದವರಂತೆ ಕಂಡು ಬಂದು ಸ್ವಲ್ಪ ಸಮಾಧಾನಗೊಂಡರು. ಮಧುಮಗಳಾಗಬೇಕಾಗಿರುವ ಕಾವ್ಯಳನ್ನೇ ಅವರು ಮರೆತುಬಿಟ್ಟಿದ್ದರು. ‘ಹಾ! ಎಂಥ ಜನ ನಾವು’ ಎಂದುಕೊಂಡು ಕಾವ್ಯಳ ಕೋಣೆಗೆ ಅವಸವಸರವಾಗಿ ಹೋದರು. ಶಾಂತಮ್ಮಳ ಎರಡನೆ ಮಗಳಾದ ಕೀರ್ತಿ ಅಕ್ಕನಿಗೆ ಶೃಂಗಾರ ಮಾಡುತ್ತಿದ್ದಳು. ಬಾಯಿಯಲ್ಲಿ ತಲೆಪಿನ್ನು ಕಚ್ಚಿಕೊಂಡು ತಲೆ ಕೂದಲನ್ನು ಬಾಚಣಿಗೆಯಿಂದ ಎಳೆದೆಳೆದು ಬಾಚುತ್ತಿದ್ದಳು. ಒಮ್ಮೆ ಕಾವ್ಯಳನ್ನು ಹಿಂತಿರುಗಿಸಿ ಮುಖ ಮೇಲಕ್ಕೆತ್ತಿದ ಶಾಂತಮ್ಮ ಒಮ್ಮೆಲೆ ದಿಗ್ಭ್ರಾಂತರಾದರು. ಹಳೆಯ ಗೋಡೆಯ ಮೇಲೆ ಸುರಿದ ಮಳೆ ನೀರು ರೈಲುಕಂಬಿ ಆಕಾರ ಮೂಡಿಸುವಂತೆ ಇವಳ ಕೆನ್ನೆಯ ಮೇಲೆಯೂ ನದಿ ಹರಿದುಹೋದ ಗುರುತಿದೆ. ಮೇಕಪ್ ಗಿಂತ ಕಣ್ಣೀರೇ ಹೆಚ್ಚಾಗಿತ್ತು! ಕಣ್ಣಲ್ಲಿ ಮತ್ತೂ ನೀರು ತುಂಬಿಕೊಂಡಿತು. ಮುಖದಲ್ಲಿ ಕಳೆಯಿಲ್ಲ. ಕಿವಿಗೆ ತೊಡಿಸಿದ್ದ ಬೆಂಡೋಲೆ ತೂಕ ಹೆಚ್ಚಾಗಿ ತೂಗಿದಂತೆ ಕಂಡುಬಂತು, ಎದೆ ಮೇಲೊದಿಸಿದ್ದ ಚಿನ್ನದ ನೆಕ್ಲೇಸು, ಸರಗಳು ಯಾಕೋ ಹೊಳೆದಂತೆ ಕಾಣಿಸಲಿಲ್ಲ. ಈಗ ಕಾವ್ಯಳಿಗೆ ವಯಸ್ಸು ಇಪ್ಪತ್ತು ವರ್ಷ, ಇಷ್ಟು ವರ್ಷ ಲಾಲಿಸಿ ಪಾಲಿಸಿದ್ದ ತಾಯಿಗೆ ಆಕೆ ಈ ರೀತಿಯಾಗಿ ಕಂಡಬಂದದ್ದು ನೆನಪಿಲ್ಲ.

‘ಯಾಕೆ ಕಂದಾ? ಏನಾಯಿತು, ಈ ಸಂಬಂಧ ಇಷ್ಟವಿಲ್ಲವೇ? ಬೇರೆ ಯಾರನ್ನಾದರೂ ಇಷ್ಟಪಟ್ಟಿರುವೆಯಾ? ಯಾವುದೋ ಜನ್ಮದಲ್ಲಿ ನಾವು ಮಾಡಿದ್ದ ಪುಣ್ಯದಿಂದ ಇಂದು ಈ ಸಂಬಂಧ ದೊರಕಿದೆ, ಅವರು ಅಷ್ಟು ಶ್ರೀಮಂತಿಕೆಯಲ್ಲಿದ್ದರೂ ಸೊಸೆಯಾಗಿ ಬಡವರ ಮನೆಯ ಹುಡುಗಿಯೇ ಬೇಕೆಂದು ಹಂಬಲಿಸಿ ಬರುವವರಿದ್ದಾರೆ, ಜೊತೆಗೆ ನಿನ್ನ ಸೌಂದರ್ಯವೂ ಅವರಿಗೆ ಇಷ್ಟವಾಗಿದೆ. ನಮ್ಮಂತಹ ಜನ ಅವರಿಗೆ ಸಾವಿರ ಸಾವಿರ ಇದ್ದಾರೆ, ನಮ್ಮ ಅದೃಷ್ಟಕ್ಕೆ ನಮಗೆ ಒಬ್ಬರಾದರೂ ಅಂತಹವರು ದೊರಕಿದ್ದಾರೆ, ನಿನ್ನ ಜೀವನದಲ್ಲಿ ಸುಖತುಂಬಿ ಬರುತ್ತದೆ. ಖುಷಿ ಪಡುವ ವಿಚಾರಕ್ಕೆ ಅಳುವುದಾದರೂ ಯಾಕೆ?’ ಎಂದು ಕೇಳಿದರು.
ಕಾವ್ಯಳಿಗೆ ಅಳು ಜೋರಾಯಿತು, ಕಣ್ಗಳು ಮಳೆ ಹನಿಗೆ ಸಿಲುಕಿದ ಮೈಬಟ್ಟೆಯಂತೆ ಮತ್ತೂ ಒದ್ದೆಯಾದವು. ಅವಳನ್ನು ಸುತ್ತಿಕೊಂಡ ಈ ವ್ಯವಸ್ಥೆಗೆ, ನಮ್ಮನ್ನು ಕಾಯುತ್ತಿರುವ ದೇವರಿಗೆ, ಅರ್ಥ ಮಾಡಿಕೊಳ್ಳದ ಈ ಹಿರಿಯರಿಗೆ, ಎಲ್ಲರಿಗೂ ತಿರಸ್ಕಾರ ಕೂಗುವಂತಹ ನೋವು ಮುಖದಲ್ಲಿತ್ತು. ಜೊತೆಗೆ ನೀರವತೆ ತುಂಬಿದ ಅಳುವಿತ್ತು. ಸ್ಥಿರ ದೃಷ್ಟಿಯಿದ್ದರೂ ಮನಸ್ಸನ್ನು ಎಲ್ಲೋ ತೇಲಿಸಿ ‘ಏನೂ ಇಲ್ಲವೆಂಬಂತೆ’ ತಲೆಯಾಡಿಸಿದಳು. ಅವಳ ಮೌನ ಶಾಂತಮ್ಮಳನ್ನು ಕೊಂಚ ಅಲುಗಾಡಿಸಿತು.

ಕಾವ್ಯ, ನಿಜಕ್ಕೂ ಸುಂದರ ಕವಿತೆಯಷ್ಟೇ ಮೃದು ಸ್ವಭಾವದ ಹೆಣ್ಣುಮಗಳು. ಕೈತೊಳೆದು ಮಟ್ಟಬೇಕಾದಂತಹ ಸೌಂದರ್ಯವತಿ. ಅವಳಿಗೆ ಬುದ್ಧಿ ಚಿಗುರೊಡೆದಾಗಿಂದಲೂ ಮಾತಿಗಿಂತ ಹೆಚ್ಚು ಮೌನವನ್ನು ಪ್ರೀತಿಸಿದಾಕೆ. ತಲೆಯೆತ್ತಿ ಮಾತನಾಡದಷ್ಟು ಸಂಕೋಚ ಸ್ವಭಾವದಳು, ಹುಡುಗ ಜಾತಿಯೆಂದರೆ ಕೊಂಚ ಭಯ ಪಡತ್ತಿದ್ದವಳಾದರೂ ಯಾರಾದರೂ ಹುಡುಗರು ಗೌರವಪೂರ್ವಕವಾಗಿ ಮಾತನಾಡಿಸಿದರೆ ಮನಸ್ಸಿಟ್ಟು ಉತ್ತರ ಕೊಡುತ್ತಿದ್ದವಳು. ಪ್ರಶ್ನೆಗೆ ಕೇವಲ ಉತ್ತರವಷ್ಟೆ. ಹಲ ಸಮಯದಲ್ಲಿ ಅದು ‘ಹೂ, ಊಹೂಂ’ ನಲ್ಲಿ ಮುಗಿದುಹೋಗುತ್ತಿತ್ತು. ಅಹಂಕಾರ ಸ್ವಭಾವವಿಲ್ಲದ ಈ ಮೃದು ಮನಸ್ಸನ್ನು ಎಲ್ಲಾ ಗೆಳೆಯರೂ ಗೌರವಾಧಾರದಲ್ಲಿ ಇಷ್ಟಪಟ್ಟರೂ ಈಕೆಗೆ ಸ್ನೇಹವೆಂದರೂ ಒಂದು ರೀತಿಯ ಅಲರ್ಜಿ. ಆದರೆ ಶಾಲಾ ಕಾಲೇಜು ಪರೀಕ್ಷೆಗಳಲ್ಲಿ ಇವಳೇ ಪ್ರಥಮ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರತಿ ವರ್ಷ ಬಾಚಿಕೊಂಡ ಅನೇಕ ಬಹುಮಾನಗಳನ್ನು ಶಾಂತಮ್ಮ ಷೋಕೇಸಿನಲ್ಲಿ ಸ್ವಲ್ಪ ಅಹಮ್ಮಿಂದಲೇ ಜೋಡಿಸಿಟ್ಟಿದ್ದಾರೆ. ಮೈನೆರೆದು ದೊಡ್ಡವಳಾದ ಕಾಲದಿಂದಲೂ ಆಕೆ ಶಾಲಾ, ಕಾಲೇಜು ಮುಗಿಸಿ ಮನೆಯವರೆವಿಗೂ ತಲೆ ಬಗ್ಗಿಸಿ ನಡೆದುಕೊಂಡೇ ಬಂದವಳು. ಇದೇ ಸ್ವಭಾವದ ತಂಗಿ ಕೀರ್ತಿ ಮತ್ತು ಕಾವ್ಯಳಿಗೆ ಆ ಊರಿನ ಬಡಾವಣೆಯಲ್ಲಿ ವಿಶೇಷ ಗೌರವ ಮಮತೆಯಿತ್ತು. ನನ್ನ ಮಕ್ಕಳು ಅಪರಂಜಿ ಕಣ್ರೋ ಎಂದು ಸಾರುವುದು ಕುಡುಕ ಅಪ್ಪನ ಪ್ರತಿದಿನದ ಹವ್ಯಾಸ.

ಮೊನ್ನೆ ಮೊನ್ನೆ ‘ಒಂದು ಸಂಬಂಧ ನಿನ್ನನು ನೋಡಲು ಮುಂದಿನ ವಾರ ಬರುತ್ತಿದೆ ಮಗಳೇ’ ಎಂದು ಶಾಂತಮ್ಮ ಹೇಳಿದಾಗ ಕಾವ್ಯ ಬೆಚ್ಚಿ ಕುಸಿದಿದ್ದಳು. ತನ್ನ ಸ್ವಭಾವಕ್ಕೆ ಹೋಲುವ ಗಂಗಾಧರ ಎಂಬುವ ಹುಡುಗನ ಪ್ರೇಮಪಾಶಕ್ಕೆ ಕಾವ್ಯ ಒಗ್ಗಿಕೊಂಡಿದ್ದಳು. ಇಷ್ಟು ಒಳ್ಳೆಯತನದ, ಮಾತನ್ನು ಇಷ್ಟ ಪಡದ ಹುಡುಗಿಯೊಬ್ಬಳು ಒಂದು ಹುಡುಗನನ್ನು ಆರಿಸಿಕೊಂಡಿದ್ದಾಳೆಂದರೆ ಅಲ್ಲಿ ಅಷ್ಟಾಗಿ ಮೋಸವಿರುವುದಿಲ್ಲ. ಆತನ ರೂಪಕ್ಕಿಂತ ಸನ್ಮಾರ್ಗವೇ ಈಕೆಗೆ ಇಷ್ಟವಾಗಿತ್ತು. ಕುಡುಕ ಅಪ್ಪ ಪ್ರತಿದಿನ ಅಮ್ಮನನ್ನು ಬಡಿದು, ಪಡಸಾಲೆಯಲ್ಲಿ ಕುಳಿತು ಊರಿಗೇ ಕೇಳಿಸುವಂತೆ ಅಶ್ಲೀಲ ಪದಗಳನ್ನುಪಯೋಗಿಸಿ ಬೊಗಳುವುದು, ಮನೆಯೊಳಗೆ ಬಾರದೆ ಸತಾಯಿಸುವುದನ್ನೆಲ್ಲ ಕಂಡಿದ್ದ ಕಾವ್ಯಳಿಗೆ ಯಾವುದೇ ದುಶ್ಚಟವಿಲ್ಲದ, ದುಶ್ಚಟವನ್ನು ತೀವ್ರವಾಗಿ ವೀರೋಧಿಸುತ್ತಿದ್ದ ಗಂಗಾಧರ ಹತ್ತಿರವಾಗಿಬಿಟ್ಟ. ಸಂಜೆಯಾದರೆ ಮತ್ತಿನಲ್ಲಿ ಮೈಮರೆಯುವ ಅಪ್ಪನ ಭಯ ಆಕೆಗೆ ಚೂರು ಇರಲಿಲ್ಲ. ತಿನ್ನಲು ಉಡಲು ಮನೆಗೆ ತಂದು ಸುರಿದುಬಿಟ್ಟರೆ ಆತನ ಕೆಲಸ ಮುಗಿಯಿತಷ್ಟೇ, ಮತ್ತಾವುದೇ ವಿಚಾರಕ್ಕೂ ತಲೆ ಕೆಡಿಸಿಕೊಂಡವನಲ್ಲ. ಅಮ್ಮನನ್ನು ಒಪ್ಪಿಸಿಕೊಂಡರೆ ಮುಗಿಯಿತು ಎಂದುಕೊಂಡಿದ್ದಳಷ್ಟೆ. ಜೊತೆಗೆ ಹುಟ್ಟಿದ ಕಾಲದಿಂದಲೂ ಕೇವಲ ಮಕ್ಕಳ ಸುಖವನ್ನು ಬಯಸಿದ ಅಮ್ಮ ತನ್ನ ಮುಂದಿನ ಸುಖಕ್ಕೆ ಅಡ್ಡಿಯಾಗಳೆಂಬ ಗಾಢನಂಬಿಕೆ ಕಾವ್ಯಳಲ್ಲಿತ್ತು. ಅಂದು ಸಂಜೆ, ಧೈರ್ಯಮಾಡಿ ಅಮ್ಮನ ಬಳಿಗೆ ಹೋಗುವ ನಿರ್ಧಾರ ಕೈಗೊಂಡಳು. ಎಲ್ಲವನ್ನೂ ಹೇಳಿ ಒಮ್ಮೆ ಅತ್ತುಬಿಟ್ಟರೆ ಅಮ್ಮ ನಿರರ್ಗಳಳಾಗುತ್ತಾಳೆಂಬ ದೃಢ ನಂಬಿಕೆ ಕಾವ್ಯಳದು. ಶಾಂತಮ್ಮ ತಮ್ಮ ಮಕ್ಕಳಿಗೆ ಅಷ್ಟೇ ಸ್ವಾತಂತ್ರ್ಯ ನೀಡಿ ತುಂಬಾ ಆತ್ಮೀಯತೆಯಿಂದ ಬೆಳೆಸಿದ್ದರು. ಎಂದಿಗೂ ಕೈಯೆತ್ತಿ ಒಡೆದವರಲ್ಲ, ಬಾಯಿ ತಪ್ಪಿಯೂ ಬೈದವರಲ್ಲ. ಯಾಕೋ ಕೈಕಾಲುಗಳು ಅದುರತೊಡಗಿದವು. ‘ಆಗುವುದಾಗಲಿ, ಧೈರ್ಯವಾಗಿ ಹೇಳಿಬಿಡು’ ಎಂಬ ಗಂಗಾಧರ್ ನ ಮಾತು ನೆನೆಪಿಸಿಕೊಂಡು, ಒಮ್ಮೆ ಉಸಿರನ್ನೆಳೆದು ನಿಧಾನವಾಗಿ ಹೊರ ಹರಿಸಿ ಅಮ್ಮನ ಬಳಿ ಹೊರಟಳು.

‘ಅಮ್ಮಾ, ನಾನು ನಿನ್ನಲ್ಲಿ ಒಂದು ಪ್ರಶ್ನೆ ಕೇಳುತ್ತೇನೆ, ಉತ್ತರಿಸುವೆಯಲ್ಲವೇ?’
‘ಕೇಳು ಮಗಳೇ’
‘ನಿನ್ನ ಮಕ್ಕಳ ಖುಷಿಯಷ್ಟೇ ನಿನಗೆ ಮುಖ್ಯವಲ್ಲವೇ? ಮದುವೆಯ ನಂತರ ಮಕ್ಕಳು ಗಂಡನೊಂದಿಗೆ ಅಮೃತವನ್ನೋ ಅಂಬಲಿಯನ್ನೋ ಕುಡಿದು ಖುಷಿಯಾಗಿರುವುದನ್ನ ನೀನು ಇಷ್ಟ ಪಡುತ್ತೀಯಲ್ಲವೇ?
‘ಹೌದು ಮಗಳೆ, ಮತ್ತಿನ್ನೇನು? ನನ್ನೆರಡು ಮಕ್ಕಳೇ ನನ್ನ ಕಣ್ಣುಗಳು’
‘ಹಾಗಾದರೆ, ನಾನು ಒಬ್ಬ ಅನ್ಯಜಾತಿ ಹುಡುಗನನ್ನು ಪ್ರೀತಿಸುತ್ತಿದ್ದೇನೆ, ಅವನನ್ನು ಬಿಟ್ಟು ಬದುಕಲು ಸಾಧ್ಯವಾಗುತ್ತಿಲ್ಲ, ಅವನ ಜಾಗದಲ್ಲಿ ಬೇರೆ ಯಾರನ್ನೂ ಊಹಿಸಿಕೊಳ್ಳುವ ಪರಿಸ್ಥಿತಿಯಲ್ಲಿ ನಾನಿಲ್ಲ, ನೀನು ಒಪ್ಪಿಕೊಳ್ಳಬೇಕು’
ಶಾಂತಮ್ಮ ಬೆಚ್ಚಿಬಿದ್ದರು, ಹೂ ಪೋಣಿಸುತ್ತಿದ್ದ ನೂಲುಂಡೆಯನ್ನು ಎಸೆದುಬಿಟ್ಟರು.
‘ಏನಿದು ಮಗಳೇ, ಈ ವಿಚಾರ ನಿಮ್ಮ ಅಪ್ಪನ ಕಡೆಯವರಿಗೆ ತಿಳಿದರೆ ಸುಮ್ಮನಿರುವರೇ? ಅವಳು ಓದಿದ್ದು ಸಾಕು ಮನೆಯಲ್ಲಿರಿಸಿ ಎಂದು ಹೇಳುವುದಲ್ಲದೇ, ಜೈಲಿಗೆ ಹೋಗುವುದನ್ನೂ ಲೆಕ್ಕಿಸದೆ, ಆ ಹುಡುಗನ ಜೀವ ತೆಗೆಯುವುದಲ್ಲದೇ, ನಿನಗೆ ಇನ್ನೊಂದು ವಾರದಲ್ಲಿಯೇ ಮದುವೆ ಮಾಡಿಯಾರು’
‘ನೀವು ಯಾರಿಗೇ ಮದುವೆ ಮಾಡಿದರೂ ನನ್ನ ಹೆಣ ಬೀಳುತ್ತದೆ, ಆತ ಕೀಳುಜಾತಿಯೇನಲ್ಲ, ನಮ್ಮ ಜಾತಿಮಟ್ಟಕ್ಕಿರುವವನು, ಹೆಂಡತಿ ಮಕ್ಕಳನ್ನು ಹಸಿವಿಗೆ ಬೀಳಿಸದಷ್ಟು ದುಡಿಯುತ್ತಾನೆ, ಅಪ್ಪನನ್ನು ಅವನೇ ಒಪ್ಪಿಸುತ್ತೇನೆ ಎಂದು ಮಾತು ಕೊಟ್ಟಿದ್ದಾನೆ, ನೀನು ಸುಮ್ಮನಿರು’

ಶಾಂತಮ್ಮ ಬೆವರತೊಡಗಿದರು. ‘ಪ್ರೀತಿಸಿ ಮದುವೆಯಾದವರು ಹೆಚ್ಚು ದಿನ ಒಟ್ಟಿಗೆ ಬಾಳುವುದಿಲ್ಲ, ಅವರ ಮಕ್ಕಳಿಗೆ ಸಂಬಂಧ ಗೊತ್ತು ಮಾಡಿಕೊಳ್ಳುವುದಷ್ಟು ಸುಲಭವಲ್ಲ, ಯಾವುದೇ ಕಾರ್ಯಕ್ರಮ ಪುನಸ್ಕಾರಗಳಿದ್ದರೆ ಸಂಪ್ರದಾಯದ ವಿಚಾರ ಬಂದಾಗ ಅಂತವರನ್ನು ಒಟ್ಟಿಗೆ ಸೇರಿಸುವುದಿಲ್ಲ, ನಾವೇ ನೋಡುವ ಸಂಬಂಧಿಕ ಹುಡುಗರು ಸುಸಂಸ್ಕೃತರು ಮತ್ತು ಒಂದೇ ಜಾತಿಯವನಾಗಿರುವುದರಿಂದ ಪೂರ್ವಾಪರ ತಿಳಿದಿರುತ್ತದೆ’ ಎಂದರು.
‘ಲವ್ ಮ್ಯಾರೇಜನ್ನ ವಿರೋಧಿಸುವ ಕಾಲ ಮುಗಿಯಿತಮ್ಮ, ಯಾರೇ ಪ್ರೀತಿ ಮಾಡಲಿ, ಎಲ್ಲರ ರಕ್ತದ ಬಣ್ಣ ಕೆಂಪಲ್ಲವೇ? ಒಂದೊಂದು ಜಾತಿ ಜನಕ್ಕೊಂದೊಂದು ಬಣ್ಣದ ರಕ್ತವಿದೆಯೇ? ಆತನನ್ನು ಬಿಟ್ಟು ಬೇರೆಯವರ ಜೊತೆ ಬಾಳಿದರೆ ದೆವ್ವದ ಮನೆಯಲ್ಲಿ ಬಾಳಿದಂತೆ, ನಾನು ಬದುಕುವುದಿಲ್ಲವಷ್ಟೆ’
ಶಾಂತಮ್ಮನ ಕೈಕಾಲುಗಳು ನಡುಗತೊಡಗಿದವು. ‘ಬೇಡ ಮಗಳೇ, ನಿನ್ನ ವಯಸ್ಸಿನವರಿಗೆ ಅದರ ಅರಿವಾಗುವುದಿಲ್ಲ, ಆತನನ್ನು ಕೂಡಲೇ ಮರೆತುಬಿಡು, ನನ್ನ ಮುಂದೆಯೇ ಫೋನಾಯಿಸಿ ಯಾರನ್ನಾದರೂ ಮದುವೆಯಾಗಿ ಸುಖವಾಗಿರು ಎಂದು ಹೇಳಿಬಿಡು, ನಾನು, ನಿನ್ನಪ್ಪ ಬೀದಿಯಲ್ಲಿ ತಲೆಯೆತ್ತಿ ನಡೆಯಲಾಗುವುದೇ? ಮದುವೆ ಸಮಾರಂಭಗಳಿಗೆ ಹೋದಾಗ ಜನಗಳ ಬಳಿ ಮುಖಕೊಟ್ಟು ಮಾತನಾಡುವುದಾದರೂ ಹೇಗೆ, ಮಗಳು ಯಾರನ್ನು ಮದುವೆಯಾದಳು ಎಂದರೆ ಹೇಳುವುದಾದರೂ ಏನು? ಬಾಯಿ ಒದರಿದಂತೆ ನಿನ್ನ ಬಗ್ಗೆ ಯಾರಾದರೂ ಮಾತನಾಡಿಕೊಂಡರೆ ನಮ್ಮಿಂದ ಬದುಕುಳಿಯಲು ಸಾಧ್ಯವಿಲ್ಲ’ ಎಂದ ಶಾಂತಮ್ಮ ನಡುಗುವ ಕೈಗಳಿಂದ ಮೊಬೈಲ್ ಹುಡುಕಿದರು.
‘ನಮ್ಮಂತೆ ಅವರೂ ಮಾಂಸ ತಿನ್ನದ ಜಾತಿ, ಆದುದರಿಂದ ನಡೆಯುತ್ತದೆ ಮಮ್ಮಿ, ನೀವುಗಳು ಹುಟ್ಟಿಸಿದ ಸಂಪ್ರದಾಯಗಳನ್ನು ನೆಲ ಬಗೆದು ಹೂತುಬಿಡಿ, ಮೊದಲಾಗಿ ಅದೇನು ಆಕಾಶದಿಂದ ಉದುರಿದ ನಿಜ ಮಳೆ ಹನಿಗಳಲ್ಲ’
‘ಮೊದಲು ನಿಮ್ಮಕ್ಕನ ನಿಶ್ಚಿತಾರ್ಥ ಮುಗಿಯಲಿ, ನಂತರ ನೋಡೋಣ’ ವೆಂದು ಆ ಕ್ಷಣದಾವೇಗದಿಂದ ತಪ್ಪಿಸಿಕೊಂಡರು ಶಾಂತಮ್ಮ. ಕೀರ್ತಿಗೆ ಮನದೊಳಗಿನ ಭಾರ ಹೊರಗೆ ಹಾಕಿ ಹಗುರಗೊಂಡಂತೆನಿಸಿದರೂ ಮುಂದೇನಾಗುವುದೋ ಏನೋ ಎಂದು ಮನಸ್ಸಿನಲ್ಲಿಯೇ ಚಡಪಡಿಸಿಕೊಂಡಳು !

ಸ್ವ-ಪ್ರೇಮ ವಿಚಾರವನ್ನು ಅಮ್ಮನಿಗೆ ಧೈರ್ಯ ಮಾಡಿ ಮುಟ್ಟಿಸಲು ಮುಂದಾಗುವ ಹೊತ್ತಿಗೆ ತಂಗಿ ಕೀರ್ತಿ ಮತ್ತು ಅಮ್ಮನ ಮಾತುಗಳನ್ನು ಕೇಳಿದ ಕಾವ್ಯ ಅಲ್ಲೇ ಕುಸಿದುಬಿಟ್ಟಳು. ಕೈಕಾಲುಗಳು ಮತ್ತೂ ನಡುಗ ತೊಡಗಿದವು. ‘ಒಂದೇ ಮಟ್ಟದ ಜಾತಿಯವನನ್ನೇ ಅಮ್ಮ ಒಪ್ಪಲಿಲ್ಲ, ಆದರೆ ನಾನು ಪ್ರೇಮಿಸಿರುವುದು ಈ ಪರಮ ನೀಚ ಸಮಾಜ ಕರೆದ ಕೀಳು ಮಟ್ಟದ ಜಾತಿಯ ಹುಡುಗನನ್ನು. ನೆರೆಮನೆಯ ಸಾವಿತ್ರಿ ಒಮ್ಮೆ ಆ ಜಾತಿಯವನೊಂದಿಗೆ ಮಾತನಾಡಿದ್ದು ಕಂಡ ಕೆಲವರು ಊರೆಲ್ಲೆಲ್ಲಾ ಮದುವೆಯೇ ಆಗಿಹೋಯಿತೆನ್ನುವಂತೆ ಗುಲ್ಲೆಬ್ಬಿಸಿದ್ದರು. ಆತನನ್ನು ಮದುವೆಯಾದರೆ ಈ ಊರೇ ನಮ್ಮ ಮೇಲೆ ಬೀಳಬಹುದು, ಅಪ್ಪ ಅಮ್ಮ ಜೀವ ಕಳೆದುಕೊಳ್ಳಬಹುದು. ಅಪ್ಪನ ಮದ್ಯಪಾನ ಮಿತಿ ಮೀರಬಹುದು. ಸಕ್ಕರೆ ಖಾಯಿಲೆ ಹೆಚ್ಚಾಗಿ ಮೂತ್ರಕೋಶಕ್ಕೆ ತೊಂದರೆಯಾಗುತ್ತಿರುವುದನ್ನು ತಡೆಗಟ್ಟಲು ನುಂಗುತ್ತಿರುವ ಮಾತ್ರೆಗಳನ್ನು ಬೀಸಾಡಿಬಿಡಬಹುದು. ಹಾಗಂತ ಗಂಗಾಧರ್ ನನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಜೊತೆಗೆ ಆತನೇನು ಸಮಾಜದ ಉನ್ನತಸ್ಥಾನದಲ್ಲಿರುವ ವ್ಯಕ್ತಿಯೂ ಅಲ್ಲ. ಸೆಲೆಬ್ರಿಟಿಗಳು ಧರ್ಮ ಜಾತಿಗಳನ್ನು ಮೀರಿದರೆ ದೊಡ್ಡ ಸುದ್ದಿಯಾಗುವುದಿಲ್ಲ, ಇಂತಹ ಸಲ್ಲದ ವಿಚಾರಗಳನ್ನು ಹುಟ್ಟುಹಾಕುವ ಪರಮನೀಚ ಜನಗಳು ಆ ಸಮಯದಲ್ಲಿ ತೆಪ್ಪಗಾಗುವುದು ಈ ದೇಶದ ಅದೃಷ್ಟವೋ ದುರಂತವೋ ತಿಳಿಯದು. ಆದರೆ, ಅಮ್ಮನಿಗೆ ಈ ವಿಚಾರ ಮುಟ್ಟಿಸಿ ನಿಶ್ಚಿತಾರ್ಥವನ್ನು ತಡೆಯುವುದಾದರೂ ಹೇಗೆ? ಗೊಂದಲಕ್ಕೆ ಬಿದ್ದಳು ಕಾವ್ಯ. ಮನಸ್ಸು ಅದುರತೊಡಗಿತು. ಅಷ್ಟಕ್ಕೆ ಅಲ್ಲಿಗೆ ಬಂದ ಅಮ್ಮನ ಮೊಗದಲ್ಲಿ ಗಾಬರಿ ಗೊಂದಲವಿತ್ತು. ಕಾವ್ಯಳ ಕಣ್ಣಲ್ಲಿ ಜಿನುಗಿದ ನೀರನ್ನು ಕಂಡು ಮತ್ತೂ ಗಾಬರಿಗೊಂಡ ಶಾಂತಮ್ಮ ‘ಏನಾಯಿತು ಕಂದ’ ಎಂದರು. ತುಟಿಬಿಚ್ಚದ ಕಾವ್ಯ ಏನೂ ಇಲ್ಲವೆಂಬಂತೆ ತಲೆಯಾಡಿಸಿದಳು. ಮುಖದಲ್ಲಿ ನಗು ಸತ್ತು ದುಃಖ ಉಮ್ಮಳಿಸಿಕೊಂಡಿತ್ತು.

ಅಪಘಾತದಂತೆ ಘಟಿಸಿದ ಈ ಘಟನೆಯಿಂದ ವಿಚಲಿತಳಾದ ಕಾವ್ಯ ಓಡೋಡಿ ಬಂದು ಹಾಸಿಗೆ ಮೇಲೆ ಬಿದ್ದುಕೊಂಡಳು. ಭಯ ಉಸಿರಾಟವನ್ನು ಬಿಗಿಗೊಳಿಸಿತ್ತು. ಕೂಡಲೇ ಗಂಗಾಧರನಿಗೆ ಫೋನಾಯಿಸಿ ಈ ಯಾವತ್ತೂ ವಿಚಾರಗಳನ್ನು ಮುಟ್ಟಿಸಿದೊಡನೆ ಆತನೂ ಬೆಚ್ಚಿಬಿದ್ದ. ತಂಗಿ ಇಷ್ಟಪಟ್ಟಿರುವ ನಿಮ್ಮ ಮಟ್ಟದ ಜಾತಿಯವನನ್ನೇ ಒಪ್ಪದವರು ನನ್ನನ್ನು ಒಪ್ಪುತ್ತಾರೆಯೇ ಎಂಬ ಗೊಂದಲ ಮುಂದಿಟ್ಟ. ನಾನೇ ಬಂದು ಮಾತನಾಡೋಣವೆಂದರೆ ನನ್ನದು ನಿಮ್ಮ ಮನೆ ಹೊಸ್ತಿಲು ದಾಟದ ಜಾತಿ, ನಿಮ್ಮವರ ಹೋಟೆಲ್ ಲೋಟಗಳನ್ನು ಮುಟ್ಟದ ಜನ ಎಂದು ಅಳಲು ಪ್ರಾರಂಭಿಸಿದವನು ‘ಏನೇ ಆಗಲಿ, ನಾಳೆಯೇ ನಿಮ್ಮ ಮನೆಗೆ ಬಂದು ನೇರವಾಗಿಯೇ ಮಾತನಾಡಿಬಿಡುತ್ತೇನೆ’ ಎಂದು ನಡುಗುತ್ತ ಹೇಳಿದ ಮಾತಿಗೆ ಕಾವ್ಯ ತಡೆಯಾದಳು. ‘ಅವಸರ ಬೇಡ, ಇಂದು ಸಂಜೆ ಅಮ್ಮನೊಡನೆ ನಾನೇ ಮಾತನಾಡುತ್ತೇನೆ’ ಎಂದು ಹೇಳಿದವಳೇ ಫೋನಿಟ್ಟಳು.

ಕಣ್ಮುಚ್ಚಿಕೊಂಡ ಕಾವ್ಯಳಿಗೆ ನಿದ್ದೆ ಕೂಡಿಬರಲಿಲ್ಲ. ತಂಗಿಯೂ ಪ್ರೇಮಪಾಶಕ್ಕೆ ಕತ್ತೊಡ್ಡಿರುವುದು, ಜೊತೆಗೆ ಅಮ್ಮ ಮತ್ತು ಅವಳ ನಡುವಿನ ಸಂಭಾಷಣೆ, ನಿನಗೆ ಬೇರೆ ಮದುವೆ ಮಾಡುವುದಲ್ಲದೇ, ಜೈಲಿನ ವಾಸ ಅನುಭವಿಸಿದರೂ ಸರಿಯೇ ಆತನನ್ನು ಕೊಲೆ ಮಾಡಿ ಬಿಡುತ್ತಾರೆ ಎಂಬ ಮಾತುಗಳು ಕಿವಿಯಲ್ಲಿ ಗುಯ್ ಗುಡುತ್ತಿತ್ತು. ‘ನೀನಿಲ್ಲದಿದ್ದರೆ ಕ್ಷಣಮಾತ್ರವೂ ನಾನು ಬದುಕಲೊಲ್ಲೆ, ತಂದೆಯನ್ನು ಕಳೆದುಕೊಂಡ ನನಗೆ ಮತ್ತು ನನ್ನ ಮುದಿತಾಯಿಗೆ ನೀನೇ ತಂದೆ ತಾಯಿ ಎಲ್ಲಾ’ ಎಂಬ ಗಂಗಾಧರನ ಮಾತು ನೆನಪಿಗೆ ಬಂದು ಉಮ್ಮಳಿಸಿ ಉಮ್ಮಳಿಸಿ ಅಳತೊಡಗಿದಳು. ಗಂಗಾಧರ್ ತುಂಬಾ ಭಾವುಕ ಜೀವಿ. ಬಡತನದಲ್ಲಿ ಬೆಳೆದವನು ಮತ್ತು ಅಷ್ಟೇ ಕಷ್ಟವನ್ನು ನುಂಗಿರುವವನು. ಆತನೊಡನೆ ಒಂದು ದಿನವಾದರೂ ಕಾವ್ಯ ಫೋನಿನಲ್ಲಿ ಮಾತನಾಡದಿದ್ದರೆ ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ಬೆಚ್ಚಿ ಬೆಚ್ಚಿ ಬೀಳುತ್ತಿದ್ದ.

ಅಷ್ಟಕ್ಕೇ ಯಾರೋ ಕೋಣೆಯ ಬಾಗಿಲು ಬಡಿದರು. ಕಣ್ಣೊರೆಸಿಕೊಂಡು ಬಾಗಿಲು ತೆರೆದಾಗ ‘ಅಮ್ಮ, ಅಜ್ಜಿ ಮತ್ತು ಚಿಕ್ಕಮ್ಮ’ ಒಟ್ಟಿಗೆ ಕೋಣೆಯ ಒಳಗಡೆ ಬಂದರು.
‘ಯಾಕಮ್ಮಾ ಮತ್ತೆ ಮಂಕಾಗಿದ್ದಿ’ ಶಾಂತಮ್ಮ ಕೇಳಿದಳು
ತುಟಿ ತೆರೆಯದ ಕಾವ್ಯ ಸಪ್ಪೆಮೋರೆಯಲ್ಲಿಯೇ ಬಿರುಗಾಳಿ ಎದ್ದುಹೋದ ನಂತರದ ತಂಗಾಳಿಯಂತೆ ಏನೂ ಇಲ್ಲವೆಂಬಂತೆ ಸುಮ್ಮನೆ ತಲೆಯಾಡಿಸಿದಳು.
‘ಹುಡುಗನ ಕಡೆಯವರು ನೋಡಲು ಬರುತ್ತಿದ್ದಾರೆ, ತದನಂತರ ಮದುವೆ, ತವರು ಮನೆ ತೊರೆಯುವುದು’ ಇವೆಲ್ಲಾ ನೆನಪಿಗೆ ಬಂದು ಕೂಸು ಅಳುತ್ತಿದೆ ಎಂದ ಅಜ್ಜಿ ಕಾವ್ಯಳನ್ನು ತೊಡೆಯಮೇಲೆ ಮಲಗಿಸಿಕೊಂಡರು. ಅಜ್ಜಿಯ ಸೀರೆ ಒದ್ದೆಯಾಗುವಂತೆ ಕಾವ್ಯ ಬಿಕ್ಕಳಿಸುತ್ತಿದ್ದಳು.
ಶಾಂತಮ್ಮ ಹೇಳಿದಳು ‘ಮಗು ಕಾವ್ಯ, ನಿನಗೊಂದು ವಿಚಾರವನ್ನು ಹೇಳಲೆಂದೇ ಬಂದಿದ್ದೇವೆ, ಯಾರಿಗೂ ತಿಳಿಯದಂತೆ ಗುಟ್ಟು ಕಾಪಾಡಿಕೋ’ ಎಂದವರೇ ಕೀರ್ತಿಯ ವಿಚಾರವನ್ನು ಹೇಳಿ ಮುಗಿಸಿದರು.
‘ಅವಳಿಗೆ ಇಷ್ಟಬಂದವನಿಗೆ ಮದುವೆ ಮಾಡಿಕೊಡುವುದಲ್ಲವೇ? ಹಿರೀಕರಾಗಿದ್ದುಕೊಂಡು ಜಾತಿ ಜಾತಿ ಎಂದು ಸಾಯುವುದಾದರೂ ಯಾಕೆ ತಾವೆಲ್ಲಾ ?’ ಮೌನವನ್ನು ತಬ್ಬಿಕೊಂಡಿದ್ದ ಕಾವ್ಯ ಕೊನೆಗೂ ತುಟಿಬಿಚ್ಚಿದಳು.
‘ಶ್.. ಕೂಗಿಕೊಳ್ಳಬೇಡ, ನೆರೆಯವರಿಗೆ ಕೇಳಿಸಿ ಗುಲ್ಲೆದ್ದೀತು’ ಎಂದಳು ಅಜ್ಜಿ.
ಶಾಂತಮ್ಮ ಮಾತು ಮುಂದುವರೆಸುತ್ತ ‘ಕಾವ್ಯ, ಅರ್ಥ ಮಾಡಿಕೋ ಮಗಳೆ. ಇದು ನಮ್ಮ ಮನೆತನದ ಪ್ರಶ್ನೆ. ನಿನ್ನ ತಂಗಿಯ ವಿಚಾರ ಅಪ್ಪ, ದೊಡ್ಡಪ್ಪ ಮತ್ತು ಚಿಕ್ಕಪ್ಪನಿಗೆ ತಿಳಿದರೆ ಅವಳನ್ನು ಮತ್ತು ಆ ಹುಡುಗನನ್ನು ಉಳಿಸುವುದು ಉಂಟೇ? ಅವಳ ಓದನ್ನು ಮೊಟಕುಗೊಳಿಸುವುದಲ್ಲದೇ ಕೂಡಲೇ ಸಂಬಂಧಿಕನಿಗೆ ಕೊಟ್ಟು ಮದುವೆ ಮಾಡಿಯಾರು. ಒಂದು ವೇಳೆ ಅವರಿಬ್ಬರೂ ಓಡಿ ಹೋಗಿ ಯಾವುದಾದರು ದೇವಸ್ಥಾನದಲ್ಲಿ ಬೇವರ್ಶಿಗಳಂತೆ ಮದುವೆಯಾದರೆ ನಮ್ಮ ಮರ್ಯಾದೆ ಮೂರಾಣೆಗೂ ನಿಲ್ಲುವುದಿಲ್ಲ. ಮೊನ್ನೆಯಷ್ಟೇ ನಾನು, ನಿನ್ನಪ್ಪ ಬೆಂಗಳೂರಿಗೆ ಹೋಗಿ ಶಾಂತಕ್ಕನ ಮಗಳಿಗೆ ಉಗಿದು ಸಮಾಧಾನ ಮಾಡಿ ಬಂದಿದ್ದೇವೆ. ಅವಳು ಕೂಡ ಒಂದು ಹುಡುಗನ ಜೊತೆ ಓಡಿಹೋಗಲು ತಯಾರಿದ್ದವಳು. ಈಗ ನಮ್ಮ ಕೂಸೇ ಈ ರೀತಿಯಾದರೆ ಅವರಿಗೆಲ್ಲಾ ಏನು ಸಬೂಬು ನೀಡುವುದು ಹೇಳು. ನಮ್ಮ ಸಂಬಂಧಿಕರ ಇಂಥಹ ಎಷ್ಟೋ ವಿಚಾರಗಳಿಗೆ ನ್ಯಾಯವಾದಿಗಳಂತೆ ಹೋಗಿ ಪರಿಹರಿಸಿಬಂದಿದ್ದೇವೆ. ನಮ್ಮ ಸಂಬಂಧಿಕ ವರ್ಗದಲ್ಲಿ ಸಾಚಾತನ ಬಂದಾಗ ನಿಮ್ಮಿಬ್ಬರನ್ನೂ ಎಲ್ಲರೂ ಉದಾಹರಿಸುತ್ತಾರೆ. ಜೊತೆಗೆ, ನಿನಗೇ ಗೊತ್ತಿರುವಂತೆ ನಮ್ಮನ್ನು ಕಂಡರೆ ಕರುಬುವವರು ಅನೇಕ ಮಂದಿಯಿದ್ದಾರೆ. ಅವರ ಕೊಂಕುನುಡಿಗಳನ್ನು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ. ನೇಣು ಬಿಗಿದುಕೊಂಡು ಪ್ರಾಣಬಿಡುತ್ತೇನೆ ಅಷ್ಟೆ. ಇದನ್ನೆಲ್ಲಾ ನೋಡಿಕೊಂಡು ನಿನ್ನ ಕುಡುಕ ರೋಗಗ್ರಸ್ಥ ಅಪ್ಪ ಸುಮ್ಮನಿರುವರೇ?’ ಎಂಬ ಮಾತುಗಳಿಗೆ ಕಾವ್ಯಳ ಕೈಕಾಲುಗಳು ಅಲುಗಾಡತೊಡಗಿದವು. ತಲೆ ಸಿಡಿದಂತಾಯಿತು.

‘ಸದ್ಯ, ನಮ್ಮ ಕಾವ್ಯಳ ವಿಚಾರದಲ್ಲಿ ಈ ರೀತಿಯ ತೊಂದರೆಯಾಗಲಿಲ್ಲ, ರಂಗಣ್ಣನ ದೊಡ್ಡ ಮಗಳು ಯಾವನೋ ಕೀಳುಜಾತಿಯವನೊಡನೆ ಓಡಿಹೋಗಿ ನಾಲ್ಕು ವರ್ಷವಾದರೂ, ಎರಡನೆ ಮಗಳನ್ನು ಮದುವೆ ಮಾಡಿಕೊಳ್ಳಲು ಯಾರೂ ಹತ್ತಿರ ಸುಳಿಯುತ್ತಿಲ್ಲ’ ಎಂದ ಚಿಕ್ಕಮ್ಮನ ಮಾತು ಕೇಳಿ ಕಾವ್ಯಳ ಮನಸ್ಸು ವಿಪ್ಲವಗೊಂಡು ಭಾರವಾಯಿತು. ಆಕೆ ಏನೂ ಮಾತನಾಡಲಿಲ್ಲ. ಮನೆಯಲ್ಲಿ ಹುರುಳಿ ಹುರಿದಂತೆ ಮಾತನಾಡುತ್ತಿದ್ದ, ಹಠ ಮಾಡುತ್ತಿದ್ದ ಕಾವ್ಯ ಮತ್ತೂ ಮೌನವಾದಳು.

‘ಕೀರ್ತಿ ಇನ್ನೂ ಚಿಕ್ಕವಳು, ಅಕ್ಕನೆಂದರೆ ಪ್ರೀತಿ. ಅವಳ ಹಠ ಸ್ವಭಾವವನು ಕಡಿಮೆ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. ಅವಳನ್ನು ನಿನ್ನೊಡನೆ ಕೂರಿಸಿಕೊಂಡು ಸಾವಧಾನವಾಗಿ ಎಲ್ಲಾ ಪರಿಣಾಮಗಳನ್ನು ವಿವರಿಸು, ಬುದ್ಧಿಮಾತು ಹೇಳು, ನಿನ್ನ ನಿಶ್ಚಿತಾರ್ಥ ಮದುವೆ ಮುಗಿದ ನಂತರ ಅವಳ ಮದುವೆಯ ಬಗ್ಗೆ ಆಲೋಚಿಸುವುದಾದರೂ, ಅವಳ ಮಾತಿನ ವರಸೆ ಗಮನಿಸಿದರೆ ಯಾಕೋ ನಮ್ಮೊಡನೆ ನಿಲ್ಲುವವಳಲ್ಲವೆಂದೆನಿಸುತ್ತದೆ. ಒಂದೇ ಜಾತಿಯಾಗಿದ್ದರೆ ಸೋಲಬಹುದಿತ್ತು. ಅನ್ಯಜಾತಿಯವರಿಗೆ ಹುಡುಗಿಕೊಟ್ಟು ತಲೆಯೆತ್ತಿ ಬಾಳಲು ಸಾಧ್ಯವೇ?’ ಎಂದ ಶಾಂತಮ್ಮ, ಅಜ್ಜಿ ಮತ್ತು ಚಿಕ್ಕಮ್ಮ ಮನೆಯ ಹೊರಗಿನ ಪಡಸಾಲೆಗೆ ಬಂದರು. ಕಾವ್ಯಳ ಕೈ ಹಿಡಿದು ಎಳೆದರೂ ಆಕೆ ಜೊತೆ ಹೋಗಲಿಲ್ಲ.

ಬಿಳಿ ಹಾಲಿನಂತಿದ್ದ ಕಾವ್ಯಳ ಮನಸ್ಸು ಒಡೆದ ಹಾಲಾಯಿತು. ತನ್ನನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಂಗಾಧರ್ ಕಣ್ಣಮುಂದೆ ಪ್ರತ್ಯಕ್ಷನಾದ. ಮೈಕೈ ಮುಟ್ಟಿನೋಡಿಕೊಂಡಳು. ‘ನಾವಿಬ್ಬರು ಗಂಡ ಹೆಂಡತಿಯರಾಗುವವರಲ್ಲವೇ?’ ಎಂಬ ಸಬೂಬಿನೊಂದಿಗೆ ಒಬ್ಬರಿಗೊಬ್ಬರು ತಬ್ಬಿಕೊಂಡು ಮೈನುಲಿದುಕೊಂಡಿದ್ದು ನೆನಪಿಸಿಕೊಂಡಳು. ಅಂದು ತೇವವಾಗಿದ್ದ ತುಟಿ ಇಂದೇಕೋ ಒಣಗಿಹೋಯಿತು. ಊಟ ಮಾಡು ಬಾ ಮಗಳೇ ಎಂದು ಕೂಗಿಕೊಂಡ ಅಪ್ಪ ಅಮ್ಮನಿಗೆ ನಾವಿಬ್ಬರೆಂದರೆ ಪ್ರಾಣವೆಂಬುದನ್ನೂ ನೆನಪಿಸಿಕೊಂಡಳು. ನಮ್ಮಿಬ್ಬರಲ್ಲಿ ಒಬ್ಬರನ್ನು ಕಳೆದುಕೊಂಡರೂ ಅವರು ಬದುಕುಳಿಯುವುದಿಲ್ಲವೆಂಬುದು ಅವಳಿಗೆ ಗೊತ್ತು. ಇನ್ನೊಂದೆಡೆ ಪ್ರೀತಿಯ ತಂಗಿ ಕೀರ್ತಿ ಎದುರಿಗೆ ನಿಂತಳು. ನಾನೇ ಒಬ್ಬನನ್ನು ಪ್ರೀತಿಸುತ್ತಿರುವಾಗ, ಗಾಢವಾಗಿ ಹಚ್ಚಿಕೊಂಡಿರುವಾಗ, ಮೈ ಒಪ್ಪಿಸಿಕೊಂಡಿರುವಾಗ, ಕ್ಷಣ ಮಾತ್ರವೂ ಆತನನ್ನು ಬಿಟ್ಟಿರಲಾಗದ ಸ್ಥಿತಿಯಲ್ಲಿರುವಾಗ ತಂಗಿಗೆ ಸಮಾಧಾನಿಸುವುದಾದರೂ ಹೇಗೆ? ಒಂದು ವೇಳೆ ಆಕೆ ‘ನೀನೇ ಯಾರನ್ನಾದರೂ ಪ್ರೀತಿಸಿದ್ದರೆ ಏನು ಮಾಡುತ್ತಿದ್ದೆ’ ಎಂಬ ಪ್ರಶ್ನೆ ಎಸೆದರೆ ಹೇಗೆ ಉತ್ತರಿಸಲಿ ?’ ಎಂದು ಯೋಚಿಸಿಕೊಂಡಳು. ಅಕ್ಕ ಅನ್ಯಜಾತಿಯವನ ಜೊತೆ ಓಡಿಹೋದರೆ ತಂಗಿಗೆ ಹುಡುಗ ದೊರಕುವುದು ಕಷ್ಟಸಾಧ್ಯವೆಂಬ ಚಿಕ್ಕಮ್ಮನ ಮಾತು ಎದೆ ಕೊರೆಯಿತು. ಈ ಸದರಿ ವಿಚಾರಗಳು ಅಪ್ಪನ ಕಡೆಯವರಿಗೆ ತಿಳಿದರೆ ಆ ಹುಡುಗನನ್ನು ಉಳಿಸುವರೇ ಎಂಬ ಅಮ್ಮನ ಮಾತಿನಿಂದ ಮತ್ತೂ ನಡುಗಿದಳು. ಅಕ್ಕ ಮಾಡಿದ ತಪ್ಪಲ್ಲದ ತಪ್ಪಿಗೆ ತಂಗಿಗೆ ಶಿಕ್ಷೆ ಕೊಡುವ ಈ ಸಮಾಜಕ್ಕೆ ನನ್ನ ಚಪ್ಪಲಿಸೇವೆಯಿರಲಿ ಎಂದು ಶಪಿಸಿಕೊಂಡಳು. ಒಂದು ವೇಳೆ ನಾನು ಹೇಳದೆ ಕೇಳದೆ ಗಂಗಾಧರ್ ಜೊತೆ ಓಡಿಹೋದರೆ ಎಂದು ಯೋಚಿಸುವಷರಲ್ಲಿಯೇ, ಹಂಗಿಸುವ ಊರ ಜನರು ಕಣ್ಣ ಮುಂದೆ ಭೂತಗಳಂತೆ ಬಂದು ನಿಂತರು, ಅವರ ವ್ಯಂಗ್ಯಕ್ಕೆ ಅಪ್ಪ ಅಮ್ಮ ಸೋತುಬಿದ್ದವರಂತೆ ಕಂಡುಬಂದರು. ಈ ರೀತಿಯ ಅನೇಕ ಘಟನೆಗಳನ್ನು ಕಣ್ಣಾರೆ ಕಂಡಿದ್ದಳು ಕೂಡ. ಅಪ್ಪ ಅಮ್ಮನ ಹೆಣಗಳು ಮುಂದೆ ತೇಲಿಬಂದವು. ಪ್ರಪಂಚದಲ್ಲಿರುವ ಕೋಟಿ ಕೋಟಿ ಜನಗಳಿಗೆಲ್ಲರಿಗೂ ಹೃದಯ ಇದ್ದಲ್ಲೇ ಇದೆ, ಎಲ್ಲರ ರಕ್ತದ ವರ್ಣ ಕೆಂಪು, ಎಲ್ಲರಿಗೂ ಅಳುವ, ನಗುವ, ಯೋಚಿಸುವ ಶಕ್ತಿಯಿದೆ. ದೇಹರಚನೆಯಲ್ಲಿ ಸಾಮ್ಯತೆಯಿದೆ ಆದರೆ ಬುದ್ಧಿಯಲ್ಲಿಲ್ಲ, ಯಾರೋ ಎಂದೋ ನೆಟ್ಟಿದ್ದ ವಿಷಬೀಜವಿಂದು ಹೆಮ್ಮರವಾಗಿ ನೆರಳ ನೀಡದೆ ಮೈಚುಚ್ಚಿತ್ತಿರುವ ಈ ಭೂಮಿಯಲ್ಲಿ ಹುಟ್ಟಿದ್ದು ನಮ್ಮ ಪಾಪವಷ್ಟೆ ಎಂದುಕೊಂಡಳು. ಮುಂದೆ ಬಿದ್ದಿದ್ದ ಆ ದಿನದ ಪತ್ರಿಕೆಯಲ್ಲಿ ಮರ್ಯಾದಾ ಹತ್ಯಾ ಎಂಬ ಹೆಸರಿನಲ್ಲಿ ನವಜೋಡಿಗಳನ್ನು ಅವರ ಹೆತ್ತವರೇ ಕೊಂದಿದ್ದ ಸುದ್ದಿಯಿತ್ತು. ಕ್ಲಿಷ್ಟಗೊಂಡ ಮನಸ್ಸು ಆ ಪತ್ರಿಕೆಯನ್ನು ಹರಿದುಹಾಕಿತ್ತು.

ಗಂಡಿನ ಮನೆಯವರು ಅಷ್ಟರಲ್ಲಿ ಬಂದಾಗಿತ್ತು. ವೆಂಕಟೇಶಭಟ್ಟರು ಮಂತ್ರಿಯಾಗಿದ್ದ ಸಮಯದಲ್ಲಿ ಘಟಿಸಿದ್ದ ಯಾವುದೋ ಅಕ್ರಮಕ್ಕೆ ಇದ್ದಕ್ಕಿದ್ದಂತೆ ರೆಕ್ಕೆ ಮೂಡಿದ್ದರಿಂದ ಮಾಧ್ಯಮದವರು ಸುತ್ತಿಕೊಂಡರು. ತೆರೆದೆ ಕಿಟಕಿಯ ಸುಡುವ ಗಾಳಿಗೆ ಮೈಯೊಡ್ಡಿ ಎಲ್ಲರನ್ನು ಒಮ್ಮೆ ನೋಡಿದಳು. ಗುದ್ದಲಿ ಪಿಕಾಸಿ ಹಿಡಿದುಕೊಂಡು ಎಲ್ಲರೂ ತನ್ನೆಡೆಗೇ ಬರುತ್ತಿರುವಂತೆ ಭಾಸವಾಯಿತು. ಇವರನ್ನೆಲ್ಲಾ ಬಗ್ಗುಬಡಿಯಲು ಗಂಗಾಧರ್ ಬಂದಿಲ್ಲವಲ್ಲ ಎಂದು ಕೊರಗಿಕೊಂಡಳು. ಆದರೆ, ಅಸಲಿಯಾಗಿ ಈ ವಿಚಾರವನ್ನು ಗಂಗಾಧರ್ ಗೆ ಕಾವ್ಯ ಮುಟ್ಟಿಸಿಯೇ ಇರಲಿಲ್ಲ! ಹುಡುಗನ ಕಡೆಯವರು ತುಂಬಾ ಸಂಭಾವಿತರು ಮತ್ತು ಕ್ರೌರ್ಯದ ಹಿನ್ನೆಲೆಯುಳ್ಳವರು ಎಂಬುದು ತಿಳಿದುಕೊಂಡವಳಿಗೆ ಗಂಗಾಧರ್ ಅವಸರಪಟ್ಟು ಮನೆ ಮುಂದೆ ನಿಂದು ಇವರನ್ನೆಲ್ಲಾ ಎದುರಿಸಿದರೆ, ಆತನ ಜೀವಕ್ಕೆ ತೊಂದರೆಯಾದರೆ, ಮಾಧ್ಯಮಗಳಲ್ಲಿ ಈ ವಿಚಾರ ಮೂಡಿಬಂದು ಮನೆ ಗೌರವ ಮೂರುಕಾಸಿಗೆ ಹಂಚಿಹೋದರೆ, ನನ್ನಪ್ಪ ಅಮ್ಮ ಬೀದಿ ಪಾಲಾದರೆ, ತಂಗಿಯ ಗತಿಯೇನು ಎಂದು ಯೋಚಿಸಿ ಯೋಚಿಸಿ ಮೌನವಾಗಿಯೇ ಉಳಿದುಬಿಟ್ಟಳು. ಹೆಚ್ಚಾಗಿ, ಇದು ಕೇವಲ ನೋಡಿಕೊಂಡು ಹೋಗುವ ಶಾಸ್ತ್ರವಷ್ಟೇ, ತಲೆಬಾಗಿ ತಾಳಿ ಕಟ್ಟಿಸಿಕೊಳ್ಳುವ ಮದುವೆಯಲ್ಲವಲ್ಲ ಎಂದು ಸ್ವಲ್ಪ ಧೈರ್ಯದಿಂದಿದ್ದಳು.

ಜ್ಯೂಸ್ ತಟ್ಟೆ ಹಿಡಿದುಕೊಂಡ ಕಾವ್ಯ ಬಂದಿದ್ದವರ ಮುಂದೆ ನಿಂತಳು. ಅದೇ ಮೌನ ಅವಳನ್ನು ಆವರಿಸಿತ್ತು. ಬಾಗಿಸಿದ ತಲೆಯನ್ನು ಕೊಂಚವೂ ಮೇಲೆತ್ತಲಿಲ್ಲ. ಶಾಂತಮ್ಮ ತಲೆಯೆತ್ತಿ ಒಮ್ಮೆ ಹುಡುಗನನ್ನು ನೋಡು ಎಂದರು. ‘ನಿನ್ನನ್ನು ಬಿಟ್ಟು ಮತ್ತಾವ ಹುಡುಗಿಯನ್ನು ನೋಡುವುದಿಲ್ಲ, ಹತ್ತಿರ ಬಂದರೆ ಬೆಂಕಿಯಾಗಿ ಸುಟ್ಟುಬಿಡುತ್ತೇನೆ’ ಎಂದಿದ್ದ ಗಂಗಾಧರನನ್ನು ನೆನಪಿಸಿಕೊಂಡು ದಳದಳನೆ ಕಣ್ಣೀರು ಸುರಿಸಿದಳು.
‘ಹುಡುಗಿ ತನ್ನ ಮುಖ ತೋರಲಿಲ್ಲ, ಯಾಕೆ ನಾಚಿಕೆಯೋ ?’ ಯಾರೋ ಒಬ್ಬಾತ ಬಂದಿದ್ದವರ ಗುಂಪಿನಿಂದ ಕೇಳಿಕೊಂಡ ತಕ್ಷಣ ತಂಗಿ ಕೀರ್ತಿ ‘ಮುಖ ಮೇಲಕ್ಕೆ ಮಾಡೇ’ ಎಂದಳು. ಅಜ್ಜಿಯೂ ಹತ್ತಿರ ಬಂದರು. ವಿಧಿಯಿಲ್ಲದೆ ಕಾವ್ಯ ಮುಖ ಮೇಲೆ ಮಾಡಿದಳು. ಹರಿಯುತ್ತಿದ್ದ ಕಣ್ಣಧಾರೆಯನ್ನು ಗಮನಿಸಿ ಎಲ್ಲರೂ ಒಮ್ಮೆಲೆ ಅವಕ್ಕಾದರು. ಅಜ್ಜಿ ಮತ್ತದೇ ಸಬೂಬು ನೀಡಿದಳು. ಅಲ್ಲಿ ಕುಳಿತಿದ್ದವರಲ್ಲಿ ತನ್ನನ್ನು ನೋಡಲು ಬಂದ ಹುಡುಗ ಯಾರಿರಬಹುದು ಎಂಬುದರ ಬಗ್ಗೆ ಕಾವ್ಯ ಯೋಚಿಸಲಿಲ್ಲ, ಶಾಂತಮ್ಮ ಮೊನ್ನೆ ತೋರಿಸಿದ್ದ ಫೋಟೋವನ್ನು ನೋಡದ ಕಾವ್ಯ ಬದಲಾಗಿ ಹರಿದು ಬೆಂಕಿ ಹಚ್ಚಿದ್ದಳು.

ಅಂದು ಸಂಜೆ ಕೋಣೆಯಲ್ಲಿ ಮಗುವಿನಂತೆ ಅವಚಿಕೊಂಡು ಮಲಗಿದ್ದ ಮಗಳನ್ನು ಕಂಡ ಲಕ್ಷ್ಮೀಶಭಟ್ಟರು ಮತ್ತು ಜೊತೆಯಲ್ಲಿದ್ದ ಕೀರ್ತಿ ಹತ್ತಿರ ಬಂದವರೇ ತಲೆಸವರಿ ‘ಹುಡುಗ ಇಷ್ಟವಾದನೇ?’ ಎಂದು ಕೇಳಿದರು. ತೀಕ್ಷ್ಣವಾಗಿ ಅಪ್ಪನ ಮುಖ ನೋಡುತ್ತ ಕುಳಿತುಬಿಟ್ಟಳು ಕಾವ್ಯ. ಬಾಯಿಯಿಂದ ಮಾತು ಹೊರಡಲಿಲ್ಲ. ಗಟ್ಟಿಯಾಗಿ ತಬ್ಬಿಕೊಂಡು ಅತ್ತುಬಿಟ್ಟಳು. ‘ಚಿಕ್ಕಂದಿನಿಂದ ಹೂವಿನಂತೆ ಸಲಹಿದ ನನ್ನ ಮಕ್ಕಳನ್ನು ಹುಲಿಯ ಬಾಯಿಗೆ ಕೊಡುವುದಿಲ್ಲ, ಈ ಸಂಬಂಧ ನಿನ್ನ ಏಳೇಳು ಜನ್ಮದ ಪುಣ್ಯ, ಕಳೆದ ಎರಡು ವರ್ಷದಿಂದ ಸತತ ಪ್ರಯತ್ನಿಸಿ ಪ್ರಯತ್ನಿಸಿ ಗೊತ್ತು ಮಾಡಿಕೊಂಡಿದ್ದೇನೆ, ಹುಡುಗ ನಿನ್ನನ್ನು ಇಷ್ಟಪಟ್ಟಿದ್ದಾನೆ, ನಮ್ಮನ್ನು ಬಿಟ್ಟುಹೋಗುವ ಚಿಂತೆ ಮಾಡಬೇಡ ಮಗಳೆ, ನಿನ್ನ ಒಳ್ಳೆಯತನ ನಿನ್ನನ್ನು ಕಾಪಾಡುತ್ತದೆ’ ಎಂದರು.

ಆ ದಿನದ ರಾತ್ರಿಯ ಊಟಕ್ಕೆ ಎಲ್ಲರ ಜೊತೆಯಲ್ಲಿ ಕುಳಿತುಕೊಳ್ಳಲು ಕಾವ್ಯಳಿಗೆ ಇಷ್ಟವಾಗಲಿಲ್ಲ. ತಲೆನೋವಿದೆ ಎಂಬ ನೆಪ ಹೇಳಿ ತನ್ನ ಕೊಠಡಿಯಲ್ಲಿಯೇ ಮಲಗಿಬಿಟ್ಟಳು. ಚಳಿಯಿದ್ದರೂ ಸೆಖೆ ಮೈ ಸುಡುತ್ತಿತ್ತು. ಒಂದು ವಾರದ ಮಟ್ಟಿಗೆ ನಿದ್ದೆ ಮಾಡದ ಕಾವ್ಯಳ ಅರಿವಿಗೆ ಬಾರದೆ ನಿದ್ದೆ ಆವರಿಸಿತ್ತು. ತಾಯಿ ಮಮತೆ ಬಿಡಬೇಕೆ? ತಟ್ಟೆಗೆ ಸ್ವಲ್ಪ ಅನ್ನವನ್ನು, ಕಾವ್ಯಳಿಗೆ ಪ್ರಿಯವಾದ ಮಜ್ಜಿಗೆ ಹುಳಿಗೆ ಸೇರಿಸಿಕೊಂಡು ಕೊಠಡಿಗೆ ಬಂದವರೇ ಗಾಬರಿಗೊಂಡರು. ತುಂಬಾ ನಿದ್ರೆ ಮಾಡುತ್ತಿರುವ ಕಾವ್ಯಳ ಕಣ್ಣಿನಿಂದ ಕಣ್ಣೀರು ತೊಟ್ಟಿಕ್ಕುತ್ತಿದೆ. ನಿದ್ದೆಯಲ್ಲೂ ಅಳುವವರನ್ನು ಶಾಂತಮ್ಮ ಎಂದೂ ಕಂಡಿರಲಿಲ್ಲ. ತಾವೂ ಅತ್ತುಬಿಟ್ಟರು, ಕಷ್ಟಪಟ್ಟು ಎಬ್ಬಿಸಿ ಕಾವ್ಯಳ ಹಣೆಗೆ ಮುತ್ತಿಕ್ಕಿದ ಶಾಂತಮ್ಮ ತುತ್ತು ಮಾಡಿ ಅನ್ನ ತಿನ್ನಿಸತೊಡಗಿದರು. ‘ತವರುಮನೆ ತೊರೆಯುವ ಪ್ರತಿ ಹೆಣ್ಣಿಗೂ ಈ ರೀತಿಯ ನೋವಾಗುವುದು ಸಹಜ, ಅಳಬೇಡ ಕಂದ, ಮೊಬೈಲು ಫೋನು ಇರುವ ಕಾಲದಲ್ಲಿಯೂ ದೂರ ಉಳಿದುಕೊಳ್ಳುವ ಚಿಂತೆ ಏಕೆ?’ ಎಂದು ಹೇಳಿದ ಶಾಂತಮ್ಮನವರು ‘ಕೀರ್ತಿ ಜೊತೆ ಮಾತನಾಡಿದೆಯಾ ಪುಟ್ಟ, ನಿನ್ನ ಜೀವನ ಸುಸ್ಥಿತಿಗೆ ಬಂದದ್ದು ನಮ್ಮ ಪುಣ್ಯ, ಆಕೆಯೊಬ್ಬಳ ದಾರಿಯನ್ನು ಸರಿ ಮಾಡಿಬಿಟ್ಟರೆ ನಾವು ನೆಮ್ಮದಿಯಾಗಿ ಉಳಿದ ದಿನಗಳನ್ನು ಕಳೆದುಬಿಡುತ್ತೇವೆ, ನಿನಗೆ ಸಿಕ್ಕಿರುವ ಸಂಬಂಧ, ಅವರ ಘನತೆ ಗಾಂಭೀರ್ಯಗಳ ಬಗ್ಗೆ ಮಾತನಾಡಿ ಆಕೆಯನ್ನು ಒಪ್ಪಿಸು’ ಎಂದು ಮತ್ತೆ ಕೇಳಿಕೊಂಡರು ಶಾಂತಮ್ಮ. ಅಮ್ಮನ ತೊಡೆ ಮೇಲೆ ಮಲಗಿಕೊಂಡವಳೇ ಮತ್ತೆ ಅಳತೊಡಗಿದಳು. ಪ್ರೀತಿಯ ತೀವ್ರತೆ ಅರಿತ ಕಾವ್ಯಳಿಗೆ ಒಮ್ಮೆಯೂ ಕೀರ್ತಿ ಜೊತೆ ಮಾತನಾಡಿ ಸಂಬಂಧವನ್ನು ಕಿತ್ತುಹಾಕುವ ಧೈರ್ಯ ಬರಲಿಲ್ಲ.

ಆ ರಾತ್ರಿ, ಸುತ್ತಲೂ ನೀರವ ಮೌನ ಆವರಿಸಿತ್ತು. ಜಗತ್ತನ್ನೇ ಬೆಳಗಿದ ಚಂದಿರ ಕಾವ್ಯಳಿಗೆ ಮಾತ್ರ ಮಂಕಾಗಿಯೇ ಕಾಣಿಸುತ್ತಿದ್ದ. ಮನೆಯಲ್ಲಿ ಎಲ್ಲರೂ ಗಾಢನಿದ್ದೆಯಲ್ಲಿದ್ದರು. ಗಂಗಾಧರ್ ನನ್ನು ನೆನಪಿಸಿಕೊಂಡಾಕ್ಷಣ ಮನಸ್ಸು ವಿಲವಿಲನೆ ಒದ್ದಾಡಿತು, ಎದೆ ಬಿಗಿಯಾಗಿ ಉಸಿರು ಕಟ್ಟಿದಂತಾಯಿತು. ಕಿಟಕಿಯ ಬಳಿ ಬಂದ ಕಾವ್ಯ ಗಂಗಾಧರ್ ಗೆ ಫೋನಾಯಿಸಿದಳು. ಎಲ್ಲಾ ವಿಚಾರಗಳನ್ನು ಹೇಳಿ ಬಿಕ್ಕಿ ಬಿಕ್ಕಿ ಅತ್ತು ಹಗುರಾದಳು. ‘ನಿನ್ನ ಜಾಗದಲ್ಲಿ ಬೇರಾರನ್ನೂ ಕಲ್ಪಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ, ಹಾಗೆಯೇ ನನ್ನಪ್ಪ ಅಮ್ಮನ ಸಾವನ್ನೂ ನಾ ನೋಡಲಾರೆ’ ಎಂದು ಅಳುತ್ತಾ ಪ್ರಾರಂಭಿಸಿ ಎಲ್ಲವನ್ನೂ ತಿಳಿಸಿದಳು.
ಎಲ್ಲವನ್ನೂ ಕೇಳಿಸಿಕೊಂಡ ನಂತರ ಗಂಗಾಧರ್ ‘ಮುಂಜಾನೆ 5.30 ರ ಹೊತ್ತಿಗೆ ಬೈಕ್ ನೊಂದಿಗೆ ನಿಮ್ಮ ಮನೆಯ ಬಳಿ ಬರುತ್ತೇನೆ, ನಿನ್ನ ಲಗ್ಗೇಜ್ ಎಲ್ಲ ಈಗಲೇ ಪ್ಯಾಕ್ ಮಾಡಿಟ್ಟುಕೋ, ಈ ಊರು ಬಿಟ್ಟು ಎಲ್ಲಾದರೂ ದೂರ ಹೊರಟುಬಿಡೋಣ’ ವೆಂದ ಮಾತನ್ನು ಕೇಳಿ ಕಾವ್ಯ ಒಮ್ಮೆಲೇ ದಿಗ್ಭ್ರಾಂತಳಾದಳು. ತನ್ನ ಯಾವತ್ತೂ ವಿಚಾರಗಳನ್ನು ಸಮಾಧಾನವಾಗಿ ಕೇಳಿಸಿಕೊಂಡೂ ಈ ರೀತಿಯಾಗಿ ಗಂಗಾಧರ್ ಹೇಳಿದ್ದು ಆಕೆಗೆ ಆಶ್ಚರ್ಯವಾಯಿತು.
ಮಾತು ಮುಂದುವರೆಸಿದ ಗಂಗಾಧರ್ ಹೇಳಿದ ‘ಡಿಯರ್, ನೀನು ಮನೆಬಿಟ್ಟು ಬಂದರೆ, ಅದೂ ನನ್ನ ಜಾತಿಯವನ ಜೊತೆ ಬಂದರೆ ಇಡೀ ಊರಿಗೆ ಊರೇ ಹಂಗಿಸುತ್ತದೆ ಎಂಬುದ ನಾ ಬಲ್ಲೆ. ನಿಮ್ಮ ತಂದೆ ತಾಯಂದಿರು ಬೀದಿಯಲ್ಲಿ ತಲೆಯೆತ್ತಿ ನಡೆಯಲಾಗುವುದಿಲ್ಲವೆಂಬುದು ಎಲ್ಲಾ ಕಟ್ಟಳೆಗಳನ್ನು ಮೀರುವವರಿಗೆ ಈ ನೀಚ ಸಮಾಜ ಕೊಡುವ ಉಡುಗೊರೆ. ಆದರೆ, ಖಂಡಿತವಾಗಿಯೂ ನಿನ್ನ ತಂದೆ ತಾಯಂದಿರು ಸಾಯುವುದಿಲ್ಲ. ಕಾರಣ ನಿನ್ನ ತಂಗಿ ಕೀರ್ತಿ. ಅವಳನ್ನು ಒಂಟಿ ಮಾಡಿ ಈ ಪ್ರಪಂಚ ಬಿಟ್ಟವರು ಸರಿಯರು. ಜೊತೆಗೆ ಅಕ್ಕನ ಸ್ಥಿತಿಯಿಂದೊದಗಿ ಬಂದ ಪರಿಸ್ಥಿತಿ ಕೀರ್ತಿಯನ್ನು ಬದಲಿಸುತ್ತದೆ, ತಂದೆ ತಾಯಿಯ ಸ್ಥಿತಿಗೆ ಮರುಗುತ್ತಾಳೆ, ಅವರೆಲ್ಲರ ಪಾಲಿಗೆ ನೀನು ಹುಟ್ಟಿಯೇ ಇಲ್ಲವೆಂದು ತಿಳಿದುಕೊಂಡು ಹೊರಟುಬಿಡು’
ಇನ್ನೊಬ್ಬನ ಸಾಂಗತ್ಯವನ್ನು ಊಹಿಸಿಕೊಳ್ಳಲಾಗದ ಕಾವ್ಯಳಿಗೆ ಗಂಗಾಧರನ ಮಾತು ಯಾಕೋ ಚೂರು ಸಮಾಧಾನ ತಂದಿತು. ಆಗುವುದು ಆಗಿಯೇ ತೀರಲಿ, ‘ಬರುತ್ತೇನೆ’ ಎಂದು ಬಿಟ್ಟಳು.

ಕೆಲವು ಬಟ್ಟೆ, ಪುಸ್ತಕಗಳು, ಅಮ್ಮ ಕೊಡಿಸಿದ್ದ ಆ ಬೊಂಬೆ, ಅಪ್ಪ ಹುಟ್ಟುಹಬ್ಬಕ್ಕೆ ಕೊಡಿಸಿದ್ದ ಕ್ಯಾಮೆರಾ ಎಲ್ಲವನ್ನೂ ಕಣ್ಣೀರು ಸುರಿಸುತ್ತ ತುಂಬಿಕೊಂಡಳು. ಅಪ್ಪ, ಅಮ್ಮ, ತಾನು ಮತ್ತು ಕೀರ್ತಿ, ಅಜ್ಜಿ ಜೊತೆಯಾಗಿ ತೆಗೆಸಿದ್ದ ಒಂದು ಫೋಟೋವನ್ನು ಎದೆಗೊತ್ತಿಕೊಂಡು ಮಲಗಿದಳು. ರಾತ್ರಿಯೆಲ್ಲಾ ನಿದ್ದೆಯ ಚೂರೂ ಬರಲಿಲ್ಲ. ಮುಂಜಾನೆಯ 5.30 ನ್ನೇ ಕಾಯುತ್ತಿದ್ದಳು. ಹೊರಳಾಡಿ ಹೊರಳಾಡಿಯೇ ಕತ್ತಲ ನುಂಗುತ್ತಿದ್ದಳು. ಸಮಯ ಸುಮಾರು ಮುಂಜಾನೆ 5. ಕತ್ತಲು ದಟ್ಟವಾಗಿಯೇ ಇತ್ತು. ಕಾವ್ಯಳ ಕೊಠಡಿಯ ಬಾಗಿಲು ಇದ್ದಕ್ಕಿದ್ದಂತೆ ಬಡಿದುಕೊಂಡಿತ್ತು. ಗಾಬರಿಗೊಂಡ ಕಾವ್ಯ ಬಾಗಿಲು ತೆರೆದಳು. ಎದುರಿಗೆ ಗಾಬರಿಗೊಂಡ ಶಾಂತಮ್ಮ ನಿಂತಿದ್ದರು. ಮುಖದಲ್ಲಿ ಇನ್ನಿಲ್ಲದ ಆತಂಕವಿತ್ತು.
‘ಮಗೂ, ಕೀರ್ತಿಯನ್ನು ಕಂಡೆಯಾ? ಸುಮಾರು ನಾಲ್ಕು ಘಂಟೆಯಿಂದಲೂ ಮನೆಯಲ್ಲಿ ಕಾಣುತ್ತಿಲ್ಲ, ಅವಳ ಬಟ್ಟೆ ಪುಸ್ತಕ, ಸೂಟ್‍ಕೇಸ್ ಏನೂ ಕಾಣುತ್ತಿಲ್ಲ’ ಕೀರಲು ದ್ವನಿಯಲ್ಲಿ ಶಾಂತಮ್ಮ ಕೂಗಿಕೊಂಡಳು.
‘ನೀನೇದಾರೂ ಅವಳಿಗೆ ಹೇಳಿದೆಯಾ ಅಮ್ಮಾ’ ಅಪರೂಪಕ್ಕೆ ಮಾತನಾಡಿದ್ದಳು ಕಾವ್ಯ.
‘ರಾತ್ರಿ, ಅಕ್ಕನಿಗೂ ಹುಡುಗನ ಗೊತ್ತಾಯಿತು, ನೀನು ನಿನ್ನ ಅತ್ತೆಯ ಮಗನಾದ ಲಕ್ಷ್ಮೀಶನನ್ನು ಮದುವೆಯಾಗು, ಓದಿದ್ದಾನೆ, ಅಮೇರಿಕಾದಲ್ಲಿದ್ದಾನೆ ಎಂದೆ, ಅಷ್ಟೇ’ ಎಂದ ಶಾಂತಮ್ಮ ಬಾಗಿಲ ಹೊರಗೆ ಓಡಿದಳು. ಕಾವ್ಯ ಕುಸಿದುಬಿದ್ದಳು. ಅಷ್ಟಕ್ಕೇ ಗಂಗಾಧರನ ಮೊಬೈಲ್ ಹೊಡೆದುಕೊಂಡಿತು. ವಿಷಯ ಮುಟ್ಟಿಸಿ ಹಿಂದಿರುಗುವಂತೆ ಹೇಳಿದಳು. ಗಾಬರಿಗೊಂಡ ಗಂಗಾಧರ್ ಆ ಕ್ಷಣದಲ್ಲೇನೂ ತೋಚದೆ ಹಿಂದಿರುಗಿಬಿಟ್ಟ.

ಅದೇ ದಿನದಂದು, ಶಾಂತಮ್ಮಳ ಮನೆಯ ಓಣಿಕೊನೆ ಮನೆಯ ಮೋಹನ್ ಕೂಡ ಕಾಣೆಯಾಗಿರುವ ಸುದ್ದಿ ಹಬ್ಬಿಕೊಂಡಿತು. ಕೀರ್ತಿ ಪ್ರೀತಿಸುತ್ತಿದ್ದ ಹುಡಗನಾತ. ಕಾವ್ಯ ಎಲ್ಲೋ ಒಂದು ಕಡೆ ತನ್ನ ದೈನೇಶಿ ಸ್ಥಿತಿ ಕಂಡು ಮರುಗಿದ್ದವಳು ಕೀರ್ತಿಯ ಸಾಹಸವನ್ನು ಮೆಚ್ಚಿಕೊಂಡಳಾದರೂ ಒಪ್ಪಿಕೊಂಡಂತೆ ಬಾಯಿಬಿಡಲಿಲ್ಲ. ಆದರೆ ಸೂರ್ಯ ಮೂಡುವ ಹೊತ್ತಿಗೆ ಮೂಡಿಬಂದ ಬೀದಿಜನಗಳ ಮಾತುಗಳನ್ನು ಅರಿಗಿಸಿಕೊಳ್ಳಲಾಗಲಿಲ್ಲ. ಬಾಯಿಗೆ ಬಂದಂತೆ ಮಾತನಾಡುವ ಜನಗಳು ಹೆಚ್ಚಾದರು. ‘ಅಯ್ಯೋ! ಆ ಎರಡು ಹೆಣ್ಣು ಮಕ್ಕಳು ತಲೆಯೆತ್ತಿ ನಡೆದವರಲ್ಲ, ಈಗ ನೋಡಿ ಅದ್ಯಾವನನ್ನೋ ಇಟ್ಟುಕೊಂಡು ಊರುಬಿಟ್ಟು ಓಡಿಹೋಗಿದೆ ಒಂದು ಹೆಣ್ಣು, ಕಳ್ಳಿಯರನ್ನು ನಂಬಿದರೂ ಮಳ್ಳಿಯರನ್ನು ನಂಬಬಾರದು, ಪಾಪ, ಆ ತಂದೆ ತಾಯಿಗಳಿಗೆ ಸಾಯುವವರೆವಿಗೂ ಒಂದು ಕೊರಗನ್ನು ಕೊಟ್ಟು ತನ್ನ ದಾರಿ ಹಿಡಿದಳು ದರಿದ್ರ ಹುಡುಗಿ’ ಹೀಗೆ ಸಾಗಿತ್ತು ಸಾಲು ಸಾಲು ಮೂದಲಿಕೆ. ಜೊತೆಗೆ ನೆಂಟರಿಷ್ಟರ ನೂರಾರು ಕರೆಗಳು. ಮಾತು ಮಾತಿಗೂ ‘ಮಗಳು ಓಡಿಹೋದಳಂತೆ, ಓಡಿಹೋದಳಂತೆ’ ಇವೇ ಮಾತುಗಳು.

ಎಂದೂ ಕಣ್ಣೀರು ಹಾಕದ ಅಪ್ಪ ಇಂದು ಕಣ್ಣೀರು ಸುರಿಸಿದ್ದು ಕಂಡು ತಾನೂ ಅತ್ತುಬಿಟ್ಟಳು ಕಾವ್ಯ. ಮೊಮ್ಮಗಳ ಫೋಟೋ ಎದೆಗೆ ಒತ್ತಿಕೊಂಡು ಗೋಳಾಡುವ ಅಜ್ಜಿ ಒಂದೆಡೆಯಾದರೆ, ದಿಕ್ಕೇ ತೋಚದಂತೆ, ಗೊಂಡಾರಣ್ಯದಲ್ಲಿ ತಪ್ಪಿಸಿಕೊಂಡ ಜಿಂಕೆ ಮರಿಯಂತೆ ಶಾಂತಮ್ಮ ಅಲೆದಾಡುತ್ತಿದ್ದಳು. ಒಮ್ಮೆ ಅಪ್ಪ ಎದೆನೋವೆಂದು ಇದ್ದಕ್ಕಿದ್ದಂತೆ ನೆಲಕ್ಕೆ ಒರಗಿದ್ದು ಕಂಡು ಕಾವ್ಯ ಗಾಬರಿಯಾದಳು. ಪರೀಕ್ಷಿಸಿದ ವ್ಶೆದ್ಯರು ಇದು ಸಣ್ಣ ಹೃದಯಾಘಾತವಷ್ಟೇ ಎಂದು ಹೇಳುವವರೆವಿಗೂ ಕಾವ್ಯಳ ಅಳು ಕಡಿಮೆಯಾಗಲಿಲ್ಲ.

ಧರ್ಮಸ್ಥಳದಲ್ಲಿ ಕಿರ್ತಿ ಮತ್ತು ಮೋಹನ್ ಮದುವೆಯಾಗಿದ್ದಾರೆಂಬ ವಿಚಾರ ಪತ್ರಿಕೆ ಟೀವಿಗಳಲ್ಲಿ ಬಂದದ್ದೇ ಅಜ್ಜಿ ತೀವ್ರ ಅಸ್ವಸ್ಥರಾಗಿ ತೀರಿಕೊಂಡರು. ಲಕ್ಷ್ಮೀಶಭಟ್ಟರ ಕುಡಿತ ಹೆಚ್ಚಾಯಿತು. ಶಾಂತಮ್ಮ ಹುಚ್ಚಿಯಂತಾಗಿಬಿಟ್ಟರು. ಈ ಘಟನೆಯಾದ ವಾರದೊಳಗೆ ಕಾವ್ಯ ‘ನನ್ನನ್ನು ಮರೆತುಬಿಡು, ಮೇಲ್ಚಾತಿ ಎನಿಸಿಕೊಂಡವನನ್ನು ನನ್ನ ತಂಗಿ ವರಿಸಿದ್ದೇ ದೊಡ್ಡ ಅಪಘಾತವಾಗಿ ಪರಿವರ್ತಿತವಾರುವಾಗ, ಇನ್ನು ನಾನು ನೀನು ಕೂಡಿಕೊಂಡರೆ ನಮ್ಮ ಸಂಸಾರವೇ ಸರ್ವನಾಶವಾಗಿಹೋಗುತ್ತದೆ, ನಂತರ ನಾನೂ ಕೊರಗಿ ಕೊರಗಿ ತೀರಿಕೊಳ್ಳುತ್ತೇನೆ, ನೀನೂ ಬದುಕುವುದಿಲ್ಲ, ನಿನ್ನ ತಾಯಿಯನ್ನು ಒಂಟಿ ಮಾಡಬೇಡ, ನನ್ನನ್ನು ಕ್ಷಮಿಸು, ಮತ್ತೊಬ್ಬನಿಗೆ ಹೆಂಡತಿಯಾಗಿ ಹೋದರೂ ನೀ ಮುಟ್ಟಿದ ಈ ದೇಹವನ್ನು ಮತ್ತಾರೂ ಮೈಲಿಗೆ ಮಾಡಲಾರರು’ ಎಂಬ ಸಂದೇಶ ಕಳುಹಿಸಿ ಆ ಮೊಬೈಲ್ ಅನ್ನು ಕೋಪದಿಂದ ಚೂರು ಚೂರು ಮಾಡಿಬಿಟ್ಟಳು.

ಕಾವ್ಯಳ ಮದುವೆಯ ನೆಪದಿಂದ ಶಾಂತಮ್ಮ ಮತ್ತು ಲಕ್ಷ್ಮೀಶಭಟ್ಟರು ಸ್ವಲ್ಪ ಸಮಾಧಾನ ಚಿತ್ತರಾದಂತೆ ಕಂಡು ಬಂದರು. ಮದುವೆ ಸಮೀಪಿಸುತ್ತಿದ್ದಂತೆ ಲವಲವಿಕೆ ಪಡೆದುಕೊಂಡರು. ತನ್ನ ಕೋಣೆಯಲ್ಲಿ ಒಬ್ಬಳೇ ಮಲಗುವ ಕಾವ್ಯಳ ಮೇಲೆ ತಿರುಗುವ ಫ್ಯಾನ್ ಅನೇಕ ಬಾರಿ ಅವಳನ್ನು ಕರೆದಂತೆ ಭಾಸವಾದರೂ ಅಪ್ಪ ಅಮ್ಮಳನ್ನು ನೆನಪಿಸಿಕೊಂಡು ಮೌನವಾಗಿಯೇ ಉಳಿದುಬಿಟ್ಟಳು. ತಪ್ಪಾಗಿ ಹುಟ್ಟಿಬಿಟ್ಟಿದ್ದೇನೆ, ಎಲ್ಲೋ ಸೇರಿಕೊಂಡು ತಪ್ಪಾಗಿಯೇ ಸತ್ತುಬಿಡೋಣವೆಂದು ನಿರ್ಧರಿಸಿಕೊಂಡಳು.

ಮದುವೆಯ ಹಿಂದಿನ ದಿನ ಲಕ್ಷ್ಮೀಶಭಟ್ಟರು ಕಾವ್ಯಳ ಕೊಠಡಿಗೆ ಬಂದವರೇ ಮಗಳನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಕೀರ್ತಿಯನ್ನು ನೆನಪಿಸಿಕೊಂಡು ಅತ್ತುಬಿಟ್ಟರು. ‘ನಿನಗೆ ಗೊತ್ತು ಮಾಡಿರುವ ಗಂಡಿಗಿಂತಲೂ ಶ್ರೀಮಂತನಾದ ಹುಡುಗನನ್ನು ಅವಳಿಗೆ ನಾನು ಹುಡುಕುತ್ತಿದ್ದೆ, ಆಕೆ ಈ ರೀತಿಯಾಗಿ ಮಾಡಬಾರದಾಗಿತ್ತು’ ಎಂದರು. ಕಾವ್ಯ ಏನೂ ಮಾತನಾಡಲಿಲ್ಲ. ಮೌನದುಸಿರು ಅವಳನ್ನು ಸುಡುತ್ತಿತ್ತು.
‘ನನ್ನ ಮೇಲೆ ಕೋಪವೇ ನಿನಗೆ? ಇತ್ತೀಚೆಗೆ ನಾನು ಏನೇ ಕೇಳಿದರೂ ತಲೆಯಾಡಿಸುವುದು ಬಿಟ್ಟು ಬೇರೇನೂ ಮಾತನಾಡುತ್ತಿಲ್ಲ, ನನ್ನನ್ನು ಮತ್ತು ಅಮ್ಮನನ್ನು ಆಡಿಕೊಂಡು ಹೊಟ್ಟೆ ಉರಿಸುತ್ತಿದ್ದು ಮರೆತುಬಿಟ್ಟೆಯ ಕಂದ’ ಎಂದರು ಲಕ್ಷ್ಮೀಶಭಟ್ಟರು. ಅಪ್ಪನ ಕಣ್ಣನ್ನು ಗಾಢವಾಗಿ ದಿಟ್ಟಿಸಿದ ಕಾವ್ಯ ಮತ್ತೆ ಅದೇ ತೆರನಾಗಿ ಏನೂ ಇಲ್ಲವೆಂಬಂತೆ ತಲೆಯಾಡಿಸಿದಳು. ಮುಖದಲ್ಲಿ ಕಂಡೂ ಕಾಣದಂತೆ ಅಳುವೊಂದು ಆವರಿಸಿತ್ತು.

ನಾಲ್ಕು ಎಕರೆಯಗಲದ ಜಮೀನಿನಲ್ಲಿ ಹರಡಿಕೊಂಡ ಕಲ್ಯಾಣ ಮಂಟಪ. ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಿತ್ತು. ನೂರಾರು ಕಾರುಗಳು ಜಮಾಯಿಸಿದ್ದವು. ಆಗರ್ಭ ಶ್ರೀಮಂತರಿಂದ ಕಲ್ಯಾಣ ಮಂಟಪ ತುಳುಕಿತ್ತು. ಪ್ರತಿಷ್ಠಿತ ವ್ಯಕ್ತಿಗಳ ದಿಂಡೇ ಅಲ್ಲಿ ನೆರೆದಿತ್ತು. ಪಟ್ಟಣವೆಲ್ಲಾ ಸದ್ದು ಮಾಡಿದ್ದ ಮದುವೆಯನ್ನು ಚಿತ್ರಿಕರಿಸಿಕೊಳ್ಳಲು ಮಾಧ್ಯಮ ವರ್ಗ ನೆರೆದಿತ್ತು. ಅಷ್ಟು ದೊಡ್ಡ ಕಲ್ಯಾಣ ಮಂಟಪದ ಯಾವುದೋ ಒಂದು ಕೊಠಡಿಯಲ್ಲಿ ಕಾವ್ಯ ಕುಳಿತಿದ್ದಳು. ಅಂದ ಚಂದದ ನೂರಾರು ಸೀರೆಗಳು ಅವಳ ಮೈಗೆ ಒಗ್ಗಲಿಲ್ಲ. ಎದೆ ಮೇಲೆ ಹಾಸಿದ್ದ ರಾಶಿ ರಾಶಿ ಒಡವೆಗಳು ಮಿರಿ ಮಿರಿ ಮಿಂಚಲಿಲ್ಲ. ಶಾಂತಮ್ಮ ಕಾವ್ಯಳ ತಲೆ ಮೇಲಕ್ಕೆತ್ತಿದರು. ಕಣ್ಣುಗಳು ನೀರಿನಿಂದ ತುಂಬಿಹೋಗಿತ್ತು. ‘ಯಾಕಮ್ಮಾ?’ ಎಂದರು ಶಾಂತಮ್ಮ. ಕಾವ್ಯ ಎಂದಿನಂತೆ ಒಂದು ಪದವೂ ಮಾತನಾಡದೆ ಏನೂ ಎಲ್ಲ ಎಂಬಂತೆ ತಲೆ ಆಡಿಸಿದಳು. ಹೆಣ್ಣನ್ನು ಕರೆದುಕೊಂಡು ಬನ್ನಿ ಎಂಬ ಪುರೋಹಿತರ ಮಾತು ಕೇಳಿದ್ದೆ ಕೆಲ ಹೆಂಗಸರು ಕಾವ್ಯಳ ರಟ್ಟೆ ಹಿಡಿದು ಜೋಪಾನವಾಗಿ ಮಂಟಪದೆಡೆಗೆ ಕರೆದುಕೊಂಡು ಹೋದರು. ಅಷ್ಟಕ್ಕೇ ಅಲ್ಲಿಗೆ ಬಂದ ಲಕ್ಷ್ಮೀಶಭಟ್ಟರು ಕಾವ್ಯಳ ಗಲ್ಲವೆತ್ತಿ ನೋಡಿದೊಡನೆ ಆಶ್ಚರ್ಯವಾಯಿತು. ಅವಳ ಮೊಗದಲ್ಲೇನೋ ಕೊರತೆಯಿತ್ತು, ಕಣ್ಣೀರು ತುಂಬಿಕೊಂಡಿತ್ತು. ಅಪ್ಪನನ್ನು ತಬ್ಬಿಕೊಂಡವಳೇ ಬಿಕ್ಕಳಿಸಿ ಬಿಕ್ಕಳಿಸಿ ಅತ್ತುಬಿಟ್ಟಳು. ಮುಹೂರ್ತಕ್ಕೆ ಸಮಯವಾಗುತ್ತಿದೆ ಎಂಬ ಕೂಗು ಕೇಳಿದ್ದೆ ಕಾವ್ಯಳನ್ನು ಕಲ್ಯಾಣ ಮಂಟಪಕ್ಕೆ ಕರೆದುಕೊಂಡು ಹೋಗಲಾಯಿತು.

ಕೊನೆಗೂ ತಾಳಿ ಕಟ್ಟುವ ಸಮಯ ಸಮೀಪಿಸಿತು. ದೂರದಿಂದಲೇ ಮಗಳನ್ನು ಗಮನಿಸುತ್ತಿದ್ದ ಲಕ್ಷ್ಮೀಶಭಟ್ಟರಿಗೆ ಅಳು ಉಕ್ಕಿಬಂತು. ಕಾವ್ಯ ಬಗ್ಗಿಸಿದ ತಲೆಯನ್ನು ಮೇಲಕ್ಕೆತ್ತಿದ್ದು ಕಾಣಲಿಲ್ಲ. ಸರಸರನೆ ಕಾವ್ಯಳ ಬಳಿ ಹೋದ ಲಕ್ಷ್ಮೀಶಭಟ್ಟರು ಆಕೆಯ ಮುಖವೆತ್ತಿ ನೋಡಿದರು. ತುಟಿಗಳು ಅದುರುತ್ತಿದ್ದವು, ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ತಾನು ಸಾಕಿ ಬೆಳೆಸಿದ, ತನ್ನ ಜೀವವಾದ ಮಗಳ ಮುಖದಲ್ಲಿ ಲಕ್ಷ್ಮೀಶಭಟ್ಟರ ಹೃದಯವನ್ನು ಕೊಯ್ಯುವಂತಹ ತೀಕ್ಷ್ಣ ನೋವಿತ್ತು. ಖಡ್ಕಕ್ಕಿಂತಲೂ ಹರಿತವಾದ ಅವಳ ಮೌನ ಎದೆಯನ್ನು ಚುಚ್ಚಿತು. ಕಣ್ಣೀರು ಧಾರಾಕಾರವಾಗಿ ಹರಿಯಿತು.

ಕಾವ್ಯಳ ಕೈಯನ್ನು ಹಿಡಿದುಕೊಂಡ ಲಕ್ಷ್ಮೀಶಭಟ್ಟರು ‘ಒಬ್ಬಳು ಮಗಳನ್ನು ಕಳೆದುಕೊಂಡಿದ್ದೇನೆ, ಮತ್ತೊಬ್ಬಳು ಮಗಳನ್ನು ಕಳೆದುಕೊಳ್ಳುವುದಿಲ್ಲ, ನನಗೀ ಮದುವೆ ಇಷ್ಟವಿಲ್ಲ, ನನ್ನ ಮಗಳ ನಗುವಿಗೋಸ್ಕರ ಕಾಯುತ್ತೇನೆ ಎಂದವರೇ ಕಾವ್ಯಳನ್ನು ಕರೆದುಕೊಂಡು ಕಲ್ಯಾಣಮಂಟಪದಿಂದ ಹೊರಗೆ ನಡೆದುಬಿಟ್ಟರು.

Thursday, 29 November 2012

ಮುಹೂರ್ತ...

‘ನಕ್ಕಹಾಗೆ ನಟಿಸಬೇಡ, ನಕ್ಕುಬಿಡು ಸುಮ್ಮನೆ
ಬೆಳಕಾಗಲಿ ತಂಪಾಗಲಿ ನಿನ್ನೊಲುಮೆ ಅರಮನೆ

ಈ ಹಾಡು ಕೇಳುತ್ತಿದ್ದಂತೆ ಆತನಿಗೆ ಮನಸ್ಸಿನಲ್ಲಿ ಒಂದು ರೀತಿ ನೋವು ಮತ್ತು ಖುಷಿಯಾಯಿತು.
ಮಧುರ ಯಾತನೆ ಎಂಬಂತೆ.

ಆತ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗಿ, ಆಕೆ ಇನ್ನೂ ಓದುತ್ತಿದ್ದಳು.
ಇಬ್ಬರೂ ಪ್ರೇಮಿಸಿದರು, ಈತನ ಗುಣ ಪ್ರತಿಭೆ ಆಕೆಯನ್ನು ಆಕರ್ಷಿಸಿತು.
ಆಕೆಯ ಒಳ್ಳೆಯತನ ಸೌಂದರ್ಯಕ್ಕೆ ಈತ ಸೋತ. ಪ್ರಪಂಚವನ್ನೇ ಗೆಲ್ಲಬಲ್ಲಂತ ಪ್ರತಿಭಾವಂತ.
ಪ್ರಾರಂಭದಲ್ಲಿ ಒಬ್ಬರಿಗೊಬ್ಬರು ಹೂವು ಮಕರಂದದಂತೆ ಅನ್ಯೋನ್ಯವಾಗಿದ್ದರು.
ಮುಂದುವರೆದಂತೆ ಒತ್ತಡ ಹೆಚ್ಚಾಯಿತು. ಪ್ರೀತಿ ಭಾರವಾಯಿತು.
ಒಳ್ಳೆಯ ಉದ್ಯೋಗದಲ್ಲಿದ್ದ ಆತನಿಗೆ ಸಂಬಂಧಿಕರಿಂದ ಮದುವೆಯಾಗಲು ಒತ್ತಡ ಹೆಚ್ಚಾಯಿತು.
ಒತ್ತಡಕ್ಕೆ ಸಿಲುಕಿಕೊಂಡ ಆತ ದಿಕ್ಕು ತೋಚದಾದ.
ಎಲ್ಲಾ ವಿಚಾರವನ್ನು ಮನೆಗೆ ಮುಟ್ಟಿಸಿ ಒಪ್ಪಿಗೆ ಪಡೆದುಕೊಳ್ಳಲು ವಿಫಲಳಾದ ಆಕೆಯೂ ಗೊಂದಲಕ್ಕೆ ಬಿದ್ದಳು.
ಇಬ್ಬರ ನಡುವೆ ಪ್ರೀತಿಯೆಂಬುದು ಪವಿತ್ರವಾಗಿದ್ದರೂ ಈ ಎಲ್ಲಾ ಗೊಂದಲದಿಂದ ಆಕೆಗೆ ತನ್ನ ಓದು ಸರಾಗಗೊಳಿಸಿಕೊಳ್ಳುವುದು ಕಷ್ಟವಾಯಿತು.
ಆತ ಗೊಂದಲಕ್ಕೊಳಗಾದವನೇ ತನ್ನ ಕೆಲಸ ಬಿಟ್ಟುಬಿಟ್ಟ.
ಇದ್ದ ಅಲ್ಪ ಸ್ವಲ್ಪ ದುಡ್ಡನ್ನೂ ಕಳೆದುಕೊಂಡ. ತನ್ನ ಪ್ರತಿಭೆ ಕುಂಟಿತಗೊಂಡಿತೇ ಹೊರತು, ಬೆಳೆಸಿಕೊಳ್ಳಲಾಗಲಿಲ್ಲ.
ಕಣ್ಣಮುಂದೆಯೇ ಎಲ್ಲವೂ ಕೈಜಾರಿ ಹೋಯಿತು.

ಆಕೆಯೂ ಕಷ್ಟಕ್ಕೆ ಬಿದ್ದಳು, ಪ್ರತಿಯೊಂದಕ್ಕೂ ಆತನನ್ನೇ ನೆಚ್ಚಿಕೊಳ್ಳುತ್ತಿದ್ದವಳಿಗೆ ಈಗ ಆತ ತನ್ನಿಂದ ದೂರವಾಗುತ್ತಿದ್ದಾನೆ ಎಂದುಕೊಂಡಳು.
ಮತ್ತೂ ಗೊಂದಲಕ್ಕೆ ಬಿದ್ದಳು. ಮನೆಯವರ ಕಣ್ಗಾವಲು ಹೆಚ್ಚಾಯಿತು.
ಒಂದು ದಿನ ಇದೇ ವಿಚಾರವಾಗಿ ಇಬ್ಬರಿಗೂ ಮಾತಿಗೆ ಮಾತು ನಡೆಯಿತು.
‘ನಾನು ನಿನ್ನ ಸಹವಾಸದಿಂದ ಸಂಪೂರ್ಣವಾಗಿ ಹಾಳಾದೆ, ನಮ್ಮ ಕುಟುಂಬ ನನ್ನನ್ನೇ ನಂಬಿ ಕೂತಿದೆ’ ಎಂದ ಆತ.
‘ನೀನೊಬ್ಬ ನನ್ನ ಜೀವನದಲ್ಲಿ ಬರದಿದ್ದರೆ ನಾನು ಎಷ್ಟು ಸುಖವಾಗಿರುತ್ತಿದ್ದೆ, ಓದಲೂ ಆಗದೆ, ಬದುಕಲೂ ಆಗದೆ ಸಾಯುತ್ತಿದ್ದೇನೆ, ಒಬ್ಬಳೇ ಮಗಳಾದ ನನ್ನನ್ನೂ ನನ್ನ ತಂದೆ ತಾಯಿ ಕಾದು ಕುಳಿತಿದ್ದಾರೆ’ ಎಂದಳಾಕೆ.
‘ಇಷ್ಟೆಲ್ಲಾ ಅಪವಾದ ಕೇಳಿಕೊಂಡು ನಿನ್ನೊಡನೆ ನಾನಿರಲಾರೆ, ನಿಮ್ಮ ತಂದೆ ತಾಯಿ ನನಗಿಂತಲೂ ಒಳ್ಳೆಯ ಹುಡುಗನನ್ನು ನಿನಗೆ ಹುಡುಕಬಲ್ಲರು, ಅವನನ್ನೇ ಮದುವೆಯಾಗಿ ಸುಖವಾಗಿರು' ಎಂದು ಆತ ರೇಗಿಕೊಂಡ.
‘ನಿನಗೇನು ಕಡಿಮೆ ಹೇಳು, ನಿನ್ನ ಸಂಬಂಧಿಕರೆಲ್ಲಾ ನಿನಗೆ ಹೆಣ್ಣು ನೀಡಿ ಪಾದ ತೊಳೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ, ನನಗಿಂತ ಒಳ್ಳೆಯ ಹುಡುಗಿ ಸಿಗಬಲ್ಲಳು, ಮದುವೆಯಾಗಿ ಸುಖದಿಂದಿರು’ ಎಂದವಳೇ ಅಲ್ಲಿಂದ ಹೊರಟುಬಿಟ್ಟಳು.
ಇಬ್ಬರೂ ತಮ್ಮ ತಮ್ಮ ಮೊಬೈಲ್ ಸಂಖ್ಯೆ ಬದಲಿಸಿಕೊಂಡರು.
ಆತನಿಗೆ ಮದುವೆಯಾಯಿತು ಎಂಬ ಸುದ್ದಿಯನ್ನು ಆತನ ಗೆಳೆಯನಿಂದ ಕೇಳಲ್ಪಟ್ಟಳು. ಆಕೆಗೂ ಮದುವೆಯಾಯಿತು ಎಂಬ ಸುದ್ದಿಯನ್ನು ಆಕೆಯ ಗೆಳತಿ ಆತನಿಗಾಗಿ ಹೊತ್ತು ತಂದಿದ್ದಳು.

ಆತ ಛಲದಿಂದ ಬದುಕಿದ, ವಿಶ್ವಮಟ್ಟದ ಹೆಸರು ಮಾಡಿದ, ತನ್ನಭಿಲಾಶೆ ಈಡೇರಿಸಿಕೊಂಡ.
ಆಕೆಯೂ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗಕ್ಕೆ ಸೇರಿಕೊಂಡವಳೇ ತಂದೆ ತಾಯಿಯನ್ನು ಅಕ್ಕರೆಯಿಂದ ಸಾಕಿಕೊಂಡಳು.
ಹೀಗೆ, ಒಮ್ಮೆ ಆತ ಆಕೆಯ ಹೊಸ ನಂಬರ್ ಪಡೆದುಕೊಂಡವನೇ ಫೋನಾಯಿಸಿದ.
ಆಕೆ ತುಂಬಾ ಖುಷಿಯಿಂದಲೇ ಮಾತನಾಡಿದಳು.
ಎಂಟು ಮತ್ತು ಒಂಬತ್ತು ವರ್ಷದ ಮಕ್ಕಳನ್ನು ಪರಿಚಯಿಸಿ ಮಾತನಾಡಿಸಿ, ತನ್ನ ಕಂದಮ್ಮಗಳು ಎಂದಳು.
ನನ್ನ ರಕ್ತವನ್ನು ಹಂಚಿಕೊಂಡು ಹುಟ್ಟಿ ಬರಬೇಕಾಗಿದ್ದ ಮಕ್ಕಳ ಮಾತು ಕೇಳಿ ಆತ ಮರುಗಿದ, ಆತನೂ ಒಂದೆರಡು ಮಕ್ಕಳನ್ನು ಆಕೆಗೆ ಮಾತನಾಡಿಸಿ ನಿನ್ನ ಹೊಟ್ಟೆಯಲ್ಲಿ ಹುಟ್ಟಬೇಕಾಗಿತ್ತು ಬದಲಾಗಿ ಇವಳ ಹೊಟ್ಟೆಯಲ್ಲಿ ಹುಟ್ಟಿವೆ ಎಂದ.
ತಾನೇ ಹೆರಬೇಕಾಗಿದ್ದ ಮಕ್ಕಳೊಡನೆ ಮಾತನಾಡಿದ ಆಕೆ ತನಗರಿಯದಂತೆ ಕಣ್ಣೀರು ಸುರಿಸಿದಳು.

‘ನೀನು ಅಂದುಕೊಂಡಂತೆ ಸಾಧಿಸಿ ವಿಶ್ವಮಟ್ಟಕ್ಕೆ ಬೆಳೆದದ್ದು ನನಗೆ ಖುಷಿಯಾಯಿತು, ನನ್ನೊಡನೆ ಕುಳಿತಿದ್ದರೆ ಬರಿ ಕಷ್ಟ ಗೊಂದಲದಲ್ಲಿಯೇ ಸಾಯಬೇಕಾಗಿರುತ್ತಿತ್ತು’ ಎಂದಳು ಆಕೆ.
‘ಇರಲಿ ಬಿಡು, ನೀನೂ ಅಷ್ಟೆ, ಓದಿ ಬೆಳೆದು ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ಹೆತ್ತವರನ್ನು ತಣ್ಣಗೆ ಇಟ್ಟಿದ್ದೀಯ, ನನ್ನ ಜೊತೆ ಒಡನಾಟ ಮುಂದುವರೆಸಿದ್ದರೆ ಇವೆಲ್ಲಾ ಸಾಧ್ಯವಾಗುತ್ತಿರಲಿಲ್ಲ’ ಎಂದ ಆತ.
‘ಒಮ್ಮೆ ನಿನ್ನನ್ನು ನೋಡಬೇಕಲ್ಲ’ ಎಂದಳಾಕೆ.
‘ನಾನೂ ಕೂಡ ನಿನ್ನನ್ನು ನೋಡಬೇಕು’ ಎಂದನಾತ.
‘ನಿನ್ನ ಹೆಂಡತಿ ಮಕ್ಕಳೊಂದಿಗೆ ಬಾ’ ಎಂದಳು.
‘ನಿನ್ನ ಗಂಡ ಮಕ್ಕಳನ್ನು ಕರೆದುಕೊಂಡು ಬಂದರೆ ಮಾತ್ರ’ ಎಂದನಾತ.

ನಿಗದಿ ಪಡಿಸಿಕೊಂಡಿದ್ದ ಸ್ಥಳಕ್ಕೆ ಬಂದರು. ಆಕೆಯನ್ನು ನೋಡಿದ್ದೇ ಆತ ಗಾಬರಿಯಾದ.
ಕುತ್ತಿಗೆಯಲ್ಲಿ ತಾಳಿ, ಕಾಲಿನ ಬೆರಳಿನಲ್ಲಿ ಉಂಗುರವಿರಲಿಲ್ಲ.
ಒಬ್ಬಳೇ ಬಂದಿದ್ದಳು.
‘ನಿನ್ನ ಗಂಡ ಮಕ್ಕಳೆಲ್ಲಿ?’ ಎಂದು ಕೇಳಿದನಾತ.
‘ನಾನು ಮದುವೆ ಮಾಡಿಕೊಂಡಿಲ್ಲ' ಎಂದಳಾಕೆ
'ನೀನೇಕೆ ಒಂಟಿಯಾಗಿ ಬಂದಿರುವುದು' ಗಾಬರಿಯಿಂದ ಕೇಳಿದಳಾಕೆ.
‘ನಾನೂ ಮದುವೆಯಾಗಿಲ್ಲ’ ಎಂದನಾತ.
ಆಕೆಯ ಕಣ್ಣಿನಲ್ಲಿ ನೀರು ಜಿನುಗಿತು. ಆತನನ್ನು ಗಟ್ಟಿಯಾಗಿ ತಬ್ಬಿಕೊಂಡಳು.
ಕೂಡಲೇ ಆತ ಅಮ್ಮನಿಗೆ ಫೋನಾಯಿಸಿ ‘ಅಮ್ಮ, ಇನ್ನುಮುಂದೆ ಕೊರಗಬೇಡ, ಮದುವೆಯಾಗುತ್ತಿದ್ದೇನೆ’ ಎಂದ.

ಇಬ್ಬರೂ ಸೋತು ಗೆದ್ದು, ಈಗ ಗೆದ್ದು ಸೋತರು..!

Saturday, 10 November 2012

ದೇಹ ಸಿರಿ..

ನಾಳೆ ರಜೆ ಕೊಡಲಾಗುವುದಿಲ್ಲವೆಂದು ಚೀರಿಕೊಂಡ ಬಾಸಿನ ಮಾತನ್ನೂ ಧಿಕ್ಕರಿಸಿ, ಮರೆತು, ಖುಷಿಯಿಂದ ಓಡೋಡಿ ಮನೆಗೆ ಬಂದೆ. ಹೆಂಡತಿ ತುಸು ನಾಚಿಕೊಂಡಳು. ಬಾಣಂತಿ ಕೊಠಡಿಗೆ ಕಾಲಿಡುವಷ್ಟರಲ್ಲಿಯೇ 'ಕಾಲು ತೊಳೆಯದೇ ಒಳಗೆ ಬರಬೇಡಿ ಬಾವ, ಅದೆಷ್ಟು ಭೂತ ಚೇಷ್ಟೆಗಳು ಆ ಪಾದಕ್ಕಂಟಿರುವವೋ?' ಎಂದಳು ನಾದಿನಿ.
'ಅದೇನು ಜನಗಳೋ, ನಿಮ್ಮ ಮನೆ ಭೂತಾಯಿಯ ಮೇಲೇ ಇಲ್ಲ, ಆಕಾಶದಲ್ಲಿ ಕಿರುಗುಟ್ಟುತ್ತಿದ್ದೀರಿ, ನೀನು, ನಿಮ್ಮಕ್ಕ ಇರುವಾಗ ಈ ಮನೆಗೆ ದೆವ್ವ ಬರುವುದುಂಟೆ? ಅದೇನು ಕಟ್ಟುನಿಟ್ಟೋ' ಎಂದೆ.
'ರೀ...' ಎಂದಳು ಅವಳು
'ಗೊತ್ತಾಯ್ತು ಕಣೆ...' ಎಂದವನೇ ಕಾಲು ತೊಳೆದುಕೊಂಡೆ. ನಾದಿನಿ ಒಳಗೊಳಗೆ ನಕ್ಕಳು.

ಒಳಗೆ ಓಡೋಡಿ ಬಂದವನೇ ನನ್ನ ಮಗುವನ್ನು ನೋಡಿ ಒಮ್ಮೆಲೇ ಪುಳಕಗೊಂಡೆ. ಮೈ ಕೈ ಸವರಿದೆ. ಒಮ್ಮೆಲೆ ನನ್ನೊಳಗೆ ನನ್ನದೇ ಜೀವ ತುಂಬಿಕೊಂಡು, ತವಕಗೊಂಡು, ಅದರ ಸ್ಪರ್ಶಕ್ಕೆ ಪುಳಕಿತಗೊಳ್ಳುವುದರೊಂದಿಗೆ ಬಾಂಧವ್ಯ ಭಾವ ಲೋಕದಲ್ಲೊಮ್ಮೆ ಅನುರಕ್ತಗೊಂಡು ತೇಲಾಡಿದೆ.

ನನ್ನಾಕೆ ಟೀ ಮಾಡಿ ತರಲು ಹೊರ ಹೋದಳು. ಪಿಣಿ ಪಿಣಿ ಕಣ್ಣು ಬಿಟ್ಟ ಕಂದಮ್ಮನನ್ನು ನೋಡಿದೆ. ಇದೆಲ್ಲಿತ್ತಪ್ಪ ಇಷ್ಟು ದಿನ ಎಂದುಕೊಂಡೆ? ಇಂದು ಕಂಡು ನನ್ನ ಮನಸ್ಸನ್ನರಳಿಸಿದೆ ಎಂದು ಕೆನ್ನೆಗೆ ತೃಪ್ತಿಯಾಗುವವರೆವಿಗೂ ಮುತ್ತಿಕ್ಕಿದೆ. ಮೂಗು ಮಾತ್ರ ಸತ್ತುಹೋದ ನಮ್ಮಪ್ಪನಂತೇ ಇದೆ. ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿತು. ಪ್ರಯಾಣ ಮಾಡಿಬಂದು ಸುಸ್ತಾಗಿರುವವನು ನಾನಲ್ಲವೇ? ನಾನತ್ತರೆ ಅದಕ್ಕೊಂದು ಕಾರಣವಿದೆ. ಈ ಪಾಪುವೇಕೆ ಈ ರೀತಿ ಚೀರುತ್ತಿದೆ, ಇದು ಇಲ್ಲಿಗೆ ಸರಾಗವಾಗಿ ಬಂತೇ, ಇಲ್ಲ ಸೋತು ಸೋತು ಗೆದ್ದು ಬಂತೆ ಎಂದುಕೊಳ್ಳುವಷ್ಟರಲ್ಲಿ, ಮುಂದೆ ಬಿದ್ದಿದ್ದ ಪುಸ್ತಕದಲ್ಲಿ ಈ ಸಾಲುಗಳು ಕಾಣುತ್ತಿದ್ದವು

ಕತ್ತಲ ಕೋಟೆಯಲ್ಲಿ ಯುದ್ಧ
ಕೋಟಿ ಕೋಟಿ ಜನ
ಮುತ್ತಲು
ಒಬ್ಬ ಗೆದ್ದು ಬಂದ ಧೀರ
ಸುತ್ತ ಕತ್ತಲು
ಅಲ್ಲೊಬ್ಬಳಿದ್ದಳು ನೀರೆ
ಕಾದು ಕೂಡಲು
ಅಂಡಾಣು ವೀರ್ಯಾಣು
ತಬ್ಬಲು
ಹೆತ್ತವರು ಮೈ ಹಬ್ಬಲು

ಅದೊಂದು ದ್ರಾಕ್ಷಿ ಮುದ್ದೆ
ಬೆಳೆದು ಚದುರೆ ನಾನಿದ್ದೆ
ಹೃದಯ ಕಪಾಟು
ತರೆದು
ನೆತ್ತರ ಸೇದದರೊಳಗೆ
ನಗು ಅಳು ಸುರಿದು
ಏನೋ ನಿಂತಿದೆ ನೋಡು
ಗೌಣವಲ್ಲ ಹಿಡಿ ಅದರ ಜಾಡು

ಓಹೋ, ಈತ ಯುದ್ಧ ಮಾಡಿ ಗೆದ್ದು ಬಂದಿರುವ ಧೀರನೇ ಸರಿ. ನಾನು, ಹೆಂಡತಿ ಮೈ ಮರೆತಿದ್ದಾಗ ಯಾರೋ ಸ್ವಯಂವರ ಏರ್ಪಡಿಸಿದ್ದಾರೆ.
ಅಷ್ಟಕ್ಕೆ, ಮಗು ಮೃದುವಾಗಿ ಒದೆಯಿತು. ಒದೆಸಿಕೊಳ್ಳುವುದರಲ್ಲೂ ಇದೆಂಥ ಸುಖವಿದೆ ಎಂದು ಖುಷಿಯಾಯಿತು. ನೋವಾಯಿತೇನೋ ಎಂದು ಅದರ ಮೃದು ಪಾದವನ್ನು ಅಷ್ಟೇ ಮೃದುವಾಗಿ ಒತ್ತಿದೆ. ಕೈಗೆ ಹೆಬ್ಬೆರಳು ಸಿಕ್ಕಿತು. ಆಹಾ! ಈ ಹೆಬ್ಬೆರಳು ನೋಡಿದರೆ ಸ್ವಚ್ಚ ಮತ್ತು ನುಣುಪು ಗೋಡೆಗೆ ಬಡಿದ ಬೆಣೆಯಂತಿದೆ, ಇದೇನಿದು ಎಕ್ಸ್ಟ್ರಾ ಫಿಟ್ಟಿಂಗು? ನನ್ನ ಹೆಬ್ಬೆಟ್ಟು ಆ ಹೆಬ್ಬೆರಳು ಹಿಡಿದುಕೊಂಡಿದ್ದನ್ನು ಮರೆತು ಯೋಚಿಸಿದಾಗ

ಜಗದಲ್ಲಿ ನೀ ಜಂಗಮ
ಚಲಿಸು ಚಲಿಸು
ನಿಲ್ಲದೆಲ್ಲವ ಆವರಿಸು
ಚಿಂತೆ ಬೇಡ
ಮುಂದಿನ ದಾರಿ
ನೋಡ
ನಿನಗೇಕೀ
ದೇಹದ ತೂಕ
ಹೊರುವುದು
ಹೆಬ್ಬೆರಳ ಕಾಯಕ

ಹೆಬ್ಬೆರಳಿಗೆ ದೇಹ ಕೆತ್ತನೆಯೋ
ದೇಹಕ್ಕೆ ಹಬ್ಬೆರಳೋ
ಯೋಚಿಸಿ ಒಮ್ಮೆ ನಕ್ಕುಬಿಡು

ಕಳೆದ ತೇದಿಯಲ್ಲಿ ಹೆಬ್ಬೆರಳ ಮೇಲೆ ಲಾರಿ ಹರಿದು, ಕೊನೆಗೆ ಹೆಬ್ಬೆರಳು ತೆಗೆಸಿಕೊಂಡು, ನಡೆದರೆ ಕೆಳಗೆ ಬೀಳುವ ತಮ್ಮನ ನೆನಪಾಗಿ ಬೇಸರಗೊಂಡೆ. ಹೆಬ್ಬೆರಳೇ ನಿನೆಲ್ಲರಲ್ಲೂ ಇರಬೇಕೆಂದು ಕೈ ಮುಗಿದು ಬೇಡಿಕೊಂಡೆ. ಅದಿರಲಿ, ಹೆಬ್ಬೆರಳ ಜೊತೆಗೆ ಇದೇನಿದು ನಾಲ್ಕು ಸಣ್ಣ ಬೆರಳುಗಳು. ಛೆ! ಇವು ಬೇಡವಾಗಿತ್ತಲ್ಲವೇ? ಬೇಡವೆಂದರೆ ಈಗೇನು ಕತ್ತರಿಸಿದರೆ ಈ ಕಂದಮ್ಮ ಸುಮ್ಮನಿರುವುದೇ? ಹೊತ್ತು ತಂದಿದೆ, ಹೊತ್ತುಕೊಂಡು ಹೋಗಲಿ ಎಂದುಕೊಳ್ಳುವಷ್ಟರಲ್ಲಿ ಮನೆಯ ಹೊರಗೆ ಏನೋ 'ಧಡಾರ್' ಎಂಬ ಶಬ್ದ ಕೇಳಿಸಿತು. ಗಾಬರಿಗೊಂಡು 'ಏನಾಯಿತೂ' ಎಂದು ಚೀರಿ ಬಂದು ನೋಡಿದರೆ, ಮನೆ ಮುಂದಿನ ಚಪ್ಪರ ಗಾಳಿಗೆ ನಿಲ್ಲದೆ ಉದುರಿ ಬಿದ್ದಿದೆ.
'ಅಪ್ಪನಿಗೆ ಹೇಳಿದ್ದೆ, ಇನ್ನೊಂದೆರಡು ಕಂಬವಾದರೂ ಸಿಕ್ಕಿಸು ಎಂದು' ಎಂದು ಹೆಂಡತಿ ಗೊಣಗಿಕೊಂಡಳು. ಏನೋ ಹೊಳೆದಂತಾಗಿ, ಹೆಂಡತಿಗೊಂದು ಕವಿತೆ ಕಟ್ಟಿ ಮಗುವಿನ ಬೆರಳಿಗರ್ಪಿಸಿದೆ.

ಚಪ್ಪರ ಕಟ್ಟಿದ ಅಪ್ಪ
ಕಂಬವೊಂದೆ
ಬೆಪ್ಪ
ಮತ್ತೆರಡೂರುಗೋಲ
ನೆಟ್ಟಿದ್ದರೆ
ತಡೆಯಬಹುದಿತ್ತೀ ತಪ್ಪ

ಹೆಬ್ಬೆರಳ ನೋವ
ನುಂಗಲೆಂದು ಸಾವ
ಕಿರುಬೆರಳ
ಜೊತೆಗಾರರು
ದಾರಿಯಲ್ಲಿ ಕಾಲಿಗಂಬು
ಸಿಗದಿರೆ ಸಾಕು
ಬೆಳೆದುಗುರದರ ಚಾಕು

ಮಗು ನಗುತ್ತಿತ್ತು. ನಾನೂ ಮಗುವನ್ನು ನೋಡಿ ನಗುವಾಗ ಅದರ ಕಣ್ಣಲ್ಲಿ ನನ್ನ ಬಿಂಬವೇ ಕಾಣುತ್ತಿತ್ತು. ನಾನು ಮಗುವಾಗಿದ್ದಾಗ ಅಪ್ಪನೂ ಹೀಗೆಯೇ ಭಾವಿಸಿರಬಹುದು. ನಾನು ಹೇಗೆ ಮೂಗು ಅವನಂತೆಯೇ ಇದೆ ಎಂದುಕೊಂಡನೋ ಹಾಗೆ ಅವನೂ ನನ್ನ ಮೂಗನ್ನು ನೋಡಿ ಅಜ್ಜನನ್ನು ನೆನಪಿಸಿಕೊಂಡಿರಬಹುದು. 'ಸತ್ತುಹೋದರವರು' ಎನ್ನುವುದೇ ತಪ್ಪೇನೋ? ನಮಗರಿಯದಂತೆ, ಆದರೆ ಕಾಣುವಂತೆ ಈ ರೀತಿಯ ಕುರುಹುಗಳನ್ನು ಬಿಟ್ಟುಹೋಗುವರಲ್ಲವೇ? ಮುಂದಿನ ಬಾಗಿಲಲ್ಲಿ ಮರೆಯಾಗಿ ಹಿತ್ತಲ ಬಾಗಿಲಲ್ಲಿ ಬರುವರಲಲ್ಲವೇ ಎಂದೆನಿಸಿತು.

ಓಹೋ...! ಮಗುವಿನ ಬಾಯಿಯಲ್ಲಿ ಹಲ್ಲೇ ಇಲ್ಲವಲ್ಲ. ನಂತರ ಬೆಳೆಯುವುದಾದರೂ ಇತ್ತು, ಜೊತೆಗೆ ಜೋಡಿಸಿ ಕಳುಹಿಸುವುದಲ್ಲವೇ ಎಂದುಕೊಂಡೆ. 'ಮಗುವಿಗೆ ಹಾಲು ಕುಡಿಸಿದ್ದಿಯೇನೆ?' ಮತ್ತೆ ನಾದಿನಿ ಕೂಗಿಕೊಂಡಳು. 'ಈಗ ತಿಳಿಯಿತು ನೋಡಿ, ಎದೆ ಚೀಪುವ ಪೋರ, ಹಲ್ಲಿದ್ದರೆ ಕಚ್ಚೇ ಬಿಡುತ್ತಾನೆ. ಈ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆಯೇ ಈತ ಇಲ್ಲಿಗೆ ಬಂದಿರಬಹುದು. ಹಾಲ್ದುಟಿಯ ನಗು ನನ್ನಲ್ಲಿ ಖುಷಿ ಉಕ್ಕಿಸಿತು. ಏನೂ ಅರಿಯದ ಈ ಕಂದಮ್ಮಗಳು, ಇನ್ನು ಕೆಲವೇ ದಿನಗಳಲ್ಲಿ ಎಲ್ಲವನ್ನೂ ತಿಳಿದುಕೊಳ್ಳುತ್ತವೆ. ವಿಶಾಲ ಚಿಂತನೆಯ ಸೊಗಡಿನಲ್ಲೇ ಬೆಳೆಯುತ್ತಿದ್ದರೂ ಅಲ್ಪತ್ವಕ್ಕೆ ಹೊಂದಿಕೊಳ್ಳುತ್ತವೆ. ಮನಸ್ಸಿನಲ್ಲಿ ರಾಡಿಯೆದ್ದು ಅರಳಿದ ಜೀವ ಮುರುಟಿಕೊಳ್ಳುತ್ತವೆ ಎಂದುಕೊಂಡು ಆತನೆಡೆಗೆ ತಿರುಗುವಷ್ಟರಲ್ಲಿಯೇ ತನ್ನ ಬೊಚ್ಚುಬಾಯಿ ಬಿಟ್ಟ.

ಮತ್ತೆ ಆತನ ಬಾಯಿ ನೋಡಿದೆ. ಕನ್ನಡಿಯಲ್ಲಿ ನನ್ನ ಮುಖವನ್ನೊಮ್ಮೆ ದುರುಗುಟ್ಟಿಕೊಂಡು ನೋಡುತ್ತ ಹಲ್ಲು ಕಿರಿದೆ. ಬೆನ್ನ ಹಿಂದೆ ಒಂದು ಹಳೆಯ ಮಿಕ್ಸಿ ಕಾಣುತ್ತಿತ್ತು.

ನಾಲಗೆ ರುಚಿ ತೀಟೆಗೆ
ಆಹಾರದ ತುಂಡು
ಜಗಿದ ಹಲ್ಲು
ಕಿಣ್ವ ಸುರಿಸಿದ ಜೊಲ್ಲು
ಜರಿದ ಜಠರ
ಪುಡಿಗೊಂಡ ಅನ್ನ ಸಾಕ್ಷಿ
ಇದಲ್ಲವೇ ಮಿಕ್ಸಿ!

ನೋಡಿ, ಬಾಯಿ ನೋಡಿಕೊಂಡೆ ಮಿಕ್ಸಿ ಕಂಡು ಹಿಡಿದಿದ್ದು. 'ನನ್ನ ಮಗು ನನ್ನ ಪ್ರಾಣ'ವೆಂದೆನಿಸಿತು. ತಬ್ಬಿಕೊಂಡೆ. ಒದ್ದಾಡಿ, ಕೈಕಾಲು ಅದುರಿಸತೊಡಗಿದ. ಮತ್ತೆ ಮಲಗಿಸಿಬಿಟ್ಟೆ ನನ್ನವಳು ಕೂಗಿಕೊಳ್ಳುತ್ತಾಳೆಂಬ ಭ್ರಮೆಯಿಂದ. ಒಹೋ, ನಾನು ಮುಟ್ಟಿದಾಕ್ಷಣ ಒದ್ದಾಡಿಕೊಂಡಿತು, ಅಂದರೆ.... (ಮುಂದುವರೆಸೋಣ... :) )

Thursday, 4 October 2012

ಹಕ್ಕಿಗೊಂದು ಗೂಡು

ಯಾಕೋ ಹೊಟ್ಟೆ ತೊಳಸಿದಂತಾಗಿ ಬಸ್ಸಿನ ಕಿಟಕಿಯನ್ನು ತೆರೆದೆ. ಒಮ್ಮೆಲೇ ಒಳ ನುಗ್ಗಿದ ಗಾಳಿಗೆ ಮೈ ಮನ ಇದ್ದಕ್ಕಿದ್ದಂತೆ ಪುಳಕಗೊಂಡಿತು. ಯಾವಾಗಲೂ ತುಂಬಿಕೊಳ್ಳುವ ಈ ಬಸ್ಸಿನಲ್ಲಿ ನನ್ನೂರಿನಿಂದ ದೂರದ ಪಟ್ಟಣಕ್ಕೆ ನೆಂಟರಿಷ್ಟರ ಮನೆಗೆ ತೆರಳುವಾಗ ಈ ಹಸಿರು ಹೊತ್ತು ಹೆಸರಿಗಲ್ಲದೇ ತಮ್ಮಷ್ಟಕ್ಕೆ ತಾವು ತಂಗಾಳಿಯನ್ನು ಬೀಸುವ ಮರಗಿಡಗಳ ಕಂಡರೆ ಇಂದೇಕೋ ಚೂರು ಹೊಟ್ಟೆ ಕಿಚ್ಚು. ಇದ್ದಕ್ಕಿದ್ದಂತೆ ಏನೋ ಸಿಡಿದಂತಹ ಶಬ್ದ
“ಟೈರ್ ಹೊಡೆದುಹೋಗಿದೆ, ಬದಲಿಸಬೇಕಾಗಿದೆ, ಎಲ್ಲರೂ ಕೆಳಗಿಳಿಯಿರಿ” ಬಸ್ಸಿನ ಕ್ಲೀನರ್ ಕೂಗಿಕೊಂಡ.

ಮತ್ತೆ ಬಂದಾಗ ಗುರುತಿಸಿಕೊಳ್ಳುವುದಕ್ಕಲ್ಲದಿದ್ದರೂ, ಬೇರೆ ಯಾರೋ ಕುಳಿತು ನನ್ನ ಜೊತೆ ಜಗಳವಾಡದಿರಲೆಂದು ತಂದಿದ್ದ ಬ್ಯಾಗನ್ನು ಸೀಟ್ ಮೇಲೆ ಇಟ್ಟು ಹೊರ ನಡೆದೆ. ಡಿಸೆಂಬರ್ ಚಳಿಯ ಜಿಟಿ ಜಿಟಿ ಹನಿಮಳೆ. ಹೊದ್ದುಕೊಂಡಿದ್ದ ಶಾಲಿನೊಳಗೆ ಕೈ ಕಾಲುಗಳು ಮರಗಟ್ಟಿ, ತೊಟ್ಟಿದ್ದ ಬಳೆಗಳು ಘಲಿಸದೇ ನಿಶ್ಶಬ್ದಗೊಂಡಿದ್ದವು. ಅಷ್ಟಗಲಕ್ಕೆ ಹರಡಿಕೊಂಡಿದ್ದ ಅಲ್ಲೇ ಇದ್ದ ಆಲದ ಮರದ ತುದಿಯಲ್ಲಿ ತೂಗಿಕೊಂಡಿದ್ದ ಗೂಡಿನಲ್ಲಿ ಇಣುಕಿದ ಅದೆಂತದೋ ಪಕ್ಷಿ ಮತ್ತದರ ಮರಿಗಳು ಚಿಲಿಪಿಲಿಗುಟ್ಟಿದವು. ಇಷ್ಟು ದೊಡ್ಡ ಮರದಲ್ಲಿರುವ ಸಾವಿರ ಸಾವಿರ ಎಲೆ, ಕೊಂಬೆ ರೆಂಬೆ, ತೂಗುಜಡೆ ಯಾವುದೂ ಆ ಪಕ್ಷಿಗೆ ಗೂಡು ಕಟ್ಟಿ, ಮೊಟ್ಟೆಯಿಟ್ಟು ಮರಿ ಮಾಡಿ, ಅದರೊಸಗೆ ನೋಡಿಕೊಳ್ಳುವುದಕ್ಕೆ ಅಡ್ಡಿ ಮಾಡಿಲ್ಲ. ಈ ಲೋಕ ಆ ಪಕ್ಷಿಗಳ ಮಿಲನ ಮೈಥುನಕ್ಕೆ ಗೆರೆಯೆಳೆದು ಮತ್ತಾವುದೋ ಪಕ್ಷಿಯನ್ನು ಗೊತ್ತಿರಿಸಿ, ನೀನು ಹೀಗೆಯೇ ಬದುಕು ಎಂದು ಕೂಡಿಸಿಲ್ಲ, ಇಷ್ಟು ದೊಡ್ಡ, ನಿಶ್ಚಲವೆನಿಸಿದರೂ ನಿಶ್ಚಲವಲ್ಲದ ಲೋಕದಲ್ಲಿ ಈ ಮರವೆಂಬುದೂ ಜೀವವಿರುವ ಒಂದು ವ್ಯವಸ್ಥೆಯಾದರೆ, ಅದರ ಕೊಂಬೆ ತುದಿಯಲ್ಲಿ ತೂಗಿದ ಪಕ್ಷಿಗೂಡು ಮತ್ತೊಂದು ವೃತ್ತ, ವೃತ್ತಾಂತ. ಮರಿಗಳೊಂದಿಗೆ ಯಾವುದೇ ಕಟ್ಟುಪಾಡುಗಳಿಗೆ ಹೊಂದಿಕೊಳ್ಳದ ಪಕ್ಷಿ ನಿಜಕ್ಕೂ ಸಮತೆಯಲ್ಲಿ ತೂಗುತ್ತಿದೆ. ಅದರ ಪಾಡಿಗದು ಯಾವುದೇ ವಕ್ರರೇಖೆಗಳಿಗೆ, ಜಾತಿ ಧರ್ಮ ಎಂಬ ಮಾನವ ನಿರ್ಮಿತ ಗೋಡೆಗಳಿಗೆ ಒಗ್ಗಿಕೊಳ್ಳದೇ ಸ್ವಚ್ಛಂದ ಜೀವನ ನಡೆಸುತ್ತಿದೆ.

“ಎಲ್ಲಾ ಹತ್ತಿ ಹತ್ತಿ ಬೇಗ” ಕ್ಲೀನರ್ ಮತ್ತೆ ಕೂಗಿಕೊಂಡ.
ನಾನು ತಂದಿದ್ದ ಬ್ಯಾಗ್‍ನ ಒಂದು ಮೂಲೆ ಚೂರು ಅದುರುತ್ತಿತ್ತು. ಅದರೊಳಗೆ ಒದರುತ್ತಿದ್ದ, ಅದುರುತ್ತಿದ್ದ ಮೊಬೈಲ್ ನೋಡಿದಾಗ ಅಮ್ಮ, ಅಪ್ಪ, ಅಣ್ಣ, ಚಿಕ್ಕಪ್ಪ ಸೇರಿ ಒಟ್ಟು ಮೂವತ್ತು ಬಾರಿ ಫೋನಾಯಿಸಿದ್ದರು.

ಶಾಮುವಿನೊಂದಿಗೆ ಸುಮಾರು ಆರು ತಿಂಗಳಿನಿಂದ ಸತತವಾಗಿ ಮಾತನಾಡಿದ್ದೇನೆ. ಕಳ್ಳನೊಬ್ಬ ಅಗುಳಿ ಜಡಿದು ಮನೆಯೊಳಗೆ ನುಗ್ಗಿದ್ದು, ಮಳೆಯಲ್ಲಿ ನೆನೆದುಕೊಂಡೇ ಓಣಿಕೊನೆಯ ಹಳ್ಳದಿಂದ ಮನೆಗೆ ನೀರು ತುಂಬಿ ಜ್ವರ ಬರಿಸಿಕೊಂಡಿದ್ದರಿಂದಲೂ ಹಿಡಿದು ಇರುವೆ ಕಚ್ಚಿದ್ದರವರೆವಿಗೂ ಹರಟಿದ್ದೇನೆ, ಆತ ಆಗಾಗ ಹೇಳುತ್ತಿದ್ದ ಹಾಸ್ಯಕ್ಕೆ ಮನಗೊಟ್ಟು ನಕ್ಕಿದ್ದೇನೆ. ಅಲಾರಂ ಇಟ್ಟುಕೊಳ್ಳದ ಆತನಿಗೆ ಮುಂಜಾನೆಯ ನನ್ನ ಕರೆಯಿಂದಲೇ ಎಚ್ಚರ. ಅರೆನಿದ್ರೆಯಿಂದ “ಪ್ಲೀಸ್ ಹತ್ತು ನಿಮಿಷ ಮಲಗುತ್ತೇನೆ ಕಣೆ” ಎಂದರೆ ಪೀಡಿಸಿ ಪೀಡಿಸಿ ಎಬ್ಬಿಸಿಬಿಡುತ್ತಿದ್ದೆ. ರಾತ್ರಿ ಬೇಗ ಮಲಗಲೊಲ್ಲದಿದ್ದವನು, ಸರಿರಾತ್ರಿ ಎರಡರವರೆವಿಗೂ ನನ್ನೊಡನೆ ಹರಟಿ ಕೊನೆಗೆ ಮೊಬೈಲ್ ಸಂದೇಶದಲ್ಲಿಯೇ ತಬ್ಬಿ ಮಲಗಿಸಿಕೊಂಡು ಬಿಡುತ್ತಿದ್ದ. ರಾತ್ರಿಯೆಲ್ಲಾ ಹೀಗೆ ಮಲಗಿರುತ್ತೇನೆ, ಗುಡ್‍ನೈಟ್ ಎಂದು ಕೊನೆಗೆ ಸಂದೇಶವೊಂದನ್ನು ಕಳುಹಿಸಿ ತನ್ನ ತುಂಟತನ ತೋರಿಸಿ ಮಲಗಿಕೊಳ್ಳುತ್ತಿದ್ದ.
ಈತನ ಸಾಮೀಪದೊಲವಿನಂದಲೇ ನಾನು ರಾಘುವನ್ನು ಸಂಪೂರ್ಣವಾಗಿ ಮರೆತೆ. ಆತನ ಜೀವನವೇ ಬೇರೆ ಇತ್ತು, ನನ್ನದೇ ಬೇರೆ ಇದೆ, ಇಷ್ಟು ದಿನದೊಂದಿಗಿನ ಆತನ ಗೆಳೆತನವೆಲ್ಲಾ ಕೇವಲ ಭ್ರಮೆ, ನಾ ನಡೆದಾಡುವ ಹಾದಿಯಲ್ಲೆಲ್ಲೋ ಆತ ಸಿಕ್ಕಿ ಮರೆಯಾಗಿಹೋಗಿದ್ದಾನಷ್ಟೇ ಎಂದುಕೊಂಡು ಆತನನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದೆ.
-
‘ಹಾಲೂ... ‘ ಎಂದ ತಕ್ಷಣ ಓಡೋಡಿ ಹೊಸ್ತಿಲ ಬಳಿ ಬಂದು ನಿಂತುಬಿಡುತ್ತಿದ್ದೆ. ರಾಘು ನಮ್ಮ ಮನೆಗೆ ಮುಂಜಾನೆಯೇ ಹಾಲು ಮಾರಲು ಬರುತ್ತಿದ್ದ ಉರಿ ಮೀಸೆಯ ಸುಂದರಾಂಗ. ಜೊತೆಗೆ ಪೇಪರ್ ಕೂಡ ಹಂಚುತ್ತಿದ್ದ ರಾಘು ಕಷ್ಟಪಟ್ಟು ಓದಿಕೊಂಡಿದ್ದ. ಶಾಲಾ ದಿನಗಳಿಂದ ಜೊತೆಯಲ್ಲಿಯೇ ಬೆಳೆದ ನಾವಿಬ್ಬರೂ ಏನೋ ಆಕರ್ಷಣೆಗೆ ಬಿದ್ದವರು. ನಮ್ಮಿಬ್ಬರ ವಿಚಾರದಲ್ಲಿ ಅದು ಕೇವಲ ಎಳೆ ವಯಸ್ಸಿನ ಆಕರ್ಷಣೆ ಎಂದರೆ ನಾನು ಒಪ್ಪುವುದಿಲ್ಲ, ಅವನ ಮೇಲೆ ನನಗೆ ಆಕರ್ಷಣೆಯ ಜೊತೆಗೆ ಅದನ್ನೂ ಮೀರಿಸುವ ಪ್ರೀತಿ ಮಮತೆಯಿತ್ತು, ಅವನನ್ನು ನೋಡಿದರೆ ಪ್ರಪಂಚವೇ ತುಂಬಿಕೊಂಡಂತಿತ್ತು. ಆತ ತಿರುಗಿದಂತೆ ನಾನು, ನಾನು ತಿರುಗಿದಂತೆ ಆತ ಗಕ್ಕನೇ ತಿರುಗಿ ತುಟಿಯೊಂದಿಗೆ ಮನಸ್ಸು ಅರಳಿಸಿಬಿಡುತ್ತಿದ್ದೆವು. ಗೆಳೆತನ ಅತಿಯಾದ ಆತ್ಮೀಯತೆಗೆ ತಿರುಗಿದ್ದು ಹೇಳದೇ ಕೇಳದೇ ಪ್ರೇಮವಾಗಿ ಅಂಕುರಿಸಿತ್ತು. ನಾನಿರುವುದು ಸರಿಯಾಗಿ ಬಸ್ಸು ಬರಲಾಗದ, ಕೇರಿ ಕೇರಿಗೊಂದೊಂದು ಜಾತಿಗುಂಪುಗಳು ಕೂಡಿಕೊಂಡಿರುವ, ಪ್ರೇಮಿಗಳನ್ನು ಒಬ್ಬರಿಗೊಬ್ಬರು ಇಟ್ಟುಕೊಂಡಿದ್ದಾರೆ ಎಂದು ಕರೆಯುವ, ಒಂದು ಜಾತಿಯ ಹೊಟೆಲ್ಲಿಗೆ ಮತ್ತೊಂದು ಜಾತಿ ಜನರನ್ನು ಬಿಡದ ಹಳ್ಳಿಯೊಂದರಲ್ಲಿ ಎಂದು ತಿಳಿದಿದ್ದರೂ ಅನ್ಯ ಜಾತಿಯವನಾದ ಆತನನ್ನು ಪ್ರೇಮದಲ್ಲಿ ನನಗೇ ತಿಳಿಯದಂತೆ, ಆಲೋಚನೆಗಳನ್ನು ನಿಯಂತ್ರಿಸಲಾಗದಂತೆ ಆತನ ಮನಸ್ಸಿಗೆ ಒಗ್ಗಿಕೊಂಡಿದ್ದೆ.

ಮುಂದೇನಾಯಿತು? ಆಗುವುದಾದರೂ ಏನು? ಒಂದು ಕಡೆ ಹಗ್ಗ ಕತ್ತಿಗೆ ಸುತ್ತಿ ಕುಳಿತುಕೊಂಡ ಅಮ್ಮ, ವಿಷ ಹುಡುಕಿದ ಅಪ್ಪ, ನಮ್ಮ ಮರ್ಯಾದೆ ಮೂರು ಕಾಸಿಗೆ ಹಂಚುತ್ತಿದ್ದಾಳೆ ಎಂದು ಎದೆ ಹೊಡೆದುಕೊಂಡ ಅಜ್ಜಿ, ರಾಘುವನ್ನು ಕೊಂದೇಬಿಡುತ್ತೇನೆ ಎಂದು ಮಚ್ಚು ಹುಡುಕಿದ ಅಣ್ಣ, ನಿನ್ನನ್ನು ಇಷ್ಟು ಕಷ್ಟಪಟ್ಟು ಬೆಳೆಸಿ ಆ ಜಾತಿಯವನಿಗೆ ಕೊಡುವುದರ ಬದಲು ಕೊಂದೇಬಿಡುತ್ತೇನೆ ಎಂದ ಚಿಕ್ಕಪ್ಪ.

ಇದನ್ನೇ ಕಾಯುತ್ತಿದ್ದ ಕೆಲವರು ಊರಿನಲ್ಲೆಲ್ಲಾ ಗುಲ್ಲೆಬ್ಬಿಸಿ ನಲಿಯುವಾಗ, ಇಡೀ ಊರೇ ನನ್ನ ಮುಖಕ್ಕೆ ಕ್ಯಾಕರಿಸಿ ಉಗಿಯುವಾಗ, ನಾನು ಸತ್ತ ಮನಸ್ಸನ್ನು ಮಣ್ಣು ಮಾಡಿ ಮನೆಯಲ್ಲಿಯೇ ಕುಳಿತುಬಿಟ್ಟೆ. ರಾಘು ಅಪಘಾತವೊಂದರಲ್ಲಿ ತೀರಿಕೊಂಡ ಎಂದು ತಿಳಿದಾಗ ತೀವ್ರ ಖಿನ್ನಳಾಗಿದ್ದೆ. ಆತನನ್ನು ನೆನಪಿಸಿಕೊಂಡು ಎಳೆ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದೆ ಕೂಡ. ಊಟ ತಿಂಡಿ ತಿನ್ನುವುದಕ್ಕೂ ಹಠ ಮಾಡುವ ಸ್ವಭಾವ ಹೆಚ್ಚಾದಾಗ “ನೀ ಮಾಡಿದ್ದು, ನೀನೇ ಅನುಭವಿಸಿ ಸಾಯಿ’ ಎಂದಳು ಅಮ್ಮ. “ಅದಾವ ಜನ್ಮದಲ್ಲಿ ಅದೇನು ಪಾಪ ಮಾಡಿದ್ದರ ಫಲವೋ ನೀನು ಹುಟ್ಟಿದ್ದು’ ಎಂದ ಅಪ್ಪ.

ಮಳೆ ಜೋರಾಯಿತು. ಮುಖಕ್ಕೆ ಎರಚುತ್ತಿದ್ದ ಹನಿ ಮನದೊಳಗೆ ಏನೋ ಸಂತಸ ಉಕ್ಕಿಸುತ್ತಿದ್ದರೂ ಪಕ್ಕ ಕುಳಿತಿದ್ದವರು ಬೇಸರಪಟ್ಟುಕೊಂಡಾರೇನೋ ಎಂದುಕೊಂಡು ಕಿಟಕಿ ಮುಚ್ಚಿದೆ. ಪ್ರಯಾಣದ ನಡುವೆ ನಾನು ತುಂಬಾ ಇಷ್ಟಪಡುವ ಅಣಕೆರೆ ಬೆಟ್ಟದ ಹಸಿರು ತುದಿ, ಇಂದು ಕೈಚಾಚಿ ತನ್ನ ಮಡಿಲಿಗೆ ನನ್ನನ್ನು ಕರೆಯುತ್ತಿದೆ ಎಂದೆನಿಸಿತು.

“ಈಗಿನ ಕಾಲದಲ್ಲಿ ಲವ್ವುಗಿವ್ವು ಅನ್ನೋದೆಲ್ಲಾ ಕಾಮನ್ನು, ತೊಂದರೆ ಏನೂ ಇಲ್ಲ, ನಮ್ಮ ಶಾಮುವಿಗೆ ನಿಮ್ಮ ಮಗಳನ್ನು ತಂದುಕೊಳ್ಳುತ್ತೇನೆ” ಎಂದು ಲಕ್ಷ್ಮತ್ತೆ ಹೇಳಿದಾಗ ನಾನೋ ಬಿರುಗಾಳಿ ಎದ್ದಿದ್ದ ಮನಸ್ಸೊಳಗೆ ನೀರವತೆಯು ತುಂಬಿ ಭಾರಗೊಂಡು ಅತ್ತಿದ್ದೆ. ಮಗಳನ್ನು ತಂದುಕೊಳ್ಳಬಹುದು ಆದರೆ ಮನಸ್ಸನ್ನಲ್ಲ ಎಂದು ಹೇಳುವ ಇಚ್ಚೆಯಾದರೂ ಈ ಮನೆಯಿಂದ, ಈ ಊರಿನಿಂದ, ಹೊರಗೆ ಕಾಲಿಟ್ಟರೆ ಯಾವಾಗಲೂ ಹಂಗಿಸುವ ಈ ಜನರಿಂದ ತಪ್ಪಿಸಿಕೊಳ್ಳುವುದೇ ದೊಡ್ಡ ವಿಚಾರವಾಗಿತ್ತೆನಗೆ.

ಶಾಮು, ನನಗಿಂತ ಒಂದು ತಿಂಗಳಷ್ಟೇ ದೊಡ್ಡವನು. ಇಬ್ಬರೂ ಮದುವೆ ವಯಸ್ಸಿಗೆ ಬರದ ಚಿಕ್ಕವರು. ಕೆಟ್ಟ ಹೆಸರು ಹೊತ್ತುಕೊಂಡ ಮಗಳಿಗೆ ಯಾರಾದರೂ ಸಿಕ್ಕರೆ ಸಾಕು ಎನ್ನುವ ನಮ್ಮ ಮನೆಯವರೊಂದೆಡೆಯಾದರೆ, ಗಂಡನಿಲ್ಲದ ಲಕ್ಷ್ಮತ್ತೆಯ ಒಬ್ಬನೇ ಮಗನಿಗೆ ತ್ವರಿತವಾಗಿ ಮದುವೆಯಾಗಿ ಆಕೆಗೆ ಒಬ್ಬಳು ಸೊಸೆ ಸಿಕ್ಕರೆ ಸಾಕು ಎಂಬಂತಿದ್ದ ಆ ಮನೆಯವರು. ನನ್ನ ಮೇಲೆ ಹೊರಿಸಲಾಗಿದ್ದ ಅಪರಾಧವಲ್ಲದ ಅಪರಾಧವನ್ನು ತಿಳಿದೂ ಶಾಮು ನಗುಮೊಗದಿಂದಲೇ ನನ್ನನ್ನು ಒಪ್ಪಿಕೊಂಡ. ಅಂದೇ ಫೋನಾಯಿಸಿ ಎಲ್ಲಾ ಮರೆತುಬಿಡು ನಾನಿದ್ದೇನೆ ಎಂದು ಹೇಳಿದ್ದು ನನ್ನಲ್ಲಿ ಆತನೆಡೆಗೆ ಹುಟ್ಟಿದ ಮೊದಲ ಗೌರವ. ದಿನವೆಲ್ಲಾ ಹರಟುತ್ತಿದ್ದ, ಅಲ್ಲಲ್ಲಿ ಬಂದ ಹಬ್ಬಗಳಿಗೆ ಒಡವೆ, ವಸ್ತ್ರ ಕೊಡಿಸಿದ್ದ.

ಹಾಸಿಗೆ ಹಿಡಿದಿದ್ದ ಅಮ್ಮನ ಈಗೀಗಿನ ಉತ್ಸಾಹ, ¯ವಲವಿಕೆ ಕಂಡು ನನಗೆ ಖುಷಿಯಾಗಿತ್ತು. ಎಲ್ಲೋ ಒಂದು ಕಡೆ “ಈ ಜೀವನವೆಂದರೆ, ಬದುಕಿರುವ ಕೆಲವೇ ದಿನಗಳಲ್ಲಿ ಸಿಗದಿರುವುದನ್ನು ಅಲ್ಲಲ್ಲಿ ಮರೆತು, ಸಿಕ್ಕಿರುವುದರೊಂದಿಗೆ ನಾಲ್ಕು ದಿನ ಬದುಕಿ ಸಾಯುವುದಲ್ಲವೇ? ಒಂದು ಕಾಲದಲ್ಲಿ ಇದೇ ಅಮ್ಮನನ್ನು ದ್ವೇಷಿಸಿದ್ದೆ, ಈಗ ಎಲ್ಲಾ ಮರೆತು ಅವಳನ್ನು ಮತ್ತೆ ಪ್ರೀತಿಸುವ ಕಾಲ ಬಂದಿದೆ, ಸಾಯುವ ಮುಂಚೆ ಬದುಕನ್ನು ಅಪ್ಪಿಕೊಳ್ಳಬೇಕು” ಎಂದಂದುಕೊಂಡು ಬದಲಾಗಿದ್ದೆ. ಮದುವೆಗೆ ಇದಿರು ನೋಡುತ್ತಿದ್ದೆ.

“ಶಾಮು ವಿಷ ಕುಡಿದುಕೊಂಡನಂತೆ” ಎಂಬ ವಾರ್ತೆ ಕೇಳಿದಾಗ ನಾನು ಮಲಗಿದ್ದಲ್ಲೇ ಒದ್ದಾಡಿದ್ದೆ. ಅದು ಕನಸೆಂಬ ದೃಢ ನಂಬಿಕೆ ನನ್ನದು. ಮನಸ್ಸು ಹಗುರಾಗಿಸಿಕೊಳ್ಳಲು ತೆರೆದುಕೊಳ್ಳದ ಕಣ್ಣನ್ನು ಕಷ್ಟಪಟ್ಟು ತೆರೆದೆ.
“ಯಾವ ಆಸ್ಪತ್ರೆಗೆ ಸೇರಿಸಿದ್ದೀರಿ?” ಎಂದು ಅಪ್ಪ ಯಾರನ್ನೋ ವಿಚಾರಿಸುತ್ತಿದ್ದರು. ಎದೆ ಜೋರಾಗಿ ಹೊಡೆದುಕೊಂಡಿತ್ತು.

ಕಳೆದ ತಿಂಗಳಿನಿಂದ ನಿನ್ನೆಯ ಮುಂಜಾನೆಯವರೆವಿಗೂ ಶಾಮುವಿಗೆ ಫೋನಾಯಿಸುತ್ತಿದ್ದೆ. ಒಮ್ಮೆಯೂ ಮಾತನಾಡದ ಆತ ನಿನ್ನೆ ಲಕ್ಷ್ಮತ್ತೆಯ ಜೊತೆ ಬಂದಿದ್ದ.

“ಮದುವೆ ಮಾಡಿಕೊಳ್ಳಲು ನಮ್ಮ ಬಳಿ ತಾಳಿಗೂ ದುಡ್ಡಿಲ್ಲ, ನೀವೇ ಹಣ ಹೊಂದಿಸಿಕೊಡಬೇಕು” ಎಂದಳು ಲಕ್ಷ್ಮತ್ತೆ.
“ನಾವೇ ಮನೆಪತ್ರ ಅಡವಿಗಿಟ್ಟು ದುಡ್ಡು ತಂದಿದ್ದೇವೆ, ದುಡ್ಡು ಹೊಂದಿಸಲು ಸಾಧ್ಯವಿಲ್ಲ” ಅಪ್ಪ ಖಡಕ್ಕಾಗಿ ಹೇಳಿದ.
ಹತ್ತಾರು ಲಕ್ಷ ಸಾಲ ಮಾಡಿಕೊಂಡಿದ್ದ ಶಾಮು ಸಾಲಗಾರರ ಕಾಟ ತಡೆಯಲಾಗದೆ ನನ್ನನ್ನೂ ಮರೆತು ವಿಷ ಕುಡಿದಿದ್ದ. ದುಡ್ಡಿನ ವಿಚಾರದಲ್ಲಿ ಅಲ್ಲಿ ಜಗಳವೇ ನಡೆಯಿತು. ಮದುವೆಗೆ ಒಂದು ರೂಪಾಯಿಯನ್ನೂ ನಾವು ಖರ್ಚು ಮಾಡಬಾರದು, ಬದಲಾಗಿ ಇರುವ ಸಾಲವನ್ನೂ ಇವರ ಮೇಲೆ ಹೊರಿಸಬೇಕೆಂಬ ಹಠ ಹೊತ್ತು ಬಂದವರಂತೆ ಕಂಡರು. ಹೆಣ್ಣು ಹೆತ್ತವರು ಸೋಲಲೇಬೇಕೆಂಬ ಹಠವೇನು ಹೊಸದಲ್ಲವಲ್ಲ.

“ಇದೇ ರೀತಿಯಾಗಿ ಸಾಲಗಾರರು ಮತ್ತೆ ಮನೆ ಮುಂದೆ ಬಂದು ಜಗಳ ತೆಗೆದರೆ ಮತ್ತೆ ವಿಷ ಕುಡಿಯುತ್ತೇನೆ, ಸ್ವಲ್ಪ ದುಡ್ಡು ಹೊಂದಿಸಿಕೊಡಲು ನಿಮಗೆ ಕಷ್ಟವಾದರೆ ಮದುವೆಯಾಗುವುದು ಕಷ್ಟವಾಗುತ್ತದೆ, ಇನ್ನೊಬ್ಬ ಹುಡುಗನನ್ನು ಪ್ರೀತಿಸಿ ಜೊತೆ ಹೋಗಲು ತಯಾರಿದ್ದವಳನ್ನು ಯಾರು ತಾನೇ ಮದುವೆಯಾಗಲು ಒಪ್ಪುತ್ತಾರೆ” ಎಂಬ ಮಾತು ಶಾಮುವಿನ ಬಾಯಿಂದ ಹೊರಟ್ಟಿದ್ದು ಕಂಡು ಒಮ್ಮೆಲೇ ಸಿಡಿಲು ಬಡಿದಂತಾಯಿತು. ಮನಸ್ಸೆಂಬ ಗೋರಿಯ ಮೇಲೆ ಇತ್ತೀಚೆಗೆ ಚಿಗುರಿದ್ದ ಹಸಿರು ಹಾಗೇ ಒಣಗಿಹೋಯಿತು.

“ಮದುವೆಗಿಂತ ಮುಂಚೆ ಇಷ್ಟೆಲ್ಲಾ ಆಡುವ ತಾವು, ಮದುವೆಯ ನಂತರ ನನ್ನ ಮಗಳ ಸುಖ ಬಯಸುತ್ತೀರಿ ಎಂಬ ನಂಬಿಕೆ ನಮಗಿಲ್ಲ, ನಮ್ಮ ಮಗಳನ್ನೇನು ನಾವು ಬುಟ್ಟಿಯಲ್ಲಿಟ್ಟುಕೊಂಡು ಮಾರುತ್ತಿಲ್ಲ, ಇವನಲ್ಲದಿದ್ದರೇ ಇನ್ನೊಬ್ಬ” ಎಂದಪ್ಪನ ಮಾತಿನ ವರಸೆಗೆ ಲಕ್ಷ್ಮತ್ತೆ ಎದ್ದು ಹೋದಳು. ಬಾಗಿಲ ಬಳಿ ನಿಂತಿದ್ದ ನನ್ನೆಡೆಗೆ ತಿರುಗಿಯೂ ನೋಡದ, ಸುಳಿದಾಡಿದ ಗಾಳಿಯನ್ನೂ ಸೋಕಿಸಿಕೊಳ್ಳದೆ ಶಾಮು ಕೂಡ ಹೊರಟುಬಿಟ್ಟ.


ಅಂದು ಸಂಜೆ
“ಅಪ್ಪ, ಛತ್ರವನ್ನು ಬುಕ್ ಮಾಡಲು ಅಡ್ವಾನ್ಸ್ ಕೇಳುತ್ತಿದ್ದಾರೆ ರಾಯರು” ಎಂದ ಅಣ್ಣ...
“ಮದುವೆ ನಡೆಯುವುದಿಲ್ಲವೆಂದು ಹೇಳಿಬಿಡು” ಎಂದು ಅಪ್ಪ ಹೇಳಿದಾಗ ಹಗ್ಗವನ್ನು ನಾನೇ ಹುಡುಕಿದ್ದೆ. ಸಿಕ್ಕರೂ ಯಾಕೋ ಕೈಗಳು ಹಿಂದೆ ಸರಿದವು.
-
“ಮೇಡಂ, ಆಶ್ರಮ ಬಂದಿದೆ” ಎಂದು ಕಂಡಕ್ಟರ್ ಕೂಗಿಕೊಂಡ. ಇದನ್ನೆಲ್ಲಾ ಯೋಚಿಸುತ್ತಿದ್ದ ನಾನು ಒಮ್ಮೆಲೇ ನಿರಾಳಗೊಂಡಂತೆನಿಸಿ ಕೆಳ ಇಳುಗಿದೆ. “ಸು-ಮನಸ್ವಿ ಆಶ್ರಮ”, ‘ಸಂಬಂಧಗಳು ನಮ್ಮ ಮನಸ್ಸನ್ನು ಕಟ್ಟಿಹಾಕಲೆಂದೇ ಹುಟ್ಟಿಕೊಂಡ ಲೌಕಿಕ ಜಗತ್ತಿನ ಬಂಧನಗಳು, ಬನ್ನಿ ಮನಸ್ಸನ್ನು ಅರಳಿಸಿಕೊಂಡು ಜಗದೊಳಿತಿಗೆ ದುಡಿಯೋಣ” ಎಂಬ ಬೋರ್ಡ್ ಕಂಡಿತು. ಕೆಲ ದಿನಗಳ ಹಿಂದೆ ಪತ್ರಿಕೆಯಲ್ಲಿ ಓದಿದ ಆಶ್ರಮವಿದೇ ಎಂದು ಖಚಿತವಾಯಿತು.

ಆ ಆಶ್ರಮದ ಗೇಟಿನ ಮುಂದೆ ನಿಂತು ಒಮ್ಮೆ ತಿರುಗಿ ನೋಡಿದೆ. ಬಿರುಗಾಳಿ ಮುಖಕ್ಕೆ ರಾಚಿ ಕೂದಲು ಕೆದರಿಕೊಂಡಿತು. ಮುಂದಿದ್ದ ರಸ್ತೆಯಿಂದ ಪ್ರಾರಂಭವಾಗಿ ಕಣ್ಣಿಗೆ ಕಾಣುವವರೆವಿಗೂ ಯಾಕೋ ಅನೇಕ ಬಂಧುಗಳು ಕಣ್ಣೀರು ಸುರಿಸುತ್ತ ಆಶ್ರಮದೆಡೆಗೆ ಕೈ ಚಾಚಿದಂತೆ ಭಾಸವಾಯಿತು. ಅಲ್ಲಲ್ಲಿ ರಕ್ತದ ಕಲೆಗಳು, ನೋವಿನ ಮಚ್ಚೆಗಳು ಕಂಡವು. ಎದೆ ನಿಗುರಿಸಿ ಮೀಸೆ ತಿರುವಿ ಕೊಬ್ಬೇರಿ ಬಬ್ಬಿರದ ಅನೇಕ ಜನಗಳು ಹಲವರನ್ನು ತುಳಿದಿದ್ದರು. ಅಲ್ಲಲ್ಲಿ ಹೊಡೆದುಹೋಗಿದ್ದ ಈ ಪ್ರಪಂಚ ಒಂದು ವೃತ್ತದಂತೆ ಕಂಡು ಬರಲಿಲ್ಲ. ಅದರೊಳಗೆ ಮತ್ತಷ್ಟು ವೃತ್ತಾಂತಗಳು ಕಂಡವು. ಜಾತಿ–ಜಾತಿ, ಕೇರಿ-ಕೇರಿ ನಡುವೆ ಬೆಂಕಿ ತನ್ನ ಕೆನ್ನಾಲಗೆ ಚಾಚಿ ಅದರೊಳಗೆ ಎಷ್ಟೋ ಅಮಾಯಕರು ಸುಟ್ಟು ಕರಕಲಾಗಿಹೋಗಿದ್ದರು. ಎಲುಬುಗಳು ಅತ್ತು ನೂರಾರು ದುರಂತ ಕಥೆ ಹೇಳುತ್ತಿದ್ದವು.

“ಅಮ್ಮಾ...” ಎಂದು ಕೂಗಿಕೊಂಡ ವೃದ್ದನೋರ್ವ ಕೈ ಚಾಚಿದ. ಸಿಮ್ ಕಿತ್ತೆಸೆದು ಕೈಯಲ್ಲಿರುವ ಮೊಬೈಲ್ ಆತನಿಗೆ ನೀಡಿ “ಎಲ್ಲಾದರೂ ಮಾರಿಬಿಟ್ಟು ಏನಾದರೂ ತಿನ್ನು’ ಎಂದು ಹೇಳಿ ಆಶ್ರಮದೊಳಗೆ ನಡೆದೆ.

Wednesday, 26 September 2012

ಒಂದಷ್ಟು ಹಾಯ್ಕುಗಳು…

ಮೌನವೆಂದರೆ
ಯಾರೂ ಇಲ್ಲದ ನನ್ನ ಕೋಣೆಯಲ್ಲಿ
ನಾನೊಬ್ಬನೇ ಕೂಗಿಕೊಳ್ಳುವುದು
-
ಬೆಳಕು ಪ್ರಪಂಚ ತೂಗಿತೆಂಬ
ಭ್ರಮೆಯೊಂದಿಗಿದ್ದೆ
ಅವಳು ನೆಟ್ಟ ಬೇವೊಳಗೆ ಸೂರ್ಯ ನಕ್ಕ
-
ಮೇಲೆ ಹೊದಿಸಿದ ರಗ್ಗಿನಲ್ಲಿ
ಬಣ್ಣದ ಚಿಟ್ಟೆಗಳಿದ್ದರೂ
ಒಳಗೆ ಸುಕ್ಕು ಹಾಸಿಗೆಯಿದೆ
-
ಹುತ್ತಕ್ಕೆ ಹಾಲೆರೆಯುವಾಗ ನನ್ನವಳು
ಹಸಿದ ಮಗು ಹಿಡಿದುಕೊಂಡ ನಾನು
ಮನೆಯಲ್ಲಿ ಜಿರಲೆ ಸಾಯಿಸುತ್ತಿದ್ದೆ
-
ಅಮ್ಮ ತಿನ್ನಲು ಕೊಟ್ಟ ಹುಳಿಮಾವು
ಹೃದಯಾಕಾರದಲ್ಲಿತ್ತು
ಚಾಕುವಿನಲ್ಲಿ ಕತ್ತರಿಸಿಬಿಟ್ಟೆ
-
ಆ ಬಾವಿಯೊಳಗೆ ಮೋಡವಿದೆ
ಕೂಗಿಕೊಳ್ಳುವ ಕಪ್ಪೆಗೆ
ಮಿಲನ ಮುನ್ಸೂಚನೆ
-
ಅರ್ಧ ತಿಂದ ಭಿಕ್ಷುಕ ಮಗುವಿಗೆ
ಮುಂಜಾನೆಯ ಕನಸು
ಸೋಮಾರಿ ಚಂದ್ರನಿಗೆ ಜಡತ್ವ
-
ದೇವರ ಕ್ಯಾಲೆಂಡರ್ ಗೆ ಕೈ ಮುಗಿದಪ್ಪ
ಗಣೇಶ್ ಬೀಡಿ ಪೊಟ್ಟಣ
ಕೊಳಕು ಚಡ್ಡಿಯೊಳಗಿಟ್ಟ
-
ನಿನ್ನ ಮರೆಯಲು
ಕಲರ್ ಟೀವಿ ಹಚ್ಚಿದಾಗ
ಬ್ಲಾಕ್ ಅಂಡ್ ವೈಟ್ ಸಿನಿಮಾ
-
ದೇವರ ಫೋಟೋ ಸಿಕ್ಕಿಸಲು
ತಲೆ ಬಡಿಸಿಕೊಂಡ ಮೊಳೆ
ಶಿವ ಶಿವ ಎನ್ನುತ್ತಿದೆ ನಿನ್ನೆಯಿಂದಲೂ

Monday, 24 September 2012

ಅಳಲಿ ಬದುಕುಳಿದವರು...

ನೀನುದುರಿಸಿದ ನೋವ ಪಕಳೆಗೆ
ಭೂ ಎದೆ ಬೂದಿಯಾಗಿದೆ
ಮೇಲೆ ಹಾರಾಡಿದ ಹದ್ದುಗಳಿಗೆ
ನಮ್ಮಿಬ್ಬರ ಸಾವ ಮುನ್ಸೂಚನೆ

ಆ ಹುಣಸೆ ಮರಕ್ಕೆ ತೂಗಿರುವುದು
ಹಣ್ಣಲ್ಲ ಗೆಳತಿ ಆತ್ಮಗಳು
ಮಸಣದಿ ಭುಗಿಲೆದ್ದ ಬೆಂಕಿ ಕಿಡಿಯಲ್ಲಿ
ಜೋಡಿ ಹೃದಯಗಳ ಗೋಳು
ಕಾಲು ಕುಕ್ಕಲು ಕಾದಿರುವ
ಚೇಳಕೊಂಡಿಗೆ ದೇವರ ನಾಮ

ನಿನಗುಡಿಸಿದ್ದ ಜಾತಿಯಂಗಡಿಯ
ಹರಕು ಸೀರೆ ತುದಿಯ
ಧರ್ಮ ರಂಗವಲ್ಲಿಯೊಳಗೆ
ಚುಕ್ಕಿಗಳ ಢಿಕ್ಕಾಢಿಕ್ಕಿ
ದೇವರ ನಾಮ ಬಳಿದ
ಯಾರೋ
ಬಡಿದ ಜಾಗಟೆ ಶಬ್ದ
ತಟ್ಟಿದೆ ಕಿವಿಗೆ, ತಟ್ಟಲಿ ಬಿಡು

ಈ ಜಗ ಗೊಂಡಾರಣ್ಯದಲ್ಲಿ, ಜನ
ಬೆಳೆಸಿದ ಮುಳ್ಳು ಪೊದೆಯೊಳಗೆ
ಹೆಬ್ಬಾವಿನುಬ್ಬಸವಿದೆ
ಕರಿನಾಗರ ಬೆಳೆಸಿದ
ನೂರು ಮರಿಗಳಿವೆ
ಗೋಣು ಮುರಿದರೂ
ಪಾಪಾಸುಕಳ್ಳಿಯ
ಚಿಗುರಿ ನಿಗುರಿಸುವ ನೀರಿದೆ

ಬೆಳಕು ಪ್ರಪಂಚ ತೂಗಿತೆಂಬ
ಭ್ರಮೆಯೊಂದಿಗೆ
ಹುದುಗಿದ್ದೆವು ಬೀಜ ನಾವಂದು
ವಿಷತರುವಾಗಿದೆಯಿಂದು
ಮಾಂಸಕ್ಕಿಂತೆಲುಬೇ ರುಚಿ
ಗೋಡೆ ಕಟ್ಟಿ ಕಾಲೆತ್ತಿದ ನಾಯಿಗಳಿಗೆ

ನಿನ್ನ ಜಲಧಿ ನಯನ ಅರಳಿಸಿ
ನಗುಮುತ್ತೊಂದುರಿಸು ಕೊನೆಗೆ
ನೆನಪಿಸಿಕೊಂಡಳಲಿ ಬದುಕುಳಿದವರು

Sunday, 23 September 2012

ಚಕ್ರೀಯ ಸಮಸಂಗತಿ…

ಗರ್ಭಿಣಿ ಮಗಳ ಹೆರಿಗೆ ನೋವು
ಪಡಸಾಲೆಯಜ್ಜನ ಸಾವು
ಹೆರಿಗೆ ಕೋಣೆಯ ಮಗು-
ಮೊಗದಲ್ಲಿ ಅಜ್ಜ ಬಿಟ್ಟ ನಗು!

ಅಜ್ಞಾನಿ ರಕ್ತನಾಳದೊಳಗೂ
ಅಪ್ಪನ ರಕ್ತದ ಹರಿವಿಗೆ
ವಿಘ್ನವಿಲ್ಲ ಭಗ್ನವಿಲ್ಲ
ವಿಜ್ಞಾನದ ಡಿ.ಎನ್.ಎ ಸಾಕ್ಷಿ!

ನೀರೊಳ ಮೇಘನಿಗೆ ಸ್ಖಲನ ಸಿರಿ
ಕೆರೆ ತೊರೆ ತುಂಬು ಬಸುರಿ
ಬೇವು ಬೀಜದೊಳಗೆ
ಹೆತ್ತು ಹೊತ್ತ ತರು ತವರ ಸಿರಿ

ಎಂದೋ ಸತ್ತು ಮರೆಯಾಗಬೇಕಿದ್ದವರ
ವೀರ್ಯಾಣು ಅಂಡಾಣು
ಅಲೆದಾಡುತ್ತಿವೆ ಬೀದಿಗಳಲ್ಲಿ
ಉದುರಿದೆಲೆ ಮರ ಬೆಳೆಸುವ ಗೊಬ್ಬರದಲ್ಲಿ!

(ಪ್ರತೀ ವಸ್ತುವಿನ ಗುರುತು ಈ ಪ್ರಪಂಚದಲ್ಲಿಯೇ ಗಿರಕಿ ಹೊಡೆಯುತ್ತಿರುತ್ತದೆ ಎಂಬ ಆಧಾರದಲ್ಲಿ ಬರೆದಿರುವುದು... ನೀರು ಆವಿಯಾಗಿ ಮತ್ತೆ ಮೇಘವಾಗಿ, ನೀರಾಗಿ ಹರಿಯುತ್ತದೆ, ನೀರೊಳಗೆ ಮೋಡದ ಬಿಂಬವಿರುತ್ತದೆ, ಹಾಗೆ... )

Friday, 21 September 2012

ಏಳು ದೇವತೆಗಳೂ ಒಟ್ಟಿಗೆ “Vibration” ಎಂಬ ಆಂಗ್ಲ ಪದಕ್ಕೆ ಹೆದರಿದ್ದು..!

ಕೆಲವರಿಗೆ ನಾನೆಂದರೆ ಭಯ. ಕಾರಣ ಖಂಡಿತವಾಗಿಯೂ ಸಣ್ಣಕ್ಕಿರುವ ನಾನಲ್ಲ, ಬದಲಾಗಿ ನನ್ನೂರು ಕೊಳ್ಳೇಗಾಲ. ಕರ್ನಾಟಕದ ಪ್ರತಿಷ್ಠಿತ “ಮೈಸೂರು ವಿಶ್ವವಿದ್ಯಾನಿಲಯ”ವಿರುವ ಮಾನಸ ಗಂಗೋತ್ರಿಯಲ್ಲಿ ನಾನು ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿದ್ದಾಗ ಅನೇಕ ಪ್ರಾಧ್ಯಾಪಕ ಮಹನೀಯರು ನನ್ನನ್ನು ತಮ್ಮ ನೆರೆಹೊರೆಯವರಿಗೆ, “ಇಂತವರಿಗೆ” ಮಾಟ ಮಾಡಿಸಿಕೊಡಲು ಸಾಧ್ಯವೇ ಎಂದು ಕೇಳಿ ಉಗಿಸಿಕೊಂಡಿದ್ದಾರೆ. ಒಂದೆರಡು ವರ್ಷ ಸುಂದರ ಚಿಕ್ಕಮಗಳೂರಿನಲ್ಲಿದ್ದೆ. ಅಲ್ಲೂ ಕೂಡ ಅದೇ ರಗಳೆ. “ನೀವು ಮಾಟ ಮಂತ್ರಕ್ಕೆ ಫೇಮಸ್ ಅಲ್ವಾ” ಎಂದು ದಿನಕ್ಕೆ ಒಂದಿಬ್ಬರಾದರೂ ನನ್ನಲ್ಲಿ ಕೇಳಿದ್ದುಂಟು. ಹಾಗಾದರೆ ಕೊಳ್ಳೇಗಾಲದಲ್ಲಿ ಮಾಟಮಂತ್ರ ನಡೆಯುತ್ತಿಲ್ಲವೇ ಎಂಬ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತದೆ. ಖಂಡಿತವಾಗಿಯೂ ‘ಇಲ್ಲ’ ಎಂದಷ್ಟೇ ಹೇಳಬಲ್ಲೆ. ಅವಶ್ಯವಿದ್ದರೆ ಅದರ ಬಗ್ಗೆ ಸವಿಸ್ತಾರವಾಗಿ ಮತ್ತೆ ತಿಳಿಸಿಕೊಡುತ್ತೇನೆ.

ಕೊಳ್ಳೇಗಾಲದೊಳಗೆ ವಾಮಮಾರ್ಗದಲ್ಲಿ ಏನೇ ನಡೆದರೂ ಅದಕ್ಕೆ ತನ್ನದೇ ಆದಂತಹ ಪೊಳ್ಳು ಘನತೆಯಿರುತ್ತದೆ. ಘನತೆ ಎನ್ನುವ ಬದಲು ಅದನ್ನು ನಾನು “ತಿಳಿದವರು, ತಿಳಿಯದವರ ದೌರ್ಬಲ್ಯಗಳನ್ನು(ಕೆಲವೊಮ್ಮೆ ತಿಳಿಯದವರು ವ್ಯಕ್ತಪಡಿಸುವ ಮತ್ತೊಬ್ಬರ ಮೇಲಿನ ದ್ವೇಷವನ್ನು) ಉಪಯೋಗಿಸಿಕೊಳ್ಳುವ ರೀತಿ” ಎಂದು ವ್ಯಾಖ್ಯಾನಿಸುತ್ತೇನೆ. ಇದೇ ಕೊಳ್ಳೇಗಾಲದಲ್ಲಿ ಮಾಂತ್ರಿಕ ಬೀದಿ ಎನಿಸಿಕೊಂಡ ಒಂದು ಜನಾಂಗವಿರುವ ಬೀದಿಯಲ್ಲಿಯೇ ನಮ್ಮ ಮನೆಯಿರುವುದು. ಮೊದಲಿನಿಂದಲೂ ಜಿಜ್ಞಾಸೆಯಲ್ಲಿಯೇ ಬೆಳೆದ ನಾನು ಯಾವುದನ್ನೂ ಒಪ್ಪಿಕೊಂಡವನಲ,್ಲ ಜೊತೆಗೆ ಶೂನ್ಯದಿಂದ ಏನೂ ಉತ್ಪತ್ತಿಯಾಗುವುದಿಲ್ಲವೆಂಬುದನ್ನು ಅಲ್ಲಗಳೆದವನೂ ಅಲ್ಲ. ದೇವರು ಎಂಬ ಹೆಸರಿನಲ್ಲಿ ನಿಯಮ ಸಂಪ್ರದಾಯ ಚೋದಗಳನ್ನು ಹೇರುವುದನ್ನು ನೇರವಾಗಿ ವಿರೋಧಿಸುತ್ತೇನೆ, ಜೊತೆಗೆ ಈ ಪ್ರಪಂಚವೆಂಬ ಅಂಗಡಿಯಲ್ಲಿ ದಿನಸಿ, ಇತರೆ ವಸ್ತುಗಳು ತನ್ನಿಂತಾನೇ ಮಾರಾಟವಾಗಿ, ಮುಗಿದಾಗ ಮತ್ತೆ ಕೂಡಿಕೊಳ್ಳುತ್ತವೆ, ಹೃದಯವೆಂಬ ಕಪಾಟು ಯಾರ ಅನುಮತಿಯೂ ಇಲ್ಲದೇ ಬಾವಿಯಲ್ಲಿ ಹೆಂಗಸೊಬ್ಬಳು ನೀರು ಸೇದಿದಂತೆ ರಕ್ತವನ್ನು ಬಸಿಯುತ್ತದೆ ಎಂಬುದನ್ನು ಒಪ್ಪಿಕೊಳ್ಳಲು ನನ್ನ ಮೆದುಳು ತಯಾರಿಲ್ಲ. ಈ ರೀತಿ ಈ ಮೆದುಳನ್ನು ಆಟವಾಡಿಸುತ್ತಿರುವವ ಶಕ್ತಿಗೋ, ಕಾಣದ ಕೈವಲ್ಯವನ್ನು ಧಿಕ್ಕರಿಸುವ ಮನ ಒಂದೆಡೆಯಾದರೆ, ಗಾಂಭೀರ್ಯವಾಗಿ ನಗುವ, ಈ ಜಗದ ಸೂಕ್ಷ್ಮಗಳಿಗೆ ಸೋಲುವ ಮತ್ತೊಂದೆಡೆಯ ನನ್ನ ಮನವೇ ನನಗೆ ಅರ್ಥವಾಗಿಲ್ಲ. ಕಾಂಪಾಸ್ಸಿಲ್ಲದೇ ದೋಸೆ ಉಯ್ಯುವ ನಮ್ಮಮ್ಮನಂತೆ!

ತುಂಬಾ ಹಿಂದೆ ವ್ಯಾಪಾರ-ಸಂತೆ ನಡೆಯುತ್ತಿದ್ದ ನಮ್ಮ ಬೀದಿಗೆ ಈಗಲೂ ‘ಸಂತೆ ಬೀದಿ’ಯೆಂಬ ಹೆಸರಿದೆ. ಎಲ್ಲಾ ಊರಿನ ಎಲ್ಲಾ ಬೀದಿಗಳಂತೆ ಈ ಬೀದಿಯಲ್ಲೂ ಅದೇ ಆಗುಹೋಗುಗಳಿವೆ, ಬೇಡದ ಜಾತಿ ಧರ್ಮ ವ್ಯತ್ಯಾಸಗಳಿವೆ, ಶ್ರೀಮಂತರ ಅಟ್ಟಹಾಸ, ಬಡವರ ನೋವು, ಡೊಗ್ಗು ಸಲಾಮೆಲ್ಲಾ ಇದೆ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಒಮ್ಮೆ ಬಾಬಾ ಎನಿಸಿಕೊಂಡ ಒಬ್ಬ ವ್ಯಕ್ತಿ ಅಕ್ಕಿಗೆ ತಣ್ಣನೆಯ ನೀರು ಸುರಿದು ಅನ್ನ ಮಾಡಿದ್ದನ್ನು ಯಾರೋ ವೇದಿಕೆ ಮೇಲೆ ವೈಭವೀಕರಿಸಿದಾಗ ನಾನೂ ಖಾಲಿ ಮಡಕೆಯ ಅರ್ಧ ಸುಣ್ಣ (Calcium Carbonate) ಮತ್ತರ್ಧ ನೀರು ತುಂಬಿ ತಣ್ಣೀರು ಸುರಿದು ಎಲ್ಲರ ಮುಂದೆ ಅನ್ನ ಮಾಡಿದ್ದೆ(ಪುಣ್ಯ, ಬಾಬಾ ಮತ್ತು ನಾನು ಇಬ್ಬರೂ ಯಾರಿಗೂ ಆ ಅನ್ನವನ್ನು ತಿನ್ನಿಸಿ ಎದೆ ಉರಿಸಲಿಲ್ಲ). ಈ ನಮ್ಮ ಬೀದಿಯಲ್ಲಿ ಮೂಲವಾಗಿ “ವೇಶ್ಯೆ” ಎನಿಸಿಕೊಂಡ (ಜೊತೆಗೆ ತಾನೂ ಒಪ್ಪಿಕೊಂಡ) ಒಬ್ಬಾಕೆಯ ಮೇಲೆ “ದೇವರ” ಆವಾಹನೆಯಾಗುತ್ತಿತ್ತು. “ದೇವರು” ಬರುವುದು ಎಂಬುದು ಸಾಮಾಜಿಕವಾಗಿ ಒಂದು ಜಿಜ್ಞಾಸೆಯಾದರೆ, ವ್ಶೆಜ್ಞಾನಿಕವಾಗಿ ಅದೊಂದು ಮಾನಸಿಕ ಅಸಮತೋಲನವಷ್ಟೆ. ದೇವರಾವಾಹನೆ ಎಂಬ ಪ್ರಕ್ರಿಯ ಸಾಮಾನ್ಯವಾಗಿ ನಡೆಯುವುದು ಕುಡುಕರ ಮೇಲೆ, ನಡತೆಗೆಟ್ಟವರ ಮೇಲೆ, ಬಾಲ್ಯದಿಂದಲೂ ಭಾದಿತರಾದವರ ಮೇಲೆ. ಇಂತಹ ದೇವರುಗಳಿಗೂ ನನಗೂ ಮೊದಲಿನಿಂದಲೂ ಕೂಡಿ ಬರದಿದ್ದದ್ದು ಇಂದಿಗೂ ವಿಪರ್ಯಾಸ. ತಾನೇ ಸೃಷ್ಠಿಸಿದ ಜೀವಗಳೊಳಗೆ ಯಾರಿಗೂ ಕಾಣದಂತೆ ಕದ್ದು ಬರುವ ಅವಶ್ಯಕತೆಯಾದರೂ ಏನು? ಈ ಪ್ರಪಂಚವನ್ನೇ ಸಮತೋಲನದಲ್ಲಿ ತೂಗುವ ಶಕ್ತಿಯೊಂದು ಈ ಹುಲುಮಾನವನ ಮೇಲೆ ಆವಾಹನೆಯಾದಾಗ ಮನುಷ್ಯನಿಗೆ ತಡೆದುಕೊಳ್ಳುವ ಶಕ್ತಿಯಾದರೂ ಇದೆಯೆಂದರೆ ನಂಬಲಾಗುವುದಿಲ್ಲ.

ಆಕೆಯ ಮೇಲೆ ಬರುವ ದೇವತೆಯ ಹಾವಭಾವಗಳನ್ನು ನಾನು ಮೊದಲಿನಿಂದಲೂ ಗಮನಿಸುತ್ತಿದ್ದೆ. ಪ್ರಾರಂಭದಲ್ಲಿ ಕೇವಲ ಒಬ್ಬಳೇ ಮಹಾತಾಯಿ ಆವಾಹನೆಯಾಗುತ್ತಿದ್ದದ್ದು ತ್ವರಿತಗತಿಯಲ್ಲಿಯೇ ಅದು ಏಳು ದೇವತೆಗಳು ಒಮ್ಮೆಲೇ ಆ ಒಂದೇ ದೇಹದ ಮೇಲೆ ಆವಾಹನೆಯಾಗುವ ಮಟ್ಟಕ್ಕೆ ಬಂದು ನಿಂತಿತ್ತು. ಆಕೆಯ ಮೇಲೆ ಏಳೇಳು ದೇವತೆಗಳು ಒಟ್ಟಿಗೆ ಬರುವುದಂತೆ ಎಂಬ ಟೊಳ್ಳು ನುಡಿ ಬೆಳಕಿಗಿಂತಲೂ ವೇಗವಾಗಿ ಮನೆ ಮನೆ ಕಿಟಕಿ, ಹೆಂಚು ತೂತುಗಳ ಮೂಲಕ ಹರಡಿಕೊಂಡು ಆಕೆಗೆ ಒಳ್ಳೆಯ ಪ್ರಚಾರ ದೊರಕಿತು. ಏಳೂ ದೇವತೆಗಳು ಆವಾಹನೆಯಾದ ಸಂದರ್ಭದಲ್ಲಿ ಆಕೆ ತನ್ನ ಮೈ ಕೈ ಪ್ರಜ್ಞೆಯನ್ನು ಸಂಪೂರ್ಣವಾಗಿ ಮರೆತುಬಿಡುತ್ತಿದ್ದಳು ಎಂಬುದು ಎಲ್ಲರೂ ಗ್ರಹಿಸಿಕೊಳ್ಳಬಹುದಾದ ವಿಚಾರವೇ ಹೌದು. ಏಳೂ ದೇವತೆಗಳ ಆವಾಹನೆಗೋಸ್ಕರ ಊಟ ತಿಂಡಿ ಬಿಟ್ಟು ಕಾದು ಕುಳಿತ ಜನಗಳಿಗಂತೂ ಇನ್ನಿಲ್ಲದ ಭಯ ಭಕ್ತಿ. ಆಕೆಯನ್ನು ಸಾಧ್ಯವಾದಷ್ಟೂ ಕೊಳಕು ದೃಷ್ಟಿಯಲ್ಲಿ ನೋಡಿದವರೆಲ್ಲಾ ಅಡ್ಡಬಿದ್ದು ಪಾದ ಸ್ಪರ್ಶಿಸಿ ಪುನೀತರಾದೆವು ಎಂಬ ಭ್ರಮೆಯಲ್ಲಿರುತ್ತಿದ್ದರು. ಈ ವಿಷಯದಲ್ಲಿ ನನಗೆ ಮತ್ತು ನನ್ನ ಕೆಲ ಗೆಳೆಯರಿಗೆ ಬೇಸರ ತಂದ ವಿಚಾರವೆಚಿದರೆ, ಈ ದೇವತೆಗಳು ನಮ್ಮ ಕ್ಷೇತ್ರದ ‘ಕೌನ್ಸಿಲರ್’ ಬರುವವರೆವಿಗೂ ಮೈ ಮೇಲೆ ಬರುತ್ತಲೇ ಇರಲಿಲ್ಲ! ಆವಾಹನೆಗೊಂದು ಆವಾಹನೆ ಬೇಕಾಗಿತ್ತು ಎಂಬುದು ನಿಜಕ್ಕೂ ಹಾಸ್ಯಾಸ್ಪದ. ಮೈಮೇಲೆ ಬಂದ ದೇವರುಗಳೇ ಮನೆ, ಜಮೀನು, ದೇವಾಸ್ಥಾನ ಇತ್ಯಾದಿ ಬೇಡಿಕೆಗಳನ್ನು ‘ಕೌನ್ಸಿಲರ್’ ಮುಂದೆ ಆಕೆಯ ಪರವಾಗಿ ಮಂಡಿಸುತ್ತಿದ್ದವು.

ಇದೊಂದು ಪ್ರತಿದಿನದ ಬೀದಿ ನಾಟಕವಾಗಿ ಹೋಗಿತ್ತು. ಎಲ್ಲೆಲ್ಲಿಂದಲೋ ಜನ ಬಂದು ತಮ್ಮ ಅರಿಕೆ ಇಟ್ಟು ಅತ್ತು ಕರೆದು ಹೋಗುತ್ತಿದ್ದರು. ಆಸ್ಪತ್ರೆಗೆ ಹೋಗುವ ಬದಲು ಇಲ್ಲಿಗೆ ಬಂದು ಆಕೆ ಕೊಟ್ಟ ವಿಭೂತಿ ನುಂಗಿ ಒಂದಷ್ಟು ಹಣ ಸುರಿದು ಹೋಗುತ್ತಿದ್ದರು. ಕಂತೆ ಕಂತೆ ಹಣದಲ್ಲಿ ಒಂದು ಪೈಸೆಯನ್ನೂ ಮೈಬಿಟ್ಟು ಹೋಗುತ್ತಿದ್ದ ಆ ದೇವತೆಗಳು ಮುಟ್ಟುತ್ತಿರಲಿಲ್ಲ. ಅದೊಂದು ರೀತಿ ದೇವತೆಗಳೇ ನಡೆಸಿಕೊಡುತ್ತಿದ್ದ ಸಾಮಾಜಿಕ ಸೇವೆಯಿದ್ದಂತೆ.

ಒಮ್ಮೆ ನಾನೂ ಸಾವರಿಸಿ ಜಾಗ ಮಾಡಿಕೊಂಡು ದೇವರ ಬಳಿ ಹೋದೆ. ತಾಯೇ ನಮಸ್ಕಾರ ಎಂದೆ. ಆ ದೇವತೆಗಳೆಲ್ಲಾ ಒಟ್ಟಿಗೆ ‘ಆಹಾ ಹ ಹ ಉಶ್ಸ್.......’ ಎಂದವು. ಎಂದಿನಂತೆ ‘ನಿನ್ನ ತೊಂದರೆ ಹೇಳು ಶಿಸು’ ಎಂದಾಗ ನಾನು ಅಂಜಿಕೆ ಅಳುಕಿಲ್ಲದೇ ನೇರವಾಗಿಯೇ “ತಾಯಂದಿರೇ, ನೀವೆಲ್ಲಾ ಕೇವಲ ‘ಕೌನ್ಸಿಲರ್’ ಇರುವಾಗ ಮಾತ್ರವಷ್ಟೇ ಬರುವುದು ಯಾಕೆ? ಆತನ ಬಳಿ ಮನೆ, ಜಮೀನು ಮಂಜೂರಾತಿಗೆ ಪೀಡಿಸಿ ಹೆದರಿಸುವುದು ಯಾಕೆ? ಪ್ರಪಂಚವನ್ನೇ ಕಾಯುವ ನಿಮಗೆ ಈ ದಕ್ಷಿಣೆಯಾದರೂ ಯಾಕೋ?’ ಎಂದದ್ದೇ ತಡ ಆಕೆಗೆ ಮೈಯುರಿ ಜಾಸ್ತಿಯಾಗಿ ಹೋಯಿತು. “ಮ್ ಮ್ ಮ್... ಈ ಶಿಶು-ಮಗು ನನ್ನನ್ನೇ ಅನುಮಾನಿಸುತ್ತಿದೆ, ನಾನು ಸುಮ್ಮನೇ ಬಿಡುವುದಿಲ್ಲ, ಈ ಅಮಾವಾಸ್ಯೆಯ ಒಳಗಡೆ ಅದರ ಹೆಣ ಬೀಳುತ್ತದೆ” ಎಂದು ಹೇಳಿಯೇ ಎರಡು ವರ್ಷವಾಗಿದೆ. ಅಷ್ಟಕ್ಕೇ ಕೆಲ ಜನರು ನನ್ನನ್ನೇ ಏನೇನೋ ಹೇಳಿ ಚದುರಿಸಿದ್ದರು. ಆದರೆ ಅದೇ ಜನಗಳು ತಿರುಗಿ ಬಿದ್ದದ್ದೂ ಇದೆ, ನನ್ನನ್ನು ಮೆಚ್ಚಿಕೊಂಡು ಪ್ರಬುದ್ಧರಾಗಿ ಯೋಚಿಸಿದ್ದೂ ಇದೆ. ಹೀಗೆ ಒಂದೆರಡು ಬಾರಿ ಆ ದೇವರುಗಳ ಜೊತೆ ಈ ರೀತಿಯ ಅವುಗಳಿಗೆ ಇಷ್ಟವಿಲ್ಲದ “ಸಂಕಷ್ಟ ಸಂದರ್ಶನ” ಮಾಡಿದ್ದೆ. ಆ ದೇವತೆಗಳಿಗೆ ನಾನು ಎಂದರೆ ಇನ್ನಿಲ್ಲದ ಕೋಪ ಮತ್ತು ದ್ವೇಷವಿತ್ತು.

ಒಮ್ಮೆ ಈಕೆ ಇದೇ ನಾಟಕ ಹೊತ್ತು ಮೆರವಣಿಗೆಯೊಂದರಲ್ಲಿ ಸಾಗುವಾಗ, ಆಕೆಯ ಕೈಯಲ್ಲಿ ಬಳೆ ಮತ್ತು ಕುಂಕುಮ ತುಂಬಿದ ಒಂದು ತಟ್ಟೆಯಿತ್ತು. ಕೈಗಳು ಯತೇಚ್ಛವಾಗಿ ನಡುಗುತ್ತಿದ್ದುದ್ದರಿಂದ ಬಳೆಗಳೆಲ್ಲಾ ಕೆಳ ಬಿದ್ದು ಬಿದ್ದು ಹೊಡೆದು ಹೋಗುತ್ತಿದ್ದವು. ನಾನು ಬಳೆ ಬಿದ್ದು ಬಿದ್ದು ಹೊಡೆದು ಹೋಗುತ್ತಿರುವುದನ್ನು ನೋಡಲಾಗದೆ ‘ಅಮ್ಮಾ, ಕೈ ‘Vibration’ ಆಗೋದು ಬೇಡ’ ಎಂದೆ. ಅಷ್ಟೇ ಸಾಕಾಗಿತ್ತು ಆ ದೇವತೆಗಳಿಗೆ ನನ್ನ ಮೇಲೆ ಎಗರಿ ಎಗರಿ ಬೀಳಲು. “ಈ ಶಿಶು ಹಾಗೇ ಹೀಗೆ” ಎಂದುಕೊಂಡು ಬಾಯಿಗೆ ಬಂದಂತೆ ನನ್ನ ವಿರುದ್ಧವಾಗಿ ಮಾತಿಗಿಳಿದದ್ದೇ ತಡ, ಇದನ್ನೇ ಕಾಯುತ್ತಿದ್ದ ಕೆಲವರು ನನ್ನ ಮತ್ತು ಗೆಳೆಯರ ವಿರುದ್ಧ ತಿರುಗಿ ಬಿದ್ದಾಗ ಉಳಿದವರೆಲ್ಲಾ ಸೇರಿ ಆ ಕ್ಷಣಕ್ಕೆ ನಮ್ಮನ್ನೆಲ್ಲಾ ಶಾಂತಗೊಳಿಸಿದರು. ಹೀಗೆ ಸಾಗಿದ ಮೆರವಣಿಗೆಯಲ್ಲಿ ಬಳೆ ಬಿದ್ದು ಹೊಡೆದುಹೋಗುವ ಕೆಲಸ ಮಾತ್ರ ನಿಲ್ಲಲಿಲ್ಲ. ಇದನ್ನೆಲ್ಲಾ ನೋಡಿ ನೋಡಿ ಬೇಸರಗೊಂಡ ಆಕೆಯ ಪರಮ ಭಕ್ತ!ನೊಬ್ಬ “ಅಮ್ಮಾ, ಕೈ ಅಳ್ಳಾಡಿಸಬಾರದು” ಎಂದ. ಆ ದೇವತೆಗಳೂ ಏನೂ ಮಾತನಾಡಲಿಲ್ಲ. ನಾನು ಮತ್ತೆ ದೇವರ ಬಳಿ ಹೋಗಿ ಮತ್ತೆ ನೇರವಾಗಿಯೇ ಕೇಳಿದೆ.
“ಅಮ್ಮಾ, Vibration ಎಂಬ ಇಂಗ್ಲೀಷ್ ಪದಕ್ಕೆ, ಕನ್ನಡದಲ್ಲಿ “ಅಳ್ಳಾಡಿಸು ಅಥವಾ ಅಲುಗಾಡಿಸು” ಎನ್ನುತ್ತಾರೆ”. ಇಂಗ್ಲೀಷ್ ನಲ್ಲಿ ಹೇಳಿದಾಗ ನನ್ನ ಮೇಲೆ ಬಂದ ಕೋಪ, ಅದೇ ವಿಚಾರವನ್ನು, ಅದೇ ಧಾಟಿಯಲ್ಲಿ ಕನ್ನಡದಲ್ಲಿ ಹೇಳಿದ ಆತನ ಮೇಲೆ ಬರದಿರಲು ಕಾರಣ ವೇನು?” ಎಂದೆ. ಮತ್ತೆ ಆಕೆಯ ಆರ್ಭಟ ಜೋರಾಯಿತು. ಈ ಬಾರಿ ನಾನು ಮತ್ತು ನನ್ನ ಗೆಳೆಯರು ಬಿಡಬಾರದೆಂದೇ ವಾಗ್ವಾದಕ್ಕಿಳುಗಿದ್ದೆವು. ಆದರೆ ಅಚ್ಚರಿಯ ಸಂಗತಿಯೆಂದರೆ, ಆ ಏಳು ದೇವತೆಗಳು ನಮ್ಮ ಜೊತೆ ಮಾತನಾಡಲಾಗದೇ, ಆ ಮೆರವಣಿಗೆಯನ್ನೂ ಸಂಪೂರ್ಣಗೊಳಿಸಿಕೊಡದೇ ಮೈ ಬಿಟ್ಟು ಹೆದರಿ ಹೊರಟೇ ಹೋದವು. ಮತ್ತೆ ಕರೆದರೂ ಬರಲಿಲ್ಲ!

ಆ Vibration ವಿಚಾರದಲ್ಲಿನ ನನ್ನ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ. ಪ್ರಪಂಚದ ಎಲ್ಲಾ ಜನರನ್ನೂ ಉದ್ಧರಿಸುವಂತೆ ಆಡುತ್ತಿದ್ದ ಆಕೆಗೆ ಇದೇ ಪ್ರಪಂಚದೊಳಗಿನ ಎರಡು ಭಾಷೆಗಳ ಸಾಮ್ಯತೆ ತಿಳಿಯಲಿಲ್ಲ. ಈ ಘಟನೆ ನಡೆದ್ದದ್ದು 2005 ರಲ್ಲಿ. ಘಟನೆಯ ನಂತರ ನಾನಿದ್ದರೆ ಸಾಕು ದೇವರ ಆವಾಹನೆಯೇ ಆಗುತ್ತಿರಲಿಲ್ಲ. ಇಂದಿಗೂ ಅಷ್ಟೇ, ಅಪರೂಪಕ್ಕೊಮ್ಮೆ ನಾನು ಕೊಳ್ಳೇಗಾಲಕ್ಕೆ ಹೋದರೆ ಅಂದು ಆ ಏಳು ದೇವತೆಗಳಿಂದ ಅಘೋಷಿತ ರಜೆ!

Friday, 31 August 2012

ಅಭಿಪ್ರಾಯ ಮತ್ತು ಇತರೆ ಕಥೆಗಳು….

ಅಭಿಪ್ರಾಯ…

ಶಿಷ್ಯ: ಗುರುಗಳೇ ಈಗ ದೇಶದಲ್ಲಿ ಎಲ್ಲೆಲ್ಲೂ ಧರ್ಮ-ಧರ್ಮಗಳ ನಡುವೆ ಬರೀ ಗಲಭೆ, ದೊಂದಿ ನಡೆಯುತ್ತಿದೆ. ಈ ವಿಚಾರವಾಗಿ ತಮ್ಮ ಅಭಿಪ್ರಾಯವೇನು
ಗುರುಗಳು: ಧರ್ಮ ಧರ್ಮದ ನಡುವೆ ಎಂದೂ ಜಗಳ ನಡೆದಿಲ್ಲ. ಅದು ಅಧರ್ಮ ಅಧರ್ಮದ ನಡುವಿನ ಕಲಹ. ನಿನ್ನಭಿಪ್ರಾಯವನ್ನು ಮೊದಲು ಬದಲಿಸಿಕೋ..
---
ತಳ ನೀತಿ...

ಹಸಿವನ್ನು ತಾಳದ ಆಕೆ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದಳು. ಆಕೆಯನ್ನು ನೋಡಿದ್ದೇ ಗುರುಗಳು ಶಿಷ್ಯನ ಕಿವಿಯಲ್ಲಿ ಏನೋ ಪಿಸುಗುಟ್ಟಿದರು.
ಓಡಿಹೋದ ಶಿಷ್ಯ ತುಂಡು ಬಟ್ಟೆ ತಂದು ಆಕೆಯ ಮುಖ ಮುಚ್ಚಿದ...
---
ಅಕ್ಕಿ - ಅನ್ನ...

ಪಟ್ಟಣದ ಹೋಟೆಲ್ ಒಂದರಲ್ಲಿ ಹೊಟ್ಟೆ ತುಂಬಾ ತಿಂದ ರೈತನೋರ್ವ ಹೆಚ್ಚು ಹಣ ತೆತ್ತು ಬರುವಾಗ ಹೀಗೆ ಅಂದುಕೊಂಡ
"ಅಕ್ಕಿಯನ್ನು ಮಾರುವ ಬದಲು, ನಾನು ಅನ್ನವನ್ನೇ ಮಾರಬಹುದಾಗಿತ್ತಲ್ಲವೇ?"
---
ಗಾಳಿ…

‘ಈ’ ಜಾತಿಯವರಿಗೆ ದೇವಸ್ಥಾನ ಮತ್ತು ಹೋಟೆಲ್ ಒಳಗೆ ಪ್ರವೇಶವಿಲ್ಲ ಎಂದು ತೀರ್ಪಿತ್ತ ಊರ ಯಜಮಾನ ಸಮಾಧಾನಗೊಂಡು ಸಾವಧಾನದಿಂದ ಉಸಿರೆಳೆದುಕೊಂಡ
ಅವನು ಎಳೆದುಕೊಂಡ ಗಾಳಿ ಆ ‘ಈ’ ಜಾತಿಯವರ ಬೆನ್ನು ತಾಕಿ ಬಂದಿತ್ತು.
ಇಲ್ಲಿಗೆ ಬರುವಷ್ಟರಲ್ಲಿ ಅವರೂ ಎಳೆದು ಬಿಟ್ಟಿದ್ದ ಗಾಳಿ ಕೂಡಿಕೊಂಡಿದ್ದು ಆತನಿಗೆ ಗೊತ್ತೇ ಆಗಲಿಲ್ಲ….!
---
ಧರ್ಮ...

ಕೆಲವರನ್ನು ಭಯತ್ಪಾದಕರೆಂಬ ಶಂಕೆ ವ್ಯಕ್ತವಾಗಿ ಬಂಧಿಸಲಾಯಿತು…
ಒಬ್ಬ: ಅವರು ‘ಆ’ ಧರ್ಮದವರು…
ಮತ್ತೊಬ್ಬ: ತಪ್ಪು, ಅವರು ‘ಆ’ ಧರ್ಮವನ್ನು ಅರ್ಥ ಮಾಡಿಕೊಳ್ಳದವರು…!
---
ಬೇಡಿದವರು...

ಮೊನ್ನೆ ವಿಜಯ ಮಲ್ಯ ಎಂಬಾತ ದೇವಸ್ಥಾನ ಒಂದಕ್ಕೆ ಚಿನ್ನದ ಬಾಗಿಲು ಕೊಡಲು ಹೋದಾಗ ದೇವಸ್ಥಾನದ ಆವರಣ ಸ್ವಚ್ಛವಾಗಿತ್ತಂತೆ.
ಕಾರಣವೇನೆಂದರೆ 'ಇಷ್ಟು ದಿನ ಬೇಡುತ್ತಿದ್ದ ಭಿಕ್ಷುಕರನ್ನು ಹೊಡೆದು ಓಡಿಸಿದ್ದರು'
ಬೇಡದವನ ಬಳಿ ಹೋಗುವಾಗ ಬೇಡಿದವರೇ ಬೇಡವಾದರು...

ಅದೇ ಮಲ್ಯ ದೇವಸ್ಥಾನಕ್ಕೆ ಬರುವುದು ಒಂದು ಘಂಟೆ ತಡವಾಯಿತಂತೆ. ನಡೆದು ಬರುವ ವಿಜಯಮಲ್ಯನ ಕಾಲನ್ನು ಕಿಂಗ್ ಫಿಷರ್ ಕುಡಿದ ನಮ್ಮ ಸಿದ್ಧ ಹಿಡಿದುಕೊಂಡಿದ್ದ. ಸಿದ್ಧನ ಜುಟ್ಟಿನ ಜೊತೆಗೆ ಆಕೆಯ ಹೆಂಡತಿಯ ತಾಳಿಯನ್ನೂ ಹಿಡಿದುಕೊಂಡಿದ್ದ ಸಾಲ ಕೊಟ್ಟ ಊರ ಗೌಡ...
---
ಹಾಲು - ತುಪ್ಪ...

ಎಳೆ ಕಂದನನ್ನು ತಬ್ಬಿಕೊಂಡು ಭಿಕ್ಷೆ ಬೇಡುತ್ತಿದ್ದ ಅಮ್ಮ ಅಂದಳು "ಮಗುವೇ, ಭಿಕ್ಷೆ ಬೇಡಿಯಾದರೂ ನಿನಗೆ ಹಾಲು ತುಪ್ಪ ತಿನ್ನಿಸಿ ಸಾಕುವೆ"
ಆಕೆ ಬೇಡಿದ್ದು ದೇವರಿಗೆ ಕೇಳಿಸಲೇ ಇಲ್ಲ.
ಆತ ಕ್ಷೀರಾಭಿಷೇಕ, ತುಪ್ಪಾಭಿಷೇಕದಲ್ಲಿ ಮಗ್ನ.
ಮಗುವಿಗೆ ಬೇಕಾಗಿದ್ದ ಅದೇ ಹಾಲು, ತುಪ್ಪ ಆಲ್ಲಿ ಹರಿಯುತ್ತಿತ್ತು ದೇವಸ್ಥಾನದ ಮೂಲೆಗಿಂಡಿಗೆ
---
ಜಗಜ್ಜಾಹೀರು…

ಜಗಳದ ಮಧ್ಯೆ ಆಕೆ "ನೀನು ಗಂಡಸೇ ಅಲ್ಲ" ಎಂದು ಗಂಡನನ್ನು ಒಂದಷ್ಟು ಜನಗಳಿಗೆ ಕೇಳುವಂತೆ ಜೋರಾಗಿ ಬೈದಳು. ಮುನಿಸಿಕೊಂಡ ಆಕೆ ಬೇಸರ ಕಳೆಯಲು ಟೀವಿ ಹಚ್ಚಿದಳು..
“ಗಂಡನಿಗೇ ‘ಅದು’ ಇಲ್ಲ” ಎಂಬ ವಾರ್ತೆ… ಇವಳಿಗಿಂತ ಹೆಚ್ಚು ನಾಚಿಕೆಗೆಟ್ಟ ಮಾಧ್ಯಮಗಳು…
---
ಅಕ್ಕ ತಂಗಿ – ಅಣ್ಣ ತಮ್ಮ…

ಮೈ ಕೈ ಕಾಣುವಂತೆ ತುಂಡು ಬಟ್ಟೆ ಧರಿಸಿ ಬಂದಿದ್ದ ಆಕೆಯನ್ನು ಆತ ದುರುಗುಟ್ಟಿಕೊಂಡು ನೋಡುತ್ತಿದ್ದ…
ಆಕೆ: ನಿನಗೆ ಅಕ್ಕ ತಂಗಿಯರಿಲ್ಲವೇ?
ಆತ: ನಿನಗೆ ಅಣ್ಣ ತಮ್ಮಂದಿರಿಲ್ಲವೇ??!
---
ಸರಿ – ತಪ್ಪು..

ಕೈಯಿಂದ ಜಾರಿದ ಆ ಫೋಟೋ ಕೆಳಕ್ಕೆ ಬೀಳುತ್ತಿತ್ತು. ಕಾಲಿನಿಂದಲಾದರೂ ತಡೆಯಬಹುದಾಗಿತ್ತು.
ಸರಿಯೋ ತಪ್ಪೋ ಎಂದು ಯೋಚಿಸುವಷ್ಟರಲ್ಲಿ ಅದು ನೆಲಕ್ಕಪ್ಪಳಿಸಿ ಹೊಡೆದೇ ಹೋಯಿತು..

Saturday, 18 August 2012

ನೀವಿಬ್ಬರೂ ಒಂದೆ...!

ಜಗಮಳ್ಳಿ, ಕಳ್ಳಿ, ನಿನ್ನ ಮೈ ಕೈ ಬಿಳಿ
ದುಂಡಗೆ ಸಣ್ಣಗೆ ನುಣ್ಣಗೆ, ಹಾಲು
ಗೋಣಿಗೆ ನನ್ನ ತುಟಿಯೆಂಜಲು
ದಿನ ಸವಿದೆ ಮೃದು ಅಧರ ಕಮಾಲು

ಹೊರ ಚಾಚಿದಗ್ನಿ ಹೊಳೆವ ಸೌಷ್ಠವಾಂಗ
ಒಳ ಇಣುಕಿದರೆ ಬರೀ ಇದ್ದಲು ಬೂದಿ
ಹೊಗೆ ಗೂಡಿಗೆ ಗೂರಲು ಕೆಮ್ಮು
ಕೆಮ್ಮಿ ಕೆಮ್ಮಿದರೆದೆನೋವು ಏನೋ ವ್ಯಾಧಿ!

ಮೊದ ಮೊದಲು ಮುಟ್ಟಲು ಹೆದರಿದ್ದೆ
ಜಗ್ಗಿತ್ತು ಕುಗ್ಗಿತ್ತು ದೇಹ ನಡುಗಿ
ಈಗೀಗ ನೀ ಸುಟ್ಟರೂ ನಿನ್ನದೇ ನೆನಪು
ಚಟವೋ ಹಠವೋ ತೊಲಗೆ ಬೆಡಗಿ!

ಮಳೆ ರೈಲುಕಂಬಿ ಕೊಳೆ ಗೋಡೆಯ
ನಕ್ಕಪ್ಪನ ಫೋಟೋ ಅಣಕಿಸಿತ್ತು
ಮುಟ್ಟಿ ಮೈ ಮಾಟಕ್ಕೆ ಬಣ್ಣಕ್ಕೆ ಸ್ಪರ್ಶಕ್ಕೆ
ತುಟಿ ಸುಟ್ಟುಕೊಳ್ಳಬೇಡ ಎನ್ನುತ್ತಿತ್ತು!

ಚಂದ್ರಾಂಬರವಣಕಿಸಲು ನಕ್ಷತ್ರ ನೆನಹು
ಸುಟ್ಟು ಸುಟ್ಟು ಮೂಲೆಗೆಸೆಯುತ್ತೇನೆ
ಧೂಮಪಾನ-ಮತ್ತು ನೀನು, ಇಬ್ಬರೂ
ಹಾನಿಕಾರಕವೆಂಬುದನ್ನೇ ಮರೆಯುತ್ತೇನೆ!

Friday, 17 August 2012

ಒಂದಷ್ಟು ವಿಚಿತ್ರ ವಿದಾಯಗಳು…

ಆ ಟೇಬಲ್ಲಿನ ಮೇಲೆ ಬಿದ್ದ ಕೂದಲು
ಜೊತೆಗಿತ್ತು ಹುಟ್ಟಿದಂದಿನಿಂದಲೂ
ಬೆಳೆದಂತೆ ಕತ್ತರಿಸೊತ್ತರಿಸಿದರು
ತೆಂಗೆಣ್ಣೆ ನುಂಗಿ ನಿಂತಿತ್ತು
ಜೀವ ಭಾವ ಮೀಟಿ
ಬಂದವರೆಲ್ಲ ಪಕಳೆಯಂತುದುರಿದರೂ
ನೆರಳಂತಿದ್ದೆ ನೀ ಜೊತೆಗೆ
ಇಂದನಾಥ ಹೆಣ, ಸೇರು ಸ್ವರ್ಗ

ಹತ್ತತ್ತಿಪ್ಪತ್ತು ಬೆರಳಲ್ಲುಗುರು
ಕತ್ತರಿಸಿದರಳದೆ
ಹುಲುಸಾಗುವ ಚಿಗುರು
ಇಂದು ತುಂಡಂದು ಬುಡ
ಸೇರು ತಂಗಾಳಿಯೆಡೆಗೆ ಗೋಳಿಡಬೇಡ

ಹೇ ಸುಕ್ಕು ತೊಗಲೊಳ ಕೋಶವೇ
ಅಂದು ನಿನ್ನ ಸ್ಪರ್ಶಕ್ಕೆ
ತನು ಆತ್ಮಕಾಯ ಮನ ಪ್ರೇಮಮಯ
ಗೋಣೆತ್ತಿದರೆ ವಸ್ತ್ರ ನೆರಿಗೆ
ಹಣೆಯುದ್ದ ಹರಿದ ದಾರ ಮುಪ್ಪಿಗೆ
ಇದ್ದಷ್ಟು ದಿನ ನಿನ್ನೊಪಿನ ಖುಷಿ
ಹೋಗಿ ಬಾ ಬರಲಿ ಸುಖ ನಿನ್ನರಸಿ

ಒಳ ಇಳಿದ ಜಲ ಬೆವರು ಮೂತ್ರ
ರೈತನುಳುಮೆ ವರ್ಷದ ಹರ್ಷಕ್ಕೆ
ಕಾಳು ಮೊಳೆತೊಡೆದು
ಜೀವ ಬುಗ್ಗೆ ಇಣುಕಿ ಬೆಳೆದು
ಪೈರಾಗಿ ತೊನೆದು ಭತ್ತ ಒಡೆದಕ್ಕಿ
ಅನ್ನವಾಗೆನ್ನುದರ ಸೇರಳಿಯಿತು
ಅಲ್ಲೆಲ್ಲೂ ಕಳೆದುಹೋಗದ ಮುತ್ತು

ಬದುಕು ಬೆದಕಿನೊಂದಿಗಿದ್ದ ಶಕ್ತಿಯೇ
ಯಮ ಬಂದಿಹನು ಯವ್ವನವೇ
ಅಳಿದಳಿದು ಕಳಚಿ ಹೋಗು
ಉಳಿಯಲಿ ಬರಿ ಮುಪ್ಪು
ಹಠ ಮಾಡುವುದು ಲೋಕರೂಢಿ ತಪ್ಪು
ವಿದಾಯ ನಿನಗೆ, ಬರುವೆ ಹಿಂದಿಂದೆ
ಹಳ್ಳ ತೊರೆಗಳಲ್ಲಿ ಸಮುದ್ರ ಕೂಡುವುಪ್ಪು...!

Tuesday, 14 August 2012

ಅಮ್ಮ ಸ್ವಾತಂತ್ರ್ಯವೆಲ್ಲಿದೆ..?

ಐಷಾರಾಮಿ ವರ್ತುಲ ರಸ್ತೆಯುಬ್ಬಿನಲ್ಲಿ ಸರ್ಕಾರದ ಬೆವರು
ಹೆಣದ ಮೇಲಿನ ಸಿಂಗಾರ ಮಳೆ ತೋಡಿದ್ದ ಗುಂಡಿ
ಸಾಕಿದ ಸೊಳ್ಳೆ ಕಚ್ಚಿಸಿಕೊಂಡಲ್ಲೇ ಇದ್ದ
ಮುದ್ದು ಮಗು ಕೇಳಿತು "ಅಮ್ಮ ಸ್ವಾತಂತ್ರ್ಯವೆಲ್ಲಿದೆ?"

ಅದಾರೋ ಕೊಟ್ಟಿದ್ದ ಕೊಳೆ ಕಂಬಳಿ ಕೊಡವಿ ಹುಡುಕಿದಳು
ಹರಿದ ಸೀರೆ ತೂತಿನಲ್ಲಿ ಜೋತುಬಿದ್ದ ಮೊಲೆ
ಚೀಪುತ್ತ ಮಗು ಉಚ್ಚೆ ಹೊಯ್ದು ರಚ್ಚೆ ಮಾಡಿತು
'ಇನ್ನೂ ಸಿಕ್ಕಿಲ್ಲ ಮಗನೆ, ನೀ ಉಚ್ಚೆ ಹೊಯ್ದದ್ದು ಮಾತ್ರ ಸ್ವೇಚ್ಛಾಚಾರ!'

ಮಗು ಒದ್ದ ಸಿಲ್ವರ್ ತಟ್ಟೆ ಮೊಗಚಿತು, ಒಳಗಿದ್ದನ್ನದಾತನಳು ಗೋಳು
ಹೆಗಲ ನೇಗಿಲು ತರಚಿದ ಗಾಯದ ರಕ್ತದಲ್ಲಿರಲಿಲ್ಲ
ಹೊತ್ತಿ ಉರಿಯಿತು ಬೆಳಗಿ ತಡಿ ಭವ್ಯ ಬಂಗಲೆ ಮಹಲು ಕಮಾಲು
'ಮಗನೇ ಅಲ್ಲಿರಬಹುದು, ಒಂದಷ್ಟು ಬೆಳಕು ಕಂಡಿದೆ' ಬಾ ನೋಡೋಣ

ಬಂಗಲೆ ಬಂಗಲೆಯಲ್ಲಿ ವಿದ್ಯಾದಾನ ಮುಖವಾಡ ಗರ್ಭಪಾತ ಫಲಕ
ಜಾತಿ ತೊಲಗಲಿ ಸರಿ ನೀತಿ ಬರಲಿ ಎಂದವರ ಹತ್ತಿರ
ಕಂತೆ ಕಂತೆಯಲ್ಲಿ ಹೆಣದ ಮೇಲಿನ ಹಣ, ಜಾತಿ ಪ್ರಮಾಣ ಪತ್ರ
ಹುಣಸೇಮರದ ಕೊಂಬೆಗೆ ಜಾತಿ ಚೂರಿಯಲಗಿನ ಕೋಟಿಯಾತ್ಮ ಚೀತ್ಕಾರ ವಿಚಿತ್ರ

ಅಮ್ಮ ಹರಿದ ಸೀರೆ ಚಾಚಿದಳು ಕಂದನ ತುತ್ತಿನ ಹೊಟ್ಟೆ ಚೀಲ ಉಬ್ಬಲು
ಮುಂಜಾನೆಯ ಗಂಜಿ ಹಣ, ಕಸಿದ ಪೊಲೀಸ್ ಮಗನ ಹೆಣ'ದ ವಾಸನೆ
ರಸ್ತೆಯಿಳಿಜಾರಿನ ಮಲಪೈಪಿನೊಳಗೆ ಮಂತ್ರಿವರ್ಯ ನಿರ್ವೀರ್ಯ
ಶೂರರ ರಕ್ತಭ್ಯಂಜನದಲ್ಲಿ ಹುಟ್ಟಿದ ಸ್ವಾತಂತ್ರ್ಯ ನೀ ಯಾರ ಮನೆ ಹೊಸ್ತಿಲು?

ಮಗನೇ ಅಂದು ಇಲ್ಲೇ ಸಿಕ್ಕಿತ್ತು, ರಾತ್ರಿ ಮುತ್ತು ನೀ ಹುಟ್ಟಿರಲಿಲ್ಲವಿನ್ನು
ನಿನ್ನಣ್ಣಂದಿರಗೇ ಕೊಟ್ಟಿದ್ದೆ, ಅಂಧರು ತಂದಿಟ್ಟರು ತಲೆ ನೋವನ್ನು
ಬಿಡಬೇಡ ಕಂದಾ, ನನ್ನಾನಂದ ಹುಡುಕು ದುಡುಕಬೇಡ, ಮನೆ ಗುಡಿಸು
ಕೊಳೆ ಉಡುಗಿ ಹೋದಂತೆ, ಹೊಳೆವುದು ಮುತ್ತು, ಬಿಡು ಚಿಂತೆ...

Saturday, 11 August 2012

ದೇವಕಣ…

ಅದಾವುದದು ಕಾಣದಲೆ
ಊರ್ಣನಾಭನ ಬಲೆ
ಜಗ ಬಿಗಿದ ಸಂಕೋಲೆ, ಅಂಡಲೆ?!

ರೆಪ್ಪೆಯೊಳ ಶೂನ್ಯಾಂತ್ಯ ಮಣ್ಣು
ಕಣಕ್ಕುರುಳುರುಳು ಕಣ್ಣು
ಕೆರಳಾಡಿ ಕೆಂಪನೆ ಹಣ್ಣು
ಮೂಲೆಗೊತ್ತರಿಸಿಕೊಂಡ ಗೋಣು
ಕಂಡ ಕಣ ಕೊಂಡ ಕಾಣದ ಕಣದಣು

ಅಣುವಣು ಭಾಗಿಸೊಳಗಣು
ಕಣ ಕಣವೆಂಬುದ ಕಾಣೆ, ನನ್ನಾಣೆ
ಕಣದೊಳಗೆ ಕಣ ಹಲಗುಣ
ಕೊರೆ ಕೊರೆದಂತೆ ಕಣ
ಕಾಣದ ಕಣ ಕಂಡರೆ ನಿಧಿ ಹಣ
ಕೊನೆ ಕಣದೊಳಗುಳಿದಣು ಕ್ಷಣ!

ಕಾಣದ ಕಣ ನೀ ಕಂಡ
ಕಡಲೊಡಲೊಳು ಬಂಧಿ
ಅಪ್ರಬುದ್ಧ ಮೆಟ್ಟಿಲಿಟ್ಟ
ಕಿಟ್ಟ ಸುರಿದಟ್ಟಣಿಗೆಯೊಳಗೆ
ಮಾನವ ನಿರ್ಮಿತ ಸಂಬಂಧಿ

ಅಂಶಕ್ಕೆ ತಟಸ್ಥ ಸಂಖ್ಯೆ
ಛೇದಕ್ಕೆ ಬೇಡವಂಕೆ ಶಂಕೆ
ಚಲಿಸಲಿ ವಿಶ್ವಾಂತ್ಯಕ್ಕೆ
ಗಣಿತ ಭಾಗಲಬ್ದ ಸೊನ್ನೆ
ಲೋಪವಾಯಿತು ಕ್ಷಮಿಸಿ
ಸೊನ್ನೆಯಲ್ಲ, ಶೂನ್ಯ ಸಮೀಪ
ನಿನ್ನೆಗೆ ನಿನ್ನೆ ಮೊನ್ನೆಗೂ ಮೊನ್ನೆ

ಅಳೆಯಲಾಗದಪರಿಮಿತಳತೆಯ
ಗಟ್ಟಿಕಣ ನೀ ವ್ಯಾಸ ಶೂನ್ಯ
ಸಚಿತ್ರ ಭ್ರಮೆಯಲ್ಲಿ ಚಿತ್ರ ಬರೆದು
ವಿಚಿತ್ರ ಕಟ್ಟು ಕಟ್ಟಿ
ಮೊಳೆ ಕುಟ್ಟಿ ಊರ ತಡಿಕೆಗೆ
ಬಂಧಿಸುವಿರಾದೆಯೇ ಜಗ ತುಟ್ಟಿ

Friday, 10 August 2012

ಸುದ್ದಿ...

ಮೊನ್ನೆ ಕಾಗೆ ನೆತ್ತಿಯೊತ್ತಿ
ನನ್ನ ಮುಂದೆ ಕಾ ಕಾ
ಎಂದರಚಿದಾಗ
ತಿನ್ನಲೆರಡಗಳೆಸೆದದ್ದು
ದೊಡ್ಡ ಕೆಟ್ಟ ವಾರ್ತೆಯಾಯ್ತು

ಹಾದರಗಿತ್ತಿ ಹೆತ್ತ ಮಗು
ಊರಾಶ್ಚರ್ಯಸಹ್ಯ
ತೂ ಎಂದ ಮಂದಿ
ಬೀದಿಯಲ್ಲಿ ದೊಂದಿ
ಅವಳ ಮನೆ ಭಿತ್ತಿ ಮೇಲೆ
ಅಸ್ಪಷ್ಟ ವೀರ್ಯ
ಡಿ.ಎನ್.ಎ ಸುದ್ದಿ ನಿರ್ವೀರ್ಯ!

ಐಶ್ವರ್ಯ ರೈಗೂ ಹೆರಿಗೆ ಬೇನೆ
ಹೆಣ್ಣು ಇಲ್ಲವೆ ಗಂಡು ತಾನೆ?
ಬೇರೇನಾಗುವುದಿತ್ತು?
ಆಗುವುದರಾಗಲಿ ಜಗಮಾತು
ಅವಳಾಡಂಬರ ಮನೆ
ಹೊಸ್ತಿಲ ಕಾಲು ಹಿಡಿದ
ಕಿಟಕಿ ಗೋಡೆ ಮೇಲೆ ಜೋತ
ಹರಕು ಬಟ್ಟೆ ನಮ್ಮ ಪುಟ್ಟಿ
ಆಧುನಿಕ ಕ್ಯಾಮರಾಕ್ಕೂ ತುಟ್ಟಿ!

ಮಂತ್ರಿ ಭವ್ಯ ಬಂಗಲೆ ಮುಳ್ಳು
ಹೂವಿನ ಮೇಲೆ ಕುಳಿತ ಸಿದ್ಧಿ
ಅಪ್ಪ ಎನ್ನುತ್ತಿತ್ತು ಮಗು
ಮನೆ ಮಾಲೀಕನ ಗುದ್ದಿ
ಬ್ರೇಕಿಂಗ್ ನ್ಯೂಸ್ ನಲ್ಲಿ
ತಾಯಿ ಮಗು ಸಂಬಂಧ ಬ್ರೇಕ್
ಹುಚ್ಚಾಸ್ಪತ್ರೆ ಪಕ್ಕ ಅತ್ತನಾಥಾಶ್ರಮ

ಬಚ್ಚಲ ಮನೆಯೊಳಗಿಣುಕಿದ
ಕರಿ ನಾಗರಕ್ಕೆ
ದೇವರ ನಾಮ ಎಳೆದು
ನೆರೆ ಮನೆ ಜಿರಲೆಯ
ಆರು ಕಾಲಿಗೊಂದೊಂದು
ಸುದ್ದಿ ಕಟ್ಟಿದವನು
ದೋಷೋದ್ಧಾರಕ ಪ್ರಚೋದಕ
ಅರೆಬೆಂದನ್ನಕ್ಕೆ ಮೊಸರು

ಸದ್ದಿಲ್ಲದೆ ಗುದ್ದಲಿ ಪಿಕಾಸಿ ಚೂರಿ
ಹಿಡಿದ ಸುದ್ದಿಗಾರರು
ಹೆಗ್ಗಣ ಬಿಟ್ಟಗೆದರು ಬೆಟ್ಟ
ಹಿಡಿದರಿಲಿ
ಘರ್ಜಿಸಿದಂತೆ ಸತ್ತ ಹುಲಿ
ತಂತಿಗೆ ನೇತುಹಾಕಿ ಬಾವಲಿ
ಮಾಂಸವೇ ಇಲ್ಲದೆಲುಬಿಗೆ
ಇಳೆ ಸೀರೆ ಸೆರಗಿಗೆ ಕೈ
ಈ ಹಾಳು ಸೂರ್ಯನದೋ ಎಂದಿನ ನಗು

Friday, 27 July 2012

ರಾತ್ರಿ ರೋಷ...

ಹಗಲ ಸುಸ್ತಿಗೆ ರಾತ್ರಿ ಮೈಮುರಿಯಲು
ಉಸಿರುಗಟ್ಟಿ ಸತ್ತು ಬಿದ್ದ ಮನೆಗಳು
ಮೋಡ ಹೊದಿಕೆ ಹೊದ್ದು
ತೂಕಡಿಸಿದ ಕಳ್ಳ ಚಂದ್ರ ತೇರು
ಇನ್ನೂ ಸಾಯದ ಬೀದಿ ದೀಪ ಚೂರು!

ನಿದ್ರಾ ನಾಲಗೆ ರಸ್ತೆಯ ಮೇಲೆ
ಮುಂಜಾನೆ ಗಂಜಿ ಹಣ
ಕುಡಿದ ಪೋಲೀಸ್ ಮಗನ ಹೆಣ
ಬೊಜ್ಜು ಬೆಳಸಿಕೊಂಡವನ ಘಾಟಿ
ಲಿಫ್ ಸ್ಟಿಕ್ ಹೆಂಡತಿಗೊಬೇಸಿಟಿ

ನಿನ್ನೆ ತನ್ನ ಗಂಡ ಮಚ್ಚು ಬೀಸಾರನ್ನೋ
ಕೊಚ್ಚಿ ಮುಚ್ಚಿದ ಜಾಗದಲ್ಲಿ
ಅವನ ಹೆಂಡತಿ ಬರಿ ನೊಸಲಲ್ಲಿ
ಹುಡುಕಿದ್ದಾಳೆ ತನ್ನ ತಾಳಿ
ಕತ್ತಲು ನುಂಗದ ಸೀರೆಯೋ ಬಿಳಿ

ನನ್ನ ಮನೆ ಮುಂದಿನಿಳಿಜಾರಿನ
ಮಲ ಪೈಪಿನೊಳಗೆ ಸಿಕ್ಕಿಕೊಂಡ
ಮಂತ್ರಿವರ್ಯ ನಿರ್ವೀರ್ಯ
ಹೈಕೋರ್ಟ್ ಕಂಬ ದಿಂಬಗಳಿಗೆ
ಹಾಲಿ ಮಾಜಿ ಮೂಳೆಗಳು, ನೆಕ್ಕಿದ ಚೇಲಗಳು

ಕವಲು 'ಕಮಲ' ನೋಡಿ ನಕ್ಕ
'ಕೈ'ಗೆ ಗುಲಾಬಿ ಮುಳ್ಳು
ಕಿಡಿ ಬೆಂಕಿಹೊತ್ತಿಕೊಂಡ 'ತೆನೆ'
ಆದರೂ ಬಗ್ಗದ ಕುಗ್ಗದ ಡೊಗ್ಗು
ಶ್ವಾನ ಷಂಡ ಭಂಡ ಪುಂಡ ದಂಡರು

ಜಗ ದೂರದರ್ಶನದ ಗಿಂಡಿಯಲ್ಲಿ
ಯಾವುದಾವುದೋ ಮನೆಯ
ವಾಸನೆ ಬಡಿದ ಹಾಸಿಗೆಗಳು
ಯಾವುದೋ ಬೀದಿಯ
ಕಾಮ ಗಲ್ಲಿಗಳು
ಕಾಲ್ದಾರಿಗೆಟುಕದ ಜಾಗಗಳು
ನಾರಿ ಗಬ್ಬಿಟ್ಟ ಕಕ್ಕಸ್ಸು
ಮನೆಗಳು
ಮೂಗು ಮುಚ್ಚಿಕೊಂಡು
ಕಾಲೆತ್ತಿಕೊಂಡ ಜೋಡಿಗಳು
ಕೆಂಡಕ್ಕೆ ಮುತ್ತಿಟ್ಟಿರುವೆಗಳು

Friday, 13 July 2012

ತ್ರಿ-ಸಂಗಮ…

(ಬೆಳಕು ಅಡರಿರುವ ಜಾಗಗಳಲ್ಲಿ ನಾಲ್ಕು ಗೋಡೆ ಮತ್ತು ಮೇಲೆ ಮಾಡನ್ನಿಟ್ಟುಬಿಟ್ಟರೆ ಇಲ್ಲದ ಕತ್ತಲು ಹಠಾತ್ತನೇ ಕೂಡಿಕೊಳ್ಳುತ್ತದೆ. ಆ ಕತ್ತಲೆಲ್ಲಿತ್ತು? ಅಂದರೆ ಬೆಳಕಿನೊಂದಿಗೆ ಕತ್ತಲ ಸವಾರಿಯಿತ್ತು. ಹಾಗೆಯೇ ಪ್ರತಿ ಜೀವದೊಳಗೆ ನಡೆಸುವ ಭಾವ ಮತ್ತು ನಡೆವ ಭಾವವನ್ನು ಕೆಡವಿ ಹಾಕುವ ಭಾವವಿರುತ್ತದೆ.(ಬೇಂದ್ರೆ ಅಜ್ಜ ಹೇಳಿದ್ದು- ನಾಕುತಂತಿಗಳು, ನಾನು, ನೀನು, ಆನು ಮತ್ತು ತಾನು - ನಾನು ಎಂದರೆ ಗಂಡ, ನೀನು ಎಂದರೆ ಹೆಂಡತಿ, ಆನು ಎಂದರೆ ಮಗ ಮತ್ತು ತಾನು ಎಂದರೆ ಈ ಎಲ್ಲಾ ವಿಚಾರಗಳನ್ನೂ ನಿಯಂತ್ರಿಸುವ ಯಾವುದೋ ಶಕ್ತಿ. ಹಾಗೆಯೇ ಇಲ್ಲಿ, ನಾನು ಎಂಬುದರೊಳಗೆ ಅವನು ಮತ್ತು ಇವನು ಎಂಬ ಎರಡು ವಿರುದ್ಧಾರ್ಥಕ ಭಾವವನ್ನು ಎಣಿಕೆ ಮಾಡಿಕೊಂಡಿದ್ದೇನೆ) ಉದಾಹರಣೆಗೆ: ಮನಸ್ಸು ಒಂದು ನಿರ್ಧಾರ ಪ್ರಕಟಿಸಿದರೆ, ಕೆಲವೇ ದಿನ ಅಥವಾ ಕ್ಷಣಗಳಲ್ಲಿ ಅದೇ ನಿರ್ಧಾರ ಕೊನೆಗೊಳ್ಳುತ್ತದೆ. ಅಲ್ಲಿ ನಿರ್ಧಾರ ಪ್ರಕಟಿಸುವ 'ಅವನಿಗು' ಮತ್ತು ನಿರ್ಧಾರ ಕೊನೆಗೊಳ್ಳಿಸುವ 'ಇವನಿಗು' ನಿರಂತರ ಜಗಳ, ಗದ್ದಲವಿದೆ. ಹಸಿರ ಮರದೆಲೆಗೆ ಸೂರ್ಯನ ಬೆಳಕು ಬಿದ್ದರು, ಆ ಎಲೆಯ ಕೆಳಗಡೆ ಕತ್ತಲಿರುತ್ತದೆ. ಬಲ್ಬುರಿಸಲು ಕತ್ತಲು ಬೇಕು, ಕತ್ತಲೊಳಗೇ ಸ್ವಿಚ್ಚನ್ನು ಹುಡುಕಬೇಕು)

೧.

ಅವನಿಯೊಳವನಿವನ
ಗಹನ ಭಾವ ವಿಹೀನ
ವಿರುದ್ಧಾರ್ಥಕ-
ಕದನಕ್ಕೆ ದಹನ ನಾ
ಮರೆತು ತನನsನ

ಬೇಂದ್ರೆ ‘ನಾ’ ನಿಗೆ, ನಿನಗೆ
ಬೀಜಾಕ್ಷರ ಹೆಣಿಗೆ
ನಾವು ನೀವಿಗವ ಇವ
ದ್ವಿ-ಬಿರಡೆ ತಂತಿಗೆ
ಅಜ್ಜ ನೆನಪಿಸಿಕೊಳ್ಳದ
ವಿದ್ವತ್ತಲ್ಲದದ್ವಾನಕೆ

ಅಡಿಗಡಿಗೆ ಘಟದಡಿ ಮುಡಿಗೆ
ನುಡಿ ನುಡಿಸಲವ-ನುಡಿ
ಕೆಡಿಸಲಿವ-ನಡು ನಡುವೆ
ನಡು ನಡುಗಿ ಗುಡು
ಗುಡುಗೆದೆ ಬಡಿದೆ ನಾನಡಗಿ!

ತಂತ್ರಿ ಮಂತ್ರ ಕೆಡಿಸೇ
ಕುತಂತ್ರಿಯೋರ್ವ
ಮಂತ್ರಿ
ಮಹೋದಯನ ಸಂಘ
ಅಸ್ವತಂತ್ರಿ ಬಜಂತ್ರಿ-
ಭಂಜಕ, ಕು-ತಂತ್ರಿ,
ಅತಂತ್ರಿ ನಾನವನಿವನತಂತ್ರಕೆ

೨.

ಅ.

ಹಸಿರ ಹಾಸಿಗೆ ಮರ ಮರ
ಉಸಿರ ಚಿಮ್ಮಿಸಿತ್ತಮರ
ಬಸಿದೆಲೆಗೆ ರವಿ ತೇಜೊಸಗೆ
ಕುಸುರಿ ಕೊಸರಿತೊಣಗೆ
ಕೃಷ್ಣ ವರ್ಣದವರ್ಣ ದಾರಿಗೆ

ಆ.

ಆ ಗೂಡಿಗೆ ನಾಲ್ಕು ಗೋಡೆ
ಮೇಲೆ ಮಾಡಿನಡೆ
ಬೆಳಕ ತಡೆ
ತಿಮಿರ ವಿಜಯ ನಡೆ
ಒಳಗರ್ಭ ನಾ ನೋಡೆ

ಇ.

ಸೂಲಗಿತ್ತಿ ಹೆರಿಸಲು
ಕಾಲನಿತ್ತ ಕತ್ತಲು
ಮರೆತು ಜಗವೊತ್ತಲು
ಹೊರ ತದ್ರೂಪದಳು
ಬೆಳಕ ಚೀತ್ಕಾರ
ಸಾವಿನವಸರದಲ್ಲಿ
ಘೋರಾಂಧಕಾರ ಪೂರ

ಈ.

ಬಲ್ಬುರಿಸಲು ಕೆಡಿಸಲು
ಸ್ವಿಚ್ಚಿನ ಸಾಲು
ಉರಿದ ಬಲ್ಬಡಿಯಲ್ಲಿ
ಗುಂಡಿ ಗೋಚರ
ಕತ್ತಲೊಳ ಸ್ವಿಚ್ಚೊತ್ತು
ಹೊತ್ತಿಗೆ ಬೆಳಕ ಮುತ್ತು

೩.

ಖಂಡ ತುಂಡ ಭೂಮಂಡಲದೊಳ್
ನನ್ನೊಳಿಬ್ಬರ ಜಗಳವಖಂಡ
ಸುಪ್ತಾಪ್ತತೃಪ್ತ ಜಾಗೃತ ಭಂಡ
ಮಸ್ತಿಷ್ಕದೊಳಶೇಷ ಹಳವಂಡ

ಒಪ್ಪಿಕೊಂಡಪ್ಪಿದ ಶತ ಶೃತ ಭಾವ
ಉದುರುವವು ಹೂ ಪಕಳೆಯಂತೆ
ಡೊಗ್ಗು ಸಲಾಮು ಹುಗ್ಗಿಗೆ ಬಗ್ಗದ
ಕುಗ್ಗದ ಕುಗ್ಗಿಸುವೆಗ್ಗಿಲ್ಲದೊಳ ಚಿಂತೆ

ಮೊನ್ನೆ ಕೂಡಿದೆದೆ ಹಂದರ ಭಾವ
ನಿನ್ನೆ ಹಾಳು ಗೋಳು ಮಸಣ ಹೂ
ಇಂದರಳಿತು ನಾಳೆ ದಿನದುರಿ
ಸೂರ್ಯನಿಗೆ ಚಾಚದರರಿ ಬಾಹು

ಒಬ್ಬರನ್ನೊಬ್ಬರು ತೊರೆಯದಿಬ್ಬರ ಗದ್ದಲಕ್ಕೆ
ಮೂರನೆ ದೇಹದುರಿ ನರ ಬಿಗಿತ
ಬೆಂಕಿ ಹಚ್ಚಿ ಮೆರೆದ ಕಾಣದಡಗುಡುಗಿದ
ಕಂಡರೂ ಕಾಣದೊಪ್ಪದಿಂಗಿತ

೪.

ಒಳ ತಿರುಳ ಕೆರಳಿಸೆ
ನಗುವ ಒಬ್ಬನ
ಎದೆ ಬಗೆವ ಇನ್ನೊಬ್ಬನ
ನಡುವೆ ನಿಂತೆ 'ನಾ'

ಒಬ್ಬನ ದಬ್ಬಿ ಇನ್ನೊಬ್ಬನ ತಬ್ಬಿ
ಬದುಕುವುದಸಾಧ್ಯ ದುರ್ಗಮ
ಕಾಯದೊಳಗೆ ಬೇಯುವ ತ್ರಿಸಂಗಮ

Tuesday, 10 July 2012

ಕಾಣದ ನೆರಳು... (ನೈಜ ಘಟನೆಯ ಎಳೆಯೊಂದಿಗೆ...)

ಸಮಯ ಸರಿರಾತ್ರಿ ಒಂದು. ಸುತ್ತಲ ನೀರವತೆಗೆ ಊರಂಚಿನ ಕೆರೆ ಏರಿ ಮೇಲಿನ ಗಾಳಿಯ ರಭಸ ಗುಯ್ ಎಂದು ಕಿವಿಗೆ ಬಡಿಯುತ್ತಿದೆ. ಏನೂ ಇಲ್ಲದಿದ್ದರೂ ಅದೇನನ್ನೋ ನೋಡಿಕೊಂಡು "ಕುಯ್ಯೋ" ಎಂದು ರಾಗ ಎಳೆದು ಬೊಗಳುವ ನಾಯಿಗಳು. ನೆರೆ ಮನೆಯ ಹಸುಗಳು ಮೆಲುಕು ಹಾಕುವ ಶಬ್ದ ಲಯಬದ್ಧವಾಗಿ ಕಿವಿಗೆ ಸುಳಿದಿದೆ. ಹಗಲೆಲ್ಲ ಜನಗಳಿಂದ ಗಿಜಿಗುಟ್ಟುತ್ತಿದ್ದ ಹಳ್ಳಿಯ ಆ ಕೇರಿ ಮತ್ತು ರಸ್ತೆ, ಬೀದಿ ದೀಪದ ಚೂರಿನಲ್ಲಿ ಮೌನವಾಗಿ ಭಯವನ್ನು ನುಂಗಿಕೊಂಡಿದೆ. ಕೆರೆ ಏರಿ ಮೇಲೇ ಹಾದುಹೋಗುವ ಹೊಲ ಕಾಡಿಗೊಯ್ಯುವ ಕಾಲ್ದಾರಿ ಅಕ್ಷರಶಃ ಮುಗುಮ್ಮಾಗಿ ಏನೋ ಅವ್ಯಕ್ತ ಭಯ ಹುಟ್ಟು ಹಾಕಿತ್ತು. ತಡಿಯಲ್ಲಿದ್ದ ಮರಗಳ ಕೊಂಬೆ ರೆಂಬೆಗಳು ಆ ಜಗ ಸತ್ತ ಹೊತ್ತಿನಲ್ಲೂ ಅಲುಗಾಡಿಕೊಂಡು ಒಂದಕ್ಕೊಂದು ಮಾತನಾಡಿಕೊಳ್ಳುತ್ತಿದ್ದವು. ಅವನಿಗೆ ಆ ಮಾರಮ್ಮನ ದೇವಸ್ಥಾನ ದಾಟಲು ಎಂಥದೋ ಭಯ. ಊರನ್ನೆಲ್ಲಾ ಕಾಯುವ ಮಾರಿಗುಡಿಯ ಬಳಿ ರಾತ್ರಿಯ ಸಮಯದಲ್ಲಿ ಹೋಗಲು ಆ ಜನಕ್ಕೆ ಮೊದಲಿನಿಂದಲೂ ನಡುಕ. ತ್ರಿಶೂಲ ಹಿಡಿದ ಚಂಡಿ ಮಾರವ್ವನನ್ನು ಗಾಢ ಕತ್ತಲ ನಡುವಿನ ಮಂದಬೆಳಕಿನಲ್ಲಿ ನೋಡುವ ಧೈರ್ಯ ಯಾರಿಗೂ ಇರಲಿಲ್ಲ. ಇಂದು ಮಾತ್ರ ಆತ ಧೈರ್ಯ ತಾಳಿ ಆ ದೇವಸ್ಥಾನ ದಾಟಿ ಆ ಮನೆ ಬಳಿ ಬಂದೇಬಿಟ್ಟ.

ಈತ ಬಂದದ್ದೇ ಬೇಲಿಯ ತಡಿಯಿಂದ ಯಾರೋ ಸರಸರನೇ ಒತ್ತರಿಸಿಕೊಂಡು ಓಡಿಹೋದರು. ಸೂಜಿ ಬಿದ್ದರೂ ಘಂಟೆ ಭಾರಿಸಿದಂತೆ ಕೇಳುವ ಜಾಗದಲ್ಲಿ ಒಮ್ಮೆಲೇ ಆ ರೀತಿ ಶಬ್ದ ಬಂದದ್ದರಿಂದ ಆತ ದತ್ತನೆ ಬೆಚ್ಚಿಹೋದ. ಕೈಕಾಲು ಅದುರುತ್ತಿದ್ದವು. ಜೋರುಗೊಂಡ ಹೃದಯ ಬಡಿತ ಆತನಿಗೆ ಸ್ಪಷ್ಟವಾಗಿ ಕೇಳ ತೊಡಗಿತು. ಆ ಬೇಲಿಯ ಮೂಲೆಯಲ್ಲಿ ಏನೋ ಬಿಳಿಯ ವಸ್ತು ಬಿದ್ದಿರುವಂತೆ ಕಂಡಿತು. ಧೈರ್ಯ ತಳೆದು ಹತ್ತಿರ ಹೋದವನೇ ಕ್ಷಣಮಾತ್ರದಲ್ಲಿಯೇ ಆ ವಸ್ತುಗಳನ್ನು ಮುಟ್ಟಲು ಹೆದರಿದ. ಹೆಜ್ಜೆ ಹಿಂದಕ್ಕೆ ಊರಿದ. ಅದು ಬಟ್ಟೆಯ ಗಂಟು, ಒಳಗೆ ಏನೋ ಇದೆ ಎಂದು ಗೊತ್ತಾಯಿತು. ನೋಡೇಬಿಡುವ ಎಂದುಕೊಂಡು ನಿಧಾನವಾಗಿ ಕುಳಿತು ಆ ಬಟ್ಟೆ ಮುಟ್ಟುವಷ್ಟರಲ್ಲಿ, ಪಕ್ಕದಲ್ಲಿದ್ದ ಮರದ ಮರೆಯಿಂದ ಯಾರೋ ಧೊಪ್ಪನೇ ಕಲ್ಲನ್ನು ಅವನೆಡೆಗೆ ಎಸೆದರು. ಮತ್ತೆ ಅದುರಿದ ಆತ, ಒದರಿಕೊಂಡು ಥಟ್ಟನೇ ನಿಂತುಕೊಂಡ, ಕಲ್ಲು ಗುರಿ ತಪ್ಪಿತ್ತು.
ಮರದ ಮರೆಯಲ್ಲಿ ಇದ್ದಕ್ಕಿದ್ದಂತೆ ಒಂದು ನೆರಳು ಪ್ರತ್ಯಕ್ಷವಾಯಿತು.

"ಯಾರು....? ಯಾರೂ...? ಏ ಯಾರದು...?"

ನಡುಗುವ ಕೈಯನ್ನು ಸಾವಧಾನವಾಗಿ ಜೇಬಿಗಿಳಿಬಿಟ್ಟು ಮೊಬೈಲ್ ಎತ್ತುಕೊಂಡ. ಮೊಬೈಲ್ ನ ಟಾರ್ಚನ್ನು ಆನ್ ಮಾಡುವಷ್ಟರಲ್ಲಿ ಆ ನೆರಳು ಮಾಯವಾಯಿತು. ಬೇಲಿಯ ತಡಿಯ ಓಣಿಗೆ ಚಂಗನೆ ನೆಗೆದ ಆ ಪ್ರತಿಮೆ ಎರಡು ಮನೆಗಳ ನಡುವೆ ಇರುವ ಕತ್ತಲ ಸಂಧಿಯೊಳಗೆ ತೂರಿಕೊಂಡಿತು. ದೀಪದ ಬೆಳಕಿನಲ್ಲಿಯೇ ನಿಂತುಕೊಳ್ಳಲು ಅದುರುವ ಮೌನದ ಹೊತ್ತಿನಲ್ಲಿ, ಇನ್ನ ಆ ಸಂಧಿಗೆ ನುಗ್ಗುವುದು ಪುಕ್ಕಲುತನದ ಪರಮಾವಧಿಯೆನಿಸಿ ಆತ ಅತ್ತ ಸಾರಲಿಲ್ಲ.

ಧೈರ್ಯಗೆಡದ ಆತ ಮತ್ತೆ ಕುಳಿತುಕೊಂಡ. ಇದ್ದಕ್ಕಿದ್ದಂತೆ ಹಿಂದೆ ಯಾರೋ ಬಂದಂತೆನಿಸಿ ಹಠಾತ್ತನೆ ತಿರುಗಿನೋಡಿದ. ಜೋರಾಗಿ ಬೀಸಿದ ಗಾಳಿಗೆ ಆಲದ ಮರ ಕೆಂಜೆಡೆ ರುದ್ರನಂತೆ ಅಲುಗಾಡುತ್ತಿತ್ತು. ಪ್ರತಿದಿನ ಮುಂಜಾನೆಯೇ ಆತ ಸೌದೆ ತರಿದುಕೊಂಡು ಬರುತ್ತಿದ್ದ ಪೂರ್ವದ ಜುಜ್ಜಲುಕಟ್ಟೆ ಗುಡ್ಡ ಆತನಿಗೆ ದೆವ್ವದಂತೆ ಕತ್ತಲಕೂಪದಲ್ಲಿ ವಿಚಿತ್ರವಾಗಿ ಕಂಡಿತು.
ಹೌದು ಅದು ಬಟ್ಟೆಯ ಗಂಟು. ಅದರ ಪಕ್ಕದಲ್ಲಿಯೇ ಒಂದು ಗುಂಡಿ ಅಗೆಯಲಾಗಿತ್ತು. ಆ ನೆರಳು ನುಗ್ಗಿದ ಸಂಧಿಯಿಂದ ನಾಯಿ ಗೀಳಿಟ್ಟ ಶಬ್ದದೊಂದಿಗೆ ಯಾರೋ ವಿಚಿತ್ರವಾಗಿ ನಕ್ಕ ಶಬ್ದ ಬಂದಿತು. ಯಾಕೋ ಅಲ್ಲಿ ಆತನಿಗೆ ಅದನ್ನು ಬಿಚ್ಚಿ ನೋಡುವ ಧೈರ್ಯ ಬರಲಿಲ್ಲ. ಗಂಟನ್ನು ಕಂಕುಳಲ್ಲಿ ಸಿಕ್ಕಸಿಕೊಂಡವನೇ ನೇರವಾಗಿ ಮನೆಗೆ ಬಂದುಬಿಟ್ಟ. ನಡೆದುಬಂದ ದಾರಿಯನ್ನು ತಿರುಗಿ ನೋಡುವ ಧೈರ್ಯವೂ ಬರಲಿಲ್ಲ. ಮನೆ ಒಳಕ್ಕೆ ನುಗ್ಗಿದವನೇ ಧಡಾರನೇ ಬಾಗಿಲು ಮುಚ್ಚಿಕೊಂಡು ಗೋಡೆಗೆ ಒರಗಿಕೊಂಡ. ಒಂದೇ ಸಮನೆ ಏದುಸಿರು ಬಿಡುತ್ತ ನಿಂತುಬಿಟ್ಟ. ಎದೆ ಢವ ಢವ ಎಂದು ಒಡೆದುಕೊಳ್ಳುತ್ತಿತ್ತು. ನಡುಗುತ್ತಿದ್ದ ಕೈ ಕಾಲುಗಳು ಸ್ವಲ್ಪ ಹತೋಟಿಗೆ ಬಂದವು.

ಕೈಯಲ್ಲಿದ್ದ ಬಟ್ಟೆ ಯಾವುದೋ ಎಳೆ ಮಗುವಿನದು. ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಬಿಚ್ಚಿ ನೋಡಿದಾಗ ಅದರೊಳಗೆ ಒಂದಷ್ಟು ಮಗುವಿನ ಬಳೆಗಳು, ಓಲೆ, ಎರಡು ಕೆಳ ಉಡುಪು ಇತ್ತು. ಆತನಿಗೆ ಕೆಲವು ವಿಚಾರಗಳು ಅಸ್ಪಷ್ಟವಾಗಿ ಗೋಚರಿಸಿದವು. ಇದನ್ನು ಹೂಳಲು ಬಂದವರು ಯಾರಿರಬಹುದು? ಆ ನೆರಳು ಖಂಡಿತ ಯಾವುದೋ ಹೆಣ್ಣು ದೆವ್ವದ್ದು ಎಂದೆನಿಸಿತ್ತು.
-
ಆ ತಾಯಿಯ ಅಳು ಇಂದು ಕೂಡ ನಿಂತಿರಲಿಲ್ಲ. ಒಂದು ವಾರದಿಂದಲೂ ಅನ್ನ ನೀರು ತ್ಯಜಿಸಿ ಕೇವಲ ನೀರು ಕುಡಿದು ಅದನ್ನೂ ಕಣ್ಣೀರಾಗಿ ಹರಿಸಿದ್ದಳು.
"ಹೆತ್ತ ಮಗುವನ್ನು ಕಳೆದುಕೊಂಡರಾಗುವ ಸಂಕಟ ಆ ತಾಯಿಗೆ ಗೊತ್ತು, ಅತ್ತು ಹಗುರಾಗಲಿ ಬಿಡಿ, ಬಂಗಾರದಂತೆ ಆಟ ಆಡಿಕೊಂಡಿದ್ದ ಮಗುವನ್ನ ನುಂಗಿ ಬಿಟ್ಟರು ಪಾಪಿಗಳು" ಎಂದವರೆಲ್ಲರೂ ಇಂದು ಮುಂದೆ ಕುಳಿತು ಕೈ ಹಿಡಿದು "ಈ ರೀತಿ ಅತ್ತರೆ ಕಳೆದುಹೋದ ಮಗು ಬಂದುಬಿಡುವುದೇ? ಪೋಲೀಸರು ಒಂದು ವಾರದಿಂದಲೂ ಮಗುವಿನ ಹುಡುಕಾಟದಲ್ಲಿದ್ದಾರೆ, ನಿನ್ನ ಗಂಡ ಮೈದುನರೇನು ಸುಮ್ಮನೆ ಕುಳಿತಿಲ್ಲ, ಮಾರವ್ವನ ದಯೆಯಿಂದ ನಿನ್ನ ಕೂಸು ಬೇಗ ಸಿಗುತ್ತದೆ" ಎಂದು ಸಮಾಧಾನಿಸುತ್ತಿದ್ದರು.
ತನ್ನ ಮಗು ಕಿಸಕ್ಕೆಂದು ನಕ್ಕಿದ್ದ ಚಿತ್ರಗಳನ್ನು ನೋಡಿಕೊಂಡು ಆಕೆ ಅಳುವುದನ್ನು ನಿಲ್ಲಿಸಲಿಲ್ಲ. ಕರುಳು ಕಿತ್ತು ಬರುವ ಸಂಕಟಕ್ಕೆ ಮನೆ ಸ್ಮಶಾಣವಾಗಿತ್ತು.

ಅಳುತ್ತಳುತ್ತಲೇ ಆಕೆ "ಗೋವಿಂದಪ್ಪ ಹಾಲು ನೀಡಲು ಬಂದಿಲ್ಲವೇ, ಆತನಿಗೆ ಫೋನ್ ಮಾಡಿ ಬೇಗ ಹಾಲು ತರಲು ಹೇಳು, ಎಲ್ಲರಿಗೂ ಟೀ ಕಾಯಿಸಿಕೊಡು" ಎಂದು ತನ್ನ ವಾರಗಿತ್ತಿಗೆ ಹೇಳಿದಳು. ಅಷ್ಟಕ್ಕೆ ಗೋವಿಂದಪ್ಪ ಬಂದ.
ಎಲ್ಲರಿಗೂ ಟೀ ಕಾಯಿಸಿ ಕೊಟ್ಟದ್ದಾಯಿತು. ಆ ತಾಯಿಯ ಹತ್ತಿರ ಬಂದ ಗೋವಿಂದಪ್ಪ ಕಿವಿಯ ಬಳಿ ಮೆಲ್ಲನೆ ಉಸುರಿದ
"ನಿನ್ನ ಮಗುವಿನ ಬಟ್ಟೆ ಮತ್ತು ಬಳೆ, ಓಲೆ ಸಿಕ್ಕಿದೆ" ಎಂದ ಕೂಡಲೇ ಆಕೆ ಬೆಚ್ಚಿ ಬಿದ್ದಳು. ತುಟಿ ಅದುರಿತು, ಕಣ್ಣುಗಳು ಗಿರಗಿರನೆ ಅಲುಗಾಡಿದವು. ಕೆನ್ನೆ ಮೇಲೆ ಕಣ್ಣೀರು ಧಳ ಧಳನೆ ಧಾರಾಕಾರವಾಗಿ ಹರಿಯಿತು.
"ನನ್ನ ಮಗು, ಅಯ್ಯೋ.. ನನ್ನ ಮಗುವನ್ನು ಕೊಂದೆಯಲ್ಲೋ ಪಾಪಿ, ನನ್ನ ಮಗು ನನಗೆ ಕೊಟ್ಟುಬಿಡು, ಅಯ್ಯೋ ನನ್ನ ಮಗು ಸತ್ತು ಹೋಯಿತಲ್ಲ, ನನ್ನ ಮಗು" ಎಂದು ಆಕೆ ಚಿಟಾರನೆ ಕಿರುಚಿ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟಳು. ದೇಹ ಒಂದೇ ಸಮನೆ ಕಂಪಿಸಿಕೊಂಡಿತ್ತು. ಮುಖದ ಮೇಲೆ ನೀರು ಚಿಮುಕಿಸಿ ಆಕೆಯನ್ನು ಎಚ್ಚರಗೊಳಿಸುವಷ್ಟರಲ್ಲಿ ಗೋವಿಂದಪ್ಪನನ್ನು ಪೋಲೀಸರು ಬಂಧಿಸಿ ಎಳೆದೊಯ್ದಿದ್ದರು.
"ನನ್ನ ಮಗು, ನನ್ನ ಮಗು" ಎಂದು ಆಕೆ ಮತ್ತೆ ಅಲುಗಾಡತೊಡಗಿದಳು. ಈ ವಿಚಾರ ಊರೆಲ್ಲ ಹಬ್ಬಿಕೊಂಡು ಎಲ್ಲೆಲ್ಲೋ ಇದ್ದ ಗಂಡ, ಮೈದುನರೆಲ್ಲ ಹಳ್ಳಿಗೆ ಓಡೋಡಿ ಬಂದರು.
-
ಗೋವಿಂದಪ್ಪ ಪೋಲೀಸರಿಗೆ ನೇರವಾಗಿಯೇ ತನ್ನ ಚಟುವಟಿಕೆಯನ್ನು ಮಾರಮ್ಮನ ಮೇಲೆ ಆಣೆ ಮಾಡಿ ಒಪ್ಪಿಕೊಂಡ. ತನಗೆ ಆ ಬಟ್ಟೆಯ ಪೊಟ್ಟಣ ಸಿಕ್ಕಿದ್ದು, ಅರ್ಧರಾತ್ರಿಯಲ್ಲಿ ಅಲ್ಲಿಗೆ ಧಾವಿಸಿದ್ದು, ಧಾವಿಸಲು ಕಾರಣ, ಯಾರೋ ನೆರಳಾಗಿ ಓಡಿಹೋದದ್ದು ಎಲ್ಲಾ ಹೇಳಿದ. ಠಾಣೆಯ ಹೊರಗಡೆ ಊರಿನ ಜನರೆಲ್ಲರೂ ಕೂಡಿಕೊಂಡು ಮಗುವಿನ ದೇಹ ಎಲ್ಲಿದೆ ಎಂದು ಕೇಳಿ ಕೊಡಿಸಿಕೊಡಿ ಎಂದು ಗದ್ದಲಕ್ಕಿಳಿದರು.

ಪೋಲೀಸರು ಗೊಂದಲಕ್ಕೆ ಬಿದ್ದರು. "ಮಗುವಿನ ದೇಹವನ್ನು ಎಲ್ಲಿ ಹೂತಿಟ್ಟಿದ್ದಾನೆ ಎಂದು ಆತ ಹೇಳುತ್ತಿಲ್ಲ, ಇನ್ನೆರಡು ದಿನಗಳಲ್ಲಿ ಬಾಯಿ ಬಿಡಿಸುತ್ತೇವೆ" ಎಂಬ ಪೋಲೀಸರ ಎಂದಿನ ಮಾತಿಗೆ ಊರ ಜನ ಗೊಣಗಿಕೊಂಡೇ ಅಲ್ಲಿಂದ ಕಾಲು ಕಿತ್ತರು.
-
ಸಮಯ ರಾತ್ರಿ ಹನ್ನೆರಡು. ಈ ಬಾರಿ ಇನ್ಸ್ ಪೆಕ್ಟರ್ ಕಾಳಪ್ಪ ಮತ್ತು ಮತ್ತೊಬ್ಬ ಕಾನ್ಸ್ಟೇಬಲ್ ಆ ಬೇಲಿ ಬಳಿ ಬಂದರು. ಪೋಲೀಸ್ ವಸ್ತ್ರವಿರಲಿಲ್ಲ. ಯಾರಿಗೂ ಹಠಾತ್ತನೇ ತಿಳಿಯದಿರಲೆಂದೇನೋ ಕಪ್ಪು ವಸ್ತ್ರ ತೊಟ್ಟಿದ್ದರು. ಎಂದಿನಂತೆ ಸುತ್ತ ಮೌನ ಆವರಿಸಿ ಮನೆಗಳೆಲ್ಲ ದಣಿದು ಸತ್ತು ಮಲಗಿದ್ದವು. ಗೋವಿಂದಪ್ಪ ಹೇಳಿದ ಬೇಲಿಯ ಮೂಲೆಯಿಂದ ಯಾರೋ ನೆಲವನ್ನು ಅಗೆಯುತ್ತಿರುವ ಶಬ್ದ ಟಕ್ ಟಕ್ ಎಂದು ಕೇಳುತ್ತಿತ್ತು. ಕಾಳಪ್ಪ ನಿಧಾನವಾಗಿ ಅಲ್ಲಿಗೆ ಧಾವಿಸಿದಾಗ ಯಾವುದೋ ನೆರಳು ಗೋಚರಿಸಿಕೊಂಡಿತು. ಅಲ್ಲಿ ನೆಲ ಅಗೆಯುತ್ತಿರಲಿಲ್ಲ, ಬದಲಾಗಿ ಅಗೆದ ಗುಂಡಿಯನ್ನು ಯಾರೋ ಕಂಬಳಿ ಹೊದ್ದುಕೊಂಡವ ಮುಚ್ಚುತ್ತಿದ್ದ. ಮುಖ ಮುಚ್ಚಿಕೊಳ್ಳುವ ಟೊಪ್ಪಿ ಧರಿಸಿದ್ದರಿಂದ ಕತ್ತಲಲ್ಲ ಯಾರಿರಬಹುದು ಎಂದು ಊಹಿಸಲಾಗುತ್ತಿರಲಿಲ್ಲ. ಸಾವರಿಸಿಕೊಂಡು ಹತ್ತಿರ ಸಾರಿ ಚಂಗನೇ ನೆಗೆದ ಕಾಳಪ್ಪ ಮತ್ತು ಪೇದೆ ಆತನನ್ನು ಗಟ್ಟಿಯಾಗಿ ಅದುಮಿ ಹಿಡಿದುಕೊಂಡರು. ಇಬ್ಬರನ್ನು ಎಸೆದು ಮೈ ಕೊಡವಿಕೊಳ್ಳಲು ಆತ ಎಷ್ಟೇ ಪ್ರಯತ್ನಿಸಿದರೂ ತಪ್ಪಿಸಿಕೊಳ್ಳಲಾಗಲಿಲ್ಲ. ಅಷ್ಟಕ್ಕೆ ಕಾಳಪ್ಪನವರು ಪೋಲೀಸ್ ಜೀಪ್ ತರಿಸಿ ಆತನನ್ನು ಬಂಧಿಸಿ ಠಾಣೆಗೆಳೆದುಕೊಂಡು ಹೊರಟು ಬಿಟ್ಟರು.

ಆತ ಬೇರೆ ಯಾರೂ ಆಗಿರಲಿಲ್ಲ. ಮಗುವಿನ ಮನೆಯ ನೆರೆಮನೆಯ ಲಿಂಗಣ್ಣ. ಆತನನ್ನು ಬಂಧಿಸಿರುವ ವಿಚಾರ ಊರೆಲ್ಲ ಹಬ್ಬಿ ಠಾಣೆ ಮುಂದೆ ಮತ್ತೆ ಗದ್ದಲ ಶುರುವಾಯಿತು. ಅಪರಾಧಿಯನ್ನಿಟ್ಟುಕೊಂಡು ಒಬ್ಬ ನಿರಪರಾಧಿಯನ್ನು ಬಂಧಿಸಿರುವ ಪೋಲೀಸರ ಕ್ರಮವನ್ನು ಕೆಲ ಸ್ಥಳೀಯ ಪತ್ರಿಕೆಗಳು ಟೀಕಿಸಿದವು.
"ನಾನು ಉಚ್ಚೆ ಉಯ್ಯಲು ಅಟ್ಟಿಯಿಂದ ಹೊರಬಂದಿದ್ದೆ ತಡ, ಇದ್ದಕ್ಕಿದ್ದಂತೆ ನನ್ನ ಮೇಲೆರಗಿ ಎಳೆದುಕೊಂಡು ಬಂದಿದ್ದಾರೆ, ನಾನು ಅಲ್ಲಿ ಏನನ್ನೂ ಅಗೆಯುತ್ತಿರಲಿಲ್ಲ, ಮುಚ್ಚುತ್ತಿರಲಿಲ್ಲ" ಎಂದುಬಿಟ್ಟ ನಿಂಗಣ್ಣ ಉರುಫ್ ಲಿಂಗಣ್ಣ.

ಧೃತಿಗೆಡದ ಕಾಳಪ್ಪನವರು ಈ ಕೇಸನ್ನು ಛೇದಿಸಲು ರೂಪುರೇಷೆ ಹಾಕುತ್ತಿರುವಂತೆಯೇ ಯಾರೋ "ನಮಸ್ತೆ ಸರ್" ಎಂದರು.
ಕತ್ತೆತ್ತಿ ನೋಡಿದ ಇನ್ಸ್ ಪೆಕ್ಟರ್ ಕಾಳಪ್ಪನವರಿಗೆ ಆತ ಅಪರಿಚಿತನಾಗಿ ಕಂಡ. ಈ ಮೊದಲು ಆತನನ್ನು ಎಲ್ಲಿಯೂ ನೋಡಿದ ನೆನಪಿರಲಿಲ್ಲ. ಕೈಯಲ್ಲಿ ಒಂದು ವಾರ್ತಾಪತ್ರಿಕೆಯಿತ್ತು.

"ಸರ್.. ನನ್ನ ಹೆಸರು ಶಂಭು ನಾಯಕ್. ನಾನು ದೂರದ ಮಳವಳ್ಳಿ ಪಕ್ಕದಲ್ಲಿರುವ ಬ್ಲಫ್ ನಲ್ಲಿ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದೇನೆ" ಎನ್ನುತ್ತಿದ್ದಂತೆ ಕಾಳಪ್ಪನವರು ಆತನನ್ನು "ಕುಳಿತುಕೊಳ್ಳಿ" ಎಂದರು. ಕುಳಿತುಕೊಂಡವ ಮಾತು ಮುಂದುವರೆಸಿದ.

"ಸರ್... ಈ ಪೇಪರ್ ನಲ್ಲಿ ಬಂದಿರುವ ಕಾಣೆಯಾದ ಮಗುವಿನ ಭಾವಚಿತ್ರ ನೋಡಿ ಬಂದೆ" ಎನ್ನುವಷ್ಟರಲ್ಲಿ ಪಕ್ಕದಲ್ಲಿದ್ದ ಪೋಲೀಸ್ ಪೇದೆಗಳ ಕಿವಿ ನೆಟ್ಟಗಾಯಿತು.
ಕಣ್ಣರಳಿಸಿದ ಕಾಳಪ್ಪನವರು "ಮುಂದುವರಿಸಿ" ಎಂದರು
"ಈ ಮಗುವಿನೊಂದಿಗೆ ಕಳೆದ ವಾರ ಯಾವುದೋ ದಂಪತಿ, ಬ್ಲಫ್ ನಲ್ಲಿನ ಜಲಪಾತ ವೀಕ್ಷಣೆಗೆ ಬಂದಿದ್ದರು, ಗೇಟ್ ದಾಟುವಾಗ ಆ ಮಗುವಿನ ಮುಗ್ದ ಮುಖವನ್ನು ನೋಡಿ ಕೆನ್ನೆಗೆ ಮುತ್ತುಕೊಟ್ಟಿದ್ದೆ. ಆದರೆ..."
ಕಾಳಪ್ಪ ಕಾತುರರಾಗಿ ಕೇಳಿದರು... "ಆದರೆ...?"
"ಆದರೆ ಆ ದಂಪತಿ ತಿರುಗಿ ಹೋಗುವಾಗ ಆ ಮಗು ಇರಲಿಲ್ಲ. ಯಾರಾದರೂ ಉಳಿದ ಸಂಬಂಧಿಕರೊಂದಿಗೆ ಹೋಗಿರಬಹುದು ಎಂದುಕೊಂಡು ಸುಮ್ಮನಿದ್ದೆ, ಆದರೆ ಈ ಪತ್ರಿಕೆ ವರದಿ ನೋಡಿ ಓಡೋಡಿ ಬಂದಿದ್ದೇನೆ ಸರ್"

ಕಾಳಪ್ಪನವರ ಮನದಲ್ಲಿ ಒಮ್ಮೆಲೇ ಅನೇಕ ಸಂಶಯಗಳು ಮೂಡಿದವು. ಬಂದಿದ್ದವನ ಬಗ್ಗೆ ಬ್ಲಫ್ ಗೆ ಫೋನಾಯಿಸಿ ವಿವರ ಸಂಗ್ರಹಿಸಿಕೊಂಡರು. ಹೌದು ಆತ ಅಲ್ಲಿನ ಗೇಟ್ ಕೀಪರ್ ಆಗಿದ್ದ.

"ಆ ಜೋಡಿಯನ್ನು ತೋರಿಸಿದರೆ ಗುರುತಿಸಬಲ್ಲೆಯಾ?" ಎಂಬ ಕಾಳಪ್ಪನವರ ಪ್ರಶ್ನೆಗೆ ಆತ "ಹೂ" ಎಂದ. ಕಾಳಪ್ಪನವರು ಎಲ್ಲಾ ಸಿದ್ಧತೆ ಮಾಡಿಕೊಂಡರು.

ಮೊದಲು ಆತನಿಗೆ ಗೋವಿಂದಪ್ಪನನ್ನು ತೋರಿಸಲಾಯಿತು. "ಇವನಲ್ಲ" ಎಂದು ತಲೆ ಆಡಿಸಿಬಿಟ್ಟ.
ಲಿಂಗಣ್ಣನನ್ನು ತೋರಿಸಿದ್ದೆ "ಹೌದು, ಈತನೇ" ಎಂದು ಕೂಡಲೇ ಗುರುತು ಹಿಡಿದುಬಿಟ್ಟ. ಕೂಡಲೇ ಎಚ್ಚೆತ್ತುಕೊಂಡ ಕಾಳಪ್ಪ ಸ್ತ್ರೀಪೇದೆಗಳನ್ನು ಕಳುಹಿಸಿ ಲಿಂಗಣ್ಣನ ಪತ್ನಿಯನ್ನು ಬಂಧಿಸಿಕೊಂಡರು. ಊರಿನ ಜನರಿಗೆ ಆಗಷ್ಟೇ ಹುಟ್ಟಿದ ಮಗುವಿನಂತೆ ಪಿಳಿ ಪಿಳಿ ಕಣ್ಣ ಬಿಡುವುದಷ್ಟು ಬಿಟ್ಟು ಮತ್ತೇನೂ ತಿಳಿಯುತ್ತಿರಲಿಲ್ಲ.
ಲಿಂಗಣ್ಣನೊಂದಿಗೆ ಆಕೆಯ ಪತ್ನಿಯನ್ನೂ ಕಂಬಿ ಹಿಂದೆ ತಳ್ಳಲಾಯಿತು. ಕೊನೆಗೂ ನಿಟ್ಟುಸಿರು ಬಿಟ್ಟ ಕಾಳಪ್ಪನವರು ವಿಚಾರಣೆ ಪ್ರಾರಂಭಿಸುವುದಕ್ಕಿಂತ ಮುಂಚೆ ಬ್ಲಫ್ ನಿಂದ ಓಡೋಡಿ ಬಂದಿದ್ದ ಶಂಭು ನಾಯಕ್ ನಿಂದ ದೂರು ದಾಖಲಿಸಿಕೊಳ್ಳಲು ಮುಂದಾದರು.
ಶಂಭು ನಾಯಕ್ ಹೇಳಿದ
"ಸರ್... ಈತನೊಂದಿಗೆ ಇದ್ದದ್ದು ಈಯಮ್ಮ ಅಲ್ಲ ಅನ್ಸುತ್ತೆ" ಎಂದ. ಕಾಳಪ್ಪನವರ ಹುಬ್ಬೇರಿತು. ಒಂದು ಹಂತಕ್ಕೆ ಬಂದ ವಿಚಾರಣೆ ಮತ್ತೆ ದಾರಿ ತಪ್ಪುತ್ತಿದೆ ಎಂದೆನಿಸಿ
"ಹೌದೆ...? ಸರಿಯಾಗಿ ನೋಡಿ ಹೇಳು" ಎಂದರು...
"ಇಲ್ಲ ಸರ್... ಆಕೆ ಈಕೆಗಿಂತ ದಪ್ಪ ಮತ್ತು ಎತ್ತರವಿದ್ದಳು" ಎಂದ ಶಂಭು.

"ನಾನು ನನ್ನ ಗಂಡನ ಕೂಡ ಒಮ್ಮೆಯೂ ಬ್ಲಫ್ ಗೆ ಹೋಗಿಲ್ಲ" ಎಂದು ಲಿಂಗಣ್ಣನ ಹೆಂಡತಿ ಹೇಳಿದಾಗ ಕಾಳಪ್ಪನವರಿಗೆ ಅನುಮಾನದ ಹುತ್ತ ಎತ್ತರೆತ್ತರಕ್ಕೆ ಬೆಳೆದುಕೊಂಡಿತು. ಯಾರಿರಬಹುದಾಕೆ ಎಂದು ಕಾಳಪ್ಪ ಯೋಚಿಸುತ್ತಿರುವಾಗ ಏನೋ ಹೊಳೆದಂತಾಗಿ ಕೂಡಲೇ ಶಂಭುನಾಯಕ್ ನನ್ನು ಜೀಪಿನಲ್ಲಿ ಕೂರಿಸಿಕೊಂಡು ಲಿಂಗಣ್ಣನ ಬೀದಿಗೆ ಕರೆದುಕೊಂಡು ಹೋದರು. ಕಾಳಪ್ಪ ಬಂದದ್ದೇ ತಡ, ಆ ಮಗುವಿನ ಬಡತಾಯಿ ಕಾಲಿಗೆ ಬಿದ್ದುಬಿಟ್ಟಳು. ಹೆತ್ತ ಕರುಳಿನ ಅಳು ಇಷ್ಟು ದಿನವಾದರೂ ಕೊಂಚವೂ ಕರಗಿರಲಿಲ್ಲ.
"ನನ್ನ ಮಗು ಸತ್ತಿಲ್ಲ, ನನ್ನ ಮಗುವನ್ನು ನನಗೆ ಕೊಡಿಸಿಕೊಡಿ ಸ್ವಾಮಿ, ಮಗು ಕೊಡಿಸಿಕೊಡಿ, ನನ್ನ ಮಗುವನ್ನು ಸಾಯಿಸಿದ್ದರೆ ಅವರನ್ನು ಗಲ್ಲಿಗೇರಿಸಿಬಿಡಿ ಸ್ವಾಮಿ, ಗಲ್ಲಿಗೇರಿಸಿ" ಎಂದು ಅಂಗಲಾಚಿಕೊಂಡಳು. ಕಾಲಿಗೆ ಬಿದ್ದಾಕೆಯನ್ನು ಉಳಿದವರು ಸಮಾಧಾನ ಪಡಿಸಿ ಮೇಲಕ್ಕೆತ್ತಿ ನಿಲ್ಲಿಸಿದರು. ಜೊತೆಯಲ್ಲೇ ಇದ್ದ ಶಂಭು ನಾಯಕ್ ಗೆ ಆಶ್ಚರ್ಯವಾಯಿತು. ಆತ ಕಾಳಪ್ಪನವರ ಹತ್ತಿರ ಬಂದು ಕಿವಿಯಲ್ಲಿ ಮೆಲ್ಲಗೆ ಉಸುರಿದ.
"ಸರ್... ಆ ಹೆಂಗಸು ಈಕೆಯೆ....!"
ಕಾಳಪ್ಪನವರು ದಿಗ್ಭ್ರಾಂತರಾದರು.
"ಅವಸರ ಬೇಡ, ನಿಧಾನವಾಗಿ ಯೋಚಿಸಿ ಹೇಳು, ಇಷ್ಟು ಗೋಳಾಡುತ್ತಿರುವ ಹೆಂಗಸನ್ನು ಒಮ್ಮೆಲೇ ಬಂಧಿಸಿಬಿಟ್ಟರೆ, ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಹೆಚ್ಚಾಗಿ ಈಕೆ ಕಾಣೆಯಾದ ಮಗುವಿನ ತಾಯಿ" ಎಂದರು.
ಆತ "ಖಂಡಿತವಾಗಿಯೂ ಅಂದು ಬಂದಿದ್ದವಳು ಇವಳೇ" ಎಂದು ಬಿಟ್ಟ. ಮಾತಿನಲ್ಲಿ ಗಾಢವಾದ ಗಡಸುತನ ಮತ್ತು ಸ್ಪಷ್ಟತೆಯಿತ್ತು.

ಆ ಸ್ಥಳದಲ್ಲಿ ಆಕೆಯನ್ನು ಬಂಧಿಸಿದರೆ ಸರಿ ಬರುವುದಿಲ್ಲವೆಂದುಕೊಂಡ ಕಾಳಪ್ಪನವರು ಏನೂ ತಿಳಿಯದವರಂತೆ ಠಾಣೆ ಕಡೆ ಹೊರಟುಬಿಟ್ಟರು.
ತಮ್ಮ ಪೋಲೀಸ್ ಭಾಷೆ ಮತ್ತು ಶೈಲಿಯಲ್ಲಿ ಲಿಂಗಣ್ಣನನ್ನು ವಿಚಾರಣೆಗೆತ್ತಿಕೊಂಡರು. ಬೆರಳಿನ ಮೂಳೆಗಳು ಸಣ್ಣಗೆ ನಟಕ್ ನಟಕ್ ಎಂದು ಮುರಿದುಕೊಳ್ಳುತ್ತಿದ್ದಂತೆ
"ಹೌದು, ಹೋಗಿದ್ದವರು ನಾನು ಮತ್ತು ನನ್ನ ಹೆಂಡತಿಯಲ್ಲ, ಬದಲಾಗಿ ಜೊತೆಯಲ್ಲಿದ್ದದ್ದು ಆ ಕೂಸಿನ ತಾಯಿ ಲಕ್ಷ್ಮಿ" ಎಂದು ಒಪ್ಪಿಕೊಂಡ.
ಮಾತನ್ನು ಖಚಿತ ಪಡಿಸಿಕೊಂಡ ಕಾಳಪ್ಪನವರು ನತದೃಷ್ಟ ಮಗುವಿನ ತಾಯಿಯನ್ನು ಎಳೆದುಕೊಂಡು ಬಂದರು. ಸಂಬಂಧಿಕರಿಂದ ತೀವ್ರ ಪ್ರತಿಭಟನೆಯೇ ಆಯಿತು. ಒಂದಷ್ಟು ಅನಾಥ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಲಾಯಿತು.
-
ಲಿಂಗಣ್ಣ ಮತ್ತು ಮಗುವಿನ ತಾಯಿಯಾದ ಲಕ್ಷ್ಮಿ ನೆರೆ ಹೊರೆಯವರು. ಲಕ್ಷ್ಮಿ ಮೊದ ಮೊದಲು ಲಿಂಗಣ್ಣನಿಗೆ ಕೊಟ್ಟ ಸಲಿಗೆ, ನಂತರ ಗೆಳೆತನವಾಗಿ ಹಾಸಿಗೆ ಮೇಲೆ ಹೊರಳಾಡುವವರೆವಿಗೂ ಬಂದಿತ್ತು. ದೂರದ ತಮಿಳುನಾಡಿನಲ್ಲಿ ವ್ಯಾಪಾರಕ್ಕೆಂದು ಹೊರಟರೆ ತಿಂಗಳಾದರೂ ತಿರುಗಿ ಬರದ ಗಂಡನ ಭಯ ಆಕೆಗಿರಲಿಲ್ಲ. ಅಂದು ಶಿಶುವಿಹಾರದಿಂದ ಬೇಗ ಬಂದ ಲಕ್ಷ್ಮಿಯ ಮೂರು ವರ್ಷದ ಮಗು, ಅಮ್ಮ ಮತ್ತೊಬ್ಬನ ಜೊತೆ ಮಲಗಿರುವುದು ಕಂಡು ಆಶ್ಚರ್ಯವೇನೂ ವ್ಯಕ್ತ ಪಡಿಸಿರಲಿಲ್ಲ. ಆ ವಯಸ್ಸಿನಲ್ಲಿ ಕಾಮ ಪ್ರೇಮದ ಉತ್ತುಂಗಗಳು ಅರಿವಿಗೆ ಬರುವುದಾದರೂ ಹೇಗೆ ಹೇಳಿ. ಅದರ ಪಾಡಿಗೆ ಅದಿತ್ತು. ಈ ಘಟನೆಯಿಂದ ಸ್ವಲ್ಪ ಕುಗ್ಗಿದ ಲಕ್ಷ್ಮಿ ಮಗುವಿನ ಮೇಲೆ ಅನುಮಾನಿಸತೊಡಗಿದಳು. ಇಂದಲ್ಲ ನಾಳೆ ಈ ಮಗು ಈ ವಿಚಾರವನ್ನು ಮನೆಯವರೊಟ್ಟಿಗೆ ಬಾಯಿ ಬಿಟ್ಟುಬಿಡುತ್ತದೆ ಎಂದು ಪ್ರತಿದಿನ ಸಂಶಯಿಸಿದಳು. ಅನುಮಾನ ದಟ್ಟವಾಗಿ ಬೆಳೆದುಕೊಂಡಿತ್ತು. ಕೊನೆಗೊಂದು ದಿನ ಲಿಂಗಣ್ಣನ ಜೊತೆ ಮಾತನಾಡಿಕೊಂಡು ಮಗುವನ್ನು ಶಿಶುವಿಹಾರದ ಬಳಿ ಬಿಟ್ಟವರಂತೆ ನಾಟಕ ಮಾಡಿ ಹಾಗೆ ಗದ್ದೆಯಲ್ಲಿ ನುಗ್ಗಿ ಊರ ಹೊರಗೆ ಕಾಯುತ್ತಿದ್ದ ಲಿಂಗಣ್ಣನೊಂದಿಗೆ ಬ್ಲಫ್ ಗೆ ತೆರಳಿ ತನ್ನ ಕರುಳ ಕುಡಿಯನ್ನು ನೀರಿಗೆಸೆದು ಬಂದಿದ್ದಳು. ಊರ ಜನರಿಗೆ ಸ್ವಲ್ಪವೂ ಅನುಮಾನ ಬರದಂತೆ ಪ್ರತಿ ಗಳಿಗೆಯಲ್ಲೂ ಗೋಳಿಡುತ್ತಿದ್ದಳು. ಮಗುವನ್ನು ನೀರಿಗೆಸೆಯುವಾಗ ಬಿಚ್ಚಿಟ್ಟುಕೊಂಡಿದ್ದ ಒಡವೆ ವಸ್ತ್ರವನ್ನು ಪೋಲೀಸರಿಗೆ ಮತ್ತು ಪೋಲೀಸ್ ನಾಯಿಗಳಿಗೆ ಹೆದರಿ ಗುಂಡಿ ತೋಡಿ ಸುಟ್ಟು ಮುಚ್ಚಿ ಬಿಡಲು ಮೊದಲು ಇಬ್ಬರೂ ಪ್ರಯತ್ನಿಸಿ ಸಿಕ್ಕಿ ಬಿದ್ದರು.

ಕಂಬಿ ಹಿಂದೆ ಕವಡೆ ಬಿಡುತ್ತಿರುವ ಲಕ್ಷ್ಮಿ ಆಗಾಗ ತನ್ನ ಮಗುವಿನ ನೆರಳು ಕಣ್ಣ ಮುಂದೆ ಮೂಡಿದಂತಾಗಿ ಬೆಚ್ಚುತ್ತಾಳೆ.
ಜೊತೆಗೆ ಗೋವಿಂದಪ್ಪ ಎಂಬ ಕಳ್ಳನೂ ಕೂಡ ಆ ರಾತ್ರಿ ಲಕ್ಷ್ಮಿ ಮನೆಗೆ ಹೊರಟಿದ್ದ. ಆಕೆಗೆ ಆತನೊಡನೆಯೂ ಅಕ್ರಮ ಅನುಬಂಧವಿತ್ತು.
“ಈ ರಾತ್ರಿ ಬಾ, ನಿನ್ನಿಂದ ಏನೋ ಕೆಲಸವಾಗಬೇಕು, ಮರೆಯಬೇಡ” ಎಂದು ಆಕೆಯೇ ಆತನಿಗೆ ಹೇಳಿದ್ದಳಂತೆ. ಆತನನ್ನೂ ಮಾಯ ಮಾಡಿ ಆ ಕೊಲೆ ಆಪಾದನೆಯನ್ನು ಆತನ ಮೇಲೆ ಹೊರಿಸುವ ಹುನ್ನಾರವಿತ್ತೇನೋ.....!

Friday, 22 June 2012

ದಾರಗಳು…

ಈ ಜಗಮಂಡಲದಾವೃತವನ್ನಾವರಿಸಿವೆ
ನೂರಾರು ದಾರಗಳು
ಗ್ರಹ ಗ್ರಹ ನಿಗ್ರಹಿಸಿದ ನೂಲು
ನಡುವೆ ನಾದದೆರಕ ಕೃಷ್ಣ ಕೊಳಲು
ಸೂರ್ಯನೆದೆಯುರಿಗೆ ಕರಗದ ದಾರ
ಹಿಡಿದೆಳೆದು ತಿರುಗಿ ಬುಗುರಿಸಿದೆ ನವಗ್ರಹ ದ್ವಾರ

ಕ್ಷೀರಪಥವೆಂಬ ನಾಣ್ಯದಗಲ ರಥದಲ್ಲಿ
ಹರಡಿದ ತಾರಾ ಹರಳು
ಒಂದಕ್ಕೊಂದು ಬೆಸೆದ ಬೆಳಕ ದಾರ
ನೂಲು ನೂಲು ನುಲಿದು ಕತ್ತರಿಸದಿರಲಂಟು

ನಾಣ್ಯದೊಳಿಳೆ ಬಿಂದಿಗೆಯೊಳೂರ
ಬೀದಿ ಬೀದಿಗಳಲುಂಡೆ ದಾರ
ಎಳೆ ಎಳೆ ಬಿಳಲಾಗಿ ಬೀಳುತ್ತಿದೆ
ದ್ವೇಷದೇಟಿನ ಭಾರ!
ಮೈಮನಗಳರ್ಥೈಸುವಷ್ಟು ಪಕ್ವತೀರ
ಶಿರದೂರ್ಧ್ವದ ಜೀವತಾವಿಗೆ
ಪಂಚೇಂದ್ರಿಯಗಳ ಬಿಗಿದ ಮೆದುಳ ದಾರ
ಕಾಮ ಪ್ರೇಮದ ನಡುವಪಾರ್ಥಗೊಂಡು ದೂರ!

ಗೂಟದಾರ ಜಗದೊಗಟ ತೂಗೆಳೆದಿವೆ
ತೂಗುತ್ತಲೇ ಇವೆ ಬೆರಳೆಳೆದು
ಲೋಕದೋಟ ನರಕ ಸನಿಹ
ಗಟ್ಟಿಯಾಗುತ್ತಿವೆ, ತನ್ನಿರುವಿಕೆ ಮೆರೆಯುವಿಕೆ

ಮಂಡಿ ಮೂಳೆ ತೊಡೆಗೆ ಬೆಸೆದ ದಾರ
ಒಳಕಲ್ಲಂಗ ಘರ್ಷಣೆಗೆ
ಜಗತೂಗೋ ಜೀವೋಗಮ ಸೂಕ್ಷ್ಮ ದಾರ
ಕಣ ಕಣ ನಡುವೆ ಸೂಜಿ ಮೊನೆಯಂಧ ದಾರ
ದಾರದೊಳ ಶ್ರಮ ಜಗ ತೂಗೋ ಘನ ವಿಸ್ಮಯ!

Thursday, 21 June 2012

ಮೋಡದ ಮೇಲೆ…

ಈ ಬಿಸಿ ಮೋಡದ ಮೇಲೆ ಕೂರಲೆನಗಾಗದು
ಹೇ ಜಗ ಕಾಯ್ವ ಕಾವಲುಗಾರ ಭಾವವೇ
ಬೆಳ್ಳಿಯಂಚಿದ್ದರು ಕಪ್ಪು ಕಲ್ಲದು
ಚಿನ್ನದ ಕುಡಿಕೆಯೊಳಗಿನ ವಿಷದಮಲು
ಎಂದೊಡನೆ ಅಪ್ಪ ತಲೆ ಬಡಿದ ಕ್ಷೀರಪಥದಿಂದ

ಕಪ್ಪು ತಪ್ಪು ಬಿಳಿ ಸರಿ ಎಂದರುಹಿ ಗೆರೆ ಎಳೆದ್ದಿಲ್ಲ
ನೀ ಮಾಡಿಕೊಂಡ ಮನೆ ಕೋಣೆ ಮಾಲದು
ಒಮ್ಮೆ ವ್ಯೋಮಾಕಾಶ ದಿಟ್ಟಿಸು ಮರೆತು ಬಿಸಿಯ
ನೋಡಲ್ಲಿ ಅರಿಯದರಿವಿನ ವಿಶಿಷ್ಟ ಕಸಿಯ
ಒಂದರೊಳೊಂದು ಬೆಸೆದ ಹೂದಳ ಬೆರಗ
ಪೋಣಿಸಿಕೊಂಡ ಸೃಷ್ಟಿ ಸಮತೋಲನ ಪುಷ್ಠಿ
ಎಂದುವಾಚ ಅವನದಶರೀರವಾಣಿ ಕೋಟಿ

ಓಹೋ ಕಾಣುತ್ತಿದೆ ಮಾವಿನ ಮೇಲಿನ ಬೇವು
ಆಲದ ಮೇಲಿನ ಬೇಲ, ವಿನೋದ ಲೀಲಾ
ತಪ್ಪೆಂದು ತಿಳಿಯೆ ನಿನ್ನಚ್ಚರಿಯ
ನೀ ಸಮತೆ ಸಮತೋಲನ ಮೂಡಿಸೋ ಪರಿಯ
ಬಣ್ಣ ಬಣ್ಣ ಸೀಮೆಸುಣ್ಣ ಸಿಕ್ಕಿದ್ದೆ ವಕ್ರಗಣ್ಣರು
ಎಳೆದಿದ್ದಾರೆ ಗೆರೆ ಇಷ್ಟದಂತನಿಷ್ಟವಾಗಿ
ಅಗೆದು ಹಲಗುಂಡಿಯ ಯಾರಿಗೋ ಶಿರಬಾಗಿ

ದಾರಕ್ಕೆನ್ನಮ್ಮ ಮಲ್ಲಿಗೆ ಪೋಣಿಸಿ ಗಂಟು ಎಳೆದಂತೆ
ಒಂದರ ಹಿಂದೊಂದು ನಡೆದು ಕರ ಬಿಗಿದು
ಬಿಗಿದುಕೊಂಡಿವೆ ಮಚ್ಚಿನೇಟಿಗೆ ರಕ್ತ ಸುರಿದು
ಅಂಡಾಣುವಿನ ವೀರ್ಯ ಸೆಳೆತಕ್ಕೆ ಮೊಳೆತ
ಬೇವು ಮೊಳೆಸಿದ ವೃಕ್ಷವುದುರಿಸಿದ ಬೀಜ ಬಸುರಿ
ಈ ಬೀಜದಿಂಬೀಜದಿಂ ಮರ ಮತ್ತೆ ಬೀಜ
ನಿನ್ನಿರುವಿಕೆಗಿದು ಒಗಟು ಬರೀ ಗೊಂದಲ ಸಹಜ

ಈ ಅಖಂಡ ಬ್ರಹ್ಮಾಂಡ ಬಿಂದಿಗೆಯಲ್ಲಿನ
ಬಿಂದು ಸಹಜ ಜಲಧಿಯುಪ್ಪು
ಕಬ್ಬಿನ ಸಿಹಿ ಬೇವಿನ ಕಹಿ ಗೋಚರ
ಸಪ್ಪೆಯೋ ವಿರುದ್ಧಾರ್ಥಕವಷ್ಟೇ
ತುಂಬಿಕೊಂಡದ್ದಗೋಚರ ನಾಲಿಗೆ ಮೇಲೆಚ್ಚರ!

ಗೋಚರಗೋಚರಗಳ ನಡುವೆ ಮಾಯಾ ತಕ್ಕಡಿ
ತಕ್ಕಡಿ ಹಿಡಿದಾಕೆಗೆ ಕಣ್ಕಪ್ಪು ಕೌಪೀನ
ಗೆರೆ ಎಳೆದ ಬ್ರಹ್ಮಾಂಡದೊಳ ತೃಣಕಣ ಮಾನವ
ತೃಣವೋ ಕಣವೋ ತಿಳಿಯೆ
ಅವನೊಳಗೂ ಬ್ರಹ್ಮಾಂಡ, ತಿರುಗೋ ಯಂತ್ರಗಳು
ಅಲ್ಲಲ್ಲಿ ಕೀಲಿ ತಿರುಗಲು ಮೂಡಿದೆಣ್ಣೆ ಸಲೀಸಿಗೆ

ಭಾಸ್ಕರನೊಡನೆ ಬೆಸೆದ ಈ ಬೆರಳೆಣಿಕೆ ಗ್ರಹಗಳೆ
ಬ್ರಹ್ಮಾಂಡದಖಂಡ ದಿಗಂತಕ್ಕೆ ಕೇವಲ ಬಿಂದು
ಬಿಂದುಗಳೊಳ ಬಿಂದುಗಳು ನೂರು ಮತ್ತೆ ಹಲ ಬಿಂದು
ಎಳೆದಷ್ಟು ಹರಡಿದ ಲೋಕ ನಾಕ ನರಕ
ಅಂತ್ಯವಿಲ್ಲದನಂತ ದಿಗಂತವಚ್ಚರಿ ಮೂಡಿಸಿ
ನೀ ಅಲ್ಲೆಲ್ಲೋ ಒಂದು ಕಣ ಕೊರೆದೆ ತುಂಬಿ ಭಾವ
ಎದೆ ನಿಗುರಿಸಿದ ಗಾಳಿ ಸೆಳೆದ ಬಿಂದುವಿನೊಳ ಜೀವ
ನಿನಗೇ ಗೋಡೆ ಕಟ್ಟಿ ನೆಗೆದ ಜೀವದ ಹೆಸರೋ ಮಾನವ

ಆ ಜೀವದಾವೇಗದಲ್ಲಿದೆ ನಿಜ ಪ್ರಕೃತಿ ಸಂಸ್ಕರಣೆ
ಅರಿಯದೆ ಮೂಡಿರಬಹುದೇನೋ ನೂರು ಗೆರೆ ವಿಂಗಡಣೆ
ನಿನ್ನ ಸಮತೋಲನ ನಿಲುಕದೆ ಅಸಮತೋಲನ ನರ್ತನ
ಈ ಮೋಡವೇ ತಂಪು ಜಗುಲಿಯಾಗಲಿ ಬೆಳ್ಳಿಯಂಚು ಲೇಖನಿ
ಎದೆ ಹೊತ್ತಿಗೆಯಲ್ಲಿ ಇವೆಲ್ಲಾ ಬರೆದು ನಲಿಸಲಿ ನನ್ನೀ ಕರಗಳು
ಅಳಿಸಿ ಹೋಗಲಿ ವ್ಯೋಮಾಕಾಶ ಹರಡಿದ ಕೋಟಿ ಗೆರೆಗಳು…!

Tuesday, 19 June 2012

ಅಮ್ಮ ಮತ್ತೆ ನಕ್ಕಳು....


ಬರ್ರೆಂದು ಮನೆ ತಿರುಗುತ್ತಿತ್ತು
ಆ ಏರೋಪ್ಲೇನ್ ಚಿಟ್ಟೆ
ಬಡಿಯಲೆಂದೆ ಇರುವುದು ರೆಕ್ಕೆ
ಹಾರಾಡಲಿ ಅದರಾಸೆ ಅದಕ್ಕೆ

ಈ ಕಿವಿಗಿಳಿಬಿಡಬೇಕಾಗಿತ್ತು
ಗಟ್ಟಿ ಚರ್ಮಪರದೆಯೊಂದ
ನಿರ್ಮಾಣ ದೋಷವಾಗಿದೆ ಗರ್ಭದಲ್ಲಿ
ಕಿವಿಯದೋ ರೆಕ್ಕೆಯದೋ ದ್ವಂದ್ವ!

ಬಡಿದೋಡಿಸಲಮ್ಮ ಬಡಿಗೆ ತಂದಳು
ಮುಂದೆ ನಿಂತ
ಮಗನ ಮೊಗದಲೊಂದು
ಜೀವ ಇಣುಕುತ್ತಿತ್ತು
ತೂರಿದಳು ಬಡಿಗೆ ಮರುಗಿ ಚಿಟ್ಟೆಗೆ
ಢಣ ಢಣವೆಂದ ಕಟ್ಟಿಗೆಯಲ್ಲಿ ಒಣಜೀವ ಬೇಗೆ!

ಗೋಡೆ ನಡುವೆ ಬಾಡಿ ಕುಳಿತ ಚಿಟ್ಟೆ
ಅಲ್ಲಿ ಹೊಂಚಾಕಿದ ಹಲ್ಲಿ
ನುಂಗಲಂಗಲಾಚುವ ಚಣಕ್ಕೆ
ಹಲ್ಲಿ ಬಡಿಯಲಮ್ಮನ ಪೊರಕೆ

ಪೊರಕೆ ಬಡಿದರೊಂದು ಸಾವು
ಬಿಟ್ಟರೊಂದು ಸಾವು
ಅಮ್ಮ ನಕ್ಕಳು
ಅಷ್ಟಕ್ಕೆ ಹಲ್ಲಿ ಚಿಟ್ಟೆ ನುಂಗಿತ್ತು
ಅಮ್ಮ ಮತ್ತೆ ನಕ್ಕಳು
ನಾವು ಲೋಕ ನಿಯಮ ಮಕ್ಕಳು!

Friday, 15 June 2012

ಈ ರಾತ್ರಿಯಲ್ಲಿ... (ರಾತ್ರಿ ಕವಿತೆ... )


ಈ ಸರಿರಾತ್ರಿಯ ನೀರವತೆಯ ಹರಿತಕ್ಕೆ
ದಿಗಂತದಲ್ಲಿ ನಿನ್ನ ನೆನಪ ಜಾತ್ರೆ
ಚಂದ್ರ ಸುರಿಸಿದ ಬಿಸಿ
ಬೆಳದಿಂಗಳೋಕುಳಿಗೂ ನೆತ್ತರ ವರ್ಣ

ಆ ಮೋಡದಂಚಲ್ಲಿ ಕೈ ಚಾಚಿದ
ನಿನ್ನ ವಿರೂಪ ತಾಟಕಿ ರೂಪ
ಬೊಗಳಿದ ನಾಯಿಗಳೆಳೆದ ಗೆರೆಗೆ
ಬುವಿಯಲ್ಲಿ ರಕ್ತದಭ್ಯಂಜನ ಶಾಪ

ಮೂಢಣದ ತಂಗಾಳಿ ಲಕೋಟೆ
ಹೊತ್ತಿದೆ ನಿನ್ನ ಹುಸಿ ಮಾತು
ಕೇಳದ ಹಾಳು ಹೃದಯ
ಅರಿಯದೇ ಬಡಿಯುತ್ತದೆ ಸೋತು

ಅಂದು ಆಯ್ದುಕೊಂಡ ಇದೇ ತಾರೆಗಳು
ನಿನ್ನ ಮನೆ ರಾಕ್ಷಸ
ಗೋಡೆ ತುಕ್ಕು ಮೊಳೆಯಲ್ಲಿ
ಹೊಸ್ತಿಲಿಗೆ ಚಂದ್ರಲೇಪನ ಕಸಬರಿಗೆ ಚುಂಬನ

ಬಡಿದೆಚ್ಚರಿಸಿದ ಭಾವ ಕೂಡಿ
ಈ ಮೌನದಲ್ಲಿ ಮನಬಿಸಿ
ನಿನಗೋ ಅಲ್ಲಾರದೋ ತೆಕ್ಕೆಯಲ್ಲಿ
ಬೆವರ ಹನಿಸುವ ಮೈ ಬಿಸಿ...

Wednesday, 13 June 2012

ದೇವರು ಮತ್ತು ಇತರೆ ಕಥೆಗಳು....


ದೇವರು...

ಆತ: "ಸ್ವಾಮೀಜಿ, ದೇವರಿದ್ದಾನೆಯೇ?"
ಸ್ವಾಮೀಜಿ: " ಈ ಪ್ರಶ್ನೆ ಕೇಳುತ್ತಿರುವ ನೀನಾರು?"

ಪ್ರೀತಿ...

ಆತನಿಗೆ ಮಗಳೆಂದರೆ ಪ್ರಾಣ. ಯಾವನೋ ತನ್ನ ಮಗಳನ್ನು ಪ್ರೀತಿಸಿದ್ದಾನೆ ಎಂದು ತಿಳಿದಾಕ್ಷಣ ಹುಡುಕಿಕೊಂಡು ಹೋಗಿ ಕೆನ್ನೆ ಮೂತಿಗೆ ನಾಲ್ಕು ಭಾರಿಸಿ ಬಂದಿದ್ದ. ಪ್ರೀತಿ ಮಾಡಿದ ತಪ್ಪಿಗೋ ಏನೋ ಒಂದು ಕಣ್ಣು ಊದಿಕೊಂಡು ಮೂಗಿನಲ್ಲಿ ರಕ್ತ ಸೋರುತ್ತಿತ್ತು.
ಮನೆಗೆ ಬಂದವನೇ ಆಶ್ಚರ್ಯಗೊಂಡ.
ತನ್ನ ಮಗಳ ಎರಡೂ ಕಣ್ಣುಗಳು ಊದಿಕೊಂಡಿದ್ದವು...

ಬಟ್ಟೆ...

ಆಕೆ ಮೈ ಮಾಟ ಕಾಣುವಂತೆ ಬಿಗಿಯಾದ ಉಡುಪು ತೊಟ್ಟಿದ್ದಳು. ಒಬ್ಬಾತ ಕಣ್ಣರಳಿಸಿ ಅವಳನ್ನೇ ನೋಡುತ್ತಿದ್ದ.
ಆಕೆ: "ನಿನಗೆ ಅಕ್ಕ ತಂಗಿಯರಿಲ್ಲವೇ?"
ಆತ: "ನಿನಗೆ ಅಣ್ಣ ತಮ್ಮಂದಿರಿಲ್ಲವೇ?"

ಸಂದೇಹ

ನಮ್ಮ ಕುಲ ದೇವರು ವೆಂಕಟೇಶ್ವರ ಮತ್ತು ನಿನ್ನಪ್ಪನ ಕುಲದೇವರು ಮಹದೇಶ್ವರ. ವೆಂಕಟೇಶ್ವರನ ಕುಲದಿಂದ ಮಹದೇಶ್ವರ ಕುಲದವರು ಹೆಣ್ಣು ತರಬಾರದು, ನಿಮ್ಮಪ್ಪನ ಕಡೆಯವರು ತಿಳಿಯದೇ ಮಾಡಿದ ತಪ್ಪಿದು ಎಂದು ಅಮ್ಮ ಹೇಳುತ್ತಿದ್ದಾಗ ಮಗ ಕೇಳಿದ
"ಹಾಗಾದರೆ ನಾನು ಹುಟ್ಟಿದ್ದು ಯಾಕಮ್ಮ?"

ಹಾಲು...

ಮಗು ಅಪೌಷ್ಠಿಕತೆಯಿಂದ ನರಳುತ್ತಿದೆ. ಪ್ರತಿ ಮುಂಜಾನೆ ಒಂದು ಲೋಟ ಹಾಲು ಕುಡಿಸಿ, ಹಣ್ಣು ತರಕಾರಿ ತಿನ್ನಿಸಿ ಎಂದು ವೈದ್ಯರು ಸಲಹೆಯಿತ್ತರು.
ತುತ್ತು ಅನ್ನಕ್ಕೆ ಬಿಡಿಗಾಸಿಲ್ಲದ ಆ ತಾಯಿ ಯೋಚಿಸುತ್ತ ನಡೆಯುವಾಗ ಆ ಮಗು "ಅಮ್ಮ ಅಮ್ಮ ಅಲ್ಲಿ ನೋಡಮ್ಮ ಹಾಲು" ಎಂದು ಕೂಗಿಕೊಂಡಿತು.
ಮನೆ ಮುಂದಿನ ಹುತ್ತಕ್ಕೆ ಚೊಂಬುಗಟ್ಟಲೆ ಹಾಲು ಸುರಿದಿದ್ದರು.
ಆ ಹಾವು ಹಾಲು ಕುಡಿದು ಸತ್ತಿತು
ಆ ಮಗು ಹಾಲು ಕುಡಿಯದೇ ಸತ್ತಿತು.

ಚಿಲ್ಲರೆ...

ಅಸಹಾಯಕನೊಬ್ಬ ಭಿಕ್ಷೆ ಕೇಳಿದಾಗ ಚಿಲ್ಲರೆ ಇಲ್ಲ ಎಂದುಬಿಟ್ಟ.
ದೇವಸ್ಥಾನಕ್ಕೆ 501 ರೂ ಹಾಕಬೇಕಾಗಿ ಬಂದಾಗ, ಒಂದು ರೂ ಚಿಲ್ಲರೆಯಿಲ್ಲದೆ ಅದೇ ಭಿಕ್ಷುಕನ ಬಳಿ ಬಂದು ಚಿಲ್ಲರೆಗೆ ಕೈಯೊಡ್ಡಿದ.
ಒಬ್ಬ ಬೇಡಿ ಭಿಕ್ಷುಕ ಮತ್ತೊಬ್ಬ ನೀಡಿ ಭಿಕ್ಷುಕ...!

Monday, 11 June 2012

ಮೂರು ಗಿಡಗಳು...


ಸರಿರಾತ್ರಿ ಹನ್ನೆರಡರ
ನೀರವತೆಯಲ್ಲಿ
ಜಗ ಮೊಗೆದ ತಿಮಿರಲ್ಲಿ
ಆ ಗಿಡ್ಡ ಗಿಡದ್ದೇ ಅಳು
ಉಳಿದೆರಡು ಗಿಡಗಳಿಗೆ
ಚಂದ್ರ ಸುರಿಸಿದ ಬೆಳದಿಂಗಳು

ಎರಡಂತಸ್ತು ಮನೆ ಮಾಳಿಗೆಯ
ಚುಂಬಿಸಿತ್ತೊಂದು
ನನ್ನೆತ್ತರ ಕೈ ಎತ್ತಿದರೆ
ಮತ್ತೊಂದರ ತುದಿ
ಸೋಕುತ್ತದೆ
ನನ್ನ ಮಗುವಿನ ತುಟಿ
ಮೂರನೆಯದೋ
ಕೇವಲ ಅರ್ಧ ಅಡಿ

ಸುರಿದೆ ದಿನಕ್ಕೆರಡು
ಕೊಡ ನೀರ
ರಸ ಹೀರಿ
ಉಬ್ಬಲು ಗೊಬ್ಬರ
ಮೋಡ ಒಡೆಸಿ
ಕಟ್ಟೆ ಕಟ್ಟಿ
ಹಾದಿಬದಿ ರಸನೀರೆಲ್ಲ
ಹರಿಸಿದೆ
ಚಿಕ್ಕ ಗಿಡದಡಿಗೆ
ಕೊಡಕ್ಕೊಂದೊಂದು
ದಿನಕ್ಕೆರಡೆರಡಿಂಚು
ಬೆಳೆದರಳಿ ಹರಡಿತು ಮಿಂಚು

ಹೆಗಲೇರಿಸಿ ಬೆಳೆದ ಗಿಡ
ಹೆಗಲಪಟ್ಟಿ
ಅಗಲಿಸಿ ಮೆರೆದಿದೆ
ಹಸಿರೆಲೆ ಹೊದ್ದು
ಹೂಹಣ್ಣು ತೊನೆದು
ತೂಗಿ ಬಾಗಿ ನೆಗೆದು

ನಿನ್ನೆ ಬೆಳೆದು ನಿಂತ
ಆ ಮುದ್ದು ಗಿಡಕ್ಕೆ
ಮುತ್ತನಿಟ್ಟು ತಲೆ
ನೇವರಿಸುವಾಗ
ಯಾರೋ ಕಾಲೆಳೆದಂತೆ
ಬದಿಗೆ ಬಂದು ಬಾಗಿ ಬೇಸರಗೊಂಡೆ

ಗಿಡ್ಡ ಗಿಡವ ಬೆಳೆಸುವವಸರದಲ್ಲಿ
ಮಧ್ಯದಿ ನಿಂತ ಗಿಡವ
ಚಪ್ಪಲಿಯಡಿಗೆ
ಮೆಟ್ಟಿಬಿಟ್ಟಿದ್ದೆ ಪ್ರತಿದಿನ!
ನೀರೆರೆಯೋಣವೆಂದರೆ ಈಗ
ದೇಶದಲ್ಲೆಲ್ಲಾ
ಬಿರುಗಾಳಿ ಪ್ರತಿದಿನ!

Friday, 8 June 2012

ಎರಡು ಪ್ರಶ್ನೆ ಮತ್ತೆ ಇತರೆ ಕಥೆಗಳು....


ಎರಡು ಪ್ರಶ್ನೆ....

ಆತ ಆಶ್ರಮಕ್ಕೆ ಬಂದು ಸ್ವಾಮೀಜಿಗೆ ಗದರಿಸಿದ: "ನಾನ್ಯಾರು ಗೊತ್ತೇ?"
ಸ್ವಾಮೀಜಿ ಶಾಂತಚಿತ್ತರಾಗಿ ಹೇಳಿದರು: ಗೊತ್ತಿಲ್ಲ, ಅದಿರಲಿ ನಿನಗೇನಾದರು ಗೊತ್ತೆ "ನಾನಾರೆಂದು?"
--

ಹೆಸರು...

ಅವರಿಬ್ಬರೂ ಓಡಿಹೋಗಿ ಮದುವೆಯಾದರು. ಬೇರೆ ಬೇರೆ ಜಾತಿಯಾದುದರಿಂದ ಹುಡುಗಿಯನ್ನು ಹೆತ್ತವರೇ ಕೊಂದುಬಿಟ್ಟರು. ಮಾಧ್ಯಮದವರು ಅದಕ್ಕೆ ನೀಡಿದ ಹೆಸರು "ಮರ್ಯಾದಾ ಹತ್ಯಾ!"
--

ಸಹಪಂಕ್ತಿ...

ಇಬ್ಬರ ನಡುವೆ ವಾದ ವಿವಾದ ನಡೆಯುತ್ತಿತ್ತು. ಒಬ್ಬ ಸಹಪಂಕ್ತಿ ಭೋಜನ ಸರಿ ಎಂದ ಮತ್ತೊಬ್ಬ ತಪ್ಪು ಎಂದ. ಇಬ್ಬರು ಕುಳಿತಿದ್ದದ್ದು ಮಾತ್ರ "ಸಹಪಂಕ್ತಿ ಕೇಶ ಮುಂಡನಕ್ಕೆ!"
ಇವರಿಗಿಂತ ಮುಂಚೆ ಹತ್ತಾರು ಜನಕ್ಕೆ ಒಂದೇ ಕತ್ತರಿ ಬಾಚಣಿಗೆ ಉಪಯೋಗಿಸಿದ್ದ ಕ್ಷೌರಿಕ ಮಾತ್ರ ನಗುತ್ತಿದ್ದ. ಅಷ್ಟರಲ್ಲಿ ಮುಂದಿನ ಹೋಟೇಲಿನಲ್ಲಿ ಎಲ್ಲರಿಗೂ ಸೇರಿ ನಾಲ್ಕು ಲೋಟದಲ್ಲಿ ಟೀ ತರಿಸಲಾಯಿತು.
--

ಭಾರತರತ್ನ...

ತನ್ನ ದೇಶದ ಹೆಮ್ಮೆಯ ಕ್ರಿಕ್ಕೆಟ್ಟಿಗನೊಬ್ಬನಿಗೆ "ಭಾರತ ರತ್ನ" ಪ್ರಶಸ್ತಿ ನೀಡಲಾಯಿತು. ಆತ ಕೋಕ್ ಕುಡಿಯುತ್ತಾ ಜಾಹಿರಾತಿನಲ್ಲಿ ಕಾಣಿಸಿಕೊಂಡ ತಕ್ಷಣವೇ ಅಪ್ಪ ಮುಖ ಅರಳಿಸಿ ನುಡಿದ "ಈತನೇ ಭಾರತರತ್ನ"
ಮಗು ನುಡಿಯಿತು: "ಅಪ್ಪ ಕೋಕಿನಲ್ಲಿ ವಿಷವಿದೆಯಂತೆ"
--
ಧರ್ಮ...

ಆ ಸಂತನನ್ನು ಒಬ್ಬಾತ ಕೇಳಿದ "ಧರ್ಮವೆಂದರೇನು ಗುರುಗಳೇ?"
ಪಕ್ಕದಲ್ಲಿರುವ ಮಗು ಮತ್ತೊಂದು ಮಗುವಿಗೆ ಹೇಳುತ್ತಿತ್ತು - "ನಮ್ಮ ಮನೆಯಲ್ಲಿ ಒಟ್ಟು 50 ನಲ್ಲಿಗಳಿವೆ, ಎಲ್ಲದಕ್ಕೂ ನೀರು ಬರುವುದು ಮಾತ್ರ ಮೇಲಿನ ಟ್ಯಾಂಕ್ ನಿಂದ"
ಸಂತ ನಕ್ಕು ನುಡಿದ - "ಅದೇ ಶ್ರೇಷ್ಟ ಉತ್ತರ, ಯೋಚಿಸು"
--
ಅವರವರ ಭಾವ...

ಮನೆಯವರ ವಿರೋಧದಿಂದ ಬೇಸರವಾಗಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡರು
ಹುಡುಗಿಯ ಕಡೆಯವರು: ಪಾಪಿ ಹುಡುಗ, ನನ್ನ ಮಗಳ ಜೀವ ತಿಂದುಕೊಂಡ
ಹುಡುಗನ ಕಡೆಯವರು: ದರಿದ್ರ ಹುಡುಗಿ, ನನ್ನ ಮಗನ ಜೀವ ನುಂಗಿಕೊಂಡಳು
ಅಲ್ಲಿದ್ದ ಒಂದು ಮಗು: ಪಾಪಿ ಮುಂಡೆ ಮಕ್ಕಳು, ಎರಡು ಜೀವ ತಿಂದುಬಿಟ್ಟರು!
--

ಜ್ಯೋತಿಷಿ...

ಈ ಪೂಜೆ ಮಾಡಿ ನಿಮಗೆ ತಿಂಗಳಲ್ಲಿಯೇ ಕೋಟಿ ಕೋಟಿ ಲಾಭ ಬರುವಂತೆ ಮಾಡಿಕೊಡುತ್ತೇನೆ ಎಂದು ಆ ಜ್ಯೋತಿಷಿ ಹೇಳಿದ
ಆತ: ಮತ್ತೆ ಪೂಜೆ ನಡೆಯಲಿ ಸ್ವಾಮಿ..
ಜ್ಯೋತಿಷಿ: ಪೂಜೆಯ ಖರ್ಚು 500 ಆಗುತ್ತದೆ...

Thursday, 31 May 2012

ಅಣ್ಣ ಬರಲೇ ಇಲ್ಲ.........!

ರೇಷ್ಮೆ ಸೀರೆಯುಟ್ಟು
ಮುಡಿ ತುಂಬ
ಮೊಲ್ಲೆ ಮುಡಿದು ನಲಿದು
ಒಂಟಿದ್ದಳಾಕೆ ಬಳುಕಿ

ನಮ್ಮಮ್ಮನಷ್ಟು ವಯಸ್ಸಾಗಿಲ್ಲ
ನನಗಿಂತ ದೊಡ್ಡವಳು
"ಬಾ ಮಗು"
ಎಂದು ಕೈ ಚಾಚಿದಳು
ದಿಣ್ಣೆ ಮೇಲೊರಗಿದ್ದಣ್ಣ ನೆಗೆದೇಬಿಟ್ಟ

ಹುರಿ ಹರಿದು ಗಳ ಮುರಿದು
ಕಿಟ್ಟ ಸುರಿದು
ಸೀಮೆ ಹೆಂಚ ಚೂರಿನೊಳಗೆ
ಧೂಳಾವರಿಸಿದ ಮನೆ
ಕಿಟಕಿಯೊಳಗಮ್ಮ ಕಂಡಳು

ಉಸಿರುಗಟ್ಟಿ ನೆಗೆವ ಘಟದಂತೆ
ಅದುರಾಡಿದ ಸೊಳ್ಳಿನ
ಮಂದ ಬೆಳಕಿನಲ್ಲಿ
ಕಂಡಮ್ಮನ ನೊಸಲಲ್ಲಿ ಚಂದನ
ಹೊದೆಯಲು ಮಾತ್ರ ಹರಕು ರಗ್ಗು
ಅಜ್ಜಿ ಬಿಟ್ಟಿದ್ದ ಹರಕು ಸೀರೆ
ಉದುರಿದ ಚದುರಿದ ತಲೆಗೂದಲು

ಅಲುಗಾಡಿತು
ನೆಲವೂರಿದ ಬೆವೆತ ಪಾದ
ರೇಷ್ಮೆ ಸೀರೆಯ
ಹೊಳಪಂಚಲ್ಲಿಣುಕಿ
ಅಣ್ಣನೂ ಕರೆದ
ಭಾವುಕಮ್ಮನ ಮಂಕುಗಣ್ಣು
ನಾಲಗೆ ಮೇಲಿನ ಹುಣ್ಣು
ಕಾಲಂಟಿಸಿಬಿಟ್ಟಿದ್ದವು ಕೀಳದೆ

ಹಠಾತ್ತನೆರಗಿದ ಬಿರುಗಾಳಿ
ಅವಳ ಕಂಕುಳಿಗೆನ್ನ ತಳ್ಳಿತು
ಪ್ರಪಂಚ ಕಂಡವಳವಳು
ತಲೆ ನೇವರಿಸಿ
ಹಣೆಗೆ ಮುತ್ತಿಟ್ಟು
ಮನಸ್ಸನ್ನೊಮ್ಮೆ ಸಾರಿಸಿ
ಕಸುವ ಮೆಚ್ಚಿ
ದುಡಿಸಿದಳೆನ್ನನ್ನು ‍ಬದುಕಿಗೆ

ಸೂರ್ಯ ವಿದಾಯದೊಂದಿಗೆ
ರೇಷ್ಮೆಸೀರೆ ಕಾಲಿಗೆ ನಮಿಸಿ
ಓಡೋಡಿ ಬಂದು
ಎನ್ನಮ್ಮನನ್ನಪ್ಪಿಕೊಂಡೆ
ಪ್ರಪಂಚ ಕಾಣಿಸಿ
ಶಶಿಯೆದೆಗೆ ಕುಳ್ಳಿರಿಸಿ
ರೇಷ್ಮೆ ಸೀರೆಯುಡಿಸಿ
ಪೂಜಿಸಿದೆ ಪ್ರೇಮಿಸಿದೆ
ನನ್ನವ್ವ ಮುದ್ದು ಕನ್ನಡವ್ವನ!

ಈಗಲೂ ಬಿರುಗಾಳಿ
ಆಕೆಯೆಡೆಗೆನ್ನನ್ನು ತಳ್ಳುತ್ತದೆ
ಆಕೆಯೆಷ್ಟೆ ಸಲಹಿದರೂ
ನನ್ನವ್ವನೇ ನನ್ನ ದೇವತೆ
ಅಣ್ಣ ಬರಲೇ ಇಲ್ಲ.........!

Tuesday, 29 May 2012

ಪರದೆಗಳು....

ಮಿಂಚು ಗುಡುಗಿಲ್ಲದ ಕಪಟ ಸಂಚಿಲ್ಲದ
ಸಣ್ಣ ಹನಿ ಸಿಂಚನದ ನಡುವೆ
ಪಡುವಣ ಗಾಳಿ ಕೆನ್ನೆ ಚಿವುಟಿರಲು
ನಮ್ಮಿಬ್ಬರ ನಡುವೆ ತಿಳಿ ಪರದೆ
ಬಿಟ್ಟವರಾರು?

ಹರಿಯಲು ಕುಡುಗೋಲು ಬೇಕಾಗಿಲ್ಲ
ತೋರ್ಬೆರಳು ತೋರಿ
ಹೆಬ್ಬೆರಳಿದ್ದರೆ ಸಾಕು
ಇರುವೆರಡು ಕೈ ಬಿಗಿದು ತಲೆಯೊತ್ತಿ
ಪರದೆ ಕಟ್ಟಿ ಕತ್ತಿಗೆ ಕತ್ತಿಯಿಟ್ಟವರಾರು?

ಮನೆಯಮ್ಮನಿಗೂ ಗೊತ್ತಿಲ್ಲವಂತೆ
ಅವಳಿಗೋ ಹರಿದ ಪರದೆಯದೇ ಚಿಂತೆ
ನೆರೆಮನೆ ಭೂತ ರಂಗಿ ವ್ಯಂಗ್ಯಕ್ಕದುರಿ
ದಬ್ಬಳ ಚುಚ್ಚಿ ಹೊಲೆದಿದ್ದಾಳೆ
ಉಸಿರಾಡಿದಳು ಸದ್ಯಕ್ಕೆ ನಿಶ್ಚಿಂತೆ!

ಒಂದೆರಡು ಬೇವು ಹುದುಗಿದ್ದ ತಾತಾ
ತಾ ನೆಟ್ಟಿದ್ದ ಮಾವಿನ ತೋಪಿನಲ್ಲಿ
ನೀರೆರೆದು ಪೋ‍ಷಿಸಿದಪ್ಪ ಬೆಪ್ಪನಿಗೆ
ಮಾವಿನ ರುಚಿಗೆ ಬೇವಿನ ವಾಕರಿಕೆ

ಊರ ನೂರು ಕೇರಿಗೆ ನಾನೂರು ಸೀರೆ
ದಿಕ್ಕು ದಿಕ್ಕಿಗೆ ದಿಕ್ಕೆಡಿಸೋ ಪರದೆಗಳು
ದಾಟಿ ಬಂದ ನಾಯಿಗಳೊಟ್ಟಿಗೆ
ಬೊಗಳುಭಟ್ಟ ಸನ್ನಿ ಜಗಳ ಸುಲಿಗೆ
ಸೀರೆಯೀಚೆಗೆ

ಕೊಡಪಾನದೊಳಗಿನ ನೀರಿಗೆ
ಕೊಡಪಾನವೇ ಶತ್ರು
ಮೊಗೆದು ಕೊಳ್ಳಲು ಬಗೆ ಬಗೆ ಪಾತ್ರೆ!
ಬಗ್ಗಿಸಿ ಹರಿದರೆ ಹಿಡಿಯಲು
ಮತ್ತೊಂದು ಹೊಂಡ
ಒಗ್ಗಿಕೊಂಡ ಜಲ, ಜಲಕನ್ಯೆ

ಬಚ್ಚಲ ಮನೆ ಗೋಡೆಯ
ದೇವರ ಮನೆಗೆ ದೇವರ ಪರದೆ
ಮೇಲೆ ಚೀವ್ ಗುಟ್ಟ ಗಿಳಿಗೆ
ಪಂಜರ ಪರದೆ
ದಿಣ್ಣೆ ಗೋಡೆಗೊರಗಿದಜ್ಜನೆದೆ
ಪರದೆಯಲ್ಲಿಣುಕಿದ
ಕೆಮ್ಮುವ ಏದುಸಿರಿನಾತ್ಮ
ಬಿಡುಗಡೆಯ ತುಡಿತಕ್ಕೆ
ಮಾವಿನ ತೋಪಿನಲ್ಲಿ ಪಾರ್ಥೇನಿಯಂ ಬೀಜಾಂಕುರ

ತಲೆ ಕೊರೆತ...


ಎದೆ ನದಿಯಲಿ ತೇಲೋ ದೋಣಿ
ನಡುಗಿದೆ ಅಲೆ ಸೆಲೆಗೆ ಜಿಗಿದು
ಮೆದುಳ ಕೈ ಹಿಡಿದಿದೆ ಹುಟ್ಟು
ಕವಲೊಡೆವುದು ಕೆಸರ ಮೊಗೆದು

ಈ ಬೆಂಕಿಯೊಲೆ ದೇಹದೊಳಗೆ
ಬೆಚ್ಚನೆ ಕೊಠಡಿ ನೂರು
ನಡುವೆ ರಕ್ತ ಒಸರಿದ ಹೃದಯ
ಸುರಿಸಿದೆ ಭಾವನೆಗಳ ಬೆವರು!

ಮರಣದರಮನೆವರೆಗೆ ಕೊಂಡಿ ದರ್ಬಾರು
ಬಿದ್ದೆದ್ದೊದ್ದು ನಡೆಯಲು ಬಿಡದು
ಮತ್ತೆ ಎಡವಿದೆ ಹೆಬ್ಬೆರಳು
ಮನ ಜೇನು ಒಣಗಿಸಿ ವಾಂಛೆ ಸುರಿದು

ಬಾಲ್ಯದಂತ್ಯಕ್ಕೆ ಕೊರಡಾಗಿ ದಿಕ್ಕೆಡಿಸೊ
ಮರ್ಮಾಂಗವೆಂಬ ಕ್ಸೆರಾಕ್ಸ್ ಮೆ‍ಷಿನ್ನು
ನೆಟ್ಟ ಜಾಗದಲ್ಲಿಯೇ ಮತ್ತೆ ಮತ್ತೆ
ಗಿಡ ನೆಟ್ಟು ಕಿತ್ತು ಬಯಲಾಗುವ ಕಣ್ಣು

ದಿಕ್ಕು ದಿಕ್ಕಿಗೂ ದಿಕ್ಕೆಡಿಸೋ ಸೆಲೆ
ನೋವೋ ನಲಿವೋ ಕೊಳೆತ ಬಾಳೆ
ಸೂಜಿಯ ದಾರಕ್ಕೆ ಮೈ ಬಟ್ಟೆ
ಎಳೆಯುವ ನೂರಾರು ಕಟ್ಟಳೆ!

ಆ ಘಟ್ಟದಲ್ಲಲ್ಲಿ ಕೆಣಕುವ ರಸ್ತೆ ಉಬ್ಬು
ನಡೆಯೋಣ ಅರಿತು ತಲೆ ಬಾಗಿ
ಅಲೆ ಜೋರಾದರೆ ತೇಲಿಸಿಬಿಡೋಣ
ಮನಸ್ಸನ್ನು, ಸರ್ವಸಂಗ ಪರಿತ್ಯಾಗಿ!