ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Sunday 22 April 2012

ಜಾತಿ...

ನೂರು ಜಾತಿ ಕೊಡಲಿ ತಂದಿದ್ದೆ
ನೂರು ಜಾತಿ ಜನರೆದೆ ಬಗೆದೋದಲು
ಜಾತಿಯೊಳಗಷ್ಟು ಜಾತಿ
ಒಂದು ಕೊಡಲಿಯೊಳಗಷ್ಟು ಚಾಕುಗಳು

ಆಲದ ಮರದ ಕೆಳಗೆ
ನೂರು ಬಿಳಲು
ಒಂದೇ ಆಲ ಹಲವು ಜಡೆ
ಇಳ್ಳೆಯೂರಿದ ಬಾಳೆ
ಒಂದೇ ಬಾಳೆ ಹಲವು ಉತ್ಪತ್ತಿ

ಬೋಧನೆಗೆ ನಿಲುಕದ ಜನ
ಕೌಪಿನ ಹರಿದು ಎದೆ ತೆರೆದಿದ್ದರು
ಬಗೆ ಬಗೆಯಾಗಿ ಬಗೆದೆ
ಒಗೆದ ಕುಡುಗೋಲಿನಲ್ಲಿ
ಅಡರಿಹೋದ ಒಂದೇ ಬಣ್ಣದ ರಕ್ತ
ಜಾತಿಗೊಂದು ಬಣ್ಣವಾಗಿದ್ದರೆ ಸೈ
ಅದಾಗಿರಲಿಲ್ಲ, ಮೂಢತ್ವ ನಾಲಗೆ ತೆರೆದಿತ್ತು

ಕೈ ಹಾಕಿದರೆ ಬಡಿದುಕೊಳ್ಳುವೆದೆಯಿತ್ತು
ಒಂದೇ ಬಡಿತ
ಬಡಬಡ ಎಂದರೆ ಬಡಬಡ
ಲಬಲಬ ಎಂದರೆ ಲಬಲಬ
ಮೇಲದ್ದದ್ದೇನು? ಅದೇ ಉಸಿರ ಚೀಲ
ಕೆಳ ಬಸಿರೊಳಗೆ ಜಠರ
ಮೇದೋಜೀರಕ ಕರುಳು ಬೊಂಬು
ಮೇಲ್ಜಾತಿಯವರಲ್ಲಿ ಸಿಗಲಿಲ್ಲ ಕೊಂಬು

ಕೆಳಬಂದರೆ ಜಾತಿ ಹುಟ್ಟಿಸಿದವನ
ಹುಟ್ಟಿನಂಗವೂ ಒಂದೇ
ಮೆಟ್ಟುವ ಪಾದವೂ ಒಂದೆ
ಅವು ತವಕಿಸಿ ಗೈದದ್ದೂ ಒಂದೆ

ಅದೇ ಮೂಢತ್ವ ನಗುತ್ತಿತ್ತು
ನನ್ನ ಕೈ ನಿಧಿರ ರುಚಿಗೆ ನಾಲಗೆ ಚಾಚಿತ್ತು
ಅದೇ ಕುಡುಗೋಲಿನಿಂದ ನಾಲಗೆ ನೂರು ಭಾಗ
ಅವ ಹುಟ್ಟಿಸಿದ ಜಾತಿಗೊಂದೊಂದು ತುಣುಕಿರಲಿ...

2 comments:

  1. ಜಾತಿಗಳಿಗೊಂದಿಷ್ಟು ನವೀನ ಭಾಷ್ಯಗಳನ್ನು ಕಂಡಿದ್ದೇನೆ. ಜಾತಿ ಜಗತ್ತು ತೆರೆದುಕೊಂಡಂತೆ ಅಲ್ಲಿರುವ ಸ್ಪಷ್ಟ ಉದ್ದೇಶಗಳಿರುವ ಪ್ರಶ್ನೆಯನ್ನು ಕೇಳುತ್ತಿದ್ದೇನೆ.ಒಂದು ಉತ್ತಮ ಮತ್ತಷ್ಟು ಮತ್ತಷ್ಟು ಸೂಕ್ಷ್ಮತೆಗಳನ್ನು ತೆರೆದುಕೊಳ್ಳುವ ಕವಿತೆ. ಈ ಕೆಳಗಿನ ಸಾಲಂತೂ ನವೀನ ಭಾಷ್ಯಕೆ ತೆಗೆದುಕೊಳ್ಳುವ ನುಡಿಗಟ್ಟುಗಳು.
    ಕೆಳಬಂದರೆ ಜಾತಿ ಹುಟ್ಟಿಸಿದವನ
    ಹುಟ್ಟಿನಂಗವೂ ಒಂದೇ
    ಮೆಟ್ಟುವ ಪಾದವೂ ಒಂದೆ
    ಅವು ತವಕಿಸಿ ಗೈದದ್ದೂ ಒಂದೆ
    : ಇಷ್ಟೆ ಸಾಕು ಭರವಸೆಗಳು ಟಿಸಿಲೊಡೆದವು. ಆಳವಾಗಿ, ಮಾರ್ಮಿಕ ತಿವಿತಗಳು. ಪದಬಳಕೆ ಭಾವಕ್ಕೆ ತಕ್ಕಂತೆ ಸೆಟೆದು ನಿಂತಿವೆ. ಶುಭವಾಗಲಿ.

    ReplyDelete
  2. ಕವನದ ಆಶಯ ಚೆನ್ನಾಗಿದೆ. ಒಳ್ಳೆಯ ಕವನ ಮೋಹನ್ ಜೀ :)

    ReplyDelete