ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Friday, 27 April 2012

ಅಮ್ಮ...


ಜೇಬಿಗಿಳಿಸಿಕೊಂಡಿದ್ದೇನೆ ಇರುಳ ತೆರೆಬೆಳಕನ್ನು
ಪರಿ ಪರಿಯಾಗಿ ಕಾಡುವ
ದಿಗಂತದಾಚೆಯ ನಕ್ಷತ್ರ ಸುರುಳಿಯ
ಮಿಂಚಿನ ಸಂಚನ್ನು ಮುರಿದಿಟ್ಟುಕೊಂಡಿದ್ದೇನೆ
ಅಮ್ಮ, ನಿನ್ನನ್ನು ಧ್ಯಾನಿಸಿ
ಕಾದಿದ್ದೇನೆ ಪ್ರೇಮ ಮಲ್ಲಿಗೆ ಪೋಣಿಸಿ
ಬಾ ಬೇಗ ಮಗನುಡುಗೊರೆಗೆ ಬೆಳಕ ಹರಡು

ನೀ ಅಂದು ಯಮಕಿಂಕರಶಯನದಲ್ಲಿ
ಮರಣ ವಿಮಾನ ನಿಷ್ಕರುಣೆಯಲ್ಲಿ
ಅಳುವ ನಭಗಳ ನಡುವೆ ತೇಲಿದಾಗ
ಅನಾಥ ಶಿಶು ಅನಾಥವಾಗೇ ಉಳಿದಾತ್ಮ ಹೊತ್ತು
ಕಣ್ಬಿಟ್ಟಿದ್ದೆ ನಾ, ಮನ ಬಿಚ್ಚಿರಲಿಲ್ಲ
ಇಂದು ಮನ ಗರಿಬಿಚ್ಚಿ ಸ್ವಚ್ಚಂದ ಹಾರಾಟಕ್ಕೆ
ಧ್ಯಾನಿಸಿದ್ದೇನೆ ಚೆಲ್ಲಿ ಬಣ್ಣಗಳ ಕಣ್ಣರಳಿಸಿ
ಆಕಾಶ ಮಡಚಿ ಭೂಮಿಯೊತ್ತು ನಿಂತಿದ್ಧೇನೆ

ನೀ ಬಸಿದು ಕೊಟ್ಟ ಹನಿ ಹನಿ ರಕ್ತ
ರಂಧ್ರ ಮೂಡಿಸಿ ಮೂಳೆ ಸಿಕ್ಕಿಸಿ ಒಣಹಾಕಿದ
ಬಸಿರೊಳು ಮೊಳೆಸಿ ಬೆಳೆಸಿದ ಮಾಂಸ ಮುದ್ದೆ
ಒಡೆದುಕೊಳ್ಳುವ ಖಾಲಿ ಉಸಿರ ಚೀಲದ ಕೆಳಗೆ
ಸುಮ್ಮನೆ ಬಡಿದುಕೊಂಡ ಹೃದಯಯಂತ್ರ
ನಿನ್ನನ್ನು ಕಾಣದೇ ಲೋಕ ಕಂಡ ವ್ಯರ್ಥ ಕಂಗಳು
ತೂರಿ ಬೆಂದುಹೋದ ಹಾಳು ಸ್ಮಶಾಣ ಮನಸ್ಸು
ಬರಡಾಗಿ ಬರಿದಾಗಿ ಕಾದಿವೆ ನೆಲ ಬಿರಿಸಿ
ಉದ್ವಿಗ್ನ ಪರಿಸ್ಥಿತಿ ನನ್ನೆದೆಯಲ್ಲೀಗ, ಬಾ ಬೇಗ

ನಿನ್ನನ್ನು ಧ್ಯಾನಿಸಿ, ಇರುಳು ಮುತ್ತಿಕೊಂಡಂತೆ
ಮಿಂಚನ್ನು ಮುರಿಯುತ್ತೇನೆ
ಮೋಡಗೋಡೆ ನೆಗೆದು ನಿನ್ನನ್ನು ಹುಡುಕಿ ಹುಡುಕಿ
ಚಂದ್ರನ ಜೇಬಿಗಿಳಿಸಿ ನಕ್ಷತ್ರ ಆಯ್ದು ಮಲ್ಲಿಗೆ ಚೆಲ್ಲಿ
ಉಕ್ಕಿದ ಸಮುದ್ರವನ್ನೇ ಮೊಗೆಯುತ್ತೇನೆ
ಮೊಗೆ ಮೊಗೆದಂತೆ ನಿನ್ನ ಮುಖ ಮಾಸಿ
ದರಿದ್ರ ಕಣ್ಣುಗಳಿಂದ ಅಳುತ್ತೇನೆ, ಒರೆಸಿ ಒರೆಸಿ
ಸತ್ಯವನ್ನು ಅಗೆದು ನೋವನ್ನು ಬಗೆಯುತ್ತೇನೆ
ಬಗೆ ಬಗೆದು ನನ್ನನ್ನು ಹೊತ್ತು ಹೆತ್ತು ಮಾಯವಾದ
ಆ ಗರ್ಭಸ್ಥಾನಕ್ಕೆ ತಡಕಾಡುತ್ತೇನೆ ತೊಡರಿ ತೊಡರಿ
ಊರ ತಾಯಂದಿರನ್ನೆಲ್ಲಾ ಅಣಕಿಸಿ ಬಂದಿದ್ದೇನೆ, ಬಾ ಬೇಗ

3 comments:

  1. ಪ್ರತಿಮೆಗಳೇ ಮೈನವಿರೇಳಿಸುವುದು ಪದ ಪದಗಳಲ್ಲಿ ಮೂರ್ತಿವೆತ್ತ ತಾಯಿಗೆ. ಕವಿತೆ ಅನ್ನುವ ಹೆಸರಿನಲ್ಲಿ ನಾನೂ ಕೆಲವು ಅಮೂರ್ತ ಪದಗಳನ್ನು ಬರೆಯುತ್ತೇನೆ. ನಿಮ್ಮೆಲ್ಲರ ಸಾಲುಗಳನ್ನು ಓದುವಾಗ ಈಗಲೂ ಸೂಜಿಗವೆನಿಸುವುದು ಈ ಭಾವಗಳು ಹೇಗೆ ಉದ್ಭವಿಸುವುದು?. ಬರೆಯುವ ರಚ್ಚೆಗೆ ಬಿದ್ದು ಎಲ್ಲರೂ ಬರೆಯುವರು. ಅದು ಅನುಭೂತಿ. ಕೆಲವು ಶಕ್ತಿಗಳು ಬರೆಸುವುದು ಕೆಲ ಕ್ಷಣಗಳಲ್ಲಿ ಬರೆಸುವುದು. ಅದು ದಿವ್ಯಾನುಭೂತಿ. ಅದಕ್ಕೆ ಭಗವಂತನ ದಯೆ ಬೇಕು. ಬರೆಯುವ ವಿಷಯ ವಸ್ತು ನಮ್ಮೊಳಗೆ ಆರ್ವಿಭವಿಸಬೇಕು. ಅದನ್ನು ಇಲ್ಲಿ ನೋಡುತ್ತಿದ್ದೇನೆ. ನೀವು ಅಜ್ಞಾತ ಹುಟ್ಟು ಕವಿಗಳು. ಬೆಳಕಿಗೆ ಬರಬೇಕು.ಸಮಾಜದ ಮುಖ್ಯವಾಹಿನಿಯಲ್ಲಿ ಅದಕ್ಕೆ ದಾರಿಗಳನ್ನು ಹುಡುಕಬೇಕು. ದಾರಿ ಸಿಗಬಹುದು.ಇದು ಸತ್ಯ.

    ReplyDelete
  2. ನೀ ಬಸಿದು ಕೊಟ್ಟ ಹನಿ ಹನಿ ರಕ್ತ
    ರಂಧ್ರ ಮೂಡಿಸಿ ಮೂಳೆ ಸಿಕ್ಕಿಸಿ ಒಣಹಾಕಿದ
    ಬಸಿರೊಳು ಮೊಳೆಸಿ ಬೆಳೆಸಿದ ಮಾಂಸ ಮುದ್ದೆ
    ಒಡೆದುಕೊಳ್ಳುವ ಖಾಲಿ ಉಸಿರ ಚೀಲದ ಕೆಳಗೆ
    ಸುಮ್ಮನೆ ಬಡಿದುಕೊಂಡ ಹೃದಯಯಂತ್ರ
    ನಿನ್ನನ್ನು ಕಾಣದೇ ಲೋಕ ಕಂಡ ವ್ಯರ್ಥ ಕಂಗಳು
    ತೂರಿ ಬೆಂದುಹೋದ ಹಾಳು ಸ್ಮಶಾಣ ಮನಸ್ಸು... ಎಂಥಾ ಸಾಲುಗಳು..
    ಉಪ್ಪಿಗಿಂತ ರುಚಿಯಿಲ್ಲ.ತಾಯಿಗಿಂತ ದೇವರಿಲ್ಲ ಎಂದು ಮಾತು. ಅಂತ ದೇವರನ್ನೇ ಕಳೆದುಕೊಂಡು ಜೀವವಿರೋ ದೆವ್ವಗಳ ನಡುವಿನ ಬದುಕು ದುರಂತ.. ಭಾವಪೂರ್ಣವಾಗಿದೆ ಕವನ ಮೋಹನಣ್ಣ :-)

    ReplyDelete
  3. ಅಮ್ಮಾ ಅಡುಗೆ ಮಾಡುತ್ತಿದ್ದಾಳೆ ಆದರೂ ಈ ಕವಿತೆ ಓದುವ ಧೈರ್ಯ ಮಾಡಿದೆ..! ಓದುತ್ತಾ ಓದುತ್ತಾ ನಾನು ನನ್ನ ದೇಹವನ್ನು ಬಿಟ್ಟು ಅಮ್ಮನನ್ನು ಕಳೆದುಕೊಂಡವರ ದೇಹವನ್ನು ಸೇರಿ ಕಣ್ಣೀರಿಟ್ಟಿದ್ದೇನೆ.. ಅಮ್ಮನಿಲ್ಲದ ಯಾತನೆಯನ್ನು ಆಳದಿಂದ ಅನುಭವಿಸಿ ಆ ಮಕ್ಕಳ ಹೃದಯದಲ್ಲಿ ಅಡಗಿ ಕುಳಿತು, ಹೃದಯದಲ್ಲಿ ಕುದ್ದ ರಕ್ತದಿಂದ ಅದ್ದಿ ತೆಗೆದ ಕಲಾಕೃತಿಯನ್ನು ಮುಟ್ಟಿ ನೋಡಿ ಮತ್ತೆ ನನ್ನ ದೇಹದೊಳಗೆ ವಾಪಸ್ಸಾಗಿದ್ದೇನೆ.. ಮತ್ತೆ ಅಡುಗೆ ಮನೆ ಕಡೆ ನೋಡಿದೆ ಅಮ್ಮ ಅಡುಗೆ ಮಾಡುತ್ತಿದ್ದಾಳೆ..!

    ReplyDelete