ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Thursday, 31 May 2012

ಅಣ್ಣ ಬರಲೇ ಇಲ್ಲ.........!

ರೇಷ್ಮೆ ಸೀರೆಯುಟ್ಟು
ಮುಡಿ ತುಂಬ
ಮೊಲ್ಲೆ ಮುಡಿದು ನಲಿದು
ಒಂಟಿದ್ದಳಾಕೆ ಬಳುಕಿ

ನಮ್ಮಮ್ಮನಷ್ಟು ವಯಸ್ಸಾಗಿಲ್ಲ
ನನಗಿಂತ ದೊಡ್ಡವಳು
"ಬಾ ಮಗು"
ಎಂದು ಕೈ ಚಾಚಿದಳು
ದಿಣ್ಣೆ ಮೇಲೊರಗಿದ್ದಣ್ಣ ನೆಗೆದೇಬಿಟ್ಟ

ಹುರಿ ಹರಿದು ಗಳ ಮುರಿದು
ಕಿಟ್ಟ ಸುರಿದು
ಸೀಮೆ ಹೆಂಚ ಚೂರಿನೊಳಗೆ
ಧೂಳಾವರಿಸಿದ ಮನೆ
ಕಿಟಕಿಯೊಳಗಮ್ಮ ಕಂಡಳು

ಉಸಿರುಗಟ್ಟಿ ನೆಗೆವ ಘಟದಂತೆ
ಅದುರಾಡಿದ ಸೊಳ್ಳಿನ
ಮಂದ ಬೆಳಕಿನಲ್ಲಿ
ಕಂಡಮ್ಮನ ನೊಸಲಲ್ಲಿ ಚಂದನ
ಹೊದೆಯಲು ಮಾತ್ರ ಹರಕು ರಗ್ಗು
ಅಜ್ಜಿ ಬಿಟ್ಟಿದ್ದ ಹರಕು ಸೀರೆ
ಉದುರಿದ ಚದುರಿದ ತಲೆಗೂದಲು

ಅಲುಗಾಡಿತು
ನೆಲವೂರಿದ ಬೆವೆತ ಪಾದ
ರೇಷ್ಮೆ ಸೀರೆಯ
ಹೊಳಪಂಚಲ್ಲಿಣುಕಿ
ಅಣ್ಣನೂ ಕರೆದ
ಭಾವುಕಮ್ಮನ ಮಂಕುಗಣ್ಣು
ನಾಲಗೆ ಮೇಲಿನ ಹುಣ್ಣು
ಕಾಲಂಟಿಸಿಬಿಟ್ಟಿದ್ದವು ಕೀಳದೆ

ಹಠಾತ್ತನೆರಗಿದ ಬಿರುಗಾಳಿ
ಅವಳ ಕಂಕುಳಿಗೆನ್ನ ತಳ್ಳಿತು
ಪ್ರಪಂಚ ಕಂಡವಳವಳು
ತಲೆ ನೇವರಿಸಿ
ಹಣೆಗೆ ಮುತ್ತಿಟ್ಟು
ಮನಸ್ಸನ್ನೊಮ್ಮೆ ಸಾರಿಸಿ
ಕಸುವ ಮೆಚ್ಚಿ
ದುಡಿಸಿದಳೆನ್ನನ್ನು ‍ಬದುಕಿಗೆ

ಸೂರ್ಯ ವಿದಾಯದೊಂದಿಗೆ
ರೇಷ್ಮೆಸೀರೆ ಕಾಲಿಗೆ ನಮಿಸಿ
ಓಡೋಡಿ ಬಂದು
ಎನ್ನಮ್ಮನನ್ನಪ್ಪಿಕೊಂಡೆ
ಪ್ರಪಂಚ ಕಾಣಿಸಿ
ಶಶಿಯೆದೆಗೆ ಕುಳ್ಳಿರಿಸಿ
ರೇಷ್ಮೆ ಸೀರೆಯುಡಿಸಿ
ಪೂಜಿಸಿದೆ ಪ್ರೇಮಿಸಿದೆ
ನನ್ನವ್ವ ಮುದ್ದು ಕನ್ನಡವ್ವನ!

ಈಗಲೂ ಬಿರುಗಾಳಿ
ಆಕೆಯೆಡೆಗೆನ್ನನ್ನು ತಳ್ಳುತ್ತದೆ
ಆಕೆಯೆಷ್ಟೆ ಸಲಹಿದರೂ
ನನ್ನವ್ವನೇ ನನ್ನ ದೇವತೆ
ಅಣ್ಣ ಬರಲೇ ಇಲ್ಲ.........!

Tuesday, 29 May 2012

ಪರದೆಗಳು....

ಮಿಂಚು ಗುಡುಗಿಲ್ಲದ ಕಪಟ ಸಂಚಿಲ್ಲದ
ಸಣ್ಣ ಹನಿ ಸಿಂಚನದ ನಡುವೆ
ಪಡುವಣ ಗಾಳಿ ಕೆನ್ನೆ ಚಿವುಟಿರಲು
ನಮ್ಮಿಬ್ಬರ ನಡುವೆ ತಿಳಿ ಪರದೆ
ಬಿಟ್ಟವರಾರು?

ಹರಿಯಲು ಕುಡುಗೋಲು ಬೇಕಾಗಿಲ್ಲ
ತೋರ್ಬೆರಳು ತೋರಿ
ಹೆಬ್ಬೆರಳಿದ್ದರೆ ಸಾಕು
ಇರುವೆರಡು ಕೈ ಬಿಗಿದು ತಲೆಯೊತ್ತಿ
ಪರದೆ ಕಟ್ಟಿ ಕತ್ತಿಗೆ ಕತ್ತಿಯಿಟ್ಟವರಾರು?

ಮನೆಯಮ್ಮನಿಗೂ ಗೊತ್ತಿಲ್ಲವಂತೆ
ಅವಳಿಗೋ ಹರಿದ ಪರದೆಯದೇ ಚಿಂತೆ
ನೆರೆಮನೆ ಭೂತ ರಂಗಿ ವ್ಯಂಗ್ಯಕ್ಕದುರಿ
ದಬ್ಬಳ ಚುಚ್ಚಿ ಹೊಲೆದಿದ್ದಾಳೆ
ಉಸಿರಾಡಿದಳು ಸದ್ಯಕ್ಕೆ ನಿಶ್ಚಿಂತೆ!

ಒಂದೆರಡು ಬೇವು ಹುದುಗಿದ್ದ ತಾತಾ
ತಾ ನೆಟ್ಟಿದ್ದ ಮಾವಿನ ತೋಪಿನಲ್ಲಿ
ನೀರೆರೆದು ಪೋ‍ಷಿಸಿದಪ್ಪ ಬೆಪ್ಪನಿಗೆ
ಮಾವಿನ ರುಚಿಗೆ ಬೇವಿನ ವಾಕರಿಕೆ

ಊರ ನೂರು ಕೇರಿಗೆ ನಾನೂರು ಸೀರೆ
ದಿಕ್ಕು ದಿಕ್ಕಿಗೆ ದಿಕ್ಕೆಡಿಸೋ ಪರದೆಗಳು
ದಾಟಿ ಬಂದ ನಾಯಿಗಳೊಟ್ಟಿಗೆ
ಬೊಗಳುಭಟ್ಟ ಸನ್ನಿ ಜಗಳ ಸುಲಿಗೆ
ಸೀರೆಯೀಚೆಗೆ

ಕೊಡಪಾನದೊಳಗಿನ ನೀರಿಗೆ
ಕೊಡಪಾನವೇ ಶತ್ರು
ಮೊಗೆದು ಕೊಳ್ಳಲು ಬಗೆ ಬಗೆ ಪಾತ್ರೆ!
ಬಗ್ಗಿಸಿ ಹರಿದರೆ ಹಿಡಿಯಲು
ಮತ್ತೊಂದು ಹೊಂಡ
ಒಗ್ಗಿಕೊಂಡ ಜಲ, ಜಲಕನ್ಯೆ

ಬಚ್ಚಲ ಮನೆ ಗೋಡೆಯ
ದೇವರ ಮನೆಗೆ ದೇವರ ಪರದೆ
ಮೇಲೆ ಚೀವ್ ಗುಟ್ಟ ಗಿಳಿಗೆ
ಪಂಜರ ಪರದೆ
ದಿಣ್ಣೆ ಗೋಡೆಗೊರಗಿದಜ್ಜನೆದೆ
ಪರದೆಯಲ್ಲಿಣುಕಿದ
ಕೆಮ್ಮುವ ಏದುಸಿರಿನಾತ್ಮ
ಬಿಡುಗಡೆಯ ತುಡಿತಕ್ಕೆ
ಮಾವಿನ ತೋಪಿನಲ್ಲಿ ಪಾರ್ಥೇನಿಯಂ ಬೀಜಾಂಕುರ

ತಲೆ ಕೊರೆತ...


ಎದೆ ನದಿಯಲಿ ತೇಲೋ ದೋಣಿ
ನಡುಗಿದೆ ಅಲೆ ಸೆಲೆಗೆ ಜಿಗಿದು
ಮೆದುಳ ಕೈ ಹಿಡಿದಿದೆ ಹುಟ್ಟು
ಕವಲೊಡೆವುದು ಕೆಸರ ಮೊಗೆದು

ಈ ಬೆಂಕಿಯೊಲೆ ದೇಹದೊಳಗೆ
ಬೆಚ್ಚನೆ ಕೊಠಡಿ ನೂರು
ನಡುವೆ ರಕ್ತ ಒಸರಿದ ಹೃದಯ
ಸುರಿಸಿದೆ ಭಾವನೆಗಳ ಬೆವರು!

ಮರಣದರಮನೆವರೆಗೆ ಕೊಂಡಿ ದರ್ಬಾರು
ಬಿದ್ದೆದ್ದೊದ್ದು ನಡೆಯಲು ಬಿಡದು
ಮತ್ತೆ ಎಡವಿದೆ ಹೆಬ್ಬೆರಳು
ಮನ ಜೇನು ಒಣಗಿಸಿ ವಾಂಛೆ ಸುರಿದು

ಬಾಲ್ಯದಂತ್ಯಕ್ಕೆ ಕೊರಡಾಗಿ ದಿಕ್ಕೆಡಿಸೊ
ಮರ್ಮಾಂಗವೆಂಬ ಕ್ಸೆರಾಕ್ಸ್ ಮೆ‍ಷಿನ್ನು
ನೆಟ್ಟ ಜಾಗದಲ್ಲಿಯೇ ಮತ್ತೆ ಮತ್ತೆ
ಗಿಡ ನೆಟ್ಟು ಕಿತ್ತು ಬಯಲಾಗುವ ಕಣ್ಣು

ದಿಕ್ಕು ದಿಕ್ಕಿಗೂ ದಿಕ್ಕೆಡಿಸೋ ಸೆಲೆ
ನೋವೋ ನಲಿವೋ ಕೊಳೆತ ಬಾಳೆ
ಸೂಜಿಯ ದಾರಕ್ಕೆ ಮೈ ಬಟ್ಟೆ
ಎಳೆಯುವ ನೂರಾರು ಕಟ್ಟಳೆ!

ಆ ಘಟ್ಟದಲ್ಲಲ್ಲಿ ಕೆಣಕುವ ರಸ್ತೆ ಉಬ್ಬು
ನಡೆಯೋಣ ಅರಿತು ತಲೆ ಬಾಗಿ
ಅಲೆ ಜೋರಾದರೆ ತೇಲಿಸಿಬಿಡೋಣ
ಮನಸ್ಸನ್ನು, ಸರ್ವಸಂಗ ಪರಿತ್ಯಾಗಿ!

Thursday, 24 May 2012

ಅನೈತಿಕತೆಯ ತೀರದಲ್ಲಿ... (ಕಥಾಕಾಲ)

“ಬೆಳಗ್ಗೆಯಿಂದ ಏನೋ ಗೊಂದಲದಲ್ಲಿದ್ದಂತಿದೆ, ಏನಾಯಿತು? ಏನಾದರೂ ತೊಂದರೆಯೇ?” ಗಂಡನ ಆ ಪ್ರಶ್ನೆಗೆ ಉತ್ತರಿಸುವಷ್ಟೂ ಮಾನಸಿಕ ಸ್ವಾಸ್ಥ್ಯ ಅವಳಲ್ಲಿರಲಿಲ್ಲ.
“ಆ...?” ಅಂದಳು... ಆತ ಮತ್ತೆ ಅದೇ ಪ್ರಶ್ನೆ ಕೇಳಿದ.
“ಏನೂ ಇಲ್ಲ...” ಎಂಬಂತೆ ನಾಟಕೀಯವಾಗಿ ತಲೆ ಆಡಿಸಿ ಮಗುವಿನ ಕಡೆ ತಿರುಗಿ ಬಟ್ಟೆ ತೊಡಿಸುತ್ತಿದ್ದಳು.
“ಇಂದೇಕೋ ಮೈ ಹುಷಾರಿಲ್ಲ ಅತ್ತೆ, ನಿಮ್ಮ ಮಗನಿಗೆ ನೀವೇ ತಿಂಡಿ ಮಾಡಿಕೊಡಿ” ಎಂದು ಅತ್ತೆಗೆ ಬೆಳಗ್ಗೆಯೇ ಹೇಳಿದ್ದಳು.
ಅಮ್ಮನ ಕೈ ರುಚಿ ತಿನ್ನುವ ಭಾಗ್ಯಕ್ಕೆ ಶಶಿಧರ ಒಳಗೊಳಗೆ ಖುಷಿ ಪಟ್ಟಿದ್ದ !

ಗಂಡ ಹೋಗುವುದನ್ನೇ ಕಾಯುತ್ತಿದ್ದ ಚಂದ್ರಕಲಾ “ಉಷ್...” ಎಂದುಕೊಂಡು ಧೊಪ್ಪನೇ ಸೋಫಾ ಮೇಲೆ ಬಿದ್ದುಕೊಂಡಳು. ನಿನ್ನೇ ಸಾಯಂಕಾಲದಿಂದಲೂ ಅವಳಿಗೆ ಒಂದೇ ಗೊಂದಲ. “ಆತನನ್ನು ಸಂಧಿಸಲು ಹೋಗುವುದೋ, ಬೇಡವೋ?” ಬದುಕೆಂಬ ವ್ಯವಸ್ಥಿತ ಪರಿಧಿಯೊಳಗೆ ಒಳ್ಳೆಯದು ಮತ್ತು ಕೆಟ್ಟದ್ದನ್ನು ವಿಭಜಿಸುವ ಶಕ್ತಿ ಅವಳಲ್ಲಿರಲಿಲ್ಲ.

ನಿನ್ನೆ ಮಧ್ಯಾಹ್ನ ಗೆಳತಿ ಭಾನುಪ್ರಿಯ ಬಂದಿದ್ದಾಗ ಮಾತಿನ ಮಧ್ಯದಲ್ಲಿ ಇವಳೇ ರಾಮಚಂದ್ರನ ವಿಚಾರ ತೆಗೆದಿದ್ದಳು. ಅವನ ತುಂಬು ಸಂಸಾರ ಮತ್ತು ಇಬ್ಬರು ಮಕ್ಕಳ ಬಗ್ಗೆ ಕಣ್ಣರಳಿಸಿ ಕೇಳಿಸಿಕೊಂಡಿದ್ದಳು. ಎಲ್ಲೋ ಒಂದು ಕಡೆ “ಅವನ ಸಂಸಾರ ಅವನಿಗಾಯಿತು, ನನ್ನ ಸಂಸಾರ ನನಗಾಯಿತು” ಎಂದುಕೊಂಡರೂ ಆತನ ಮೊಬೈಲ್ ನಂಬರ್ ತೆಗೆದುಕೊಳ್ಳುವುದು ಮರೆಯಲಿಲ್ಲ. ಅವಳು ಹೋಗುವುದನ್ನೇ ಕಾಯುತ್ತಿದ್ದಳು. “ಹೋಗಿ ಬರ್ತೀನಿ ಕಣೆ” ಎಂದು ಭಾನುಪ್ರಿಯ ಹೇಳಿದಾಗ ಸೌಜನ್ಯಕ್ಕಾದರೂ “ಉಳಿದುಕೊಳ್ಳೇ” ಎಂದು ಹೇಳಲಿಲ್ಲ. ಅವಳು ಹೋದದ್ದೇ ತಡ ತನ್ನ ಮೊಬೈಲ್ ತೆಗೆದುಕೊಂಡು ಕೂಡಲೇ ರಾಮಚಂದ್ರ ನಿಗೆ ಫೋನಾಯಿಸಿದಳು.
“ಹಲೋ...!”
“ಯಾರೂ?, ರಾಮು ನಾ??”
“ಹೌದು.. ತಾವು?”
“ನಾನು ಚಂದ್ರಕಲಾ... ಇಷ್ಟು ಬೇಗ ಮರೆತುಬಿಟ್ಟಾ??”
“ಯಾವ ಚಂದ್ರಕಲಾ, ಅದೇ ನಿನ್ನೇ ಬಸ್ ಸ್ಟ್ಯಾಂಡ್ ನಲ್ಲಿ ಸಿಕ್ಕಿದ್ದಲ್ಲಾ ಅವಳೇ?”
“ಇಲ್ಲ, ನಮ್ಮಂತವರನ್ನೆಲ್ಲಾ ಎಲ್ಲಿ ನೆನಪಿನಲ್ಲಿ ಇಟ್ಕೋತೀಯಾ ನೀನು, ನಾನು ಕಣೋ ನಿನ್ನ ಚಂದು”
“ಶ್.. ಓಹೋ.. ಹೇಗಿದ್ದೀಯಾ ಚಂದು..” ಆತನ ಧ್ವನಿ ಸ್ವಲ್ಪ ಗದ್ಗದಿತವಾಯಿತು.
ಮಾತಿನ ಮಧ್ಯೆ ಆತ “ನಾಳೆ ನನ್ನ ಮನೆಯಲ್ಲಿ ಸಿಗು, ಹೆಂಡತಿ ಮಕ್ಕಳು ತವರಿಗೆ ಹೋಗಿದ್ದಾರೆ” ಎಂದ. ಏನೂ ಮಾತನಾಡದೇ ಈಕೆ ಸ್ವಲ್ಪ ಖುಷಿಯಿಂದಲೇ ಒಪ್ಪಿಕೊಂಡಿದ್ದಳು.

ಮತ್ತೆ ಅವಳಿಗೆ ಅದೇ ದ್ವಂದ್ವ ಕಾಡಿತು, ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಗಂಡ ಮತ್ತು ತೆವಳುವ ಮಗುವಿರುವಾಗ ಮಾಜಿ ಪ್ರಿಯಕರನ ಬಳಿಗೆ ಹೋಗುವುದು ಯಾಕೋ ಸರಿ ಇಲ್ಲ ಎಂದೆನಿಸಿದರೂ ಎಲ್ಲೋ ಒಂದು ಕಡೆ “ಚೆ! ಅವನ ಜೊತೆಯೇ ಹೊರಟುಹೋಗಬೇಕಾಗಿತ್ತು” ಎಂದುಕೊಂಡಳು. ಆತ ಇವಳನ್ನು “ನಾನು ನಿನ್ನನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತೇನೆ” ಎಂದು ಹೇಳಿಕೊಂಡಿದ್ದ. ಕೈ ಹಿಡಿದು ಕಾಡಿನ ನಡುವೆ ಅಲೆದಾಡಿಸಿದ್ದ, ನದಿ ತೊರೆಗಳಲ್ಲಿ ಮುಳುಗಿ ಆಲಂಗಿಸಿಕೊಂಡಿದ್ದ. ಕೊನೆಗೆ ಜಾತಿಯ ನೆಪ ಹೇಳಿ ಆತ ಈ ಭಾವಯಾನದಿಂದ ಕಳಚಿಕೊಂಡಾಗ ಈಕೆ ಮರು ಮಾತನಾಡದೇ ಮನೆಯವರಿಗೆ ಹೆದರಿ ಶಶಿಧರನನ್ನು ಮದುವೆಯಾಗಿದ್ದಳು.

ಯಾಕೋ ಆತ ಮತ್ತೆ ಮತ್ತೆ ಕಾಡತೊಡಗಿದ. “ವೇರ್ ಆರ್ ಯೂ?” ಎಂಬ ಸಂದೇಶ ಬಂದಿತು. ಕೂಡಲೇ “ಕಮಿಂಗ್...” ಎಂದು ಪ್ರತಿಕ್ರಿಯಿಸಿಬಿಟ್ಟಳು.
ದಡ ದಡನೆ ಹೋಗಿ ಸ್ನಾನ ಮಾಡಿಕೊಂಡು, ದೇವರ ದೀಪ ಹಚ್ಚಿ ಕನ್ನಡಿ ಮುಂದೆ ನಿಂತಳು. “ನೀನು ಹಸಿರು ಸೀರೆಯಲ್ಲಿ ರಂಭೆಯಂತೆ ಕಾಣುತ್ತೀಯೆ” ಎಂದು ಆತ ಹೇಳಿದ್ದು ನೆನಪಿಸಿಕೊಂಡ ಕೂಡಲೇ ಸೀರೆ ಬದಲಿಸಿದಳು. ಕೇಶವಿನ್ಯಾಸ ಎಂದಿನಂತಿರದೆ ಆತ ಬಾಚುತ್ತಿದ್ದಂತೆ ಬಾಚಿಕೊಂಡು ತುಟಿ ರಂಗಿಗೆ ಬಣ್ಣ ಮೆತ್ತಿ ಕೊನೆಗೂ ಹೊರಡಲನುವಾದಳು.

“ಗೆಳತಿ ಭಾನುಪ್ರಿಯ ಮನೆಗೆ ಬರಲು ಹೇಳಿದ್ದಾಳೆ, ಹೋಗಿ ಬರುತ್ತೇನೆ, ಮಗುವನ್ನು ನೋಡಿಕೊಳ್ಳಿ ಅತ್ತೆ” ಎಂದು ಸುಳ್ಳು ಹೇಳಿ ಹೊರಟುಬಿಟ್ಟಳು.

ಒಂದು ಹಾಸಿಗೆ ಕೋಣೆ ಇರುವ ಬಾಡಿಗೆ ಮನೆಯಲ್ಲಿ ರಾಮಚಂದ್ರ ಆಲಿಯಾಸ್ ರಾಮು ವಾಸವಿದ್ದದ್ದು. ಮನೆ ಮತ್ತು ಮನೆಯೊಳಗಿನ ವಸ್ತುಗಳು, ಗಂಡ ಹೆಂಡತಿ ಮಕ್ಕಳ ಫೋಟೋ ನೋಡಿದಾಕ್ಷಣ ಚಂದ್ರಕಲಾಳಿಗೆ ಆತನ ಸಂಸಾರದ ಸಾರ, ಅನ್ಯೋನ್ಯತೆ ಅರ್ಥವಾಯಿತು. ಟೀ ಕಾಯಿಸಿಕೊಂಡು ಬಂದವನೇ ಚಂದ್ರಕಲಾಳ ಪಕ್ಕದಲ್ಲಿಯೇ ಕುಳಿತುಕೊಂಡ. ತಮ್ಮ ಹಳೆಯ ದಿನಗಳನ್ನೆಲ್ಲಾ ಇಬ್ಬರೂ ಮೆಲುಕಿದರು.
“ಮತ್ತೇ? ಇನ್ನೇನು ಸಮಾಚಾರ ಚಂದು?’ ಎಂದ ರಾಮಚಂದ್ರ
“ಎಲ್ಲಾ ನೀನೇ ಹೇಳಬೇಕು”
“ಮಗು ಮತ್ತು ಗಂಡ ಹೇಗಿದ್ದಾರೆ?”
“ಈಗೇಕೆ ಆ ಮಾತು? ಕಷ್ಟವಾದರೂ ಸರಿಯೇ ಇಷ್ಟ ಪಟ್ಟವರೊಂದಿಗೆ ಜೀವನ ನಡೆಸಬೇಕು” ಎನ್ನುತ್ತಿದ್ದಂತೆ ರಾಮಚಂದ್ರ ಚಂದ್ರಕಲಾಳ ಕೈ ಮೇಲೆ ಕೈ ಹಾಕಿದ. ಆಕೆ ಭಯಪಟ್ಟು ಸ್ವಲ್ಪ ನಾಚಿಕೆಯಿಂದ ನಿಂತುಕೊಂಡಳು. ಎದ್ದು ನಿಂತವನೇ ಅವಳ ತೋಳುಗಳನ್ನು ಮುಟ್ಟಿದ
“ಇದು ಸರಿ ಇಲ್ಲ”
“ಯಾವುದು?”
“ನೀನು ನನ್ನನ್ನು ಮುಟ್ಟುವುದು. ನಾನೀಗ ಮತ್ತೊಬ್ಬರ ಸ್ವತ್ತು”
”ಮತ್ತೊಬ್ಬರ ಸ್ವತ್ತು ಸದ್ಯಕ್ಕೀಗ ನನ್ನ ಮನೆಯಲ್ಲಿದೆ”
ಆಕೆ ಏನೂ ಮಾತನಾಡಲಿಲ್ಲ. ಆತನೇ ಮುಂದುವರಿದ.

“ಹೇ ಹೆಣ್ಣೇ, ಒಳ್ಳೆಯದೂ ಕೆಟ್ಟದ್ದೆಂಬುದಿಲ್ಲ! ಒಮ್ಮೆ ವಿಶಾಲವಾಗಿ ಯೋಚಿಸು” ಆತ ಆಕೆಯ ತುರುಬು ಬಿಚ್ಚಿ ಕೊರಳ ಬಳಿ ತುಟಿ ತಂದ.
ಉಸಿರ ಗಾಳಿ ಸೋಕಿ ಕ್ಷಣ ಕಾಲ ನಿಂತಲ್ಲಿಯೇ ಅಲುಗಾಡಿದಳು. ಏನೋ ಅನುಭೂತಿ. ಕಣ್ಮುಚ್ಚಿದ್ದಳು.
ಹೀಗೆ ಆತ ಆಕೆಯನ್ನು ಮಾತಿನ ಹಂದರದಲ್ಲಿಯೇ ಕಟ್ಟಿ ಅನೇಕ ಬಾರಿ ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದ, ಸೋಲುವ ಸಮಯದಲ್ಲಿ ಮೈ ಕೊಡವಿಕೊಂಡು ಚಂದ್ರಕಲಾ ತನ್ನನ್ನು ತಾನೇ ಬಿಡಿಸಿಕೊಂಡುಬಿಡುತ್ತಿದ್ದಳು. ಪ್ರೇಮದ ಹೆಸರಿನಲ್ಲಿ ಕಾಮ ಮೊಗೆಯಲು ಪ್ರಯತ್ನಿಸುತ್ತಿದ್ದ ಶೂರನವನು. ಆದರೆ ಯಾಕೋ ಇಂದು ಮಾತ್ರ ಸೋತು ನೀರಾದಳು. ನೈತಿಕತೆಯ ಕೋಟೆಯನ್ನು ದಾಟಿದ ದೈಹಿಕ ಅನೈತಿಕತೆಯನ್ನು ಮುಚ್ಚಿಕೊಳ್ಳುವ ಧೈರ್ಯವನ್ನು ಅವರವರ ಮದುವೆಯೇ ಕೊಟ್ಟಿತು ಎಂದರೆ ತಪ್ಪಿಲ್ಲವೇನೋ! ಆದರೂ ದೇಹದೊಳಗಿನ ಅವರವರ ಆತ್ಮ ಮಾತ್ರ ಇಬ್ಬರಲ್ಲೂ ವಿಭಜನೆಯಾಗಿರಲಿಲ್ಲ!

ಪಕ್ಕದ ಮನೆಯ ಮಗುವಿನ ಅಳು ಕೇಳಿಸಿತು. ಕೂಡಲೇ ತನ್ನ ಮಗುವಿನ ನೆನಪಾಗಿ ಹೊರಡಲು ತಯಾರಾದಳು ಚಂದ್ರಕಲಾ.
“ಸಂಜೆವರೆವಿಗೂ ಇರಬಹುದಾಗಿತ್ತು, ಇಂದು ನಿನಗೆಂದೇ ಕೆಲಸಕ್ಕೆ ರಜೆ ಹಾಕಿದ್ದೆ” ಆತನುವಾಚ
“ಮತ್ತೆ ಯಾವಾಗಲಾದರೂ ಬರುತ್ತೇನೆ, ನನ್ನ ಮಗು ಅಳುತ್ತಿದೆ, ನಾನು ಹೊರಡುತ್ತೇನೆ” ಎಂದವಳೇ ಮನೆಯಿಂದ ಹೊರಬಂದು ಬಸ್ಸಿನಲ್ಲಿ ಹೊರಟಳು

ಕೆನ್ನೆ ಮೇಲೆ ಏನೋ ಕುಳಿತಂತೆ ಆಕೆಗೆ ಭಾಸವಾಯಿತು. ಒರೆಸಿಕೊಂಡಳು. ಕೈಗೆ ಆತನ ಎಂಜಲು ಮೆತ್ತಿಕೊಂಡಿತು. ಕೈ ತುಂಬಾ ಕೊಳೆ ಮೆತ್ತಿಕೊಂಡಂತೆ ಅನಿಸಿ ಕೈಯನ್ನು ಬಟ್ಟೆಗೆ ತಾಕಿಸಿ ಮತ್ತೆ ಗಟ್ಟಿಯಾಗಿ ಕೆನ್ನೆಯನ್ನುಜ್ಜಿಕೊಂಡಳು. ಎಷ್ಟೇ ಉಜ್ಜಿಕೊಂಡರೂ ಆಕೆಗೆ ಯಾಕೋ ಸಮಾಧಾನವೇ ಆಗಲಿಲ್ಲ. ಅಷ್ಟಕ್ಕೇ ಫೋನ್ ರಿಂಗಣಿಸಿತು. ನೋಡಿದರೆ ಶಶಿಧರನ ಕರೆ. ಸ್ವಲ್ಪ ಭಯದಿಂದಲೇ “ಹಲೋ” ಎಂದಳು.
“ಎಲ್ಲಿದ್ದೀಯಾ ಡಿಯರ್...?”
“ನಾನು ಮತ್ತು ಗೆಳತಿ ಭಾನುಪ್ರಿಯ ಸಿನಿಮಾ ನೋಡಲು ಹೋಗಿದ್ದೆವು” ಧ್ವನಿ ನಡುಗುತ್ತಿತ್ತು.
“ಹೌದೇ..? ವೆರಿಗೂಡ್... ನೀ ಖುಷಿಯಿಂದಿರಬೇಕು. ಹಾಗೇ ನಿನ್ನ ಗೆಳತಿ ಮನೆಗೆ ಹೋಗಿ ಸಂಜೆವರೆವಿಗೂ ಇದ್ದು ಬಾ, ನನ್ನದು ಮಧ್ಯಾಹ್ನದ ಊಟ ಇಲ್ಲೇ ಆಯಿತು” ಎಂದ ಶಶಿಧರ.
ಈಕೆಗೆ ಏನು ಹೇಳಬೇಕು ಎಂಬುದೇ ತಿಳಿಯದೇ ಸುಮ್ಮನೆ “ಹ್ಞೂಂ” ಎಂದಳು.

ತನ್ನ ಗಂಡನ ಪ್ರೀತಿ ವಾತ್ಸಲ್ಯ ಕಂಡು ಆಕೆಗೆ ತಡೆದುಕೊಳ್ಳಲಾಗದ ಅಳು ಬಂದಿತು. ಎಲ್ಲೋ ಒಂದು ಕಡೆ ದಾರಿ ತಪ್ಪಿ ಅಡ್ಡದಾರಿ ಹಿಡಿದೆ ಎಂದೆನಿಸಿತು. ಒಂದು ವಿಶ್ವಾಸವನ್ನು ಪಾತಾಳಕ್ಕೆ ತಳ್ಳಿ ವಿಶ್ವಾಸಘಾತುಕಿಯಾಗಿಬಿಟ್ಟೆನಲ್ಲ ಎಂದೆನಿಸಿ ಬಸ್ಸಿನಲ್ಲಿಯೇ ಬಿಕ್ಕುತ್ತಿದ್ದಳು. ನೈತಿಕತೆಯ ತಿರುಳು ಅವಳ ಮನಸ್ಸನ್ನು ವ್ಯಾಪಿಸಿತ್ತು. ನಿರ್ವಸ್ತ್ರಗೊಳಿಸುವ ಹಕ್ಕನ್ನು ಹಂಚಿದ್ದು ತನ್ನಲ್ಲೇ ತಾನು ಕಂಡ ಧೂರ್ತ ಅಭಿಲಾಷೆ ಎಂಬುದನ್ನು ಮನಗಂಡುಕೊಂಡಳು. ಎದೆ ನಡುಗಿತು, ತುಟಿ ಅದುರಿತು. ಮೈ ಮೇಲೆಲ್ಲಾ ಚರಂಡಿ ಹುಳುಗಳು ಹರಿದಾಡಿದಂತೆ ಭಾಸವಾಯಿತು. ಅನೈತಿಕ ವಾಸನೆ ಮೂಗಿಗೆ ಬಡಿಯುತ್ತಿತ್ತು. ಆತ ಸೋಕಿದ ಗುರುತುಗಳೆಲ್ಲಾ ಮೈಮೇಲೆ ಹಾಗೆ ಇದ್ದವು. ಆ ಮನೆಯ ಬೆವರ ಹೊತ್ತು ಸಾಗಿದ್ದಳು. ಮನೆಗೆ ಬಂದವಳೇ ಅಳುತ್ತಿದ್ದ ಮಗುವನ್ನು ಮುಟ್ಟಲಿಲ್ಲ. ಸ್ನಾನದ ಮನೆಗೆ ಓಡಿಹೋದಳು. ಉಟ್ಟ ಬಟ್ಟೆಯೊಂದಿಗೇ ಒಂದತ್ತು ಕೊಡ ನೀರು ಬಗ್ಗಿಸಿಕೊಂಡಳು. ಮೈ ಕೈಗೆ ಸಮಾಧಾನವಾಗುವವರೆವಿಗೂ ಸಾಬೂನು ಹಚ್ಚಿಕೊಂಡು ಗಟ್ಟಿಯಾಗಿ ತಿಕ್ಕಿಕೊಂಡಳು. ಇದ್ದ ಸಾಬೂನೆಲ್ಲಾ ಮುಗಿದುಹೋಯಿತು. ಉಟ್ಟ ಬಟ್ಟೆಯನ್ನೂ ಅಷ್ಟೇ, ಸಾಬೂನು ಮುಗಿಯುವವರೆವಿಗೂ ತಿಕ್ಕಿದಳು. ಎಲ್ಲೋ ಒಂದು ಕಡೆ ಬೆಂಕಿಯಲ್ಲಿ ಸುಟ್ಟು ಹಾಕಿಬಿಡೋಣ ಎಂದುಕೊಂಡಳಾದರೂ ಗಂಡ ಮತ್ತು ಅತ್ತೆಗೆ ಹೆದರಿ ಅಲ್ಲೇ ಅಡರಿ ಒಣ ಹಾಕಿದಳು. ಹೊರ ಬಂದವಳೇ “ಇನ್ನು ಸ್ವಲ್ಪ ಇದ್ದು ಬರಬಹುದಾಗಿತ್ತು”ಎಂಬ ಅತ್ತೆ ಮಾತಿಗೆ ಕರಗಿ ಅಡುಗೆ ಮನೆಗೆ ಧಾವಿಸಿ ಮುಖ ಮುಚ್ಚಿ ಅತ್ತಳು. ಸಾವರಿಸಿಕೊಂಡು ಹೊರ ಬಂದು ಮಗುವನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತಿಕ್ಕಿದಳು. ಮಗುವಿನ ಕೆನ್ನೆಗೆ ಅವಳ ಎಂಜಲು ಮೆತ್ತಿಕೊಂಡಿತು. ಯಾಕೋ ತನ್ನ ಮಗು ಕೊಳಕಾಗಿ ಹೋಯಿತು ಎಂದೆನಿಸಿತು. “ಬೆಳಗ್ಗೆಯೇ ಸ್ನಾನ ಮಾಡಿಸಿದ್ದೇನೆ” ಎಂದು ಅತ್ತೆ ಹೇಳಿದರೂ ಕೇಳದೆ ಮಗುವಿಗೆ ಸ್ನಾನ ಮಾಡಿಸಿದಳು. ತಾನೂ ಮತ್ತೊಮ್ಮೆ ಸ್ನಾನ ಮಾಡಿದಳು.

ಶಶಿಧರ, ಡಾಕ್ಟರ್ ಮುಂದೆ ಕಣ್ಣೀರಿಡುತ್ತ ಕುಳಿತಿದ್ದ “ಡಾಕ್ಟರೇ... ನನ್ನ ಸಮಸ್ಯೆಯನ್ನು ದಯವಿಟ್ಟು ಪರಿಹರಿಸಿ. ನನ್ನ ಹೆಂಡತಿ ಮಗುವೆಂದರೆ ನನಗೆ ಇನ್ನಿಲ್ಲದ ಪ್ರೀತಿ. ಅವಳ ಕೂದಲೂ ಕೊಂಕದಂತೆ ನೋಡಿಕೊಂಡಿದ್ದೇನೆ. ನನ್ನ ಸುಖ ಸಂಸಾರಕ್ಕೆ ಹಠಾತ್ತನೆ ಬಿರುಗಾಳಿ ಎರಗಿದೆ. ಹೆಂಡತಿ ಮೊದಲಿನಂತಿಲ್ಲ. ನನ್ನೊಟ್ಟಿಗೆ ಮಲಗಿ ಎರಡು ತಿಂಗಳ ಮೇಲಾಯಿತು. ಮಗುವನ್ನಂತು ಹತ್ತಿರಕ್ಕೇ ಸೇರಿಸುತ್ತಿಲ್ಲ. ಯಾರಿಗಾದರೂ ಹೆದರಿ ಮಗುವನ್ನು ಮುಟ್ಟಿದರೆ ಕೂಡಲೇ ಸ್ನಾನ ಮಾಡಿಸಿಬಿಡುತ್ತಾಳೆ. ಯಾವಾಗಲೂ ಮೈ ಕೈಯನ್ನು ಉಜ್ಜಿಕೊಳ್ಳುತ್ತಿರುತ್ತಾಳೆ. ಮೂಲೆಯಲ್ಲವಚಿ ಕುಳಿತು ಸುಮ್ಮನೇ ಅಳುತ್ತಾಳೆ. ಇದ್ದಕ್ಕಿದ್ದಂತೆ ರೇಗುತ್ತಾಳೆ, ಒಮ್ಮೊಮ್ಮೆ ಅಷ್ಟೇ ಕನಿಕರಿಸಿ ಮಾತನಾಡಿಸುತ್ತಾಳೆ. ತಡರಾತ್ರಿಯಲ್ಲಿ ಸುಮ್ಮನೇ ಎದ್ದು ಕುಳಿತು ಮಂಕಾಗಿ ಏನನ್ನೋ ದಿಟ್ಟಿಸುತ್ತಿರುತ್ತಾಳೆ. ದೇವರ ಮನೆಗೆ ದೀಪ ಹಚ್ಚಿಯೂ ಎರಡು ತಿಂಗಳಾಯಿತು. ಮೊನ್ನೆ ಅವಳ ತಲೆ ನೇವರಿಸಿ ಮಾತನಾಡಿಸಲು ಹೋದಾಗ ಕೂಡಲೇ ನನ್ನ ಕೈ ತೊಳೆಸಿದಳು. ಸಾಬೂನು ಉಜ್ಜಿ ಅವಳ ಸಮಾಧಾನಕ್ಕೆ ಮೂರು ಬಾರಿ ತೊಳೆದೆ. ಊಟ ತಿಂಡಿ ಎಲ್ಲಾ ಬಿಟ್ಟು ಸೊರಗುತ್ತಿದ್ದಾಳೆ“

ಆತ ಬಿಕ್ಕುತ್ತಿದ್ದರೆ, ತಾನೂ ಸಾಕ್ಷಿಯೆಂಬಂತೆ ತೊಡೆ ಮೇಲಿದ್ದ ಮಗುವೂ ಅಳಲು ಪ್ರಾರಂಭಿಸಿತು....

Tuesday, 22 May 2012

ಖಾನಾವಳಿ ಮತ್ತು ಪಾರ್ಕ್ ನಡುವೆ...


ನನ್ನ ಮನೆಯಿಳಿಜಾರಿನ ತುದಿಯಲ್ಲಿ
ಭೂರಿ ಭೋಜನ ಖಾನಾವಳಿ
ಗಾಳಿ ತೂರಿದ ತರಗೆಲೆ
ಹಸಿರಾಗುವ ಘಮಲು, ಅಮಲು

ಮುಂದೆ ಏಕಮುಖ ಸಂಚಾರ ರಸ್ತೆ
ಪಕ್ಕದ ಪಾರ್ಕಿನ ಬೆಂಚಿನ ಮೇಲೆ
ಐಸ್ ಕ್ರೀಮ್ ನೆಕ್ಕಿದ ಮಕ್ಕಳ ಕನಸಿಗೆ
ಬೆನ್ನು ಕೊಟ್ಟವರಿದ್ದಾರಲ್ಲೇ ನನಸಿಗೆ

ಖಾನಾವಳಿಯಾವಳಿ ಐಸ್ ಕ್ರೀಮ್ ಘಮ
ಸೆಂಟೆರೆಚಿಕೊಂಡವರ ಪರಿಮಳ ಸುಮ
ಸೆಳೆದುಕೊಂಡು ಭ್ರಮಿಸಿತ್ತು ಮೂಗು
ಚಿಂದಿ ಆಯುತ್ತಿದ್ದಳು ಕಂಕುಳಲ್ಲಿ ಮಗು

ಹೋಟೆಲ್ ಕೊಳಚೆ ಮಂಡಳಿ ನದಿಯಲ್ಲಿ
ಅರ್ಧ ಬೆಂದ ಮತ್ತರ್ಧ ತಿಂದ ಅನ್ನ
ಹರಿದು ಅಣಕಿಸಿತ್ತು ಹರಿದ ಬಟ್ಟೆಯುಟ್ಟ
ಹಸಿವ ತೊಟ್ಟ ಬಿಸಿಲ ಕಸದಿ ನಿಂದವಳನ್ನ

ಹಿಂದಿನ ಬೀದಿ ಚಿಂದಿಗೊಡೆಯ ಮೊದಲ ಕಂದ
ಚೀಲ ತುಂಬಿಸಿ ಬೆವರಾಗಿ ಅಲ್ಲಿಗೇ ಬಂದ
ಅಪ್ಪಿಕೊಂಡಳು ತುಂಬಿಕೊಂಡಿತು ಅವಳಕ್ಷಿ
ಹರಿದ ಅನ್ನ, ಕರಗಿದ ಐಸ್ ಕ್ರೀಮ್ ಸಾಕ್ಷಿ

ಹಾಸು ಬೀದಿಯಲ್ಲಿ ಬಯಲಿದೆ ಬಯಲಿಲ್ಲ
ಅಲ್ಲಲ್ಲಿ ಪಾಪದ ಲೇಪದ ಶಾಪದ ಗುಡ್ಡೆ
ನಾಯಿಯಟ್ಟಿದರು ಎಂಜಲೆರೆಚಿದಮ್ಮಂದಿರು
ನಗುತ್ತಿತ್ತು ದೇವರ ಮನೆ ಕಪಾಟು ಬುರುಡೆ

ಬಣ್ಣ ಬಣ್ಣದೂಟ ಸವಿ ಸುಖ ಖಾನಾವಳಿ ಜನರಿಗೆ
ಬೆಣ್ಣೆಯಲ್ಲಿ ಕರಗಿದ ಮಕ್ಕಳು ಪಾರ್ಕಿನುಯ್ಯಾಲೆಯಲಿ
ಹಸಿದುದರ ಬಿಸಿಲ ಬೇಗೆ ತೂಕ ಚೀಲ ಬೆನ್ನಿಗೆ
ಹೊರಟಳವಳು ಏಕ ಮುಖ ಸಂಚಾರ ರಸ್ತೆಯಲಿ

ಒಂದಷ್ಟು ತರ್ಲೆ ಮಾತು....


ಅವಮಾನಿಸದಿರಿ...

ಹೆಂಡತಿಯನ್ನು ದೆವ್ವಕ್ಕೆ ಹೋಲಿಸಬೇಡಿ
ದೆವ್ವ ಶುದ್ಧ ಆತ್ಮವಂತೆ
ಅದಕ್ಕೆ ಅವಮಾನ ಸಲ್ಲ!
-
ನಾನು - ನೀನು

ನಾನೇ ನಾನೇ ಎನ್ನುತ್ತಿದ್ದನಾತ
ಮಾತು ಬದಲಿಸಿದ
ಮದುವೆಯಾದ ವರ್ಷದಲ್ಲಿ
ನಲ್ಲೆ ನಾನೆಂದರೆ ನೀನು
ನೀನೆಂದರೆ ನಾನು ಗಾತ್ರದಲ್ಲಿ!

ಹೀಗೂ ಹೊಗಳಬಹುದು...

ನಲ್ಲೆ ನಿನ್ನ ಹಲ್ಗಳು
ಅಮಾವಾಸ್ಯೆಯ ನಡುವಲ್ಲಿಣುಕುವ ಬೆಳದಿಂಗಳು!
-
ಕಾಗುಣಿತ ದೋಷ..

ನಾ ನಿನ್ನ ಪ್ರಿಯತಮ ಎಂದು ಬರೆಯಲು ಹೋಗಿ
ಆತ 'ನಾ ನಿನ್ನ ಪ್ರಿಯತಮ್ಮ' ಎಂದು ಬರೆದು
ಬ್ರಹ್ಮಚಾರಿಯಾಗಿಯೇ ಉಳಿದುಕೊಂಡ
-
ಪೆದ್ದ...

ಆತನೆಷ್ಟು ಪೆದ್ದನೆಂದರೆ
ಸ್ಕ್ರೂ ಡ್ರೈವರ್ ಹಿಡಿದುಕೊಂಡಿದ್ದವನ ಹತ್ತಿರ
ಲೈಸೆನ್ಸ್ ಕೇಳಿದ್ದ! (ಮೊಬೈಲ್ ಸಂದೇಶ)
-
ಗಾಡಿ ಬಿಟ್ಟರು..

ಕುಡಿದು ಗಾಡಿ ಓಡಿಸಬೇಡಿ ಎಂದವರು
ಬಾರ್ ಮುಂದೆ ಗಾಡಿ ನಿಲ್ಲಿಸಲು
ಜಾಗ ಮಾಡಿಕೊಟ್ಟರು!(ಎಲ್ಲೋ ಓದಿದ್ದು)

ಧರ್ಮ ಮತ್ತು ಇತರೆ ಕಥೆಗಳು..


ಧರ್ಮ

ಗುರುಗಳು: 'ಧರ್ಮಕ್ಕೆ ವಿರುದ್ಧ ಪದ ಹೇಳಿ'
ವಿದ್ಯಾರ್ಥಿ: 'ನಿಮ್ಮ ಪ್ರಶ್ನೆಯೇ ಧರ್ಮಕ್ಕೆ ವಿರುದ್ಧವಾದದ್ದು'

--

ಅವಸರ

ಗುರುಗಳು: 'ಹೇ ಕತ್ತೆ, ಉತ್ತರ ನಿಧಾನವಾಗಿ ಹೇಳು, ಜೀವನದಲ್ಲಿ ಅವಸರವಿರಬಾರದು'

ವಿದ್ಯಾರ್ಥಿ: 'ವರ್ಷವೆಲ್ಲಾ ಓದಿದ ವಿಚಾರವನ್ನು ಕೇವಲ ಮೂರು ಘಂಟೆಯಲ್ಲಿ, ಬರೆಯಿರಿ ಎಂದು ಹೇಳುವುದೂ ಅವಸರವಲ್ಲವೇ?? ಒತ್ತಡ ಹೇರಿ ನಮ್ಮೆಲ್ಲರ ಜ್ಞಾನ ಸಾಮರ್ಥ್ಯವನ್ನು ಪರೀಕ್ಷಿಸುವ ಅವಸರವೇಕೆ??'

--

ಮೂಢನಂಬಿಕೆ

ಊಟವಾದ ತಕ್ಷಣ ಒಂದು ಬಾಳೆಹಣ್ಣು ತಿನ್ನಬೇಕು ಎಂದು ಅಪ್ಪ ಹೇಳಿದ್ದನ್ನು ಮಗ ಪಾಲಿಸುತ್ತಿದ್ದ.
ಆತನೂ ತನ್ನ ಮಕ್ಕಳಿಗೆ ಅದನ್ನೇ ಹೇಳಿಕೊಟ್ಟಿದ್ದ..
ದಿನ ಕಳೆದಂತೆ ಇವರೆಲ್ಲರೂ ಬಾಳೆಹಣ್ಣು ಸಿಗದಿದ್ದರೆ ಊಟವನ್ನೇ ಮಾಡುತ್ತಿರಲಿಲ್ಲ....!

--

ಸಾವು

ರಾಯರ ಪಕ್ಕದ ಮನೆಯಲ್ಲಿ ಒಂದು ಸಾವಾಗಿತ್ತು. ರಾಯರು ಮನೆ ಮಂದಿಗೆಲ್ಲ ಸಮಾಧಾನ ಮಾಡುತ್ತಿದ್ದರು.
'ಸಾವೆಂಬುದೊಂದು ಅಳಿಸಲಾಗದ ಸತ್ಯ, ಒಪ್ಪಿಕೊಳ್ಳುವ ಗಟ್ಟಿತನ ಬೇಕು, ಸುಮ್ಮನೆ ಅತ್ತರೆ ಏನೂ ಪ್ರಯೋಜವಿಲ್ಲ' ಎನ್ನುವಷ್ಟರಲ್ಲಿ, ಮನೆ ಕೆಲಸದವನು ಓಡೋಡಿ ಬಂದು
'ರಾಯರೇ ನಿಮ್ಮ ಮಗ ಅಪಘಾತದಲ್ಲಿ ತೀರಿಕೊಂಡನಂತೆ' ಎಂದ
ಎಷ್ಟೇ ಕಷ್ಟಪಟ್ಟರೂ ತಡೆದುಕೊಳ್ಳಲಾಗದ ರಾಯರ ಕಣ್ಣಂಚಲ್ಲಿ ಕಣ್ಣೀರು ಜಿನುಗಿತು'

--

ಪ್ರೀತಿ

ಆಕೆ ಆತನನ್ನು ಪ್ರೀತಿಸುತ್ತಿದ್ದಳು. ಆತನಿಗೂ ಅವಳೆಂದರೆ ತುಂಬಾ ಇಷ್ಟ, ಆದರೆ ಸ್ಫುರದ್ರೂಪಿಯಲ್ಲ, ಕಪ್ಪಗಿದ್ದ.
ಆತ ನೋಡಲು ಚೆನ್ನಾಗಿಲ್ಲವೆಂದು ಮತ್ತೊಬ್ಬ ಸುಂದರನಿಗೆ ಮದುವೆ ಮಾಡಿಬಿಟ್ಟರು
'ಹುಟ್ಟಿದ ಮಕ್ಕಳೆಲ್ಲಾ ಕಪ್ಪಗೇ ಇದ್ದವು'

--

ಜಾತಿ...

ಜಾತಿಯ ಕಾರಣಕ್ಕೆ ಅಲ್ಲೊಂದು ದೊಡ್ಡ ಗಲಭೆ. ಚಾಕು ಚೂರಿಯಿಂದ ಒಬ್ಬರನ್ನೊಬ್ಬರು ಇರಿದುಕೊಂಡು ಸಾವಿರಾರು ಜನ ಸತ್ತರು. ಹೆಣದ ರಾಶಿಯಿಂದ ಬೀದಿ ತುಂಬಿಹೋಗಿತ್ತು. ಕೆಲವರು ವಿಭೂತಿ ಧರಿಸಿದ್ದರೆ, ಹಲವರು ನಾಮ ಬಳಿದುಕೊಂಡಿದ್ದರು, ಒಂದಷ್ಟು ಜನ ಜನಿವಾರವನ್ನೂ ಧರಿಸಿದ್ದರು. ಊರಿನ ಕಕ್ಕಸು ಮನೆ ತೊಳೆಯುವ ಮಾಚನೂ ಅಲ್ಲೆ ಹೆಣವಾಗಿ ಬಿದ್ದಿದ್ದ. ಜಾತಿ ಜಾತಿ ಎಂದುಕೊಂಡು ಮತ್ತೆ ಮತ್ತೆ ಮೊರೆಯುತ್ತಿದ್ದರು.

ಆಶ್ಚರ್ಯವೇನೆಂದರೆ 'ಅವರೆಲ್ಲರ ರಕ್ತದ ಬಣ್ಣ ಮಾತ್ರ ಒಂದೇ ಆಗಿತ್ತು. ಎಲ್ಲಾ ಮರೆತು ಸಾವಿನ ಅಂಗಳದಲ್ಲಿ ಒಟ್ಟಿಗೆ ಕೂಡಿಕೊಳ್ಳುತ್ತಿದ್ದವು'

ಹೆಣ್ಣು ಮಗು ಮತ್ತು ಇತರೆ ಕಥೆಗಳು


ಸತ್ತುಹೋದ

ಧರ್ಮ ಧರ್ಮಗಳ ನಡುವೆ ಕಿಚ್ಚು ಹಬ್ಬಿಸುವುದೇ ಆತನ ಕೆಲಸವಾಗಿತ್ತು. ಸೂಕ್ಷ್ಮ ವಿಚಾರಗಳನ್ನೆಲ್ಲಾ ಬಗ್ಗಡ ಮಾಡಿ ಸಮುದಾಯಗಳ ಶಾಂತಿಯನ್ನು ಕದಡುವುದರಲ್ಲಿ ನಿಸ್ಸೀಮನಾಗಿದ್ದ...

ವಿಷಯವೇನೆಂದರೆ 'ಆತನೂ ಬದುಕಲಿಲ್ಲ.. ಒಂದು ದಿನ ಸತ್ತುಹೋದ'
... ... --

ಜಪ್ಪರದ ಮೇಲೆ

ಎಲ್ಲಾ ಧರ್ಮಗಳು ಒಂದು ಚಪ್ಪರದ ಕೆಳಗೆ ಕುಳಿತು ಟೀ ಕುಡಿಯುತ್ತಾ ಕುಳಿತಿದ್ದವು. ಇದ್ದಕ್ಕಿದ್ದಂತೆ ನಾ ಮೇಲು ತಾ ಮೇಲು ಎಂದು ಜಗಳ ಪ್ರಾರಂಭಿಸಿಬಿಟ್ಟವು. ಹಠಾತ್ತನೇ ಯಾರೋ ಇವುಗಳ ತಲೆಗೆ ಭಾರಿಸಿದರು.

ತಲೆ ಎತ್ತಿ ನೋಡಿದರೆ ಅದು 'ಮಾನವ ಧರ್ಮ'
ಚಪ್ಪರದ ಮೇಲಿತ್ತು!

--

ಹೆಣ್ಣು ಮಗು

ಆಕೆ ಮತ್ತೆ ಹೆಣ್ಣು ಮಗುವನ್ನು ಹೆತ್ತಳು.
ಗಂಡ ಒಂದೇ ಸಮನೆ ಸಿಡುಕಿ ಗೊಣಗಿಕೊಂಡ 'ಹೆಣ್ಣು ಮಗು ಹೆತ್ತು ನಮ್ಮ ಸಂಸಾರ ಹಾಳು ಮಾಡುತ್ತಿದ್ದಾಳೆ, ಒಂದು ಗಂಡು ಮಗು ಹೆತ್ತು ಸಂಸಾರವನ್ನು ಉದ್ಧಾರ ಮಾಡುವುದು ಎಂದೋ?'

ವಿಪರ್ಯಾಸವೆಂದರೆ ಸಂಸಾರ ಉದ್ಧಾರ ಮಾಡುವ ಗಂಡು ಮಗುವನ್ನು ಹೆರಲು ಆತ ನಂಬಿಕೊಂಡಿದ್ದು ಒಂದು ಹೆಣ್ಣನ್ನೇ ಎಂಬುದನ್ನು ಮರೆತುಬಿಟ್ಟ

--

ಮದುವೆ

ಅಲ್ಲೊಂದು ಮದುವೆ. ಎರಡು ಎಕರೆ ವಿಸ್ತಾರವಾದ ಕಲ್ಯಾಣ ಮಂಟಪ ವಿದ್ಯುದ್ದೀಪಾಲಂಕಾರದಲ್ಲಿ ಮೊಳಗಿತ್ತು. ಎಲ್ಲೆಲ್ಲೂ ಸಂಗೀತಬ್ಬರ. ಇಡೀ ಮದುವೆ ಮಂಟಪವೇ ಆಗರ್ಭ ಶ್ರೀಮಂತರಿಂದ ತುಳುಕಿತ್ತು. ಭೂರಿಭೋಜನ. ಮದುವೆಗೆ ಬಂದವರಿಗೆಲ್ಲಾ ಬೆಲೆಬಾಳುವ ಉಡುಗೊರೆಗಳನ್ನು ನೀಡಿ ರಂಜಿಸಿದ್ದರು.

ಮದುವೆ ಮನೆಯಲ್ಲಿ ಎಲ್ಲರೂ ಸಂಭ್ರಮದಿಂದಿದ್ದರೆ ಮದುವಣಗಿತ್ತಿ ಮಾತ್ರ ತುಟಿಯರಳಿಸಿ ನಗಲಿಲ್ಲ. ಅವಳ ಮೈಮೇಲಿದ್ದ ಒಡವೆ ವಸ್ತ್ರ ಯಾಕೋ ಮಿರಿ ಮಿರಿ ಮಿಂಚಲೇ ಇಲ್ಲ
--

ಬೆಲೆ ಏರಿಕೆ

ಪತ್ರಕರ್ತನ ಪ್ರಶ್ನೆ: 'ನೀವು ಅಗತ್ಯ ವಸ್ತುಗಳ ಬೆಲೆಯನ್ನು ಒಂದೇ ಸಮನೆ ಏರಿಸಿದರೂ ಮತ್ತೆ ಅಧಿಕಾರಕ್ಕೆ ಬಂದಿರುವಿರಿ, ಇದರ ಗುಟ್ಟೇನು'
ರಾಜಕಾರಣಿ(ಮನಸ್ಸಿನಲ್ಲಿ): 'ಜನಗಳೂ ತಮ್ಮ ಓಟಿನ ಬೆಲೆ ಏರಿಸಿದರು, ಒಪ್ಪಿಕೊಂಡೆವು'

--

ನಗು...

ಸಪ್ಪೆ ಮೊರೆಯಲ್ಲಿ ಕುಳಿತಿದ್ದ. ಹಲ್ಕಿರಿದು ನಗಬಾರದೇ ಎಂದು ಹೆಂಡತಿ ಛೇಡಿಸಿದಳು. ಹಲ್ಕಿರಿದು ನಕ್ಕ.
ಆ ಹಲ್ಲನ್ನು ಕಂಡ ಮಕ್ಕಳು ಯಾಕೋ ಅಳ ತೊಡಗಿದವು. :)

ಎದೆ ಹಾಲು ಮುಂತಾದ ಕಥೆಗಳು


ಎದೆ ಹಾಲು

'ಅವಳನ್ನೇ ಮದುವೆ ಆಗುವುದಾದರೆ ಅದು ನನ್ನ ಹೆಣದ ಮೇಲಾಗಲಿ, ನಿನ್ನೆ ಮೊನ್ನೆ ಬಂದವಳೇ ನಿನಗೆ ಹೆಚ್ಚಾಗಿ ಹೋದಳು, ಎದೆಹಾಲು ಕುಡಿಸಿದ ತಾಯಿ ನಿನಗೆ ನೆನಪಾಗಲಿಲ್ಲವೇ??' ಎಂದು ಅಮ್ಮ ಒಂದೇ ಸಮನೆ ಅತ್ತಳು.
ಅತ್ತ ಪ್ರೇಯಸಿಯನ್ನೂ ಮರೆಯಲಾಗದೆ, ಇತ್ತ ಹೆತ್ತವ್ವನನ್ನು ಕಳೆದುಕೊಳ್ಳಲಾಗದೆ ಆತ ವಿಲ ವಿಲ ಒದ್ದಾಡಿದ. ಜಿಗುಪ್ಸೆಗೊಂಡು ಕೊನೆಗೂ ಚೂರಿಯಿಂದ ತನ್ನನ್ನೇ ತಾನು ಇರಿದುಕೊಂಡ.

ಮಗನೇ ಎಂದು ಅಮ್ಮ ಚೀರುತ್ತಾ ಓಡೋಡಿ ಬಂದಳು.

'ಅವಳೇ ಕುಡಿಸಿದ ಹಾಲು ರಕ್ತವಾಗಿ ಹರಿಯುತ್ತಿತ್ತು'
--

ಕಳಂಕ

'ಹೊಲೆಯರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ, ಮಾರಮ್ಮನ ಹೆಸರಿಗೆ ಸುಮ್ಮನೆ ಕಳಂಕ ತರಬೇಡಿ' ಎಂದು ಊರಗೌಡ ಪಂಚಾಯಿತಿ ಕಟ್ಟೆಯಲ್ಲಿ ಕಟ್ಟಪ್ಪಣೆ ಮಾಡಿದ. ಎಲ್ಲರೂ ಒಪ್ಪಿಕೊಂಡರು.
ಆತನಿಗೆ ಸರಿಯಾಗಿ ಕಣ್ಣು ಕಾಣುವುದಿಲ್ಲ. ಸಂಜೆಯಾದಂತೆ ಹೆಂಡದಂಗಡಿಗೆಯನ್ನು ಸರಿಯಾಗಿ ಕಂಡುಹಿಡಿದುಕೊಂಡು ಮುಟ್ಟಿಬಿಡುತ್ತಿದ್ದ. ಕಾರಣ ಆ ಹೆಂಡದಂಗಡಿಗೆ 'ಊರ ಮಾರಮ್ಮ ಬಾರ್ ಅಂಡ್ ರೆಸ್ಟೋರೆಂಟ್' ಎಂಬ ಹೆಸರಿತ್ತು.
--

ಎರಡು ಮದುವೆ

ಅಲ್ಲೊಂದು ಮದುವೆ. ಎರಡು ಎಕರೆ ವಿಸ್ತಾರವಾದ ಮಂಟಪ ವಿದ್ಯುದ್ದೀಪಾಲಂಕಾರದಲ್ಲಿ ಮೊಳಗಿತ್ತು. ಎಲ್ಲೆಲ್ಲೂ ಸಂಗೀತಬ್ಬರ. ಇಡೀ ಮದುವೆ ಮಂಟಪವೇ ಆಗರ್ಭ ಶ್ರೀಮಂತರಿಂದ ತುಳುಕಿತ್ತು. ಭೂರಿಭೋಜನ. ಮದುವೆಗೆ ಬಂದವರಿಗೆಲ್ಲಾ ಬೆಲೆಬಾಳುವ ಉಡುಗೊರೆಗಳನ್ನು ನೀಡಿ ರಂಜಿಸಿದ್ದರು.

ಅದರ ನೆರೆಯಲ್ಲಿಯೇ ಒಂದು ದೇವಸ್ಥಾನ. ಅಲ್ಲೂ ಒಂದು ಬಡ ಮದುವೆ ನಡೆಯುತ್ತಿತ್ತು. ವೈಭವ, ಆಡಂಬರವಿಲ್ಲ, ಭೂರಿ ಭೋಜನವಿಲ್ಲ. ಅಲಂಕಾರ, ಅಂತಸ್ತಿಲ್ಲ.

ಮಹಾನ್ ಮಂಟಪದಲ್ಲಿ ನಡೆದ ಮದುವೆಗೆ ಹುಡುಗಿಯೇ ಇರಲಿಲ್ಲ, ಅವಳ ದೇಹ ಮಾತ್ರ ಇತ್ತು. ಮನಸ್ಸಿಲ್ಲದ ಮನಸ್ಸಿನಲ್ಲಿ, ಮೈಮೇಲೆ ಕೆ.ಜಿಗಟ್ಟಲೆ ಚಿನ್ನಹೊತ್ತು ಕುಳಿತಿದ್ದಳು. ದೇವಸ್ಥಾನದ ಜೋಡಿಗಳು ಒಬ್ಬರನ್ನೊಬ್ಬರು ಅಪ್ಪಿಕೊಂಡು ದೃವತಾರೆ ನೋಡುತ್ತಾ ಕಲ್ಯಾಣ ಮಂಟಪದ ವೈಭವವನ್ನು ಅಣಕಿಸುತ್ತಿದ್ದರು.
--

ಜಾತಿ...

ಯಾವುದೋ ಕ್ಷುಲ್ಲಕ ಕಾರಣಕ್ಕೆ ಅಲ್ಲೊಂದು ಕೋಮುಗಲಭೆ. ಚಾಕು ಚೂರಿಯಿಂದ ಒಬ್ಬರನ್ನೊಬ್ಬರು ಇರಿದುಕೊಂಡು ಸಾವಿರಾರು ಜನ ಸತ್ತರು. ಹೆಣದ ರಾಶಿಯಿಂದ ಬೀದಿ ತುಂಬಿಹೋಗಿತ್ತು. ಕೆಲವರು ವಿಭೂತಿ ಧರಿಸಿದ್ದರೆ, ಹಲವರು ನಾಮ ಬಳಿದುಕೊಂಡಿದ್ದರು, ಒಂದಷ್ಟು ಜನ ಜನಿವಾರವನ್ನೂ ಧರಿಸಿದ್ದರು. ಊರಿನ ಕಕ್ಕಸು ಮನೆ ತೊಳೆಯುವ ಮಾಚನೂ ಅಲ್ಲೆ ಹೆಣವಾಗಿ ಬಿದ್ದಿದ್ದ. ಜಾತಿ ಜಾತಿ ಎಂದುಕೊಂಡು ಮತ್ತೆ ಮತ್ತೆ ಮೊರೆಯುತ್ತಿದ್ದರು.

ಆಶ್ಚರ್ಯವೇನೆಂದರೆ 'ಅವರೆಲ್ಲರ ರಕ್ತದ ಬಣ್ಣ ಮಾತ್ರ ಒಂದೇ ಆಗಿತ್ತು'
--

ಮಕ್ಕಳು

ಆ ಊರಿನಲ್ಲಿ ಜಾತಿ ಜಾತಿ ಎಂದು ಮತ್ತೆ ಮತ್ತೆ ಗಲಭೆ ನಡೆಯುತ್ತಲೇ ಇತ್ತು. ಕೊನೆಗೆ ಎಲ್ಲರೂ ಸೇರಿ ಊರನ್ನು ಜಾತಿವಾರು ವಿಂಗಡಿಸಲು ತೀರ್ಮಾನಿಸಿದರು. ಪಂಚಾಯಿತಿ ಕಟ್ಟೆಯ ಪಕ್ಕದಲ್ಲಿ ಕುಳಿತು ಎಲ್ಲರೂ ಊರನ್ನು ಭಾಗಿಸುವ ನೆಪದಲ್ಲಿ ಗಲಾಟೆ ಎಬ್ಬಿಸುತ್ತಿದ್ದರು.

'ಇವರೆಲ್ಲರ ಮಕ್ಕಳು ಮಾತ್ರ ಪಕ್ಕದಲ್ಲೇ ಇದ್ದ ಮರಳಿನ ಗುಡ್ಡೆ ಮೇಲೆ ತಮ್ಮಿಚ್ಚೆಯಂತೆ ಆಟವಾಡುತ್ತಿದ್ದವು!'

ಪರಿಸ್ಥಿತಿ ಮತ್ತು ಮನಸ್ಥಿತಿ


ಅನೇಕಾನೇಕ ವಿಚಾರಗಳನ್ನು ಪರಿಸ್ಥಿತಿ ಮತ್ತು ಮನಸ್ಥಿತಿ ನಿರ್ಧರಿಸುತ್ತದೆ ಮತ್ತು ನಮಗರಿವಿಲ್ಲದಂತೆಯೇ ಆ ಪರಿಸ್ಥಿತಿಗೆ ನಮ್ಮ ಮನಸ್ಥಿತಿ ಒಗ್ಗಿಕೊಂಡುಬಿಡುತ್ತದೆ. ಉದಾಹರಣೆಗೆ: ಒಂದು ಕೇಜಿ ಅಕ್ಕಿ ತೆಗೆದುಕೊಳ್ಳುವಾಗ ತೂಕ ಹಾಕುವವನು 5 ಗ್ರಾಂ ಕಡಿಮೆ ಅಥವಾ ಹೆಚ್ಚು ತೂಗಿದರೆ ಅದು ದೊಡ್ಡ ವಿಚಾರವೇ ಅಲ್ಲ ಆದರೆ ಅದೇ ಅಂಗಡಿಯಲ್ಲಿ ಚಿನ್ನ ಮಾರುತ್ತಿದ್ದರೆ, ಕೊಳ್ಳುವಾಗ ಕೇವಲ ಒಂದು ಗ್ರಾಂ ಕಡಿಮೆಯಾದರೂ ಅದು ನಮಗೆ ಸಹಿಸಿಕೊಳ್ಳಲಾಗದ ವಿಚಾರ. ಅಂಗಡಿಯವನು ಆಗ ವಿಶ್ವಾಸಘಾತುಕನಾಗುತ್ತಾನೆ. ಜಗಳಕ್ಕೆ ನಿಂತು ಬಿಡುತ್ತೇವೆ. ಈ ಮಹಾನ್ ವ್ಯತ್ಯಾಸಕ್ಕೆ ಚಿನ್ನದ ನಗದುಬೆಲೆಗಿಂತ ಚಿನ್ನಕ್ಕೆ ನಾವು ಕೊಡುವ ಮನಸ್ಥಿತಿಯ ಬೆಲೆಯೇ ಕಾರಣವಾಗುತ್ತದೆ. ಚಿನ್ನಕ್ಕಿಂತ ಅನ್ನ ಮುಖ್ಯ ಎಂದೆನಿಸಿದರೂ ಇಂದಿನ ಪರಿಸ್ಥಿತಿಗೆ ಒಡವೆ ವಸ್ತುಗಳು ಅನಿವಾರ್ಯ ಉಪಕರಣಗಳಾಗುವಂತಹ ಸ್ಥಿತಿಯನ್ನು ಸಾಮೂಹಿಕವಾಗಿ ಮನುಷ್ಯ ಮಾಡಿದ್ದಾನೆ. ಆ ರೀತಿ ನೋಡಿದರೆ ಚಿನ್ನಕ್ಕಿಂತಲೂ ಹೊಳಪನ್ನು ಸೂಸುವ ನೀರನ್ನು ಸಣ್ಣ ಸಣ್ಣ ಕೊಟ್ಟೆಗಳಲ್ಲಿ ತುಂಬಿಕೊಂಡು ಕಿವಿಗೆ ನೇತುಕೊಂಡರೂ ಪ್ರತಿಫಲನದಲ್ಲಿ ಚಿನ್ನಕ್ಕಿಂತಲೂ ಹೆಚ್ಚು ಹೊಳೆಯುತ್ತದೆ. ಆದರೆ ಆ ವಿಚಾರದಲ್ಲಿ ನಮ್ಮ ಮನಸ್ಥಿತಿ ಬದಲಾಗುವುದಿಲ್ಲ. ಮುಂದೊಮ್ಮೆ ಹೊಟ್ಟೆಗೆ, ಬಟ್ಟೆಗೆ, ತಾವಿಗೆ ತೊಂದರೆಯಾದರೆ ಅದೇ ಚಿನ್ನವನ್ನು ಅಡವಿಡುತ್ತೇವೆ ಅಥವಾ ಮಾರಿಬಿಡುತ್ತೇವೆ. ಕರಗಿಸಿ ತಿನ್ನುವುದಿಲ್ಲ. ಆಗಲೂ ಪರಿಸ್ಥಿತಿಯೇ ಕಾರಣ.

ಒಂದೂರಿನಲ್ಲಿ ದನ'ಗಳನ್ನು ಮಾರುತ್ತಿದ್ದರಂತೆ. ಅಲ್ಲಿ ಬಿಳಿಬಣ್ಣದ ಹಸುಗಳಿಗೆ ಹೆಚ್ಚು ಬೆಲೆ ಮತ್ತು ಕಪ್ಪು ಬಣ್ಣದ ಹಸುಗಳಿಗೆ ಬೆಲೆ ಸ್ವಲ್ಪ ಕಡಿಮೆ. ಕೊಂಬು ನೆಟ್ಟಗಿದ್ದರೆ ಬೆಲೆ ಹೆಚ್ಚು ಸೊಟ್ಟಗಿದ್ದರೆ ಕಡಿಮೆ. ಗುಂಪು ಗುಂಪಾಗಿ ನಿಂತಿದ್ದ ಮಾರಲ್ಪಡುವ ದನಗಳು ನಾನು ಕಪ್ಪಗಿದ್ದೇನೆ, ಕೊಂಬು ಸೊಟ್ಟಗಿದೆ ಎಂದು ಅಳುತ್ತಿರಲಿಲ್ಲವಂತೆ. ಅವುಗಳ ಮನಸ್ಥಿತಿಗೆ ಲಕ್ಷ್ಮಣರೇಖೆಗಳಿಲ್ಲ. ಅಲ್ಲೂ ಕೂಡ ಮನುಷ್ಯನ ಮನಸ್ಥಿತಿಯೇ ಕಾರಣ. 9999 ರ ಮುಖಬೆಲೆಯ ಒಂದು ವಸ್ತುವಿಗೆ 10000 ರೂ ನೀಡಿದಾಗ ಬಾಕಿ ಒಂದು ರುಪಾಯಿಯನ್ನು ಕೇಳಲು ನಾಚಿಕೆಯಾಗುತ್ತದೆ ಆದರೆ 50 ಪೈಸೆ ಬೆಲೆಯ ಚಾಕೋಲೇಟ್ ಗೆ 1 ರೂ ಕೊಟ್ಟುಬಿಟ್ಟರೆ ಉಳಿದ 50 ಪೈಸೆಯನ್ನು ನಾವು ಬಿಡುವುದಿಲ್ಲ. ಇಲ್ಲಿನ ಹಣದ ಬೆಲೆ ಹೆಚ್ಚಾಗುವುದಿಲ್ಲ ಬದಲಾಗಿ ನಮ್ಮ ಮನಸ್ಥಿತಿಯಿಂದ ಪರಿಸ್ಥಿತಿ ವ್ಯತಿರಿಕ್ತವಾಗುತ್ತವೆ. ಹತ್ತು ಸಾವಿರದ ಮುಂದೆ 1 ರೂ ದೊಡ್ಡದಲ್ಲ ಆದರೆ 50 ಪೈಸೆ ಮುಂದೆ ಉಳಿದ 50 ಪೈಸೆ ದೊಡ್ಡದು ಎಂದು ನಾವು ಭಾವಿಸಲ್ಪಡುತ್ತೇವೆ. ಪರಿಸ್ಥಿತಿ ಮತ್ತು ಮನಸ್ತಿತಿ ಒಂದಕ್ಕೊಂದು ಬಂಧಿಸಿಕೊಳ್ಳುವುದು ಸಹಜ.

ಹಾಗಾದರೆ ಪ್ರತಿಯೊಂದಕ್ಕೂ ಪರಿಸ್ಥಿತಿಯೇ ಕಾರಣವೇ?? ಎಲ್ಲೋ ಒಂದು ಕಡೆ ಹೌದು ಎನ್ನಬಹುದು. ನಮ್ಮ ಮನಸ್ಥಿತಿಯನ್ನು ತೂಗುವುದು ಪರಿಸ್ಥಿತಿಯೆ. ಮುಂದುವರೆಯುತ್ತಾ ಆ ಮನಸ್ಥಿತಿ ಮತ್ತೊಂದಷ್ಟು ಪರಿಸ್ಥಿತಿಯನ್ನು ತಂದೊಡ್ಡುತ್ತದೆ. ಕಾಲಿಲ್ಲದ ಮನುಷ್ಯ ತನ್ನ ದೌರ್ಬಲ್ಯವನ್ನು ಒಪ್ಪಿಕೊಂಡು ಸಂತಸದಿಂದಲೇ ಇರುತ್ತಾನೆ. ದುಡಿದುಣ್ಣಲು ಕಷ್ಟವಾಗಬಹುದೆಂಬ ಕೊರಗಿರಬಹುದು, ಆದರೆ ಕಾಲನ್ನು ನೋಡಿಕೊಂಡಾಗ ಅದು ಕತ್ತರಿಸಿ ಹೋಗಿರುವುದನ್ನು ಒಪ್ಪಿಕೊಂಡು ಅಲ್ಲಿ ಕಾಲಿಲ್ಲ ಎಂಬ ವಿಚಾರದಲ್ಲಿ ಸ್ಥಿತಪ್ರಜ್ಞನಾಗಿರುತ್ತಾನೆ. ಆದರೆ ಆತನನ್ನು ನೋಡಿದ ತಕ್ಷಣ ಎಷ್ಟೋ ಜನ ಕಾಲಿಲ್ಲ ಎಂದು ಮರುಗುತ್ತಾರೆ. ಈ ಪರಿಸ್ಥಿತಿಯಲ್ಲಿ ನಮ್ಮ ಮನಸ್ಥಿತಿ ಮತ್ತು ಆತನ ಮನಸ್ಥಿತಿ ವ್ಯತಿರಿಕ್ತವಾಗಿರುತ್ತದೆ. ಸತ್ಯವನ್ನೊಪ್ಪಿಕೊಂಡಾತ ನಮಗಿಂತ ಗಟ್ಟಿಯಿರುತ್ತಾನೆ. ಕನ್ನಡಿ ಮುಂದೆ ನಿಂತು ನಮ್ಮ ಮುಖವನ್ನು ಸರಿಯಾಗಿ ನೋಡಿಕೊಂಡಿದ್ದಾರೆ ಮತ್ತೊಬ್ಬರ ವ್ಯಂಗ್ಯಕ್ಕೆ ನಮ್ಮ ಮನಸ್ಸು ಅಷ್ಟು ಸುಲಭವಾಗಿ ಕುಗ್ಗಿಹೋಗುವುದಿಲ್ಲ. ಯಾರಾದರೂ ನಮ್ಮನ್ನು 'ಹಲ್ಲುಬ್ಬ ಅಥವಾ ಹಲ್ಲುಬ್ಬಿ' ಎಂದಾಗ ನಾವು ನಿಜಕ್ಕೂ ಹಲ್ಲುಬ್ಬ ಅಥವಾ ಹಲ್ಲುಬ್ಬಿಯಾಗಿದ್ದರೆ ಮನಸ್ಸು ದುಃಖಿತವಾಗುವುದಿಲ್ಲ. ಆ ರೀತಿ ಹೇಳಿದವರ ಮೇಲೆ ಕೋಪ ಬರಬಹುದಷ್ಟೆ. ಆದರೆ ನಮ್ಮ ಹಲ್ಲುಗಳು ಹೇಗಿವೆ ಎಂದು ನಮಗೆ ತಿಳಿದಿರದಿದ್ದರೆ, ಆ ಕ್ಷಣದಲ್ಲಿ ಮನಸ್ಸು ನೋವಿನ ಮೂಟೆಯಾಗುತ್ತದೆ ಮತ್ತು ಅವರು ಹೇಳಿದ್ದು ಹೌದೋ? ಇಲ್ಲವೋ? ಎಂಬ ಗೊಂದಲದಲ್ಲಿ ದಿನದೂಡುತ್ತೇವೆ. ನೆನಪಾದಾಗಲೆಲ್ಲ ನೋವು ಮತ್ತು ಭಯ ಕಾಡಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಸತ್ಯವನ್ನೊಪ್ಪಿಕೊಳ್ಳುವುದರಲ್ಲಿ ಪರಿಸ್ಥಿತಿ ಮತ್ತು ಮನಸ್ಥಿತಿಯನ್ನ ನಿಯಂತ್ರಿಸಬಹುದು. ಸಚ್ಚಿದಾನಂದ ಎಂದರೆ ಸತ್ಯವನ್ನು ಒಪ್ಪಿಕೊಂಡ ಮನಸ್ಸು ಆನಂದವಾಗಿರುತ್ತದೆ ಎಂದರ್ಥ.

ಆದುದರಿಂದ ಪರಿಸ್ಥಿತಿ ಮತ್ತು ಮನಸ್ತಿತಿಯನ್ನು ನಿಯಂತ್ರಿಸುವ ಸಾಧನಗಳನ್ನು ಮೊದಲು ಗುರುತಿಸಿಕೊಳ್ಳಬೇಕು. ನೀವು ತಡವಾಗಿ ಕೆಲಸಕ್ಕೆ ಹಾಜಾರಾದಾಗ ಮೇಲಿನವರು ಬೈಯುವುದು ಸಹಜ. ಆಗ ಮುನಿಸಿಕೊಳ್ಳಬಾರದು ಮತ್ತು ಗೊಂದಲಕ್ಕೆ ಬೀಳಬಾರದು. ಇಂದಿನ ಬೈಗುಳಕ್ಕೆ ತಡವಾಗಿ ಬಂದದ್ದೇ ಕಾರಣ ಎಂಬ ಸತ್ಯವನ್ನು ಮೊದಲು ಅರಗಿಸಿಕೊಳ್ಳಬೇಕು. ಮರುಕಳಿಸದಂತೆ ಕಠಿಣ ಎಚ್ಚರಿಕೆ ವಹಿಸಬೇಕು. ಅಷ್ಟು ಪ್ರೀತಿಸಿದ ಹುಡುಗಿ ಮೋಸಮಾಡಿ ಹೋದಳಲ್ಲ ಎಂದು ಕೊರಗುವ ಬದಲು ಹೊರಟುಹೋದಳು, ಅಷ್ಟಕ್ಕೆ ಮಾತ್ರ ಸಾವು ಬಂದಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಬೇಕು. ಆಕೆ ಮತ್ತೊಬ್ಬರನ್ನು ಮದುವೆ ಆಗಿರುವುದು ತಿಳಿದಾಗ ಮನಸ್ಸಿಗೆ ಇನ್ನಷ್ಟು ಸತ್ಯ ಅರಿವಾಯಿತು, ಅದು ಆಗಿಹೋಯಿತು ಆಗಲಿ ಎಂದು ಸತ್ಯವನ್ನು ಅರಗಿಸಿಕೊಂಡು ಮರೆತುಬಿಡಬೇಕು. ಯಾಕೆಂದರೆ ನಡೆಯಬೇಕಾದ ಎಷ್ಟೋ ವಿಚಾರಗಳು ನಮ್ಮನ್ನು ಕೇಳಿ ನಡೆಯಲ್ಪಡುವುದಿಲ್ಲ.

ನನ್ನೂರು ಕೊಳ್ಳೇಗಾಲ...!!! ಹೆದರಿಕೊಳ್ಳಬೇಡಿ...! ಮಾಟ ಮಂತ್ರಕ್ಕೆ ಪ್ರಸಿದ್ಧಿ ಅಲ್ಲ...!!!‘ಕೊಳ್ಳೇಗಾಲ’ ಎಂಬ ಹೆಸರು ಕಿವಿಗೆ ಬಿದ್ದರೆ ಸಾಕು, ಇಡೀ ಕರ್ನಾಟಕವೇ ಬೆಚ್ಚಿಬೀಳುತ್ತದೆ. ‘ನಾವು ಕೊಳ್ಳೇಗಾಲದವರು’ ಎಂದಾಕ್ಷಣ ಸುತ್ತಲಿನವರ ಕಣ್ಣು ಕಿವಿ ಅರಳುತ್ತದೆ. ಕೊಳ್ಳೇಗಾಲದ ಕೇವಲ ಒಂದು ರುಪಾಯಿಯ ಒಂದು ನಿಂಬೆಹಣ್ಣಿಗೆ ಬೇರೆ ಕಡೆಗಳಲ್ಲಿ ಸಾವಿರಾರು ರೂಗಳು. ಕೊಳ್ಳೇಗಾಲಕ್ಕೆ ಹೆಜ್ಜೆ ಇಡಲೂ ಕೂಡ ಎಷ್ಟೋ ಜನ ಹೆದರುತ್ತಾರೆ. ನಿಮಗೆಲ್ಲರ ಪ್ರಕಾರ ಇದಕ್ಕೆಲ್ಲ ಪ್ರಮುಖ ಕಾರಣ ಕೊಳ್ಳೇಗಾಲದಲ್ಲಿ ನಡೆಯುವ ಮಾಟಮಂತ್ರ! ವಾಮಮಾರ್ಗಕ್ಕೆ ಕೊಳ್ಳೇಗಾಲ ಪ್ರಸಿದ್ಧಿ ಎಂಬುದು ಎಲ್ಲರ ಅಂಬೋಣ. ಎಷ್ಟೋ ಜನ ಇದನ್ನೇ ಬಂಡವಾಳ ಮಾಡಿಕೊಂಡಿರುವುದೂ ಸತ್ಯ. ಕರ್ನಾಟಕದ ವಿವಿಧ ಜಿಲ್ಲಾ ತಾಲ್ಲೂಕುಗಳಲ್ಲಿ ಕೊಳ್ಳೇಗಾಲದ ಹೆಸರು ಹೇಳಿಕೊಂಡು ಎಷ್ಟೋ ಜನ ಜ್ಯೋತಿಷ್ಯಾಲಯಗಳನ್ನು ತೆರೆದು ಸುಲಿಗೆ ಮಾಡುತ್ತಿರುವುದನ್ನು ನೀವೆಲ್ಲರೂ ಕಂಡಿರುತ್ತೀರಿ. ಸಿನಿಮಾ ಮತ್ತು ದೂರದರ್ಶನ ಮಾಧ್ಯಮದವರೂ ಸಹ ಹಾಗೆಯೇ, ಮಾಟಮಂತ್ರದ ವಿಚಾರ ಬಂದಾಗ ಕೊಳ್ಳೇಗಾಲದ ಹೆಸರನ್ನು ಬಿಂಬಿಸುತ್ತಾರೆ. ‘ನೀವು ಮಾಟಂತ್ರಕ್ಕೆ ಫೇಮಸ್ ಅಲ್ವಾ?’ ಎಂದು ಸಾವಿರಾರು ಜನ ನನ್ನನ್ನು ಕೇಳುತ್ತಿರುತ್ತಾರೆ. ಮೈಸೂರಿನ ಮಾನಸಗಂಗೋತ್ರಿಯಲ್ಲಿನ ಸ್ನಾತಕೋತ್ತರ ಪದವಿಯಲ್ಲಿದ್ದಾಗ ಎಷ್ಟೋ ಜನ ಸಿಬ್ಬಂದಿ ವರ್ಗದವರು ಮಾಟ ಮಾಡಿಸಿಕೊಡುವಂತೆ ನನ್ನನ್ನು ಅನೇಕ ಬಾರಿ ಅಹವಾಲಿಸಿಕೊಂಡಿದ್ದಾರೆ.

ನಿಮ್ಮೆಲ್ಲರ ಪ್ರಶ್ನೆ, ‘ಹಾಗಾದರೆ ಕೊಳ್ಳೇಗಾಲ ಮಾಟಮಂತ್ರಕ್ಕೆ ಫೇಮಸ್ ಅಲ್ವಾ?’ ಖಂಡಿತವಾಗಿಯೂ ಇಲ್ಲ. ಕೊಳ್ಳೇಗಾಲದ ಬಸ್ ನಿಲ್ದಾಣದ ಉತ್ತರಕ್ಕೆ ದೇವಾಂಗ ಬೀದಿ ಎಂಬ ಒಂದು ಬೀದಿ ಇದೆ. ಮಾಟಮಂತ್ರಕ್ಕೆ ಆ ಬೀದಿಯವರೇ ಪ್ರಸಿದ್ಧಿ ಎಂಬ ಮಾತಿದೆ. ನಮ್ಮ ಮನೆ ಇರುವುದು ಅದೇ ಬೀದಿಯಲ್ಲಿ. ನಮ್ಮ ಅಕ್ಕಪಕ್ಕದಲ್ಲಿರುವ ಕೆಲವರು ಮಾಟಮಂತ್ರಕ್ಕೆ ಫೇಮಸ್(ನಾವಿನ್ನೂ ಫೇಮಸ್ ಆಗಿಲ್ಲ!). ಇದೇನಿದು, ಮಾಟಮಂತ್ರವೇ ಇಲ್ಲ ಎಂದಾತ ಅದರ ಬಗ್ಗೆಯೇ ಮಾತನಾಡುತ್ತಿದ್ದಾನೆ ಎಂದು ಹುಬ್ಬೇರಿಸಬೇಡಿ. ವಾಮಾಚಾರ ಸತ್ಯವೋ ಸುಳ್ಳೋ ಅದರ ಬಗ್ಗೆ ಸದ್ಯಕ್ಕೆ ಮಾತನಾಡುವುದು ಬೇಡ. ನನ್ನ ವೈಯುಕ್ತಿಕ ಅಭಿಪ್ರಾಯದಲ್ಲಿ ಮಾಟಮಂತ್ರವೆಂಬದು ಶೇಕಡಾ ನೂರಕ್ಕೆ ನೂರು ಸುಳ್ಳು. ಅದೊಂದು ಮಾನಸಿಕ ಖಾಯಿಲೆ ಅಷ್ಟೆ. ದೆವ್ವವನ್ನು ನೆನಪಿಸಿಕೊಂಡು ಕುಳಿತವನ ಮುಂದೆ ಬಿಳಿ ಸೀರೆ ಹಾಕಿಕೊಂಡು ಯಾರೋ ಹೋದಂತೆ. ಮೆದುಳಿನಲ್ಲುತ್ಪತ್ತಿಯಾಗುವ ಕೆಲವು ತರಂಗಳು ಆ ಚಿತ್ರವನ್ನು ತಕ್ಷಣ ಕಲ್ಪಿಸಿಬಿಡಬಹುದು. ಅಚ್ಚಗನ್ನಡದಲ್ಲಿ ಅದನ್ನು ‘ಭ್ರಮೆ’ ಎನ್ನುತ್ತಾರೆ. ಆಂಗ್ಲದ ಫ್ಯಾಂಟಸಿ.

ಹೌದು, ಕೊಳ್ಳೇಗಾಲದಲ್ಲಿ ಸರಿಸುಮಾರು 30 ವರ್ಷಗಳ ಹಿಂದೆ ವಾಮಾಚಾರ ಎಂಬ ಪೊಳ್ಳು ಪ್ರಕ್ರಿಯೆ ಅವ್ಯಾಹತವಾಗಿ ನಡೆಯುತ್ತಿತ್ತು. ನಿಮ್ಮ ಶತ್ರುಗಳ ಪತನಕ್ಕೆ ಸೂತ್ರ ರೂಪಿಸಿಕೊಡುತ್ತಿದ್ದರಂತೆ. ವಿರೋಧಿಗಳ ಮನೆ ತುಂಬಾ ಹಾವು ಚೇಳು ಓಡಾಡುವಂತೆ, ಮಲಗಿದವರ ಮೇಲೆ ಯಾರೋ ಬಂದು ಎಗರಿದಂತೆ, ತಿನ್ನುವ ಅನ್ನ ಹುಳುವಾಗುವಂತೆ, ಮನೆಯ ಸುತ್ತ ಯಾವುದೋ ಆತ್ಮ ಓಡಾಡುವಂತೆ ಮಾಡುತ್ತಿದ್ದರಂತೆ. ಇದರ ಜೊತೆಗೆ ಇನ್ನಿತರೆ ಕೆಲವು ಮಾಟಗಳಿವೆ
ಕಣ್ಣು ಕಟ್ಟಿನ ಮಾಟ – ಅಂದರೆ ಕಣ್ಣು ಕಾಣದಂತೆ ಮಾಡುವುದು
ಬಾಯಿ ಕಟ್ಟಿನ ಮಾಟ – ಮಾತನಾಡಲು ತೊಡರಿಸುವಂತೆ ಮಾಡುವುದು. ಈ ಮಾಟವನ್ನು ತಮ್ಮ ಶತ್ರುಗಳು ಕೋರ್ಟು ಕಛೇರಿ, ಪಂಚಾಯಿತಿಗಳಲ್ಲಿ ಮಾತನಾಡಲಾಗದೆ ತಡವರಿಸಲಿ ಎಂದು ಮಾಡಿಸುತ್ತಿದ್ದರಂತೆ. ಕೈಕಾಲು ಕಟ್ಟಿನ ಮಾಟ – ಕೈ ಕಾಲು ಸೇದುಹೋಗುವಂತೆ ಮಾಡುವುದು
ಸ್ತ್ರೀವಶೀಕರಣ - ಹುಡುಗಿಯ ಕೂದಲು ಅಥವಾ ತೊಟ್ಟು ರಕ್ತ ತಂದುಕೊಟ್ಟರೆ ಸಾಕು ಅವಳು ನಮ್ಮ ಹಿಂದೆಯೇ ಬರುವಂತೆ ಮಾಡುವುದು

ಹೀಗೆ ಅನೇಕ ವಿಧಗಳಿವೆ. ಇಂತಹ ತುಚ್ಛ ಕೆಲಸವನ್ನು ಮಾಡುತ್ತಿದ್ದವರು ಬೆರಳೆಣಿಕೆಯಷ್ಟು ಜನ ಮಾತ್ರ. ಅವರ ಬಳಿ ಅಂದಿನ ರಾಜಕಾರಣಿಗಳು, ಸಿನಿಮಾ ತಾರೆಯರೆಲ್ಲ ಬರುತ್ತಿದ್ದರಂತೆ. ಭೀಮನ ಅಮಾವಾಸ್ಯೆಯಂದು ಸ್ಮಶಾಣಕ್ಕೆ ಹೋಗಿ ಆಗಷ್ಟೆ ಹೂತಿರುವ ಹೆಣಗಳನ್ನು ಕಿತ್ತು, ಅದರ ಕೈ ಕಾಲುಗಳನ್ನು ಕತ್ತರಿಸಿಕೊಂಡು ಬಂದು, ಅದೆಂತದೋ ಪೂಜೆ ಮಾಡಿ ಆ ಆತ್ಮವನ್ನು ಮಂತ್ರ ಕುಂಡಲಿನಿಯಲ್ಲಿ ಅಥವಾ ಮನೆಯ ಸೂರಿನಲ್ಲಿ ಕೂರಿಸಿಕೊಳ್ಳುತ್ತಿದ್ದರಂತೆ. ಇವೆಲ್ಲಾ ಅಂತೆ ಕಂತೆಗಳ ಬೊಂತೆ. ಹೆಣದ ತಲೆ ಕಾಲು ಕತ್ತರಿಸಿಕೊಂಡು ಬರುವುದು ಸತ್ಯವೇ ಆದರು ಸೂರಿನಲ್ಲಿ ಕುಳಿತಾತ್ಮವನ್ನು ಯಾರೂ ಮಾತನಾಡಿಸಿಲ್ಲ. ಅಂತಹ ಎಷ್ಟೋ ಕುಂಡಲಿನಿಗಳನ್ನು ನಾನೇ ತುಳಿದು ಬಂದಿದ್ದೇನೆ. ನನ್ನ ಕಾಲನ್ನು ಯಾವ ಆತ್ಮವೂ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರಲಿಲ್ಲ. ಆದರೂ ಭೀಮನ ಅಮಾವಾಸ್ಯೆಯಂದು ಕೊಳ್ಳೇಗಾಲದಲ್ಲಿ ಹೆಣ ಕಾಯುವ ವಾಡಿಕೆ ಇದೆ. ಎಲ್ಲೋ ಒಂದು ಕಡೆ ಮಾಟಮಂತ್ರದ ಪೊಳ್ಳುತನವನ್ನು ಬಯಲಿಗೆಳೆಯುವ ಬಗ್ಗೆ ಆಧುನಿಕ ವಿಜ್ಞಾನವೂ ಅಷ್ಟು ತಲೆ ಕೆಡಿಸಿಕೊಂಡಿಲ್ಲವೆಂದೆನಿಸುತ್ತದೆ. ಆಗಲೇ ನಾನು ಹೇಳಿದಂತೆ ಅದನ್ನು ನಂಬಿ ಹೆದರುವವರಿಗೆ ಮಾನಸಿಕ ಏರುಪೇರಿನಂದ ಕೆಡುಕಾಗಬಹುದು. ಕೈ ಕಾಲು ನಡುಗಿ ಸ್ಕೂಟರಿನಿಂದ ಜಾರಿ ಬಿದ್ದಂತೆ.

ಅದಿರಲಿ, ಕರ್ನಾಟಕಕ್ಕೇ ಪ್ರಸಿದ್ಧವಾಗಿದ್ದ ಈ ‘ಕೇವಲ ಕೆಲವರು’ ಏನಾದರು? ಅವರ ಕಥೆ ಹೇಳಿದರೆ ಅವರ ಶತ್ರುಗಳಿಗೂ ಕನಿಕರ ಹುಟ್ಟದಿರದು. ಸಾವಿರಾರು ಸಂಸಾರಗಳನ್ನು ಹಾಳು ಮಾಡಿದ ಇವರ ಸಂಸಾರಗಳು ದಿಕ್ಕೆಟ್ಟುಹೋದವು. ಇವರಲ್ಲಿ ಅನೇಕರಿಗೆ ಪಾಶ್ರ್ವವಾಯು ಬಡಿಯಿತು. ಅನೇಕರ ಮಕ್ಕಳೆಲ್ಲಾ ಇದ್ದಕ್ಕಿದ್ದಂತೆ ಅಕಾಲ ಮರಣಕ್ಕೀಡಾದರು. ಹೆಂಡತಿಯರು ಕೆಟ್ಟ ಕೆಲಸಗಳಿಗೆ ಒಗ್ಗಿಕೊಂಡರು. ಕೊನೆ ಕೊನೆಗೆ ಅನಾಥ ಹೆಣವಾಗಿ ಸಿಕ್ಕರು. ಈಗ ಇವರೆಲ್ಲರೂ ಸತ್ತು ಸ್ಮಶಾಣ ಸೇರಿದ್ದಾರೆ. ಸಾಯುವ ಸಮಯದಲ್ಲಿ ಅವರ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಜನಗಳು ತೂ! ಚಿ! ಎಂದುಗಿಯುತ್ತಿದ್ದರು. ಮೈ ಕೊಳೆತು ಹುಳುಗಳು ತುಂಬಿಕೊಂಡಿದ್ದವು. ಸ್ನಾನ ಮಾಡಿಸುವವರಿಲ್ಲ, ಅವರನ್ನು ಮುಟ್ಟಿ ಶೌಚಕ್ಕೆ ಕರೆದುಕೊಂಡು ಹೋಗುವವರಿರಲಿಲ್ಲ. ಎಲ್ಲಾ ಕುಳಿತಲ್ಲಿಯೇ. ಮಲದ ಮೇಲೆ ನಿದ್ದೆ, ಯಾರಾದರೂ ಕನಿಕರಗೊಂಡು ನೀಡಿದರೆ ತುತ್ತು ಊಟ. ಸಿದ್ಧಪ್ಪ ಎಂಬ ಒಬ್ಬ ಭಯಂಕರ ಮಾಟಗಾರನ ಹೀನಾಯ ದುಸ್ಥಿತಿಯನ್ನು ನಮ್ಮ ತಂದೆಯ ಬಳಿ ಕೇಳಿ ಒಮ್ಮೆ ತಿಳಿದುಕೊಂಡಿದ್ದೆ. ಆತ ಒಮ್ಮೆ ಸಾಯಲಿಲ್ಲ, ಇಂಚಿಂಚು ಸತ್ತ. ನಾವು ಮಾಟ ಮಾಡಿದರೆ ಅಥವಾ ಮಾಡಿಸಿದರೆ ನಿಧಾನವಾಗಿ ಅದು ನಮ್ಮೆಡೆಗೆ ತಿರುಗಿಬಿಡುತ್ತದೆ, ಆ ಕೆಡುಕೆಲ್ಲಾ ನಮಗೆ ಸೇರಿಬಿಡುತ್ತದೆ ಎಂಬ ಒಂದು ಗಾಢವಾದ ನಂಬಿಕೆ ಕೊಳ್ಳೇಗಾಲದಲ್ಲಿದೆ. ಈ ಘಟನೆಗಳಿಂದ ಮರಿ ಮಾಟಗಾರರು ಗಾಬರಿಯಾಗಿಬಿಟ್ಟರು. ಕಡೆಗಳಿಗೆ ಈ ರೀತಿಯಾಗುವುದಾದರೆ ಯಾರಿಗಾಗಿ ದುಡಿದುಣ್ಣಬೇಕು ಎಂದು ಎಚ್ಚೆತ್ತುಕೊಂಡರು. ಆದುದರಿಂದ ಈಗ ಕೊಳ್ಳೇಗಾಲದಲ್ಲಿ ಮಾಟ ಮಂತ್ರ ಏನೂ ನಡೆಯುವುದಿಲ್ಲ. ಆ ವಿಚಾರದಲ್ಲಿ ಇಲ್ಲಿನ ಸಮಾಜ ಈಗ ಪ್ರಬುದ್ಧವಾಗಿದೆ. ಆದರೂ ಕೆಲ ದೇವತೆಗಳ ಚಿತ್ರ ಬಿಡಿಸಿ, ಏನೇನೋ ರಂಗೋಲಿ ಬಿಡಿಸಿರುವ ಬೋರ್ಡ್ ಹಾಕಿಕೊಂಡಿರುವ ಕೆಲವು ಅಂಗಡಿಗಳನ್ನು ಗುರುತಿಸಬಲ್ಲಿರಿ. ನನಗೆ ತಿಳಿದಂತೆ ಅಲ್ಲೂ ಕೂಡ ಮಾಟಮಂತ್ರ ನಡೆಯುವುದಿಲ್ಲ. ಹೊಟ್ಟೆಪಾಡಿನ ನೆಪದಲ್ಲಿ ಮಂತ್ರ, ಯಂತ್ರ, ಆಯುರ್ವೇದ ಎಂದುಕೊಂಡು ಕುಳಿತಿದ್ದಾರಷ್ಟೆ. ಅಂದರೆ ನಿಮ್ಮ ಮನೆಯ ಸಮಸ್ಯೆಗಳು (ಉದಾಹರಣೆಗೆ ಗಂಡ ಹೆಚಿಡತಿ ಜಗಳ, ಮನೆಯಲ್ಲಿ ಏನೋ ಇರುಸು ಮುರುಸು, ದೆವ್ವದ ಕಾಟ ಇತ್ಯಾದಿ) ಪರಿಹರಿಸಿಕೊಡುತ್ತೇವೆ ಎನ್ನುತ್ತಾರೆ. ಆದುದರಿಂದ ನೀವೆಲ್ಲರೂ ಧೈರ್ಯವಾಗಿ ಕೊಳ್ಳೇಗಾಲಕ್ಕೆ ಬರಬಹುದು. ಎಲ್ಲಾ ಊರಿನಂತೆ ಅದೂ ಕೂಡ ಕಲ್ಲು, ಮಣ್ಣು, ಕಟ್ಟಡ, ಬಸ್ಸು ಲಾರಿ ಇರುವ ಜಾಗ. ಕೊಳ್ಳೇಗಾಲದವರೂ ಮನುಷ್ಯರೇ...!

ಆಳೆತ್ತರದ ಕನ್ನಡಿಯಂತೆ ಮನಸ್ಸು ಒಡೆದಿದೆ....

ಪ್ರೀತಿಯ ಮಗಳೇ...

ಯಾಕೋ ಮನಸ್ಸಿಗೆ ಕಿಂಚಿತ್ತೂ ಸಮಧಾನವಿಲ್ಲ. ನಿನ್ನೆಯಿಂದಲೂ ತುಂಬಾ ಜ್ವರ ಇದೆ. ದೇಹ ಒಂದೇ ಸಮನೆ ಕಂಪಿಸುತ್ತಿದೆ. ನಿನ್ನದೇ ನೆನಪು. ಈ ಮನೆಯ ಪ್ರತಿ ಆಟಿಕೆ ಸಾಮಾನುಗಳು ನಿನ್ನ ಮುಖ ತೋರುತ್ತಿವೆ. ಪ್ರತೀ ವಸ್ತುವಿನಲ್ಲೂ ನಿನ್ನ ಆಸೆ, ಕಾತುರ, ಜಿಪುಣತನವೆದ್ದು ಕಾಣುತ್ತಿದೆ. ‘ನಿನ್ನ ಭಾವಚಿತ್ರ ನೋಡಿದಾಗ ದುಖ ಉಮ್ಮಳಿಸಿ ಉಮ್ಮಳಿಸಿ ಬಂದು ಸಾಂತ್ವನದ ಶಕ್ತಿ ಇಲ್ಲದೇ, ಕಣ್ಣೀರ ಕಟ್ಟೆ ಒಡೆದು ಸುಮ್ಮನೇ ಅಳುತ್ತೇನೆ. ನಿನ್ನೆ ಅಪ್ಪ ನಿನ್ನ ಬಾಲ್ಯದ ತುಂಟು ಹಾವಭಾವಗಳ ಫೋಟೋಗಳನ್ನು ನೋಡಿಕೊಂಡು ಅಳುತ್ತಿದ್ದರು. ನೀನು ಕಿಸಕ್ಕೆಂದು ನಕ್ಕಿದ್ದ ಒಂದು ಫೋಟೋ ನೋಡಿಕೊಂಡು ನಕ್ಕು ನಕ್ಕು ಕಣ್ಣೀರು ಸುರಿಸುತ್ತಿದ್ದರು. ನನ್ನ ಮಗಳಷ್ಟು ಚಂದ ಯಾರೂ ಇಲ್ಲ, ಅವಳ ನಗುವಿಗೆ ಸಾಟಿಯೇ ಇಲ್ಲ, ಅವಳ ಮಧುರ ಒಡನಾಡದಲ್ಲಿಯೇ ನಾನು ಇಷ್ಟು ದಿನ ಬದುಕಿದ್ದೆ ಎಂದು ಪೇಚುತ್ತಿದ್ದರು. ಇತ್ತೀಚೆಗಂತೂ ಕುಡಿತ, ಸಿಗರೇಟ್ ಸೇವನೆ ಜಾಸ್ತಿಯಾಗಿದೆ. ಪ್ರಶ್ನೆ ಮಾಡಲು ನೀನೇನು ನನ್ನ ಮಗಳೇ ಎಂದು ನನ್ನ ಮೇಲೆಯೇ ರೇಗುತ್ತಾರೆ. ಒಮ್ಮೊಮ್ಮೆ ನನ್ನ ತೊಡೆಯ ಮೇಲೆ ಮಲಗಿಕೊಂಡು, ನಿನ್ನನ್ನು ಓದಿಸಲು ಅವರು ಪಟ್ಟ ಶ್ರಮ, ಬ್ಯಾಂಕ್ ಲೋನ್, ನಿನ್ನನ್ನು ದೂರದ ಕಾಲೇಜಿಗೆ ಸೇರಿಸುವಾಗ ಅನುಭವಿಸಿದ ಒಳನೋವು, ಜೊತೆಗೆ ಆ ಕಾಲೇಜಿನಲ್ಲಿ ನಿನಗಾಗಿದ್ದ ತೊಂದರೆಗೆ ಪ್ರಾಚಾರ್ಯರೊಡನೆ ರೇಗಿದ್ದು, ಕಾರ್ ಮಾಡಿಕೊಂಡು ಬಂಧುಬಳಗವನ್ನೆಲ್ಲ ಕೂಡಿಸಿಕೊಂಡು ನಿನ್ನನ್ನು ನೋಡಲು ಪರಿಸೆ ಕಟ್ಟಿಕೊಂಡು ಬಂದಿದ್ದು, ಎಲ್ಲವನ್ನೂ ಸಾವಧಾನವಾಗಿ ಹೇಳಿ ನಿರಾಳರಾಗಿ, ಒಮ್ಮೆ ಬದುಕಿನ ಬೇಜವಾಬ್ದಾರಿಯೆಡೆಗೆ ನಗುತ್ತಾರೆ.

ಅವರೂ ನಿನ್ನನ್ನು ಬೆಳೆಸಲು ತುಂಬಾ ಕಷ್ಟ ಪಟ್ಟಿದ್ದಾರೆ ಮಗಳೆ. ನಿನಗೂ ನಿನ್ನಕ್ಕನಿಗು ಪ್ರತಿದಿನ ಸ್ನಾನ ಮಾಡಿಸಿ, ಶೃಂಗಾರ ಮಾಡಿ, ಕೂದಲು ಬಾಚಿ ಜಡೆ ಎಣೆದು, ಬೊಟ್ಟಿಕ್ಕಿ, ತಿಂಡಿ ತಿನ್ನಿಸಿ ಅವಸರದಲ್ಲಿ ಅವರೂ ಸಿದ್ಧವಾಗಿ ನಿನ್ನನ್ನು, ಅಕ್ಕನನ್ನು ಶಾಲೆಗೆ ಬಿಟ್ಟ ನಂತರವೇ ತಮ್ಮ ಕಛೇರಿ ಕಾರ್ಯಕ್ಕೆ ಹೋಗುತ್ತಿದ್ದರು. ಶಂಕರಪ್ಪನ ಅಂಗಡಿಗೆ ದಿನಸಿ ತರಲು ಹೋದರಂತೂ ನಿನ್ನನ್ನು ಕೂಸುಮರಿ ಮಾಡಿ ಹೊತ್ತುಕೊಂಡು ಹೋಗುತ್ತಿದ್ದರು. ಬೀದಿಯ ಜನಗಳು ಇಷ್ಟು ದೊಡ್ಡ ಮಗಳನ್ನು ನಡೆಯಲು ಬಿಡವಾರದೇ ಎಂದರೆ ಮುಖಕ್ಕೆ ರಾಚುವಂತೆ ಬೈದುಬಿಡುತ್ತಿದ್ದರು. ನಿನ್ನ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಸಹ ನಿನ್ನನ್ನು ಎದೆಗಪ್ಪಿಕೊಂಡು ಆಸ್ಪತ್ರೆಗೆ ಓಡುತ್ತಿದ್ದರು. ನೀನು ಓದಿನಲ್ಲಿ ಶಾಲೆಗೇ ಪ್ರಥಮ ಎಂದು ಒಮ್ಮೆ ತಿಳಿದಾಗ ಸಂತಸದ ಅಲೆಯಲ್ಲಿ ತೇಲಿ ಮಗುವಿನಂತೆ ಕುಣಿದಿದ್ದರು. ಅಪ್ಪನ ಜೊತೆ ನಾಚಿ ನಾನೂ ಕುಣಿದಿದ್ದೆ. ಸ್ಕೂಲ್ ಡೇ ನಲ್ಲಿ ನೀನು ಡ್ಯಾನ್ಸ್ ಮಾಡುವಾಗ ‘ನನ್ನ ಮಗಳು ಕಣೇ, ನನ್ನ ಮಗಳು’ ಎಂದು ಷರ್ಟಿನ ಕಾಲರ್ ಮೇಲಕ್ಕೆತ್ತಿಕೊಳ್ಳುತ್ತಿದ್ದರು. ಅಕ್ಕಪಕ್ಕದವರಿಗೆಲ್ಲ ‘ಅವಳು ನನ್ನ ಮಗಳು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಫೋಟೋ ತೆಗೆದವನ ಬಳಿ ಹೋಗಿ ಆ ರೀತಿ ತೆಗೆ ಈ ರೀತಿ ತೆಗೆ ಎಂದು ಸುಮ್ಮನೆ ಉಪದ್ರ ಕೊಡುತ್ತಿದ್ದರು.

ನಿನ್ನನ್ನು ಪ್ರತಿಹಂತದಲ್ಲೂ ಜೋಪಾನವಾಗಿ ನೋಡಿಕೊಂಡೆ ಮಗಳೆ. ಅದ್ಯಾವನೋ ಅವನ ಜೊತೆ ಓಡಿಹೋಗುವಾಗ ಈ ನಿನ್ನ ಹೆತ್ತವರು ಕಾಣಲಿಲ್ಲವೇ?? ನಿನ್ನನ್ನು ಹೆತ್ತ ತಪ್ಪಿಗೋ ಏನೋ, ನಿನ್ನನ್ನು ಮರೆಯಲಾಗದೆ, ನೆನಪಿಸಿಕೊಳ್ಳಲೂ ಆಗದೇ ಸತ್ತು ಬದುಕುತ್ತಿದ್ದೇವೆ. ನೀನು ಹೊಟ್ಟೆಯಲ್ಲಿದ್ದಾಗ, ಡಾಕ್ಟರ್ ಮಗು ಉಳಿಯುವುದು ಸಂದೇಶಹವಿದೆ, ಕೂಡಲೇ ಆಪರೇಷನ್ ಮಾಡಿಸಿ ಎಂದಾಗ, ನಿನಗಾಗಿ ನನ್ನ ಹೊಟ್ಟೆಯನ್ನು ಕುಯ್ಯಿಸಿಕೊಂಡು ತಪ್ಪು ಮಾಡಿಬಿಟ್ಟೆ. ನಿನ್ನನ್ನು ಹೆತ್ತು ನಿನ್ನ ಹೇಸಿಗೆ ತೊಳೆದು ಕಷ್ಟಪಟ್ಟು ಬೆಳೆಸಿದ್ದಕ್ಕೆ ನೀನು ಕೊಟ್ಟ ಉಡುಗೊರೆ ಮರೆಯಲು ಸಾಧ್ಯವಿಲ್ಲ. ನಿನ್ನನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ನೋಡಿಕೊಂಡ ನನ್ನ ಗಂಡನನ್ನು ನುಂಗುವ ಹಂತಕ್ಕೆ ಬಂದುಬಿಟ್ಟೆ. ಅರೆಗಳಿಗೆ ಬೀದಿಯಲ್ಲಿ ತಲೆಯೆತ್ತಿ ನಡೆಯಲಾಗುತ್ತಿಲ್ಲ, ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಒಬ್ಬರೊಡನೆ ಮುಖಕೊಟ್ಟು ಮಾತನಾಡಲಾಗುವುದಿಲ್ಲ. ಕೆಲವರಂತು ನಿಮ್ಮ ಮಗಳು ಈಗ ಎಲ್ಲಿದ್ದಾಳೆ, ಏನು ಮಾಡುತ್ತಿದ್ದಾಳೆ ಎನ್ನುವಷ್ಟರಲ್ಲಿಯೇ ಮತ್ಯಾರೋ ಬಂದು ಅವಳು ಕಳೆದ ತಿಂಗಳು ಅದ್ಯಾವನೋ ಅವನ ಜೊತೆ ಓಡಿ ಹೋಗಿದ್ದಾಳೆ ಎಂದು ವ್ಯಂಗ್ಯ ಮಾಡುತ್ತಾರೆ. ಯಾರ ಹಂಗಿಗೂ ತಲೆ ಬಾಗದೇ ಹೆಮ್ಮೆಯ ಜೀವನ ನಡೆಸಿದ ನನ್ನ ಗಂಡನನ್ನು ಆಡಿಕೊಂಡು ನಗುವವರು ಬೀದಿಯಲ್ಲೆಲ್ಲಾ ಸಿಗುವಂತಾಯಿತು. ಆದರೂ ನಿನ್ನಪ್ಪ ನನ್ನ ಮಗಳು ರಾಣಿಯಂತೆ ಇರುತ್ತಾಳೆ ಹೋಗ್ರೋಲೋ ಎಂದು ರೇಗಿ ಬರುತ್ತಾರೆ. ನೀನೇನೋ ಯಾರದೋ ಅಪ್ಪುಗೆಯರಸಿ ಹೊರಟುಬಿಟ್ಟೆ. ಮುದಿ ಕಾಲದಲ್ಲಿ ನಮ್ಮನ್ನು ನೋಡಿಕೊಳ್ಳುವವರ್ಯಾರು? ಆಳೆತ್ತರದ ಕನ್ನಡಿಯಂತೆ ನಮ್ಮ ಮನಸ್ಸುಗಳು ಒಡೆದುಜಹೋದವು. ಸಾವೇ ಜೀವನದ ಗುರಿ ಎಂಬುದು ಕೊನೆಗೂ ಸತ್ಯವಾಗುತ್ತಾ ಬರುತ್ತಿದೆ. ನಿನ್ನಿಂದ ನಮಗೆ ಬಳುವಳಿಯಾಗಿ ಎಷ್ಟೇ ಕಷ್ಟ ಬಂದರೂ ನಿನ್ನ ಹೆತ್ತವರು ದೇವರಲ್ಲಿ ಬೇಡಿಕೊಳ್ಳುವುದಿಷ್ಟೆ. ‘ನೀನು ಎಲ್ಲೇ ಇರು ಮಗಳೆ, ಸಂತಸದಿಂದಿರು, ನಿನ್ನ ಗಂಡನ ಜೊತೆ ನಗು ನಗುತ್ತಾ ಬಾಳುವ ಕಾಲವು ಪ್ರತಿದಿನ ತುಂಬಿ ಬರಲಿ.’


ಪ್ರೀತಿಯ ಅಮ್ಮ...

ಮೊದಲಿಗೆ ನಿಮ್ಮಿಬ್ಬರ ಆಶೀರ್ವಾದವನ್ನು ಬೇಡುತ್ತೇನೆ. ನಿನ್ನ ದುಃಖ ನನ್ನ ಅವಗಾಹನೆಗೆ ಬಂದು ನಾನೂ ಕೂಡ ಅಳುತ್ತಿದ್ದೇನೆ. ಭಾವನೆಗಳ ಭಾವುಕ ಪ್ರಪಂಚದಲ್ಲಿ ನಾವೆಲ್ಲಾ ಬದುಕುತ್ತಿರುವುದೇ ಪಾಪವಾಗಿದೆ. ಒಂದಷ್ಟು ಗೋಡೆಗಳನ್ನು ನಾವೇ ಕಟ್ಟಿಕೊಂಡು, ಉರುಳಿಸಲಾಗದೇ ದಾಟಲೂ ಆಗದೇ ಎಡತಾಕುತ್ತಿರುವುದು ವಿಪರ್ಯಾಸವೇ ಸರಿ. ನಾಯಿಗಳಿಗೆ ಮಾಂಸಕ್ಕಿಂತ ಎಲುಬೇ ರುಚಿಯಾದಂತಾಗಿದೆ ಮನುಷ್ಯರ ಬದುಕು. ನಿಮ್ಮನ್ನು ಅರೆಕ್ಷಣ ಬಿಟ್ಟಿರುವ ಶಕ್ತಿ ನನಗೂ ಇಲ್ಲ. ಆದರೆ ಒಂದು ಮಾತು. ಮುದ್ದು ಗಿಳಿಯಂತೆ ನನ್ನನ್ನು ಸಾಕಿದ ನೀವು ಹದ್ದಿನ ಬಾಯಿಗೆ ಇಡಲು ಇಷ್ಟಪಟ್ಟಿದ್ದು ಎಷ್ಟು ಸರಿ?? ನನ್ನ ಮನಸ್ಸನ್ನು ಅರ್ಥೈಸಿಕೊಳ್ಳುವ ಮಟ್ಟ ನಿಮ್ಮಲ್ಲಿ ನಾನು ಕಾಣಲೇ ಇಲ್ಲ. ಕಾಲು ಹಿಡಿದು ಬೇಡಿಕೊಂಡರೂ ನನ್ನೊಳಿನ ಸುಪ್ತ ಭಾವನೆಯೊಂದನ್ನು ಅರಸುವ ತಾಳ್ಮೆ ನೀವು ಬೆಳೆಸಿಕೊಳ್ಳಲಿಲ್ಲ. ನಾನು ಪ್ರೀತಿ ಮಾಡಬಾರದಾಗಿತ್ತು ಎನಿಸಿದ್ದು ನೀವೆಲ್ಲ ನನ್ನನ್ನು ವಿರೋಧಿಸಿದಾಗ. ಕಾಲ ಮಿಂಚಿತ್ತು. ಹೆಚ್ಚಾಗಿ. ಮ್… ನನಗೆ ವಿವರಿಸಲು ಬರುವುದಿಲ್ಲ. ನಾನು ಅವರನ್ನು ಪ್ರೀತಿಸಲು ನನ್ನೊಳಗಿದ್ದ ಯಾವುದೋ ನವಿರು ಭಾವನೆ ಮತ್ತು ಆತನ ಒಳ್ಳೆಯತನ ಮತ್ತು ಮುಗ್ದತೆ ಕಾರಣವಷ್ಟೆ. ಆ ಸಮಯದಲ್ಲಿ ನನ್ನನ್ನು ನಾನು ತಡೆಯಲಾಗಲಿಲ್ಲ. ಅವನ ಸದ್ಗುಣಗಳನ್ನು ನಿಮಗೆ ಬಿಡಿಸಿ ಬಿಡಿಸಿ ಹೇಳಿದ್ದೆ. ನಿನ್ನನ್ನು ಮತ್ತು ನಿಮ್ಮ ಅಪ್ಪ ಅಮ್ಮನನ್ನು ಮಹಾರಾಜ, ರಾಣಿಯಂತೆ ನೋಡಿಕೊಳ್ಳುತ್ತೇನೆಂದು ನನ್ನ ಗಂಡ ಸಾವಿರ ಸಾವಿರ ಬಾರಿ ಹೇಳಿದ್ದ. ಈ ಯಾವತ್ತೂ ವಿಚಾರಗಳು ನಿಮ್ಮ ಮೆದುಳಿಗೆ ನಿಲುಕಲಿಲ್ಲ. ನಿಮಗೆ ನೆರೆಹೊರೆಯವರು ಮತ್ತು ಹಾಳಾದ ಜಾತಿ, ಅಂತಸ್ತೇ ಮುಖ್ಯವಾಗಿಹೋಯಿತು. ಅವರು ಆ ರೀತಿ ಅನ್ನಬಹುದು, ಇವರು ಹೀಗೆ ಎಂದು ನನ್ನನ್ನು ಯಾರೋ ಇಷ್ಟ ಇಲ್ಲದವನಿಗೆ ಧಾರೆ ಎರೆಯಲು ತುದಿಗಾಲಿನಲ್ಲಿ ನಿಂತುಬಿಟ್ಟಿರಿ. ಅದೂ ನನ್ನ ಸಾವನ್ನೂ ಲೆಕ್ಕಿಸದೆ! ಹೀಗೆ ಬಲವಂತಕ್ಕೆ ಮದುವೆಯ”ಾದವರು ಎಷ್ಟು ಜನ ಸುಖದಿಂದ್ದಾರೆ ಎಂದು ನೀವೇ ಹೇಳಿ. ಹೀಗೆ ಮಾಡಿ ಆ ರೀತಿ ಆಗಿಹೋಯಿತಲ್ಲ ಎಂದು ಕೊರಗುವುದು ಇದ್ದೇ ಇದೆ. ಅದಕ್ಕಿಂತ ಇದೇ ಎಷ್ಟೋ ವಾಸಿ ಎಂಬುದು ನನ್ನ ಭಾವನೆ. ಇಷ್ಟ ಇಲ್ಲದವರ ಜೊತೆ ನೂರು ವರ್ಷ ಬದುಕಿದರೂ, ಹಚ್ಚಿಕೊಂಡವರ ಜೊತೆಗಿನ ಮೂರು ದಿನದ ಒಡನಾಟಕ್ಕೆ ಸಮವಲ್ಲ. ಸಾಯುವ ಕ್ಷಣದಲ್ಲಿ ಮತ್ತೊಬ್ಬರ ಸಂತಸವೇ ನಮಗೆ ನೆಮ್ಮದಿ ತರುವುದು.

ನಾನೆಂದೂ ನಿಮ್ಮ ಮಗಳೆ. ನಿಮ್ಮಂತೆ ಸಮಾಜಕ್ಕೆ ಹೆದರಿ ಬಾಳುವ ಜಾಯಮಾನ ನನ್ನದಲ್ಲ. ಕೂಡಲೇ ನಿಮ್ಮನ್ನು ನನ್ನೆಡೆಗೆ ಕರೆದುಕೊಂಡುಬಂದು ಸುಖದ ಸಪ್ಪತ್ತಿಗೆಯಲ್ಲಿ ಇರಿಸಿಕೊಳ್ಳುತ್ತೇನೆ. ನಿಮ್ಮ ಮುದ್ದು ಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡಿರುವುದಷ್ಟೇ ನಿಮ್ಮ ಕೆಲಸ! ಅವರೂ ಅದನ್ನೇ ಪೇಚುತ್ತಿರುತ್ತಾರೆ
ಪ್ಲೀಸ್ ಬನ್ನಿ…

Monday, 21 May 2012

ಕಪ್ಪು ಬಿಳುಪು...

ಬೇಸಗೆ ಬಿಸಿಯಪರಾಹ್ನಕೆ
ಬಿಳಿಯ ಕರಿಯನಾದ
ಕರಿಯ ಕರಿಯನೇ ಆದ
ಶ್ರೇಷ್ಠ ಯಾವುದು ಮತ್ತೆ??
ಕಪ್ಪಾದ ಬಿಳಿಯೋ??
ಬಿಳಿಯಾಗದ ಕಪ್ಪೋ??

ಪ್ರಖರ ಬೆಳಕಿನಾರ್ಭಟಕೆ
ನಾಲ್ಕು ಗೋಡೆ ತಡೆ
ಒಳಗೆ ಹಾಯಾದ ಕತ್ತಲು
ಬೆಳಕಿಗೆ ನೈಜ ಸೋಲು

ಬೂದಿ ಉಡುಗಿದರೆ
ಕೆಂಡದೊಳಗಣ ಹಸಿ ಹಸಿ ಬಿಸಿ!

Sunday, 20 May 2012

ಒಂದಷ್ಟು ಕಟ್ಟಲೆಗಳು...


1.
ನೂರಾರು ಜೊತೆ ಚಪ್ಪಲಿಗೊಬ್ಬ
ಕಾವಲುಗಾರ
ದೇವಸ್ಥಾನದೆದುರು
ಭಗವಂತನ ಪಾದರಕ್ಷೆಯ
ಮೇಲೆ ಅಡರಿದ್ದ ಕುಂಕುಮ ಹಣೆಗೊತ್ತಿತು
ಪುಣ್ಯವಂತನವನು, ಕಣ್ಬಿಟ್ಟ ದೇವರು!

2.
ಮೈಮೇಲೆ ಬಟ್ಟೆಯಿರಲಿಲ್ಲವಾಕೆಗೆ
ಒಂದು ಕಡೆ ಫ್ಯಾಷನ್
ಮತ್ತೊಂದೆಡೆ ದಾರಿದ್ರ್ಯ
ಬಂದ ಸನಾತನ ಪ್ರಭು
ಮುಖ ಮುಚ್ಚಲು, ಧರ್ಮ ಒದರಿದ ಹೃದ್ಯ!

3.
ಮೊದಲ ಪೂಜೆ ಗಣಪತಿಗೆ
ಸಲ್ಲಿಸಿದ ಭಕ್ತಿ ಕಾಣಿಕೆ ದೇವರಿಗೆ
ಇದ್ದದ್ದೊಂದೇ ಗಣೇಶ ಬೀಡಿ
ಸೇದುಗಿದು ಬೀಸಿದ ಕಾಗದ
ತೂರಿ ಬಿತ್ತು ಮೂತ್ರ ಕೋಟೆ ಗೋಡೆಗೆ
ಅಲ್ಲೂ ಆತ ತೆಪ್ಪಗಿದ್ದ!

4.
ಅಸಹಾಯಕ ಭಿಕ್ಷುಕನಿಗೆ
ಇಲ್ಲ ಚಿಲ್ಲರೆ!
ಆತ ಹುಂಡಿಗೆ ಇಳುಗಿಸುವುದು
ಯಾವಾಗಲೂ ಐನೂರೆ!
ಒಬ್ಬ ಬೇಡಿ ಭಿಕ್ಷುಕ
ಮತ್ತೊಬ್ಬ ನೀಡಿ ಭಿಕ್ಷುಕ!

5.
ಆ ದೇವಸ್ಥಾನದೊಳಗೆ
'ಅ' ಜಾತಿಯವರಿಗೆ ಪ್ರವೇಶವಿಲ್ಲ!
'ಆ' ಜಾತಿಯವರು ಮಾಡಿದ ನಿಯಮ
ಈ 'ಆ' ಜಾತಿಯವರು
'ಅ' ಜಾತಿಯವರೂರಿನವರೆ
ಮೂಗಿಗೆ ಗೋಡೆ ಹಾಕಿರಲಿಲ್ಲ
ಗಾಳಿ ಸೇವನೆಗೆ ಸಡಿಲ ನಿಯಮ!

6.
ಸ್ತ್ರೀ ಪ್ರವೇಶವಿಲ್ಲದ ದೇವಸ್ಥಾನ
ಒಬ್ಬಾಕೆ ದೇವರನ್ನು
ಮುಟ್ಟಿದ್ದಳಂತೆ!
ಆದರೂ ಆಕೆ ಗಂಡಾಗಲಿಲ್ಲ!
ದುಂಡಾಗಿ ಚೆನ್ನಾಗೇ ಇದ್ದಾಳೆ!

Tuesday, 15 May 2012

ಅಂಕುರ....


ಎರಡು ಧಾತು ಸೇರ್ಪಡೆಗೆ
ಆಯಸ್ಕಾಂತ ಸೆಳೆತ
ಎರಡೊಂದಾದ ಧಾತುಗಳು
ಕೂಡಿ ಹೊಸ ಚಿಗುರು ಮಿಳಿತ!

ಚೆಲ್ಲಿ ಹೋಗದಿರಲೆಂದೇನೋ
ಬಟ್ಟಲ ಯೋನಿ
ಮರಗಟ್ಟಿದ ಮಾಂಸವಿದೆ
ದಾಟಿ ಸುರಿಸಲೆಂದು ಜೀವ ಹನಿ!

ಮಾಂಸ ಮುದ್ದೆ ಅಡರಿ ಹೃದಯ
ಮೆದುಳು ಕಣ್ಣವಳಿ
ಕಾಲು ಕೈ ಕರಳು ತೊಡೆ
ಇಂಧನಕ್ಕೆಂದೇ ಕರುಳ ಬಳ್ಳಿ!

ಅದೆಲ್ಲಿತ್ತೋ ಏನೋ ಕೆತ್ತಿದವನಿಗೆ
ಬೇಕಾಗಿತ್ತು ತಾಯಿ ಜೀವ
ಅವನಂಕುರಕ್ಕೆ ನವಮಾಸದೊಪ್ಪಂದ
ಮುಗಿಸಿ ನಿಂತಿದೆ ಜೀವದ ಭಾವ!

ಹೊರಬಂದದ್ದು ಅದೇ ಯಂತ್ರ ಹೊತ್ತ
ಅದೇ ಕೆಲಸದ ತದ್ರೂಪ
ಅದೇ ಕೆಲಸ ಅದೇ ವರಸೆ
ಸವೆಸಲು ಕಾಲನೇ ಪ್ರತಿರೂಪ

ಮಾತಾಪಿತೃ ಉಳಿ ಪೆಟ್ಟಿಗೆ ಸಿಕ್ಕಿದ್ದು
ಕಣ್ಣು ಕಿವಿ ಮೂಗು ಇತರೆ ಆಕಾರ
ನಂತರ ಕೂಡಿದ್ದು ಮನಸ್ಸು
ಚಿಂತೆ ಚಿಂತನೆ ಇನ್ನಷ್ಟು ಸಾಕಾರ!

ಆಕಾರದಳತೆ ವಿನ್ಯಾಸ ಕ್ಷಮತೆ
ಪ್ರಪಂಚದದ್ಭುತಗಳಲ್ಲೊಂದು
ಕೈ ಕೂಡಿ ಬೊಗಸೆ ಮೂಡಿ ತುಟಿ
ತೆರೆದು ದಾಹ ನೀಗಿತು ಮನ ಮಿಂದು

Friday, 11 May 2012

ಪ್ರಕೃತಿ ಮಾಯೆ....!


ಕೊಡೆ ಹಿಡಿದು, ಸೊಂಟಕ್ಕೆ ಕೈ ಸಿಕ್ಕಿಸಿ
ಆತನ ಜೊತೆಯೇ ನಿಂತಿದ್ದೆ
ಆನೆ ಸೊಂಡಿಲುಪಮೆ ಮೊದಲು
ಬಾಳೆ ನುಣುಪು, ಮಿಂಚಿನ ಸಂಚೊನಪು
ಹಿಮಗಿರಿ ತಂಪು, ಮಲೆನಾಡ ಛಾಪು
ಕಲೆಸಿ ಗಿಡ ಮರ ಸೌಂದರ್ಯ ಬೆರೆಸಿ
ಕೆತ್ತುತ್ತಿದ್ದ ಆತ ಅಂಕುರಕ್ಕೆ ತಲೆ ಬಾಗಿಸಿ

ಎಳೆ ಎಳೆ ಹೆರಳ ಕೆತ್ತಿ, ಜಲಪಾತ ಬೀಳಿಸಿ
ಅಮಾವಾಸ್ಯೆಯ ಕಗ್ಗತ್ತಲ ಮೆತ್ತಿ
ಕರಿಮೋಡದಂಚೆಳೆದು ಮುಂಗುರುಳಿಗೆ
ಸರಿಯೇ ಎಂದು ಕೇಳುತ್ತಿದ್ದನಾತ
ನೊಸಲಿಗೆ ಬಳಿದು ನವನೀತ
ನಡುವೆ ಹರಿಧ್ವರ್ಣ ಬಿಂದಿಗೆ ಪುನೀತ
ಗಿಳಿ ಮಾವಿನ ಮೂಗು, ಕಬ್ಬಿನ ಸೋಗು
ಮೇಲೆ ಸಮುದ್ರವನ್ನೇ ಮೊಗೆ ಮೊಗೆದ
ಪಿಳಿ ಪಿಳಿ ಜೋಡಿ ಅರಳುಗಣ್ಣುಗಳು
ಜಾರು ಬೆಣ್ಣೆಗೆನ್ನೆ, ನಾಚಿಕೆಯ ಸನ್ನೆ
ಕಣಿವೆ ಗಲ್ಲ, ತುಟಿ ಸಕ್ಕರೆ ಬೆಲ್ಲ
ತೊಟ್ಟಿಕ್ಕಿದ ಹೂ ಮಧು ಮೃದು ಹರಿದು
ಕೆತ್ತಿದ ಹಲ್ಲು, ಹಾಲ್ ಜೋಳದ ಸಾಲು

ನಾಗರ ಹೆಡೆ ಕತ್ತು ಬೇಕಾಗಿತ್ತು
ಸರಿಯಾಗಿ ಕತ್ತಲಿಲ್ಲ ಮೆತ್ತಲಿಲ್ಲ
ಕುಳಿ ಬೀಳಿಸಿ ಒಂದೇ ಸಮನೆ ಬೈಸಿಕೊಂಡ
ಕೆಳಗಿನ ಅವಳಿ ಬೆಲೂನೆದೆ
ಕಾಲನ ಗಾಳಿಗದು, ನಾನೇ ಕೆತ್ತಿದ್ದು
ಮತ್ತೆ ಉಳಿಯಿಟ್ಟು ತಲೆ ಬಗ್ಗಿಸಿ
ನನ್ನ ಬೇಡಿಕೆ ಧ್ಯಾನಿಸಿ ಕೆತ್ತುತ್ತಿದ್ದ
ಮೇರು ಪರ್ವತವನ್ನೇ ಜಾರಿಸಿ
ಕೋಟಿ ನಕ್ಷತ್ರ ಶಯನ ಬೆನ್ನ ಮೇಲೆ ಹರಡಿ
ಬಾಳೆ ಕಂಬದೆರಡು ಕಾಲು ಸಿಕ್ಕಿಸಿ
ಅಲ್ಲೆಲ್ಲ ಹೊಳಪನ್ನು ಮರಗಟ್ಟಿಸಿ ಸೈ ಎಂದ
ನೀ ಸೌಂದರ್ಯ ತೊನೆದ ಖನಿಜ ಗಣಿ
ಆಕರ್ಷಣೆ ಬಲ ಸೆಳೆದು ಅಂಗಾಂಗಗಳ
ಕಂಗೊಳಿಸಿದವನಿಗೆ ನಾ ಚಿರರುಣಿ!

ಕೊನೆಗೊಮ್ಮೆ ಹಾಲೆರಚಿ ಮುಂದೆ ನಿಲ್ಲಿಸಿದ
ಖುಷಿಯಲ್ಲಪ್ಪಿಕೊಂಡು ಒಪ್ಪಿಕೊಂಡು
ಕೆನ್ನೆಗೆ ತುಟಿ ಸೋಕಿಸಿದೆ
ಮೈ ಕೈಗೆ ಜೀವ ತುಂಬಿಕೊಂಡು
ಅರಳಿ ನಿಂತೆ ನೀ ಪ್ರಕೃತಿ ಮಾಯೆ!

Wednesday, 9 May 2012

2312 ರಲ್ಲಿ.... - 1

ಅದೇ ದೀಪದ ಬುಡ್ಡಿಯಲ್ಲಿ
ಹೀಗೂ ಇತ್ತು ಲೋಕ
ನಾಕವೋ ನರಕವೋ ಅರಿಯೆ
ಎಂದು ಬರೆದಿದ್ದನ್ನು
ಮರಿ ಮಕ್ಕಳೋದುತ್ತಿದ್ದವು
ಸೀಮೆಎಣ್ಣೆಯೆಂಬ ಪದವಿಲ್ಲ
ಕಡ್ಡಿ ಕಡ್ಡಿ ಸಿಕ್ಕಿಸಿ ಮನೆ ಬೆಳಗಿದ್ದರು

ಧೊಪ್ಪನೇ ಬೆಂಗಳೂರು ಬಿದ್ದ ಕಥೆ
ಮಂಜುಗಣ್ಣಜ್ಜಿ ಹೇಳುತ್ತಿದ್ದಳು
ಜಲ ನುಂಗದ ಟಾರ್ ರಸ್ತೆ
ನೆಲ ನುಂಗಿದ ಕಟ್ಟಡಗಳವಸ್ಥೆ
ಭೂ ಒಕ್ಕುಳು ಮುಚ್ಚಿ
ನೀರು ಬಗೆದ ಬೋರ್ ವೆಲ್ ಅತ್ತು
ಜನ ಎಂದೋ ಗುಳೆ ಹೊರಟಿದ್ದರು
ಗೋಳಿಕ್ಕುವುದ ಮರೆತು ಬೆವರಿದ್ದರು

ಜಲವಿಲ್ಲದ ಪ್ರಳವೆಂದದಕ್ಕೆ ಹೆಸರು
ಕ್ಯಾಕರಿಸಿ ಬೆಂಕಿಯುಗುಳಿತ್ತು
ಭೂ ಬಸಿರು!
ಹೆತ್ತವರು ಅವರ ಹೊತ್ತವರು
ಜಗಕ್ಕೆ ವಿಷಬೀಜ ಬಿತ್ತವರು
ಮೂಡಿಸಿದ
ಪಡಿಹೆಜ್ಜೆ ಇತಿಹಾಸಕ್ಕೆ ಕೊಡಲಿ ಇಟ್ಟಿತ್ತು
ಪಳೆಯುಳಿಕೆ ಯಂತ್ರದ ಪಟವನ್ನು
ತಾಳೆಗರಿ ಮೇಲೆ ಕೆತ್ತಲಜ್ಜಿಗೆ
ಕೈ ನಡುಕ
ಮೊನ್ನೆ ಅಗೆದಾಗ ಸಿಕ್ಕ ಪ್ಲಾಸ್ಟಿಕ್ ತುಣುಕ
ನೋಡಿದೊಡನೆ ಕೆಲವರಿಗೆ ಮೈ ಪುಳಕ

ಅಷ್ಟರಲ್ಲೇ ಪಂಜಿನ ಮಾಚ ಬಂದ
ಮುಂದಿನ ಆರು ತೇದಿಯ ಮದುವೆಗೆ
ಬಂಡಿ ಕಟ್ಟಿ, ತುತ್ತು ಬುತ್ತಿ ಹೊತ್ತು
ನಡೆವ ಎತ್ತುಗಳ ಕಸುವ
ಬೆನ್ನು ತಟ್ಟಿ ಮೆಚ್ಚಿ ಹೊರಟಿದ್ದ
ಬೆಳ್ಳಂಬೆಳಗ್ಗೆ ಹೊಲ ಉಳುವಾಗ
ಆತ ಗುನುಗಿದ ಹಾಡು ಲೋಕದಚ್ಚರಿ
ಸುತ್ತಲ ಹತ್ತು ಹಳ್ಳಿಗೆ ತತ್ವಜ್ಞಾನಿ

ಅಜ್ಜಿ ಕಥೆ ಮುಂದುವರೆಸಿದಳು
ಅರಮನೆಯೊಂದು ಉರುಳಿ
ನೆರೆಮನೆಯ ಇತಿಯಾಸ ಮೂಲೆಗೆ
ಓಡೋಡಿ ಬಂದವಚಿ ಕುಳಿತದ್ದು
ಎಡಿಸನ್ ಮನೆ ಮುಂದೆ
ಕತ್ತಲು ತುಂಬಿ ತಡಕಾಡಿದ್ದು
ಐನ್ ಸ್ಟೀನ್ ಅಣು ಬೆಂಕಿಸಿದ್ದು
ಹೇಳಿ ಮುಗಿಸಿಲ್ಲ
ಮಕ್ಕಳಿಗೆ ನಿದ್ದೆಯೋ ನಿದ್ದೆ
ಸಮಯ ಏಳು ಮೀರಿತ್ತು, ಅಜ್ಜಿಗೂ ಆಶ್ಚರ್ಯ

Sunday, 6 May 2012

ಅವಳಿ ಜವಳಿ


ಹುಟ್ಟಿನೊಡನೆ
ಹುಟ್ಟುವುದು
ಸಾವು
ಆದ್ದರಿಂದ
ಒಂಟಿಯಲ್ಲ
ನಾವು ನೀವು!

ರಸ್ತೆಯಪಘಾತ
ಹೃದಯಲ್ಲದಾಘಾತ
ಮೂತ್ರದ ಕಲ್ಲು!
ಎಲ್ಲೆಂದರಲ್ಲಿ
ನಿಮ್ಮಲ್ಲಿ
ಎದೆಯಲ್ಲಿ ಬೆನ್ನಲ್ಲಿ
ಎಡವಿದ ಕಲ್ಲಿನಲ್ಲಿ
ಸೊಳ್ಳೆ ತಿಗಣೆ
ಬಸ್ ಲಾರಿ ಘೋರಿ
ನೀರು
ಗಾಜಿನ ಚೂರು
ಹೊಟ್ಟೆಯುಬ್ಬಸ
ಪಿತ್ತ ನೆತ್ತಿಯಲ್ಲಿ
ಅತ್ತಿತ್ತ ಸುಳಿದಾಡಿದರೂ
ಜೊತೆಯಲ್ಲಿ!

ಕೊನೆಗೊಂದು ದಿನ
ಆರಿಸಿ ಮನೆ ದೀಪ
ಕೈ ಕೈ ಹಿಡಿದು
ಇಬ್ಬರೂ
ಹೊರಡುವುದೇ ಸತ್ಯ
ನೆಪ ಮಾತ್ರಕ್ಕೆ
ಜೊತೆಯಾದ
ಕೆಲವು ಬೊಂಬೆಗಳಳು
ಇಬ್ಬರೂ ನೀಡಿದ ಬೆಳಕಿಗಷ್ಟೆ!
ಕಾಲ ತಳ್ಳಿದಂತೆ ಅದೂ ಮಿಥ್ಯ!

ಅವು ಒಂದೇ ತಳಿ
ಆತ್ಮೀಯ ಅವಳಿ ಜವಳಿ

Friday, 4 May 2012

ಅನಾಮಧೇಯರು....


ಎರೆ ಹುಳು ಮಣ್ಣಿಗೆ ಫಲ ಎರೆಯುತಿತ್ತು
ಉಣ್ಣುವ ಬಾಯಿ ಮರೆತು
ಉತ್ತವ ಎದೆ ಸೆಟೆಸಿ ಎತ್ತುಗಳು ತಲೆ ಸವರಿದ
ಭೂ ಎದೆ ಗಾಯ ಇನ್ನೂ ಮಾಗಿರಲಿಲ್ಲ
ಮತ್ತೆ ಉಳುಮೆ ಕೆತ್ತಿ ಅವಳುದರ
ಎರಡು ವರ್ಷದಲ್ಲಿ ಅವ ಸಿರಿವಂತ ಜಮೀನ್ದಾರ

ತಾಜ್ ಮಹಲ್ ಮೇಲೆ ಪ್ರೇಮ ರಕ್ತ
ಅಡರಿದ್ದು ಕಾಣಲಿಲ್ಲ
ಉಳಿ ಕೈ ಗಳ ಹನಿ ರಕ್ತ ತೊಟ್ಟು
ಈಗಲೂ ಹರಿಯುತ್ತಿದೆ
ಷಹಜಹಾನ್ ಮುಖ ಬೆಳಗಿಸಿ
ಬೆಳಗಿಸಿಕೊಂಡವನಿಗೆ ರುಚಿ ರಕ್ತ ಕಣ

ವಿಧಾನ ಸೌಧವನ್ನು ನಿಧಾನವಾಗಿ
ಕೆತ್ತಿದ ಕೈಗಳು ಪ್ರೇಕ್ಷಕ
ಉದ್ಘಾಟಕನೇ ನಾಯಕ ಮಾಲೀಕ
ಶರಬತ್ತು ಪೀರಿ ಹಾಯಾದವನ
ಚಪ್ಪಲಿಯೊತ್ತಡಕ್ಕೆ ಮುರುಟು ನಿಂಬೆ
ಸಕ್ಕರೆ ನೀಡಿದ ಕಬ್ಬಿನ ಮೈಗೆ ಲೋಕ ಬೆಂಕಿ

ಜಗ ಕ್ಯಾಮರಾದ ಮರೆತ ಗಿಂಡಿಯಲ್ಲಿ
ಕೋಟಿ ಕೋಟಿ ಅನಾಮಧೇಯರು
ನಿಂತಿದ್ದಾರೆ ಹನಿಸಿ ಬೆವರು
ನುಣುಪು ರಸ್ತೆ ಮೇಲೆ ಮಲಗಿ
ಕಾಂಕ್ರೀಟ್ ನಾಡ ಮೇಲೆಲ್ಲಾ ತಮ್ಮನ್ನೇ ತೂಗಿ
ವೈಭಕ್ಕೆ ಬಣ್ಣ ಬಳಿದಿದ್ದಾರೆ ಚೆಲ್ಲಿ ಚಿತ್ತಾರ
ಪಾತಾಳದಾಳದಲ್ಲಿ ಹರಡಿ ಹಿರಿಮೆ ಚೀತ್ಕಾರ

Tuesday, 1 May 2012

ಹುತ್ತ...


ನಿನ್ನ ಕಟ್ಟಿದ್ದು ಗೆದ್ದಲು
ಆದರೂ ನಿನಗೆ ಸೋಲು
ರಂಧ್ರ ಹೊತ್ತ ಹುತ್ತ
ನಿನ್ನ ಸುತ್ತ ಹಾವುಗಳ ಚಿತ್ತ!

ಪರಿ ಪರಿ ನಾಗರ
ಪರದಾಡುತ ಸೇರಿಕೊಂಡಿವೆ ಬಿಲ
ರಂಧ್ರಗಳಲ್ಲಿಡು ಲಾಂದ್ರ
ಪರಿಷ್ಕರಿಸಿ ಬಿಡು ಸಕಲ!

ರಂಧ್ರ ಹೊತ್ತ ಹುತ್ತವೆ
ರಂಧ್ರಗಳೇ ನಿನ್ನ ಬಲಹೀನತೆ
ಎಚ್ಚರಿಕೆಯಿರಲಿ ಹಾವುಗಳೆಡೆ
ಇಟ್ಟುಕೋ ಬದುಕಿಗೆ ಒಂದು ತಡೆ!

ಆಣತಿ


ಮಲ್ಲಿಗೆ ಮೈ ಮೇಲೆ ನೂರು ಗಾಯ
ನೆರಳಿಗೆ ರಕ್ತ ಹೊದಿಕೆ
ಮುಡಿದವಳ ಬಿನ್ನಾಣ ಬೀಗಿ ತೂಗಿ
ಗಿಡದಡಿಮುಡಿಗೆ ಉರಿ ತುರಿಕೆ!

ಸೂರ್ಯನೊಡನೆ ಕೆಚ್ಚಲ ಹಾಲು ಕರೆದರು
ಊಟಕ್ಕೆ ಕೆನೆ ಮೊಸರು
ಬಗೆ ಬಗೆ ಸೊಪ್ಪಿನ ಸಾರು
ಗದ್ದೆಯಲ್ಲಿ ಗಿಡ ಕೊರಳಳು ಜೋರು!

ಬೀಸಾಡಿದ್ದ ಬಿರ್ಯಾನಿ ಪೊಟ್ಟಣದಲ್ಲಿ
ಅಳುತ್ತಿತ್ತು ಎರಡು ಕೋಳಿ ಕಾಲು
ಅದೊಂಟಿಯಲ್ಲ, ತಲೆ ಸವರಿ ಕುಳಿತಿವೆ
ಪ್ರತಿಭಟನೆಗೆ ನೂರು ಅಕ್ಕಿ ಕಾಳು!

ಹಸಿವ ಹಾವಿನ ಬಸಿರಿಗೆ ಸುರಿದಿದ್ದ
ಬಂಡಿ ಬಾಡು, ತಡಿಯಲ್ಲಿ ರುಚಿಗೆ ತತ್ತಿಗರ್ಭ
ಜಗದಿ ಆತನಿಗೆ ಶ್ರೇಷ್ಠ ತಾಯಂತೆ, ಮರೆತುಬಿಟ್ಟ
ತತ್ತಿಗರ್ಭವೂ ಮಗು ಹೆರುವ ತಾಯಗರ್ಭ!

ವಾದಕ್ಕೊಂದು ಪ್ರತಿವಾದ ಕೂಡಿಸಿಲ್ಲ
ಒಂದು ಕೊಂದು ಮತ್ತೊಂದು ಹೋರಾಟ ನಟನೆ
ಹುಲ್ಲು ತಿಂದು ಕೊಬ್ಬಿದ ಜಿಂಕೆ ಕೊಂದು
ಹಸಿವ ನೀಗಿದ ಹುಲಿ ಚಿರತೆಯದು ನೈಜ ಘಟನೆ!

ಕಹಿ ಒಗ್ಗದ ನಾಲಗೆಗೆ ಸಿಹಿ ಹೂರಣ
ತಿನ್ನುವುದೇ ಪಾಪವಾದರೆ ಅವನ ಜಗದಲ್ಲಿ
ಉಪ್ಪು ಖಾರ ನೀರುಳ್ಳಿ ಮೆಣಸು ಬೆಳ್ಳುಳ್ಳಿ
ಶುಚಿ ರುಚಿ ಇಡಬಾರದಾಗಿತ್ತು ನಾಲಗೆಯಲ್ಲಿ!

ಅವನನ್ನು ನಂಬಿದ್ದು ಸಹ್ಯವಾದರೆ
ಅವನಾಣತಿ ಅಲ್ಲಲ್ಲಿ ಎಲ್ಲೆಲ್ಲಿ ಉಸಿರಿದ್ದು ಸತ್ಯ!