ಕೊನೆಗೂ ರತ್ನವ್ವಳ ಬೇಸರ ಕಳೆಯಲು ಮುಂಜಾನೆಗೇ ಸುತ್ತಲೂ ಒಂದಷ್ಟು ಜನ ನೆರೆದರು. ಮೂಲೆಯಲ್ಲಿದ್ದ ಸಣ್ಣ ಮಣ್ಣಿನ ದೀಪದ ಬತ್ತಿಯು ಗಾಳಿಯ ರಭಸಕ್ಕೆ ಲಯಬದ್ಧವಾಗಿ ವಾಲಾಡುತ್ತಿತ್ತು.
‘ದೀಪದೊಳಗೆ ಎಣ್ಣೆಯಿಲ್ಲ, ಹರಳೆಣ್ಣೆ ಸುರಿಯಿರಿ, ವೈದಿಕ ಕಾರ್ಯ ಮುಗಿಯೋವರೆವಿಗೂ ದೀಪ ಆರುವಂತಿಲ್ಲ, ಬೇಕಾದರೆ ನಂತರವೂ’ – ಯಾರೋ.
‘ಕೆಂಚಿ, ನಿಂಗೆ ಎಷ್ಟು ಸಾರಿ ಹೇಳಿದ್ದೀನಿ, ದೀಪದ ತಾವೇ ಕಯ್ಯೆಣ್ಣೆ ಇಟ್ಕೋ ಅಂತ’ – ಅಜ್ಜಿ
‘ಎಲ್ಲರೂ ಕಣ್ಣು ಕಟ್ಟಿದಂತೆ ಆಡಬೇಡಿ, ಎಣ್ಣೆ ತುಂಬಿಸಿಟ್ಟಿದ್ದೇನೆ, ಮೊದಲು ಸರಿಯಾಗಿ ನೋಡಿ’ – ಕೆಂಚಿ
‘ಇಷ್ಟು ದೊಡ್ಡವಳಾಗಿ ಈ ರೀತಿ ಅಡ್ಡ ಮಾತಾಡೋದ್ರಿಂದಾನೆ ನಿಮ್ಮಪ್ಪ ತನ್ನ ಜೀವ ತಿಂದ್ಕೊಂಡ’ – ಯಾರೋ ಹೇಳಿದ ಈ ಮಾತಿಗೆ ಮತ್ಯಾರೋ ‘ಹೇ, ಎಂಥ ಮಾತು ಅಂತ ಆಡ್ತೀರಿ, ಆ ಪುಣ್ಯಾತ್ಮ ಹೋಗೋನು ಹೋದ, ಇದ್ದವರನ್ನ ಯಾಕೆ ಗುರಿ ಮಾಡ್ತೀರಿ? ಕರೆಂಟಿಲ್ಲದ ಕಾರಣ ಆ ದೀಪದೊಳಗೇನಿದೆ ಅನ್ನೋದು ಕಾಣ್ತಾ ಇಲ್ಲ, ಆ ಮುನುಷ್ಯನನ್ನ ಮತ್ತೆ ಮತ್ತೆ ನೆನಪಿಸಿ ಯಾಕೆ ರತ್ನವ್ವಳ ಕಣ್ಣಲ್ಲಿ ನೀರು ತರಿಸ್ತೀರಾ?’ ಎನ್ನುವಷ್ಟರಲ್ಲಿ ರತ್ನವ್ವಳÀ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು.
ಅಷ್ಟಕ್ಕೆ ಪುರೋಹಿತರು ಬಂದು ರತ್ನವ್ವನ ಮಗನನ್ನು ಕೂರಿಸಿಕೊಂಡು ಒಂದಷ್ಟು ಮಂತ್ರ, ಮತ್ತೊಂದು ಇನ್ನೊಂದು ಹೇಳಿಸಿ, ಆತ್ಮವನ್ನು ಸ್ವರ್ಗಕ್ಕೆ ಕಳುಹಿಸುವ ನೆಪದಲ್ಲಿ ಗೋಮೂತ್ರ, ಹಾಲು, ಮೊಸರು ಕುಡಿಸಿ, ಕಾಲಿಗೆ ಅಡ್ಡ ಬೀಳಿಸಿಕೊಂಡು, ಕಾಣಿಕೆ ಅದು ಇದು ಮಗದೊಂದು ಎಲ್ಲವನ್ನೂ ತುಂಬಿಕೊಂಡು ಪುಣ್ಯತೀರ್ಥವನ್ನು ಎಲ್ಲರ ಮೇಲೂ, ಗೋಡೆಯ ಮೇಲೂ ಚಿಮುಕಿಸಿ, ಬಾಟಲಿಗೆ ತುಂಬಿ ಹೋದರು. ಉಳಿದವರೆಲ್ಲಾ ಗಂಧದಕಡ್ಡಿ ಕರ್ಪೂರ ಹಚ್ಚಿ ‘ಸ್ವರ್ಗಕ್ಕೆ ಹೋಗು ಆತ್ಮವೇ’ ಎಂದು ಗರ್ಕರಾಗಿ ಮೂರು ಮೂರು ಬಾರಿ ಉಚ್ಚರಿಸಿ ಒಂದಷ್ಟು ಜನ ವಾಡಿಕೆಯಂತೆ ಕಣ್ಣೀರು ಸುರಿಸಿದರು. ಅಲ್ಲೇ ನಿಂತಿದ್ದ ಕೆಂಚಿಯ ಮುಖವಿನ್ನೂ ಕೆಂಪಾಗಿಯೇ ಇತ್ತು. ಕೋಪತಾಪಗಳ ಬೆಂಕಿಯಲ್ಲಿಯೇ ಬೇಯುವ ಆ ಹುಡುಗಿ ಇನ್ನೂ ಪೂಜೆ ಮಾಡಿರಲಿಲ್ಲ. ಮತ್ತೆ ಯಾರೋ ಬೈದರು. ಕೊನೆಗೂ ಬಂದು ಪೂಜೆ ಮಾಡಿ ‘ಅಪ್ಪಯ್ಯಾ’ ಎಂದು ಫೋಟೋ ನೋಡಿಕೊಂಡು ಕಣ್ಣೀರು ಸುರಿಸಿದಳು. ಸೀಮೆ ಹೆಂಚಿನ ಮೇಲೆ ಸುರಿದಿದ್ದ ಕೆಂಡದ ಮೇಲೆ ಬಿದ್ದು ಕರಗಿ ಹೊಗೆಯಾಡಿದ ಸಾಂಬ್ರಾಣಿ, ಧೂಪ ಹೊರಡಿಸಿದ ಘಮಲಿನ ಹೊಗೆ, ಹೂ ಪರಿಮಳ, ಘಂಟೆ ಜಾಗಟೆ ಶಬ್ದದೊಂದಿಗೆ ವಾತಾವರಣ ಮತ್ತೂ ಭಾವುಕವಾಯಿತು.
‘ಎಂಥ ಮನುಷ್ಯ ನಮ್ಮ ಬೀದಿಯಿಂದ ನಮ್ಮನ್ನ ಬಿಟ್ಟು ಹೊರಟುಹೋದನಪ್ಪ, ಆ ದೇವ್ರಿಗೆ ಕರುಣೆ ಅನ್ನೋದೆ ಇಲ್ವೇ?’ ಎಂದು ಸೀರೆ ಕೆದರಿಕೊಂಡು ಗೋಳಾಡಲು ಶುರುವಿಟ್ಟುಕೊಂಡ ರತ್ನವ್ವನ ಅತ್ತಿಗೆಯನ್ನು ನೆರೆಮನೆಯವಳು ತಬ್ಬಿಕೊಂಡು ಎದೆಗೆ ಒರಗಿಸಿಕೊಂಡು ಸಮಾಧಾನ ಮಾಡಲು ಹೋದವಳು ತಾನೂ ಅತ್ತುಬಿಟ್ಟಳು.
ಅಷ್ಟರಲ್ಲಿಯೇ ಹಿರಿಯರೆನಿಸಿಕೊಂಡ ಕೆಲವರು ಬಂದು ಗೋಳಾಡುತ್ತ ಸಮಯ ವ್ಯರ್ಥ ಮಾಡುತ್ತಿದ್ದ ಇವರನ್ನೆಲ್ಲಾ ತರಾಟೆಗೆ ತೆಗೆದುಕೊಂಡು ‘ಗಂಡಸರೆಲ್ಲಾ ಸಮಾಧಿ ಬಳಿ ನಡೆಯಿರಿ, ಯಮಗಂಡ ಕಾಲ ಬರುವ ಮುಂಚೆ ಎಡೆಗಿಡಬೇಕು, ಪೂಜೆ ಪುನಸ್ಕಾರ ಎಲ್ಲ ಮುಗಿಸಬೇಕು, ನಡೆಯಿರಿ’ ಎಂದವರೇ ಪೂಜೆ ಮತ್ತು ಎಡೆಗಿಡಬೇಕಾದ ಸಾಮಾಗ್ರಿಗಳನ್ನು ತುಂಬಿಕೊಂಡಿದ್ದ ಬುಟ್ಟಿಯನ್ನು ಹೊತ್ತುಕೊಂಡು, ಒಂದು ಚರಿಗೆ ನೀರನ್ನೂ ಹೆಗಲಿಗೇರಿಸಿಕೊಂಡು ಹೊರಟುಬಿಟ್ಟರು.
ಅತ್ತ ಸಮಾಧಿಯಲ್ಲಿ ಉಳಿದ ಕಾರ್ಯಗಳು ಸಾಗುತ್ತಿರಲು, ಇತ್ತ ನೆಂಟರಿಷ್ಟರು ಒಬ್ಬೊಬ್ಬರಾಗಿಯೇ ಬಂದು ಸೇರಿಕೊಂಡು ರತ್ನವ್ವನಿಗೆ ಸೀರೆ ಉಡಿಸಿ, ಹೂ ಮುಡಿಸಿ, ಹಣೆಯಷ್ಟಗಲ ಅರಿಶಿಣ ಕುಂಕುಮ ಉಜ್ಜಿ ತಬ್ಬಿಕೊಂಡು ಗೊಳೋ ಎಂದು ಅತ್ತರು. ಆ ಮನೆಯೊಳಗೆ ಹೆಜ್ಜೆ ಇಟ್ಟರೆ ಅಳುವ ಹೆಂಗಸರ ಹಿಂಡು ಹಿಂಡು. ದಿಂಡು ದಿಂಡು ಹೂವನ್ನು ಮುಡಿದುಕೊಂಡ ರತ್ನವ್ವನನ್ನು ನೋಡಿ ಬಿಕ್ಕುವ ಅನೇಕರು. ಕೆಲವರಂತೂ ಅಳು ಬರದಿದ್ದರೂ ತಮ್ಮ ಸೀರೆ ಸೆರಗನ್ನು ಕಣ್ಣಿಗೆ ಒರೆಸಿಕೊಳ್ಳುತ್ತ ತಾವೂ ಕೂಡ ಈ ದುಃಖದಲ್ಲಿ ಭಾಗಿಯಾಗುತ್ತಿದ್ದೇವೆ ಎಂಬುದನ್ನು ಖಾತ್ರಿ ಪಡಿಸುತ್ತಿದ್ದಾರೆ.
ಅಷ್ಟಕ್ಕೇ ಸಮಾಧಿ ಬಳಿ ತೆರೆಳಿದ್ದ ಗಂಡಸರೆಲ್ಲಾ ಮನೆಗೆ ಬರುವವರಿದ್ದರು. ಎಲ್ಲವನ್ನೂ ಸಿದ್ಧತೆ ಮಾಡಿಕೊಂಡಿದ್ದ ಹೆಂಗಸರು ರತ್ನವ್ವನನ್ನು ಹೊಳೆ ದಂಡೆಗೆ ಕರೆದುಕೊಂಡು ಹೋಗಿ ಬಳೆ ಹೊಡೆದು, ಕುಂಕುಮ ಅಳಿಸಿ, ತಾಳಿ ಕೀಳುವ ಶಾಸ್ತ್ರಕ್ಕೆ ಆಣಿಯಾದರು. ಹೊಳೆಯ ದಂಡೆಯೂ ಸ್ಮಶಾಣದಂತೆ ಆರ್ತನಾದಕ್ಕೆ ಸಾಕ್ಷಿಯಾಯಿತು.
‘ಅಯ್ಯೋ! ನಿನ್ನ ಹೆಂಡ್ತಿ ಮಕ್ಕಳನ್ನೆಲ್ಲಾ ಈ ರೀತಿ ಒಂಟಿ ಮಾಡಿ ಹೊರಟೋದಲ್ಲಪ್ಪ, ಈ ಮುಂಡೆಗೆ, ಮುಂಡೆ ಮಕ್ಕಳಿಗೆ ಇನ್ನಾರಪ್ಪ ಗತಿ? ನಿನ್ನ ಹೆಂಡ್ತಿಗೆ ಮುತ್ತೈದೆ ಸಾವಿನ ಪುಣ್ಯ ಕೊಡ್ದೆ, ಈ ರೀತಿ ಬಳೆ ಹೊಡೆದು, ತಾಳಿ ಕಿತ್ತು, ಕುಂಕುಮ ಅಳಿಸೋದು ನೋಡೋಕೆ ಮೇಲಕ್ಕೆ ಹೊರಟೋದಾ?’ - ಎದೆ ಬಡಿದುಕೊಂಡು ರತ್ನವ್ವನನ್ನು ಹಿಡಿದುಕೊಂಡು ಯಾರೋ ಅಳಲು ಪ್ರಾರಂಭಿಸಿದ್ದೇ ಕೆಲವರು ಬಿಕ್ಕಿ ಬಿಕ್ಕಿ ಇಲ್ಲೂ ಕಣ್ಣೀರಾದರು.
ಬಳೆ ಹೊಡೆದು, ತಾಳಿ ಕೀಳುವಾಗಲಂತೂ ಅಳುವ ರತ್ನವ್ವನ ಬೋಳು ಕೈ, ಕುತ್ತಿಗೆ, ನೊಸಲು ಕಂಡು ಎಲ್ಲರ ಅಳು ಮತ್ತೂ ಹೆಚ್ಚಾಯಿತು. ‘ಇನ್ಯಾರವ್ವ ನಿಂಗೆ ಗತಿ?’ ಎಂದು ಹೇಳಿ ತಬ್ಬಿಕೊಳ್ಳುತ್ತಿದ್ದರು. ‘ನಿನ್ ಜೀವನ ಹಿಂಗಾಗ್ಬಾರದಾಗಿತ್ತು ಕಣವ್ವ’ ಎಂದು ತಲೆ ನೇವರಿಸಿದರು. ‘ಮುಂದೆ ನಿನ್ ಕಷ್ಟ ಸುಖ ಯಾರ ಜೊತೆ ಹಂಚ್ಕೋತೀಯವ್ವ’ ಎಂದವರೇ ಸೆರಗಿನಿಂದ ತಮ್ಮ ಕಣ್ಣೀರು ಒರೆಸಿಕೊಂಡರು. ‘ನಿನ್ ಮನೆ ತೊಲೆನೇ ಬಿದ್ದು ಹೋಯ್ತಲ್ಲವ್ವ’ ಎಂದವರು ಕೆದರಿಕೊಂಡಿದ್ದ ಕೂದಲನ್ನು ಸರಿ ಮಾಡಿದರು. ‘ಏನೇ ಆಗ್ಲಿ ಗಂಡ ಇರಬೇಕು ಕಣವ್ವ’ ಎಂದ ಕೆಲವು ಗಂಡಸತ್ತ ಹೆಂಗಸರು ಕಣ್ಣಿನಲ್ಲಿ ನೀರು ತುಂಬಿಸಿಕೊಂಡು ರತ್ನವ್ವನ ಬಳಿ ನಿಂತುಕೊಂಡು ಸಮಾಧಾನಿಸಿದರು. ‘ಓದ್ತಾ ಇರೋ ನಿನ್ ಗಂಡು, ಮದ್ವೆ ಆಗ್ದೇ ಇರೋ ನಿನ್ ಹೆಣ್ಣಿಗೆ ಇನ್ಯಾರವ್ವ ಗತಿ?’ ಎಂದು ಕೆಲವರು ದೇವರಿಗೆ ಹಿಡಿಶಾಪ ಹಾಕಿದರು. ಅಲ್ಲಿಯೇ ಇದ್ದ ಕೆಂಚಿಯನ್ನು ತಬ್ಬಿಕೊಂಡ ಕೆಲವರು ‘ಅಯ್ಯೋ! ವರದಕ್ಷಿಣೆ ಕೊಟ್ಟು ನಿನ್ ಮದ್ವೆ, ಬಾಣಂತನ, ನಾಮಕರಣ ಮಾಡೋರು ಯಾರವ್ವ, ನಿಮ್ ಮನೆ ನಾಯ್ಕಾನೇ ಹೇಳ್ದೆ ಕೇಳ್ದೆ ಹೋಗ್ಬಿಟ್ಟನಲ್ಲವ್ವ’ ಎನ್ನುತ್ತ ಕಣ್ಣೀರಾದರು.
ಅಳುವ, ಅಳಿಸುವ, ಕೀಳುವ, ಹೊಡೆಯುವ ಶಾಸ್ತ್ರವೆಲ್ಲಾ ಮುಗಿದ ಬಳಿಕ ಮನೆಗೆ ಹಿಂದಿರುಗಿದವರೇ ಗಡತ್ತಾಗಿ ಮಾಂಸದೂಟ ಉಂಡು ಅವರವರ ಊರಿಗೆ ಎಲ್ಲರೂ ಕಾಲು ಕಿತ್ತರು. ತಡರಾತ್ರಿಗೆ ಫೋಟೋದ ಮುಂದೆ ನಿಂತು ಎಲ್ಲರೂ ಮರುಪೂಜೆ ಮಾಡಿ ಆತ್ಮವನ್ನು ವೈಕುಂಠಕ್ಕೆ ಕಳುಹಿಸುವ ‘ವೈಕುಂಠ ಸಮಾರಾಧನೆ’ ಎಂಬ ಅಂತಿಮ ಕಾರ್ಯವನ್ನು ಮಗಿಸಿದರು. ಮತ್ತೆ ಕಣ್ಣೀರು ಕಚ್ಚಿಕೊಂಡ ಒಂದಷ್ಟು ಜನ ‘ಧೈರ್ಯ ತಂದ್ಕೋ, ಭಗವಂತ ಕಾಪಾಡ್ತಾನೆ’ ಎಂದು ರತ್ನವ್ವನಿಗೆ ಧೈರ್ಯಮಾತು ಹೇಳಿ ತಮ್ಮ ಮನೆಗಳಿಗೆ ಹೊರಟುಬಿಟ್ಟರು.
ಫೋಟೋ ಮುಂದೆ ಮಲಗಿಕೊಂಡ ರತ್ನವ್ವನ ಕಣ್ಣಿನಲ್ಲಿ ನೀರು ಜಿನುಗುತ್ತಿತ್ತು. ಬಾಗಿಲ ಬಳಿ ಕೆಂಚಿ ಮಲಗಿಕೊಂಡರೆ, ಹೊರಗಿನ ದಿಣ್ಣೆಯ ಮೇಲೆ ರತ್ನವ್ವನ ಮಗ ಲಕ್ಷ್ಮಣ್ ಮಲಗಿಕೊಂಡ. ಆ ಶಾಸ್ತ್ರ, ಈ ಶಾಸ್ತ್ರ, ನೆಂಟರಿಷ್ಟರು ಎಂದುಕೊಂಡು ಹಲವು ದಿನಗಳಿಂದ ನಿದ್ದೆಯೆನ್ನುವುದನ್ನೇ ಮರೆತುಬಿಟ್ಟಿದ್ದ ರತ್ನವ್ವನಿಗೆ ಕಣ್ಣು ಮುಚ್ಚಿದ್ದೇ ನಿದ್ರಾದೇವತೆ ಆವಾಹಿಸಿಕೊಂಡಳು. ಕೆಂಚಿ ಮತ್ತು ಲಕ್ಷ್ಮಣ್ ಅದಾಗಲೇ ಗಾಢನಿದ್ರೆಗೆ ಜಾರಿಕೊಂಡಿದ್ದರು.
***
‘ಅವ್ವ ಅವ್ವ’ – ರತ್ನವ್ವಳ ತೋಳನ್ನು ಜಾಡಿಸಿದ ಲಕ್ಷ್ಮಣ್. ಹತ್ತದಿನೈದು ನಿದ್ದೆ ಮಾತ್ರೆಯನ್ನು ನುಂಗಿದ ಮೊಸಳೆಯಂತೆÉ ಬಿದ್ದುಕೊಂಡಿದ್ದ ರತ್ನವ್ವ ‘ಥೂ! ನಿನ್ನ ಕಾಟ ನಿನ್ನ ಸಾವಿನಲ್ಲೇ ಕೊನೆಯಾಗೋದೇನೋ’ ಎಂದು ಹೇಳುತ್ತ ಹೇಳುತ್ತ ಕಣ್ಬಿಟ್ಟೊಡನೇ ಆಶ್ಚರ್ಯಚಕಿತಳಾದಳು. ಎಬ್ಬಿಸುತ್ತಿದ್ದವನು ತನ್ನ ಮಗನಲ್ಲ ಬೇರೆ ಯಾರೋ ಎಂದೆಣಿಸಿಕೊಂಡಿದ್ದಳು. ರತ್ನವ್ವನ ಸೀರೆಯೆಲ್ಲಾ ಒದ್ದೆಯಾಗಿತ್ತು, ಮುಖದ ಮೇಲೆ ಯಾರೋ ನೀರೆರೆಚಿದ್ದರು. ಇದ್ದಕ್ಕಿದ್ದಂತೆ ಏನೋ ಕಿವಿ ಸಿಡಿಸುವಂತಹ ಶಬ್ದ. ನಿದ್ದೆ ಮಾಡಿ ತುಂಬಾ ದಿನಗಳಾದ್ದರಿಂದ ರತ್ನವ್ವ ಇನ್ನೂ ತೂಕಡಿಸುತ್ತಿದ್ದಳು.
‘ಏನ್ ಸದ್ದಪ್ಪ ಅದು?’ – ಮಗನನ್ನು ಕೇಳಿದಳು
‘ಮಳೆ ಬತ್ತೈತೆ ಕಣವ್ವ, ಸರಿಯಾಗಿ ಕಣ್ಣು ಬಿಡು ಮೊದ್ಲು’
ಕೆಂಚಿ ಮುಖಕ್ಕೆ ನೀರೆರೆಚಿದಳು. ಮಳೆ ಎಂಬ ಶಬ್ದ ಕಿವಿಗೆ ಬಿದ್ದೊಡನೆ ರತ್ನವ್ವ ಗುಡೀರನೆ ಎದ್ದು ನಿಂತುಬಿಟ್ಟಿದ್ದಳು. ಹಚ್ಚಿಟ್ಟಿದ್ದ ಬುಡ್ಡಿಯ ಬೆಳಕಿನಲ್ಲಿ ತನ್ನ ಮಕ್ಕಳನ್ನೊಮ್ಮೆ ನೋಡಿದಳು. ಅವರೂ ನೆಂದದ್ದು ಕಂಡು, ವಲ್ಲಿಯಲ್ಲಿ ಕೈಕಾಲೊರೆಸಿ ಎಂದಿನಂತೆ ಮೂಲೆಯಲ್ಲಿಟ್ಟಿದ್ದ ಒಂದಷ್ಟು ಮಸಿ ಮೂಟೆಗಳನ್ನು ದಮ್ಮುಕಟ್ಟಿ ನಡುಮನೆಗೆಳೆದಳು. ಅಲ್ಲಿಯೇ ಇದ್ದ ನಾಲ್ಕೈದು ಸೈಜುಗಲ್ಲನ್ನು ತಬ್ಬಿ ಹೊಟ್ಟೆಯ ಮೇಲೆ ಮಲಗಿಸಿಕೊಂಡು ಮತ್ತೊಂದು ಮೂಲೆಗೆ ಬಿಸಾಕಿದಳು. ಖಾಲಿಯಾದ ಮೂಲೆಗೆ ಒಂದು ಹರಕು ಚಾಪೆ ಹರಡಿ ತನ್ನ ಮಕ್ಕಳನ್ನು ಮಲಗಿಸಿ, ಆರಲು ಹಾಕಿದ್ದ ಹುಣಸೆ, ಕಾಳು, ಅಕ್ಕಿಯನ್ನೆಲ್ಲಾ ಚೀಲಕ್ಕೆ ತುಂಬಿ, ಅಲ್ಲಲ್ಲಿ ಗುಂಡಿಕಟ್ಟುತ್ತಿದ್ದ ನೀರನ್ನು ಕಾಲಿನ ಮೂಲಕ ಹೊರಕ್ಕೆರಚಿ, ಸುರಿಯುತ್ತಿದ್ದ ಜಾಗಗಳಿಗೆ ಪಾತ್ರೆ ತಟ್ಟೆಗಳನ್ನಿಡುವ ಕೆಲಸ ಪ್ರಾರಂಭಿಸಿ ಕೊನೆಗೆ ಮನೆಯಲ್ಲಿರುವ ಪಾತ್ರೆ ಪಗಡೆಗಳೇ ಸಾಲದಾದಾಗ ವಿಧಿಯಿಲ್ಲದೇ ಮೂಟೆಗೊರಗಿ ಅವಚಿ ಕುಳಿತುಕೊಂಡಳು. ಮಣ್ಣಿನ ಗೋಡೆ ಮೇಲೆಲ್ಲಾ ರೈಲು ಕಂಬಿಯಂತೆ ಮಳೆ ಹರಿಯುತ್ತಿತ್ತು. ಕೈಯಾಡಿಸಿ ದಶಕಗಳೇ ಕಳೆದ ಹೆಂಚುಗಳಿಂದ ಸುರಿದ ನೀರು, ಅಟ್ಟಳಿನ ಗಳಗಳ ಮೂಲಕ ಒಳಗಡೆಗೆ ತೊಟ್ಟಿಕ್ಕಿ ಅಲ್ಲಲ್ಲಿ ನೀರಿನ ಸಣ್ಣ ಸಣ್ಣ ಗುಂಡಿಗಳಾಗಿದ್ದವು. ತೊಟ್ ತೊಟ್ ಎಂದು ತೊಟ್ಟಿಕ್ಕುತ್ತಿದ್ದ ದಪ್ಪ ಹನಿಗಳು ಪಾತ್ರೆ, ಪುಟ್ಟೆ, ಗುಂಡಿ ನೀರಿನ ಮೇಲೆ ಬಿದ್ದು ನೀರಾಗದ ಒಂದಗಲ ಜಾಗದಲ್ಲಿ ಮಲಗಿದ್ದ ಮಕ್ಕಳ ಮೇಲೆ ಚದುರುತ್ತಿದ್ದವು. ಹರಕು ರಗ್ಗಿನೊಳಗಿದ್ದ ಮಕ್ಕಳು ಕಾಲಿಗೆ ನೀರು ಬಿದ್ದೊಡನೆ ಮಡಚಿಕೊಂಡು, ಅವಚಿಕೊಂಡು ಮಲಗಿಕೊಳ್ಳುತ್ತಿದ್ದವು. ನಿದ್ದೆ ಹತ್ತದ ರತ್ನವ್ವಳ ಕಣ್ಣುಗಳು ಮಾತ್ರ ತುಂಬಿಕೊಳ್ಳುತ್ತಿದ್ದ ಪಾತ್ರೆ, ತಟ್ಟೆಗಳ ಮೇಲೇ ಇತ್ತು. ಹೊರಗೆ ರಭಸವಾಗಿ ಹರಿಯುತ್ತಿದ್ದ ಬಚ್ಚಲಿಗೆ ಆಗಾಗ ನೀರನ್ನು ಸುರಿದು ಪಾತ್ರೆಗಳನ್ನು ಖಾಲಿ ಮಾಡಿ ಮತ್ತೆ ಇಡುತ್ತಿದ್ದಳು.
ಇಂದೇಕೋ ಮಳೆ ನಿಲ್ಲುವ ಸೂಚನೆಯೇ ಕಾಣ ಬರಲಿಲ್ಲ. ಹೊದಿಸಿದ್ದ ಲಂಗವೊಂದನ್ನೂ ಬೇಧಿಸಿ ಮಳೆಯ ಹನಿಗಳು ಒಡೆದ ಕಿಟಕಿಗಳ ಮೂಲಕ ಒಳಗಡೆಗೆ ತೂರುತ್ತಿದ್ದವು. ಗುಡುಗು ಮಿಂಚು ಹೆಚ್ಚಾದ ಕಾರಣ ಬಾಗಿಲ ಬಳಿ ಕುಡುಗೋಲನ್ನಿಟ್ಟು ಬರಲು ತೆರಳಿದ ರತ್ನವ್ವಳಿಗೆ ಹೊರಗೆ ಹಚ್ಚಿಟ್ಟಿದ್ದ ದೀಪ ಆರಿಹೋಗಿರುವುದು ಕಂಡಿತು. ಆ ದೀಪವನ್ನು ಮನೆಬುಡ್ಡಿಯಿಂದ ಹಚ್ಚಿ ಮತ್ತೆ ಬಂದಾಗ ತಾನು ಕುಳಿತಿದ್ದ ಜಾಗ ತೇವವಾದ ಕಾರಣ ಮೂಟೆಯ ಮೇಲೆ ಕುಳಿತುಕೊಂಡಳು. ಮಕ್ಕಳು ಮಲಗಿದ್ದ ಮಂದಲಿಗೆ ಒದ್ದೆಯಾಗುತ್ತಿದ್ದರೂ ಅವರನ್ನು ಎಬ್ಬಿಸುವ ರೇಜಿಗೆ ಹೋಗಲಿಲ್ಲ. ಅವರನ್ನು ಎಬ್ಬಿಸಿಬಿಟ್ಟರೆ ಮಲಗಿಸಲು ಜಾಗವಾದರೂ ಎಲ್ಲಿದೆ ಅಲ್ಲಿ? ಮೈಯೊದ್ದೆಯಾಗಿ ಎಚ್ಚರವಾದಾಗ ಮೂಟೆ ಮೇಲೆಯೇ ಮಲಗಿಸೋಣವೆಂಬುದು ಅವಳ ಲೆಕ್ಕಾಚಾರವಾಗಿತ್ತು.
ಗೋಡೆ ಮೇಲೆ ತೂಗು ಹಾಕಿದ್ದ ತನ್ನ ಫೋಟೋವನ್ನು ನೋಡಿಕೊಂಡು ಹೃದಯಭಾರವೆನಿಸಿ ರತ್ನವ್ವ ಮುಖ ಮುಚ್ಚಿಕೊಂಡು ಅತ್ತುಬಿಟ್ಟಳು. ಈ ರೀತಿಯ ವಿಷಣ್ಣ ಸ್ಥಿತಿ ರತ್ನವ್ವಳಿಗೆ ಹಳತು. ಇದೇ ತರಹನಾಗಿ ಧಾರಾಕಾರವಾದ ಮಳೆ ಎಷ್ಟೋ ದಿನ ಸುರಿದಿದೆ. ವಾಸ್ತವದಲ್ಲಿ, ರತ್ನವ್ವಳಿಗೆ ಮೊದಲಿಗಿಂತ ಈಗ ಈ ವಿಚಾರದಲ್ಲಿ ಕಷ್ಟ ಕಡಿಮೆಯಾಗಿದೆ. ಹಿಂದೆಲ್ಲಾ ಈ ರೀತಿ ಮಳೆ ಸುರಿದರೆ, ಮಕ್ಕಳನ್ನು ಸಂಭಾಳಿಸಿ ಮಲಗಿಸುವುದರ ಜೊತೆಗೆ ಕುಡುಕ ಗಂಡನೇನಾದರೂ ಅದೃಷ್ಟಕ್ಕೆ ಮಲಗಿಕೊಂಡಿದ್ದರೆ, ಆತನನ್ನು ತಬ್ಬಿಕೊಂಡು ಅತ್ತಿತ್ತ ದರದರನೆ ಎಳೆದು ಮಲಗಿಸಬೇಕಾಗಿತ್ತು. ದುರದೃಷ್ಟಕ್ಕೆ ಆತನಿಗೆ ಎಚ್ಚರಾಗಿಬಿಟ್ಟರೆ ಕಾರಣವಿಲ್ಲದೇ ಕಾಲು ಕೆರೆದುಕೊಂಡು ನಿಲ್ಲುವ ಹುಂಜದಂತೆ ಜಗಳಕ್ಕೆ ನಿಂತುಬಿಡುತ್ತಿದ್ದ. ಕಾರಣವೇ ಇಲ್ಲದೇ ಮಕ್ಕಳನ್ನು ಬಡಿಯುವುದು ಆತನ ಕುಡುಕ ಸಂಸ್ಕøತಿ! ಮಳೆಗಾಲದ ಅದೆಷ್ಟು ದಿನಗಳಲ್ಲಿ ಆತನ ಕಾಲು ಹಿಡಿದುಕೊಂಡು ರತ್ನವ್ವ ‘ಹೆಂಚಿಗೆ ಕೈಯಾಡಿಸಿಬಿಡೊಮ್ಮೆ, ಮಳೆ ಬಂದ್ರೆ ಹೈಕ್ಳಿಗೆ ಮಲ್ಗೋಕು ತಾವಿಲ್ಲ’ ಎಂದು ಕೇಳಿಕೊಂಡಿದ್ದಾಳೆ. ಆದರೆ, ಮುಂಜಾನೆಯೇ ಕಂಠಮಟ್ಟ ಕುಡಿದು ಬರುತ್ತಿದ್ದ ಆತ ಒಮ್ಮೆಯೂ ಕೂಡ ಆಕೆಯ ಮಾತಿಗೆ ಓಗೊಡಲಿಲ್ಲ. ಹೆಂಚು ಹಾದು ಹೋಗಿರುವ ಗೋಡೆಯ ಜಾಗಕ್ಕೆ ಹಣವಿಲ್ಲದೇ ಮಡ್ಡಿ ಹಾಕುವುದಿಲ್ಲವೆಂದು ಗಾರೆ ಕೆಲಸದವರು ಮುಖ ತಿರುಗಿಸಿದ್ದರು. ಪ್ರತಿ ಮಳೆಯಲ್ಲೂ ರತ್ನವ್ವಳ ಮನೆಯೊಳಗೆ ದಪ್ಪ ಹನಿಯ ಸಣ್ಣ ಮಳೆ, ಈ ರೀತಿಯಾಗಿ ಪಾತ್ರೆಪಗಡೆಗಳನ್ನು ಜೋಡಿಸಿ ರಾತ್ರಿಯೆಲ್ಲಾ ಕಾಲ ಕಳೆಯುವ ಕೆಲಸ ರತ್ನವ್ವಳಿಗೆ.
ತನ್ನ ಕಷ್ಟವನ್ನೆಲ್ಲಾ ನೆನಪಿಸಿಕೊಂಡ ರತ್ನವ್ವ ತನ್ನ ಮಗನ ಮುಖ ನೋಡಿದಳು. ಪ್ರಪಂಚದ ನೋವನ್ನು ಗಂಟು ಕಟ್ಟಿ ಸಮುದ್ರಕ್ಕೆಸೆದು ನಿರಾಳನಾಗಿ ಮಲಗಿದಂತೆ ಕಾಣುತ್ತಿದ್ದಾನೆ. ಆತನನ್ನು ಎಂದಿನಂತೆ ಜೀತ ಮಾಡಿ ಓದಿಸಿ ದೊಡ್ಡವನನ್ನಾಗಿ ಮಾಡಿ ಒಂದೊಳ್ಳೆಯ ಜಾಗಕ್ಕೆ ಕೊಂಡೊಯ್ಯಬೇಕೆಂಬ ಅವಳಾಸೆ ಸ್ವಲ್ಪ ನೆಮ್ಮದಿ ತಂದಿತು. ಅದಕ್ಕಾಗಿ ಆಕೆ ಪಡಬಾರದ ಪಾಡನ್ನು ಪಡುತ್ತಿದ್ದಾಳೆ. ಎರಡು ವರ್ಷ ಗೌಡರ ಜೀತಕ್ಕೆ ಕುರಿ ಮೇಯಿಸಲು ಬಿಟ್ಟಿದ್ದು ನಂತರ ಅವರಿವರ ಕಾಲು ಕೈ ಹಿಡಿದು ಮತ್ತೆ ಶಾಲೆಯ ಮೆಟ್ಟಿಲನ್ನು ಹತ್ತಿಸಿದ್ದಾಳೆ. ಕುಡಿದು ಚಾವಡಿಯಲ್ಲೋ, ಅರಳಿಕಟ್ಟೆಯಲ್ಲೋ ಕಾಲ ಕಳೆದು ಊಟದ ಹೊತ್ತಿಗೆ ಮನೆಗೆ ಬರುತ್ತಿದ್ದ ಗಂಡನ ಪುಡಿಗಾಸು ಆಕೆಗೆ ಎಂದಿಗೂ ನೆರವಾಗಲಿಲ್ಲ. ಮುಂಜಾನೆ ಎದ್ದೊಡನೆ ಮನೆ ಮುಂದೆ ಸಗಣಿ ನೀರೆರೆಚಿ, ರಂಗವಲ್ಲಿ ಇಟ್ಟು, ಅಡುಗೆ ಮಾಡಿ, ರಾತ್ರಿ ಉಳಿದ ತಂಗಳು ಪಂಗಳನ್ನು ತೂಕಲಿಗೆ ತುಂಬಿಕೊಂಡು ಕೂಲಿ ಕಂಬಳಕ್ಕೆಂದು ಹೊರಟುಬಿಟ್ಟರೆ ಮತ್ತೆ ಬರುತ್ತಿದ್ದದ್ದು ಸಂಜೆಗೆ. ಹಗಲೆಲ್ಲಾ ಬಿಸಿಲಿನ ಝಳದಲ್ಲಿ ದುಡಿದು ಬೆವರಾಗಿ, ಒಣಗಿಹೋಗಿದ್ದರೂ ಸಂಜೆ ಮಕ್ಕಳ ಮೊಗವನ್ನು ಕಂಡೊಡನೆ ಅರಳಿಬಿಡುತ್ತಿದ್ದಳು. ಒಮ್ಮೊಮ್ಮೆ ಅವುಗಳನ್ನು ತಬ್ಬಿಕೊಂಡು ಮುದ್ದಾಡಿ, ಕೈಗೆ ಒಂದೈದು ರೂಪಾಯಿ ಇಟ್ಟು ಖುಷಿ ಪಡಿಸುತ್ತಿದ್ದಳು. ದಿನಕ್ಕೆ ಹೆಚ್ಚೆಂದರೆ ಐವತ್ತರಿಂದ ಅರವತ್ತು ರೂಪಾಯಿಯನ್ನು ಸಂಪಾದಿಸುತ್ತಿದ್ದ ಆಕೆಯ ಕೂಲಿ ಇತ್ತ ಅಡುಗೆಗೂ ಅತ್ತ ಹರಿದ ಬಟ್ಟೆಗಳನ್ನು ಹೊಲಿಸಲೂ ಸಾಕಾಗುತ್ತಿರಲಿಲ್ಲ. ಸ್ಟೋರ್ ದಿನಸಿ, ಕಳ್ಳ ಮಡಿಲಿನ ತರಕಾರಿಗಳನ್ನೆಲ್ಲಾ ಬೆರೆಸಿ ಅಡುಗೆ ಮಾಡಿ ಹತ್ತೋ ಇಪ್ಪತ್ತೋ ಉಳಿಸಿಕೊಳ್ಳುತ್ತಿದ್ದವಳಿಗೆ ಕುಡುಕ ಗಂಡ ಅಪರೂಪಕ್ಕೆ ಇಪ್ಪತ್ತು ಮೂವ್ವತ್ತು ಕೊಟ್ಟರೆ ಆಗಾಗ ಅದಕ್ಕಿಂತಲೂ ಹೆಚ್ಚು ಕಾಸನ್ನು ಹೊಡೆದು ಬಡೆದು ಇಸಿದುಕೊಳ್ಳುತ್ತಿದ್ದ. ಆತನ ಸಾವಿನ ಮೂಲಕ ರತ್ನವ್ವಳಿಗೆ ಈಗ ಸ್ವಲ್ಪ ಹಣ ಉಳಿಸುವ ಉಮೇದು ಹೆಚ್ಚಾಗಿದೆ! ಸೌಖ್ಯ ನೀಡದಾತನ ಗೋಳು ರತ್ನವ್ವ ಮತ್ತು ಮಕ್ಕಳಿಗೆ ಪ್ರತಿದಿನವೂ ಸೊಳ್ಳೆಕಾಟದಂತಿತ್ತು. ಕುಡಿದು ಮನೆಗೆ ಬಂದವನೇ ಗೊಣ ಗೊಣ ಎಂದು ನಿದ್ದೆಯಲ್ಲೂ ಪೇಚುತ್ತ ಮನೆ ಮಂದಿಯ ನಿದ್ದೆಯನ್ನು ಹಾಳುಗೆಡವೋದು ಆತನ ಮತ್ತೊಂದು ಕುಡುಕ ರೂಢಿ. ಆತ ಸತ್ತು ಹನ್ನೊಂದು ದಿನಗಳಾಗಿರುವ ಈ ಹೊತ್ತಿನಲ್ಲಿ ಆ ಮನೆಯವರಿಗೆ ಆ ದರಿದ್ರ ಕಾಟವಿಲ್ಲ. ಅಪ್ಪನಿಲ್ಲದ ಕಾರಣ ಮಕ್ಕಳು ಸ್ವಲ್ಪ ನಿದ್ದೆ ಮಾಡಿವೆ, ಆತನಾರ್ಭಟ, ಕಾಟದ ಮುಂದೆ ಈ ಮಳೆಯ ಹೊಡೆತ ಆಕೆಗೆ ದೊಡ್ಡದೆನಿಸುತ್ತಿಲ್ಲ.
ಸಾವಿನ ದಿನದಿಂದ ವೈದಿಕ ಕ್ರಿಯೆ ಮುಗಿಯುವವರೆವಿಗೂ ಪ್ರತಿ ಖರ್ಚಿಗೂ ಬೀದಿ ಜನಗಳ ಬಳಿ ಸಾಲಕ್ಕಾಗಿ ಕೈಯೊಡ್ಡಬೇಕಾಯಿತು. ರತ್ನವ್ವಳ ಗಂಡ ಒಂದು ರೀತಿ ಮನೆಗೆ ಮಾರಿ ಊರಿಗೆ ಉಪಕಾರಿಯೆಂಬಂತೆ ಹೊರಗಿನವರೊಡನೆ ಚೆನ್ನಾಗಿಯೇ ಇದ್ದವ. ಯಾವ ರೀತಿ? ದುಡಿದದ್ದನ್ನು ಒಂದಷ್ಟು ಜನಗಳಿಗೆ ಬಿಟ್ಟಿಯಾಗಿ ಭಟ್ಟಿ ಸಾರಾಯಿ ಕುಡಿಸುವ ಮಟ್ಟಿಗಷ್ಟೇ. ಎಲ್ಲರೂ ಕುಡುಕ ಚೇಲಗಳು. ಈಗ ಸಾಲ ಕೊಟ್ಟವರನ್ನೂ ಕೂಡಿಸಿಕೊಂಡು! ಪ್ರತಿಸಂಜೆ ಕುಡಿದು ಇದ್ದಬದ್ದ ದುಡ್ಡನ್ನೆಲ್ಲಾ ಸಾರಾಯಿ ಗಲ್ಲಕ್ಕೆ ಸುರಿದು ಬರುತ್ತಿದ್ದವನಿಗೆ ಮತ್ತೆ ಕುಡಿಯಬೇಕೆನಿಸುವ ಹಠ, ಚಟ. ರತ್ನವ್ವ ಮತ್ತು ಮಕ್ಕಳಿಗೆ ಇನ್ನಿಲ್ಲದ ಉಪದ್ರವ. ‘ನನ್ನ ಹತ್ರ ಹಣ ಇಲ್ಲ, ನಿನ್ನನ್ನ ನಿನ್ ಮಕ್ಳನ್ನ ಸಾಕ್ತಾ ಇರೋದು ನಾನು ಮೈಮುರಿದು ಸಂಪಾದ್ಸೋ ದುಡ್ಡು’ ಎಂದರೆ, ‘ಬರಿ ಸುಳ್ಳನ್ನೇ ಹೇಳ್ಬೇಡಮ್ಮಿ, ನಾನ್ ಕೊಟ್ಟಿದ್ದ ದುಡ್ಡೆಲ್ಲಾ ನುಂಗಿ ನೀರು ಕುಡಿದ್ಬುಟ್ಟಾ? ನೀನ್ ದುಡ್ದಿದ್ದನ್ನ ಆ ನಿನ್ ಮಿಂಡಂಗೆ ಕೊಡ್ತೀಯ’ ಎಂದು ಗೋಳು ತೆಗೆಯುತ್ತಿದ್ದವ ಕೆಂಚಿಯ ಕಿವಿಯಲ್ಲಿದ್ದ ಓಲೆಗಳನ್ನು ಮಾರಿ ನುಂಗಿ ಕುಡಿದು, ರತ್ನವ್ವಳ ತಾಳಿಯನ್ನೂ ಎಷ್ಟೋ ಬಾರಿ ಅಡವಿಗಿಟ್ಟು ದುಡ್ಡನ್ನು ವ್ಯರ್ಥವಾಗಿ ಜೀರ್ಣಿಸಿದ್ದ. ಗಂಡ ಸತ್ತ ನಂತರದ ಈ ಎಲ್ಲಾ ಮುತುವರ್ಜಿ ಗಾಬರಿಗಳಲ್ಲಿ ಆಕೆ ನಿದ್ದೆ ಮಾಡದೇ ಇರಬಹುದು, ಆದರೆ ಹೆಂಡತಿ ಎಂಬ ಪಟ್ಟದಲ್ಲಿ ಆಕೆಗಿದ್ದ ನೋವು, ಈಗ ವಿಧವೆ ಎಂಬ ಪಟ್ಟದಲ್ಲಿಲ್ಲ. ವಿಧವೆ ಎಂಬ ಪದ ಆಕೆಗೆ ಗೌರವ ಸೂಚಕವಾಗಿ ಕಾಣುವುದರ ಜೊತೆಗೆ ಅದು ನೀಡುತ್ತಿರುವ ನಿರಾಳತೆಯ ಮುಂದೆ ಹೆಂಡತಿ ಎಂಬ ಪಟ್ಟ ಕೊಟ್ಟ ನೋವು ಸಂಕಷ್ಟಗಳು ನೆನಪಿಗೆ ಬಂದರೆ ಸಾಕು ಈ ಮಳೆಯನ್ನೂ ಮೀರಿಸುವಂತೆ ಕಣ್ಣೀರು ಹರಿಯುತ್ತದೆ.
ಮಳೆ ನಿಲ್ಲಲೇ ಇಲ್ಲ. ಅಷ್ಟಕ್ಕೆ ಕೆಂಚಿ ಒದ್ದಾಡಿಕೊಂಡು ಎದ್ದು ಬಿಟ್ಟಳು.
‘ಯಾಕವ್ವಾ ಮಲಗು’ – ಎಂದು ಹೇಳುತ್ತ ಅವ್ವನ ತೊಡೆ ಮೇಲೆ ತಲೆ ಇಟ್ಟಳು.
‘ಮಲ್ಗೋಕೆ ತಾವೆಲ್ಲೈತವ್ವ?’ – ಅವ್ವ ಆ ರೀತಿ ಹೇಳುತ್ತಿದ್ದಂತೆ ಮಗಳು ಕಣ್ಣೀರು ಕಚ್ಚಿಕೊಂಡಳು.
‘ಅಳಬೇಡ ಕಣವ್ವಾ, ನನಗಾದಂಗೆ ನಿನಗಾಗ್ಬಾರದು, ಒಂದೊಳ್ಳೆ ಸಂಬಂಧ ನಿನ್ನನ್ನ ಹುಡ್ಕೊಂಡು ಬರುತ್ತೆ, ನೀನು ಸುಖವಾಗಿ ಮಾರಾಣಿ ತರ ಬಾಳ್ತೀಯ’
‘ಏಟ್ ಸಂಬಂಧ ಬಂದಿತ್ತವ್ವ?’
‘ಅದೆಲ್ಲ ನೆಪ್ಪಲ್ಲಿಡ್ಬೇಡ ಕಂದಾ, ಬಂದಿದ್ದ ನೆಂಟಸ್ತನ ಎಲ್ಲಾ ನಿನ್ ಕುಡುಕಪ್ಪನಿಂದ ಮುರ್ದೋಯ್ತು, ಕುಡುಕನ ಮನೆಯಿಂದ ಹೆಣ್ಣು ತಂದ್ರೆ ಏಳ್ಗೆ ಆಗುತ್ತಾ? ನೆಮ್ಮದಿ ಇರುತ್ತ ಅಂದ್ಕೊಂಡಂದ್ಕೊಂಡೇ ಎಲ್ಲಾ ನಮ್ಮನ್ನ ಕೈ ಬಿಟ್ರವ್ವ’ – ಎಂದು ಹೇಳುತ್ತಿದ್ದಂತೆ ಇಬ್ಬರೂ ಅಳಲು ಶುರುವಿಟ್ಟುಕೊಂಡರು.
‘ಆ ಗಾಯಕ್ಕೆ ಮುಲಾಮು ಹಚ್ದವ್ವ?’ – ಮುಂಜಾನೆ ಬಳೆ ಹೊಡೆಯುವಾಗ ಬಳೆಯ ಸಿವುರು ಚುಚ್ಚಿ ಆಗಿದ್ದ ಗಾಯ ನೋಡುತ್ತ ಕೆಂಚಿ ಕೇಳಿದಳು. ‘ಇಲ್ಲ ಕಣವ್ವ’ ಎಂದೊಡನೆ ಗೊಣಗಿಕೊಂಡ ಕೆಂಚಿ ಮುಲಾಮು ಔಷಧಿಯಿಲ್ಲದೇ ಮುಖಕ್ಕೆ ಬಳಿದುಕೊಳ್ಳಲು ಇದ್ದ ಪೌಡರನ್ನೇ ತಂದು ಸುರಿದಳು.
ಸರಿಯಾದ ಔಷಧಿ ಸಲಕರಣೆ ಸಿಗದೆ ಆತ ಮಾಡಿದ್ದ ಇಂತಹ ಗಾಯಗಳು ಒಣಗಿ ಒಣಗಿ ಗಂಟುಗಳಾಗಿ ಸತ್ತು ನೆಮ್ಮದಿ ತಂದವನ ಮತ್ತೆ ಮತ್ತೆ ಅಣಕಿಸುತ್ತಿದ್ದವು. ಒಮ್ಮೆ ಮೂಗಿಗೆ ಗುದ್ದಿ ರಕ್ತ ಸೋರಿಸಿದ್ದಾಗ ಕೋಪದಲ್ಲಿ ಕೊಂದೇ ಬಿಡುತ್ತೇನೆ ಎಂದು ರತ್ನವ್ವ ಕುಡುಗೋಲೊಂದನ್ನು ಹಿಡಿದುಕೊಂಡಿದ್ದಳು. ‘ಸಾಯ್ಸಮ್ಮಿ, ಬದುಕಿ ನೀನು ಕೆಟ್ಟವಳಾಗು, ಸತ್ತು ನಾನು ಒಳ್ಳೆಯವನಾಗ್ಬಿಡ್ತೀನಿ’ ಎಂದಿದ್ದ. ಈಗ ನಿಜಕ್ಕೂ ಸತ್ತು ಒಳ್ಳೆವನಾಗಿಯೇ ಹೋದ!
‘ಅವ್ವಾ’ – ಕೆಂಚಿ ಕೂಗಿದಳು.
‘ಏನು ಕಂದಾ’
‘ನಾನು ಮದ್ವೆ ಆಗೋದಾದ್ರೆ, ಅವನನ್ನೇ ಆಗೋದು, ಇಲ್ಲಾಂದ್ರೆ...’
‘ಹೇ, ಥೂ! ನಿನ್ ಜನ್ಮಕ್ಕೆ ಬೆಂಕಿ ಹಾಕ, ಈಗ ತಾನೇ ಒಸಿ ಸುಧಾರಿಸ್ಕೊಂಡು ಇನ್ನಾದ್ರೂ ನೆಮ್ಮದಿ ಕಾಣೋಣ ಅಂಥ ಇದ್ದೀನಿ, ಮತ್ತೆ ಅವನ ವಿಚಾರ ತಂದಾ ನೀನು, ಗುಡ್ಸಟ್ಟಿ’
ಕೆಂಚಿ ಬಿಕ್ಕಿ ಬಿಕ್ಕಿ ಅಳುತ್ತ, ಎದೆ ಭಾರಗೊಳಿಸಿಕೊಂಡು ಮೌನವಾದಳು. ತಾಯಿಯ ತೊಡೆಯಲ್ಲಿ ತಲೆ ಇಟ್ಟಿದ್ದ ಅವಳಿಗೆ ಇರುಸು ಮುರುಸಾಯಿತು. ತಲೆ ಬದಲಿಸಿ ಮಸಿಯ ಚೀಲದ ಮೇಲಿಟ್ಟಳು. ಆಕೆಯನ್ನು ನೋಡಿ ಗೊತ್ತು ಮಾಡಿಕೊಂಡು ಹೋಗಲು ಹತ್ತಾರು ಸಂಬಂಧಗಳು ಬಂದಿವೆ. ಎಲ್ಲವೂ ಕುದುರುವಲ್ಲಿರುವಾಗಲೇ ಅವಳಪ್ಪನ ಕಾಟದಿಂದ ಅರ್ಧಕ್ಕೆ ಮುರಿದುಬಿದ್ದಿವೆ. ಇರುವಷ್ಟು ದಿನ ಆತ ಈಕೆಯ ಮದುವೆ ಬಗ್ಗೆ ಯೋಚಿಸಿದವನೇ ಅಲ್ಲ, ಮೈಮೇಲೊಂದಷ್ಟು ಒಡವೆ ಹಾಕಿಸಿದವನಲ್ಲ, ಬದಲಾಗಿ ಇರುವುದೆಲ್ಲವ ಶುದ್ಧವಾಗಿ ಕೇರಿ ಮಾರಿದವನು. ಇದೆಲ್ಲದರ ನಡುವೆಯೂ ಆಕೆಗೆ ಕೆಳಬೀದಿಯ ಹುಡುಗನೊಬ್ಬನ ಮೇಲೆ ಪ್ರೇಮಾಂಕುರವಾಗಿತ್ತು. ಸ್ವಲ್ಪ ಹೆಚ್ಚೇ ಪ್ರೀತಿಸಿದ್ದರೂ ಅನ್ನಿ. ನಡುಗುವ ಮೈ ದನಿಯೊಂದಿಗೆ ಆ ವಿಚಾರವನ್ನು ಎಷ್ಟೋ ದಿನ ಮನೆಯಲ್ಲಿ ಪ್ರಸ್ತಾಪಿಸಲು ಪ್ರಯತ್ನಿಸಿ, ಸೋತು ಕೊನೆಗೊಂದು ದಿನ ಧೈರ್ಯ ತಂದು ಹೇಳಿಯೇಬಿಟ್ಟಾಗ ಕುಡುಕ ಅಪ್ಪ ಜಾಡಿಸಿ ಹೊಟ್ಟೆಗೆ ಒದ್ದಿದ್ದು ಬಾವುಕಟ್ಟಿ ಹಾಗೇ ಇದೆ. ಆ ಹುಡುಗನ ಹಟ್ಟಿವರೆವಿಗೂ ಹೋಗಿದ್ದ ಅಪ್ಪ ಅಂದು ಮಾಡಿಕೊಂಡು ಬಂದಿದ್ದ ರಾದ್ಧಾಂತಕ್ಕೆ ಕೆಲವು ದಿನಗಳವರೆವಿಗೂ ಕೆಂಚಿ ಮನೆಯಿಂದ ಹೊರಗೆ ಬಂದಿರಲಿಲ್ಲ. ‘ಅವರು ನಮ್ಮ ಮಟ್ಟದವರಲ್ಲ, ಅವರು ನಾವು ಬೇರೆ ಬೇರೆ ಕೇರಿಯವರು, ಈ ಮದ್ವೆ ಮಾಡ್ಸೋ ಬದಲು ನಿನ್ನನ್ನ ಯಾವಾದಾದ್ರೂ ಪಾಳುಬಾವಿಗೆ ನೂಕ್ಬಿಡ್ತೀನಿ’ ಎಂದು ರತ್ನವ್ವ ಹೇಳಿದ್ದಾಗ ತನ್ನ ಮನೆಯ ಮುರುಕು ಗೋಡೆ, ಕಿಟ್ಟ ಹಿಡಿದ ಕಂಬ ಗಳಗಳನ್ನು ನೋಡಿ ಕೆಂಚಿ ‘ಇದ್ಯಾವ ಮೇಲ್ಮಟ್ಟವೋ?’ ಎಂದುಕೊಂಡಿದ್ದಳು.
ಮಳೆಯ ರಭಸ ನಿಲ್ಲದ ಕಾರಣ ಕೆಂಚಿಯ ಸಣ್ಣನೆ ಬಿಕ್ಕಳಿಗೆ ರತ್ನವ್ವಳಿಗೆ ಕೇಳಿಸುತ್ತಿರಲ್ಲಿಲ್ಲ. ಆದರೂ ನೊಂದುಕೊಂಡ ತಾಯ ಮನಸ್ಸು ಆಕೆಯ ತಲೆ ಸವರಲು ಕೈ ಚಾಚಿತು. ಕೈ ಒದರಿದ ಕೆಂಚಿ ‘ನಂದು ಒಂದು ಬಾಳಾ?’ ಎಂದುಕೊಂಡಳು. ಆಕೆಯನ್ನು ಒಳ್ಳೆಯೆಡೆಗೆ ಮದುವೆ ಮಾಡಿ, ಆಕೆಯ ಸುಖವನ್ನು ಬಯಸುವ ರತ್ನವ್ವ, ಆಕೆ ತನ್ನ ಸುಖದ ಪುರುಷನನ್ನು ಬಯಸಿಬಿಟ್ಟರೆ ಸಾಕು ಕೆಂಡವಾಗುತ್ತಿದ್ದಳು. ಕುಡುಕಪ್ಪನೊಪ್ಪಿಗೆ ಕೆಂಚಿಗೆ ಉಮೇದಾಗಿರಲಿಲ್ಲ, ಬದಲಾಗಿ ಅಮ್ಮನೊಪ್ಪಿಗೆಗೆ ಕಾದಿದ್ದಳು. ಆದರೆ, ಈ ವಿಚಾರದಲ್ಲಿ ಆಕೆಗೆ ಇಬ್ಬರ ನಡುವೆ ವ್ಯತ್ಯಾಸವೇನೂ ಕಂಡಿರಲಿಲ್ಲ!
ಅಷ್ಟಕ್ಕೇ ‘ಥೂ! ಬಟ್ಟೆಯೆಲ್ಲಾ ಒದ್ದೆಯಾಗಿಹೋಯಿತು’ ಎಂದು ಚೀರಿಕೊಂಡು ಲಕ್ಷ್ಮಣ ಎದ್ದುಬಿಟ್ಟ. ಚರಂಡಿಯ ನೀರು ಉಕ್ಕಿ ಮುಂದಿನ ಮನೆಗೆ ತುಂಬಿಕೊಂಡು, ನಡುಮನೆಗೆ ಬಾಗಿಲ ಮೂಲಕ ಒಸರುತ್ತಿತ್ತು. ದಡದಡನೆ ಎದ್ದ ರತ್ನವ್ವ, ಒಂದು ಗಳ ಹಿಡಿದುಕೊಂಡು, ಸೀರೆ ಸೆರಗನ್ನೇ ತಲೆಗೆ ಟೊಪ್ಪಿ ಮಾಡಿಕೊಂಡು, ಮಗನನ್ನು ಒಳಗಡೆಗೆ ಎಳೆದು ಮುಂದಿನ ಮನೆಯೊಳಗೆ ನುಗ್ಗಿದ ನೀರನ್ನು ತಪ್ಪಲೆ ಮೂಲಕ ಹೊರಕ್ಕೆ ಎರಚಿ, ಗಳದ ಮೂಲಕ ಕೆಸರು ಕಡ್ಡಿ ಮಡ್ಡಿಯನ್ನೆಲ್ಲಾ ತಳ್ಳಲು ನಿಂತಳು. ಆಕೆಯ ತೋಳು ಕೈ ಕಾಲುಗಳು ಇನ್ನಿಲ್ಲದ ವೇಗ ಪಡೆದುಕೊಂಡು ತಳ್ಳುತ್ತಿದ್ದರೂ ನಿಲ್ಲದ ನೀರು ನಡುಮನೆಗೆ ಮತ್ತೆ ನುಗ್ಗುವುದರಲ್ಲಿತ್ತು. ಅಷ್ಟಕ್ಕೆ ಎಡಗಡೆಯ ಗೋಡೆ ಧಪ್ಪನೆ ಕೆಳಕ್ಕೆ ಬಿತ್ತು. ಕೂಡಲೇ ಮತ್ತೊಂದು ಗೋಡೆ ಬದಿಗೆ ಅವಚಿಕೊಂಡರೂ ರತ್ನವ್ವಳ ಕಾಲಿನ ಮೇಲೆ ಗೋಡೆಯ ದಪ್ಪನೆಯ ಹಿಂಟೆ ಬಿದ್ದು ರಕ್ತ ಚಿಮ್ಮಿತು. ಮೂಲೆಯಲ್ಲಿ ಹಚ್ಚಿಟ್ಟಿದ್ದ ದೀಪ ಮಾತ್ರ ಚೂರು ಚೂರಾಗಿ ಗೋಡೆಯ ಮಣ್ಣಿನೊಳಗೆ ಬೆರೆತುಹೋಯಿತು. ಗುಡುಗು ಮಿಂಚಿಗೆ ಹೆದರಿ ಬಾಗಿಲ ಬಳಿ ಇಟ್ಟಿದ್ದ ಕುಡುಗೋಲನ್ನೂ ಅದಾಗಲೇ ನೀರು ಹೊತ್ತುಕೊಂಡು ಹೋಗಿತ್ತು. ನೆಲಕಂಡ ಗೋಡೆ ಎರಚಿದ ನೀರಿಗೆ ಸಂಪೂರ್ಣ ಒದ್ದೆಯಾದ ರತ್ನವ್ವ ನೀರನ್ನು ಹೊರಗೆ ತಳ್ಳಲು ಮತ್ತೆ ಮತ್ತೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮೂಟೆ ಮೇಲೆ ಕುಳಿತಿದ್ದ ಮಕ್ಕಳು ತೂಕಡಿಸುತ್ತಿದ್ದದ್ದನ್ನು ಕಂಡಳು. ಒಳಬಂದವಳೇ ಮಕ್ಕಳನ್ನು ಎಬ್ಬಿಸಿ ತನ್ನ ಸೀರೆ ಸೆರಗಿನಿಂದ ತಲೆಗೆ ಕೊಡೆ ಮಾಡಿ ಬಾಗಿಲ ಬಳಿ ಬಂದು ‘ವೆಂಕ್ಟಕ್ಕ, ವೆಂಕ್ಟಕ್ಕ, ರಾಮಣ್ಣ, ರಾಮಣ್ಣ’ ಎಂದು ಜೋರಾಗಿ ಕೂಗಿದಳು. ಮುಂದಿನ ಮನೆಯ ರಾಮಣ್ಣ ವೆಂಕ್ಟಕ್ಕಳಿಗೆ ಎಚ್ಚರವಾಗಲಿಲ್ಲ. ‘ವೆಂಕ್ಟಕ್ಕ, ವೆಂಕ್ಟಕ್ಕ, ವೆಂಕ್ಟಕ್ಕೋ’ ಎಂದು ಮತ್ತೆ ಶಕ್ತಿಯೆಲ್ಲಾ ಉಪಯೋಗಿಸಿ ಜೋರಾಗಿ ಕೂಗಿದೊಡನೆ ಆ ಮನೆಯಿಂದ ‘ಓ...’ ಎಂಬ ಶಬ್ದ ಬಂತು.
ಕೂಡಲೇ ಕಿಟಕಿ ತೆರೆದ ವೆಂಕ್ಟಕ್ಕ ‘ಏನವ್ವ?’ ಎಂದಳು.
‘ಸ್ವಲ್ಪ ನಮ್ಮ ಐಕ್ಳನ್ನ ನಿನ್ ಮನೇಲಿ ಮಲಗಿಸ್ಕೋ, ಮನೆಯೆಲ್ಲಾ ಸುರಿತಾ ಇದೆ, ಮುಂದಿನ ಮನೆ ಗೋಡೆ ಬಿದ್ದೋಗೈತೆ’
‘ಅಯ್ಯೋ ಶಿವ್ನೇ, ಕಳ್ಸವ್ವ, ಆ ಪುಣ್ಯಾತ್ಮ ನಿನ್ ಗಂಡ ಇದ್ದಿದ್ರೆ ಈ ರೀತಿ ಆಗೋಕೆ ಬಿಡ್ತಿದ್ನವ್ವ, ಗಂಡ ಇಲ್ದೇ ಇರೋ ಮನೆ ಕಣವ್ವಾ ನಿಂದು’ ಎಂದಾಗ ಆಕೆಯ ಮಾತಿಗೆ ಕಿವಿ ಕೊಡದ ರತ್ನವ್ವ ಕೂಡಲೇ ತನ್ನ ಮಕ್ಕಳನ್ನು ಮುಂದಿನ ಮನೆಗೆ ಬಿಟ್ಟುಬಂದು, ನಡುಬಳಸಿ ಸೀರೆಕಟ್ಟಿ, ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಚರಂಡಿಗೆ ಚಾಚಿಕೊಂಡಿದ್ದ ರಾಶಿ ರಾಶಿ ಕಸ ಕಡ್ಡಿಯನ್ನೆಲ್ಲಾ ತಳ್ಳುತ್ತಾ ನಿಂತುಬಿಟ್ಟಳು.
ಭಾವಗೊಂಚಲು
ಕವಿತೆಗಳ ಹಾದಿಯಲ್ಲಿ ಸಾಗಿರುವ ನಿಮ್ಮ ಬಂಡಿಯಲ್ಲಿ ಕುಳಿತುಕೊಳ್ಳಲು ಒಂದಿನಿತು ಜಾಗ ನೀಡಿ, ದುಡ್ಡು ಕೇಳಲು ನೀವು ಬಂಡಿಯ ನಿರ್ವಾಹಕನಲ್ಲ, ನೀಡಲು ನಾನೇನು ಪ್ರಯಾಣಿಕನಲ್ಲ ಸ್ನೇಹದ ಕೊಂಡಿಯಲ್ಲಿ ನೀವು ತೂಗುತಿದ್ದಿರಿ, ಆತ್ಮೀಯನಿಗೆ ಬೇಸರವಯಿತೇನೋ ಎಂದೆನಿಸಿ ನಾನೂ ಕೂಡಿಕೊಂಡೆ...
Tuesday, 4 June 2013
ಕನ್ನಡಿಯ ಬೆನ್ನು
Monday, 8 April 2013
ಮನಸ್ಸು (ಕಥೆ) (ಈ ವಾರದ ಕರ್ಮವೀರದಲ್ಲಿದೆ, ಏಪ್ರಿಲ್ 14 - ಏಪ್ರಿಲ್ 20, 2013)
ಬಲವಂತಕ್ಕೆ ಹಾಸಿಗೆಯ ಮೇಲೆ ಬಂದು ಕುಳಿತಿದ್ದಳು. ಅವಳಿಗೆ ಹಣ್ಣುಗಳ ಪಕ್ಕ ಇಟ್ಟಿದ್ದ ಚಾಕುವಿನ ಮೇಲೆ ಕಣ್ಣು. ಆತನಿಗೆ ಹಾಲು, ಹಣ್ಣು ಮತ್ತು ಹೆಣ್ಣಿನ ಮೇಲೆ ಕಣ್ಣು. ಆತ ಹತ್ತಿರ ಬಂದವನೇ ಆಕೆಯ ಸೀರೆ ಸೆರಗ ಮೇಲೆ ಕೈ ಇಟ್ಟ. ಅಲ್ಲೇನೂ ಬಲವಂತವಿರಲಿಲ್ಲ. ಆಕೆಯ ಮೊಗದಲ್ಲಿ ನಾಚಿಕೆಯಿಲ್ಲದಿದ್ದರೂ ಆತನಲ್ಲಿ ತುಸು ನಾಚಿಕೆಯಿತ್ತು. ಆತನಿಗದು ಮೊದಲ ಮಿಲನರಾತ್ರಿ, ಆದರೆ ಆಕೆಗಲ್ಲ. ಸೀರೆ ಸೆರಗು ಹಿಡಿದು ಹತ್ತಿರ ಕುಳಿತವನೇ ತೋಳಿಗೆ ತೋಳು ತಾಗಿಸಿದ. ಬೆಂಕಿ ತಾಕಿದವರು ಓಡುವಂತೆ ಆಕೆ ಪಕ್ಕಕ್ಕೆ ಸರಿದಳು. ಆತನಿಗೆ ಅರ್ಥವಾಗಲಿಲ್ಲ, ಮತ್ತೆ ತೋಳನ್ನು ತಾಗಿಸಿದ. ಆಕೆ ಕೋಪದಿಂದ ತಿರುಗಿದಳು, ಕಣ್ಣಿನಲ್ಲಿ ಬೆಂಕಿ ಹೊಮ್ಮುತ್ತಿತ್ತು. ಆಕೆಯ ಎದೆಯಲ್ಲಿ ತಾಳಿ ಇರಲಿಲ್ಲ, ಆತ ಕೊಟ್ಟಿದ್ದ ಚಿನ್ನದುಂಗುರ ಪಕ್ಕದಲ್ಲಿಯೇ ಇದ್ದ ಬೆಂಚಿನ ಮೇಲಿತ್ತು. ಆದರೆ, ಆ ಕ್ಷಣದಲ್ಲಿ ಆತನಿಗೆ ಅದೆಲ್ಲಾ ಬೇಡವಾಗಿತ್ತು, ಮೊದಲ ಅನುಭವ, ಎಷ್ಟೋ ದಿನಗಳಿಂದ ತಣಿಸಿಕೊಂಡುಬಂದ ಕಾಮತೃಷೆಗೆ ನೀರೆರೆಯಬೇಕಾಗಿತ್ತು. ಈಕೆಗೋಸ್ಕರ ಎಷ್ಟೋ ಜನರನ್ನು ಕಾಡಿಬೇಡಿ ಇಲ್ಲಿಗೆ ಬರಮಾಡಿಕೊಂಡಿದ್ದ. ಆಕೆ, ಎದ್ದು ನಿಂತು ಸರಸರನೆ ಹೋಗಿ ಬಾಗಿಲು ತೆರೆದಳು. ಹೊರಗೆ ಕಾವಲಿಗೆ ನಿಂತ ಒಂದಷ್ಟು ಜನ ಕಂಡರು, ತೂ! ಎಂದು ಉಗಿದವಳೇ ಮತ್ತೆ ಬಂದು ಹಾಸಿಗೆ ಮೇಲೆ ಮಲಗಿದಳು. ಆತ ಕೈಯಿಂದ ಸೊಂಟ ಬಳಸಿದ. ಈಕೆ ಮತ್ತೆ ತೂ! ಎಂದು ಆತನ ಕೈ ಒಗೆದಳು. ಆದರೆ ಆತನಿಗೆ ತಡೆದುಕೊಳ್ಳಲಾಗಲಿಲ್ಲ. ಮತ್ತೆ ಆಕೆಯ ದೇಹವನ್ನು ತನ್ನ ಕೈಗಳಿಂದ ಬಳಸಿದ, ಆಕೆ ಆತನಿಂದ ಬಿಡಿಸಿಕೊಂಡು ಪಕ್ಕಕ್ಕೆ ಹೊರಳಿದಳು. ಆದರೆ ಆತ ಬಿಡಲೊಲ್ಲ, ಕೆನ್ನೆಗೆ ಮುತ್ತಿಕ್ಕಿದ. ಆಕೆ ಎಂಜಲು ಒರೆಸಿಕೊಂಡಳು. ಜಿಂಕೆಯ ಮೇಲೆ ಎರಗಿದ ಹುಲಿಯಂತೆ ಆತ ಗಟ್ಟಿಯಾಗಿ ತಬ್ಬಿಕೊಂಡು ಕಾಲಿನಿಂದ ಅವಳ ಕಾಲದುಮಿ ಕೈಗಳನ್ನು ಗಟ್ಟಿಯಾಗಿ ಹಿಡಿದು ಮೇಲೆ ಹೊರಳಲು ಬಂದ. ಮೈಮೇಲೆ ವಿಷಸರ್ಪ ಬಿದ್ದಾಗ ಕೊಡವಿಕೊಳ್ಳುವಂತೆ ದೇಹವನ್ನು ಕೊಡವಿಕೊಂಡವಳೇ ‘ಹತ್ರ ಬರ್ಬೇಡ, ಕೊಂದ್ಬಿಡ್ತೀನಿ’ ಎಂದು ಅವನು ಕೊಟ್ಟಿದ್ದ ಉಂಗುರವನ್ನು ಮುಖದ ಮೇಲೆಸೆದಳು.
ಆತ ಸ್ವಲ್ಪ ಹೊತ್ತು ಮೌನವಾಗಿ ಆಕೆಯ ಪಕ್ಕ ಮಲಗಿಕೊಂಡ. ಮತ್ತೆ ಆಕೆಯ ಸೌಂದರ್ಯ ಕೆಣಕಿತು. ಈ ಬಾರಿ ಜಿಂಕೆಯ ಮೇಲೆ ಆನೆ ಮಲಗಿದಂತೆ ಮೇಲೆ ಬಿದ್ದ. ಆಕೆಯ ಬಾಯಿಯನ್ನು ಅದುಮಿ ಕಾಲನ್ನು ಒತ್ತಿದ. ಆತ ‘ಆ...’ ಎಂದ. ಆಕೆಯ ಹೊಟ್ಟೆಯ ಮೇಲೆ ರಕ್ತ ಜಿನುಗಿತು. ಅದುಮಿಟ್ಟುಕೊಂಡಿದ್ದ ಬಾಯಿ ಸಡಿಲವಾಯಿತು, ಕೈ ಕಾಲುಗಳು ಅಲುಗಾಡಿದವು. ಆಕೆಯ ಕೈಯಿಂದ ಹರಿದುಕೊಂಡು ಬಂದ ರಕ್ತ ಹೊಟ್ಟೆಯ ಮೇಲಿಂದ ಹಾಸಿಗೆಗೆ ಧುಮುಕಿತು. ಬೆನ್ನಿಗೆ ಎರಡು ಬಾರಿ, ಹೊಟ್ಟೆಗೆ ಮೂರು ಬಾರಿ ಚುಚ್ಚಿಕೊಂಡ ಚಾಕು ಹಾಸಿಗೆಯ ಪಕ್ಕ ಬಿದ್ದುಕೊಂಡಿತು.
-
‘ಥೂ! ಇವಳ ಜನ್ಮಕ್ಕೆ ಬೆಂಕಿ ಹಾಕ, ಹೆಂಗಸಾಗಿ ಒಂದು ಕೊಲೆ ಮಾಡೋಕೆ ಧೈರ್ಯ ಹೇಗೆ ಬಂತು’
‘ಆಹಾಹ... ಮಾಡೋದು ಮಾಡ್ಬಿಟ್ಟು ಈಗ ಗರತಿಯಂತೆ ಮೈ ತುಂಬಾ ಸೀರೆ ಹಾಕ್ಕೊಂಡಿರೋದು ನೋಡು’
‘ನನಗೆ ಮೊದಲೇ ಗೊತ್ತಿತ್ತು ಇವಳು ಶೀಲವಂತೆ ಅಲ್ಲ ಅಂತ, ನಾಯಿ ಮುಟ್ಟಿದ ಮಡ್ಕೆ ಇವಳು, ಈಗ ರಕ್ತ ಹರಿಸಿ ಬಂದವ್ಳೆ’
ಆಕೆ ಕೋರ್ಟಿನ ಮೆಟ್ಟಿಲು ಹತ್ತುವವರೆವಿಗೂ ಈ ಬೈಗುಳಗಳು ನಾಯಿಯಂತೆ ಅವಳ ಹಿಂದೆಯೇ ಬರುತ್ತಿದ್ದವು. ಹೌದು, ಮೈ ತುಂಬಾ ಸೀರೆ ಹೊದ್ದಿದ್ದಳು. ತಲೆ ಬಾಚಿಲ್ಲ. ಕೂದಲು ಕೆದರಿಕೊಂಡು ಬಿರುಗಾಳಿಗೆ ಸಿಕ್ಕ ಬೆಟ್ಟದಂತಾಗಿತ್ತು. ಹಣೆ ಕುಂಕುಮವನ್ನು ಅಳಿಸಿಕೊಂಡಿದ್ದಳು.
ನಿರ್ಭಾವುಕಳಾಗಿ ಅಲ್ಲಿಯೇ ನಿಂತಿದ್ದ ಹೆತ್ತವರನ್ನೊಮ್ಮೆ ನೋಡಿದಳು.
‘ಥೂ! ನಿನ್ನ ಬಾಯಿಗೆ ಮಣ್ಣು ಹಾಕ, ಎಂಥ ಕೆಲಸ ಮಾಡ್ಬಿಟ್ಟೆ ನೀನು, ನಾವು ಬೀದಿಯಲ್ಲಿ ತಲೆಯೆತ್ತಿಕೊಂಡು ನಡೆಯೋಕಾಗುತ್ತೇನೆ?’
ಅಷ್ಟರಲ್ಲಿಯೇ ಒಂದು ಹಳೆಯ ಚಪ್ಪಲಿ ಆಕೆಯ ಹಣೆಗೆ ಬಡಿಯಿತು. ಆಕೆ ಅಲುಗಾಡಲಿಲ್ಲ. ತಂದೆ ತಾಯಿಯನ್ನು ನೋಡಿಕೊಂಡು ಸಣ್ಣಗೆ ನಕ್ಕಳು. ಆ ನಗು ಬರಬೇಕೆಂದರೆ ಮನಸ್ಸಿನಲ್ಲಿ ಅತೀವ ಬೇಸರವಿರಬೇಕು. ಅವಳ ಎದೆಯನ್ನೇ ಕೊಯ್ದುಕೊಂಡು ಬಂದ ನಗು ಅದು.
ಕೈ ಕೋಳವನ್ನು ಬಿಡಿಸಿ ಆಕೆಯನ್ನು ಒಂದು ಬೆಂಚಿನಲ್ಲಿ ಕೂರಿಸಿದರು. ನ್ಯಾಯಾಲಯದಲ್ಲಿ ಕಲಾಪ ನಡೆಯುತ್ತಿತ್ತು. ಒಂದಷ್ಟು ಜನ ಕಪ್ಪು ವಸ್ತ್ರಧಾರಿಗಳು ಸರಿಯನ್ನು ತಪ್ಪೆಂದು, ಇನ್ನೊಂದಷ್ಟು ಜನ ತಪ್ಪನ್ನು ಸರಿಯೆಂದು ಸಾಧಿಸುತ್ತಿರುವಂತೆ ಆಕೆಗೆ ಕಂಡಿತು. ಇವರಿಬ್ಬರ ನಡುವೆ ಹೊಸಕಿಹೋದವಳೆಂದರೆ ನ್ಯಾಯದೇವತೆ. ಆಕೆಯ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಲಾಗಿತ್ತು. ಕೈಯಲ್ಲಿದ್ದ ತಕ್ಕಡಿಯ ಭಾರ ಒಂದೇ ಕಡೆ ಇತ್ತು. ಯಾವ ಕಡೆ? ಆಕೆಗಂತೂ ಗೊತ್ತಿಲ್ಲ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ನ್ಯಾಯದೇವತೆಯ ಮುಂದೆ ತನಗೆ ನ್ಯಾಯ ದೊರಕುವುದೆಂಬ ನಂಬಿಕೆಯೂ ಆಕೆಗಿರಲಿಲ್ಲ. ಒಮ್ಮೆ ತನ್ನ ಕೈ ನೋಡಿಕೊಂಡಳು. ರಕ್ತದ ಕಲೆ ಇನ್ನೂ ಮಾಸಿರಲಿಲ್ಲ. ನುಣುಪಾದ ನೆಲದಲ್ಲಿ ಆಕೆಯ ಮುಖ ವಿಕಾರವಾಗಿ ಕಂಡಿತು. ಮತ್ತೆ ತಲೆ ಎತ್ತಿ ನ್ಯಾಯದೇವತೆ ಕಡೆ ನೋಡಿದಳು. ನನ್ನಂತಹ ಕೊಲೆಗಾತಿಯನ್ನು ನೋಡುವ ಬದಲು ನೀನು ಈ ರೀತಿಯಾಗಿ ಬಟ್ಟೆ ಸುತ್ತಿಕೊಂಡಿರುವುದೇ ಸರಿ ಎಂದುಕೊಂಡಳು.
ಕಟಕಟೆಯಲ್ಲೊಬ್ಬ ಕೊಲೆಗಾರ ನಿಂತಿದ್ದ. ವಾದಿಸಿ ವಾದಿಸಿ ಮಾತು ಮಾತುಗಳು ಬೆಳೆದದ್ದರಿಂದ ಆತ ಸೋತುಹೋಗಿದ್ದನೋ ಏನೋ? ಕೊನೆಗೂ ತಾನೊಬ್ಬ ಕೊಲೆಗಾರನೆಂದು ಒಪ್ಪಿಕೊಂಡಿದ್ದ. ಕೊಲೆ ಮಾಡಿದ್ದು ಸತ್ಯವಾಗಿತ್ತು, ಆದರೆ ಕೊಲೆಯ ಕಾರಣಗಳು ನ್ಯಾಯದೇವತೆಗೆ ಪಥ್ಯವಲ್ಲ. ದೇಹವನ್ನು ಚುಚ್ಚಿದ್ದು ತಪ್ಪು, ದೇಹವನ್ನು ಚುಚ್ಚಲು ಬಂದಿದ್ದ ಮನಸ್ಸಿನ ಗಾಯಗಳನ್ನು ಈ ಜಗತ್ತಿನಲ್ಲಿ ಸಾಕ್ಷಿಯಾಗಿ ಪರಿಗಣಿಸಲಾವುದಿಲ್ಲ. ಮನಸ್ಸು ಎಲ್ಲರಿಗೂ ಕಾಣುವುದಿಲ್ಲ. ಮೌನದೊಳಗೆ ಕೋಟಿ ಮಾತುಗಳಿದ್ದರೂ ತುಟಿಯಿಂದ ಹೊರಗೆ ಹೊಮ್ಮುವುದಿಲ್ಲ.
ನೇಣುಗಂಬಕ್ಕೇರಿಸುವ ತೀರ್ಪಿನೊಂದಿಗೆ ಆತನನ್ನು ಎಳೆದೊಯ್ದ ನಂತರ ಮತ್ತೊಂದು ಕೊಲೆಯ ವಿಚಾರ ಕಟಕಟೆಗೆ ಬಂತು. ಆಕೆಗೆ ತಾನೊಬ್ಬಳೇ ಅಲ್ಲ ಕೊಲೆಗಾತಿ, ಈ ಪ್ರಪಂಚದಲ್ಲಿ ಇತ್ತೀಚೆಗೆ ಕೊಲೆಗಳು ಸುಗ್ಗಿಯಂತೆ ನಡೆಯುತ್ತಿವೆ ಎಂದುಕೊಂಡಳು. ಆಸೆಗೆ ಅನೇಕ ಕೊಲೆಗಳು ನಡೆಯುತ್ತವೆ. ಲೌಕಿಕ ಜಗತ್ತಿನಲ್ಲಿ ಅದು ಮಹಪರಾಧ. ಆಸೆಗಲ್ಲದ ಕೊಲೆಗಳೂ ನಡೆಯುತ್ತಿವೆ, ಲೌಕಿಕ ಜಗತ್ತಿನಲ್ಲಿ ಅದು ಅಪರಾಧವಾದರೂ ಆಂತರಿಕವಾಗಿ ಹುದುಗಿಕೊಳ್ಳುವ ಕಾರಣಗಳಿಂದ ಬೆಂಕಿ ಹೊಮ್ಮುತ್ತಿರುತ್ತದೆ. ಆದರೆ ಲೌಕಿಕ ಜಗತ್ತಿಗೆ ನುಗ್ಗಿ ತಾನು ಅಪರಾಧಿಯಲ್ಲ ಎಂದು ಸಾಬೀತುಪಡಿಸುವಷ್ಟು ಶಕ್ತಿ ಆ ಬೆಂಕಿಗಿಲ್ಲ. ಉರುಬಿದರೆ ಆರಿ ಹೋಗುತ್ತದೆ.
ಕೊನೆಗೂ ಆಕೆಯನ್ನು ಕಟಕಟೆಯಲ್ಲಿ ನಿಲ್ಲಿಸಿದರು. ತನ್ನನ್ನು ಸುತ್ತುಕೊಂಡಿದ್ದ ಬಲೆಯಂತ ಕಂಬವನ್ನು ಒಮ್ಮೆ ಮುಟ್ಟಿ ಸುತ್ತಲೊಮ್ಮೆ ನೋಡಿದಳು. ತನ್ನನ್ನು ನುಂಗುವಂತೆ ನೋಡುತ್ತಿದ್ದ ನೂರಾರು ಬೆಂಕಿ ಮುಖಗಳಿಗೆ ಆಕೆ ತರಗೆಲೆಯಾದಂತೆ ಕಂಡಳು. ಈ ಜನಗಳ ನಡುವೆ ಬದುಕುವುದಕ್ಕಿಂತ ಈ ಪಂಜರದಲ್ಲಿಯೇ ನಿಂತುಕೊಳ್ಳುವುದೇ ಸೂಕ್ತ ಎಂದುಕೊಂಡಳು.
ಅಷ್ಟಕ್ಕೆ ಒಬ್ಬ ವಕೀಲ ಎದ್ದು ನಿಂತುಕೊಂಡ. ಆತ ಪ್ರತಿವಾದಿಯಾಗಿ ಆಕೆಯ ವಿರುದ್ಧ ವಾದ ಮಾಡಲು ಬಂದಿದ್ದವ.
‘ಯುವರ್ ಹಾನರ್, ಈಕೆ ನಿನ್ನೆ ಒಂದು ಕೊಲೆ ಮಾಡಿದ್ದಾಳೆ, ಅವಳ ಕೈ ಮೇಲಿರುವ ರಕ್ತದ ಕಲೆಯೇ ಸಾಕ್ಷಿ’
ನ್ಯಾಯಾಲಯ ಗಕ್ಕನೇ ಮೌನಕ್ಕೆ ತಿರುಗಿಕೊಂಡಿತ್ತು. ಯಾರಿಂದಲೂ ಒಂದು ಪದವೂ ಹೊರ ಹೊಮ್ಮಲಿಲ್ಲ. ಯಾಕೆಂದರೆ ಆಕೆಯ ಪರವಾಗಿ ಮಾತನಾಡಲು ಆಕೆ ವಕೀಲರನ್ನೇ ನೇಮಿಸಿಕೊಂಡಿರಲಿಲ್ಲ. ವಾದಿಯಿಲ್ಲದೇ ಪ್ರತಿವಾದಿಯ ಮಾತಿನಲ್ಲಿಯೇ ಈ ಪ್ರಕರಣ ಮುಗಿಯುವಂತೆಯೂ ಇರಲಿಲ್ಲ.
‘ನಿನ್ನ ಪರವಾಗಿ ವಾದಿಸುವ ವಕೀಲರು ಯಾರೂ ಇಲ್ಲವೇನಮ್ಮ?’ ನ್ಯಾಯಾಧೀಶರು ಕೇಳಿಕೊಂಡರು.
ಕೊಲೆಯಾದ ದಿನದಿಂದ ಆಕೆ ಮೌನಕ್ಕೆ ಶರಣಾಗಿದ್ದಳು. ಇಲ್ಲೂ ಮಾತನಾಡಲಿಲ್ಲ.
‘ನಿನ್ನ ಪರವಾಗಿ ನೀನೇ ವಾದ ಮಾಡಿಕೊಳ್ಳಬಹುದು, ಅವಕಾಶ ಮಾಡಿಕೊಡಲಾಗುವುದು’ ನ್ಯಾಯಾಧೀಶರು ಮತ್ತೆ ಮಾತನಾಡಿದರು ‘ವಾದಿಸುವವರೇ ಇಲ್ಲದಿದ್ದರೆ ಈ ಪ್ರಕರಣ ಸತ್ಯವೆಂದು ಇತ್ಯರ್ಥಗೊಳಿಸಿ ನಿನಗೆ ಶಿಕ್ಷೆ ವಿಧಿಸಬೇಕಾಗುತ್ತದೆ’
ಆಕೆ ಮತ್ತೆ ಮಾತನಾಡಲಿಲ್ಲ. ಆಕೆಯ ಮುಖ ಜಡಿಮಳೆ ಸುರಿದ ನಂತರ ಮೌನವಾಗುವ ನೆಲದಂತೆ ನಿರಾತಂಕವಾಗಿತ್ತು. ಹೊರಗೂ ಮಳೆ ಸುರಿಯುತ್ತಿತ್ತು. ಹೊರಗಡೆ ಯಾರೋ ಹಣೆಮೇಲೆ ಎಸೆದ ಚಪ್ಪಲಿಯ ಧೂಳನ್ನು ಒರೆಸಿಕೊಂಡಳು.
ನ್ಯಾಯಾಲಯದ ಆವರಣದಲ್ಲಿ ಗುಸು ಗುಸು ಹೆಚ್ಚಾಯಿತು. ಕೊಲೆಯಾದ ಹುಡುಗನ ತಾಯಿ ‘ಇನ್ನೇನು ವಾದ ಮಾಡೋದು, ಆಕೆಯನ್ನು ಮೊದಲು ನೇಣುಗಂಬಕ್ಕೇರಿಸಿ’ ಎಂದು ಕೂಗಿಕೊಂಡಳು. ಒಂದಷ್ಟು ಜನ ‘ಹೌದು ಹೌದು’ ಎಂದು ಜೋರು ದನಿಗೂಡಿಸಿದರು.
ನ್ಯಾಯಾಧೀಶರು ‘ಆರ್ಡರ್ ಆರ್ಡರ್’ ಎಂದೊಡನೆ ಮತ್ತೆ ಮೌನ ಕೂಡಿಕೊಂಡಿತು.
ಮರಳುಗಾಡಿನ ಬಿಸಿನೆಲದ ಮೇಲೆ ಚಿಮ್ಮುವ ನೀರಿನಂತೆ ವಕೀಲರ ಗುಂಪಿನಿಂದ ಒಬ್ಬ ವಕೀಲ ‘ನಾನು ವಾದ ಮಾಡುತ್ತೇನೆ’ ಎಂದು ಎದ್ದು ನಿಂತುಕೊಂಡ. ಆತ ಆಕೆಯ ಗೆಳೆÀಯರ ಹಿಂಡಿನಲ್ಲೊಬ್ಬನಾಗಿದ್ದವನು. ವಾದಿಯಾಗಿ ನಿಂತುಕೊಂಡ ಆತ ಹೇಳಿದ
‘ಯುವರ್ ಹಾನರ್, ಕೈ ಮೇಲಿರುವ ರಕ್ತದ ಕಲೆಯನ್ನು ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ’
ಪ್ರತಿವಾದಿ: ‘ತಾನು ಕೊಲೆ ಮಾಡಿರುವುದಾಗಿ ಆಕೆಯೇ ಒಪ್ಪಿಕೊಂಡಾಗಿದೆ’
‘ಯುವರ್ ಹಾನರ್, ಈಕೆ ಕೊಲೆ ಮಾಡಿರಬಹುದು, ಆದರೆ ಆತ ಈಕೆಯನ್ನು ಬಲವಂತವಾಗಿ ಹಾಸಿಗೆಗೆ ಎಳೆದದ್ದು ಎಷ್ಟು ಸರಿ? ಈ ಕೊಲೆಗೆ ಕಾರಣವಾದ ವಿಚಾರಗಳನ್ನು ಪರಿಗಣಿಸಬೇಕಾಗಿ ವಿನಂತಿ’
‘ಈಕೆಯನ್ನು ಬಲವಂತವಾಗಿ ಎಳೆಯುವ ಅಧಿಕಾರ ಆತನಿಗಿತ್ತು’
‘ಮನಸ್ಸೇ ಒಪ್ಪದಿದ್ದ ಮೇಲೆ ಅಧಿಕಾರ ಚಲಾಯಿಸುವುದೆಷ್ಟು ಸರಿ?’
‘ಕಣ್ಣಿಗೆ ಕಾಣದ ಮನಸ್ಸನ್ನು ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಯುವರ್ ಹಾನರ್, ಮನಸ್ಸನ್ನು ಕಟಕಟೆಯಲ್ಲಿ ನಿಲ್ಲಿಸಿ ವಿಚಾರಿಸಲಾಗುವುದಿಲ್ಲ’
‘ಯುವರ್ ಹಾನರ್, ಈ ಕಟಕಟೆಯಲ್ಲಿ ಒಂದು ದೇಹ ನಿಂತಿದೆ, ಆ ದೇಹದೊಳಗೆ ಭಾವನೆಯನ್ನು ತುಂಬಿಕೊಂಡ ಮನಸ್ಸೊಂದಿದೆ’
‘ಆ ಕೊಲೆಗೂ ಮನಸ್ಸೇ ಕಾರಣ, ಆ ಮನಸ್ಸನ್ನು ಹೊತ್ತ ದೇಹಕ್ಕೆ ಶಿಕ್ಷೆ ಆಗಲೇಬೇಕು’
‘ನೋ ಯುವರ್ ಹಾನರ್, ಆತನೊಂದಿಗೆ ಹಾಸಿಗೆ ಏರಲು ಆಕೆಗೆ ಅಂದು ಇಷ್ಟವಿರಲಿಲ್ಲ’
‘ಇಷ್ಟವಿಲ್ಲ ಎಂದ ಮೇಲೆ ಆಕೆ ಅಲ್ಲಿವರೆವಿಗೂ ಯಾಕೆ ಹೋಗಬೇಕಾಯಿತು?’
‘ಐ ಎಂ ಸಾರಿ ಟು ಸೇ ದಿಸ್ ಯುವರ್ ಹಾನರ್, ಅವಳು ಅಲ್ಲಿವರೆವಿಗೂ ಹೋಗಲು ಅವರ ತಂದೆ ತಾಯಿಯೇ ಕಾರಣ’
‘ಐ ಆಬ್ಜೆಕ್ಟ್ ದಿಸ್ ಯುವರ್ ಹಾನರ್, ಈ ಪ್ರಕರಣಕ್ಕೆ ಅನವಶ್ಯಕವಾಗಿ ತಂದೆ ತಾಯಿಯಂದಿರನ್ನು ಎಳೆದು ತರಲಾಗುತ್ತಿದೆ’
‘ಎಳೆದು ತರಲಾಗುತ್ತಿಲ್ಲ ಯುವರ್ ಹಾನರ್, ಕಾರಣಗಳಾಗಿ ಅವರೇ ಪ್ರಕರಣದ ನಡುವೆ ಬರುತ್ತಿದ್ದಾರೆ’
‘ಇದೊಂದು ಕೊಲೆಯಾಗಿದ್ದು, ಕೊಲೆ ಮಾಡಿರುವುದು ತಾನೇ ಎಂದು ಆಕೆ ಒಪ್ಪಿಕೊಂಡಿರುವುದರಿಂದ ಈ ವಿಚಾರಣೆಯನ್ನು ಮುಂದುವರೆಸಿದರೆ ಅರ್ಥವಿರುವುದಿಲ್ಲ ಯುವರ್ ಹಾನರ್’
‘ಯುವರ್ ಹಾನರ್, ಕೊಲೆ ಆಗುವುದಕ್ಕೆ ಕಾರಣವಾದ ಆತನ ಬಲವಂತದ ಪ್ರಯತ್ನವನ್ನು ಪರಿಗಣಿಸಿ ಈಕೆಗೆ ನ್ಯಾಯ ದೊರಕಿಸಿಕೊಡಬೇಕು, ಇದನ್ನು ಅತ್ಯಾಚಾರವೆಂದು ಪರಿಗಣಿಸಬೇಕು’
‘ಯುವರ್ ಹಾನರ್, ಬಲವಂತ ಪಡಿಸಿದ್ದವನು ಅನ್ಯ ವ್ಯಕ್ತಿಯಾಗಿದ್ದರೆ ಪರಿಗಣಿಸಬಹುದಾಗಿತ್ತು, ಮದುವೆಯಾದ ಗಂಡನಾಗಿರುವುದರಿಂದ ಸಹಕರಿಸಬೇಕಾಗಿದ್ದು ಸ್ತ್ರೀಧರ್ಮ, ಇದನ್ನು ಅತ್ಯಾಚಾರ ಎಂದು ಕರೆಯಲು ಕಾನೂನಿನಲ್ಲಿ ಅವಕಾಶವಿಲ್ಲ’
‘ಆಕೆಗೆ ಆತನನ್ನು ವರಿಸುವುದು ಇಷ್ಟವಿರಲಿಲ್ಲ, ತಂದೆ ತಾಯಿಯಂದಿರೆ ಬಲವಂತಕ್ಕೆ ಬಿದ್ದು ಅವಳೊಪ್ಪಿದ್ದವನೊಂದಿಗೆ ಮದುವೆ ಮಾಡದೆ, ಬಲವಂತಕ್ಕೆ ಮದುವೆ ಮಾಡಿದ್ದಾರೆ, ಈ ಕೊಲೆಯ ಕಾರಣವನ್ನು ಸ್ರವಿಸುತ್ತಿರುವ ಈಕೆಯ ಮನಸ್ಸನ್ನು ನ್ಯಾಯದೇವತೆ ಪರಿಗಣಿಸುವುದಿಲ್ಲವೇ?’
‘ಮದುವೆಯಾದ ಮೇಲೆ ಗಂಡ ಹಾಸಿಗೆಗೆ ಎಳೆಯುವುದು ಬಲವಂತವಲ್ಲ ಯುವರ್ ಹಾನರ್, ಅದು ಅಪರಾಧವಾಗಿ ಪರಿಗಣಿಸುವ ಯಾವುದೇ ನಿಯಮ ಕಾನೂನಿನಲ್ಲಿಲ್ಲ’
‘ಯುವರ್ ಹಾನರ್, ಇಲ್ಲಿ ಕೆನ್ನಾಲಗೆ ಚಾಚಿದ ಕಾರಣಗಳು ಒಬ್ಬಳು ಹೆಂಗಸನ್ನು ಬಲವಂತದ ಗೋಡೆಗಳ ನಡುವೆ ಮಾನಸಿಕವಾಗಿ ಅತ್ಯಾಚಾರ ಮಾಡಲು ಹೊಂಚುಹಾಕಿವೆ. ಆಕೆಯ ಭಾವನೆಗೆ ಬೆಲೆ ಕೊಡದೆ ಆಕೆಯನ್ನು ಜೀವವಿಲ್ಲದ ಬೊಂಬೆಯಂತೆ ನೋಡುವುದು ತಪ್ಪು'
‘ಕೆಂಪಾಗಿ ಚೆಲ್ಲಿದ್ದ ರಕ್ತ, ಕೊಲೆಯಾದ ಶವ, ಕೊಲೆ ಮಾಡಿದವಳು, ಚಾಕು ಇವೆಲ್ಲಾ ಮುಂದೆ ಇರುವಾಗ, ಕಣ್ಣಿಗೆ ಕಾಣದ ವಿಚಾರಗಳನ್ನು ಮುಂದಕ್ಕೆ ತರುತ್ತಿರುವ ಪ್ರತಿವಾದಿಯ ಮಾತುಗಳು ಕೇವಲ ಹಾಸ್ಯಾಸ್ಪದವಾಗಿವೆ ಯುವರ್ ಹಾನರ್’
ಅಷ್ಟಕ್ಕೆ ಆಕೆ ನಿಂತಲ್ಲೇ ಕೊಂಚ ಜಗ್ಗಿದಳು. ಮುಂದಿನ ಕನ್ನಡಿಯಲ್ಲಿ ಯಾರೋ ನಿರ್ವಸ್ತ್ರಗೊಂಡು ನಿಂತಿರುವುದನ್ನು ಗಮನಿಸಿದಳು. ಒಮ್ಮೆಲೇ ಎಲ್ಲೋ ನೋಡಿದ್ದೇನಲ್ಲ ಎಂದೆನಿಸಿತು. ಕೂದಲನ್ನು ಸರಿಪಡಿಸಿಕೊಂಡಳು. ‘ಓಹ್ ಅದು ನಾನೇ, ಪ್ರಪಂಚವನ್ನೇ ತೂಗುವ ಸ್ತ್ರೀಧರ್ಮದವಳು’ ಎಂದುಕೊಂಡಳು. ತನ್ನನ್ನು ಪ್ರಾಣಕ್ಕಿಂತ ಪ್ರೀತಿಸಿ, ತನ್ನ ಮೈ ಕಣಕಣಗಳನ್ನು ತುಂಬಿಕೊಂಡ ಗೆಳೆಯನ ಫೋಟೋಗೆ ಹಾರ ಹಾಕಿದ್ದರು. ಸಾಯಲು ಇರುವ ನೂರು ನೆಪದಲ್ಲಿ, ಕೊಲೆ ಮಾಡಿದ್ದನ್ನು ಮುಚ್ಚಲು ಅಪಘಾತವೆನ್ನುವ ಒಂದು ನೆಪದಲ್ಲಿ ಆತನನ್ನು ಈ ಲೋಕದಿಂದ ನಿಶ್ಶೇಷಗೊಳಿಸಿದ್ದು ಇಲ್ಲಿ ಅಪರಾಧವಾಗಲೇ ಇಲ್ಲ. ಹಾಗೆ ತಿರುಗಿ ಇದೇ ಕೈಕಾಲುಗಳನ್ನು ಬಿಗಿಯಾಗಿ ಹಿಡಿದು ಎಳೆದುಕೊಂಡುಹೋಗಿ ಹಸೆಮಣೆ ಮೇಲೆ ಕೂರಿಸಿದವರನ್ನು ಕಂಡಳು. ಅವರ ಕಣ್ಣುಗಳಿಂದ ಹೊರಟ ಬೆಂಕಿ ಆಕೆಯ ಮೈ ಕೈಗೆ ತಾಗಿತು. ಈಗ ನಿಜಕ್ಕೂ ಆ ಬೆಂಕಿ ಸುಡಲಿಲ್ಲ. ಅವರ ಮತ್ತು ಅವಳ ನಡುವೆ ಇದ್ದ ಬಾಂಧವ್ಯವೊಂದು ತೀರ ತೆಳುವಾಗಿಹೋಗಿತ್ತು. ಅವರು ಕಟ್ಟಿಸಿದ ತಾಳಿ ಎಲ್ಲಿ? ನಿನ್ನೆಯೇ ಕಿತ್ತು ಬಿಸಾಡಿದ್ದಳು. ಕನ್ನಡಿಯೊಳಗೆ ಕಾಣುತ್ತಿರುವ ಇದೇ ದೇಹವನ್ನು ನಿರ್ವಸ್ತ್ರಗೊಳಿಸಿದವರು ಯಾರು? ಹೌದು ಇದೇ ಜನಗಳು.
‘ಕಠಿಣ ಕಾರಾಗೃಹ ಜೀವಾವಧಿ ಶಿಕ್ಷೆ' ನ್ಯಾಯಾಧೀಶರು ಕೂಗಿಕೊಂಡರು. ‘ಹೌದು, ಈ ಜೀವದ ಅವಧಿ ಇರುವವರೆವಿಗೂ ತನಗೆ ಶಿಕ್ಷೆ’ ಎಂದುಕೊಂಡ ಆಕೆ ಪೋಲೀಸ್ ಕಾವಲಿನ ನಡುವೆ ನಡೆದಳು, ಹೌದು ಮೌನವಾಗಿ ನಡೆದಳು. ಮತ್ತೊಂದು ಚಪ್ಪಲಿ ಮೈಮೇಲೆ ಬಿತ್ತು.
Thursday, 24 January 2013
ಗೆದ್ದೋನ್ಯಾರು? (ಉದಯವಾಣಿಯ ಸಾಪ್ತಾಹಿಕ ಸಂಪದ ಮತ್ತು ವಿಜಯnext ನಲ್ಲಿ ಪ್ರಕಟಿತ)
ಗುಡ್ಡಗಾಡು ಪ್ರದೇಶಗಳ ತಪ್ಪಲಿನಲ್ಲಿರುವ ನಮ್ಮ ಹಳ್ಳಿಗಳಲ್ಲಿ ಸಂಜೆ ಏಳಕ್ಕೆಲ್ಲಾ ನೀರವ ಮೌನ ಕೂಡಿಕೊಳ್ಳುತ್ತದೆ. ಗಿಡ ಮರ ಹೂಗಳ ಮೇಲೆ ಚೆಲ್ಲಿದ ಬೆಳದಿಂಗಳ ಭಾಷೆ ಅರ್ಥ ಮಾಡಿಕೊಳ್ಳಬಹುದು. ಆದರೆ ಆ ಹಳ್ಳಿಯಲ್ಲಿ ಸಂಜೆ ಆರಕ್ಕೆಲ್ಲಾ ಮೌನ ಕೂಡಿಕೊಂಡಿತ್ತು. ಕೆರೆ ಕಡೆಗೆ ಹೋಗುವವರು ಬೇಗ ಮುಗಿಸಿ ಬಂದುಬಿಟ್ಟಿದ್ದರು, ರೋಡಿನ ಪಕ್ಕದಲ್ಲಿ, ಅಲ್ಲಲ್ಲಿರುವ ದಿಣ್ಣೆಗಳಲ್ಲಿ ಬೀಡಿ ಸೇದುತ್ತ ಕುಳಿತಿದ್ದವರೆಲ್ಲಾ ‘ನಡಿರ್ಲಾ, ನಡಿರ್ಲಾ’ ಎಂದುಕೊಂಡವರೇ ಮನೆಗಳಿಗೆ ಕಾಲ್ಕಿತ್ತಿದ್ದರು. ಬೇಲಿ ಮೆಳೆ ಸಂದಿಯಲ್ಲಿ ಕುಳಿತುಕೊಳ್ಳುತ್ತಿದ್ದ ಹೆಂಗಸರಿಗೆ ವಿಧಿಯಿಲ್ಲದ ಪ್ರಾಣ ಸಂಕಟ. ಸಂಜೆಯಾದಂತೆ ಕಳ್ಳ ಪೋಲೀಸ್ ಎಂಬ ಕೇರಿ ಕೇರಿಗೆ ಓಡುವ, ಅಟ್ಟಿಸಿಕೊಂಡು ಹೋಗುವ ಆಟವಾಡುತ್ತಿದ್ದ ಮಕ್ಕಳೆಲ್ಲಾ ಭಯ ಕೂಡಿಕೊಂಡು ಮನೆ ಮೂಲೆಗವಚಿ ಮಲಗಿಬಿಟ್ಟಿದ್ದಾರೆ. ತೊಟ್ಟಿ ಮನೆಯವರು, ಕೊಟ್ಟಿಗೆಯಿಂದ ದನಕರು, ಕುರಿಕೋಳಿಗಳನ್ನೆಲ್ಲಾ ಅಟ್ಟಿಕೊಂಡು ಬಂದು ಹಜಾರದ ಕಂಬಗಳಿಗೆ ಕಟ್ಟಿಕೊಂಡಿದ್ದಾರೆ.
ಕಳೆದ ಹತ್ತು ದಿನಗಳಿಂದ ಹುಲಿಗಳೆರಡು ದಾರಿ ತಪ್ಪಿಯೋ ಅಥವಾ ಹಸಿವು ಹೆಚ್ಚಾಗಿಯೋ ಊರಿಗೆ ಬಂದುಬಿಟ್ಟಿದ್ದವು. ನಿನ್ನೆವರೆವಿಗೂ ಒಟ್ಟು ಹತ್ತು ಜಾನುವಾರು ಮತ್ತು ಕೆಳಗಲ ಕೇರಿಯ ಮಾಚ, ಸಿದ್ಧ, ಸಿದ್ಧನ ಮಗುವನನ್ನು ಕೊಂದು ತಿಂದು ಹಾಕಿದ್ದವು. ಕೊಟ್ಟಿಗೆಗಳನ್ನು ಹುಡುಕಿಕೊಂಡು ಬರುವ ಹುಲಿಗಳಿಗೆ ಒಂದೆರಡು ಬಾರಿ ಪಕ್ಕದ ಗುಡಿಸಲಿನೊಳಗಿದ್ದ ಮನುಷ್ಯರೇ ಹೆಚ್ಚು ರುಚಿಯಾಗಿ ನಾಲಗೆ ಚಪ್ಪರಿಸಿಕೊಂಡಿದ್ದವು. ನಿನ್ನೆ, ಸೂರ್ಯ ಮುಳುಗಿ ಊರನ್ನು ಕತ್ತಲು ನುಂಗುವುದರಲ್ಲಿತ್ತು. ಅಷ್ಟರಲ್ಲಿಯೇ ಕೆಳಬೀದಿಯ ರಂಗಿ ಚಿಟಾರನೆ ಚೀರಿಕೊಂಡಳು. ಓಡೋಡಿ ಹೋಗಿ ನೋಡಿದ ಜನರಿಗೆ ಅವಳ ಗಂಡ ಕೆಂಚಪ್ಪ ಮತ್ತು ಮಗುವಿನ ದೇಹದ ಅಳಿದುಳಿದ ಅಂಗಾಂಗಳು ಕೊಟ್ಟಿಗೆಯ ಅಂಗಳದಲ್ಲಿ ರಕ್ತ ಸಿಕ್ತವಾಗಿ ಬಿದ್ದಿದ್ದವು. ಊರಿಗೆ ಊರೇ ಬೆಚ್ಚಿ ಬಿದ್ದಿತ್ತು.
ಬೇಗ ಮಲಗಿಕೊಳ್ಳುವ ನಮ್ಮ ಹಳ್ಳಿಗರಿಗೆ ಮುಂಜಾನೆಯೂ ಬೇಗ ಎಚ್ಚರಗೊಳ್ಳುವ ಅಭ್ಯಾಸ. ಎಚ್ಚರಗೊಂಡಿದ್ದೆ ಒಂದು ರಗ್ಗನ್ನು ಹೊದ್ದುಕೊಂಡು ರುದ್ರಣ್ಣನ ಹೋಟೆಲ್ ಗೆ ಹೋಗಿ ಒಂದೆರಡು ಬೀಡಿ ಸೇದಿ ಟೀ ಕುಡಿಯುತ್ತಾ ಕುಡಿಯುತ್ತಾ ಸೂರ್ಯನ ಎಳೆ ಬಿಸಿಲನ್ನು ಮೈ ಕೈ ಗೆ ತಾಕಿಸಿಕೊಂಡು ಬೆಚ್ಚಗಾಗುತ್ತಾರೆ. ಹೆಂಗಸರು ಮಬ್ಬಿನಲ್ಲಿಯೇ ಹೊಲಗಳಿಗೆ ತೆರಳಿ ಅವರೆ, ಹಲಸಂದೆ ಕೊಯ್ದು ಪಟ್ಟಣದ ಸಂತೆಗೆ ಕಳುಹಿಸಬೇಕು. ಆದರೆ, ಈಗೀಗ ದಿನ ಬೆಳಗಾದಾಗ ಯಾರೂ ಹೊರ ಬರಲೊಲ್ಲರು. ಅದೇ ಹೆದರಿಕೆ. ಮೇಲೆ ಬಿದ್ದೊಡನೆ ಏಕ್‍ದಂ ಕತ್ತಿಗೆ ಬಾಯಿ ಹಾಕುವ ಪ್ರಾಣಿಯನ್ನು ಕಂಡರೆ ಯಾರಿಗೆ ತಾನೇ ಭಯವಾಗುವುದಿಲ್ಲ.
ಕೊನೆಗೂ ಕಷ್ಟಪಟ್ಟು ನಿದ್ದೆ ತಂದುಕೊಂಡ ಜನ ಬೆಳಗ್ಗೆ ಬೆಳಕಾದ ನಂತರ ಹೊರಗೆ ಬಂದರು. ಪ್ರಪಂಚ ಮುಳುಗಿಹೋದರೂ ತಮ್ಮನ್ನು ಜಗ್ಗಿಸಲು ಸಾಧ್ಯವಿಲ್ಲ ಎಂದುಕೊಂಡಿದ್ದ ಒಂದಷ್ಟು ಜನ ಎಂದಿನಂತೆ ಮುಂಜಾನೆಯೇ ಕೆರೆ ಪಕ್ಕದಲ್ಲಿರು ಆಲದಮರದ ಕೆಳಗಿನ ಸೋಂಬೇರಿಕಟ್ಟೆಯ ಮೇಲೆ ಕುಳಿತುಕೊಂಡರು. ಆಗಷ್ಟೇ ಕೆರೆಕಡೆಗೆ ಹೋಗಿ ನೀರು ಮುಟ್ಟಿಕೊಂಡು ಬಂದಿದ್ದರು. ನಿನ್ನೆಯ ಹಳಸಲು ಸಾರಾಯಿ ಬಾಯಿಗಳೆಲ್ಲಾ ಬೀಡಿ ಕಚ್ಚಿಕೊಂಡಿದ್ದವು.
‘ಅಲ್ಲಾ ಕಣ್ರಲಾ, ಇದೆಷ್ಟ್ ದಿನ ಅಂತ ನಾವು ಈ ಹುಲಿಗೆ ಅಂಜ್ಕಂಡು ಹಿಂಗ್ ಬದುಕ್ಬೇಕು ಅಂತೀನಿ’ ನಮ್ಮ ನಿಂಗಣ್ಣ ಕೇಳಿದ.
‘ಓ... ಇವ್ನ್ ಮನೇಲಿ ಕೋವಿ ಇಟ್ಕಂಡವ್ನೆ, ತಗಬಂದು ಢುಂ ಅನ್ನಸ್ಬುಡ್ತಾನೆ’ ಎಂದು ಹೇಳಿದ ರಾಚಪ್ಪ ‘ಹಿ ಹಿ’ ಎಂದು ಕಿಸಿದುಬಿಟ್ಟ. ಅವನ ದಂತಪಂಕ್ತಿಯ ಕೆಳಗಿನ ಸಾಲಿನಲ್ಲಿ ನಾಲ್ಕು ಹಲ್ಲುಗಳೇ ಇಲ್ಲ. ಊರಿನವರಿಗೆಲ್ಲಾ ಆತನ ನಗು ಚಿರಪರಿಚಿತ.
‘ಲೋ ಬುಡ್ಲಾ, ಇನ್ನೊಂದು ವಾರ ಆದ್ಮೇಲೆ ಅವೇ ಹೋಗ್ತವೆ, ಎಲ್ಲೋ ದಾರಿ ತಪ್ಕಂಡ್ ಬಂದವೆ’ ಎಂದು ಮಾದೇವ ಹೇಳಿದ ತಕ್ಷಣ ‘ನೋಡ್ರಲೋ, ಹುಲಿಗಳು ಯಾವ್ದೋ ಟೂರಿಗ್ ಬಂದವೆ, ಇನ್ನೊಂದೆರ್ಡ್ ಮನೇಲಿ ಮಟನ್ ಊಟ ಮಾಡ್ಕಂಡ್ ತಕ್ಷ್ಣ ಹೊರ್ಟೋಯ್ತವೆ ಅನ್ನಂಗ್ ಮಾತಾಡ್ತಾವ್ನೆ, ನೀನೂ ಒಂದಿನ ಬಾಡೂಟ ಹಾಕ್ಸ್ ಬಿಡಪ್ಪ’- ರಾಚಪ್ಪ ಮತ್ತೆ ಮಧ್ಯೆ ಗಹ ಗಹಿಸಿ ನಕ್ಕು ಮಾತನಾಡಿದ. ಉಳಿದವರೆಲ್ಲಾ ‘ಗೊಳ್’ ಎಂದು ನಕ್ಕುಬಿಟ್ಟು ತಮ್ಮ ಹಳದಿ, ಕಪ್ಪು ಹಲ್ಲುಗಳನ್ನು ಒಬ್ಬರಿಗೊಬ್ಬರು ತೋರಿಸಿಕೊಂಡರು.
ಅಷ್ಟಕ್ಕೆ ರೇಡಿಯೋ ಹಿಡಿದುಕೊಂಡು ಇಂಗ್ಲೀಷ್ ವಾರ್ತೆ ಕೇಳುತ್ತ ರಾಮಣ್ಣ ಅಲ್ಲಿಗೆ ಬಂದ. ಖಾಲಿ ಮಡಕೆಗೆ ಉದಾಹರಣೆ ಕೊಡಿ ಎಂದರೆ ಸೂಕ್ತವಾಗಿ ನಮ್ಮ ರಾಮಣ್ಣನ ಹೆಸರು ಕೊಡಬಹುದು ನೋಡಿ. ದಿನದಲ್ಲಿ ಐವತ್ತು ಪೈಸೆ ದುಡಿಯಲು ಲಾಯಕ್ಕಲ್ಲದವನು. ಹೆಂಡತಿ ದುಡಿದು ಅಡುಗೆ ಮಾಡಿದ ತಕ್ಷಣ ಹೋಗಿ ಚೆನ್ನಾಗಿ ಉಂಡು ಬಂದುಬಿಡುತ್ತಾನೆ. ಕಾಳಿನ ಉಸುಲಿಯಿಲ್ಲದೆ ಮುದ್ದೆ ಗಂಟಲಿಗೆ ಇಳುಗುವುದಿಲ್ಲ. ಆದರೆ, ಊರಿನ ತುಂಬೆಲ್ಲಾ ತನ್ನದೇ ಒಂದು ರೀತಿಯ ಘನತೆ ಉಳಿಸಿಕೊಂಡಿದ್ದಾನೆ. ಎದೆ ನಿಗುರಿಸಿಕೊಂಡು ರೇಡಿಯೋ ಹಿಡಿದುಕೊಂಡು ನಡೆಯುವುದು ಅವನ ರೂಢಿ.
‘ಓ ಬಾ ರಾಮಣ್ಣ, ಏನ್ ಸಮಾಚಾರ?’ ಎಲ್ಲರೂ ಒಟ್ಟಿಗೆ ಕೇಳಿದರು
‘ಏನೂ ಇಲ್ಲ ಮಾತಾಡ್ರಲಾ, ಬಡ್ಡೆತವ ಬೆಳ್ ಬೆಳಗ್ಗೆನ ಮಾಡೋಕ್ ಬೇರೆ ಕೇಮೆ ಇಲ್ಲ ನಿಮ್ಗೆ’ ಎಂದ ರಾಮಣ್ಣ. ತಾನೇನೋ ಕಡಿದು ಗುಡ್ಡೆ ಹಾಕಿಬಂದವನಂತೆ ಮಾತನಾಡಿದವನು ಸುಮ್ಮನೆ ಕುಳಿತುಕೊಂಡು ಇವರ ಮಾತೆಲ್ಲಾ ಕೇಳಿಸಿಕೊಂಡ. ಇದ್ದಕ್ಕಿದ್ದಂತೆ ಆತನ ಖಾಲಿ ತಲೆಗೆ ಒಂದು ಹೊಸ ಐಡಿಯಾ ಹೊಳೆಯಿತು. ಒಂದು ಬಾರಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತುಕೊಂಡು ಗೆದ್ದು ಊರನ್ನಾಳಬೇಕು ಎಂಬ ಕನಸ್ಸು ಇಟ್ಟುಕೊಂಡಿದ್ದಾತನಿಗೆ ಈ ಸಂದರ್ಭವನ್ನು ಯಾಕೆ ಉಪಯೋಗಿಸಿಕೊಳ್ಳಬಾರದೆನಿಸಿತು.
‘ಅಲ್ಲಾ ಕಣ್ರಲಾ, ಅದ್ಯಾವನೋ ಮನೆ ಒಳ್ಗಡೆ ಕುಂತ್ಕಂಡು ವಿದಾನ್ ಸೌದದ್ ಮೆಟ್ಲತ್ತಿನಿ ಅಂತಿದ್ನಂತೆ, ಹಂಗಾಯ್ತು ನಿಮ್ ಕತೆ’ ರಾಮಣ್ಣ ಮಾತನಾಡಿದ.
‘ಅದೇನ್ ಒಸಿ ಅರ್ಥ ಆಗಂಗ್ ಹೇಳಣ್ಣ’ ಇವರ ಜೊತೆಗೆ ಇದ್ದ ಪಾಪಣ್ಣ ತಲೆ ಕೆರೆದುಕೊಳ್ಳುತ್ತ ಕೇಳಿಕೊಂಡ. ಎಲ್ಲರೂ ಒಮ್ಮೆ ಎಂಜಲು ಕೊಳವೆಯನ್ನು ಕಚ್ಚಿ ಕಚ್ಚಿ ಗಾಂಜಾ ಸೇದಿ ‘ಆಹಾ’ ಎಂದುಕೊಂಡು ಉಸಿರುಬಿಟ್ಟರು.
‘ನಾಳೆ ನನ್ ಜೊತೆ ಪಟ್ಣಕ್ ಬನ್ರಲಾ, ಅಲ್ಲಿ ಪಾರೆಸ್ಟ್ ಡಿಪಾಟ್ಮೆಂಟ್ ಹತ್ರ ಎಲ್ರೂ ಉಪ್ವಾಸ ಕುಂತ್ಬಿಡಾನ’ ರಾಮಣ್ಣ ಹೇಳಿದ.
‘ನಾವಿಷ್ಟೇ ಜನ ಹೋಗ್ಬಿಟ್ರೆ ಒಪ್ ಬುಡ್ತಾರಾ ರಾಮಣ್ಣ?’ ಬುದ್ಧಿವಂತನಂತೆ ನಿಂಗಣ್ಣ ಕೇಳಿದ.
‘ಜಾಸ್ತಿ ಜನ ಇದ್ದಷ್ಟು ಉಪ್ವಾಸ ಬೇಗ ಮುಗಿಯುತ್ತೆ ಕಣ್ರಲಾ, ಇಲ್ಲಾಂದ್ರೆ ಹಸ್ಕೊಂಡ್ ಸಾಯ್ಬೇಕಷ್ಟೆ, ನಿಮ್ ಹೆಂಡ್ರು ಮಕ್ಳು, ಅಕ್ ಪಕ್ದವ್ರನೆಲ್ಲಾ ಕರ್ಕೊಂಡು ನಾಳೆ ಬೆಳಗ್ಗೆ ಒಂಬತ್ ಗಂಟೆ ಬಸ್ಗೆ ಬಂದ್ಬುಡ್ರಲಾ’ ಎಂದ ರಾಮಣ್ಣ ಆಗಲೇ ಚುನಾವಣೆ ಕನಸ್ಸು ಕಾಣತೊಡಗಿದ.
ಮುಖ ಮುಖ ನೋಡಿಕೊಂಡ ಎಲ್ಲರೂ ಒಟ್ಟಿಗೆ ‘ಆದದ್ದಾಗ್ಲಿ ಮಾದಪ್ಪನ್ ಜಾತ್ರೆ, ಬತ್ತಿವಿ ಬುಡಣ್ಣ, ಮನ್ಸನ್ ತಿನ್ನೋ ಪ್ರಾಣಿಗಳು ಅವು, ನಾಳೆದಿನ ನಮ್ ಕುತ್ಗೆಗೇ ಬಾಯ್ ಹಾಕ್ಬಿಟ್ರೆ’ ಎಂದರು
‘ಬೆಳಗ್ಗೆನೆ ಚೆನ್ನಾಗ್ ತಿನ್ಕಳಿ ಬಡ್ಡೆತವ, ಅಲ್ಲಿ ಹೋದ್ಮೇಲೆ ಒಂದಕ್ಕೆ ಅಂತ ಎದ್ದೆದ್ ಹೋಗಿ ಚೆನ್ನಾಗ್ ಉಂಡ್ಕಂಡ್ ಬರ್ಬೇಡಿ’ ಎಂದ ರಾಮಣ್ಣನ ಹೊಟ್ಟೆ ತಾಳ ಹಾಕಿದಂತಾಗಿ ಮನೆಕಡೆ ನಡೆದ.
ರಾತ್ರಿಯೆಲ್ಲಾ ಈ ಯಾವತ್ತೂ ವಿಚಾರಗಳು ಹಳ್ಳಿಯ ಮೂಲೆ ಮೂಲೆಗೂ ಹರಡುವಂತೆ ರಾಮಣ್ಣ ನೋಡಿಕೊಂಡ. ಮಕ್ಕಳು ಮರಿಗಳೊಂದಿಗೆÉ ಬದುಕುತ್ತಿದ್ದ ನಮ್ಮ ಜನ ಹುಲಿಗಳಿಗೆ ತುಂಬಾ ಹೆದರಿದ್ದರು. ರಾಮಣ್ಣನಂತ ತಿಳಿದವರ ಜೊತೆ ಹೋಗಿ ನಮ್ಮ ನಮ್ಮ ಕುಡಿಗಳನ್ನು ಉಳಿಸಿಕೊಳ್ಳೋಣ ಎಂದುಕೊಂಡವರೇ ಬೆಳಗ್ಗೆ ಒಂಭತ್ತು ಘಂಟೆಯ ಬಸ್ಸಿಗೆ ಹೊರಡಲು ಅನುವಾದರು.
ಬೆಳಗ್ಗೆ ಒಂಭತ್ತು ಘಂಟೆ ಬಸ್ಸಿಗೆ ಒಂದಷ್ಟು ಜನಗಳನ್ನು ಕೂಡಿಕೊಂಡ ರಾಮಣ್ಣ ಫಾರೆಸ್ಟ್ ಆಫೀಸ್ ಮುಂದೆ ಕುಳಿತು ಧಿಕ್ಕಾರ ಕೂಗಿದ. ಆಫೀಸಿನಲ್ಲಿದ್ದ ಅಧಿಕಾರಿಗಳು ರಾಮಣ್ಣನನ್ನು ಒಳಗೆ ಕರೆದು ‘ಅಲ್ಲಾ ರೀ, ಮೊದ್ಲೆ ಎಲ್ಲಾ ಡಿಸೈಡ್ ಆಗಿದೆ, ಈ ಭಾನುವಾರ ನಿಮ್ಮ ಹಳ್ಳಿಗೆ ಬಂದು ಹುಲಿಗಳನ್ನ ಹಿಡಿಯೋ ಕೆಲ್ಸ ಆಗುತ್ತೆ, ಪೇಪರ್ ನಲ್ಲಿ ಬಂದಿತ್ತು, ನೋಡಿಲ್ವಾ?’ ಎಂದರು. ನಿಜ ಹೇಳಬೇಕೆಂದರೆ ರಾಮಣ್ಣನಿಗೆ ಅದು ಗೊತ್ತಿರಲಿಲ್ಲ, ಆದರೂ ಆತ ಚಾಲಾಕಿ ಮನುಷ್ಯ.
‘ಕಾಲಿಗ್ ಬೀಳ್ತಿನಿ ಬುದ್ಯೋರ, ದಮ್ಮಯ್ಯ ಅಂತೀನಿ, ಏನೇನೋ ಸಬೂಬ್ ಹೇಳಿ ಊರ್ ಜನಗೋಳ್ನೆಲ್ಲಾ ಕರ್ಕಂಡ್ ಬಂದ್ಬುಟ್ಟಿವ್ನಿ, ಈಗ ಸುಮ್ನೆ ಕರ್ಕಂಡ್ ಹೊರ್ಟೋಯ್ತಿನಿ, ಅವರ್ ತಾವ ಏನೂ ಹೇಳ್ಬೇಡಿ ಸ್ವಾಮಿ’ ಎಂದು ಕೇಳಿಕೊಂಡ ರಾಮಣ್ಣ ಹೊರಗೆ ಬಂದು ಗತ್ತಿನಿಂದ ‘ನಡ್ರಲಾ ನಡ್ರಲಾ, ಇದೇ ಆಯತ್ವಾರ ಊರಗ್ ಬೋನ್ ತಂದು ಹುಲಿಗೊಳ್ನ ಹಿಡ್ಕಂಡ್ ಹೋದರಂತೆ, ಸಾಯೇಬ್ರು ಹೇಳವ್ರೆ, ನಡ್ರುಲಾ’ ಎಂದ. ಎಲ್ಲರೂ ಖುಷಿಯಿಂದ ಅಲ್ಲಿಂದ ಬೀಳ್ಕೊಟ್ಟರು. ರಾಮಣ್ಣನ ಈ ಸಾಹಸದ ಬಗ್ಗೆ ಗುಸು ಗುಸು ಹೆಚ್ಚಾಗಿ ಆತನ ಬಗ್ಗೆ ಗೌರವ ಹೆಚ್ಚಾಯಿತು.
ಮತ್ತೆ ಎಲ್ಲರನ್ನೂ ಬಸ್ಸು ಹತ್ತಿಸಿಕೊಂಡ ರಾಮಣ್ಣ ಬಸ್ಸಿನಲ್ಲಿ ತನ್ನ ಹುಸಿ ಸಾಹಸಗಳನ್ನು ವರ್ಣಿಸತೊಡಗಿದ. ‘ಸಾಯೇಬ್ರು, ಮೊದ್ಲು, ರೀ ಆಗಲ್ಲಾರೀ, ನೀವೇ ಏನಾರು ಮಾಡ್ಕಳ್ಳಿ ಅಂದ್ರು, ಆಗ ನಾನು ಯಾರ್ ಹತ್ರ ಹೋಗ್ಬೇಕು ಅಂತ ಗೊತ್ತು ಸ್ವಾಮಿ, ಸಂದೆ ಒಳ್ಗಡೆ ಎಮ್ಮೆಲ್ಲೆ ಶಾಮಪ್ಪೋರೆ ಬತ್ತಾರೆ ಬುಡಿ, ನಮ್ ಜನಗೋಳ್ ಏನ್ ಕಡ್ಮೆ ಬಂದಿಲ್ಲ, ಇನ್ನೆರ್ಡ್ ದಿನ್ದಲ್ಲೇ ಈ ಇಚಾರ ವಿದಾನ್ ಸೌದಕ್ಕೂ ಮುಟ್ಟುತ್ತೆ, ನಿಮ್ ಟ್ರಾನ್ಸ್ಪರ್ ಆಗೋವರ್ಗು ನಾವ್ ಬಿಡಕಿಲ್ಲ, ಹೀಗೆ ಮಾತಾಡುದ್ದೇ ಮಾತಾಡುದ್ದು ಕಣ್ರಲಾ’-ಬೊಂಬಡ ಬಿಡುತ್ತಾ ಹೋದ. ಎಲ್ಲರೂ ತುಟಿ ಮೇಲೆ ಬೆರಳಿಟ್ಟು ಕೇಳಿಸಿಕೊಂಡರು. ರಾಮಣ್ಣ ಕಛೇರಿ ಒಳಗಡೆ ಹೋಗಿದ್ದಾಗ ಒಂದಷ್ಟು ಜನ ಸೈಡಿಗೆ ಹೋಗಿ ಒಂದೆರಡು ಬಾಟಲ್ ಸಾರಾಯಿ ಪೀರಿಕೊಂಡು ಉಪ್ಪಿನಕಾಯಿ ನೆಕ್ಕಿಕೊಂಡು ಬಂದಿದ್ದರು. ‘ನೀನು ನಮ್ ದ್ಯಾವ್ರಿದ್ದಂಗೆ ಅಣ್ಣೋ’ ಎಂದು ಕೂಗುತ್ತಾ ಕಾಲು ಹಿಡಿದುಕೊಳ್ಳಲು ಬಂದರು. ‘ತೂ ಬಡ್ಡೆತವ, ಸಂದಿಗೋಗಿ ಅದೇನೋ ನೆಕ್ ಬಂದ್ಬಿಡ್ತವೆ, ಹೆಂಡ್ರು ಮಕ್ಳಿಗೆ ಹೊತ್ತಗ್ ಸರಿಯಾಗಿ ಉಣ್ಣಕ್ಕಿಕ್ಕರ್ಲಾ’ ಎಂದು ತನ್ನ ಗತ್ತನ್ನು ಮತ್ತೆ ತೋರಿಸಿಕೊಂಡ. ಈ ಮಾತನ್ನು ಕೇಳಿಸಿಕೊಂಡ ರಾಮಣ್ಣನ ಚಡ್ಡಿಜೇಬಿನೊಳಗಿದ್ದ ವಿಸ್ಕಿ ಬಾಟಲ್ ನಗುತ್ತಿತ್ತು.
ಊರಿನಲ್ಲಿ ರಾಮಣ್ಣನ ಹವಾ ಹಬ್ಬತೊಡಗಿತ್ತು. ಭಾನುವಾರ ಸಂಬಂಧಪಟ್ಟ ಅಧಿಕಾರಿಗಳು ಬಂದು ಹುಲಿಗಳನ್ನು ನಿರಾಯಾಸವಾಗಿ ಹಿಡಿದು ಬೋನಿನೊಳಗೆ ಹಾಕಿಕೊಂಡು ಹೋದರು. ಹುಲಿ ಹತ್ತಿರ ಬಂದಂತೆ ಓಡುತ್ತಿದ್ದ ರಾಮಣ್ಣ ದೂರ ನಿಂತುಕೊಂಡು ‘ಹಿಡಿರ್ಲಾ ಹಿಡಿರ್ಲಾ, ಚೂ ಚೂ’ ಎನ್ನುತ್ತಿದ್ದ.
ಹುಲಿಗಳು ಬೋನಿಗೆ ಸೇರಿಕೊಂಡಿದ್ದೇ ಊರಿನ ಜನಗಳು ನಿಜಕ್ಕೂ ನಿಟ್ಟುಸಿರು ಬಿಟ್ಟರು. ರಾಮಣ್ಣ ಎಲ್ಲರನ್ನೂ ಕರೆದುಕೊಂಡುಹೋಗಿ ಫಾರೆಸ್ಟ್ ಆಫೀಸಿನ ಮುಂದೆ ಕುಳಿತುಕೊಳ್ಳದಿದ್ದರೂ ಇಷ್ಟು ಹೊತ್ತಿಗೆ ಹುಲಿಗಳನ್ನು ಹಿಡಿದುಕೊಂಡು ಹೋಗುತ್ತಿದ್ದರು. ಜನಗಳು ಕತ್ತಲಾದ ನಂತರ ಮನೆಯಿಂದ ಹೊರಗೆ ಧೈರ್ಯವಾಗಿ ಬಂದರು, ಮುಂಜಾನೆ ಬೇಗ ಎದ್ದು ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾದರು. ಹಳ್ಳಿ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ಚುನಾವಣೆಯೂ ಹತ್ತಿರವಾಯಿತು. ಊರ ಜನರನ್ನು ನಿರಾತಂಕಗೊಳಿಸಿದ ರಾಮಣ್ಣನ ಪರವಾಗಿ ಜನ ನಿಂತಿದ್ದರು. ಮೂರು ಹೊತ್ತು ಎದೆಮಟ್ಟ ತಿಂದು ಬರಿ ಕನಸ್ಸು ಕಾಣುವುದಷ್ಟೇ ರಾಮಣ್ಣನ ಕೆಲಸ ಆಗಿಹೋಗಿತ್ತು.
ರಾಮಣ್ಣನ ಊಸರವಳ್ಳಿ ಆಟದಿಂದ ತನ್ನ ಜನಪ್ರಿಯತೆ ಕಳೆದುಕೊಂಡವನು ಮಾತ್ರ ಗ್ರಾಮ ಪಂಚಾಯಿತಿಯ ಹಾಲಿ ಅಧ್ಯಕ್ಷನಾದ ಸಿದ್ಧಣ್ಣ. ಆತನೇನು ಹೇಳಿಕೊಳ್ಳುವಂತ ಕೆಲಸವೇನು ಮಾಡಿಸಿರಲಿಲ್ಲ. ಮಳೆ ಬಂದು ಮೇಲಿನಿಂದ ಬರುವ ಕಸ ಚರಂಡಿಗೆ ತುಂಬಿಕೊಂಡಾಗ ಬೀದಿಯ ಒಂದಷ್ಟು ಬಾಯಿ ಬಡುಕ ಹೆಂಗಸರ ಸದ್ದು ಕಿವಿಗೆ ಬಿದ್ದಾಗ ಮಾತ್ರ ಬಂದು ಮುಂದೆ ನಿಂತುಕೊಂಡು ಕಸ ಎತ್ತಿಸುವ ಕೆಲಸ ಮಾಡಿಸುತ್ತಿದ್ದ. ಆದರೆ ಆತ ರಾಮಣ್ಣನಿಗಿಂತ ದೊಡ್ಡ ಊಸರವಳ್ಳಿ. ಹೇಗಾದರೂ ಮಾಡಿ ರಾಮಣ್ಣನ ಬಗೆಗಿನ ಜನಗಳ ಆಸಕ್ತಿ ಕಡಿಮೆಗೊಳಿಸಿ ತನ್ನ ಕಡೆಗೆ ತಿರುಗಿಸಿಕೊಳ್ಳಬೇಕೆಂದು ಹೊಂಚುಹಾಕಿದ.
ತನಗೆ ನಿಷ್ಠವಾಗಿದ್ದ ಒಂದೈದು ಜನರನ್ನು ಕೂರಿಸಿಕೊಂಡು ‘ಹಿಂಗ್ ಮಾಡ್ರುಲಾ’ ಎಂದು ಹೇಳಿಕೊಟ್ಟ. ಬೆಳಗ್ಗೆ ಆದದ್ದೇ ಊರಿನಲ್ಲಿ ಗುಸು ಗುಸು ಪ್ರಾರಂಭವಾಯಿತು. ಮತ್ತೆ ಆಲದಮರದ ಕೆಳಗಿನ ಸೋಂಬೇರಿಕಟ್ಟೆ ಚಟುವಟಿಕೆ ಪಡೆದುಕೊಂಡಿತು.
‘ಅಲ್ಲಾ ಕಣ್ರಲಾ, ಈ ರಾಮಣ್ಣ ನಮ್ ಹೆಸ್ರುನಾಗೆ, ನಮ್ ದನ ಕುರಿ ಹೊಲದ್ ಮ್ಯಾಗೇ ಹುಲಿಕಾಟದ್ ನೆಪ್ದಲ್ಲಿ ಸರ್ಕಾರ್ದವ್ರಿಂದ ತುಂಬಾ ದುಡ್ ತಿಂದವ್ನಂತೆ ಕಲಾ’
‘ಲೋ ಹುಲಿ ಹಿಡಿಯೋಕೆ ಮೇಲ್ನವ್ರಿಂದ ಮೊದ್ಲೆ ಆರ್ಡರ್ ಆಗಿತ್ತಂತೆ ಕಣ್ರುಲಾ’
‘ಬಸಪ್ಪನ್ ಬಸ್ರು ರಾಮಪ್ಪನ್ ಹೆಸ್ರು ಅನ್ವಂಗೆ ಇವ ಹಿಂಗ್ ಮಾಡಿ ನಮ್ ಮುಕಕ್ ಬೂದಿ ಎರ್ಚವ್ನೆ, ನಮ್ ದುಡ್ನೆಲ್ಲಾ ನುಂಕಂಡವ್ನೆ, ಇವ್ನ್‍ಗೆ ಓಟ್ ಹಾಕೋದೆ ಬೇಡ ಕಣ್ಲಾ'-ಹೀಗೆ ಸಾಗಿತ್ತು. ಈ ಮಾತುಗಳು ಕಿವಿಯಿಂದ ಕಿವಿ ಹಬ್ಬಿ ರಾಮಣ್ಣನ ವಿಚಾರದಲ್ಲಿ ಜನಗಳಿಗೆ ಗೊಂದಲ ಮೂಡಿಬಿಟ್ಟಿತು. ಕೆಲವು ಜನ ಒಪ್ಪಿಕೊಂಡರೆ, ಒಂದಷ್ಟು ಜನ ಮಾತ್ರ ‘ಇವೆಲ್ಲಾ ಸುಳ್ಳು ಕಣ್ರಲಾ, ಪಾಪ ಆವಯ್ಯಾ ಹುಲಿ ಹಿಡಿಸಿ ನಮ್ ಐಕ್ಳು ಪ್ರಾಣ ಉಳ್ಸವ್ನೆ’ ಎಂದರು.
ಕೊನೆಗೆ, ಒಂದು ಕಡೆ ಸಿದ್ಧಣ್ಣ ಜನಗಳ ಸಭೆ ಕರೆದು ‘ರಾಮಣ್ಣ ಮೋಸ ಮಾಡವ್ನೆ, ನಾನೇ ಸಿಟಿಗೋಗಿ ಆಪಿಸರ್ನ ವಿಚಾರ್ಸ್ ಕೊಂಡ್ ಬಂದಿವ್ನಿ, ಬೇಕಾದ್ರೆ ಈ ಪೇಪರ್ನೆ ನೋಡಿ’ ಎಂದು ಜನಗಳಿಗೆ ಸಾಕ್ಷಿ ಸಮೇತ ತೋರಿಸಿದ. ಒಂದೆರಡು ಘಂಟೆ ಮಾತನಾಡಿದ. ಜನಗಳೆಲ್ಲಾ ‘ಸಿದ್ದಣ್ಣನಿಗೆ ಜೈ, ಇಲಿ ಗುರುತ್ಗೆ ಜೈ’ ಎಂದರು. ಇತ್ತ ರಾಮಣ್ಣನೂ ಸಭೆ ಕರೆದಿದ್ದ. ‘ನಾನೇನಾರು ಸುಳ್ ಹೇಳಿದ್ರೆ ಆ ಮಾರವ್ವ ನನ್ನನ್ ನುಂಗ್ಕಳ್ಳಿ, ನಾನ್ ಯಾರ್ ದುಡ್ಡೂನು ನುಂಗಿಲ್ಲ, ಬೇಕಾರೆ ಸಿಟಿಗೋಗಿ ಆಪಿಸರ್‍ಗಳ್ನೆ ವಿಚಾರ್ಸ್‍ಕೊಂಡ್ ಬನ್ನಿ, ಇದ್ರಲ್ಲೇ ಗೊತ್ತಾಯ್ತದೆ ಅವ್ನ್ ಎಂತ ದಗಾಕೋರ ಅಂತ, ಐದೊರ್ಷದಲ್ಲಿ ಐದಾಣೆ ಕೆಲ್ಸಾನು ಅವ ಮಾಡಿಲ್ಲ’ ಎಂದ. ಜನಗಳೆಲ್ಲಾ ‘ರಾಮಣ್ಣನಿಗೆ ಜೈ, ‘ಕಪ್ಪೆ’ ಗುರುತ್ಗೆ ಜೈ’ ಎಂದರು. ನಿಜಕ್ಕೂ ಸಿದ್ಧಣ್ಣ ಐದಾಣೆಯಲ್ಲಿ ಒಂದಾಣೆಯ ಕೆಲಸವನ್ನೂ ಮಾಡಿರಲಿಲ್ಲ.
ಚುನಾವಣೆಗೆ ಇನ್ನೂ ಒಂದು ವಾರ ಬಾಕಿ ಇತ್ತು. ಊರಿನ ತುಂಬೆಲ್ಲಾ ಇವೆ ಗುಸು ಗುಸು ಆಗಿಹೋದವು. ಸಿದ್ಧಣ್ಣನ ಕಡೆಯವರು ರಾಮಣ್ಣನ ಮೇಲೆ, ರಾಮಣ್ಣನ ಕಡೆಯವರು ಸಿದ್ಧಣ್ಣನ ಮೇಲೆ ಸಿಕ್ಕ ಸಿಕ್ಕದ್ದನ್ನೆಲ್ಲಾ ಹಬ್ಬಿಸುತ್ತಿದ್ದರು. ಯಾವುದನ್ನು ನಂಬುವುದು, ಯಾವುದನ್ನು ಬಿಡುವುದು ಎಂಬುದೇ ತಿಳಿಯದ ಮುಗ್ಧ ಜನ ಗೊಂದಲಕ್ಕೆ ಬಿದ್ದರು. ಆದರೆ, ಇಬ್ಬರೂ ನೀಡಿದ ದುಡ್ಡು, ಹೆಂಡವನ್ನು ಗುಟ್ಟು ಗುಟ್ಟಾಗಿಯೇ ತೆಗೆದುಕೊಂಡರು.
ಚುನಾವಣೆ ದಿನ ಬಂದೇ ಬಿಟ್ಟಿತು. ಎಲ್ಲಾ ಜನಗಳು ಹೋಗಿ ಮುದ್ರೆ ಒತ್ತಿಬಂದರು. ಕುಡಿದು ತೂರಾಡಿದ ಕೆಲವರು ಸಿದ್ಧಣ್ಣ ಕಂಡರೆ ‘ಸಿದ್ದಣ್ಣನಿಗೆ ಜೈ’ ರಾಮಣ್ಣ ಕಂಡರೆ ‘ರಾಮಣ್ಣನಿಗೆ ಜೈ’ ಎಂದರು. ಚುನಾವಣೆ ಮುಗಿಯಿತು. ಹಳ್ಳಿಯ ಜನಗಳೆಲ್ಲಾ ಮೌನಕ್ಕೆ ಶರಣಾದರು. ಒಬ್ಬರಿಗೊಬ್ಬರು ಯಾರಿಗೆ ಓಟ್ ಹಾಕಿದ್ದು ಎಂದು ಹೇಳಿಕೊಳ್ಳಲೇ ಇಲ್ಲ. ಇಬ್ಬರನ್ನೂ ನಿಷ್ಠುರ ಮಾಡಿಕೊಳ್ಳುವ ಇರಾದೆ ಅವರಿಗಿರಲಿಲ್ಲ. ಓಟ್ ಒತ್ತಿದ್ದ ವಿಚಾರದಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಅನುಮಾನವೆಂಬಂತೆ ಬದುಕಿದರು.
ಕೊನೆಗೂ ಮತ ಎಣಿಕೆಯೂ ಮುಗಿಯಿತು. ಜನಗಳೆಲ್ಲಾ ಉಸಿರು ಬಿಗಿ ಹಿಡಿದು ಕಾದು ಕುಳಿತಿದ್ದರು. ರಾಮಣ್ಣ ಸಿದ್ಧಣ್ಣನ ಮುಂದೆ, ಸಿದ್ಧಣ್ಣ ರಾಮಣ್ಣನ ಮುಂದೆ ಮೀಸೆ ತಿರುವಿದ್ದರು. ಆದರೆ, ಬಂದ ಫಲಿತಾಂಶ ಹಳ್ಳಿಯನ್ನೇ ಅಚ್ಚರಿಯಲ್ಲಿ ಮುಳುಗಿಸಿತ್ತು. ಗೆದ್ದವನು ಮಾತ್ರ ನನ್ನದೂ ಒಂದು ಜೂಜಿರಲಿ ಎಂದು ಚುನಾವಣೆಗೆ ನಿಂತು ಇವರಿಬ್ಬರ ಗದ್ದಲ, ಅಬ್ಬರದಲ್ಲಿ ತನ್ನ ಹೊಲದ ಕೆಲಸ ಮಾಡಿಕೊಂಡು ಸುಮ್ಮನೇ ಇದ್ದ ‘ಕಾಗೆ’ ಗುರುತಿನ ನಮ್ ‘ಯೆಂಕ್ಟ’!.
Wednesday, 26 December 2012
ಅವಸಾನ...
ನಾನು ಓದಿದ ಈ ಶಾಲೆಯ ಮುಂದಿನ ರಸ್ತೆ ಬದಿಯಲ್ಲಿ ಒಂದು ಆಲದಮರವಿತ್ತು. ಅಷ್ಟಗಲ ಹರಡಿಕೊಂಡಿದ್ದ ಹಳೆಕಾಲದ ಮರದ ಕೆಳಗಿನ ಕಲ್ಲಿನಕಟ್ಟೆಯ ಮೇಲೆ ದಿನಕ್ಕೆ ನೂರಾರು ಜನಗಳು ಮಲಗಿ ಮೈಕೈ ನೋವನ್ನು ನೀಗಿಸಿಕೊಳ್ಳುತ್ತಿದ್ದರು. ಹೊಲ ಗದ್ದೆಗಳಿಗೆ ಕೂಲಿ ಕಂಬಳಕ್ಕೆ ಹೋಗುತ್ತಿದ್ದ ಹೆಂಗಸರು ತೂಕಲಿಗೆ ಮುದ್ದೆ ಮುರಿದುಕೊಂಡು ಇದೇ ಜಾಗದಲ್ಲಿ ಮೊದಲು ಸೇರಿ ನಂತರ ಕೆಲಸ ಹಂಚಿಕೊಂಡು ಸಾಗುತ್ತಿದ್ದರು. ಭಾನುವಾರ ಬಂತೆಂದರೆ ಸಾಕು ಇದೇ ಮರದ ಕೆಳಗೆ ಒದ್ದಾಡುವುದೇ ನಮ್ಮ ಕೆಲಸವಾಗುತ್ತಿತ್ತು. ಹತ್ತದಿನೈದು ವರ್ಷದ ಹಿಂದೆ ಗೋಲಿ ಆಟಕ್ಕೆ ಅಗೆದಿದ್ದ ಗುಂಡಿ ಇಂದು ಮುಚ್ಚಿಹೋಗಿದೆ, ಆ ಕಲ್ಲಿನ ಮೇಲೆ ಹುಲಿಮನೆ ಆಟವಾಡಲು ಕೊರೆದಿದ್ದ ತ್ರಿಭುಜಾಕಾರದ ಚಿತ್ರ ಮಸಕು ಮಸಕಾಗಿ ಹಾಗೇ ಇದೆ. ಜಿದ್ದಿಗೆ ಬಿದ್ದು ನನ್ನೊಂದಿಗೆ ಆ ಆಟವಾಡುತ್ತಿದ್ದ ಸಿದ್ಧರಾಜು ಇಂದಿಲ್ಲ. ಈ ಜಾಗವನ್ನೇ ಆವರಿಸಿಕೊಂಡು ನೆರಳು ನೀಡಿ ನೂರಾರು ಜನರನ್ನು, ದಣಿದವರನ್ನು ತನ್ನ ಮಡಿಲಿನಲ್ಲಿ ಮಲಗಿಸಿಕೊಂಡ ಮರವೂ ಇಲ್ಲ. ಈ ಮೊದಲು ಊರಿಗೆ ಬಂದು ಐದು ವರ್ಷವಾದ ಕಾರಣವೋ ಏನೋ ಈ ಜಾಗವೆಲ್ಲ ನನಗೆ ಬೋಳು ಬೋಳಾಗಿ ಕಾಣುತ್ತಿದೆ. ಆಲದ ಮರ ಆವರಿಸಿಕೊಂಡಿದ್ದ ಜಾಗವನ್ನೆಲ್ಲ ಇಂದು ಮೊಬೈಲ್ ಟವರ್ ಗಳು ನುಂಗಿಹಾಕಿವೆ. ಆ ಮರದಡಿಯಲ್ಲಿ ಜೊತೆಗೆ ಅಡ್ಡಾಡಿದ ಒದ್ದಾಡಿದ ಗೆಳೆಯರು ಎದೆಯಲ್ಲಿ ಒಂದು ನೆನಪನ್ನು ಕೊರೆದಿಟ್ಟು ಅದೆಲ್ಲೆಲ್ಲಿಗೂ ಹೊರಟುಹೋಗಿದ್ದಾರೆ. ಕೆಲವರು ಅಕಾಲಿಕವಾಗಿ ಸತ್ತುಹೋಗಿದ್ದಾರೆ. ‘ಕಾಳಯ್ಯ ಈಜಲು ಹೋಗಿ ತೀರಿಕೊಂಡ’ ಎಂಬ ಮಾತು ಬಾಯಿಂದ ಬಾಯಿಗೆ ಹರಡಿ ಪಟ್ಟಣದಲ್ಲಿದ್ದ ನನ್ನ ಕಿವಿಗೆ ಬಿದ್ದರೂ ಅದಾವ ಸೋಮಾರಿತನದ ಹಿಡಿತವೋ ಏನೋ ಆತನ ಮುಖವನ್ನು ನೋಡಲು ಬರಲಾಗಲಿಲ್ಲ. ಅರ್ಧರಾತ್ರಿಯಾದೊಡನೆ ಎಚ್ಚರಗೊಳ್ಳುತ್ತಿದ್ದ ಸಿದ್ಧರಾಜು ಕಾಡಿನಿಂದ ಶ್ರೀಗಂಧ ಕದ್ದೊಯ್ಯುತ್ತಿರುವಾಗ ಅದಾರದೋ ಹೊಲದ ಕರೆಂಟ್ ತಂತಿಗೆ ಕಾಲುಕೊಟ್ಟು ಕೊನೆಗೆ ಕತ್ತಿಗೆ ಹಗ್ಗ ಸುತ್ತುಕೊಂಡಂತೆ ಬೆಟ್ಟದ ತಪ್ಪಲಿನ ಮರದ ಕೆಳಗೆ ದೊರಕಿದಾಗಲೂ ಕೆಲಸದ ನೆಪದಿಂದ ಬರಲಿಲ್ಲ. ಈ ಕಲ್ಲಿನ ಎದೆಯಲ್ಲಿರುವ ಹುಲಿಮನೆ ಆಟದ ಪಂಜರದ ಮೇಲೆ ಅವನ ಕೈ ಗುರುತಿದೆ, ನನ್ನ ಅವನ ಬುದ್ಧಿವಂತಿಕೆ ಚತುರತೆ ಎದ್ದು ಕಾಣುತ್ತದೆ.
ಆ ಕಲ್ಲಿನ ಮೇಲೆ ಕುಳಿತುಕೊಂಡೊಡನೆ ಒಂದು ರೀತಿಯ ಭಾವುಕತೆ ಮತ್ತು ಖಾಲಿತನ ನನ್ನನ್ನು ಆವರಿಸಿಕೊಂಡು ಒಂದು ಹತ್ತು ಹೆಜ್ಜೆಯ ಮುಂದಿನ ಪ್ರಪಂಚ ಬೇಡವಾಯಿತು. ಮರದ ನೆರಳ ತಂಪು ನೆತ್ತಿಗೆ ಬೀಳಲಿಲ್ಲವೆಂಬುದೇ ಬೇಸರ.
“ಏನಪ್ಪಾ, ಚೆನ್ನಾಗಿದಿಯಾ?” ಯಾರೋ ಕೇಳಿದರು. ಕಣ್ಣು ಕಾಣದ ವಯಸ್ಸಿನಲ್ಲೂ ಆತ ನನ್ನನ್ನು ಗುರುತಿಸಿಕೊಂಡರೂ ನನಗೆ ಆತನ ಸುಳಿವು ಹತ್ತಿರಕ್ಕೆ ಹೋಗುವವರೆವಿಗೂ ದೊರಕಲಿಲ್ಲ. ಕಪ್ಪಾಗಿರುವ ಕಾರಣದಿಂದ ಎಲ್ಲರೂ ಆತನನ್ನು ‘ಕರಗಣ್ಣ’ ಎಂದು ಕರೆಯುತ್ತಿದ್ದರು. ಆ ಕಾಲದಲ್ಲಿ ಅಷ್ಟು ಸದೃಢನಾಗಿದ್ದವನು ಈಗ ತೀವ್ರ ಕೃಶನಾಗಿದ್ದಾನೆ. ಒಂದು ಕಾಲದಲ್ಲಿ ಷರ್ಟಿನ ಎರಡು ಜೇಬಿನ ತುಂಬಾ ಬರಿ ಕಾಗದಗಳನ್ನೇ ತುಂಬಿಕೊಂಡು ಒಂದೈದು ಪೆನ್ನುಗಳನ್ನು ತುರುಕಿಕೊಂಡಿರುತ್ತಿದ್ದ. ಕೈಯಲ್ಲಿ ಒಂದು ರೇಡಿಯೋ ಹಿಡಿದುಕೊಂಡು ಕನ್ನಡ, ತಮಿಳು, ತೆಲುಗು, ಇಂಗ್ಲೀಷ್, ಹಿಂದಿ ವಾರ್ತೆಯನ್ನೆಲ್ಲಾ ಗಮನವಿಟ್ಟು ಕೇಳಿ ಅರ್ಥವಾಗದಿದ್ದರೂ ಏನೇನೋ ಭಾಷಾಂತರಿಸಿ ಊರಿನ ಜನರಿಂದ ಸೈ ಎನಿಸಿಕೊಂಡಿದ್ದವ. ಇಟ್ಟುಕೊಂಡ, ಕಟ್ಟುಕೊಂಡವರ ಒಡೆದ ಸಂಸಾರಗಳನ್ನೆಲ್ಲಾ ಚಾವಡಿಯ ಮೇಲೆ ಕುಳಿತು ತೀಕ್ಷ್ಣವಾಗಿ ಮಾತನಾಡಿ ಪರಿಹರಿಸುತ್ತಿದ್ದವ, ಸಾಧ್ಯವಾಗದಿದ್ದಾಗ ಹೆಂಡತಿಗೆ ಗಂಡನ ಕಡೆಯಿಂದ ಐದು ಸಾವಿರ ಕೊಡಿಸಿ ತಾಳಿ ಕೀಳಿಸಿಬಿಡುತ್ತಿದ್ದ.
“ಚೆನ್ನಾಗಿದ್ದೇನೆ, ನೀವು ಹೇಗಿದ್ದೀರಿ” ಎಂದೆ.
“ಶಿವ ಮಡಗ್ದಂಗಿದ್ದೀನಪ್ಪ” ಎಂದವನೇ ತಲೆ ಕೆರೆದುಕೊಂಡ.
“ಹೇಳಿ” ಎಂದೆ.
“ಒಂದೈದ್ರುಪಾಯಿ ಇದ್ರೆ ಕೊಡಪ್ಪ, ಒಂದ್ ಕಟ್ಟು ಗಣೇಶ ಬೀಡಿ ತಕ್ಕೋತಿನಿ” ಅಂದ. ಆತನ ಮನೆಯಲ್ಲಿ ನಾನು ಅದೆಷ್ಟೋ ಬಾರಿ ಹೊಟ್ಟೆ ತುಂಬಾ ಉಪ್ಹೆಸರು ಮುದ್ದೆ ತಿಂದಿದ್ದೇನೆ. ಒಂದು ದಿನವೂ ಬೇಸರಿಸಿಕೊಳ್ಳದೆ ಬಡಿಸಿದವರು ಇಂದು ಕೇವಲ ಐದು ರೂಪಾಯಿಗೆ ಕೈಚಾಚಿದ್ದು ಕಂಡು ಬೇಸರವಾದರೂ ಕೊನೆಗೆ ಖರ್ಚಿಗೆ ಇಟ್ಟುಕೊಳ್ಳಿ ಎಂದು ಐವತ್ತು ರೂಪಾಯಿಯನ್ನೇ ಕೊಟ್ಟೆ.
“ನಿಮ್ಮ ಮಗ ಧಾಮೋಧರ ಹೇಗಿದ್ದಾನೆ, ಎಲ್ಲಿದ್ದಾನೆ ಈಗ?” ದುಡ್ಡು ಸಿಕ್ಕಿದ್ದೇ ಖುಷಿಯಾದ ಆತನನ್ನು ಕೇಳಿದೆ.
“ಅಯ್ಯೋ, ಅವನು ಆ ಕೆಳ್ಗಲ್ ಕೇರಿ ಮೂಲೆ ಮನೆ ವೆಂಕ್ಟನ್ ಹೆಂಡತಿ ಜೊತೆ ಓಡಿಹೋಗಿ ತಮಿಳುನಾಡು ಕಾಫಿ ತೋಟದಲ್ಲಿ ಸೇರಿಕೊಂಡವ್ನೆ ಅಪ್ಪ, ಈ ಊರಿಗೆ ಬಂದ್ರೆ ಅವನನ್ನ ಬುಟ್ಟಾರ ಜನಗೋಳು” ಎಂದಾಗ ಈ ರೀತಿಯ ಎಡವಟ್ಟುಗಳಿಗೆ ತಲೆಕೊಟ್ಟು ಊರು ಬಿಟ್ಟುಹೋದ, ಪವಿತ್ರವಾಗಿ ಪ್ರೀತಿಸಿ ಕೊನೆಗೆ ಇಟ್ಟುಕೊಂಡವರು ಎಂಬ ಪಟ್ಟ ಹೊತ್ತುಕೊಂಡ ಎಷ್ಟೋ ಗೆಳೆಯರು ನೆನಪಿಗೆ ಬಂದರು.
“ಅದ್ಸರಿ, ನೀನು ಮದುವೆ ಆಗೋದಿಲ್ವೇ?, ಪಟ್ಟಣಕ್ಕೆ ಸೇರಿ ನೀನು ಇನ್ನೂ ಹೀಗೆ ಉಳ್ಕೊಂಡಿದ್ಯಾ, ನೀನು ಆಗ ಹೊತ್ತು ತಿರುಗಾಡ್ತಿದ್ದ ಕೂಸುಗಳಿಗೆಲ್ಲಾ ಈಗ ಒಂದೊಂದು ಮಕ್ಕಳಾಗಿದೆ” ಆತ ಕೇಳಿದ
“ಆಗೋಣ ಬಿಡಿ ಅಣ್ಣಯ್ಯಾ, ಅವರೆಲ್ಲಾ ಅವಸರಕ್ಕೆ ಬಿದ್ದು ಮದುವೆ ಆದವರು. ನಾವು ಪಟ್ಟಣದಲ್ಲಿರುವವರು ಅವರಂತೆ ಅವಸರಕ್ಕೆ ಬೀಳಲು ಸಾಧ್ಯವೇ” ಎಂದು ಹೇಳಿದನೇ ಮತ್ತೆ ಆ ಕಲ್ಲಿನ ಮೇಲೆ ಕುಳಿತುಕೊಂಡೆ.
ಮದುವೆ ಎಂಬ ಈ ಪದ ನನ್ನ ಕಿವಿಗೆ ಬಿದ್ದರೆ ರೇಖಾ ನೆನಪಾಗುತ್ತಾಳೆ. ಇದೇ ಶಾಲೆಯ ಆವರಣದಲ್ಲಿ ಒಬ್ಬರಿಗೊಬ್ಬರು ಮದುವೆಯ ಆಟ ಆಡಿದ್ದೆವು. ನಮ್ಮಿಬ್ಬರನ್ನು ಹಸೆಮಣೆ ಮೇಲೆ ಕೂರಿಸಿ ಮದುವೆ ಮಾಡಿದ್ದ ಇತರೆ ಗೆಳೆಯರು ಆಟವೆಂಬುದನ್ನು ಮರೆಯುವಷ್ಟು ಗಂಭೀರವಾಗಿ ಆಗಾಗ ಈ ಮದುವೆಯನ್ನು ನೆರವೇರಿಸುತ್ತಿದ್ದರು. ಪ್ರೀತಿ ಪ್ರೇಮ ಎಂಬ ಕಿಂಚಿತ್ತೂ ಅರಿವಿಲ್ಲದ ಆ ಕಾಲದಲ್ಲಿ ಆಕೆಗೆ ಹಳೆಯ ಜಾಮೆಟ್ರಿ ಬಾಕ್ಸ್ ಜೊತೆಗೆ ನಾಲ್ಕಾಣೆಯ ಒಂದು ಪಾವಲಿಯನ್ನು ನೀಡಿದ್ದೆ. ಬಹುದಿನಗಳವರೆವಿಗೂ ಆಕೆ ಅದನ್ನು ತನ್ನೊಡನೆ ಇಟ್ಟುಕೊಂಡಿದ್ದಳು. ನಂತರದ ದಿನಗಳಲ್ಲಿ ನಮ್ಮಿಬ್ಬರ ನಡುವೆ ಬಿರುಗಾಳಿಯಾಗಿ ಬಂದವನು ಲಕ್ಷ್ಮಣ್. ನಿನ್ನೆ ಬಸ್ಸಿನಿಂದ ಹೊರಗೆ ಹೆಜ್ಜೆ ಇಟ್ಟಾಗ ಆತ ತೂರಾಡಿಕೊಂಡು ಮೇಲೆ ಬಿದ್ದಾಗ ಯಾಕೋ ತುಂಬಾ ಕನಿಕರ ಹುಟ್ಟಿತ್ತು. ಇದೇ ಲಕ್ಷ್ಮಣ್, ಆಕೆ ತುಂಬಾ ಜೋಪಾನವಾಗಿಟ್ಟುಕೊಂಡಿದ್ದ ನವಿಲುಗರಿಯೊಂದನ್ನು ತುಂಡು ಮಾಡಿ ನನ್ನ ಪುಸ್ತಕದಲ್ಲಿ ಇಟ್ಟಿದ್ದ. ಇದೇ ವಿಚಾರವಾಗಿ ಮುನಿಸಿಕೊಂಡಿದ್ದ ಆಕೆ ಆ ನಾಲ್ಕಾಣೆ ಪಾವಲಿಯನ್ನು ನನ್ನ ಮುಖಕ್ಕೆ ಎಸೆದುಹೋಗಿದ್ದಳು.
ಈ ಶಾಲೆಯ ಗೋಡೆಗಳು ಇನ್ನೂ ಹಾಗೇ ಇವೆ. ಅಂದು ಎಳೆ ಹುಡುಗನಾಗಿದ್ದವನು ಇಂದು ಬೆಳೆದು ಮುಂದೆ ಕುಳಿತಿರಬಹುದು. ಆದರೆ, ಆ ಗೋಡೆಗೆ ನಾನಿನ್ನೂ ಚಿಕ್ಕವನೆ. ಪಾಳುಬಿದ್ದ ಶಾಲೆಯ ಈ ಸ್ತಬ್ಧಗೋಡೆಗಳು ನನ್ನ ಬುದ್ಧಿಯನ್ನು ತೀಡಿ ತೀಕ್ಷ್ಣಗೊಳಿಸಿದ ಗುರುಗಳನ್ನು ನೆನಪಿಸುತ್ತದೆ, ಈ ಅಂಗಳದಲ್ಲಿ ಚೆಲ್ಲಿಕೊಂಡಿದ್ದ ಗೆಳೆಯರು ಅಷ್ಟೇ ಚಿಕ್ಕವರಾಗಿ ನನ್ನನ್ನು ಕೂಗುತ್ತಿದ್ದಾರೆ. ಅಂದು ಇಲ್ಲೆಲ್ಲಾ ನಲಿದಾಡಿದ ಎದೆಯಲ್ಲಿ ಒಂದು ಗುರುತನ್ನು ಮೂಡಿಸಿದ ಹುಡುಗಿಯರ ಮಕ್ಕಳು ಇಲ್ಲೆಯೇ ಆಡುತ್ತಿವೆ ಎನಿಸುತ್ತಿದೆ. ಆದರೆ, ಈ ಮುಗ್ದ ಮಕ್ಕಳೊಂದಿಗೆ ನನ್ನ ಕುಡಿಗಳು ಸೇರಿಕೊಂಡು ಈ ತಂಪಿನಲ್ಲಿ ಎಲ್ಲಾ ಮರೆತು ಹಳ್ಳಿಯ ಸೊಗಡಿನಲ್ಲಿ ಬೆಳೆಯಲಿ ಎಂದುಕೊಳ್ಳಲಾರೆ.
ಅಸಲಿಯಾಗಿ ಅದು ನನ್ನಿಂದ ಸಾಧ್ಯವೇ?
ನಿನ್ನೆ ಸಂಜೆ ಈ ಹಳ್ಳಿಗೆ ಬಂದು ಹತ್ತು ನಿಮಿಷವಾಗಿರಲಿಲ್ಲ, “ವಯಸ್ಸಾಗಿದೆ, ಮದುವೆ ಮಾಡಿಕೊಳ್ಳಲು ನಿನಗೇನು ದಾಡಿ” ಅಜ್ಜಿ ಒಂದೇ ಸಮನೆ ಸಂಚಿ ಹುಡುಕುತ್ತಾ ಗೊಣಗಿಕೊಂಡಳು.
“ಏನಪ್ಪಾ, ಹುಡುಗಿ ನೋಡೋದೇ? ಮೊನ್ನೆ ರಾಮಣ್ಣನ ಮದುವೆಗೆ ಹೋಗಿದ್ದಾಗ ಒಂದೊಳ್ಳೆ ಸಂಬಂಧ ಗೊತ್ತು ಮಾಡಿಬಂದಿದ್ದೇನೆ” ಅಣ್ಣ ಕೇಳಿಕೊಂಡ.
“ಅವನು ಯಾರನ್ನಾದರೂ ಪ್ರೀತಿಸಿರಬಹುದು ಇಲ್ಲ ಪಟ್ಟಣದಲ್ಲಿ ನಮಗೆಲ್ಲರಿಗೂ ತಿಳಿಯದಂತೆ ಒಂದು ಸಂಸಾರ ಹೂಡಿರಬಹುದು, ಆದುದರಿಂದಲೇ ಮದುವೆಗೆ ಒಪ್ಪಿಗೆ ನೀಡದೆ ಈ ರೀತಿಯಾಗಿ ಆಡುತ್ತಿದ್ದಾನೆ” ಪಕ್ಕದ ಮನೆಯವಳು ತನ್ನದೂ ಒಂದು ಸೊಲ್ಲಿರಲಿ ಎಂದು ನನ್ನ ಮುಖ ನೋಡುತ್ತ ಹೇಳಿದಳು.
“ಮಗನೇ, ನಾ ಸಾಯುವ ಮೊದಲೇ ನಿನ್ನ ಮದುವೆ ನೋಡಿಬಿಡುತ್ತೇನೆ, ಈ ಹಳ್ಳಿಯಲ್ಲಿಯೇ ನಿನ್ನ ಮದುವೆಯಾಗಬೇಕು ಕಂದ”, ಗೂರಲು ರೋಗದಿಂದ ಬಳಲಿ ಮೇಲೆ ಹಾರುತ್ತಿದ್ದ ಜೀವಪಕ್ಷಿಯನ್ನು ಹಿಡಿದುಕೊಂಡ ಅಪ್ಪ ಕಷ್ಟಪಟ್ಟು ನುಡಿದ.
“ನಿನ್ನೆಯಷ್ಟೇ ಬಸಣ್ಣ ಫೋನ್ ಮಾಡಿದ್ದ, ಚಿಕ್ಕಕ್ಕನ ಮಗಳು ಓದಿಕೊಂಡಿದ್ದಾಳಂತೆ, ನೋಡಲೂ ಚೆನ್ನಾಗಿದ್ದಾಳೆ, ಅವರಲ್ಲಿ ಹತ್ತೆಕರೆ ಜಮೀನು ಒಳ್ಳೆ ಆಸ್ತಿ ಇದೆ. ನಿನ್ನೆ ಅವರ ಮನೆಗೆ ಹೋಗಿ ಮಾತನಾಡ್ಕೊಂಡು ಬಂದಿದ್ದೇನೆ, ನಿಮ್ಮ ಮಗಳೇ ನನ್ನ ಸೊಸೆ ಎಂದು ಹೇಳಾಗಿದೆ, ಅವರು ಬೆಳಗ್ಗೆಯಿಂದಲೂ ಫೋನಾಯಿಸಿ ‘ಬೇಗ ತಿಳಿಸಿ, ಅದ್ಯಾರೋ ಕಂಡಕ್ಟರ್ ಬಂದು ನೋಡಿಕೊಂಡು ಹೋಗಿದ್ದಾರೆ’ ಎಂದು ಕೇಳುತ್ತಲೇ ಇದ್ದಾರೆ. ನೀನು ಈ ರೀತಿ ಆಡ್ತಾ ಇರೋದಾದ್ರೂ ಯಾಕೆ ಅಂತ ಗೊತ್ತಾಗ್ತಾ ಇಲ್ಲಪ್ಪ?” ಸಿಟ್ಟು ಮಾಡಿಕೊಂಡ ಅಮ್ಮ ‘ಚೆ’ ಎಂದುಕೊಂಡಳು.
“ದಯವಿಟ್ಟು ಸ್ವಲ್ಪ ಸಮಯ ಕೊಡಿ, ಅವಸರ ಬೇಡ, ನಾನೇನೂ ಈಗ ಹುಚ್ಚನಂತೆ ಬೀದಿ ಬೀದಿ ಅಲೆಯುತ್ತಿಲ್ಲವಲ್ಲ, ನೆರೆ ಕೂದಲು ಬಂದು ಚರ್ಮವೆಲ್ಲಾ ಸುಕ್ಕುಗಟ್ಟಿಹೋಯಿತೇನೋ ಎಂಬಂತೆ ಆಡುವುದೇಕೆ? ಕೂಡಲೇ ಮದುವೆ ಬಗ್ಗೆ ತಿಳಿಸುತ್ತೇನೆ” ಎಂದು ಹೇಳಿ ಮನೆಯಿಂದ ಹೊರ ನಡೆದಿದ್ದೆ.
“ಏನಪ್ಪಾ, ಪಟ್ಟಣಕ್ಕೆ ಹೋದದ್ದೇ ನಮ್ಮನ್ನ ಮರೆತುಬುಟ್ಟಾ?” ಯಾವುದೋ ಪರಿಚಿತ ದ್ವನಿ ಕಿವಿಗೆ ಬಿದ್ದಿತು. ಕೂಲಿ ಮುಗಿಸಿ ಬರುತ್ತಿದ್ದ ನಮ್ಮ ಬೀದಿಯ ಹೆಂಗಸರ ದಂಡೆ ನನ್ನ ಹಿಂದೆ ನಿಂತಿತ್ತು.
“ಚೆನ್ನಾಗಿದ್ದೇನೆ, ನೀವುಗಳು?” ಎಂದೆ.
“ನಮ್ಮದೇನಪ್ಪ, ಕೂಲಿ ಮಾಡಿದರೆ ಉಣ್ಣುವುದು, ಇಲ್ಲದಿದ್ದರೆ ಶಿವನಿಷ್ಟ ಅಂದ್ಕೊಂಡು ನೀರು ಕುಡಿಯುವುದು” ಎಂದಳೊಬ್ಬಳು
“ಪಟ್ಣಕ್ಕೆ ಹೋಗಿ ನೀನು ಕೆಡಲಿಲ್ಲ, ಒಂದು ಸೈಟ್ ತೆಗೆದುಕೊಂಡಿದ್ದಿಯಂತೆ, ಅದೆಷ್ಟೋ ಲಕ್ಷ ದುಡ್ಡನ್ನ ಬ್ಯಾಂಕಿನಲ್ಲಿಟ್ಟಿದ್ದೀಯಂತಲ್ಲಪ್ಪ, ತಣ್ಗಿರು” ಎಂದಳು ಗಂಗವ್ವ. ಈಕೆ ನಮ್ಮ ನೆರೆಮನೆಯಾಕೆ. ನಮ್ಮಮ್ಮ ದಿನಕ್ಕೊಮ್ಮೆಯಾದರೂ ಈಕೆಯ ಬಳಿ ನನ್ನ ವಿಚಾರವೆತ್ತಿ ಬರಿ ಈ ರೀತಿಯ ಸುಳ್ಳನ್ನು ಹೇಳುವುದೇ ಆಯಿತು.
"ಇದೇಕೆ? ಮದುವೆ ಆಗೋಲ್ವೇ?" ಮತ್ತದೇ ಪ್ರಶ್ನೆ ಎದುರಾಗಿದ್ದೇ "ನೀವೆಲ್ಲಾ ನಡೆಯಿರಿ, ಬೀದಿಗೇ ಬಂದು ಮಾತನಾಡುತ್ತೇನೆ" ಎಂದು ಕಳುಹಿದೆ.
ಈ ಕೆರೆ ನೋಡಿ, ಮಳೆಗಾಲ ಬಂದಾಗ ತುಂಬಿಕೊಳ್ಳುತ್ತದೆ, ಬೇಸಿಗೆ ಬಿಸಿಗೆ ಬೆತ್ತಲಾಗಿ ನೆಲ ಬಿರಿಯುತ್ತದೆ. ಅಲ್ಲಿದ್ದ ಕೆಲವು ಜೀವರಾಶಿಗಳು ಅವಸಾನಗೊಳ್ಳುತ್ತವೆ. ಹಾವು, ಚೇಳುಗಳು ಬಿಲ ಸೇರಿಕೊಳ್ಳುತ್ತವೆ. ಅದೆಲ್ಲಿಗೋ ಜೀವ ಹಾರಿ, ಮಾಂಸ ಕರಗಿ ಬಿದ್ದಿರುವ ಕಪ್ಪೆಯ ಅಸ್ಥಿಪಂಜರ ಈ ಜಗತ್ತಿಗೆ ಅಕಾರಣವಾಗಿ ಬಂದ ಒಂದು ಜೀವ ಕಾರಣವಿಲ್ಲದೇ ಕುಣಿದಾಡಿ, ನೆಗೆದಾಡಿ ಕೊನೆಗೆ ಕಾರಣ ಉಳಿಸದೇ ಸತ್ತುಹೋಗುವ ಕುರುಹನ್ನಿಟ್ಟುಕೊಂಡಿದೆ. ಅದೆಲ್ಲಿಂದ ಬಂತು, ಹೊದದ್ದಾದರೂ ಎಲ್ಲಿಗೆ ಎಂಬ ಪ್ರಶ್ನೆಗೆ ಆ ಎಲುಬು ಉತ್ತರಿಸದು, ಬದಲಾಗಿ ಈ ಜೀವನದ ಖಾಲಿತನವನ್ನು, ಇಂದು ನಮ್ಮನ್ನೆಲ್ಲಾ ಅಪ್ಪಿಕೊಂಡು ಬಿಗಿದಿರುವ ಸಂಬಂಧಗಳೊಳಗಿನ ಕೆಲವು ದಿನಮಾತ್ರದ ಆಕರ್ಷಣೆಯನ್ನು ಕನ್ನಡಿಯಾಗಿ ತೋರಿದೆ.
ಈ ಕೆರೆಯೆಂಬುದೂ ಬದುಕಿನಂತೆ ಎಲ್ಲಾ ಬದಲಾವಣೆಗೆ ಹೊಂದಿಕೊಳ್ಳುವ ಒಂದು ವೃತ್ತಾಂತ, ಇದೇ ವೃತ್ತಾಂತದಲ್ಲಿ ಹುಟ್ಟಿ ಸಾಯುವ ಕಪ್ಪೆಯಂತೆ ನಾನೂ ಕೂಡ ಇದೇ ಹಳ್ಳಿಯಲ್ಲಿ ಬದುಕಿಬಿಡಬೇಕಾಗಿತ್ತು. ಪಟ್ಟಣದ ಗೊಂದಲದ ಕಾರಣವಾಗಿ ದಿನಕ್ಕೆ ಡಝನ್ ಗಟ್ಟಲೇ ಸಿಗರೇಟ್ ಸೇದುವ ಬದಲು, ನನಗೆ ಈಜು ಕಲಿಸಿದ ಈ ಕೆರೆಯ ದಂಡೆಯಲ್ಲಿ ಕುಳಿತು ಒಂದು ಮೋಟುಬೀಡಿ ಸೇದಿ ಸಂಜೆಯಾದಂತೆ ಉಂಡು ಪಡಸಾಲೆಯಲ್ಲಿ ಮಲಗಿಬಿಡಬಹುದಾಗಿತ್ತು. ಮೈಗಂಟಿಕೊಳ್ಳುವ ಈ ಪ್ಯಾಂಟ್ ಷರ್ಟ್ ಬದಲು ಒಂದೆರಡು ಪಂಚೆಯಲ್ಲಿ ಜೀವನ ಕಳೆಯಬಹುದಿತ್ತು. ಹಳ್ಳಿಬಿಟ್ಟು ಯೋಚಿಸದ ಯಾವಳೋ ಒಬ್ಬಳನ್ನು ಮದುವೆಯಾಗಿ ಈ ಹೊತ್ತಿಗೆ ಒಂದೆರಡು ಮಕ್ಕಳೊಂದಿಗೆ ಕಾಲ ಕಳೆಯಬಹುದಿತ್ತು. ಎಲ್ಲೆಲ್ಲಿಯೂ ಬಸ್ಸು, ಸ್ಕೂಟರ್ ತುಂಬಿಕೊಂಡು ಯಾವಾಗಲೂ ಹೊಗೆ ಉಗುಳುವ, ಸಣ್ಣ ಸಣ್ಣ ವಸ್ತುವಿನ ವ್ಯಾಪಾರಕ್ಕೂ ದೊಡ್ಡ ದೊಡ್ಡ ಮೋಸ ಮಾಡುವ, ಮುಖ ನೋಡಿ ಮಣೆ ಹಾಕುವ ಪಟ್ಟಣವನ್ನು ಕನಸಿನಲ್ಲಿ ತುಂಬಿಕೊಳ್ಳುವ ಹಳ್ಳಿಗರು ಹಳ್ಳಿಯ ಈ ಸುಪ್ತ ಆಪ್ತ ವಾತಾವರಣವನ್ನು ಮರೆತುಬಿಡುತ್ತಾರೆ. ಪ್ಯಾಂಟ್, ಟೀ ಷರ್ಟ್, ಬೆಲ್ಟ್ ಹಾಕಿಕೊಂಡು ಅಸ್ವಾಭಾವಿಕವಾಗಿ ಮಾತನಾಡುವುದನ್ನೇ ನಾಗರಿಕತೆಯ ಪರಮಾವಧಿ ಎಂದುಕೊಳ್ಳುತ್ತಾರೆ. ಅಲ್ಲಿನ ಖರ್ಚನ್ನು ಲೆಕ್ಕವಿಟ್ಟುಕೊಳ್ಳದೇ ಬಂಡಿಯಷ್ಟು ದುಡಿಯಬಹುದೆಂಬ ಭ್ರಮೆಯ ಅಲಗಿನರಮನೆಯಲ್ಲಿ ತೇಲುತ್ತಾರೆ. ಒಂದಷ್ಟು ಜನ ಉದ್ಧಾರವಾದರೆ, ಒಂದಷ್ಟು ಜನ ಹಳ್ಳಿಯ ಮಡಿಲನ್ನು ಮತ್ತೆ ಅಪ್ಪಿಕೊಳ್ಳುತ್ತಾರೆ. ಒಂದಷ್ಟು ಜನ ಮೆಜೆಸ್ಟಿಕ್‍ನಂತಹ ಕತ್ತಲ ಕೂಪದೊಳಗೆ ಮೈ ಬೆತ್ತಲು ಮಾಡಿಕೊಳ್ಳುತ್ತಾರೆ. ನನ್ನಂತೆ ಏಡ್ಸ್ ನಂತಹ ಮಹಾಮಾರಿಗೆ ಸುಲಭವಾಗಿ ತುತ್ತಾಗಿಬಿಡುತ್ತಾರೆ!
ಅಷ್ಟಕ್ಕೇ ದೊಡ್ಡಪ್ಪನ ಫೋನ್ ಬಂದಿತ್ತು. "ಹಲೋ" ಎಂದೆ.
"ಎಲ್ಲಿದ್ದೀಯಪ್ಪಾ? ಮನೆ ಹತ್ರ ಬೇಗ ಬಾ, ಮದುವೆ ಬಗ್ಗೆ ಮಾತನಾಡಬೇಕು" ಎಂದ ದೊಡ್ಡಪ್ಪನ ಮಾತು ಕೇಳಿ ಮತ್ತಷ್ಟು ಕಿರಿಕಿರಿಯಾಯಿತು.
ಏನೂ ಮಾತನಾಡದೆ ಫೋನಿಡುವಷ್ಟರಲ್ಲಿ "ಏಡ್ಸ್ ವಿರುದ್ಧ ಜಾಗೃತಿ ಮೂಡಿಸುವ ಶಿಬಿರಕ್ಕೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗಿದೆ" ಎಂಬ ಸಂದೇಶ ಬಂತು. ಕೊನೆಗೂ ನನ್ನ ತಪ್ಪು ಅಲ್ಪ ಸ್ವಲ್ಪವಾದರೂ ಸರಿದಾರಿ ಹಿಡಿಯಿತು!
Sunday, 9 December 2012
ಸ್ತಬ್ದ ಭಾವಗಳು...
ಮುಂಜಾನೆ ಚಳಿಗದುರಿ ಮೌನವಾಗಿ
ಮಲಗಿದೆ ರಸ್ತೆ
ಪೇಪರ್ ಮಾರುತ್ತಿದ್ದ ಹುಡುಗ
ಹಂಚಿದ್ದಾನೆ ತನ್ನ ವ್ಯಥೆ!
2.
ಮೈಕೊರೆವ ಚಳಿಗೆ ಹರಿದ ಕಂಬಳಿ
ಎಳೆದುಕೊಂಡಿತು ಅಜ್ಜ
ಮನಸ್ಸು ಮುದುಡಿದೆ, ಹೇಳಲು
ಪದಗಳಿಲ್ಲ, ನಡುಗುವ ಸಜ
3.
ಆ ಏಕಮುಖ ಸಂಚಾರದ ದಾರಿಯಲ್ಲಿ
ಮಗುವಿನೊಂದಿಗೆ ತಾಯಿ
ಮುಂದೆ ಹೋದವಳು ಹಿಂದೆ ಬರಳು
ಬೊಗಳಿದೆ ಬೀದಿನಾಯಿ
4.
ರಾತ್ರಿ ಒಂದೇ ಹಾಸಿಗೆಯಲ್ಲಿ ನಡೆದ
ಜಗಳಕ್ಕಿನ್ನೂ ಕುದಿವ ಮನ
ಮುಂಜಾನೆಯ ಚಳಿಗೂ ಕಿಚ್ಚಿಟ್ಟಿದೆ
ಮನೆಯೊಳಗೇ ಸ್ಮಶಾಣ
5.
ಬಸ್ ನಿಲ್ದಾಣದಲ್ಲಿ ಮಲಗಿದ್ದವನಿಗೆ
ಸೂರ್ಯೋದಯದ ತವಕ
ದೊಣ್ಣೆಯ ಏಟಿಗೂ ಏಳಲಿಲ್ಲ
ತೀರದ ಮೈ ಕೈ ನಡುಕ
6.
ಚಳಿ ಮುಗಿದು ಬಿಸಿಲು ನೆತ್ತಿ ಸುಟ್ಟರೂ
ಇವರುಗಳು ಮೌನಿಗಳು
ಹೇಳಿಕೊಳ್ಳಲು ಪದ ಭಂಡಾರವಿಲ್ಲ
ಕಣ್ಣಿಲ್ಲದ ಅಂಧ ಕವಿಗಳು
Tuesday, 4 December 2012
ಮೌನ ದ್ವಂದ್ವ
ಚೂರು ಕೆಲಸ ಮಾಡದಿದ್ದರೂ, ಚೀರಿ ಚೀರಿಯೇ ಎದೆ ಕಟ್ಟಿದಂತಾಗಿತ್ತು ಶಾಂತಮ್ಮಳಿಗೆ. ಮನೆಯನ್ನು ಅಚ್ಚುಕಟ್ಟುಗೊಳಿಸಲು ಮನೆಯಾಳುಗಳಿಗೆ ಹೇಳುವುದರಲ್ಲಿಯೂ ಇಷ್ಟು ಸುಸ್ತಾಗುತ್ತದೆ ಎಂದು ಆಕೆಗೆ ತಿಳಿದಿರಲಿಲ್ಲ. ಇವಳುಪಸ್ಥಿತಿ ಇರದಿದ್ದರೆ ಕೆಲಸದಾಳುಗಳು ಒಂದೆರಡು ಘಂಟೆ ಮೊದಲೇ ಮನೆ ಗುಡಿಸಿ, ತೊಳೆದು, ಅದು ಇದು ಜೋಡಿಸುವ ಕೆಲಸ ಮಾಡಿ ಮುಗಿಸಿಬಿಡುತ್ತಿದ್ದರು. ಅಷ್ಟಕ್ಕೆ ಶಾಂತಮ್ಮಳ ಗಂಡ ಲಕ್ಷ್ಮೀಶಭಟ್ಟರು ‘ಸಾಂಬಾರಿಗೆ ಉಪ್ಪೇ ಇಲ್ಲವಲ್ಲೇ’ ಎಂದು ಒಂದೇ ಸಮನೆ ಕೂಗಿಕೊಂಡರು. ‘ಈ ಅಡುಗೆಯವಳು ನಿಮ್ಮ ದೂರದ ಸಂಬಂಧಿ ಎಂದು ಇಟ್ಟುಕೊಂಡಿದ್ದೀರೋ ಹೇಗೆ? ಇಂಗು ತೆಂಗು ಎಲ್ಲವೂ ಇದ್ದರೂ ಊಟಕ್ಕೆ ರುಚಿ ಹತ್ತಿಸಲು ಬರದ ಮಂಗ, ಬೇರೆಯವಳನ್ನು ನೋಡಿಕೊಳ್ಳೋಣವೆಂದರೂ ನೀವು ತುಟಿ ಬಿಚ್ಚುವುದಿಲ್ಲ’ವೆಂದು ಶಾಂತಮ್ಮ ರೇಗಿಕೊಂಡಳು.
ಶಾಂತಮ್ಮಳ ಮೊದಲ ಮಗಳಾದ ಕಾವ್ಯಳನ್ನು ನೋಡಿ ಸಂಬಂಧ ಗೊತ್ತು ಮಾಡಿಕೊಂಡು ಹೋಗಲು ಇಂದು ದೂರದ ಮಂಗಳೂರಿನಿಂದ ಹುಡುಗನ ಮನೆಯವರು ಬರುವುದರಲ್ಲಿದ್ದರು. ಹುಡುಗನ ಹೆಸರು ಲಂಬೋಧರ. ಹುಡುಗನ ಮನೆಯವರು ಆ ಮಂಗಳೂರಿನಲ್ಲಿಯೇ ಅತಿ ಹೆಚ್ಚು ಸಂಭಾವಿತರಲ್ಲದೇ ಅಪಾರಮಟ್ಟದ ಆಸ್ತಿಪಾಸ್ತಿ ಹೊಂದಿರುವವರು. ಸಾವಿರಾರು ಎಕರೆ ಜಮೀನಲ್ಲದೇ, ಮಂಗಳೂರಿನಲ್ಲಿ ಹತ್ತಿಪ್ಪತ್ತು ಕಾಂಪ್ಲೆಕ್ಸ್ ಗಳನ್ನು ಕಟ್ಟಿಸಿಕೊಳ್ಳುವುದಲ್ಲದೇ ಒಂದಷ್ಟು ಹೋಟೆಲ್ ನಡೆಸುತ್ತಿದ್ದರು. ತಿಂಗಳಿಗೆ ಕೋಟಿ ಕೋಟಿ ಲಾಭ ಗಳಿಸುವ ಜನ, ಜೊತೆಗೆ ರಾಜಕೀಯ ಕ್ಷೇತ್ರದಲ್ಲಿಯೂ ಅಷ್ಟೇ ಹೆಸರು ಮಾಡಿ, ಮನೆಮಂದಿಯೆಲ್ಲಾ ಒಮ್ಮೊಮ್ಮೆ ಸ್ಥಳೀಯ ಶಾಸಕರಾಗಿದ್ದರು. ಲಂಭೋದರನ ತಂದೆ ವೆಂಕಟೇಶಭಟ್ಟರ ಕುಟುಂಬವೆಂದರೆ ಮಂಗಳೂರಿನಲ್ಲಿ ಏನೋ ವಿಶಿಷ್ಟವಾದ ಗತ್ತು-ಗಾಂಭೀರ್ಯವಿದೆ. ಅವರಿಂದ ಋಣ ತಿಂದ ಅನೇಕ ಹಳ್ಳಿಗಳಿವೆ, ಬಡ ಜನರು ತಮ್ಮ ಹೊಟ್ಟೆ ಹೊರೆದಿದ್ದಾರೆ. ಹತ್ತಿಪ್ಪತ್ತು ತಲೆಮಾರು ಕುಳಿತು ಉಣ್ಣುವಷ್ಟು ಆಸ್ತಿ ಮಾಡಿದವರೊಂದಿಗೆ ಕೆಲವು ಪುರಾವೆಯಿಲ್ಲದ ಊಹಾಪೋಹ ಮಾತುಗಳೂ ಅಂಟಿಕೊಂಡಿರುತ್ತವೆ ಎಂಬುದು ವಿಧಿಲಿಖಿತವೇನೋ? ಹಾಗೆಯೇ, ಈತನ ಬಳಿ ಇರುವ ಸಾವಿರಾರು ಎಕರೆ ಅಡಿಕೆ, ತೆಂಗಿನ ತೋಟಗಳೆಲ್ಲಾ ಇವನ ತಾತ ಬಡಬಗ್ಗರಿಂದ ಕಿತ್ತುಕೊಂಡಿದ್ದು ಎಂಬ ಅಪವಾದವೂ ಇದೆ. ಮಂಗಳೂರಿನ ದಕ್ಷಿಣದಂಚಿನಲ್ಲಿರುವ ಹತ್ತಾರು ಎಕರೆಯ ಅವನ ಮನೆ ಮೈದಾನವೆಲ್ಲಾ ಒಬ್ಬ ಬಡವನಿಗೆ ಸೇರಬೇಕು ಎಂಬ ವ್ಯಾಜ್ಯ ಇನ್ನೂ ಕೋರ್ಟಿನಲ್ಲಿ ರೆಕ್ಕೆ ಮುರಿದು ಬಿದ್ದಿದೆ. ದಾವೆ ಹೂಡಿದವರಿಗೆ ತಮ್ಮ ರಾಜಕೀಯ ಶಕ್ತಿ ಬಳಸಿಕೊಂಡು ಒಂದಷ್ಟು ಹಿಂಸೆಯೂ ಕೊಟ್ಟಾಗಿದೆ. ವೆಂಕಟೇಶಭಟ್ಟರ ಇಬ್ಬರು ಮಕ್ಕಳಲ್ಲಿ ಮೊದಲನೆಯವ ದಾಮೋಧರ. ಹೆಚ್ಚು ಓದಿಕೊಳ್ಳದಿರುವ ಕಾರಣ ಅಪ್ಪನ ಆಸ್ತಿ ಮತ್ತು ಉದ್ಯಮಗಳ ಹಣ ನಿರ್ವಹಣೆ ಮಾಡುವ ದೊಡ್ಡ ಹೊಣೆಗಾರಿಕೆ ಅವನ ಮೇಲಿದೆ. ಮಾಂಸ ಕಂಡರೆ ಒಮ್ಮೆಲೆ ಎಗರುವ ನಾಯಿಗಳಂತೆ ಇವನ ಸುತ್ತ ಸದಾ ಗೆಳೆಯರ ದಂಡೇ ಇರುತ್ತದೆ. ಅವನು ಹಲ್ಲುಕಿಸಿದು ಒದರುವ ನಗು ತರಿಸದ ಜಾಳು ಜಾಳು ಮಾತಿಗೂ ಎಲ್ಲರೂ ಕಿಸಕ್ಕನೇ ಜೋರಾಗಿ ನಕ್ಕುಬಿಡುತ್ತಾರೆ. ಎರಡನೆಯ ಮಗ ಲಂಬೋಧರ ಅಮೇರಿಕಾದಲ್ಲಿ ಓದಿ ಬಂದವನು, ಪ್ರತಿಷ್ಠಿತ ಕಂಪನಿಯೊಂದರಲ್ಲಿ ಲಕ್ಷಾಂತರ ರೂಪಾಯಿ ಸಂಬಳಕ್ಕೆ ನಿಂತಿರುವವನು. ಅವನು ದುಡಿದ ದುಡ್ಡಿನಲ್ಲಿ ಒಂದು ರೂಪಾಯಿಯೂ ಮನೆಗೆ ತಲುಪಿಲ್ಲ, ಬೇಕಾಗಿಯೂ ಇಲ್ಲ. ತನ್ನ ಸಂಬಳದಲ್ಲಿ ಬಟ್ಟೆ ಬದಲಿಸಿದಂತೆ ತಿಂಗಳಿಗೊಂದು ದುಬಾರಿ ಬೈಕ್ ಗಳನ್ನು ಕೊಂಡುಕೊಳ್ಳುತ್ತಾನೆ. ಹೊಸ ಮಾದರಿ ಕಾರ್ ಗಳು ಮಾರ್ಕೆಟ್ ಒಳಗಡೆ ಬಂದರೆ ಮೊದಲು ಕೊಂಡುಕೊಳ್ಳಲು ಹವಣಿಸುವ ಹುಡುಗ. ಇಷ್ಟೆಲ್ಲಾ ಶೋಕಿ ಇರುವವನಿಗೆ ವೇಶ್ಯೆಯರ ಹುಚ್ಚಿರುವುದಿಲ್ಲವೇ? ವಾರಕ್ಕೊಬ್ಬಳು ಅವನ ಮಗ್ಗುಲಲ್ಲಿರಬೇಕೆಂಬುದು ಅವನ ಗೆಳೆಯರ ಗುಸು ಗುಸು ಅಂಬೋಣ. ಇಂದಿನ ಜನಗಳಿಗೆ ಹಣವಿದ್ದರೆ ಸಾಕು ಗುಣ ಮೇಲ್ಮಟ್ಟದಂತೆ ಕಾಣುತ್ತದೆ ಎಂಬುದು ಜನಜನಿತ. ಇಷ್ಟೆಲ್ಲಾ ವಿಚಾರಗಳು ಸಾರ್ವಜನಿಕವಾಗಿ ಬೂದಿಯೊಳಗಿನ ಕೆಂಡದಂತಿದ್ದರೂ ಲಂಬೋಧರನಿಗೆ ಹೆಣ್ಣು ಕೊಡಲು ಅನೇಕ ಸಂಬಂಧಿಗಳು ದುಂಬಾಲು ಬೀಳುತ್ತಿದ್ದರು. ನಾಲ್ಕಾಣೆ ಕೊಟ್ಟು ತಂದ ಚಾಕೋಲೇಟ್ ಸಂಪೂರ್ಣವಾಗಿ ನಮ್ಮ ಹಕ್ಕಿನಲ್ಲಿರುತ್ತದೆ, ಇನ್ನೂ ನಾವು ಹುಟ್ಟಿಸಿದ ಮಕ್ಕಳು ನಾವು ಗುರುತು ಮಾಡಿದ ಹುಡುಗನನ್ನು ಮರುಮಾತನಾಡದೆ ಮದುವೆ ಮಾಡಿಕೊಳ್ಳಬೇಕೆಂಬುದು ಅವರೆಲ್ಲರುವಾಚ. ಅವನು ತೀರಿಕೊಂಡರೂ, ವಿಚ್ಛೇದನ ನೀಡಿದರೂ ಕರಗದಷ್ಟು ಆಸ್ತಿ ದೊರಕುವುದೆಂಬ ಅತಿಯಾಸೆ ಕೆಲವರದು.
ಶಾಂತಮ್ಮ ಮತ್ತು ಲಕ್ಷ್ಮೀಶಭಟ್ಟರು ಎಲ್ಲವನ್ನೂ ಆಣಿಗೊಳಿಸಿದವರಂತೆ ಕಂಡು ಬಂದು ಸ್ವಲ್ಪ ಸಮಾಧಾನಗೊಂಡರು. ಮಧುಮಗಳಾಗಬೇಕಾಗಿರುವ ಕಾವ್ಯಳನ್ನೇ ಅವರು ಮರೆತುಬಿಟ್ಟಿದ್ದರು. ‘ಹಾ! ಎಂಥ ಜನ ನಾವು’ ಎಂದುಕೊಂಡು ಕಾವ್ಯಳ ಕೋಣೆಗೆ ಅವಸವಸರವಾಗಿ ಹೋದರು. ಶಾಂತಮ್ಮಳ ಎರಡನೆ ಮಗಳಾದ ಕೀರ್ತಿ ಅಕ್ಕನಿಗೆ ಶೃಂಗಾರ ಮಾಡುತ್ತಿದ್ದಳು. ಬಾಯಿಯಲ್ಲಿ ತಲೆಪಿನ್ನು ಕಚ್ಚಿಕೊಂಡು ತಲೆ ಕೂದಲನ್ನು ಬಾಚಣಿಗೆಯಿಂದ ಎಳೆದೆಳೆದು ಬಾಚುತ್ತಿದ್ದಳು. ಒಮ್ಮೆ ಕಾವ್ಯಳನ್ನು ಹಿಂತಿರುಗಿಸಿ ಮುಖ ಮೇಲಕ್ಕೆತ್ತಿದ ಶಾಂತಮ್ಮ ಒಮ್ಮೆಲೆ ದಿಗ್ಭ್ರಾಂತರಾದರು. ಹಳೆಯ ಗೋಡೆಯ ಮೇಲೆ ಸುರಿದ ಮಳೆ ನೀರು ರೈಲುಕಂಬಿ ಆಕಾರ ಮೂಡಿಸುವಂತೆ ಇವಳ ಕೆನ್ನೆಯ ಮೇಲೆಯೂ ನದಿ ಹರಿದುಹೋದ ಗುರುತಿದೆ. ಮೇಕಪ್ ಗಿಂತ ಕಣ್ಣೀರೇ ಹೆಚ್ಚಾಗಿತ್ತು! ಕಣ್ಣಲ್ಲಿ ಮತ್ತೂ ನೀರು ತುಂಬಿಕೊಂಡಿತು. ಮುಖದಲ್ಲಿ ಕಳೆಯಿಲ್ಲ. ಕಿವಿಗೆ ತೊಡಿಸಿದ್ದ ಬೆಂಡೋಲೆ ತೂಕ ಹೆಚ್ಚಾಗಿ ತೂಗಿದಂತೆ ಕಂಡುಬಂತು, ಎದೆ ಮೇಲೊದಿಸಿದ್ದ ಚಿನ್ನದ ನೆಕ್ಲೇಸು, ಸರಗಳು ಯಾಕೋ ಹೊಳೆದಂತೆ ಕಾಣಿಸಲಿಲ್ಲ. ಈಗ ಕಾವ್ಯಳಿಗೆ ವಯಸ್ಸು ಇಪ್ಪತ್ತು ವರ್ಷ, ಇಷ್ಟು ವರ್ಷ ಲಾಲಿಸಿ ಪಾಲಿಸಿದ್ದ ತಾಯಿಗೆ ಆಕೆ ಈ ರೀತಿಯಾಗಿ ಕಂಡಬಂದದ್ದು ನೆನಪಿಲ್ಲ.
‘ಯಾಕೆ ಕಂದಾ? ಏನಾಯಿತು, ಈ ಸಂಬಂಧ ಇಷ್ಟವಿಲ್ಲವೇ? ಬೇರೆ ಯಾರನ್ನಾದರೂ ಇಷ್ಟಪಟ್ಟಿರುವೆಯಾ? ಯಾವುದೋ ಜನ್ಮದಲ್ಲಿ ನಾವು ಮಾಡಿದ್ದ ಪುಣ್ಯದಿಂದ ಇಂದು ಈ ಸಂಬಂಧ ದೊರಕಿದೆ, ಅವರು ಅಷ್ಟು ಶ್ರೀಮಂತಿಕೆಯಲ್ಲಿದ್ದರೂ ಸೊಸೆಯಾಗಿ ಬಡವರ ಮನೆಯ ಹುಡುಗಿಯೇ ಬೇಕೆಂದು ಹಂಬಲಿಸಿ ಬರುವವರಿದ್ದಾರೆ, ಜೊತೆಗೆ ನಿನ್ನ ಸೌಂದರ್ಯವೂ ಅವರಿಗೆ ಇಷ್ಟವಾಗಿದೆ. ನಮ್ಮಂತಹ ಜನ ಅವರಿಗೆ ಸಾವಿರ ಸಾವಿರ ಇದ್ದಾರೆ, ನಮ್ಮ ಅದೃಷ್ಟಕ್ಕೆ ನಮಗೆ ಒಬ್ಬರಾದರೂ ಅಂತಹವರು ದೊರಕಿದ್ದಾರೆ, ನಿನ್ನ ಜೀವನದಲ್ಲಿ ಸುಖತುಂಬಿ ಬರುತ್ತದೆ. ಖುಷಿ ಪಡುವ ವಿಚಾರಕ್ಕೆ ಅಳುವುದಾದರೂ ಯಾಕೆ?’ ಎಂದು ಕೇಳಿದರು.
ಕಾವ್ಯಳಿಗೆ ಅಳು ಜೋರಾಯಿತು, ಕಣ್ಗಳು ಮಳೆ ಹನಿಗೆ ಸಿಲುಕಿದ ಮೈಬಟ್ಟೆಯಂತೆ ಮತ್ತೂ ಒದ್ದೆಯಾದವು. ಅವಳನ್ನು ಸುತ್ತಿಕೊಂಡ ಈ ವ್ಯವಸ್ಥೆಗೆ, ನಮ್ಮನ್ನು ಕಾಯುತ್ತಿರುವ ದೇವರಿಗೆ, ಅರ್ಥ ಮಾಡಿಕೊಳ್ಳದ ಈ ಹಿರಿಯರಿಗೆ, ಎಲ್ಲರಿಗೂ ತಿರಸ್ಕಾರ ಕೂಗುವಂತಹ ನೋವು ಮುಖದಲ್ಲಿತ್ತು. ಜೊತೆಗೆ ನೀರವತೆ ತುಂಬಿದ ಅಳುವಿತ್ತು. ಸ್ಥಿರ ದೃಷ್ಟಿಯಿದ್ದರೂ ಮನಸ್ಸನ್ನು ಎಲ್ಲೋ ತೇಲಿಸಿ ‘ಏನೂ ಇಲ್ಲವೆಂಬಂತೆ’ ತಲೆಯಾಡಿಸಿದಳು. ಅವಳ ಮೌನ ಶಾಂತಮ್ಮಳನ್ನು ಕೊಂಚ ಅಲುಗಾಡಿಸಿತು.
ಕಾವ್ಯ, ನಿಜಕ್ಕೂ ಸುಂದರ ಕವಿತೆಯಷ್ಟೇ ಮೃದು ಸ್ವಭಾವದ ಹೆಣ್ಣುಮಗಳು. ಕೈತೊಳೆದು ಮಟ್ಟಬೇಕಾದಂತಹ ಸೌಂದರ್ಯವತಿ. ಅವಳಿಗೆ ಬುದ್ಧಿ ಚಿಗುರೊಡೆದಾಗಿಂದಲೂ ಮಾತಿಗಿಂತ ಹೆಚ್ಚು ಮೌನವನ್ನು ಪ್ರೀತಿಸಿದಾಕೆ. ತಲೆಯೆತ್ತಿ ಮಾತನಾಡದಷ್ಟು ಸಂಕೋಚ ಸ್ವಭಾವದಳು, ಹುಡುಗ ಜಾತಿಯೆಂದರೆ ಕೊಂಚ ಭಯ ಪಡತ್ತಿದ್ದವಳಾದರೂ ಯಾರಾದರೂ ಹುಡುಗರು ಗೌರವಪೂರ್ವಕವಾಗಿ ಮಾತನಾಡಿಸಿದರೆ ಮನಸ್ಸಿಟ್ಟು ಉತ್ತರ ಕೊಡುತ್ತಿದ್ದವಳು. ಪ್ರಶ್ನೆಗೆ ಕೇವಲ ಉತ್ತರವಷ್ಟೆ. ಹಲ ಸಮಯದಲ್ಲಿ ಅದು ‘ಹೂ, ಊಹೂಂ’ ನಲ್ಲಿ ಮುಗಿದುಹೋಗುತ್ತಿತ್ತು. ಅಹಂಕಾರ ಸ್ವಭಾವವಿಲ್ಲದ ಈ ಮೃದು ಮನಸ್ಸನ್ನು ಎಲ್ಲಾ ಗೆಳೆಯರೂ ಗೌರವಾಧಾರದಲ್ಲಿ ಇಷ್ಟಪಟ್ಟರೂ ಈಕೆಗೆ ಸ್ನೇಹವೆಂದರೂ ಒಂದು ರೀತಿಯ ಅಲರ್ಜಿ. ಆದರೆ ಶಾಲಾ ಕಾಲೇಜು ಪರೀಕ್ಷೆಗಳಲ್ಲಿ ಇವಳೇ ಪ್ರಥಮ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರತಿ ವರ್ಷ ಬಾಚಿಕೊಂಡ ಅನೇಕ ಬಹುಮಾನಗಳನ್ನು ಶಾಂತಮ್ಮ ಷೋಕೇಸಿನಲ್ಲಿ ಸ್ವಲ್ಪ ಅಹಮ್ಮಿಂದಲೇ ಜೋಡಿಸಿಟ್ಟಿದ್ದಾರೆ. ಮೈನೆರೆದು ದೊಡ್ಡವಳಾದ ಕಾಲದಿಂದಲೂ ಆಕೆ ಶಾಲಾ, ಕಾಲೇಜು ಮುಗಿಸಿ ಮನೆಯವರೆವಿಗೂ ತಲೆ ಬಗ್ಗಿಸಿ ನಡೆದುಕೊಂಡೇ ಬಂದವಳು. ಇದೇ ಸ್ವಭಾವದ ತಂಗಿ ಕೀರ್ತಿ ಮತ್ತು ಕಾವ್ಯಳಿಗೆ ಆ ಊರಿನ ಬಡಾವಣೆಯಲ್ಲಿ ವಿಶೇಷ ಗೌರವ ಮಮತೆಯಿತ್ತು. ನನ್ನ ಮಕ್ಕಳು ಅಪರಂಜಿ ಕಣ್ರೋ ಎಂದು ಸಾರುವುದು ಕುಡುಕ ಅಪ್ಪನ ಪ್ರತಿದಿನದ ಹವ್ಯಾಸ.
ಮೊನ್ನೆ ಮೊನ್ನೆ ‘ಒಂದು ಸಂಬಂಧ ನಿನ್ನನು ನೋಡಲು ಮುಂದಿನ ವಾರ ಬರುತ್ತಿದೆ ಮಗಳೇ’ ಎಂದು ಶಾಂತಮ್ಮ ಹೇಳಿದಾಗ ಕಾವ್ಯ ಬೆಚ್ಚಿ ಕುಸಿದಿದ್ದಳು. ತನ್ನ ಸ್ವಭಾವಕ್ಕೆ ಹೋಲುವ ಗಂಗಾಧರ ಎಂಬುವ ಹುಡುಗನ ಪ್ರೇಮಪಾಶಕ್ಕೆ ಕಾವ್ಯ ಒಗ್ಗಿಕೊಂಡಿದ್ದಳು. ಇಷ್ಟು ಒಳ್ಳೆಯತನದ, ಮಾತನ್ನು ಇಷ್ಟ ಪಡದ ಹುಡುಗಿಯೊಬ್ಬಳು ಒಂದು ಹುಡುಗನನ್ನು ಆರಿಸಿಕೊಂಡಿದ್ದಾಳೆಂದರೆ ಅಲ್ಲಿ ಅಷ್ಟಾಗಿ ಮೋಸವಿರುವುದಿಲ್ಲ. ಆತನ ರೂಪಕ್ಕಿಂತ ಸನ್ಮಾರ್ಗವೇ ಈಕೆಗೆ ಇಷ್ಟವಾಗಿತ್ತು. ಕುಡುಕ ಅಪ್ಪ ಪ್ರತಿದಿನ ಅಮ್ಮನನ್ನು ಬಡಿದು, ಪಡಸಾಲೆಯಲ್ಲಿ ಕುಳಿತು ಊರಿಗೇ ಕೇಳಿಸುವಂತೆ ಅಶ್ಲೀಲ ಪದಗಳನ್ನುಪಯೋಗಿಸಿ ಬೊಗಳುವುದು, ಮನೆಯೊಳಗೆ ಬಾರದೆ ಸತಾಯಿಸುವುದನ್ನೆಲ್ಲ ಕಂಡಿದ್ದ ಕಾವ್ಯಳಿಗೆ ಯಾವುದೇ ದುಶ್ಚಟವಿಲ್ಲದ, ದುಶ್ಚಟವನ್ನು ತೀವ್ರವಾಗಿ ವೀರೋಧಿಸುತ್ತಿದ್ದ ಗಂಗಾಧರ ಹತ್ತಿರವಾಗಿಬಿಟ್ಟ. ಸಂಜೆಯಾದರೆ ಮತ್ತಿನಲ್ಲಿ ಮೈಮರೆಯುವ ಅಪ್ಪನ ಭಯ ಆಕೆಗೆ ಚೂರು ಇರಲಿಲ್ಲ. ತಿನ್ನಲು ಉಡಲು ಮನೆಗೆ ತಂದು ಸುರಿದುಬಿಟ್ಟರೆ ಆತನ ಕೆಲಸ ಮುಗಿಯಿತಷ್ಟೇ, ಮತ್ತಾವುದೇ ವಿಚಾರಕ್ಕೂ ತಲೆ ಕೆಡಿಸಿಕೊಂಡವನಲ್ಲ. ಅಮ್ಮನನ್ನು ಒಪ್ಪಿಸಿಕೊಂಡರೆ ಮುಗಿಯಿತು ಎಂದುಕೊಂಡಿದ್ದಳಷ್ಟೆ. ಜೊತೆಗೆ ಹುಟ್ಟಿದ ಕಾಲದಿಂದಲೂ ಕೇವಲ ಮಕ್ಕಳ ಸುಖವನ್ನು ಬಯಸಿದ ಅಮ್ಮ ತನ್ನ ಮುಂದಿನ ಸುಖಕ್ಕೆ ಅಡ್ಡಿಯಾಗಳೆಂಬ ಗಾಢನಂಬಿಕೆ ಕಾವ್ಯಳಲ್ಲಿತ್ತು. ಅಂದು ಸಂಜೆ, ಧೈರ್ಯಮಾಡಿ ಅಮ್ಮನ ಬಳಿಗೆ ಹೋಗುವ ನಿರ್ಧಾರ ಕೈಗೊಂಡಳು. ಎಲ್ಲವನ್ನೂ ಹೇಳಿ ಒಮ್ಮೆ ಅತ್ತುಬಿಟ್ಟರೆ ಅಮ್ಮ ನಿರರ್ಗಳಳಾಗುತ್ತಾಳೆಂಬ ದೃಢ ನಂಬಿಕೆ ಕಾವ್ಯಳದು. ಶಾಂತಮ್ಮ ತಮ್ಮ ಮಕ್ಕಳಿಗೆ ಅಷ್ಟೇ ಸ್ವಾತಂತ್ರ್ಯ ನೀಡಿ ತುಂಬಾ ಆತ್ಮೀಯತೆಯಿಂದ ಬೆಳೆಸಿದ್ದರು. ಎಂದಿಗೂ ಕೈಯೆತ್ತಿ ಒಡೆದವರಲ್ಲ, ಬಾಯಿ ತಪ್ಪಿಯೂ ಬೈದವರಲ್ಲ. ಯಾಕೋ ಕೈಕಾಲುಗಳು ಅದುರತೊಡಗಿದವು. ‘ಆಗುವುದಾಗಲಿ, ಧೈರ್ಯವಾಗಿ ಹೇಳಿಬಿಡು’ ಎಂಬ ಗಂಗಾಧರ್ ನ ಮಾತು ನೆನೆಪಿಸಿಕೊಂಡು, ಒಮ್ಮೆ ಉಸಿರನ್ನೆಳೆದು ನಿಧಾನವಾಗಿ ಹೊರ ಹರಿಸಿ ಅಮ್ಮನ ಬಳಿ ಹೊರಟಳು.
‘ಅಮ್ಮಾ, ನಾನು ನಿನ್ನಲ್ಲಿ ಒಂದು ಪ್ರಶ್ನೆ ಕೇಳುತ್ತೇನೆ, ಉತ್ತರಿಸುವೆಯಲ್ಲವೇ?’
‘ಕೇಳು ಮಗಳೇ’
‘ನಿನ್ನ ಮಕ್ಕಳ ಖುಷಿಯಷ್ಟೇ ನಿನಗೆ ಮುಖ್ಯವಲ್ಲವೇ? ಮದುವೆಯ ನಂತರ ಮಕ್ಕಳು ಗಂಡನೊಂದಿಗೆ ಅಮೃತವನ್ನೋ ಅಂಬಲಿಯನ್ನೋ ಕುಡಿದು ಖುಷಿಯಾಗಿರುವುದನ್ನ ನೀನು ಇಷ್ಟ ಪಡುತ್ತೀಯಲ್ಲವೇ?
‘ಹೌದು ಮಗಳೆ, ಮತ್ತಿನ್ನೇನು? ನನ್ನೆರಡು ಮಕ್ಕಳೇ ನನ್ನ ಕಣ್ಣುಗಳು’
‘ಹಾಗಾದರೆ, ನಾನು ಒಬ್ಬ ಅನ್ಯಜಾತಿ ಹುಡುಗನನ್ನು ಪ್ರೀತಿಸುತ್ತಿದ್ದೇನೆ, ಅವನನ್ನು ಬಿಟ್ಟು ಬದುಕಲು ಸಾಧ್ಯವಾಗುತ್ತಿಲ್ಲ, ಅವನ ಜಾಗದಲ್ಲಿ ಬೇರೆ ಯಾರನ್ನೂ ಊಹಿಸಿಕೊಳ್ಳುವ ಪರಿಸ್ಥಿತಿಯಲ್ಲಿ ನಾನಿಲ್ಲ, ನೀನು ಒಪ್ಪಿಕೊಳ್ಳಬೇಕು’
ಶಾಂತಮ್ಮ ಬೆಚ್ಚಿಬಿದ್ದರು, ಹೂ ಪೋಣಿಸುತ್ತಿದ್ದ ನೂಲುಂಡೆಯನ್ನು ಎಸೆದುಬಿಟ್ಟರು.
‘ಏನಿದು ಮಗಳೇ, ಈ ವಿಚಾರ ನಿಮ್ಮ ಅಪ್ಪನ ಕಡೆಯವರಿಗೆ ತಿಳಿದರೆ ಸುಮ್ಮನಿರುವರೇ? ಅವಳು ಓದಿದ್ದು ಸಾಕು ಮನೆಯಲ್ಲಿರಿಸಿ ಎಂದು ಹೇಳುವುದಲ್ಲದೇ, ಜೈಲಿಗೆ ಹೋಗುವುದನ್ನೂ ಲೆಕ್ಕಿಸದೆ, ಆ ಹುಡುಗನ ಜೀವ ತೆಗೆಯುವುದಲ್ಲದೇ, ನಿನಗೆ ಇನ್ನೊಂದು ವಾರದಲ್ಲಿಯೇ ಮದುವೆ ಮಾಡಿಯಾರು’
‘ನೀವು ಯಾರಿಗೇ ಮದುವೆ ಮಾಡಿದರೂ ನನ್ನ ಹೆಣ ಬೀಳುತ್ತದೆ, ಆತ ಕೀಳುಜಾತಿಯೇನಲ್ಲ, ನಮ್ಮ ಜಾತಿಮಟ್ಟಕ್ಕಿರುವವನು, ಹೆಂಡತಿ ಮಕ್ಕಳನ್ನು ಹಸಿವಿಗೆ ಬೀಳಿಸದಷ್ಟು ದುಡಿಯುತ್ತಾನೆ, ಅಪ್ಪನನ್ನು ಅವನೇ ಒಪ್ಪಿಸುತ್ತೇನೆ ಎಂದು ಮಾತು ಕೊಟ್ಟಿದ್ದಾನೆ, ನೀನು ಸುಮ್ಮನಿರು’
ಶಾಂತಮ್ಮ ಬೆವರತೊಡಗಿದರು. ‘ಪ್ರೀತಿಸಿ ಮದುವೆಯಾದವರು ಹೆಚ್ಚು ದಿನ ಒಟ್ಟಿಗೆ ಬಾಳುವುದಿಲ್ಲ, ಅವರ ಮಕ್ಕಳಿಗೆ ಸಂಬಂಧ ಗೊತ್ತು ಮಾಡಿಕೊಳ್ಳುವುದಷ್ಟು ಸುಲಭವಲ್ಲ, ಯಾವುದೇ ಕಾರ್ಯಕ್ರಮ ಪುನಸ್ಕಾರಗಳಿದ್ದರೆ ಸಂಪ್ರದಾಯದ ವಿಚಾರ ಬಂದಾಗ ಅಂತವರನ್ನು ಒಟ್ಟಿಗೆ ಸೇರಿಸುವುದಿಲ್ಲ, ನಾವೇ ನೋಡುವ ಸಂಬಂಧಿಕ ಹುಡುಗರು ಸುಸಂಸ್ಕೃತರು ಮತ್ತು ಒಂದೇ ಜಾತಿಯವನಾಗಿರುವುದರಿಂದ ಪೂರ್ವಾಪರ ತಿಳಿದಿರುತ್ತದೆ’ ಎಂದರು.
‘ಲವ್ ಮ್ಯಾರೇಜನ್ನ ವಿರೋಧಿಸುವ ಕಾಲ ಮುಗಿಯಿತಮ್ಮ, ಯಾರೇ ಪ್ರೀತಿ ಮಾಡಲಿ, ಎಲ್ಲರ ರಕ್ತದ ಬಣ್ಣ ಕೆಂಪಲ್ಲವೇ? ಒಂದೊಂದು ಜಾತಿ ಜನಕ್ಕೊಂದೊಂದು ಬಣ್ಣದ ರಕ್ತವಿದೆಯೇ? ಆತನನ್ನು ಬಿಟ್ಟು ಬೇರೆಯವರ ಜೊತೆ ಬಾಳಿದರೆ ದೆವ್ವದ ಮನೆಯಲ್ಲಿ ಬಾಳಿದಂತೆ, ನಾನು ಬದುಕುವುದಿಲ್ಲವಷ್ಟೆ’
ಶಾಂತಮ್ಮನ ಕೈಕಾಲುಗಳು ನಡುಗತೊಡಗಿದವು. ‘ಬೇಡ ಮಗಳೇ, ನಿನ್ನ ವಯಸ್ಸಿನವರಿಗೆ ಅದರ ಅರಿವಾಗುವುದಿಲ್ಲ, ಆತನನ್ನು ಕೂಡಲೇ ಮರೆತುಬಿಡು, ನನ್ನ ಮುಂದೆಯೇ ಫೋನಾಯಿಸಿ ಯಾರನ್ನಾದರೂ ಮದುವೆಯಾಗಿ ಸುಖವಾಗಿರು ಎಂದು ಹೇಳಿಬಿಡು, ನಾನು, ನಿನ್ನಪ್ಪ ಬೀದಿಯಲ್ಲಿ ತಲೆಯೆತ್ತಿ ನಡೆಯಲಾಗುವುದೇ? ಮದುವೆ ಸಮಾರಂಭಗಳಿಗೆ ಹೋದಾಗ ಜನಗಳ ಬಳಿ ಮುಖಕೊಟ್ಟು ಮಾತನಾಡುವುದಾದರೂ ಹೇಗೆ, ಮಗಳು ಯಾರನ್ನು ಮದುವೆಯಾದಳು ಎಂದರೆ ಹೇಳುವುದಾದರೂ ಏನು? ಬಾಯಿ ಒದರಿದಂತೆ ನಿನ್ನ ಬಗ್ಗೆ ಯಾರಾದರೂ ಮಾತನಾಡಿಕೊಂಡರೆ ನಮ್ಮಿಂದ ಬದುಕುಳಿಯಲು ಸಾಧ್ಯವಿಲ್ಲ’ ಎಂದ ಶಾಂತಮ್ಮ ನಡುಗುವ ಕೈಗಳಿಂದ ಮೊಬೈಲ್ ಹುಡುಕಿದರು.
‘ನಮ್ಮಂತೆ ಅವರೂ ಮಾಂಸ ತಿನ್ನದ ಜಾತಿ, ಆದುದರಿಂದ ನಡೆಯುತ್ತದೆ ಮಮ್ಮಿ, ನೀವುಗಳು ಹುಟ್ಟಿಸಿದ ಸಂಪ್ರದಾಯಗಳನ್ನು ನೆಲ ಬಗೆದು ಹೂತುಬಿಡಿ, ಮೊದಲಾಗಿ ಅದೇನು ಆಕಾಶದಿಂದ ಉದುರಿದ ನಿಜ ಮಳೆ ಹನಿಗಳಲ್ಲ’
‘ಮೊದಲು ನಿಮ್ಮಕ್ಕನ ನಿಶ್ಚಿತಾರ್ಥ ಮುಗಿಯಲಿ, ನಂತರ ನೋಡೋಣ’ ವೆಂದು ಆ ಕ್ಷಣದಾವೇಗದಿಂದ ತಪ್ಪಿಸಿಕೊಂಡರು ಶಾಂತಮ್ಮ. ಕೀರ್ತಿಗೆ ಮನದೊಳಗಿನ ಭಾರ ಹೊರಗೆ ಹಾಕಿ ಹಗುರಗೊಂಡಂತೆನಿಸಿದರೂ ಮುಂದೇನಾಗುವುದೋ ಏನೋ ಎಂದು ಮನಸ್ಸಿನಲ್ಲಿಯೇ ಚಡಪಡಿಸಿಕೊಂಡಳು !
ಸ್ವ-ಪ್ರೇಮ ವಿಚಾರವನ್ನು ಅಮ್ಮನಿಗೆ ಧೈರ್ಯ ಮಾಡಿ ಮುಟ್ಟಿಸಲು ಮುಂದಾಗುವ ಹೊತ್ತಿಗೆ ತಂಗಿ ಕೀರ್ತಿ ಮತ್ತು ಅಮ್ಮನ ಮಾತುಗಳನ್ನು ಕೇಳಿದ ಕಾವ್ಯ ಅಲ್ಲೇ ಕುಸಿದುಬಿಟ್ಟಳು. ಕೈಕಾಲುಗಳು ಮತ್ತೂ ನಡುಗ ತೊಡಗಿದವು. ‘ಒಂದೇ ಮಟ್ಟದ ಜಾತಿಯವನನ್ನೇ ಅಮ್ಮ ಒಪ್ಪಲಿಲ್ಲ, ಆದರೆ ನಾನು ಪ್ರೇಮಿಸಿರುವುದು ಈ ಪರಮ ನೀಚ ಸಮಾಜ ಕರೆದ ಕೀಳು ಮಟ್ಟದ ಜಾತಿಯ ಹುಡುಗನನ್ನು. ನೆರೆಮನೆಯ ಸಾವಿತ್ರಿ ಒಮ್ಮೆ ಆ ಜಾತಿಯವನೊಂದಿಗೆ ಮಾತನಾಡಿದ್ದು ಕಂಡ ಕೆಲವರು ಊರೆಲ್ಲೆಲ್ಲಾ ಮದುವೆಯೇ ಆಗಿಹೋಯಿತೆನ್ನುವಂತೆ ಗುಲ್ಲೆಬ್ಬಿಸಿದ್ದರು. ಆತನನ್ನು ಮದುವೆಯಾದರೆ ಈ ಊರೇ ನಮ್ಮ ಮೇಲೆ ಬೀಳಬಹುದು, ಅಪ್ಪ ಅಮ್ಮ ಜೀವ ಕಳೆದುಕೊಳ್ಳಬಹುದು. ಅಪ್ಪನ ಮದ್ಯಪಾನ ಮಿತಿ ಮೀರಬಹುದು. ಸಕ್ಕರೆ ಖಾಯಿಲೆ ಹೆಚ್ಚಾಗಿ ಮೂತ್ರಕೋಶಕ್ಕೆ ತೊಂದರೆಯಾಗುತ್ತಿರುವುದನ್ನು ತಡೆಗಟ್ಟಲು ನುಂಗುತ್ತಿರುವ ಮಾತ್ರೆಗಳನ್ನು ಬೀಸಾಡಿಬಿಡಬಹುದು. ಹಾಗಂತ ಗಂಗಾಧರ್ ನನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಜೊತೆಗೆ ಆತನೇನು ಸಮಾಜದ ಉನ್ನತಸ್ಥಾನದಲ್ಲಿರುವ ವ್ಯಕ್ತಿಯೂ ಅಲ್ಲ. ಸೆಲೆಬ್ರಿಟಿಗಳು ಧರ್ಮ ಜಾತಿಗಳನ್ನು ಮೀರಿದರೆ ದೊಡ್ಡ ಸುದ್ದಿಯಾಗುವುದಿಲ್ಲ, ಇಂತಹ ಸಲ್ಲದ ವಿಚಾರಗಳನ್ನು ಹುಟ್ಟುಹಾಕುವ ಪರಮನೀಚ ಜನಗಳು ಆ ಸಮಯದಲ್ಲಿ ತೆಪ್ಪಗಾಗುವುದು ಈ ದೇಶದ ಅದೃಷ್ಟವೋ ದುರಂತವೋ ತಿಳಿಯದು. ಆದರೆ, ಅಮ್ಮನಿಗೆ ಈ ವಿಚಾರ ಮುಟ್ಟಿಸಿ ನಿಶ್ಚಿತಾರ್ಥವನ್ನು ತಡೆಯುವುದಾದರೂ ಹೇಗೆ? ಗೊಂದಲಕ್ಕೆ ಬಿದ್ದಳು ಕಾವ್ಯ. ಮನಸ್ಸು ಅದುರತೊಡಗಿತು. ಅಷ್ಟಕ್ಕೆ ಅಲ್ಲಿಗೆ ಬಂದ ಅಮ್ಮನ ಮೊಗದಲ್ಲಿ ಗಾಬರಿ ಗೊಂದಲವಿತ್ತು. ಕಾವ್ಯಳ ಕಣ್ಣಲ್ಲಿ ಜಿನುಗಿದ ನೀರನ್ನು ಕಂಡು ಮತ್ತೂ ಗಾಬರಿಗೊಂಡ ಶಾಂತಮ್ಮ ‘ಏನಾಯಿತು ಕಂದ’ ಎಂದರು. ತುಟಿಬಿಚ್ಚದ ಕಾವ್ಯ ಏನೂ ಇಲ್ಲವೆಂಬಂತೆ ತಲೆಯಾಡಿಸಿದಳು. ಮುಖದಲ್ಲಿ ನಗು ಸತ್ತು ದುಃಖ ಉಮ್ಮಳಿಸಿಕೊಂಡಿತ್ತು.
ಅಪಘಾತದಂತೆ ಘಟಿಸಿದ ಈ ಘಟನೆಯಿಂದ ವಿಚಲಿತಳಾದ ಕಾವ್ಯ ಓಡೋಡಿ ಬಂದು ಹಾಸಿಗೆ ಮೇಲೆ ಬಿದ್ದುಕೊಂಡಳು. ಭಯ ಉಸಿರಾಟವನ್ನು ಬಿಗಿಗೊಳಿಸಿತ್ತು. ಕೂಡಲೇ ಗಂಗಾಧರನಿಗೆ ಫೋನಾಯಿಸಿ ಈ ಯಾವತ್ತೂ ವಿಚಾರಗಳನ್ನು ಮುಟ್ಟಿಸಿದೊಡನೆ ಆತನೂ ಬೆಚ್ಚಿಬಿದ್ದ. ತಂಗಿ ಇಷ್ಟಪಟ್ಟಿರುವ ನಿಮ್ಮ ಮಟ್ಟದ ಜಾತಿಯವನನ್ನೇ ಒಪ್ಪದವರು ನನ್ನನ್ನು ಒಪ್ಪುತ್ತಾರೆಯೇ ಎಂಬ ಗೊಂದಲ ಮುಂದಿಟ್ಟ. ನಾನೇ ಬಂದು ಮಾತನಾಡೋಣವೆಂದರೆ ನನ್ನದು ನಿಮ್ಮ ಮನೆ ಹೊಸ್ತಿಲು ದಾಟದ ಜಾತಿ, ನಿಮ್ಮವರ ಹೋಟೆಲ್ ಲೋಟಗಳನ್ನು ಮುಟ್ಟದ ಜನ ಎಂದು ಅಳಲು ಪ್ರಾರಂಭಿಸಿದವನು ‘ಏನೇ ಆಗಲಿ, ನಾಳೆಯೇ ನಿಮ್ಮ ಮನೆಗೆ ಬಂದು ನೇರವಾಗಿಯೇ ಮಾತನಾಡಿಬಿಡುತ್ತೇನೆ’ ಎಂದು ನಡುಗುತ್ತ ಹೇಳಿದ ಮಾತಿಗೆ ಕಾವ್ಯ ತಡೆಯಾದಳು. ‘ಅವಸರ ಬೇಡ, ಇಂದು ಸಂಜೆ ಅಮ್ಮನೊಡನೆ ನಾನೇ ಮಾತನಾಡುತ್ತೇನೆ’ ಎಂದು ಹೇಳಿದವಳೇ ಫೋನಿಟ್ಟಳು.
ಕಣ್ಮುಚ್ಚಿಕೊಂಡ ಕಾವ್ಯಳಿಗೆ ನಿದ್ದೆ ಕೂಡಿಬರಲಿಲ್ಲ. ತಂಗಿಯೂ ಪ್ರೇಮಪಾಶಕ್ಕೆ ಕತ್ತೊಡ್ಡಿರುವುದು, ಜೊತೆಗೆ ಅಮ್ಮ ಮತ್ತು ಅವಳ ನಡುವಿನ ಸಂಭಾಷಣೆ, ನಿನಗೆ ಬೇರೆ ಮದುವೆ ಮಾಡುವುದಲ್ಲದೇ, ಜೈಲಿನ ವಾಸ ಅನುಭವಿಸಿದರೂ ಸರಿಯೇ ಆತನನ್ನು ಕೊಲೆ ಮಾಡಿ ಬಿಡುತ್ತಾರೆ ಎಂಬ ಮಾತುಗಳು ಕಿವಿಯಲ್ಲಿ ಗುಯ್ ಗುಡುತ್ತಿತ್ತು. ‘ನೀನಿಲ್ಲದಿದ್ದರೆ ಕ್ಷಣಮಾತ್ರವೂ ನಾನು ಬದುಕಲೊಲ್ಲೆ, ತಂದೆಯನ್ನು ಕಳೆದುಕೊಂಡ ನನಗೆ ಮತ್ತು ನನ್ನ ಮುದಿತಾಯಿಗೆ ನೀನೇ ತಂದೆ ತಾಯಿ ಎಲ್ಲಾ’ ಎಂಬ ಗಂಗಾಧರನ ಮಾತು ನೆನಪಿಗೆ ಬಂದು ಉಮ್ಮಳಿಸಿ ಉಮ್ಮಳಿಸಿ ಅಳತೊಡಗಿದಳು. ಗಂಗಾಧರ್ ತುಂಬಾ ಭಾವುಕ ಜೀವಿ. ಬಡತನದಲ್ಲಿ ಬೆಳೆದವನು ಮತ್ತು ಅಷ್ಟೇ ಕಷ್ಟವನ್ನು ನುಂಗಿರುವವನು. ಆತನೊಡನೆ ಒಂದು ದಿನವಾದರೂ ಕಾವ್ಯ ಫೋನಿನಲ್ಲಿ ಮಾತನಾಡದಿದ್ದರೆ ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ಬೆಚ್ಚಿ ಬೆಚ್ಚಿ ಬೀಳುತ್ತಿದ್ದ.
ಅಷ್ಟಕ್ಕೇ ಯಾರೋ ಕೋಣೆಯ ಬಾಗಿಲು ಬಡಿದರು. ಕಣ್ಣೊರೆಸಿಕೊಂಡು ಬಾಗಿಲು ತೆರೆದಾಗ ‘ಅಮ್ಮ, ಅಜ್ಜಿ ಮತ್ತು ಚಿಕ್ಕಮ್ಮ’ ಒಟ್ಟಿಗೆ ಕೋಣೆಯ ಒಳಗಡೆ ಬಂದರು.
‘ಯಾಕಮ್ಮಾ ಮತ್ತೆ ಮಂಕಾಗಿದ್ದಿ’ ಶಾಂತಮ್ಮ ಕೇಳಿದಳು
ತುಟಿ ತೆರೆಯದ ಕಾವ್ಯ ಸಪ್ಪೆಮೋರೆಯಲ್ಲಿಯೇ ಬಿರುಗಾಳಿ ಎದ್ದುಹೋದ ನಂತರದ ತಂಗಾಳಿಯಂತೆ ಏನೂ ಇಲ್ಲವೆಂಬಂತೆ ಸುಮ್ಮನೆ ತಲೆಯಾಡಿಸಿದಳು.
‘ಹುಡುಗನ ಕಡೆಯವರು ನೋಡಲು ಬರುತ್ತಿದ್ದಾರೆ, ತದನಂತರ ಮದುವೆ, ತವರು ಮನೆ ತೊರೆಯುವುದು’ ಇವೆಲ್ಲಾ ನೆನಪಿಗೆ ಬಂದು ಕೂಸು ಅಳುತ್ತಿದೆ ಎಂದ ಅಜ್ಜಿ ಕಾವ್ಯಳನ್ನು ತೊಡೆಯಮೇಲೆ ಮಲಗಿಸಿಕೊಂಡರು. ಅಜ್ಜಿಯ ಸೀರೆ ಒದ್ದೆಯಾಗುವಂತೆ ಕಾವ್ಯ ಬಿಕ್ಕಳಿಸುತ್ತಿದ್ದಳು.
ಶಾಂತಮ್ಮ ಹೇಳಿದಳು ‘ಮಗು ಕಾವ್ಯ, ನಿನಗೊಂದು ವಿಚಾರವನ್ನು ಹೇಳಲೆಂದೇ ಬಂದಿದ್ದೇವೆ, ಯಾರಿಗೂ ತಿಳಿಯದಂತೆ ಗುಟ್ಟು ಕಾಪಾಡಿಕೋ’ ಎಂದವರೇ ಕೀರ್ತಿಯ ವಿಚಾರವನ್ನು ಹೇಳಿ ಮುಗಿಸಿದರು.
‘ಅವಳಿಗೆ ಇಷ್ಟಬಂದವನಿಗೆ ಮದುವೆ ಮಾಡಿಕೊಡುವುದಲ್ಲವೇ? ಹಿರೀಕರಾಗಿದ್ದುಕೊಂಡು ಜಾತಿ ಜಾತಿ ಎಂದು ಸಾಯುವುದಾದರೂ ಯಾಕೆ ತಾವೆಲ್ಲಾ ?’ ಮೌನವನ್ನು ತಬ್ಬಿಕೊಂಡಿದ್ದ ಕಾವ್ಯ ಕೊನೆಗೂ ತುಟಿಬಿಚ್ಚಿದಳು.
‘ಶ್.. ಕೂಗಿಕೊಳ್ಳಬೇಡ, ನೆರೆಯವರಿಗೆ ಕೇಳಿಸಿ ಗುಲ್ಲೆದ್ದೀತು’ ಎಂದಳು ಅಜ್ಜಿ.
ಶಾಂತಮ್ಮ ಮಾತು ಮುಂದುವರೆಸುತ್ತ ‘ಕಾವ್ಯ, ಅರ್ಥ ಮಾಡಿಕೋ ಮಗಳೆ. ಇದು ನಮ್ಮ ಮನೆತನದ ಪ್ರಶ್ನೆ. ನಿನ್ನ ತಂಗಿಯ ವಿಚಾರ ಅಪ್ಪ, ದೊಡ್ಡಪ್ಪ ಮತ್ತು ಚಿಕ್ಕಪ್ಪನಿಗೆ ತಿಳಿದರೆ ಅವಳನ್ನು ಮತ್ತು ಆ ಹುಡುಗನನ್ನು ಉಳಿಸುವುದು ಉಂಟೇ? ಅವಳ ಓದನ್ನು ಮೊಟಕುಗೊಳಿಸುವುದಲ್ಲದೇ ಕೂಡಲೇ ಸಂಬಂಧಿಕನಿಗೆ ಕೊಟ್ಟು ಮದುವೆ ಮಾಡಿಯಾರು. ಒಂದು ವೇಳೆ ಅವರಿಬ್ಬರೂ ಓಡಿ ಹೋಗಿ ಯಾವುದಾದರು ದೇವಸ್ಥಾನದಲ್ಲಿ ಬೇವರ್ಶಿಗಳಂತೆ ಮದುವೆಯಾದರೆ ನಮ್ಮ ಮರ್ಯಾದೆ ಮೂರಾಣೆಗೂ ನಿಲ್ಲುವುದಿಲ್ಲ. ಮೊನ್ನೆಯಷ್ಟೇ ನಾನು, ನಿನ್ನಪ್ಪ ಬೆಂಗಳೂರಿಗೆ ಹೋಗಿ ಶಾಂತಕ್ಕನ ಮಗಳಿಗೆ ಉಗಿದು ಸಮಾಧಾನ ಮಾಡಿ ಬಂದಿದ್ದೇವೆ. ಅವಳು ಕೂಡ ಒಂದು ಹುಡುಗನ ಜೊತೆ ಓಡಿಹೋಗಲು ತಯಾರಿದ್ದವಳು. ಈಗ ನಮ್ಮ ಕೂಸೇ ಈ ರೀತಿಯಾದರೆ ಅವರಿಗೆಲ್ಲಾ ಏನು ಸಬೂಬು ನೀಡುವುದು ಹೇಳು. ನಮ್ಮ ಸಂಬಂಧಿಕರ ಇಂಥಹ ಎಷ್ಟೋ ವಿಚಾರಗಳಿಗೆ ನ್ಯಾಯವಾದಿಗಳಂತೆ ಹೋಗಿ ಪರಿಹರಿಸಿಬಂದಿದ್ದೇವೆ. ನಮ್ಮ ಸಂಬಂಧಿಕ ವರ್ಗದಲ್ಲಿ ಸಾಚಾತನ ಬಂದಾಗ ನಿಮ್ಮಿಬ್ಬರನ್ನೂ ಎಲ್ಲರೂ ಉದಾಹರಿಸುತ್ತಾರೆ. ಜೊತೆಗೆ, ನಿನಗೇ ಗೊತ್ತಿರುವಂತೆ ನಮ್ಮನ್ನು ಕಂಡರೆ ಕರುಬುವವರು ಅನೇಕ ಮಂದಿಯಿದ್ದಾರೆ. ಅವರ ಕೊಂಕುನುಡಿಗಳನ್ನು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ. ನೇಣು ಬಿಗಿದುಕೊಂಡು ಪ್ರಾಣಬಿಡುತ್ತೇನೆ ಅಷ್ಟೆ. ಇದನ್ನೆಲ್ಲಾ ನೋಡಿಕೊಂಡು ನಿನ್ನ ಕುಡುಕ ರೋಗಗ್ರಸ್ಥ ಅಪ್ಪ ಸುಮ್ಮನಿರುವರೇ?’ ಎಂಬ ಮಾತುಗಳಿಗೆ ಕಾವ್ಯಳ ಕೈಕಾಲುಗಳು ಅಲುಗಾಡತೊಡಗಿದವು. ತಲೆ ಸಿಡಿದಂತಾಯಿತು.
‘ಸದ್ಯ, ನಮ್ಮ ಕಾವ್ಯಳ ವಿಚಾರದಲ್ಲಿ ಈ ರೀತಿಯ ತೊಂದರೆಯಾಗಲಿಲ್ಲ, ರಂಗಣ್ಣನ ದೊಡ್ಡ ಮಗಳು ಯಾವನೋ ಕೀಳುಜಾತಿಯವನೊಡನೆ ಓಡಿಹೋಗಿ ನಾಲ್ಕು ವರ್ಷವಾದರೂ, ಎರಡನೆ ಮಗಳನ್ನು ಮದುವೆ ಮಾಡಿಕೊಳ್ಳಲು ಯಾರೂ ಹತ್ತಿರ ಸುಳಿಯುತ್ತಿಲ್ಲ’ ಎಂದ ಚಿಕ್ಕಮ್ಮನ ಮಾತು ಕೇಳಿ ಕಾವ್ಯಳ ಮನಸ್ಸು ವಿಪ್ಲವಗೊಂಡು ಭಾರವಾಯಿತು. ಆಕೆ ಏನೂ ಮಾತನಾಡಲಿಲ್ಲ. ಮನೆಯಲ್ಲಿ ಹುರುಳಿ ಹುರಿದಂತೆ ಮಾತನಾಡುತ್ತಿದ್ದ, ಹಠ ಮಾಡುತ್ತಿದ್ದ ಕಾವ್ಯ ಮತ್ತೂ ಮೌನವಾದಳು.
‘ಕೀರ್ತಿ ಇನ್ನೂ ಚಿಕ್ಕವಳು, ಅಕ್ಕನೆಂದರೆ ಪ್ರೀತಿ. ಅವಳ ಹಠ ಸ್ವಭಾವವನು ಕಡಿಮೆ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. ಅವಳನ್ನು ನಿನ್ನೊಡನೆ ಕೂರಿಸಿಕೊಂಡು ಸಾವಧಾನವಾಗಿ ಎಲ್ಲಾ ಪರಿಣಾಮಗಳನ್ನು ವಿವರಿಸು, ಬುದ್ಧಿಮಾತು ಹೇಳು, ನಿನ್ನ ನಿಶ್ಚಿತಾರ್ಥ ಮದುವೆ ಮುಗಿದ ನಂತರ ಅವಳ ಮದುವೆಯ ಬಗ್ಗೆ ಆಲೋಚಿಸುವುದಾದರೂ, ಅವಳ ಮಾತಿನ ವರಸೆ ಗಮನಿಸಿದರೆ ಯಾಕೋ ನಮ್ಮೊಡನೆ ನಿಲ್ಲುವವಳಲ್ಲವೆಂದೆನಿಸುತ್ತದೆ. ಒಂದೇ ಜಾತಿಯಾಗಿದ್ದರೆ ಸೋಲಬಹುದಿತ್ತು. ಅನ್ಯಜಾತಿಯವರಿಗೆ ಹುಡುಗಿಕೊಟ್ಟು ತಲೆಯೆತ್ತಿ ಬಾಳಲು ಸಾಧ್ಯವೇ?’ ಎಂದ ಶಾಂತಮ್ಮ, ಅಜ್ಜಿ ಮತ್ತು ಚಿಕ್ಕಮ್ಮ ಮನೆಯ ಹೊರಗಿನ ಪಡಸಾಲೆಗೆ ಬಂದರು. ಕಾವ್ಯಳ ಕೈ ಹಿಡಿದು ಎಳೆದರೂ ಆಕೆ ಜೊತೆ ಹೋಗಲಿಲ್ಲ.
ಬಿಳಿ ಹಾಲಿನಂತಿದ್ದ ಕಾವ್ಯಳ ಮನಸ್ಸು ಒಡೆದ ಹಾಲಾಯಿತು. ತನ್ನನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಂಗಾಧರ್ ಕಣ್ಣಮುಂದೆ ಪ್ರತ್ಯಕ್ಷನಾದ. ಮೈಕೈ ಮುಟ್ಟಿನೋಡಿಕೊಂಡಳು. ‘ನಾವಿಬ್ಬರು ಗಂಡ ಹೆಂಡತಿಯರಾಗುವವರಲ್ಲವೇ?’ ಎಂಬ ಸಬೂಬಿನೊಂದಿಗೆ ಒಬ್ಬರಿಗೊಬ್ಬರು ತಬ್ಬಿಕೊಂಡು ಮೈನುಲಿದುಕೊಂಡಿದ್ದು ನೆನಪಿಸಿಕೊಂಡಳು. ಅಂದು ತೇವವಾಗಿದ್ದ ತುಟಿ ಇಂದೇಕೋ ಒಣಗಿಹೋಯಿತು. ಊಟ ಮಾಡು ಬಾ ಮಗಳೇ ಎಂದು ಕೂಗಿಕೊಂಡ ಅಪ್ಪ ಅಮ್ಮನಿಗೆ ನಾವಿಬ್ಬರೆಂದರೆ ಪ್ರಾಣವೆಂಬುದನ್ನೂ ನೆನಪಿಸಿಕೊಂಡಳು. ನಮ್ಮಿಬ್ಬರಲ್ಲಿ ಒಬ್ಬರನ್ನು ಕಳೆದುಕೊಂಡರೂ ಅವರು ಬದುಕುಳಿಯುವುದಿಲ್ಲವೆಂಬುದು ಅವಳಿಗೆ ಗೊತ್ತು. ಇನ್ನೊಂದೆಡೆ ಪ್ರೀತಿಯ ತಂಗಿ ಕೀರ್ತಿ ಎದುರಿಗೆ ನಿಂತಳು. ನಾನೇ ಒಬ್ಬನನ್ನು ಪ್ರೀತಿಸುತ್ತಿರುವಾಗ, ಗಾಢವಾಗಿ ಹಚ್ಚಿಕೊಂಡಿರುವಾಗ, ಮೈ ಒಪ್ಪಿಸಿಕೊಂಡಿರುವಾಗ, ಕ್ಷಣ ಮಾತ್ರವೂ ಆತನನ್ನು ಬಿಟ್ಟಿರಲಾಗದ ಸ್ಥಿತಿಯಲ್ಲಿರುವಾಗ ತಂಗಿಗೆ ಸಮಾಧಾನಿಸುವುದಾದರೂ ಹೇಗೆ? ಒಂದು ವೇಳೆ ಆಕೆ ‘ನೀನೇ ಯಾರನ್ನಾದರೂ ಪ್ರೀತಿಸಿದ್ದರೆ ಏನು ಮಾಡುತ್ತಿದ್ದೆ’ ಎಂಬ ಪ್ರಶ್ನೆ ಎಸೆದರೆ ಹೇಗೆ ಉತ್ತರಿಸಲಿ ?’ ಎಂದು ಯೋಚಿಸಿಕೊಂಡಳು. ಅಕ್ಕ ಅನ್ಯಜಾತಿಯವನ ಜೊತೆ ಓಡಿಹೋದರೆ ತಂಗಿಗೆ ಹುಡುಗ ದೊರಕುವುದು ಕಷ್ಟಸಾಧ್ಯವೆಂಬ ಚಿಕ್ಕಮ್ಮನ ಮಾತು ಎದೆ ಕೊರೆಯಿತು. ಈ ಸದರಿ ವಿಚಾರಗಳು ಅಪ್ಪನ ಕಡೆಯವರಿಗೆ ತಿಳಿದರೆ ಆ ಹುಡುಗನನ್ನು ಉಳಿಸುವರೇ ಎಂಬ ಅಮ್ಮನ ಮಾತಿನಿಂದ ಮತ್ತೂ ನಡುಗಿದಳು. ಅಕ್ಕ ಮಾಡಿದ ತಪ್ಪಲ್ಲದ ತಪ್ಪಿಗೆ ತಂಗಿಗೆ ಶಿಕ್ಷೆ ಕೊಡುವ ಈ ಸಮಾಜಕ್ಕೆ ನನ್ನ ಚಪ್ಪಲಿಸೇವೆಯಿರಲಿ ಎಂದು ಶಪಿಸಿಕೊಂಡಳು. ಒಂದು ವೇಳೆ ನಾನು ಹೇಳದೆ ಕೇಳದೆ ಗಂಗಾಧರ್ ಜೊತೆ ಓಡಿಹೋದರೆ ಎಂದು ಯೋಚಿಸುವಷರಲ್ಲಿಯೇ, ಹಂಗಿಸುವ ಊರ ಜನರು ಕಣ್ಣ ಮುಂದೆ ಭೂತಗಳಂತೆ ಬಂದು ನಿಂತರು, ಅವರ ವ್ಯಂಗ್ಯಕ್ಕೆ ಅಪ್ಪ ಅಮ್ಮ ಸೋತುಬಿದ್ದವರಂತೆ ಕಂಡುಬಂದರು. ಈ ರೀತಿಯ ಅನೇಕ ಘಟನೆಗಳನ್ನು ಕಣ್ಣಾರೆ ಕಂಡಿದ್ದಳು ಕೂಡ. ಅಪ್ಪ ಅಮ್ಮನ ಹೆಣಗಳು ಮುಂದೆ ತೇಲಿಬಂದವು. ಪ್ರಪಂಚದಲ್ಲಿರುವ ಕೋಟಿ ಕೋಟಿ ಜನಗಳಿಗೆಲ್ಲರಿಗೂ ಹೃದಯ ಇದ್ದಲ್ಲೇ ಇದೆ, ಎಲ್ಲರ ರಕ್ತದ ವರ್ಣ ಕೆಂಪು, ಎಲ್ಲರಿಗೂ ಅಳುವ, ನಗುವ, ಯೋಚಿಸುವ ಶಕ್ತಿಯಿದೆ. ದೇಹರಚನೆಯಲ್ಲಿ ಸಾಮ್ಯತೆಯಿದೆ ಆದರೆ ಬುದ್ಧಿಯಲ್ಲಿಲ್ಲ, ಯಾರೋ ಎಂದೋ ನೆಟ್ಟಿದ್ದ ವಿಷಬೀಜವಿಂದು ಹೆಮ್ಮರವಾಗಿ ನೆರಳ ನೀಡದೆ ಮೈಚುಚ್ಚಿತ್ತಿರುವ ಈ ಭೂಮಿಯಲ್ಲಿ ಹುಟ್ಟಿದ್ದು ನಮ್ಮ ಪಾಪವಷ್ಟೆ ಎಂದುಕೊಂಡಳು. ಮುಂದೆ ಬಿದ್ದಿದ್ದ ಆ ದಿನದ ಪತ್ರಿಕೆಯಲ್ಲಿ ಮರ್ಯಾದಾ ಹತ್ಯಾ ಎಂಬ ಹೆಸರಿನಲ್ಲಿ ನವಜೋಡಿಗಳನ್ನು ಅವರ ಹೆತ್ತವರೇ ಕೊಂದಿದ್ದ ಸುದ್ದಿಯಿತ್ತು. ಕ್ಲಿಷ್ಟಗೊಂಡ ಮನಸ್ಸು ಆ ಪತ್ರಿಕೆಯನ್ನು ಹರಿದುಹಾಕಿತ್ತು.
ಗಂಡಿನ ಮನೆಯವರು ಅಷ್ಟರಲ್ಲಿ ಬಂದಾಗಿತ್ತು. ವೆಂಕಟೇಶಭಟ್ಟರು ಮಂತ್ರಿಯಾಗಿದ್ದ ಸಮಯದಲ್ಲಿ ಘಟಿಸಿದ್ದ ಯಾವುದೋ ಅಕ್ರಮಕ್ಕೆ ಇದ್ದಕ್ಕಿದ್ದಂತೆ ರೆಕ್ಕೆ ಮೂಡಿದ್ದರಿಂದ ಮಾಧ್ಯಮದವರು ಸುತ್ತಿಕೊಂಡರು. ತೆರೆದೆ ಕಿಟಕಿಯ ಸುಡುವ ಗಾಳಿಗೆ ಮೈಯೊಡ್ಡಿ ಎಲ್ಲರನ್ನು ಒಮ್ಮೆ ನೋಡಿದಳು. ಗುದ್ದಲಿ ಪಿಕಾಸಿ ಹಿಡಿದುಕೊಂಡು ಎಲ್ಲರೂ ತನ್ನೆಡೆಗೇ ಬರುತ್ತಿರುವಂತೆ ಭಾಸವಾಯಿತು. ಇವರನ್ನೆಲ್ಲಾ ಬಗ್ಗುಬಡಿಯಲು ಗಂಗಾಧರ್ ಬಂದಿಲ್ಲವಲ್ಲ ಎಂದು ಕೊರಗಿಕೊಂಡಳು. ಆದರೆ, ಅಸಲಿಯಾಗಿ ಈ ವಿಚಾರವನ್ನು ಗಂಗಾಧರ್ ಗೆ ಕಾವ್ಯ ಮುಟ್ಟಿಸಿಯೇ ಇರಲಿಲ್ಲ! ಹುಡುಗನ ಕಡೆಯವರು ತುಂಬಾ ಸಂಭಾವಿತರು ಮತ್ತು ಕ್ರೌರ್ಯದ ಹಿನ್ನೆಲೆಯುಳ್ಳವರು ಎಂಬುದು ತಿಳಿದುಕೊಂಡವಳಿಗೆ ಗಂಗಾಧರ್ ಅವಸರಪಟ್ಟು ಮನೆ ಮುಂದೆ ನಿಂದು ಇವರನ್ನೆಲ್ಲಾ ಎದುರಿಸಿದರೆ, ಆತನ ಜೀವಕ್ಕೆ ತೊಂದರೆಯಾದರೆ, ಮಾಧ್ಯಮಗಳಲ್ಲಿ ಈ ವಿಚಾರ ಮೂಡಿಬಂದು ಮನೆ ಗೌರವ ಮೂರುಕಾಸಿಗೆ ಹಂಚಿಹೋದರೆ, ನನ್ನಪ್ಪ ಅಮ್ಮ ಬೀದಿ ಪಾಲಾದರೆ, ತಂಗಿಯ ಗತಿಯೇನು ಎಂದು ಯೋಚಿಸಿ ಯೋಚಿಸಿ ಮೌನವಾಗಿಯೇ ಉಳಿದುಬಿಟ್ಟಳು. ಹೆಚ್ಚಾಗಿ, ಇದು ಕೇವಲ ನೋಡಿಕೊಂಡು ಹೋಗುವ ಶಾಸ್ತ್ರವಷ್ಟೇ, ತಲೆಬಾಗಿ ತಾಳಿ ಕಟ್ಟಿಸಿಕೊಳ್ಳುವ ಮದುವೆಯಲ್ಲವಲ್ಲ ಎಂದು ಸ್ವಲ್ಪ ಧೈರ್ಯದಿಂದಿದ್ದಳು.
ಜ್ಯೂಸ್ ತಟ್ಟೆ ಹಿಡಿದುಕೊಂಡ ಕಾವ್ಯ ಬಂದಿದ್ದವರ ಮುಂದೆ ನಿಂತಳು. ಅದೇ ಮೌನ ಅವಳನ್ನು ಆವರಿಸಿತ್ತು. ಬಾಗಿಸಿದ ತಲೆಯನ್ನು ಕೊಂಚವೂ ಮೇಲೆತ್ತಲಿಲ್ಲ. ಶಾಂತಮ್ಮ ತಲೆಯೆತ್ತಿ ಒಮ್ಮೆ ಹುಡುಗನನ್ನು ನೋಡು ಎಂದರು. ‘ನಿನ್ನನ್ನು ಬಿಟ್ಟು ಮತ್ತಾವ ಹುಡುಗಿಯನ್ನು ನೋಡುವುದಿಲ್ಲ, ಹತ್ತಿರ ಬಂದರೆ ಬೆಂಕಿಯಾಗಿ ಸುಟ್ಟುಬಿಡುತ್ತೇನೆ’ ಎಂದಿದ್ದ ಗಂಗಾಧರನನ್ನು ನೆನಪಿಸಿಕೊಂಡು ದಳದಳನೆ ಕಣ್ಣೀರು ಸುರಿಸಿದಳು.
‘ಹುಡುಗಿ ತನ್ನ ಮುಖ ತೋರಲಿಲ್ಲ, ಯಾಕೆ ನಾಚಿಕೆಯೋ ?’ ಯಾರೋ ಒಬ್ಬಾತ ಬಂದಿದ್ದವರ ಗುಂಪಿನಿಂದ ಕೇಳಿಕೊಂಡ ತಕ್ಷಣ ತಂಗಿ ಕೀರ್ತಿ ‘ಮುಖ ಮೇಲಕ್ಕೆ ಮಾಡೇ’ ಎಂದಳು. ಅಜ್ಜಿಯೂ ಹತ್ತಿರ ಬಂದರು. ವಿಧಿಯಿಲ್ಲದೆ ಕಾವ್ಯ ಮುಖ ಮೇಲೆ ಮಾಡಿದಳು. ಹರಿಯುತ್ತಿದ್ದ ಕಣ್ಣಧಾರೆಯನ್ನು ಗಮನಿಸಿ ಎಲ್ಲರೂ ಒಮ್ಮೆಲೆ ಅವಕ್ಕಾದರು. ಅಜ್ಜಿ ಮತ್ತದೇ ಸಬೂಬು ನೀಡಿದಳು. ಅಲ್ಲಿ ಕುಳಿತಿದ್ದವರಲ್ಲಿ ತನ್ನನ್ನು ನೋಡಲು ಬಂದ ಹುಡುಗ ಯಾರಿರಬಹುದು ಎಂಬುದರ ಬಗ್ಗೆ ಕಾವ್ಯ ಯೋಚಿಸಲಿಲ್ಲ, ಶಾಂತಮ್ಮ ಮೊನ್ನೆ ತೋರಿಸಿದ್ದ ಫೋಟೋವನ್ನು ನೋಡದ ಕಾವ್ಯ ಬದಲಾಗಿ ಹರಿದು ಬೆಂಕಿ ಹಚ್ಚಿದ್ದಳು.
ಅಂದು ಸಂಜೆ ಕೋಣೆಯಲ್ಲಿ ಮಗುವಿನಂತೆ ಅವಚಿಕೊಂಡು ಮಲಗಿದ್ದ ಮಗಳನ್ನು ಕಂಡ ಲಕ್ಷ್ಮೀಶಭಟ್ಟರು ಮತ್ತು ಜೊತೆಯಲ್ಲಿದ್ದ ಕೀರ್ತಿ ಹತ್ತಿರ ಬಂದವರೇ ತಲೆಸವರಿ ‘ಹುಡುಗ ಇಷ್ಟವಾದನೇ?’ ಎಂದು ಕೇಳಿದರು. ತೀಕ್ಷ್ಣವಾಗಿ ಅಪ್ಪನ ಮುಖ ನೋಡುತ್ತ ಕುಳಿತುಬಿಟ್ಟಳು ಕಾವ್ಯ. ಬಾಯಿಯಿಂದ ಮಾತು ಹೊರಡಲಿಲ್ಲ. ಗಟ್ಟಿಯಾಗಿ ತಬ್ಬಿಕೊಂಡು ಅತ್ತುಬಿಟ್ಟಳು. ‘ಚಿಕ್ಕಂದಿನಿಂದ ಹೂವಿನಂತೆ ಸಲಹಿದ ನನ್ನ ಮಕ್ಕಳನ್ನು ಹುಲಿಯ ಬಾಯಿಗೆ ಕೊಡುವುದಿಲ್ಲ, ಈ ಸಂಬಂಧ ನಿನ್ನ ಏಳೇಳು ಜನ್ಮದ ಪುಣ್ಯ, ಕಳೆದ ಎರಡು ವರ್ಷದಿಂದ ಸತತ ಪ್ರಯತ್ನಿಸಿ ಪ್ರಯತ್ನಿಸಿ ಗೊತ್ತು ಮಾಡಿಕೊಂಡಿದ್ದೇನೆ, ಹುಡುಗ ನಿನ್ನನ್ನು ಇಷ್ಟಪಟ್ಟಿದ್ದಾನೆ, ನಮ್ಮನ್ನು ಬಿಟ್ಟುಹೋಗುವ ಚಿಂತೆ ಮಾಡಬೇಡ ಮಗಳೆ, ನಿನ್ನ ಒಳ್ಳೆಯತನ ನಿನ್ನನ್ನು ಕಾಪಾಡುತ್ತದೆ’ ಎಂದರು.
ಆ ದಿನದ ರಾತ್ರಿಯ ಊಟಕ್ಕೆ ಎಲ್ಲರ ಜೊತೆಯಲ್ಲಿ ಕುಳಿತುಕೊಳ್ಳಲು ಕಾವ್ಯಳಿಗೆ ಇಷ್ಟವಾಗಲಿಲ್ಲ. ತಲೆನೋವಿದೆ ಎಂಬ ನೆಪ ಹೇಳಿ ತನ್ನ ಕೊಠಡಿಯಲ್ಲಿಯೇ ಮಲಗಿಬಿಟ್ಟಳು. ಚಳಿಯಿದ್ದರೂ ಸೆಖೆ ಮೈ ಸುಡುತ್ತಿತ್ತು. ಒಂದು ವಾರದ ಮಟ್ಟಿಗೆ ನಿದ್ದೆ ಮಾಡದ ಕಾವ್ಯಳ ಅರಿವಿಗೆ ಬಾರದೆ ನಿದ್ದೆ ಆವರಿಸಿತ್ತು. ತಾಯಿ ಮಮತೆ ಬಿಡಬೇಕೆ? ತಟ್ಟೆಗೆ ಸ್ವಲ್ಪ ಅನ್ನವನ್ನು, ಕಾವ್ಯಳಿಗೆ ಪ್ರಿಯವಾದ ಮಜ್ಜಿಗೆ ಹುಳಿಗೆ ಸೇರಿಸಿಕೊಂಡು ಕೊಠಡಿಗೆ ಬಂದವರೇ ಗಾಬರಿಗೊಂಡರು. ತುಂಬಾ ನಿದ್ರೆ ಮಾಡುತ್ತಿರುವ ಕಾವ್ಯಳ ಕಣ್ಣಿನಿಂದ ಕಣ್ಣೀರು ತೊಟ್ಟಿಕ್ಕುತ್ತಿದೆ. ನಿದ್ದೆಯಲ್ಲೂ ಅಳುವವರನ್ನು ಶಾಂತಮ್ಮ ಎಂದೂ ಕಂಡಿರಲಿಲ್ಲ. ತಾವೂ ಅತ್ತುಬಿಟ್ಟರು, ಕಷ್ಟಪಟ್ಟು ಎಬ್ಬಿಸಿ ಕಾವ್ಯಳ ಹಣೆಗೆ ಮುತ್ತಿಕ್ಕಿದ ಶಾಂತಮ್ಮ ತುತ್ತು ಮಾಡಿ ಅನ್ನ ತಿನ್ನಿಸತೊಡಗಿದರು. ‘ತವರುಮನೆ ತೊರೆಯುವ ಪ್ರತಿ ಹೆಣ್ಣಿಗೂ ಈ ರೀತಿಯ ನೋವಾಗುವುದು ಸಹಜ, ಅಳಬೇಡ ಕಂದ, ಮೊಬೈಲು ಫೋನು ಇರುವ ಕಾಲದಲ್ಲಿಯೂ ದೂರ ಉಳಿದುಕೊಳ್ಳುವ ಚಿಂತೆ ಏಕೆ?’ ಎಂದು ಹೇಳಿದ ಶಾಂತಮ್ಮನವರು ‘ಕೀರ್ತಿ ಜೊತೆ ಮಾತನಾಡಿದೆಯಾ ಪುಟ್ಟ, ನಿನ್ನ ಜೀವನ ಸುಸ್ಥಿತಿಗೆ ಬಂದದ್ದು ನಮ್ಮ ಪುಣ್ಯ, ಆಕೆಯೊಬ್ಬಳ ದಾರಿಯನ್ನು ಸರಿ ಮಾಡಿಬಿಟ್ಟರೆ ನಾವು ನೆಮ್ಮದಿಯಾಗಿ ಉಳಿದ ದಿನಗಳನ್ನು ಕಳೆದುಬಿಡುತ್ತೇವೆ, ನಿನಗೆ ಸಿಕ್ಕಿರುವ ಸಂಬಂಧ, ಅವರ ಘನತೆ ಗಾಂಭೀರ್ಯಗಳ ಬಗ್ಗೆ ಮಾತನಾಡಿ ಆಕೆಯನ್ನು ಒಪ್ಪಿಸು’ ಎಂದು ಮತ್ತೆ ಕೇಳಿಕೊಂಡರು ಶಾಂತಮ್ಮ. ಅಮ್ಮನ ತೊಡೆ ಮೇಲೆ ಮಲಗಿಕೊಂಡವಳೇ ಮತ್ತೆ ಅಳತೊಡಗಿದಳು. ಪ್ರೀತಿಯ ತೀವ್ರತೆ ಅರಿತ ಕಾವ್ಯಳಿಗೆ ಒಮ್ಮೆಯೂ ಕೀರ್ತಿ ಜೊತೆ ಮಾತನಾಡಿ ಸಂಬಂಧವನ್ನು ಕಿತ್ತುಹಾಕುವ ಧೈರ್ಯ ಬರಲಿಲ್ಲ.
ಆ ರಾತ್ರಿ, ಸುತ್ತಲೂ ನೀರವ ಮೌನ ಆವರಿಸಿತ್ತು. ಜಗತ್ತನ್ನೇ ಬೆಳಗಿದ ಚಂದಿರ ಕಾವ್ಯಳಿಗೆ ಮಾತ್ರ ಮಂಕಾಗಿಯೇ ಕಾಣಿಸುತ್ತಿದ್ದ. ಮನೆಯಲ್ಲಿ ಎಲ್ಲರೂ ಗಾಢನಿದ್ದೆಯಲ್ಲಿದ್ದರು. ಗಂಗಾಧರ್ ನನ್ನು ನೆನಪಿಸಿಕೊಂಡಾಕ್ಷಣ ಮನಸ್ಸು ವಿಲವಿಲನೆ ಒದ್ದಾಡಿತು, ಎದೆ ಬಿಗಿಯಾಗಿ ಉಸಿರು ಕಟ್ಟಿದಂತಾಯಿತು. ಕಿಟಕಿಯ ಬಳಿ ಬಂದ ಕಾವ್ಯ ಗಂಗಾಧರ್ ಗೆ ಫೋನಾಯಿಸಿದಳು. ಎಲ್ಲಾ ವಿಚಾರಗಳನ್ನು ಹೇಳಿ ಬಿಕ್ಕಿ ಬಿಕ್ಕಿ ಅತ್ತು ಹಗುರಾದಳು. ‘ನಿನ್ನ ಜಾಗದಲ್ಲಿ ಬೇರಾರನ್ನೂ ಕಲ್ಪಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ, ಹಾಗೆಯೇ ನನ್ನಪ್ಪ ಅಮ್ಮನ ಸಾವನ್ನೂ ನಾ ನೋಡಲಾರೆ’ ಎಂದು ಅಳುತ್ತಾ ಪ್ರಾರಂಭಿಸಿ ಎಲ್ಲವನ್ನೂ ತಿಳಿಸಿದಳು.
ಎಲ್ಲವನ್ನೂ ಕೇಳಿಸಿಕೊಂಡ ನಂತರ ಗಂಗಾಧರ್ ‘ಮುಂಜಾನೆ 5.30 ರ ಹೊತ್ತಿಗೆ ಬೈಕ್ ನೊಂದಿಗೆ ನಿಮ್ಮ ಮನೆಯ ಬಳಿ ಬರುತ್ತೇನೆ, ನಿನ್ನ ಲಗ್ಗೇಜ್ ಎಲ್ಲ ಈಗಲೇ ಪ್ಯಾಕ್ ಮಾಡಿಟ್ಟುಕೋ, ಈ ಊರು ಬಿಟ್ಟು ಎಲ್ಲಾದರೂ ದೂರ ಹೊರಟುಬಿಡೋಣ’ ವೆಂದ ಮಾತನ್ನು ಕೇಳಿ ಕಾವ್ಯ ಒಮ್ಮೆಲೇ ದಿಗ್ಭ್ರಾಂತಳಾದಳು. ತನ್ನ ಯಾವತ್ತೂ ವಿಚಾರಗಳನ್ನು ಸಮಾಧಾನವಾಗಿ ಕೇಳಿಸಿಕೊಂಡೂ ಈ ರೀತಿಯಾಗಿ ಗಂಗಾಧರ್ ಹೇಳಿದ್ದು ಆಕೆಗೆ ಆಶ್ಚರ್ಯವಾಯಿತು.
ಮಾತು ಮುಂದುವರೆಸಿದ ಗಂಗಾಧರ್ ಹೇಳಿದ ‘ಡಿಯರ್, ನೀನು ಮನೆಬಿಟ್ಟು ಬಂದರೆ, ಅದೂ ನನ್ನ ಜಾತಿಯವನ ಜೊತೆ ಬಂದರೆ ಇಡೀ ಊರಿಗೆ ಊರೇ ಹಂಗಿಸುತ್ತದೆ ಎಂಬುದ ನಾ ಬಲ್ಲೆ. ನಿಮ್ಮ ತಂದೆ ತಾಯಂದಿರು ಬೀದಿಯಲ್ಲಿ ತಲೆಯೆತ್ತಿ ನಡೆಯಲಾಗುವುದಿಲ್ಲವೆಂಬುದು ಎಲ್ಲಾ ಕಟ್ಟಳೆಗಳನ್ನು ಮೀರುವವರಿಗೆ ಈ ನೀಚ ಸಮಾಜ ಕೊಡುವ ಉಡುಗೊರೆ. ಆದರೆ, ಖಂಡಿತವಾಗಿಯೂ ನಿನ್ನ ತಂದೆ ತಾಯಂದಿರು ಸಾಯುವುದಿಲ್ಲ. ಕಾರಣ ನಿನ್ನ ತಂಗಿ ಕೀರ್ತಿ. ಅವಳನ್ನು ಒಂಟಿ ಮಾಡಿ ಈ ಪ್ರಪಂಚ ಬಿಟ್ಟವರು ಸರಿಯರು. ಜೊತೆಗೆ ಅಕ್ಕನ ಸ್ಥಿತಿಯಿಂದೊದಗಿ ಬಂದ ಪರಿಸ್ಥಿತಿ ಕೀರ್ತಿಯನ್ನು ಬದಲಿಸುತ್ತದೆ, ತಂದೆ ತಾಯಿಯ ಸ್ಥಿತಿಗೆ ಮರುಗುತ್ತಾಳೆ, ಅವರೆಲ್ಲರ ಪಾಲಿಗೆ ನೀನು ಹುಟ್ಟಿಯೇ ಇಲ್ಲವೆಂದು ತಿಳಿದುಕೊಂಡು ಹೊರಟುಬಿಡು’
ಇನ್ನೊಬ್ಬನ ಸಾಂಗತ್ಯವನ್ನು ಊಹಿಸಿಕೊಳ್ಳಲಾಗದ ಕಾವ್ಯಳಿಗೆ ಗಂಗಾಧರನ ಮಾತು ಯಾಕೋ ಚೂರು ಸಮಾಧಾನ ತಂದಿತು. ಆಗುವುದು ಆಗಿಯೇ ತೀರಲಿ, ‘ಬರುತ್ತೇನೆ’ ಎಂದು ಬಿಟ್ಟಳು.
ಕೆಲವು ಬಟ್ಟೆ, ಪುಸ್ತಕಗಳು, ಅಮ್ಮ ಕೊಡಿಸಿದ್ದ ಆ ಬೊಂಬೆ, ಅಪ್ಪ ಹುಟ್ಟುಹಬ್ಬಕ್ಕೆ ಕೊಡಿಸಿದ್ದ ಕ್ಯಾಮೆರಾ ಎಲ್ಲವನ್ನೂ ಕಣ್ಣೀರು ಸುರಿಸುತ್ತ ತುಂಬಿಕೊಂಡಳು. ಅಪ್ಪ, ಅಮ್ಮ, ತಾನು ಮತ್ತು ಕೀರ್ತಿ, ಅಜ್ಜಿ ಜೊತೆಯಾಗಿ ತೆಗೆಸಿದ್ದ ಒಂದು ಫೋಟೋವನ್ನು ಎದೆಗೊತ್ತಿಕೊಂಡು ಮಲಗಿದಳು. ರಾತ್ರಿಯೆಲ್ಲಾ ನಿದ್ದೆಯ ಚೂರೂ ಬರಲಿಲ್ಲ. ಮುಂಜಾನೆಯ 5.30 ನ್ನೇ ಕಾಯುತ್ತಿದ್ದಳು. ಹೊರಳಾಡಿ ಹೊರಳಾಡಿಯೇ ಕತ್ತಲ ನುಂಗುತ್ತಿದ್ದಳು. ಸಮಯ ಸುಮಾರು ಮುಂಜಾನೆ 5. ಕತ್ತಲು ದಟ್ಟವಾಗಿಯೇ ಇತ್ತು. ಕಾವ್ಯಳ ಕೊಠಡಿಯ ಬಾಗಿಲು ಇದ್ದಕ್ಕಿದ್ದಂತೆ ಬಡಿದುಕೊಂಡಿತ್ತು. ಗಾಬರಿಗೊಂಡ ಕಾವ್ಯ ಬಾಗಿಲು ತೆರೆದಳು. ಎದುರಿಗೆ ಗಾಬರಿಗೊಂಡ ಶಾಂತಮ್ಮ ನಿಂತಿದ್ದರು. ಮುಖದಲ್ಲಿ ಇನ್ನಿಲ್ಲದ ಆತಂಕವಿತ್ತು.
‘ಮಗೂ, ಕೀರ್ತಿಯನ್ನು ಕಂಡೆಯಾ? ಸುಮಾರು ನಾಲ್ಕು ಘಂಟೆಯಿಂದಲೂ ಮನೆಯಲ್ಲಿ ಕಾಣುತ್ತಿಲ್ಲ, ಅವಳ ಬಟ್ಟೆ ಪುಸ್ತಕ, ಸೂಟ್‍ಕೇಸ್ ಏನೂ ಕಾಣುತ್ತಿಲ್ಲ’ ಕೀರಲು ದ್ವನಿಯಲ್ಲಿ ಶಾಂತಮ್ಮ ಕೂಗಿಕೊಂಡಳು.
‘ನೀನೇದಾರೂ ಅವಳಿಗೆ ಹೇಳಿದೆಯಾ ಅಮ್ಮಾ’ ಅಪರೂಪಕ್ಕೆ ಮಾತನಾಡಿದ್ದಳು ಕಾವ್ಯ.
‘ರಾತ್ರಿ, ಅಕ್ಕನಿಗೂ ಹುಡುಗನ ಗೊತ್ತಾಯಿತು, ನೀನು ನಿನ್ನ ಅತ್ತೆಯ ಮಗನಾದ ಲಕ್ಷ್ಮೀಶನನ್ನು ಮದುವೆಯಾಗು, ಓದಿದ್ದಾನೆ, ಅಮೇರಿಕಾದಲ್ಲಿದ್ದಾನೆ ಎಂದೆ, ಅಷ್ಟೇ’ ಎಂದ ಶಾಂತಮ್ಮ ಬಾಗಿಲ ಹೊರಗೆ ಓಡಿದಳು. ಕಾವ್ಯ ಕುಸಿದುಬಿದ್ದಳು. ಅಷ್ಟಕ್ಕೇ ಗಂಗಾಧರನ ಮೊಬೈಲ್ ಹೊಡೆದುಕೊಂಡಿತು. ವಿಷಯ ಮುಟ್ಟಿಸಿ ಹಿಂದಿರುಗುವಂತೆ ಹೇಳಿದಳು. ಗಾಬರಿಗೊಂಡ ಗಂಗಾಧರ್ ಆ ಕ್ಷಣದಲ್ಲೇನೂ ತೋಚದೆ ಹಿಂದಿರುಗಿಬಿಟ್ಟ.
ಅದೇ ದಿನದಂದು, ಶಾಂತಮ್ಮಳ ಮನೆಯ ಓಣಿಕೊನೆ ಮನೆಯ ಮೋಹನ್ ಕೂಡ ಕಾಣೆಯಾಗಿರುವ ಸುದ್ದಿ ಹಬ್ಬಿಕೊಂಡಿತು. ಕೀರ್ತಿ ಪ್ರೀತಿಸುತ್ತಿದ್ದ ಹುಡಗನಾತ. ಕಾವ್ಯ ಎಲ್ಲೋ ಒಂದು ಕಡೆ ತನ್ನ ದೈನೇಶಿ ಸ್ಥಿತಿ ಕಂಡು ಮರುಗಿದ್ದವಳು ಕೀರ್ತಿಯ ಸಾಹಸವನ್ನು ಮೆಚ್ಚಿಕೊಂಡಳಾದರೂ ಒಪ್ಪಿಕೊಂಡಂತೆ ಬಾಯಿಬಿಡಲಿಲ್ಲ. ಆದರೆ ಸೂರ್ಯ ಮೂಡುವ ಹೊತ್ತಿಗೆ ಮೂಡಿಬಂದ ಬೀದಿಜನಗಳ ಮಾತುಗಳನ್ನು ಅರಿಗಿಸಿಕೊಳ್ಳಲಾಗಲಿಲ್ಲ. ಬಾಯಿಗೆ ಬಂದಂತೆ ಮಾತನಾಡುವ ಜನಗಳು ಹೆಚ್ಚಾದರು. ‘ಅಯ್ಯೋ! ಆ ಎರಡು ಹೆಣ್ಣು ಮಕ್ಕಳು ತಲೆಯೆತ್ತಿ ನಡೆದವರಲ್ಲ, ಈಗ ನೋಡಿ ಅದ್ಯಾವನನ್ನೋ ಇಟ್ಟುಕೊಂಡು ಊರುಬಿಟ್ಟು ಓಡಿಹೋಗಿದೆ ಒಂದು ಹೆಣ್ಣು, ಕಳ್ಳಿಯರನ್ನು ನಂಬಿದರೂ ಮಳ್ಳಿಯರನ್ನು ನಂಬಬಾರದು, ಪಾಪ, ಆ ತಂದೆ ತಾಯಿಗಳಿಗೆ ಸಾಯುವವರೆವಿಗೂ ಒಂದು ಕೊರಗನ್ನು ಕೊಟ್ಟು ತನ್ನ ದಾರಿ ಹಿಡಿದಳು ದರಿದ್ರ ಹುಡುಗಿ’ ಹೀಗೆ ಸಾಗಿತ್ತು ಸಾಲು ಸಾಲು ಮೂದಲಿಕೆ. ಜೊತೆಗೆ ನೆಂಟರಿಷ್ಟರ ನೂರಾರು ಕರೆಗಳು. ಮಾತು ಮಾತಿಗೂ ‘ಮಗಳು ಓಡಿಹೋದಳಂತೆ, ಓಡಿಹೋದಳಂತೆ’ ಇವೇ ಮಾತುಗಳು.
ಎಂದೂ ಕಣ್ಣೀರು ಹಾಕದ ಅಪ್ಪ ಇಂದು ಕಣ್ಣೀರು ಸುರಿಸಿದ್ದು ಕಂಡು ತಾನೂ ಅತ್ತುಬಿಟ್ಟಳು ಕಾವ್ಯ. ಮೊಮ್ಮಗಳ ಫೋಟೋ ಎದೆಗೆ ಒತ್ತಿಕೊಂಡು ಗೋಳಾಡುವ ಅಜ್ಜಿ ಒಂದೆಡೆಯಾದರೆ, ದಿಕ್ಕೇ ತೋಚದಂತೆ, ಗೊಂಡಾರಣ್ಯದಲ್ಲಿ ತಪ್ಪಿಸಿಕೊಂಡ ಜಿಂಕೆ ಮರಿಯಂತೆ ಶಾಂತಮ್ಮ ಅಲೆದಾಡುತ್ತಿದ್ದಳು. ಒಮ್ಮೆ ಅಪ್ಪ ಎದೆನೋವೆಂದು ಇದ್ದಕ್ಕಿದ್ದಂತೆ ನೆಲಕ್ಕೆ ಒರಗಿದ್ದು ಕಂಡು ಕಾವ್ಯ ಗಾಬರಿಯಾದಳು. ಪರೀಕ್ಷಿಸಿದ ವ್ಶೆದ್ಯರು ಇದು ಸಣ್ಣ ಹೃದಯಾಘಾತವಷ್ಟೇ ಎಂದು ಹೇಳುವವರೆವಿಗೂ ಕಾವ್ಯಳ ಅಳು ಕಡಿಮೆಯಾಗಲಿಲ್ಲ.
ಧರ್ಮಸ್ಥಳದಲ್ಲಿ ಕಿರ್ತಿ ಮತ್ತು ಮೋಹನ್ ಮದುವೆಯಾಗಿದ್ದಾರೆಂಬ ವಿಚಾರ ಪತ್ರಿಕೆ ಟೀವಿಗಳಲ್ಲಿ ಬಂದದ್ದೇ ಅಜ್ಜಿ ತೀವ್ರ ಅಸ್ವಸ್ಥರಾಗಿ ತೀರಿಕೊಂಡರು. ಲಕ್ಷ್ಮೀಶಭಟ್ಟರ ಕುಡಿತ ಹೆಚ್ಚಾಯಿತು. ಶಾಂತಮ್ಮ ಹುಚ್ಚಿಯಂತಾಗಿಬಿಟ್ಟರು. ಈ ಘಟನೆಯಾದ ವಾರದೊಳಗೆ ಕಾವ್ಯ ‘ನನ್ನನ್ನು ಮರೆತುಬಿಡು, ಮೇಲ್ಚಾತಿ ಎನಿಸಿಕೊಂಡವನನ್ನು ನನ್ನ ತಂಗಿ ವರಿಸಿದ್ದೇ ದೊಡ್ಡ ಅಪಘಾತವಾಗಿ ಪರಿವರ್ತಿತವಾರುವಾಗ, ಇನ್ನು ನಾನು ನೀನು ಕೂಡಿಕೊಂಡರೆ ನಮ್ಮ ಸಂಸಾರವೇ ಸರ್ವನಾಶವಾಗಿಹೋಗುತ್ತದೆ, ನಂತರ ನಾನೂ ಕೊರಗಿ ಕೊರಗಿ ತೀರಿಕೊಳ್ಳುತ್ತೇನೆ, ನೀನೂ ಬದುಕುವುದಿಲ್ಲ, ನಿನ್ನ ತಾಯಿಯನ್ನು ಒಂಟಿ ಮಾಡಬೇಡ, ನನ್ನನ್ನು ಕ್ಷಮಿಸು, ಮತ್ತೊಬ್ಬನಿಗೆ ಹೆಂಡತಿಯಾಗಿ ಹೋದರೂ ನೀ ಮುಟ್ಟಿದ ಈ ದೇಹವನ್ನು ಮತ್ತಾರೂ ಮೈಲಿಗೆ ಮಾಡಲಾರರು’ ಎಂಬ ಸಂದೇಶ ಕಳುಹಿಸಿ ಆ ಮೊಬೈಲ್ ಅನ್ನು ಕೋಪದಿಂದ ಚೂರು ಚೂರು ಮಾಡಿಬಿಟ್ಟಳು.
ಕಾವ್ಯಳ ಮದುವೆಯ ನೆಪದಿಂದ ಶಾಂತಮ್ಮ ಮತ್ತು ಲಕ್ಷ್ಮೀಶಭಟ್ಟರು ಸ್ವಲ್ಪ ಸಮಾಧಾನ ಚಿತ್ತರಾದಂತೆ ಕಂಡು ಬಂದರು. ಮದುವೆ ಸಮೀಪಿಸುತ್ತಿದ್ದಂತೆ ಲವಲವಿಕೆ ಪಡೆದುಕೊಂಡರು. ತನ್ನ ಕೋಣೆಯಲ್ಲಿ ಒಬ್ಬಳೇ ಮಲಗುವ ಕಾವ್ಯಳ ಮೇಲೆ ತಿರುಗುವ ಫ್ಯಾನ್ ಅನೇಕ ಬಾರಿ ಅವಳನ್ನು ಕರೆದಂತೆ ಭಾಸವಾದರೂ ಅಪ್ಪ ಅಮ್ಮಳನ್ನು ನೆನಪಿಸಿಕೊಂಡು ಮೌನವಾಗಿಯೇ ಉಳಿದುಬಿಟ್ಟಳು. ತಪ್ಪಾಗಿ ಹುಟ್ಟಿಬಿಟ್ಟಿದ್ದೇನೆ, ಎಲ್ಲೋ ಸೇರಿಕೊಂಡು ತಪ್ಪಾಗಿಯೇ ಸತ್ತುಬಿಡೋಣವೆಂದು ನಿರ್ಧರಿಸಿಕೊಂಡಳು.
ಮದುವೆಯ ಹಿಂದಿನ ದಿನ ಲಕ್ಷ್ಮೀಶಭಟ್ಟರು ಕಾವ್ಯಳ ಕೊಠಡಿಗೆ ಬಂದವರೇ ಮಗಳನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಕೀರ್ತಿಯನ್ನು ನೆನಪಿಸಿಕೊಂಡು ಅತ್ತುಬಿಟ್ಟರು. ‘ನಿನಗೆ ಗೊತ್ತು ಮಾಡಿರುವ ಗಂಡಿಗಿಂತಲೂ ಶ್ರೀಮಂತನಾದ ಹುಡುಗನನ್ನು ಅವಳಿಗೆ ನಾನು ಹುಡುಕುತ್ತಿದ್ದೆ, ಆಕೆ ಈ ರೀತಿಯಾಗಿ ಮಾಡಬಾರದಾಗಿತ್ತು’ ಎಂದರು. ಕಾವ್ಯ ಏನೂ ಮಾತನಾಡಲಿಲ್ಲ. ಮೌನದುಸಿರು ಅವಳನ್ನು ಸುಡುತ್ತಿತ್ತು.
‘ನನ್ನ ಮೇಲೆ ಕೋಪವೇ ನಿನಗೆ? ಇತ್ತೀಚೆಗೆ ನಾನು ಏನೇ ಕೇಳಿದರೂ ತಲೆಯಾಡಿಸುವುದು ಬಿಟ್ಟು ಬೇರೇನೂ ಮಾತನಾಡುತ್ತಿಲ್ಲ, ನನ್ನನ್ನು ಮತ್ತು ಅಮ್ಮನನ್ನು ಆಡಿಕೊಂಡು ಹೊಟ್ಟೆ ಉರಿಸುತ್ತಿದ್ದು ಮರೆತುಬಿಟ್ಟೆಯ ಕಂದ’ ಎಂದರು ಲಕ್ಷ್ಮೀಶಭಟ್ಟರು. ಅಪ್ಪನ ಕಣ್ಣನ್ನು ಗಾಢವಾಗಿ ದಿಟ್ಟಿಸಿದ ಕಾವ್ಯ ಮತ್ತೆ ಅದೇ ತೆರನಾಗಿ ಏನೂ ಇಲ್ಲವೆಂಬಂತೆ ತಲೆಯಾಡಿಸಿದಳು. ಮುಖದಲ್ಲಿ ಕಂಡೂ ಕಾಣದಂತೆ ಅಳುವೊಂದು ಆವರಿಸಿತ್ತು.
ನಾಲ್ಕು ಎಕರೆಯಗಲದ ಜಮೀನಿನಲ್ಲಿ ಹರಡಿಕೊಂಡ ಕಲ್ಯಾಣ ಮಂಟಪ. ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಿತ್ತು. ನೂರಾರು ಕಾರುಗಳು ಜಮಾಯಿಸಿದ್ದವು. ಆಗರ್ಭ ಶ್ರೀಮಂತರಿಂದ ಕಲ್ಯಾಣ ಮಂಟಪ ತುಳುಕಿತ್ತು. ಪ್ರತಿಷ್ಠಿತ ವ್ಯಕ್ತಿಗಳ ದಿಂಡೇ ಅಲ್ಲಿ ನೆರೆದಿತ್ತು. ಪಟ್ಟಣವೆಲ್ಲಾ ಸದ್ದು ಮಾಡಿದ್ದ ಮದುವೆಯನ್ನು ಚಿತ್ರಿಕರಿಸಿಕೊಳ್ಳಲು ಮಾಧ್ಯಮ ವರ್ಗ ನೆರೆದಿತ್ತು. ಅಷ್ಟು ದೊಡ್ಡ ಕಲ್ಯಾಣ ಮಂಟಪದ ಯಾವುದೋ ಒಂದು ಕೊಠಡಿಯಲ್ಲಿ ಕಾವ್ಯ ಕುಳಿತಿದ್ದಳು. ಅಂದ ಚಂದದ ನೂರಾರು ಸೀರೆಗಳು ಅವಳ ಮೈಗೆ ಒಗ್ಗಲಿಲ್ಲ. ಎದೆ ಮೇಲೆ ಹಾಸಿದ್ದ ರಾಶಿ ರಾಶಿ ಒಡವೆಗಳು ಮಿರಿ ಮಿರಿ ಮಿಂಚಲಿಲ್ಲ. ಶಾಂತಮ್ಮ ಕಾವ್ಯಳ ತಲೆ ಮೇಲಕ್ಕೆತ್ತಿದರು. ಕಣ್ಣುಗಳು ನೀರಿನಿಂದ ತುಂಬಿಹೋಗಿತ್ತು. ‘ಯಾಕಮ್ಮಾ?’ ಎಂದರು ಶಾಂತಮ್ಮ. ಕಾವ್ಯ ಎಂದಿನಂತೆ ಒಂದು ಪದವೂ ಮಾತನಾಡದೆ ಏನೂ ಎಲ್ಲ ಎಂಬಂತೆ ತಲೆ ಆಡಿಸಿದಳು. ಹೆಣ್ಣನ್ನು ಕರೆದುಕೊಂಡು ಬನ್ನಿ ಎಂಬ ಪುರೋಹಿತರ ಮಾತು ಕೇಳಿದ್ದೆ ಕೆಲ ಹೆಂಗಸರು ಕಾವ್ಯಳ ರಟ್ಟೆ ಹಿಡಿದು ಜೋಪಾನವಾಗಿ ಮಂಟಪದೆಡೆಗೆ ಕರೆದುಕೊಂಡು ಹೋದರು. ಅಷ್ಟಕ್ಕೇ ಅಲ್ಲಿಗೆ ಬಂದ ಲಕ್ಷ್ಮೀಶಭಟ್ಟರು ಕಾವ್ಯಳ ಗಲ್ಲವೆತ್ತಿ ನೋಡಿದೊಡನೆ ಆಶ್ಚರ್ಯವಾಯಿತು. ಅವಳ ಮೊಗದಲ್ಲೇನೋ ಕೊರತೆಯಿತ್ತು, ಕಣ್ಣೀರು ತುಂಬಿಕೊಂಡಿತ್ತು. ಅಪ್ಪನನ್ನು ತಬ್ಬಿಕೊಂಡವಳೇ ಬಿಕ್ಕಳಿಸಿ ಬಿಕ್ಕಳಿಸಿ ಅತ್ತುಬಿಟ್ಟಳು. ಮುಹೂರ್ತಕ್ಕೆ ಸಮಯವಾಗುತ್ತಿದೆ ಎಂಬ ಕೂಗು ಕೇಳಿದ್ದೆ ಕಾವ್ಯಳನ್ನು ಕಲ್ಯಾಣ ಮಂಟಪಕ್ಕೆ ಕರೆದುಕೊಂಡು ಹೋಗಲಾಯಿತು.
ಕೊನೆಗೂ ತಾಳಿ ಕಟ್ಟುವ ಸಮಯ ಸಮೀಪಿಸಿತು. ದೂರದಿಂದಲೇ ಮಗಳನ್ನು ಗಮನಿಸುತ್ತಿದ್ದ ಲಕ್ಷ್ಮೀಶಭಟ್ಟರಿಗೆ ಅಳು ಉಕ್ಕಿಬಂತು. ಕಾವ್ಯ ಬಗ್ಗಿಸಿದ ತಲೆಯನ್ನು ಮೇಲಕ್ಕೆತ್ತಿದ್ದು ಕಾಣಲಿಲ್ಲ. ಸರಸರನೆ ಕಾವ್ಯಳ ಬಳಿ ಹೋದ ಲಕ್ಷ್ಮೀಶಭಟ್ಟರು ಆಕೆಯ ಮುಖವೆತ್ತಿ ನೋಡಿದರು. ತುಟಿಗಳು ಅದುರುತ್ತಿದ್ದವು, ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ತಾನು ಸಾಕಿ ಬೆಳೆಸಿದ, ತನ್ನ ಜೀವವಾದ ಮಗಳ ಮುಖದಲ್ಲಿ ಲಕ್ಷ್ಮೀಶಭಟ್ಟರ ಹೃದಯವನ್ನು ಕೊಯ್ಯುವಂತಹ ತೀಕ್ಷ್ಣ ನೋವಿತ್ತು. ಖಡ್ಕಕ್ಕಿಂತಲೂ ಹರಿತವಾದ ಅವಳ ಮೌನ ಎದೆಯನ್ನು ಚುಚ್ಚಿತು. ಕಣ್ಣೀರು ಧಾರಾಕಾರವಾಗಿ ಹರಿಯಿತು.
ಕಾವ್ಯಳ ಕೈಯನ್ನು ಹಿಡಿದುಕೊಂಡ ಲಕ್ಷ್ಮೀಶಭಟ್ಟರು ‘ಒಬ್ಬಳು ಮಗಳನ್ನು ಕಳೆದುಕೊಂಡಿದ್ದೇನೆ, ಮತ್ತೊಬ್ಬಳು ಮಗಳನ್ನು ಕಳೆದುಕೊಳ್ಳುವುದಿಲ್ಲ, ನನಗೀ ಮದುವೆ ಇಷ್ಟವಿಲ್ಲ, ನನ್ನ ಮಗಳ ನಗುವಿಗೋಸ್ಕರ ಕಾಯುತ್ತೇನೆ ಎಂದವರೇ ಕಾವ್ಯಳನ್ನು ಕರೆದುಕೊಂಡು ಕಲ್ಯಾಣಮಂಟಪದಿಂದ ಹೊರಗೆ ನಡೆದುಬಿಟ್ಟರು.
Thursday, 29 November 2012
ಮುಹೂರ್ತ...
ಬೆಳಕಾಗಲಿ ತಂಪಾಗಲಿ ನಿನ್ನೊಲುಮೆ ಅರಮನೆ
ಈ ಹಾಡು ಕೇಳುತ್ತಿದ್ದಂತೆ ಆತನಿಗೆ ಮನಸ್ಸಿನಲ್ಲಿ ಒಂದು ರೀತಿ ನೋವು ಮತ್ತು ಖುಷಿಯಾಯಿತು.
ಮಧುರ ಯಾತನೆ ಎಂಬಂತೆ.
ಆತ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗಿ, ಆಕೆ ಇನ್ನೂ ಓದುತ್ತಿದ್ದಳು.
ಇಬ್ಬರೂ ಪ್ರೇಮಿಸಿದರು, ಈತನ ಗುಣ ಪ್ರತಿಭೆ ಆಕೆಯನ್ನು ಆಕರ್ಷಿಸಿತು.
ಆಕೆಯ ಒಳ್ಳೆಯತನ ಸೌಂದರ್ಯಕ್ಕೆ ಈತ ಸೋತ. ಪ್ರಪಂಚವನ್ನೇ ಗೆಲ್ಲಬಲ್ಲಂತ ಪ್ರತಿಭಾವಂತ.
ಪ್ರಾರಂಭದಲ್ಲಿ ಒಬ್ಬರಿಗೊಬ್ಬರು ಹೂವು ಮಕರಂದದಂತೆ ಅನ್ಯೋನ್ಯವಾಗಿದ್ದರು.
ಮುಂದುವರೆದಂತೆ ಒತ್ತಡ ಹೆಚ್ಚಾಯಿತು. ಪ್ರೀತಿ ಭಾರವಾಯಿತು.
ಒಳ್ಳೆಯ ಉದ್ಯೋಗದಲ್ಲಿದ್ದ ಆತನಿಗೆ ಸಂಬಂಧಿಕರಿಂದ ಮದುವೆಯಾಗಲು ಒತ್ತಡ ಹೆಚ್ಚಾಯಿತು.
ಒತ್ತಡಕ್ಕೆ ಸಿಲುಕಿಕೊಂಡ ಆತ ದಿಕ್ಕು ತೋಚದಾದ.
ಎಲ್ಲಾ ವಿಚಾರವನ್ನು ಮನೆಗೆ ಮುಟ್ಟಿಸಿ ಒಪ್ಪಿಗೆ ಪಡೆದುಕೊಳ್ಳಲು ವಿಫಲಳಾದ ಆಕೆಯೂ ಗೊಂದಲಕ್ಕೆ ಬಿದ್ದಳು.
ಇಬ್ಬರ ನಡುವೆ ಪ್ರೀತಿಯೆಂಬುದು ಪವಿತ್ರವಾಗಿದ್ದರೂ ಈ ಎಲ್ಲಾ ಗೊಂದಲದಿಂದ ಆಕೆಗೆ ತನ್ನ ಓದು ಸರಾಗಗೊಳಿಸಿಕೊಳ್ಳುವುದು ಕಷ್ಟವಾಯಿತು.
ಆತ ಗೊಂದಲಕ್ಕೊಳಗಾದವನೇ ತನ್ನ ಕೆಲಸ ಬಿಟ್ಟುಬಿಟ್ಟ.
ಇದ್ದ ಅಲ್ಪ ಸ್ವಲ್ಪ ದುಡ್ಡನ್ನೂ ಕಳೆದುಕೊಂಡ. ತನ್ನ ಪ್ರತಿಭೆ ಕುಂಟಿತಗೊಂಡಿತೇ ಹೊರತು, ಬೆಳೆಸಿಕೊಳ್ಳಲಾಗಲಿಲ್ಲ.
ಕಣ್ಣಮುಂದೆಯೇ ಎಲ್ಲವೂ ಕೈಜಾರಿ ಹೋಯಿತು.
ಆಕೆಯೂ ಕಷ್ಟಕ್ಕೆ ಬಿದ್ದಳು, ಪ್ರತಿಯೊಂದಕ್ಕೂ ಆತನನ್ನೇ ನೆಚ್ಚಿಕೊಳ್ಳುತ್ತಿದ್ದವಳಿಗೆ ಈಗ ಆತ ತನ್ನಿಂದ ದೂರವಾಗುತ್ತಿದ್ದಾನೆ ಎಂದುಕೊಂಡಳು.
ಮತ್ತೂ ಗೊಂದಲಕ್ಕೆ ಬಿದ್ದಳು. ಮನೆಯವರ ಕಣ್ಗಾವಲು ಹೆಚ್ಚಾಯಿತು.
ಒಂದು ದಿನ ಇದೇ ವಿಚಾರವಾಗಿ ಇಬ್ಬರಿಗೂ ಮಾತಿಗೆ ಮಾತು ನಡೆಯಿತು.
‘ನಾನು ನಿನ್ನ ಸಹವಾಸದಿಂದ ಸಂಪೂರ್ಣವಾಗಿ ಹಾಳಾದೆ, ನಮ್ಮ ಕುಟುಂಬ ನನ್ನನ್ನೇ ನಂಬಿ ಕೂತಿದೆ’ ಎಂದ ಆತ.
‘ನೀನೊಬ್ಬ ನನ್ನ ಜೀವನದಲ್ಲಿ ಬರದಿದ್ದರೆ ನಾನು ಎಷ್ಟು ಸುಖವಾಗಿರುತ್ತಿದ್ದೆ, ಓದಲೂ ಆಗದೆ, ಬದುಕಲೂ ಆಗದೆ ಸಾಯುತ್ತಿದ್ದೇನೆ, ಒಬ್ಬಳೇ ಮಗಳಾದ ನನ್ನನ್ನೂ ನನ್ನ ತಂದೆ ತಾಯಿ ಕಾದು ಕುಳಿತಿದ್ದಾರೆ’ ಎಂದಳಾಕೆ.
‘ಇಷ್ಟೆಲ್ಲಾ ಅಪವಾದ ಕೇಳಿಕೊಂಡು ನಿನ್ನೊಡನೆ ನಾನಿರಲಾರೆ, ನಿಮ್ಮ ತಂದೆ ತಾಯಿ ನನಗಿಂತಲೂ ಒಳ್ಳೆಯ ಹುಡುಗನನ್ನು ನಿನಗೆ ಹುಡುಕಬಲ್ಲರು, ಅವನನ್ನೇ ಮದುವೆಯಾಗಿ ಸುಖವಾಗಿರು' ಎಂದು ಆತ ರೇಗಿಕೊಂಡ.
‘ನಿನಗೇನು ಕಡಿಮೆ ಹೇಳು, ನಿನ್ನ ಸಂಬಂಧಿಕರೆಲ್ಲಾ ನಿನಗೆ ಹೆಣ್ಣು ನೀಡಿ ಪಾದ ತೊಳೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ, ನನಗಿಂತ ಒಳ್ಳೆಯ ಹುಡುಗಿ ಸಿಗಬಲ್ಲಳು, ಮದುವೆಯಾಗಿ ಸುಖದಿಂದಿರು’ ಎಂದವಳೇ ಅಲ್ಲಿಂದ ಹೊರಟುಬಿಟ್ಟಳು.
ಇಬ್ಬರೂ ತಮ್ಮ ತಮ್ಮ ಮೊಬೈಲ್ ಸಂಖ್ಯೆ ಬದಲಿಸಿಕೊಂಡರು.
ಆತನಿಗೆ ಮದುವೆಯಾಯಿತು ಎಂಬ ಸುದ್ದಿಯನ್ನು ಆತನ ಗೆಳೆಯನಿಂದ ಕೇಳಲ್ಪಟ್ಟಳು. ಆಕೆಗೂ ಮದುವೆಯಾಯಿತು ಎಂಬ ಸುದ್ದಿಯನ್ನು ಆಕೆಯ ಗೆಳತಿ ಆತನಿಗಾಗಿ ಹೊತ್ತು ತಂದಿದ್ದಳು.
ಆತ ಛಲದಿಂದ ಬದುಕಿದ, ವಿಶ್ವಮಟ್ಟದ ಹೆಸರು ಮಾಡಿದ, ತನ್ನಭಿಲಾಶೆ ಈಡೇರಿಸಿಕೊಂಡ.
ಆಕೆಯೂ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗಕ್ಕೆ ಸೇರಿಕೊಂಡವಳೇ ತಂದೆ ತಾಯಿಯನ್ನು ಅಕ್ಕರೆಯಿಂದ ಸಾಕಿಕೊಂಡಳು.
ಹೀಗೆ, ಒಮ್ಮೆ ಆತ ಆಕೆಯ ಹೊಸ ನಂಬರ್ ಪಡೆದುಕೊಂಡವನೇ ಫೋನಾಯಿಸಿದ.
ಆಕೆ ತುಂಬಾ ಖುಷಿಯಿಂದಲೇ ಮಾತನಾಡಿದಳು.
ಎಂಟು ಮತ್ತು ಒಂಬತ್ತು ವರ್ಷದ ಮಕ್ಕಳನ್ನು ಪರಿಚಯಿಸಿ ಮಾತನಾಡಿಸಿ, ತನ್ನ ಕಂದಮ್ಮಗಳು ಎಂದಳು.
ನನ್ನ ರಕ್ತವನ್ನು ಹಂಚಿಕೊಂಡು ಹುಟ್ಟಿ ಬರಬೇಕಾಗಿದ್ದ ಮಕ್ಕಳ ಮಾತು ಕೇಳಿ ಆತ ಮರುಗಿದ, ಆತನೂ ಒಂದೆರಡು ಮಕ್ಕಳನ್ನು ಆಕೆಗೆ ಮಾತನಾಡಿಸಿ ನಿನ್ನ ಹೊಟ್ಟೆಯಲ್ಲಿ ಹುಟ್ಟಬೇಕಾಗಿತ್ತು ಬದಲಾಗಿ ಇವಳ ಹೊಟ್ಟೆಯಲ್ಲಿ ಹುಟ್ಟಿವೆ ಎಂದ.
ತಾನೇ ಹೆರಬೇಕಾಗಿದ್ದ ಮಕ್ಕಳೊಡನೆ ಮಾತನಾಡಿದ ಆಕೆ ತನಗರಿಯದಂತೆ ಕಣ್ಣೀರು ಸುರಿಸಿದಳು.
‘ನೀನು ಅಂದುಕೊಂಡಂತೆ ಸಾಧಿಸಿ ವಿಶ್ವಮಟ್ಟಕ್ಕೆ ಬೆಳೆದದ್ದು ನನಗೆ ಖುಷಿಯಾಯಿತು, ನನ್ನೊಡನೆ ಕುಳಿತಿದ್ದರೆ ಬರಿ ಕಷ್ಟ ಗೊಂದಲದಲ್ಲಿಯೇ ಸಾಯಬೇಕಾಗಿರುತ್ತಿತ್ತು’ ಎಂದಳು ಆಕೆ.
‘ಇರಲಿ ಬಿಡು, ನೀನೂ ಅಷ್ಟೆ, ಓದಿ ಬೆಳೆದು ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ಹೆತ್ತವರನ್ನು ತಣ್ಣಗೆ ಇಟ್ಟಿದ್ದೀಯ, ನನ್ನ ಜೊತೆ ಒಡನಾಟ ಮುಂದುವರೆಸಿದ್ದರೆ ಇವೆಲ್ಲಾ ಸಾಧ್ಯವಾಗುತ್ತಿರಲಿಲ್ಲ’ ಎಂದ ಆತ.
‘ಒಮ್ಮೆ ನಿನ್ನನ್ನು ನೋಡಬೇಕಲ್ಲ’ ಎಂದಳಾಕೆ.
‘ನಾನೂ ಕೂಡ ನಿನ್ನನ್ನು ನೋಡಬೇಕು’ ಎಂದನಾತ.
‘ನಿನ್ನ ಹೆಂಡತಿ ಮಕ್ಕಳೊಂದಿಗೆ ಬಾ’ ಎಂದಳು.
‘ನಿನ್ನ ಗಂಡ ಮಕ್ಕಳನ್ನು ಕರೆದುಕೊಂಡು ಬಂದರೆ ಮಾತ್ರ’ ಎಂದನಾತ.
ನಿಗದಿ ಪಡಿಸಿಕೊಂಡಿದ್ದ ಸ್ಥಳಕ್ಕೆ ಬಂದರು. ಆಕೆಯನ್ನು ನೋಡಿದ್ದೇ ಆತ ಗಾಬರಿಯಾದ.
ಕುತ್ತಿಗೆಯಲ್ಲಿ ತಾಳಿ, ಕಾಲಿನ ಬೆರಳಿನಲ್ಲಿ ಉಂಗುರವಿರಲಿಲ್ಲ.
ಒಬ್ಬಳೇ ಬಂದಿದ್ದಳು.
‘ನಿನ್ನ ಗಂಡ ಮಕ್ಕಳೆಲ್ಲಿ?’ ಎಂದು ಕೇಳಿದನಾತ.
‘ನಾನು ಮದುವೆ ಮಾಡಿಕೊಂಡಿಲ್ಲ' ಎಂದಳಾಕೆ
'ನೀನೇಕೆ ಒಂಟಿಯಾಗಿ ಬಂದಿರುವುದು' ಗಾಬರಿಯಿಂದ ಕೇಳಿದಳಾಕೆ.
‘ನಾನೂ ಮದುವೆಯಾಗಿಲ್ಲ’ ಎಂದನಾತ.
ಆಕೆಯ ಕಣ್ಣಿನಲ್ಲಿ ನೀರು ಜಿನುಗಿತು. ಆತನನ್ನು ಗಟ್ಟಿಯಾಗಿ ತಬ್ಬಿಕೊಂಡಳು.
ಕೂಡಲೇ ಆತ ಅಮ್ಮನಿಗೆ ಫೋನಾಯಿಸಿ ‘ಅಮ್ಮ, ಇನ್ನುಮುಂದೆ ಕೊರಗಬೇಡ, ಮದುವೆಯಾಗುತ್ತಿದ್ದೇನೆ’ ಎಂದ.
ಇಬ್ಬರೂ ಸೋತು ಗೆದ್ದು, ಈಗ ಗೆದ್ದು ಸೋತರು..!