ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Thursday, 12 April 2012

ಕಣ್ಣಾಲಿಗಳು ತೇವವಾಗುತ್ತವೆ....

ಮಕ್ಕಳಾಗಿರಲು ಚಂದ
ಮಕ್ಕಳಾಟ ಚಂದ
ಎಲ್ಲಾ ಮರೆತು, ಸಂತಸದ ಅಲೆಯಲ್ಲಿ ತೇಲುವುದು ಇನ್ನೂ ಚಂದ
ಬಾಲ್ಯಕ್ಕೆ ಹೆಚ್ಚು ಆಯಸ್ಸಿರಲಿ...
ಮಕ್ಕಳ ದಿನಾಚರಣೆಯ ಶುಭಾಶಯಗಳು...

ಮಕ್ಕಳಾಗಿರುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಜವಾಬ್ದಾರಿಯಿಲ್ಲದ ವಯಸ್ಸು ಅದು. ನಾವು ಏನೇ ಮಾಡಿದರೂ ಮುಗ್ದತೆಯ ಹೆಸರಿನಲ್ಲಿ ಕ್ಷಮಿಸಿ ಬಿಡುತ್ತಾರೆ. ಲೋಕದ ಡೊಂಕು, ಮಾನಸಿಕ ಬೇಗುದಿ, ದೇಶ ವಿದೇಶಗಳ ಕಷ್ಟ ನಿಷ್ಠುರಗಳ ಗೋಜಿಲ್ಲದೇ ನಮ್ಮದೇ ಲೋಕದಲ್ಲಿ ನಾವು ತೇಲುತ್ತಿರುತ್ತೇವೆ. ಗೆಳೆಯರೆಲ್ಲ ಕೂಡಿ ಬೀದಿಯಲ್ಲಿ ಆಡುತ್ತಿದ್ದ ಗೋಲಿ ಆಟ, ಅಂದರ್ ಹೇಳಿ ನಂತರ ಬಾಹರ್ ಎಂದು ಕತ್ತಿನಪಟ್ಟಿ ಹಿಡಿದುಕೊಂಡು ಜಗಳ ಕಾಯುವುದು. ಊರಿನಾಚೆಯ ಹಳ್ಳಕ್ಕೆ ಹೋಗಿ ಸುಂದರ ಬಚ್ಚೆಗಳನ್ನು ಆಯ್ದುಕೊಂಡು ಆಡುತ್ತಿದ್ದ ಟಿಕ್ಕಿ ಆಟ. ಊರೆಲ್ಲ ಸುತ್ತಿ ಬೆಂಕಿಪೊಟ್ಟಣಗಳನ್ನು ಆಯ್ದು ಟಿಕ್ಕಿಗಳನ್ನು ಕೂಡಿಸಿಕೊಳ್ಳುತ್ತಿದ್ದೆವು. ಬಣ್ಣ ಬಣ್ಣದ ಟಿಕ್ಕಿಗಳಿದ್ದರೆ ಏನೋ ಒಂದು ರೀತಿಯ ಗೌರವ. ಸಾಯಂಕಾಲವಾದಂತೆ ಕಳ್ಳ ಪೋಲೀಸ್ ಆಟ. ಒಂದಿಬ್ಬರು ಪೋಲೀಸ್ ಪಾತ್ರದಲ್ಲಿದ್ದರೆ ಉಳಿದವರೆಲ್ಲ ಕಳ್ಳರು. ಊರಿನ ಮೂಲೆ ಮೂಲೆಯಲ್ಲೆಲ್ಲ ಬಚ್ಚಿಟ್ಟುಕೊಳ್ಳುವ ಕಳ್ಳರನ್ನು ಪೋಲೀಸರು ಹುಡುಕಿ ತರಬೇಕು. ಸುತ್ತು ಸುಸ್ತಾದರೂ ಪೋಲೀಸಾದವನಿಗೆ ಏನೋ ಮರ್ಯಾದೆ. ಪ್ರತಿದಿನ ಶಾಲೆಯಿಂದ ಬಂದ ತಕ್ಷಣ ಕ್ರಿಕ್ಕೆಟ್ ಆಟ. ನಮ್ಮೂರಿನಲ್ಲಿ ಕ್ರಿಕ್ಕೆಟ್ ಮೈದಾನವಿರಲಿಲ್ಲ. ದೊಡ್ಡ ಕೆರೆಯನ್ನೇ ಆಟದ ಮೈದಾನ ಮಾಡಿಕೊಂಡಿದ್ದೆವು. ಯಾವ ಅಂತರಾಷ್ಟ್ರೀಯ ಮೈದಾನಕ್ಕೂ ಕಡಿಮೆ ಇರಲಿಲ್ಲ. ಕೆರೆ ತುಂಬಿಕೊಂಡರೆ ಅವರಿವರ ಹೊಲದಲ್ಲಿ ಆಡುವುದು, ಸುಮ್ಮನೆ ಹೊಡೆಸಿಕೊಳ್ಳುವುದು. ಮನೆಗೆ ಬಂದರೆ ಮತ್ತೇ ಬೈಗುಳ ಹೊಡೆತ. ಆಗಾಗ ಪಕ್ಕದೂರಿಗೆ ಕ್ರಿಕ್ಕೆಟ್ ಪಂದ್ಯಕ್ಕೆ ಹೋಗುತ್ತಿದ್ದೆವು. ಸೋಲು ಗೆಲುವು ಗೊತ್ತೇ ಆಗುತ್ತಿರಲಿಲ್ಲ. ಬರೀ ಜಗಳ. ಔಟಾದರೆ ಔಟಿಲ್ಲ, ಔಟಾಗದಿದ್ದರೆ ಔಟು ಎಂದು ಜಗಳ ಕಾದು ಬರುತ್ತಿದ್ದೆವು. ಆ ಗೆಳೆಯರೆಲ್ಲ ಓದಲು ನಮ್ಮ ಹಳ್ಳಿಗೇ ಬರುತ್ತಿದ್ದರು. ಬಂದಾಗ ಗೆಳೆಯರೆಲ್ಲ ಕೂಡಿಕೊಂಡು ಸೇಡು ತೀರಿಸಿಕೊಳ್ಳುವುದು ಮತ್ತೆ ಅವರು ನಮ್ಮನ್ನು ಅವರೂರಿನಲ್ಲಿ ಕಾಯುವುದು ಇವೇ ಆಗಿಹೋಗುತ್ತಿತ್ತು. ನಮ್ಮ ಹಳ್ಳಿಯಲ್ಲಿ ಹುಲಿ ಮನೆ ಆಟ ಎಂಬ ಬುದ್ಧಿವಂತಿಕೆಯ ಆಟವೊಂದಿದೆ. ಮೂರು ದೊಡ್ಡ ಕಲ್ಲುಗಳು ಹುಲಿಗಳಾಗಿದ್ದರೆ, ಇಪ್ಪತ್ತು ಚಿಕ್ಕ ಕಲ್ಲುಗಳು ಹಸುಗಳಂತೆ, ಬಳಪದಲ್ಲಿ ಬರೆದ ಒಂದು ಹಂದರದಲ್ಲಿ ಹಸುಗಳು ಹುಲಿಯಿಂದ ತಪ್ಪಿಸಿಕೊಳ್ಳಬೇಕು. ಅತೀ ಬುದ್ಧಿವಂತಿಕೆಯ ಆಟ. ನಾವೆಲ್ಲ ಆ ಆಟದಲ್ಲಿ ಊರಿಗೆ ಪ್ರಸಿದ್ಧಿ. ಘಟಾನುಘಟಿಗಳನ್ನೇ ಸೋಲಿಸಿಬಿಡುತ್ತಿದ್ದೆವು. ಡಿಸೆಂಬರ್ ಬಂತೆಂದೆರೆ ಅವರಿವರ ಹೊಲಗಳಿಗೆ ನುಗ್ಗಿ ಹಸಿ ಅವರೇಕಾಯಿ ಕಿತ್ತುಕೊಂಡು ಮಡಕೆಯಲ್ಲಿ ಬೇಯಿಸಿ ತಿನ್ನುತ್ತಿದ್ದೆವು. ಎರಡು ರೂ ಗಾಗಿ ಬೆಳಗ್ಗೆ ಐದರಿಂದ ಒಂಬತ್ತು ಘಂಟೆಯವರೆವಿಗೂ ಅವರೆಕಾಯಿ ಬಿಡಿಸುತ್ತಿದ್ದೆವು.a

ಒಬ್ಬರಿಗೊಬ್ಬರು ಆಪ್ತರಾಗಿ, ಮುಂಬರುವ ಕಷ್ಟಗಳ ಅರಿವಿಲ್ಲದೇ ನಾವು ಹೀಗೆಯೆ ಮಕ್ಕಳಾಗೇ ಇದ್ದಿದ್ದರೆ ಎಷ್ಟು ಚಂದವಲ್ಲವೇ?? ಈಗ ನೋಡಿ.. ತಲೆ ಮೇಲೆ ಹೊತ್ತುಕೊಳ್ಳಲಾಗದಷ್ಟು ಜವಾಬ್ದಾರಿ, ಸಾಲಗಾರರ ಕಾಟ, ಬಡ್ಡಿ ಕೂಡಿಸಲು ಹರಸಾಹಸ, ಎಲ್ಲೇ ಕೆಲಸಕ್ಕೆ ಸೇರಿಕೊಂಡರು ಹೊಂದಾಣಿಕೆ ಇಲ್ಲದೇ ಮಾನಸಿಕವಾಗಿ ಕುಗ್ಗಿಹೋಗುತ್ತೇವೆ, ಬಾಸ್ ನಮ್ಮನ್ನು ಅರ್ಥ ಮಾಡಿಕೊಳ್ಳುವುದಿಲ್ಲ, ಲಾಭವೇ ಮುಖ್ಯವೆನ್ನುವ ಆತನ ಧೋರಣೆಗೆ ನಾವು ಒಗ್ಗಿಕೊಳ್ಳಲಾಲಗುವುದಿಲ್ಲ. ಅರ್ಧ ಘಂಟೆ ಕುಳಿತು ಸಂಭ್ರಮಿಸಲಾಗುವುದಿಲ್ಲ. ನಾಗಾಲೋಟದ ಪ್ರಪಂಚ ಎಲ್ಲವನ್ನು ಕಿತ್ತುಕೊಂಡಿತು. ಒಟ್ಟಿಗೆ ಬೆಳೆದ ಗೆಳೆಯರು ಅನಿವಾರ್ಯತೆಯ ಸೋಗಿನಲ್ಲಿ ಅಗಲಿಹೋದರು. ದಿನವೆಲ್ಲ ಜೊತೆ ಇದ್ದು ಕೆರೆ ಏರಿ ಸುತ್ತಿ ಬೀದಿ ಬೀದಿ ಅಲೆಯುತ್ತಿದ್ದವರಿಗೆ ಎರಡು ನಿಮಿಷ ಮಾತನಾಡುವ ವ್ಯವಧಾನವಿಲ್ಲ. ಮೊಬೈಲ್ ಕಂಪ್ಯೂಟರ್ ಗಳು ಭಾವನಾತ್ಮಕ ಜೀವನವನ್ನು ಕಿತ್ತುಕೊಂಡವು. ಅಪರೂಪಕ್ಕೆ ಸಿಕ್ಕ ಗೆಳೆಯರು ಹೆಂಡದಂಗಡಿಗೆ ಕರೆಯುತ್ತಾರೆ. ಕೆಲವರಂತು ಪ್ರೇಮಪಾಶಕ್ಕೆ ಬಿದ್ದು ನೇಣಿನಲ್ಲಿ ಸತ್ತು ಕಾಣದ ಲೋಕಕ್ಕೆ ಹೊರಟುಹೋದರು. ಮತ್ತೆ ಕೆಲವರು ಜಾತಿಯೆಂಬ ಗೋಡೆಗೆ ಹೆದರಿ ಪ್ರೀತಿಸಿದವರೊಂದಿಗೆ ಪಕ್ಕದ ತಮಿಳುನಾಡು ಸೇರಿಕೊಂಡರು. ಅವರ ಹಾವಭಾವಗಳನ್ನು ಮರೆಯಲು ಎಂದೂ ಸಾಧ್ಯವಿಲ್ಲ. ಮತ್ತೆ ಕೆಲವರು ದಿನವೆಲ್ಲ ಹೆಂಡದ ನಿಶೆಯಲ್ಲಿರುತ್ತಾರೆ. ಬಸ್ ನಿಂದ ಹೆಜ್ಜೆ ನೆಲದ ಮೇಲಿಟ್ಟರೆ ಸಾಕು ಕಾಲಿಗೆ ಸಿಗುತ್ತಾರೆ. ಒಮ್ಮೊಮ್ಮೆ ಎಲ್ಲವನ್ನು ಪಡೆದುಕೊಂಡಿದ್ದೇವೆ ಎಂದೆನಿಸಿದರೂ ಬಾಲ್ಯವನ್ನು ಮೆಲುಕು ಹಾಕಿದಾಗ ಕಳೆದುಕೊಂಡದ್ದೇ ಹೆಚ್ಚಾಗಿ ಕಾಣುತ್ತದೆ. ಈಗಲೂ ಇಲ್ಲಿಯ ಮಕ್ಕಳೊಂದಿಗೆ ಕ್ರಿಕ್ಕೆಟ್ ಆಡುವಾಗ ಹಳೆಯದೆಲ್ಲಾ ನೆನಪಾಗಿ ಕಣ್ಣಾಲಿಗಳು ತೇವವಾಗುತ್ತದೆ.

No comments:

Post a Comment