ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Friday 22 June 2012

ದಾರಗಳು…

ಈ ಜಗಮಂಡಲದಾವೃತವನ್ನಾವರಿಸಿವೆ
ನೂರಾರು ದಾರಗಳು
ಗ್ರಹ ಗ್ರಹ ನಿಗ್ರಹಿಸಿದ ನೂಲು
ನಡುವೆ ನಾದದೆರಕ ಕೃಷ್ಣ ಕೊಳಲು
ಸೂರ್ಯನೆದೆಯುರಿಗೆ ಕರಗದ ದಾರ
ಹಿಡಿದೆಳೆದು ತಿರುಗಿ ಬುಗುರಿಸಿದೆ ನವಗ್ರಹ ದ್ವಾರ

ಕ್ಷೀರಪಥವೆಂಬ ನಾಣ್ಯದಗಲ ರಥದಲ್ಲಿ
ಹರಡಿದ ತಾರಾ ಹರಳು
ಒಂದಕ್ಕೊಂದು ಬೆಸೆದ ಬೆಳಕ ದಾರ
ನೂಲು ನೂಲು ನುಲಿದು ಕತ್ತರಿಸದಿರಲಂಟು

ನಾಣ್ಯದೊಳಿಳೆ ಬಿಂದಿಗೆಯೊಳೂರ
ಬೀದಿ ಬೀದಿಗಳಲುಂಡೆ ದಾರ
ಎಳೆ ಎಳೆ ಬಿಳಲಾಗಿ ಬೀಳುತ್ತಿದೆ
ದ್ವೇಷದೇಟಿನ ಭಾರ!
ಮೈಮನಗಳರ್ಥೈಸುವಷ್ಟು ಪಕ್ವತೀರ
ಶಿರದೂರ್ಧ್ವದ ಜೀವತಾವಿಗೆ
ಪಂಚೇಂದ್ರಿಯಗಳ ಬಿಗಿದ ಮೆದುಳ ದಾರ
ಕಾಮ ಪ್ರೇಮದ ನಡುವಪಾರ್ಥಗೊಂಡು ದೂರ!

ಗೂಟದಾರ ಜಗದೊಗಟ ತೂಗೆಳೆದಿವೆ
ತೂಗುತ್ತಲೇ ಇವೆ ಬೆರಳೆಳೆದು
ಲೋಕದೋಟ ನರಕ ಸನಿಹ
ಗಟ್ಟಿಯಾಗುತ್ತಿವೆ, ತನ್ನಿರುವಿಕೆ ಮೆರೆಯುವಿಕೆ

ಮಂಡಿ ಮೂಳೆ ತೊಡೆಗೆ ಬೆಸೆದ ದಾರ
ಒಳಕಲ್ಲಂಗ ಘರ್ಷಣೆಗೆ
ಜಗತೂಗೋ ಜೀವೋಗಮ ಸೂಕ್ಷ್ಮ ದಾರ
ಕಣ ಕಣ ನಡುವೆ ಸೂಜಿ ಮೊನೆಯಂಧ ದಾರ
ದಾರದೊಳ ಶ್ರಮ ಜಗ ತೂಗೋ ಘನ ವಿಸ್ಮಯ!

Thursday 21 June 2012

ಮೋಡದ ಮೇಲೆ…

ಈ ಬಿಸಿ ಮೋಡದ ಮೇಲೆ ಕೂರಲೆನಗಾಗದು
ಹೇ ಜಗ ಕಾಯ್ವ ಕಾವಲುಗಾರ ಭಾವವೇ
ಬೆಳ್ಳಿಯಂಚಿದ್ದರು ಕಪ್ಪು ಕಲ್ಲದು
ಚಿನ್ನದ ಕುಡಿಕೆಯೊಳಗಿನ ವಿಷದಮಲು
ಎಂದೊಡನೆ ಅಪ್ಪ ತಲೆ ಬಡಿದ ಕ್ಷೀರಪಥದಿಂದ

ಕಪ್ಪು ತಪ್ಪು ಬಿಳಿ ಸರಿ ಎಂದರುಹಿ ಗೆರೆ ಎಳೆದ್ದಿಲ್ಲ
ನೀ ಮಾಡಿಕೊಂಡ ಮನೆ ಕೋಣೆ ಮಾಲದು
ಒಮ್ಮೆ ವ್ಯೋಮಾಕಾಶ ದಿಟ್ಟಿಸು ಮರೆತು ಬಿಸಿಯ
ನೋಡಲ್ಲಿ ಅರಿಯದರಿವಿನ ವಿಶಿಷ್ಟ ಕಸಿಯ
ಒಂದರೊಳೊಂದು ಬೆಸೆದ ಹೂದಳ ಬೆರಗ
ಪೋಣಿಸಿಕೊಂಡ ಸೃಷ್ಟಿ ಸಮತೋಲನ ಪುಷ್ಠಿ
ಎಂದುವಾಚ ಅವನದಶರೀರವಾಣಿ ಕೋಟಿ

ಓಹೋ ಕಾಣುತ್ತಿದೆ ಮಾವಿನ ಮೇಲಿನ ಬೇವು
ಆಲದ ಮೇಲಿನ ಬೇಲ, ವಿನೋದ ಲೀಲಾ
ತಪ್ಪೆಂದು ತಿಳಿಯೆ ನಿನ್ನಚ್ಚರಿಯ
ನೀ ಸಮತೆ ಸಮತೋಲನ ಮೂಡಿಸೋ ಪರಿಯ
ಬಣ್ಣ ಬಣ್ಣ ಸೀಮೆಸುಣ್ಣ ಸಿಕ್ಕಿದ್ದೆ ವಕ್ರಗಣ್ಣರು
ಎಳೆದಿದ್ದಾರೆ ಗೆರೆ ಇಷ್ಟದಂತನಿಷ್ಟವಾಗಿ
ಅಗೆದು ಹಲಗುಂಡಿಯ ಯಾರಿಗೋ ಶಿರಬಾಗಿ

ದಾರಕ್ಕೆನ್ನಮ್ಮ ಮಲ್ಲಿಗೆ ಪೋಣಿಸಿ ಗಂಟು ಎಳೆದಂತೆ
ಒಂದರ ಹಿಂದೊಂದು ನಡೆದು ಕರ ಬಿಗಿದು
ಬಿಗಿದುಕೊಂಡಿವೆ ಮಚ್ಚಿನೇಟಿಗೆ ರಕ್ತ ಸುರಿದು
ಅಂಡಾಣುವಿನ ವೀರ್ಯ ಸೆಳೆತಕ್ಕೆ ಮೊಳೆತ
ಬೇವು ಮೊಳೆಸಿದ ವೃಕ್ಷವುದುರಿಸಿದ ಬೀಜ ಬಸುರಿ
ಈ ಬೀಜದಿಂಬೀಜದಿಂ ಮರ ಮತ್ತೆ ಬೀಜ
ನಿನ್ನಿರುವಿಕೆಗಿದು ಒಗಟು ಬರೀ ಗೊಂದಲ ಸಹಜ

ಈ ಅಖಂಡ ಬ್ರಹ್ಮಾಂಡ ಬಿಂದಿಗೆಯಲ್ಲಿನ
ಬಿಂದು ಸಹಜ ಜಲಧಿಯುಪ್ಪು
ಕಬ್ಬಿನ ಸಿಹಿ ಬೇವಿನ ಕಹಿ ಗೋಚರ
ಸಪ್ಪೆಯೋ ವಿರುದ್ಧಾರ್ಥಕವಷ್ಟೇ
ತುಂಬಿಕೊಂಡದ್ದಗೋಚರ ನಾಲಿಗೆ ಮೇಲೆಚ್ಚರ!

ಗೋಚರಗೋಚರಗಳ ನಡುವೆ ಮಾಯಾ ತಕ್ಕಡಿ
ತಕ್ಕಡಿ ಹಿಡಿದಾಕೆಗೆ ಕಣ್ಕಪ್ಪು ಕೌಪೀನ
ಗೆರೆ ಎಳೆದ ಬ್ರಹ್ಮಾಂಡದೊಳ ತೃಣಕಣ ಮಾನವ
ತೃಣವೋ ಕಣವೋ ತಿಳಿಯೆ
ಅವನೊಳಗೂ ಬ್ರಹ್ಮಾಂಡ, ತಿರುಗೋ ಯಂತ್ರಗಳು
ಅಲ್ಲಲ್ಲಿ ಕೀಲಿ ತಿರುಗಲು ಮೂಡಿದೆಣ್ಣೆ ಸಲೀಸಿಗೆ

ಭಾಸ್ಕರನೊಡನೆ ಬೆಸೆದ ಈ ಬೆರಳೆಣಿಕೆ ಗ್ರಹಗಳೆ
ಬ್ರಹ್ಮಾಂಡದಖಂಡ ದಿಗಂತಕ್ಕೆ ಕೇವಲ ಬಿಂದು
ಬಿಂದುಗಳೊಳ ಬಿಂದುಗಳು ನೂರು ಮತ್ತೆ ಹಲ ಬಿಂದು
ಎಳೆದಷ್ಟು ಹರಡಿದ ಲೋಕ ನಾಕ ನರಕ
ಅಂತ್ಯವಿಲ್ಲದನಂತ ದಿಗಂತವಚ್ಚರಿ ಮೂಡಿಸಿ
ನೀ ಅಲ್ಲೆಲ್ಲೋ ಒಂದು ಕಣ ಕೊರೆದೆ ತುಂಬಿ ಭಾವ
ಎದೆ ನಿಗುರಿಸಿದ ಗಾಳಿ ಸೆಳೆದ ಬಿಂದುವಿನೊಳ ಜೀವ
ನಿನಗೇ ಗೋಡೆ ಕಟ್ಟಿ ನೆಗೆದ ಜೀವದ ಹೆಸರೋ ಮಾನವ

ಆ ಜೀವದಾವೇಗದಲ್ಲಿದೆ ನಿಜ ಪ್ರಕೃತಿ ಸಂಸ್ಕರಣೆ
ಅರಿಯದೆ ಮೂಡಿರಬಹುದೇನೋ ನೂರು ಗೆರೆ ವಿಂಗಡಣೆ
ನಿನ್ನ ಸಮತೋಲನ ನಿಲುಕದೆ ಅಸಮತೋಲನ ನರ್ತನ
ಈ ಮೋಡವೇ ತಂಪು ಜಗುಲಿಯಾಗಲಿ ಬೆಳ್ಳಿಯಂಚು ಲೇಖನಿ
ಎದೆ ಹೊತ್ತಿಗೆಯಲ್ಲಿ ಇವೆಲ್ಲಾ ಬರೆದು ನಲಿಸಲಿ ನನ್ನೀ ಕರಗಳು
ಅಳಿಸಿ ಹೋಗಲಿ ವ್ಯೋಮಾಕಾಶ ಹರಡಿದ ಕೋಟಿ ಗೆರೆಗಳು…!

Tuesday 19 June 2012

ಅಮ್ಮ ಮತ್ತೆ ನಕ್ಕಳು....


ಬರ್ರೆಂದು ಮನೆ ತಿರುಗುತ್ತಿತ್ತು
ಆ ಏರೋಪ್ಲೇನ್ ಚಿಟ್ಟೆ
ಬಡಿಯಲೆಂದೆ ಇರುವುದು ರೆಕ್ಕೆ
ಹಾರಾಡಲಿ ಅದರಾಸೆ ಅದಕ್ಕೆ

ಈ ಕಿವಿಗಿಳಿಬಿಡಬೇಕಾಗಿತ್ತು
ಗಟ್ಟಿ ಚರ್ಮಪರದೆಯೊಂದ
ನಿರ್ಮಾಣ ದೋಷವಾಗಿದೆ ಗರ್ಭದಲ್ಲಿ
ಕಿವಿಯದೋ ರೆಕ್ಕೆಯದೋ ದ್ವಂದ್ವ!

ಬಡಿದೋಡಿಸಲಮ್ಮ ಬಡಿಗೆ ತಂದಳು
ಮುಂದೆ ನಿಂತ
ಮಗನ ಮೊಗದಲೊಂದು
ಜೀವ ಇಣುಕುತ್ತಿತ್ತು
ತೂರಿದಳು ಬಡಿಗೆ ಮರುಗಿ ಚಿಟ್ಟೆಗೆ
ಢಣ ಢಣವೆಂದ ಕಟ್ಟಿಗೆಯಲ್ಲಿ ಒಣಜೀವ ಬೇಗೆ!

ಗೋಡೆ ನಡುವೆ ಬಾಡಿ ಕುಳಿತ ಚಿಟ್ಟೆ
ಅಲ್ಲಿ ಹೊಂಚಾಕಿದ ಹಲ್ಲಿ
ನುಂಗಲಂಗಲಾಚುವ ಚಣಕ್ಕೆ
ಹಲ್ಲಿ ಬಡಿಯಲಮ್ಮನ ಪೊರಕೆ

ಪೊರಕೆ ಬಡಿದರೊಂದು ಸಾವು
ಬಿಟ್ಟರೊಂದು ಸಾವು
ಅಮ್ಮ ನಕ್ಕಳು
ಅಷ್ಟಕ್ಕೆ ಹಲ್ಲಿ ಚಿಟ್ಟೆ ನುಂಗಿತ್ತು
ಅಮ್ಮ ಮತ್ತೆ ನಕ್ಕಳು
ನಾವು ಲೋಕ ನಿಯಮ ಮಕ್ಕಳು!

Friday 15 June 2012

ಈ ರಾತ್ರಿಯಲ್ಲಿ... (ರಾತ್ರಿ ಕವಿತೆ... )


ಈ ಸರಿರಾತ್ರಿಯ ನೀರವತೆಯ ಹರಿತಕ್ಕೆ
ದಿಗಂತದಲ್ಲಿ ನಿನ್ನ ನೆನಪ ಜಾತ್ರೆ
ಚಂದ್ರ ಸುರಿಸಿದ ಬಿಸಿ
ಬೆಳದಿಂಗಳೋಕುಳಿಗೂ ನೆತ್ತರ ವರ್ಣ

ಆ ಮೋಡದಂಚಲ್ಲಿ ಕೈ ಚಾಚಿದ
ನಿನ್ನ ವಿರೂಪ ತಾಟಕಿ ರೂಪ
ಬೊಗಳಿದ ನಾಯಿಗಳೆಳೆದ ಗೆರೆಗೆ
ಬುವಿಯಲ್ಲಿ ರಕ್ತದಭ್ಯಂಜನ ಶಾಪ

ಮೂಢಣದ ತಂಗಾಳಿ ಲಕೋಟೆ
ಹೊತ್ತಿದೆ ನಿನ್ನ ಹುಸಿ ಮಾತು
ಕೇಳದ ಹಾಳು ಹೃದಯ
ಅರಿಯದೇ ಬಡಿಯುತ್ತದೆ ಸೋತು

ಅಂದು ಆಯ್ದುಕೊಂಡ ಇದೇ ತಾರೆಗಳು
ನಿನ್ನ ಮನೆ ರಾಕ್ಷಸ
ಗೋಡೆ ತುಕ್ಕು ಮೊಳೆಯಲ್ಲಿ
ಹೊಸ್ತಿಲಿಗೆ ಚಂದ್ರಲೇಪನ ಕಸಬರಿಗೆ ಚುಂಬನ

ಬಡಿದೆಚ್ಚರಿಸಿದ ಭಾವ ಕೂಡಿ
ಈ ಮೌನದಲ್ಲಿ ಮನಬಿಸಿ
ನಿನಗೋ ಅಲ್ಲಾರದೋ ತೆಕ್ಕೆಯಲ್ಲಿ
ಬೆವರ ಹನಿಸುವ ಮೈ ಬಿಸಿ...

Wednesday 13 June 2012

ದೇವರು ಮತ್ತು ಇತರೆ ಕಥೆಗಳು....


ದೇವರು...

ಆತ: "ಸ್ವಾಮೀಜಿ, ದೇವರಿದ್ದಾನೆಯೇ?"
ಸ್ವಾಮೀಜಿ: " ಈ ಪ್ರಶ್ನೆ ಕೇಳುತ್ತಿರುವ ನೀನಾರು?"

ಪ್ರೀತಿ...

ಆತನಿಗೆ ಮಗಳೆಂದರೆ ಪ್ರಾಣ. ಯಾವನೋ ತನ್ನ ಮಗಳನ್ನು ಪ್ರೀತಿಸಿದ್ದಾನೆ ಎಂದು ತಿಳಿದಾಕ್ಷಣ ಹುಡುಕಿಕೊಂಡು ಹೋಗಿ ಕೆನ್ನೆ ಮೂತಿಗೆ ನಾಲ್ಕು ಭಾರಿಸಿ ಬಂದಿದ್ದ. ಪ್ರೀತಿ ಮಾಡಿದ ತಪ್ಪಿಗೋ ಏನೋ ಒಂದು ಕಣ್ಣು ಊದಿಕೊಂಡು ಮೂಗಿನಲ್ಲಿ ರಕ್ತ ಸೋರುತ್ತಿತ್ತು.
ಮನೆಗೆ ಬಂದವನೇ ಆಶ್ಚರ್ಯಗೊಂಡ.
ತನ್ನ ಮಗಳ ಎರಡೂ ಕಣ್ಣುಗಳು ಊದಿಕೊಂಡಿದ್ದವು...

ಬಟ್ಟೆ...

ಆಕೆ ಮೈ ಮಾಟ ಕಾಣುವಂತೆ ಬಿಗಿಯಾದ ಉಡುಪು ತೊಟ್ಟಿದ್ದಳು. ಒಬ್ಬಾತ ಕಣ್ಣರಳಿಸಿ ಅವಳನ್ನೇ ನೋಡುತ್ತಿದ್ದ.
ಆಕೆ: "ನಿನಗೆ ಅಕ್ಕ ತಂಗಿಯರಿಲ್ಲವೇ?"
ಆತ: "ನಿನಗೆ ಅಣ್ಣ ತಮ್ಮಂದಿರಿಲ್ಲವೇ?"

ಸಂದೇಹ

ನಮ್ಮ ಕುಲ ದೇವರು ವೆಂಕಟೇಶ್ವರ ಮತ್ತು ನಿನ್ನಪ್ಪನ ಕುಲದೇವರು ಮಹದೇಶ್ವರ. ವೆಂಕಟೇಶ್ವರನ ಕುಲದಿಂದ ಮಹದೇಶ್ವರ ಕುಲದವರು ಹೆಣ್ಣು ತರಬಾರದು, ನಿಮ್ಮಪ್ಪನ ಕಡೆಯವರು ತಿಳಿಯದೇ ಮಾಡಿದ ತಪ್ಪಿದು ಎಂದು ಅಮ್ಮ ಹೇಳುತ್ತಿದ್ದಾಗ ಮಗ ಕೇಳಿದ
"ಹಾಗಾದರೆ ನಾನು ಹುಟ್ಟಿದ್ದು ಯಾಕಮ್ಮ?"

ಹಾಲು...

ಮಗು ಅಪೌಷ್ಠಿಕತೆಯಿಂದ ನರಳುತ್ತಿದೆ. ಪ್ರತಿ ಮುಂಜಾನೆ ಒಂದು ಲೋಟ ಹಾಲು ಕುಡಿಸಿ, ಹಣ್ಣು ತರಕಾರಿ ತಿನ್ನಿಸಿ ಎಂದು ವೈದ್ಯರು ಸಲಹೆಯಿತ್ತರು.
ತುತ್ತು ಅನ್ನಕ್ಕೆ ಬಿಡಿಗಾಸಿಲ್ಲದ ಆ ತಾಯಿ ಯೋಚಿಸುತ್ತ ನಡೆಯುವಾಗ ಆ ಮಗು "ಅಮ್ಮ ಅಮ್ಮ ಅಲ್ಲಿ ನೋಡಮ್ಮ ಹಾಲು" ಎಂದು ಕೂಗಿಕೊಂಡಿತು.
ಮನೆ ಮುಂದಿನ ಹುತ್ತಕ್ಕೆ ಚೊಂಬುಗಟ್ಟಲೆ ಹಾಲು ಸುರಿದಿದ್ದರು.
ಆ ಹಾವು ಹಾಲು ಕುಡಿದು ಸತ್ತಿತು
ಆ ಮಗು ಹಾಲು ಕುಡಿಯದೇ ಸತ್ತಿತು.

ಚಿಲ್ಲರೆ...

ಅಸಹಾಯಕನೊಬ್ಬ ಭಿಕ್ಷೆ ಕೇಳಿದಾಗ ಚಿಲ್ಲರೆ ಇಲ್ಲ ಎಂದುಬಿಟ್ಟ.
ದೇವಸ್ಥಾನಕ್ಕೆ 501 ರೂ ಹಾಕಬೇಕಾಗಿ ಬಂದಾಗ, ಒಂದು ರೂ ಚಿಲ್ಲರೆಯಿಲ್ಲದೆ ಅದೇ ಭಿಕ್ಷುಕನ ಬಳಿ ಬಂದು ಚಿಲ್ಲರೆಗೆ ಕೈಯೊಡ್ಡಿದ.
ಒಬ್ಬ ಬೇಡಿ ಭಿಕ್ಷುಕ ಮತ್ತೊಬ್ಬ ನೀಡಿ ಭಿಕ್ಷುಕ...!

Monday 11 June 2012

ಮೂರು ಗಿಡಗಳು...


ಸರಿರಾತ್ರಿ ಹನ್ನೆರಡರ
ನೀರವತೆಯಲ್ಲಿ
ಜಗ ಮೊಗೆದ ತಿಮಿರಲ್ಲಿ
ಆ ಗಿಡ್ಡ ಗಿಡದ್ದೇ ಅಳು
ಉಳಿದೆರಡು ಗಿಡಗಳಿಗೆ
ಚಂದ್ರ ಸುರಿಸಿದ ಬೆಳದಿಂಗಳು

ಎರಡಂತಸ್ತು ಮನೆ ಮಾಳಿಗೆಯ
ಚುಂಬಿಸಿತ್ತೊಂದು
ನನ್ನೆತ್ತರ ಕೈ ಎತ್ತಿದರೆ
ಮತ್ತೊಂದರ ತುದಿ
ಸೋಕುತ್ತದೆ
ನನ್ನ ಮಗುವಿನ ತುಟಿ
ಮೂರನೆಯದೋ
ಕೇವಲ ಅರ್ಧ ಅಡಿ

ಸುರಿದೆ ದಿನಕ್ಕೆರಡು
ಕೊಡ ನೀರ
ರಸ ಹೀರಿ
ಉಬ್ಬಲು ಗೊಬ್ಬರ
ಮೋಡ ಒಡೆಸಿ
ಕಟ್ಟೆ ಕಟ್ಟಿ
ಹಾದಿಬದಿ ರಸನೀರೆಲ್ಲ
ಹರಿಸಿದೆ
ಚಿಕ್ಕ ಗಿಡದಡಿಗೆ
ಕೊಡಕ್ಕೊಂದೊಂದು
ದಿನಕ್ಕೆರಡೆರಡಿಂಚು
ಬೆಳೆದರಳಿ ಹರಡಿತು ಮಿಂಚು

ಹೆಗಲೇರಿಸಿ ಬೆಳೆದ ಗಿಡ
ಹೆಗಲಪಟ್ಟಿ
ಅಗಲಿಸಿ ಮೆರೆದಿದೆ
ಹಸಿರೆಲೆ ಹೊದ್ದು
ಹೂಹಣ್ಣು ತೊನೆದು
ತೂಗಿ ಬಾಗಿ ನೆಗೆದು

ನಿನ್ನೆ ಬೆಳೆದು ನಿಂತ
ಆ ಮುದ್ದು ಗಿಡಕ್ಕೆ
ಮುತ್ತನಿಟ್ಟು ತಲೆ
ನೇವರಿಸುವಾಗ
ಯಾರೋ ಕಾಲೆಳೆದಂತೆ
ಬದಿಗೆ ಬಂದು ಬಾಗಿ ಬೇಸರಗೊಂಡೆ

ಗಿಡ್ಡ ಗಿಡವ ಬೆಳೆಸುವವಸರದಲ್ಲಿ
ಮಧ್ಯದಿ ನಿಂತ ಗಿಡವ
ಚಪ್ಪಲಿಯಡಿಗೆ
ಮೆಟ್ಟಿಬಿಟ್ಟಿದ್ದೆ ಪ್ರತಿದಿನ!
ನೀರೆರೆಯೋಣವೆಂದರೆ ಈಗ
ದೇಶದಲ್ಲೆಲ್ಲಾ
ಬಿರುಗಾಳಿ ಪ್ರತಿದಿನ!

Friday 8 June 2012

ಎರಡು ಪ್ರಶ್ನೆ ಮತ್ತೆ ಇತರೆ ಕಥೆಗಳು....


ಎರಡು ಪ್ರಶ್ನೆ....

ಆತ ಆಶ್ರಮಕ್ಕೆ ಬಂದು ಸ್ವಾಮೀಜಿಗೆ ಗದರಿಸಿದ: "ನಾನ್ಯಾರು ಗೊತ್ತೇ?"
ಸ್ವಾಮೀಜಿ ಶಾಂತಚಿತ್ತರಾಗಿ ಹೇಳಿದರು: ಗೊತ್ತಿಲ್ಲ, ಅದಿರಲಿ ನಿನಗೇನಾದರು ಗೊತ್ತೆ "ನಾನಾರೆಂದು?"
--

ಹೆಸರು...

ಅವರಿಬ್ಬರೂ ಓಡಿಹೋಗಿ ಮದುವೆಯಾದರು. ಬೇರೆ ಬೇರೆ ಜಾತಿಯಾದುದರಿಂದ ಹುಡುಗಿಯನ್ನು ಹೆತ್ತವರೇ ಕೊಂದುಬಿಟ್ಟರು. ಮಾಧ್ಯಮದವರು ಅದಕ್ಕೆ ನೀಡಿದ ಹೆಸರು "ಮರ್ಯಾದಾ ಹತ್ಯಾ!"
--

ಸಹಪಂಕ್ತಿ...

ಇಬ್ಬರ ನಡುವೆ ವಾದ ವಿವಾದ ನಡೆಯುತ್ತಿತ್ತು. ಒಬ್ಬ ಸಹಪಂಕ್ತಿ ಭೋಜನ ಸರಿ ಎಂದ ಮತ್ತೊಬ್ಬ ತಪ್ಪು ಎಂದ. ಇಬ್ಬರು ಕುಳಿತಿದ್ದದ್ದು ಮಾತ್ರ "ಸಹಪಂಕ್ತಿ ಕೇಶ ಮುಂಡನಕ್ಕೆ!"
ಇವರಿಗಿಂತ ಮುಂಚೆ ಹತ್ತಾರು ಜನಕ್ಕೆ ಒಂದೇ ಕತ್ತರಿ ಬಾಚಣಿಗೆ ಉಪಯೋಗಿಸಿದ್ದ ಕ್ಷೌರಿಕ ಮಾತ್ರ ನಗುತ್ತಿದ್ದ. ಅಷ್ಟರಲ್ಲಿ ಮುಂದಿನ ಹೋಟೇಲಿನಲ್ಲಿ ಎಲ್ಲರಿಗೂ ಸೇರಿ ನಾಲ್ಕು ಲೋಟದಲ್ಲಿ ಟೀ ತರಿಸಲಾಯಿತು.
--

ಭಾರತರತ್ನ...

ತನ್ನ ದೇಶದ ಹೆಮ್ಮೆಯ ಕ್ರಿಕ್ಕೆಟ್ಟಿಗನೊಬ್ಬನಿಗೆ "ಭಾರತ ರತ್ನ" ಪ್ರಶಸ್ತಿ ನೀಡಲಾಯಿತು. ಆತ ಕೋಕ್ ಕುಡಿಯುತ್ತಾ ಜಾಹಿರಾತಿನಲ್ಲಿ ಕಾಣಿಸಿಕೊಂಡ ತಕ್ಷಣವೇ ಅಪ್ಪ ಮುಖ ಅರಳಿಸಿ ನುಡಿದ "ಈತನೇ ಭಾರತರತ್ನ"
ಮಗು ನುಡಿಯಿತು: "ಅಪ್ಪ ಕೋಕಿನಲ್ಲಿ ವಿಷವಿದೆಯಂತೆ"
--
ಧರ್ಮ...

ಆ ಸಂತನನ್ನು ಒಬ್ಬಾತ ಕೇಳಿದ "ಧರ್ಮವೆಂದರೇನು ಗುರುಗಳೇ?"
ಪಕ್ಕದಲ್ಲಿರುವ ಮಗು ಮತ್ತೊಂದು ಮಗುವಿಗೆ ಹೇಳುತ್ತಿತ್ತು - "ನಮ್ಮ ಮನೆಯಲ್ಲಿ ಒಟ್ಟು 50 ನಲ್ಲಿಗಳಿವೆ, ಎಲ್ಲದಕ್ಕೂ ನೀರು ಬರುವುದು ಮಾತ್ರ ಮೇಲಿನ ಟ್ಯಾಂಕ್ ನಿಂದ"
ಸಂತ ನಕ್ಕು ನುಡಿದ - "ಅದೇ ಶ್ರೇಷ್ಟ ಉತ್ತರ, ಯೋಚಿಸು"
--
ಅವರವರ ಭಾವ...

ಮನೆಯವರ ವಿರೋಧದಿಂದ ಬೇಸರವಾಗಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡರು
ಹುಡುಗಿಯ ಕಡೆಯವರು: ಪಾಪಿ ಹುಡುಗ, ನನ್ನ ಮಗಳ ಜೀವ ತಿಂದುಕೊಂಡ
ಹುಡುಗನ ಕಡೆಯವರು: ದರಿದ್ರ ಹುಡುಗಿ, ನನ್ನ ಮಗನ ಜೀವ ನುಂಗಿಕೊಂಡಳು
ಅಲ್ಲಿದ್ದ ಒಂದು ಮಗು: ಪಾಪಿ ಮುಂಡೆ ಮಕ್ಕಳು, ಎರಡು ಜೀವ ತಿಂದುಬಿಟ್ಟರು!
--

ಜ್ಯೋತಿಷಿ...

ಈ ಪೂಜೆ ಮಾಡಿ ನಿಮಗೆ ತಿಂಗಳಲ್ಲಿಯೇ ಕೋಟಿ ಕೋಟಿ ಲಾಭ ಬರುವಂತೆ ಮಾಡಿಕೊಡುತ್ತೇನೆ ಎಂದು ಆ ಜ್ಯೋತಿಷಿ ಹೇಳಿದ
ಆತ: ಮತ್ತೆ ಪೂಜೆ ನಡೆಯಲಿ ಸ್ವಾಮಿ..
ಜ್ಯೋತಿಷಿ: ಪೂಜೆಯ ಖರ್ಚು 500 ಆಗುತ್ತದೆ...