ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Sunday, 1 April 2012

ನಮ್ಮ ಮನೆಯ ಸುತ್ತಲಿನ ಸಾವುಗಳು...

ಆತ್ಮೀಯನಪಘಾತದಾಘಾತಕ್ಕೆ ಓಡುವಾಗ
ಕಾಲಡಿ ಸಿಕ್ಕು ಚರಕ್ಕೆಂದು ಸತ್ತ ಜಿರಲೆಗಳು
ಚಪ್ಪಲಿ ಸಂಧಿಯ ಇರುವೆಗಳು
ಹೆಬ್ಬೆರಳು ಕುಕ್ಕಿ ಬಡಿಸಿಕೊಂಡ ಚೇಳು
ಕೆನ್ನೆ ಕಚ್ಚಿದ ಸೊಳ್ಳೆಯ ಧಾರುಣವೆನಿಸಿಕೊಳ್ಳದ ಮರಣ
ಮೈಮೇಲೆ ಒಸರಾಡಿದ ಕ್ರಿಮಿಕೀಟದಂತ್ಯ
ಲೆಕ್ಕಕ್ಕೆ ಸಿಗದು, ಆ ಜೀವದ ಬೆಲೆ ಶೂನ್ಯದಿಂದೇಳದು

ಅದೇ ಇರುವೆ
ಗುರುತ್ವಾಕರ್ಷಣಕ್ಕೆ ತಳ ತಿರುಗಿಸಿ
ಎದುರಿಗೆ ಬಂದಿರುವೆಗೆ ಮೀಸೆ ಸೋಕಿಸಿ
ಅನ್ನದಗುಳನ್ನುರುಳಿಸಿಕೊಂಡು ನಡೆವಾಗ
ಅದರ ಬದುಕಿನ ಸಾರ್ಥಕ್ಯಕ್ಕೆ ಮನ ಸೋಲುತ್ತದೆ

ಒಂದೆರಡು ಕಾಲು ಮುರಿದರೂ
ಉತ್ಸಾಹ ಕುಗ್ಗಿಸಿಕೊಳ್ಳದೇ
ನುಣುಪು ರಸ್ತೆಯಲ್ಲೂ ಟೈರಿನೇಟಿಗೆ ಸಿಗದೆ
ಅದೆಬ್ಬಿಸಿದ ಗಾಳಿ ಧೂಳಿಗೆ ಮೈಯೊಡ್ಡಿ
ರಸ್ತೆ ನೀರಿನಲ್ಲೀಜಿ, ಹಸಿ ಹುಲ್ಲಿನಲ್ಲಿ
ನಡೆವಾಗ ಜಿರಲೆ, ಭಾಗಿಸುತ್ತೇನೆ ತಲೆ

ಹೀಗೆ ಒಂದಷ್ಟು ಸಾವುಗಳಿವೆ
ಗಣಿತಕ್ಕೂ ಅಗಣಿತ
ಕಪ್ಪೆ ನುಂಗಲು ಬಂದ ಹಾವು
ದೊಣ್ಣೆಯೇಟಿನಲ್ಲಿ ಪಡೆದುಕೊಂಡಿತು ಸಾವು
ಹೆದರಿ ಬಿಲ ಸೇರಿಕೊಂಡಿತು ಅಲ್ಲೇ ಇದ್ದಿಲಿ
ದೀಪ ಉರಿಸಲು ಹರಿಸಿಕೊಂಡ ವಿದ್ಯುತ್
ನುಂಗಿಕೊಂಡಿತ್ತು ಬಾವಲಿ
ಹಾವು ಕಪ್ಪೆ ಕೊಂದಿದ್ದರೆ ನಿಯಮ
ಹೊಟ್ಟೆಪಾಡು, ಸಮತೋಲನ, ಪ್ರತಿನಿಯಮ
ಹಾವೇ ಸತ್ತದ್ದು ಉಳಿವಿಗಾಗಿನ ಹೋರಾಟವೂ ಅಲ್ಲ
ಹೋರಾಟಕ್ಕೆ ಹಾವು ಬಂದಿರಲಿಲ್ಲ

ಒಂದಿನಿತು ಜೀವವಾದ ಇರುವೆಯಲ್ಲೂ
ಜೀವ ಚೈತನ್ಯವಿದೆ, ಒಂದಂಕುರವಿದೆ
ಅನ್ನ ತಿನ್ನುವಾಸೆ ಇದೆ
ತಿಂದದ್ದು ಜೀರ್ಣಿಸಿ, ಭೂಮಿಗರ್ಪಿಸಿ
ಮಿಲನ ಮೈಥುನಕ್ಕೆ ಸಂಭ್ರಮಿಸಿ
ಹೆರುವ ಶಕ್ತಿಯಿದೆ, ಹೊರುವ ಯುಕ್ತಿಯಿದೆ
ಕಾಲಿಲ್ಲದಿದ್ದರು ನಡೆವ ಹಾವಿಗೆ
ಅದರದೇ ಬದುಕಿದೆ, ಭಾವನೆಯಿದೆ
ಮೊಟ್ಟೆ ಮೇಲೆ ಕುಳಿತು ಮರಿಗೆ ಕಾವ ಮಮತೆಯಿದೆ
ಜೀವಕೋಟಿ ಪಟ್ಟಿಯಲ್ಲದರ ಹೆಸರಿದೆ
ಅದಕ್ಕೂ ವೃತ್ತವಿದೆ, ವೃತ್ತಾಂತವಿದೆ

ಮಾತು ಬಲ್ಲ ಮನುಜ ನಿಯಮ ಮುರಿದು
ಚೂರು ಬುದ್ಧಿವಂತಿಕೆಗೆ ಮೆರೆದು
ಅವುಗಳ ಸಾವನ್ನು ಹಾದರಕ್ಕೆ ಹುಟ್ಟಿಸಿಬಿಟ್ಟ

3 comments:

  1. ಹೊಸ ರೀತಿಯ ಸಾವುಗಳ ವೃತ್ತಾಂತ ಚೆನ್ನಾಗಿದೆ.

    ಕಡೆಯ ಚರಣವು ಮನುಜನ ಸ್ವಾರ್ಥದ ಅವಲೋಕನ.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  2. ಬೇಸರಿಸಿಕೊಳ್ಳುವ ಅಗತ್ಯವಿಲ್ಲ ಮೋಹನಣ್ಣ. ಆದರೆ ನಿಮ್ಮ ಕವಿತೆಗೆ ಹೊಸತೊಂದು ಆಯಾಮ ಸಿಕ್ಕಿದ್ದು ಇಲ್ಲಿ ಗೋಚರಿಸುತ್ತಿದೆ. ಬಲವಂತಕ್ಕೆ ಮನಸ್ಸು ಒಪ್ಪಿಸಿಕೊಳ್ಳುವುದು ಅನಿವಾರ್ಯ .ಎಂದರೆ, ನಮ್ಮತನ ಕಳೆದುಕೊಳ್ಳಲಿಲ್ಲ. ಎಲ್ಲದಕ್ಕೂ ಉತ್ತರವು೦ಟು. ಅದು ನಿಧಾನ. ಕವಿತೆ ಸ್ಪಷ್ಟವಾಗಿ ಆಳದಲ್ಲಿ ಇಕ್ಕಳಕ್ಕೆ ಸಿಕ್ಕಿಸುತ್ತದೆ. ಅದೇ ರೀತಿ ಸಾ೦ತ್ವನವು ನೀಡುತ್ತದೆ. ತುಂಬಾ ಚೆಂದದ ಮತ್ತು ಗಟ್ಟಿಯಾಗಿ ಕೂಗಲೆತ್ನಿಸುವ ಕವಿತೆ.

    ReplyDelete
  3. ಒಂದು ಸಶಕ್ತವಾದ ಪ್ರತಿಮೆ ಮೋಹನಣ್ಣ.. ನಿಮ್ಮ ಇತ್ತೀಚೆಗಿನ ಕವಿತೆಗಳು ಓದಲು ಸಿಕ್ಕಿರಲಿಲ್ಲ.. ಈ ಕವಿತೆ ತುಂಬಾ ಚೆನ್ನಾಗಿ ಹರಡಿ ನಿಂತಿದೆ.. ನಿಮ್ಮ ಭಾಷೆ ಕವಿತೆಯ ಮೆರುಗನ್ನು ಹೆಚ್ಚಿಸಿದೆ.. ತನ್ನ ಹಾದರಕ್ಕೆ ಜೀವಗಳನ್ನು ವಸ್ತುಗಳಂತೆ ಬಳಸಿಕೊಳ್ಳುವ ಮನುಷ್ಯನ ನೀಚತನವನ್ನು ನಿಮ್ಮದೇ ಶೈಲಿಯಲ್ಲಿ ಅಣಕಿಸಿದ್ದೀರಿ.. ಮನದಲ್ಲಿ ಕುದಿವ ಬೇಗೆಗೆ ಸಾಂತ್ವಾನ ಹೇಳಿಕೊಳ್ಳುವ ಪ್ರಯತ್ನ ಈ ಕವಿತೆ, ಚೆನ್ನಾಗಿದೆ..

    ReplyDelete