ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Monday 8 April 2013

ಮನಸ್ಸು (ಕಥೆ) (ಈ ವಾರದ ಕರ್ಮವೀರದಲ್ಲಿದೆ, ಏಪ್ರಿಲ್ 14 - ಏಪ್ರಿಲ್ 20, 2013)

ಬಲವಂತಕ್ಕೆ ಹಾಸಿಗೆಯ ಮೇಲೆ ಬಂದು ಕುಳಿತಿದ್ದಳು. ಅವಳಿಗೆ ಹಣ್ಣುಗಳ ಪಕ್ಕ ಇಟ್ಟಿದ್ದ ಚಾಕುವಿನ ಮೇಲೆ ಕಣ್ಣು. ಆತನಿಗೆ ಹಾಲು, ಹಣ್ಣು ಮತ್ತು ಹೆಣ್ಣಿನ ಮೇಲೆ ಕಣ್ಣು. ಆತ ಹತ್ತಿರ ಬಂದವನೇ ಆಕೆಯ ಸೀರೆ ಸೆರಗ ಮೇಲೆ ಕೈ ಇಟ್ಟ. ಅಲ್ಲೇನೂ ಬಲವಂತವಿರಲಿಲ್ಲ. ಆಕೆಯ ಮೊಗದಲ್ಲಿ ನಾಚಿಕೆಯಿಲ್ಲದಿದ್ದರೂ ಆತನಲ್ಲಿ ತುಸು ನಾಚಿಕೆಯಿತ್ತು. ಆತನಿಗದು ಮೊದಲ ಮಿಲನರಾತ್ರಿ, ಆದರೆ ಆಕೆಗಲ್ಲ. ಸೀರೆ ಸೆರಗು ಹಿಡಿದು ಹತ್ತಿರ ಕುಳಿತವನೇ ತೋಳಿಗೆ ತೋಳು ತಾಗಿಸಿದ. ಬೆಂಕಿ ತಾಕಿದವರು ಓಡುವಂತೆ ಆಕೆ ಪಕ್ಕಕ್ಕೆ ಸರಿದಳು. ಆತನಿಗೆ ಅರ್ಥವಾಗಲಿಲ್ಲ, ಮತ್ತೆ ತೋಳನ್ನು ತಾಗಿಸಿದ. ಆಕೆ ಕೋಪದಿಂದ ತಿರುಗಿದಳು, ಕಣ್ಣಿನಲ್ಲಿ ಬೆಂಕಿ ಹೊಮ್ಮುತ್ತಿತ್ತು. ಆಕೆಯ ಎದೆಯಲ್ಲಿ ತಾಳಿ ಇರಲಿಲ್ಲ, ಆತ ಕೊಟ್ಟಿದ್ದ ಚಿನ್ನದುಂಗುರ ಪಕ್ಕದಲ್ಲಿಯೇ ಇದ್ದ ಬೆಂಚಿನ ಮೇಲಿತ್ತು. ಆದರೆ, ಆ ಕ್ಷಣದಲ್ಲಿ ಆತನಿಗೆ ಅದೆಲ್ಲಾ ಬೇಡವಾಗಿತ್ತು, ಮೊದಲ ಅನುಭವ, ಎಷ್ಟೋ ದಿನಗಳಿಂದ ತಣಿಸಿಕೊಂಡುಬಂದ ಕಾಮತೃಷೆಗೆ ನೀರೆರೆಯಬೇಕಾಗಿತ್ತು. ಈಕೆಗೋಸ್ಕರ ಎಷ್ಟೋ ಜನರನ್ನು ಕಾಡಿಬೇಡಿ ಇಲ್ಲಿಗೆ ಬರಮಾಡಿಕೊಂಡಿದ್ದ. ಆಕೆ, ಎದ್ದು ನಿಂತು ಸರಸರನೆ ಹೋಗಿ ಬಾಗಿಲು ತೆರೆದಳು. ಹೊರಗೆ ಕಾವಲಿಗೆ ನಿಂತ ಒಂದಷ್ಟು ಜನ ಕಂಡರು, ತೂ! ಎಂದು ಉಗಿದವಳೇ ಮತ್ತೆ ಬಂದು ಹಾಸಿಗೆ ಮೇಲೆ ಮಲಗಿದಳು. ಆತ ಕೈಯಿಂದ ಸೊಂಟ ಬಳಸಿದ. ಈಕೆ ಮತ್ತೆ ತೂ! ಎಂದು ಆತನ ಕೈ ಒಗೆದಳು. ಆದರೆ ಆತನಿಗೆ ತಡೆದುಕೊಳ್ಳಲಾಗಲಿಲ್ಲ. ಮತ್ತೆ ಆಕೆಯ ದೇಹವನ್ನು ತನ್ನ ಕೈಗಳಿಂದ ಬಳಸಿದ, ಆಕೆ ಆತನಿಂದ ಬಿಡಿಸಿಕೊಂಡು ಪಕ್ಕಕ್ಕೆ ಹೊರಳಿದಳು. ಆದರೆ ಆತ ಬಿಡಲೊಲ್ಲ, ಕೆನ್ನೆಗೆ ಮುತ್ತಿಕ್ಕಿದ. ಆಕೆ ಎಂಜಲು ಒರೆಸಿಕೊಂಡಳು. ಜಿಂಕೆಯ ಮೇಲೆ ಎರಗಿದ ಹುಲಿಯಂತೆ ಆತ ಗಟ್ಟಿಯಾಗಿ ತಬ್ಬಿಕೊಂಡು ಕಾಲಿನಿಂದ ಅವಳ ಕಾಲದುಮಿ ಕೈಗಳನ್ನು ಗಟ್ಟಿಯಾಗಿ ಹಿಡಿದು ಮೇಲೆ ಹೊರಳಲು ಬಂದ. ಮೈಮೇಲೆ ವಿಷಸರ್ಪ ಬಿದ್ದಾಗ ಕೊಡವಿಕೊಳ್ಳುವಂತೆ ದೇಹವನ್ನು ಕೊಡವಿಕೊಂಡವಳೇ ‘ಹತ್ರ ಬರ್ಬೇಡ, ಕೊಂದ್ಬಿಡ್ತೀನಿ’ ಎಂದು ಅವನು ಕೊಟ್ಟಿದ್ದ ಉಂಗುರವನ್ನು ಮುಖದ ಮೇಲೆಸೆದಳು.

ಆತ ಸ್ವಲ್ಪ ಹೊತ್ತು ಮೌನವಾಗಿ ಆಕೆಯ ಪಕ್ಕ ಮಲಗಿಕೊಂಡ. ಮತ್ತೆ ಆಕೆಯ ಸೌಂದರ್ಯ ಕೆಣಕಿತು. ಈ ಬಾರಿ ಜಿಂಕೆಯ ಮೇಲೆ ಆನೆ ಮಲಗಿದಂತೆ ಮೇಲೆ ಬಿದ್ದ. ಆಕೆಯ ಬಾಯಿಯನ್ನು ಅದುಮಿ ಕಾಲನ್ನು ಒತ್ತಿದ. ಆತ ‘ಆ...’ ಎಂದ. ಆಕೆಯ ಹೊಟ್ಟೆಯ ಮೇಲೆ ರಕ್ತ ಜಿನುಗಿತು. ಅದುಮಿಟ್ಟುಕೊಂಡಿದ್ದ ಬಾಯಿ ಸಡಿಲವಾಯಿತು, ಕೈ ಕಾಲುಗಳು ಅಲುಗಾಡಿದವು. ಆಕೆಯ ಕೈಯಿಂದ ಹರಿದುಕೊಂಡು ಬಂದ ರಕ್ತ ಹೊಟ್ಟೆಯ ಮೇಲಿಂದ ಹಾಸಿಗೆಗೆ ಧುಮುಕಿತು. ಬೆನ್ನಿಗೆ ಎರಡು ಬಾರಿ, ಹೊಟ್ಟೆಗೆ ಮೂರು ಬಾರಿ ಚುಚ್ಚಿಕೊಂಡ ಚಾಕು ಹಾಸಿಗೆಯ ಪಕ್ಕ ಬಿದ್ದುಕೊಂಡಿತು.
-
‘ಥೂ! ಇವಳ ಜನ್ಮಕ್ಕೆ ಬೆಂಕಿ ಹಾಕ, ಹೆಂಗಸಾಗಿ ಒಂದು ಕೊಲೆ ಮಾಡೋಕೆ ಧೈರ್ಯ ಹೇಗೆ ಬಂತು’
‘ಆಹಾಹ... ಮಾಡೋದು ಮಾಡ್ಬಿಟ್ಟು ಈಗ ಗರತಿಯಂತೆ ಮೈ ತುಂಬಾ ಸೀರೆ ಹಾಕ್ಕೊಂಡಿರೋದು ನೋಡು’
‘ನನಗೆ ಮೊದಲೇ ಗೊತ್ತಿತ್ತು ಇವಳು ಶೀಲವಂತೆ ಅಲ್ಲ ಅಂತ, ನಾಯಿ ಮುಟ್ಟಿದ ಮಡ್ಕೆ ಇವಳು, ಈಗ ರಕ್ತ ಹರಿಸಿ ಬಂದವ್ಳೆ’

ಆಕೆ ಕೋರ್ಟಿನ ಮೆಟ್ಟಿಲು ಹತ್ತುವವರೆವಿಗೂ ಈ ಬೈಗುಳಗಳು ನಾಯಿಯಂತೆ ಅವಳ ಹಿಂದೆಯೇ ಬರುತ್ತಿದ್ದವು. ಹೌದು, ಮೈ ತುಂಬಾ ಸೀರೆ ಹೊದ್ದಿದ್ದಳು. ತಲೆ ಬಾಚಿಲ್ಲ. ಕೂದಲು ಕೆದರಿಕೊಂಡು ಬಿರುಗಾಳಿಗೆ ಸಿಕ್ಕ ಬೆಟ್ಟದಂತಾಗಿತ್ತು. ಹಣೆ ಕುಂಕುಮವನ್ನು ಅಳಿಸಿಕೊಂಡಿದ್ದಳು.
ನಿರ್ಭಾವುಕಳಾಗಿ ಅಲ್ಲಿಯೇ ನಿಂತಿದ್ದ ಹೆತ್ತವರನ್ನೊಮ್ಮೆ ನೋಡಿದಳು.
‘ಥೂ! ನಿನ್ನ ಬಾಯಿಗೆ ಮಣ್ಣು ಹಾಕ, ಎಂಥ ಕೆಲಸ ಮಾಡ್ಬಿಟ್ಟೆ ನೀನು, ನಾವು ಬೀದಿಯಲ್ಲಿ ತಲೆಯೆತ್ತಿಕೊಂಡು ನಡೆಯೋಕಾಗುತ್ತೇನೆ?’

ಅಷ್ಟರಲ್ಲಿಯೇ ಒಂದು ಹಳೆಯ ಚಪ್ಪಲಿ ಆಕೆಯ ಹಣೆಗೆ ಬಡಿಯಿತು. ಆಕೆ ಅಲುಗಾಡಲಿಲ್ಲ. ತಂದೆ ತಾಯಿಯನ್ನು ನೋಡಿಕೊಂಡು ಸಣ್ಣಗೆ ನಕ್ಕಳು. ಆ ನಗು ಬರಬೇಕೆಂದರೆ ಮನಸ್ಸಿನಲ್ಲಿ ಅತೀವ ಬೇಸರವಿರಬೇಕು. ಅವಳ ಎದೆಯನ್ನೇ ಕೊಯ್ದುಕೊಂಡು ಬಂದ ನಗು ಅದು.

ಕೈ ಕೋಳವನ್ನು ಬಿಡಿಸಿ ಆಕೆಯನ್ನು ಒಂದು ಬೆಂಚಿನಲ್ಲಿ ಕೂರಿಸಿದರು. ನ್ಯಾಯಾಲಯದಲ್ಲಿ ಕಲಾಪ ನಡೆಯುತ್ತಿತ್ತು. ಒಂದಷ್ಟು ಜನ ಕಪ್ಪು ವಸ್ತ್ರಧಾರಿಗಳು ಸರಿಯನ್ನು ತಪ್ಪೆಂದು, ಇನ್ನೊಂದಷ್ಟು ಜನ ತಪ್ಪನ್ನು ಸರಿಯೆಂದು ಸಾಧಿಸುತ್ತಿರುವಂತೆ ಆಕೆಗೆ ಕಂಡಿತು. ಇವರಿಬ್ಬರ ನಡುವೆ ಹೊಸಕಿಹೋದವಳೆಂದರೆ ನ್ಯಾಯದೇವತೆ. ಆಕೆಯ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಲಾಗಿತ್ತು. ಕೈಯಲ್ಲಿದ್ದ ತಕ್ಕಡಿಯ ಭಾರ ಒಂದೇ ಕಡೆ ಇತ್ತು. ಯಾವ ಕಡೆ? ಆಕೆಗಂತೂ ಗೊತ್ತಿಲ್ಲ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ನ್ಯಾಯದೇವತೆಯ ಮುಂದೆ ತನಗೆ ನ್ಯಾಯ ದೊರಕುವುದೆಂಬ ನಂಬಿಕೆಯೂ ಆಕೆಗಿರಲಿಲ್ಲ. ಒಮ್ಮೆ ತನ್ನ ಕೈ ನೋಡಿಕೊಂಡಳು. ರಕ್ತದ ಕಲೆ ಇನ್ನೂ ಮಾಸಿರಲಿಲ್ಲ. ನುಣುಪಾದ ನೆಲದಲ್ಲಿ ಆಕೆಯ ಮುಖ ವಿಕಾರವಾಗಿ ಕಂಡಿತು. ಮತ್ತೆ ತಲೆ ಎತ್ತಿ ನ್ಯಾಯದೇವತೆ ಕಡೆ ನೋಡಿದಳು. ನನ್ನಂತಹ ಕೊಲೆಗಾತಿಯನ್ನು ನೋಡುವ ಬದಲು ನೀನು ಈ ರೀತಿಯಾಗಿ ಬಟ್ಟೆ ಸುತ್ತಿಕೊಂಡಿರುವುದೇ ಸರಿ ಎಂದುಕೊಂಡಳು.

ಕಟಕಟೆಯಲ್ಲೊಬ್ಬ ಕೊಲೆಗಾರ ನಿಂತಿದ್ದ. ವಾದಿಸಿ ವಾದಿಸಿ ಮಾತು ಮಾತುಗಳು ಬೆಳೆದದ್ದರಿಂದ ಆತ ಸೋತುಹೋಗಿದ್ದನೋ ಏನೋ? ಕೊನೆಗೂ ತಾನೊಬ್ಬ ಕೊಲೆಗಾರನೆಂದು ಒಪ್ಪಿಕೊಂಡಿದ್ದ. ಕೊಲೆ ಮಾಡಿದ್ದು ಸತ್ಯವಾಗಿತ್ತು, ಆದರೆ ಕೊಲೆಯ ಕಾರಣಗಳು ನ್ಯಾಯದೇವತೆಗೆ ಪಥ್ಯವಲ್ಲ. ದೇಹವನ್ನು ಚುಚ್ಚಿದ್ದು ತಪ್ಪು, ದೇಹವನ್ನು ಚುಚ್ಚಲು ಬಂದಿದ್ದ ಮನಸ್ಸಿನ ಗಾಯಗಳನ್ನು ಈ ಜಗತ್ತಿನಲ್ಲಿ ಸಾಕ್ಷಿಯಾಗಿ ಪರಿಗಣಿಸಲಾವುದಿಲ್ಲ. ಮನಸ್ಸು ಎಲ್ಲರಿಗೂ ಕಾಣುವುದಿಲ್ಲ. ಮೌನದೊಳಗೆ ಕೋಟಿ ಮಾತುಗಳಿದ್ದರೂ ತುಟಿಯಿಂದ ಹೊರಗೆ ಹೊಮ್ಮುವುದಿಲ್ಲ.

ನೇಣುಗಂಬಕ್ಕೇರಿಸುವ ತೀರ್ಪಿನೊಂದಿಗೆ ಆತನನ್ನು ಎಳೆದೊಯ್ದ ನಂತರ ಮತ್ತೊಂದು ಕೊಲೆಯ ವಿಚಾರ ಕಟಕಟೆಗೆ ಬಂತು. ಆಕೆಗೆ ತಾನೊಬ್ಬಳೇ ಅಲ್ಲ ಕೊಲೆಗಾತಿ, ಈ ಪ್ರಪಂಚದಲ್ಲಿ ಇತ್ತೀಚೆಗೆ ಕೊಲೆಗಳು ಸುಗ್ಗಿಯಂತೆ ನಡೆಯುತ್ತಿವೆ ಎಂದುಕೊಂಡಳು. ಆಸೆಗೆ ಅನೇಕ ಕೊಲೆಗಳು ನಡೆಯುತ್ತವೆ. ಲೌಕಿಕ ಜಗತ್ತಿನಲ್ಲಿ ಅದು ಮಹಪರಾಧ. ಆಸೆಗಲ್ಲದ ಕೊಲೆಗಳೂ ನಡೆಯುತ್ತಿವೆ, ಲೌಕಿಕ ಜಗತ್ತಿನಲ್ಲಿ ಅದು ಅಪರಾಧವಾದರೂ ಆಂತರಿಕವಾಗಿ ಹುದುಗಿಕೊಳ್ಳುವ ಕಾರಣಗಳಿಂದ ಬೆಂಕಿ ಹೊಮ್ಮುತ್ತಿರುತ್ತದೆ. ಆದರೆ ಲೌಕಿಕ ಜಗತ್ತಿಗೆ ನುಗ್ಗಿ ತಾನು ಅಪರಾಧಿಯಲ್ಲ ಎಂದು ಸಾಬೀತುಪಡಿಸುವಷ್ಟು ಶಕ್ತಿ ಆ ಬೆಂಕಿಗಿಲ್ಲ. ಉರುಬಿದರೆ ಆರಿ ಹೋಗುತ್ತದೆ.
ಕೊನೆಗೂ ಆಕೆಯನ್ನು ಕಟಕಟೆಯಲ್ಲಿ ನಿಲ್ಲಿಸಿದರು. ತನ್ನನ್ನು ಸುತ್ತುಕೊಂಡಿದ್ದ ಬಲೆಯಂತ ಕಂಬವನ್ನು ಒಮ್ಮೆ ಮುಟ್ಟಿ ಸುತ್ತಲೊಮ್ಮೆ ನೋಡಿದಳು. ತನ್ನನ್ನು ನುಂಗುವಂತೆ ನೋಡುತ್ತಿದ್ದ ನೂರಾರು ಬೆಂಕಿ ಮುಖಗಳಿಗೆ ಆಕೆ ತರಗೆಲೆಯಾದಂತೆ ಕಂಡಳು. ಈ ಜನಗಳ ನಡುವೆ ಬದುಕುವುದಕ್ಕಿಂತ ಈ ಪಂಜರದಲ್ಲಿಯೇ ನಿಂತುಕೊಳ್ಳುವುದೇ ಸೂಕ್ತ ಎಂದುಕೊಂಡಳು.

ಅಷ್ಟಕ್ಕೆ ಒಬ್ಬ ವಕೀಲ ಎದ್ದು ನಿಂತುಕೊಂಡ. ಆತ ಪ್ರತಿವಾದಿಯಾಗಿ ಆಕೆಯ ವಿರುದ್ಧ ವಾದ ಮಾಡಲು ಬಂದಿದ್ದವ.

‘ಯುವರ್ ಹಾನರ್, ಈಕೆ ನಿನ್ನೆ ಒಂದು ಕೊಲೆ ಮಾಡಿದ್ದಾಳೆ, ಅವಳ ಕೈ ಮೇಲಿರುವ ರಕ್ತದ ಕಲೆಯೇ ಸಾಕ್ಷಿ’

ನ್ಯಾಯಾಲಯ ಗಕ್ಕನೇ ಮೌನಕ್ಕೆ ತಿರುಗಿಕೊಂಡಿತ್ತು. ಯಾರಿಂದಲೂ ಒಂದು ಪದವೂ ಹೊರ ಹೊಮ್ಮಲಿಲ್ಲ. ಯಾಕೆಂದರೆ ಆಕೆಯ ಪರವಾಗಿ ಮಾತನಾಡಲು ಆಕೆ ವಕೀಲರನ್ನೇ ನೇಮಿಸಿಕೊಂಡಿರಲಿಲ್ಲ. ವಾದಿಯಿಲ್ಲದೇ ಪ್ರತಿವಾದಿಯ ಮಾತಿನಲ್ಲಿಯೇ ಈ ಪ್ರಕರಣ ಮುಗಿಯುವಂತೆಯೂ ಇರಲಿಲ್ಲ.

‘ನಿನ್ನ ಪರವಾಗಿ ವಾದಿಸುವ ವಕೀಲರು ಯಾರೂ ಇಲ್ಲವೇನಮ್ಮ?’ ನ್ಯಾಯಾಧೀಶರು ಕೇಳಿಕೊಂಡರು.
ಕೊಲೆಯಾದ ದಿನದಿಂದ ಆಕೆ ಮೌನಕ್ಕೆ ಶರಣಾಗಿದ್ದಳು. ಇಲ್ಲೂ ಮಾತನಾಡಲಿಲ್ಲ.
‘ನಿನ್ನ ಪರವಾಗಿ ನೀನೇ ವಾದ ಮಾಡಿಕೊಳ್ಳಬಹುದು, ಅವಕಾಶ ಮಾಡಿಕೊಡಲಾಗುವುದು’ ನ್ಯಾಯಾಧೀಶರು ಮತ್ತೆ ಮಾತನಾಡಿದರು ‘ವಾದಿಸುವವರೇ ಇಲ್ಲದಿದ್ದರೆ ಈ ಪ್ರಕರಣ ಸತ್ಯವೆಂದು ಇತ್ಯರ್ಥಗೊಳಿಸಿ ನಿನಗೆ ಶಿಕ್ಷೆ ವಿಧಿಸಬೇಕಾಗುತ್ತದೆ’

ಆಕೆ ಮತ್ತೆ ಮಾತನಾಡಲಿಲ್ಲ. ಆಕೆಯ ಮುಖ ಜಡಿಮಳೆ ಸುರಿದ ನಂತರ ಮೌನವಾಗುವ ನೆಲದಂತೆ ನಿರಾತಂಕವಾಗಿತ್ತು. ಹೊರಗೂ ಮಳೆ ಸುರಿಯುತ್ತಿತ್ತು. ಹೊರಗಡೆ ಯಾರೋ ಹಣೆಮೇಲೆ ಎಸೆದ ಚಪ್ಪಲಿಯ ಧೂಳನ್ನು ಒರೆಸಿಕೊಂಡಳು.

ನ್ಯಾಯಾಲಯದ ಆವರಣದಲ್ಲಿ ಗುಸು ಗುಸು ಹೆಚ್ಚಾಯಿತು. ಕೊಲೆಯಾದ ಹುಡುಗನ ತಾಯಿ ‘ಇನ್ನೇನು ವಾದ ಮಾಡೋದು, ಆಕೆಯನ್ನು ಮೊದಲು ನೇಣುಗಂಬಕ್ಕೇರಿಸಿ’ ಎಂದು ಕೂಗಿಕೊಂಡಳು. ಒಂದಷ್ಟು ಜನ ‘ಹೌದು ಹೌದು’ ಎಂದು ಜೋರು ದನಿಗೂಡಿಸಿದರು.
ನ್ಯಾಯಾಧೀಶರು ‘ಆರ್ಡರ್ ಆರ್ಡರ್’ ಎಂದೊಡನೆ ಮತ್ತೆ ಮೌನ ಕೂಡಿಕೊಂಡಿತು.

ಮರಳುಗಾಡಿನ ಬಿಸಿನೆಲದ ಮೇಲೆ ಚಿಮ್ಮುವ ನೀರಿನಂತೆ ವಕೀಲರ ಗುಂಪಿನಿಂದ ಒಬ್ಬ ವಕೀಲ ‘ನಾನು ವಾದ ಮಾಡುತ್ತೇನೆ’ ಎಂದು ಎದ್ದು ನಿಂತುಕೊಂಡ. ಆತ ಆಕೆಯ ಗೆಳೆÀಯರ ಹಿಂಡಿನಲ್ಲೊಬ್ಬನಾಗಿದ್ದವನು. ವಾದಿಯಾಗಿ ನಿಂತುಕೊಂಡ ಆತ ಹೇಳಿದ
‘ಯುವರ್ ಹಾನರ್, ಕೈ ಮೇಲಿರುವ ರಕ್ತದ ಕಲೆಯನ್ನು ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ’

ಪ್ರತಿವಾದಿ: ‘ತಾನು ಕೊಲೆ ಮಾಡಿರುವುದಾಗಿ ಆಕೆಯೇ ಒಪ್ಪಿಕೊಂಡಾಗಿದೆ’

‘ಯುವರ್ ಹಾನರ್, ಈಕೆ ಕೊಲೆ ಮಾಡಿರಬಹುದು, ಆದರೆ ಆತ ಈಕೆಯನ್ನು ಬಲವಂತವಾಗಿ ಹಾಸಿಗೆಗೆ ಎಳೆದದ್ದು ಎಷ್ಟು ಸರಿ? ಈ ಕೊಲೆಗೆ ಕಾರಣವಾದ ವಿಚಾರಗಳನ್ನು ಪರಿಗಣಿಸಬೇಕಾಗಿ ವಿನಂತಿ’

‘ಈಕೆಯನ್ನು ಬಲವಂತವಾಗಿ ಎಳೆಯುವ ಅಧಿಕಾರ ಆತನಿಗಿತ್ತು’

‘ಮನಸ್ಸೇ ಒಪ್ಪದಿದ್ದ ಮೇಲೆ ಅಧಿಕಾರ ಚಲಾಯಿಸುವುದೆಷ್ಟು ಸರಿ?’

‘ಕಣ್ಣಿಗೆ ಕಾಣದ ಮನಸ್ಸನ್ನು ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಯುವರ್ ಹಾನರ್, ಮನಸ್ಸನ್ನು ಕಟಕಟೆಯಲ್ಲಿ ನಿಲ್ಲಿಸಿ ವಿಚಾರಿಸಲಾಗುವುದಿಲ್ಲ’

‘ಯುವರ್ ಹಾನರ್, ಈ ಕಟಕಟೆಯಲ್ಲಿ ಒಂದು ದೇಹ ನಿಂತಿದೆ, ಆ ದೇಹದೊಳಗೆ ಭಾವನೆಯನ್ನು ತುಂಬಿಕೊಂಡ ಮನಸ್ಸೊಂದಿದೆ’

‘ಆ ಕೊಲೆಗೂ ಮನಸ್ಸೇ ಕಾರಣ, ಆ ಮನಸ್ಸನ್ನು ಹೊತ್ತ ದೇಹಕ್ಕೆ ಶಿಕ್ಷೆ ಆಗಲೇಬೇಕು’

‘ನೋ ಯುವರ್ ಹಾನರ್, ಆತನೊಂದಿಗೆ ಹಾಸಿಗೆ ಏರಲು ಆಕೆಗೆ ಅಂದು ಇಷ್ಟವಿರಲಿಲ್ಲ’

‘ಇಷ್ಟವಿಲ್ಲ ಎಂದ ಮೇಲೆ ಆಕೆ ಅಲ್ಲಿವರೆವಿಗೂ ಯಾಕೆ ಹೋಗಬೇಕಾಯಿತು?’

‘ಐ ಎಂ ಸಾರಿ ಟು ಸೇ ದಿಸ್ ಯುವರ್ ಹಾನರ್, ಅವಳು ಅಲ್ಲಿವರೆವಿಗೂ ಹೋಗಲು ಅವರ ತಂದೆ ತಾಯಿಯೇ ಕಾರಣ’

‘ಐ ಆಬ್ಜೆಕ್ಟ್ ದಿಸ್ ಯುವರ್ ಹಾನರ್, ಈ ಪ್ರಕರಣಕ್ಕೆ ಅನವಶ್ಯಕವಾಗಿ ತಂದೆ ತಾಯಿಯಂದಿರನ್ನು ಎಳೆದು ತರಲಾಗುತ್ತಿದೆ’

‘ಎಳೆದು ತರಲಾಗುತ್ತಿಲ್ಲ ಯುವರ್ ಹಾನರ್, ಕಾರಣಗಳಾಗಿ ಅವರೇ ಪ್ರಕರಣದ ನಡುವೆ ಬರುತ್ತಿದ್ದಾರೆ’

‘ಇದೊಂದು ಕೊಲೆಯಾಗಿದ್ದು, ಕೊಲೆ ಮಾಡಿರುವುದು ತಾನೇ ಎಂದು ಆಕೆ ಒಪ್ಪಿಕೊಂಡಿರುವುದರಿಂದ ಈ ವಿಚಾರಣೆಯನ್ನು ಮುಂದುವರೆಸಿದರೆ ಅರ್ಥವಿರುವುದಿಲ್ಲ ಯುವರ್ ಹಾನರ್’

‘ಯುವರ್ ಹಾನರ್, ಕೊಲೆ ಆಗುವುದಕ್ಕೆ ಕಾರಣವಾದ ಆತನ ಬಲವಂತದ ಪ್ರಯತ್ನವನ್ನು ಪರಿಗಣಿಸಿ ಈಕೆಗೆ ನ್ಯಾಯ ದೊರಕಿಸಿಕೊಡಬೇಕು, ಇದನ್ನು ಅತ್ಯಾಚಾರವೆಂದು ಪರಿಗಣಿಸಬೇಕು’

‘ಯುವರ್ ಹಾನರ್, ಬಲವಂತ ಪಡಿಸಿದ್ದವನು ಅನ್ಯ ವ್ಯಕ್ತಿಯಾಗಿದ್ದರೆ ಪರಿಗಣಿಸಬಹುದಾಗಿತ್ತು, ಮದುವೆಯಾದ ಗಂಡನಾಗಿರುವುದರಿಂದ ಸಹಕರಿಸಬೇಕಾಗಿದ್ದು ಸ್ತ್ರೀಧರ್ಮ, ಇದನ್ನು ಅತ್ಯಾಚಾರ ಎಂದು ಕರೆಯಲು ಕಾನೂನಿನಲ್ಲಿ ಅವಕಾಶವಿಲ್ಲ’

‘ಆಕೆಗೆ ಆತನನ್ನು ವರಿಸುವುದು ಇಷ್ಟವಿರಲಿಲ್ಲ, ತಂದೆ ತಾಯಿಯಂದಿರೆ ಬಲವಂತಕ್ಕೆ ಬಿದ್ದು ಅವಳೊಪ್ಪಿದ್ದವನೊಂದಿಗೆ ಮದುವೆ ಮಾಡದೆ, ಬಲವಂತಕ್ಕೆ ಮದುವೆ ಮಾಡಿದ್ದಾರೆ, ಈ ಕೊಲೆಯ ಕಾರಣವನ್ನು ಸ್ರವಿಸುತ್ತಿರುವ ಈಕೆಯ ಮನಸ್ಸನ್ನು ನ್ಯಾಯದೇವತೆ ಪರಿಗಣಿಸುವುದಿಲ್ಲವೇ?’

‘ಮದುವೆಯಾದ ಮೇಲೆ ಗಂಡ ಹಾಸಿಗೆಗೆ ಎಳೆಯುವುದು ಬಲವಂತವಲ್ಲ ಯುವರ್ ಹಾನರ್, ಅದು ಅಪರಾಧವಾಗಿ ಪರಿಗಣಿಸುವ ಯಾವುದೇ ನಿಯಮ ಕಾನೂನಿನಲ್ಲಿಲ್ಲ’

‘ಯುವರ್ ಹಾನರ್, ಇಲ್ಲಿ ಕೆನ್ನಾಲಗೆ ಚಾಚಿದ ಕಾರಣಗಳು ಒಬ್ಬಳು ಹೆಂಗಸನ್ನು ಬಲವಂತದ ಗೋಡೆಗಳ ನಡುವೆ ಮಾನಸಿಕವಾಗಿ ಅತ್ಯಾಚಾರ ಮಾಡಲು ಹೊಂಚುಹಾಕಿವೆ. ಆಕೆಯ ಭಾವನೆಗೆ ಬೆಲೆ ಕೊಡದೆ ಆಕೆಯನ್ನು ಜೀವವಿಲ್ಲದ ಬೊಂಬೆಯಂತೆ ನೋಡುವುದು ತಪ್ಪು'

‘ಕೆಂಪಾಗಿ ಚೆಲ್ಲಿದ್ದ ರಕ್ತ, ಕೊಲೆಯಾದ ಶವ, ಕೊಲೆ ಮಾಡಿದವಳು, ಚಾಕು ಇವೆಲ್ಲಾ ಮುಂದೆ ಇರುವಾಗ, ಕಣ್ಣಿಗೆ ಕಾಣದ ವಿಚಾರಗಳನ್ನು ಮುಂದಕ್ಕೆ ತರುತ್ತಿರುವ ಪ್ರತಿವಾದಿಯ ಮಾತುಗಳು ಕೇವಲ ಹಾಸ್ಯಾಸ್ಪದವಾಗಿವೆ ಯುವರ್ ಹಾನರ್’

ಅಷ್ಟಕ್ಕೆ ಆಕೆ ನಿಂತಲ್ಲೇ ಕೊಂಚ ಜಗ್ಗಿದಳು. ಮುಂದಿನ ಕನ್ನಡಿಯಲ್ಲಿ ಯಾರೋ ನಿರ್ವಸ್ತ್ರಗೊಂಡು ನಿಂತಿರುವುದನ್ನು ಗಮನಿಸಿದಳು. ಒಮ್ಮೆಲೇ ಎಲ್ಲೋ ನೋಡಿದ್ದೇನಲ್ಲ ಎಂದೆನಿಸಿತು. ಕೂದಲನ್ನು ಸರಿಪಡಿಸಿಕೊಂಡಳು. ‘ಓಹ್ ಅದು ನಾನೇ, ಪ್ರಪಂಚವನ್ನೇ ತೂಗುವ ಸ್ತ್ರೀಧರ್ಮದವಳು’ ಎಂದುಕೊಂಡಳು. ತನ್ನನ್ನು ಪ್ರಾಣಕ್ಕಿಂತ ಪ್ರೀತಿಸಿ, ತನ್ನ ಮೈ ಕಣಕಣಗಳನ್ನು ತುಂಬಿಕೊಂಡ ಗೆಳೆಯನ ಫೋಟೋಗೆ ಹಾರ ಹಾಕಿದ್ದರು. ಸಾಯಲು ಇರುವ ನೂರು ನೆಪದಲ್ಲಿ, ಕೊಲೆ ಮಾಡಿದ್ದನ್ನು ಮುಚ್ಚಲು ಅಪಘಾತವೆನ್ನುವ ಒಂದು ನೆಪದಲ್ಲಿ ಆತನನ್ನು ಈ ಲೋಕದಿಂದ ನಿಶ್ಶೇಷಗೊಳಿಸಿದ್ದು ಇಲ್ಲಿ ಅಪರಾಧವಾಗಲೇ ಇಲ್ಲ. ಹಾಗೆ ತಿರುಗಿ ಇದೇ ಕೈಕಾಲುಗಳನ್ನು ಬಿಗಿಯಾಗಿ ಹಿಡಿದು ಎಳೆದುಕೊಂಡುಹೋಗಿ ಹಸೆಮಣೆ ಮೇಲೆ ಕೂರಿಸಿದವರನ್ನು ಕಂಡಳು. ಅವರ ಕಣ್ಣುಗಳಿಂದ ಹೊರಟ ಬೆಂಕಿ ಆಕೆಯ ಮೈ ಕೈಗೆ ತಾಗಿತು. ಈಗ ನಿಜಕ್ಕೂ ಆ ಬೆಂಕಿ ಸುಡಲಿಲ್ಲ. ಅವರ ಮತ್ತು ಅವಳ ನಡುವೆ ಇದ್ದ ಬಾಂಧವ್ಯವೊಂದು ತೀರ ತೆಳುವಾಗಿಹೋಗಿತ್ತು. ಅವರು ಕಟ್ಟಿಸಿದ ತಾಳಿ ಎಲ್ಲಿ? ನಿನ್ನೆಯೇ ಕಿತ್ತು ಬಿಸಾಡಿದ್ದಳು. ಕನ್ನಡಿಯೊಳಗೆ ಕಾಣುತ್ತಿರುವ ಇದೇ ದೇಹವನ್ನು ನಿರ್ವಸ್ತ್ರಗೊಳಿಸಿದವರು ಯಾರು? ಹೌದು ಇದೇ ಜನಗಳು.

‘ಕಠಿಣ ಕಾರಾಗೃಹ ಜೀವಾವಧಿ ಶಿಕ್ಷೆ' ನ್ಯಾಯಾಧೀಶರು ಕೂಗಿಕೊಂಡರು. ‘ಹೌದು, ಈ ಜೀವದ ಅವಧಿ ಇರುವವರೆವಿಗೂ ತನಗೆ ಶಿಕ್ಷೆ’ ಎಂದುಕೊಂಡ ಆಕೆ ಪೋಲೀಸ್ ಕಾವಲಿನ ನಡುವೆ ನಡೆದಳು, ಹೌದು ಮೌನವಾಗಿ ನಡೆದಳು. ಮತ್ತೊಂದು ಚಪ್ಪಲಿ ಮೈಮೇಲೆ ಬಿತ್ತು.