ಈ ಜಗಮಂಡಲದಾವೃತವನ್ನಾವರಿಸಿವೆ
ನೂರಾರು ದಾರಗಳು
ಗ್ರಹ ಗ್ರಹ ನಿಗ್ರಹಿಸಿದ ನೂಲು
ನಡುವೆ ನಾದದೆರಕ ಕೃಷ್ಣ ಕೊಳಲು
ಸೂರ್ಯನೆದೆಯುರಿಗೆ ಕರಗದ ದಾರ
ಹಿಡಿದೆಳೆದು ತಿರುಗಿ ಬುಗುರಿಸಿದೆ ನವಗ್ರಹ ದ್ವಾರ
ಕ್ಷೀರಪಥವೆಂಬ ನಾಣ್ಯದಗಲ ರಥದಲ್ಲಿ
ಹರಡಿದ ತಾರಾ ಹರಳು
ಒಂದಕ್ಕೊಂದು ಬೆಸೆದ ಬೆಳಕ ದಾರ
ನೂಲು ನೂಲು ನುಲಿದು ಕತ್ತರಿಸದಿರಲಂಟು
ನಾಣ್ಯದೊಳಿಳೆ ಬಿಂದಿಗೆಯೊಳೂರ
ಬೀದಿ ಬೀದಿಗಳಲುಂಡೆ ದಾರ
ಎಳೆ ಎಳೆ ಬಿಳಲಾಗಿ ಬೀಳುತ್ತಿದೆ
ದ್ವೇಷದೇಟಿನ ಭಾರ!
ಮೈಮನಗಳರ್ಥೈಸುವಷ್ಟು ಪಕ್ವತೀರ
ಶಿರದೂರ್ಧ್ವದ ಜೀವತಾವಿಗೆ
ಪಂಚೇಂದ್ರಿಯಗಳ ಬಿಗಿದ ಮೆದುಳ ದಾರ
ಕಾಮ ಪ್ರೇಮದ ನಡುವಪಾರ್ಥಗೊಂಡು ದೂರ!
ಗೂಟದಾರ ಜಗದೊಗಟ ತೂಗೆಳೆದಿವೆ
ತೂಗುತ್ತಲೇ ಇವೆ ಬೆರಳೆಳೆದು
ಲೋಕದೋಟ ನರಕ ಸನಿಹ
ಗಟ್ಟಿಯಾಗುತ್ತಿವೆ, ತನ್ನಿರುವಿಕೆ ಮೆರೆಯುವಿಕೆ
ಮಂಡಿ ಮೂಳೆ ತೊಡೆಗೆ ಬೆಸೆದ ದಾರ
ಒಳಕಲ್ಲಂಗ ಘರ್ಷಣೆಗೆ
ಜಗತೂಗೋ ಜೀವೋಗಮ ಸೂಕ್ಷ್ಮ ದಾರ
ಕಣ ಕಣ ನಡುವೆ ಸೂಜಿ ಮೊನೆಯಂಧ ದಾರ
ದಾರದೊಳ ಶ್ರಮ ಜಗ ತೂಗೋ ಘನ ವಿಸ್ಮಯ!
ದಾರಗಳು ಅಥವಾ ಸೂತ್ರಗಳು ಬಂಧಿಸಿವೆ ನಮ್ಮನೇ.
ReplyDelete"ಮಂಡಿ ಮೂಳೆ ತೊಡೆಗೆ ಬೆಸೆದ ದಾರ
ಕಣ ಕಣ ನಡುವೆ ಸೂಜಿ ಮೊನೆ ಅಂಧ ದಾರ
ದಾರದೊಳ ಶ್ರಮ ಜಗತೂಗೋ ಘನ ವಿಸ್ಮಯ! "
ವಾಹ್...