ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Tuesday, 4 June 2013

ಕನ್ನಡಿಯ ಬೆನ್ನು

ಕೊನೆಗೂ ರತ್ನವ್ವಳ ಬೇಸರ ಕಳೆಯಲು ಮುಂಜಾನೆಗೇ ಸುತ್ತಲೂ ಒಂದಷ್ಟು ಜನ ನೆರೆದರು. ಮೂಲೆಯಲ್ಲಿದ್ದ ಸಣ್ಣ ಮಣ್ಣಿನ ದೀಪದ ಬತ್ತಿಯು ಗಾಳಿಯ ರಭಸಕ್ಕೆ ಲಯಬದ್ಧವಾಗಿ ವಾಲಾಡುತ್ತಿತ್ತು.
‘ದೀಪದೊಳಗೆ ಎಣ್ಣೆಯಿಲ್ಲ, ಹರಳೆಣ್ಣೆ ಸುರಿಯಿರಿ, ವೈದಿಕ ಕಾರ್ಯ ಮುಗಿಯೋವರೆವಿಗೂ ದೀಪ ಆರುವಂತಿಲ್ಲ, ಬೇಕಾದರೆ ನಂತರವೂ’ – ಯಾರೋ.
‘ಕೆಂಚಿ, ನಿಂಗೆ ಎಷ್ಟು ಸಾರಿ ಹೇಳಿದ್ದೀನಿ, ದೀಪದ ತಾವೇ ಕಯ್ಯೆಣ್ಣೆ ಇಟ್ಕೋ ಅಂತ’ – ಅಜ್ಜಿ
‘ಎಲ್ಲರೂ ಕಣ್ಣು ಕಟ್ಟಿದಂತೆ ಆಡಬೇಡಿ, ಎಣ್ಣೆ ತುಂಬಿಸಿಟ್ಟಿದ್ದೇನೆ, ಮೊದಲು ಸರಿಯಾಗಿ ನೋಡಿ’ – ಕೆಂಚಿ
‘ಇಷ್ಟು ದೊಡ್ಡವಳಾಗಿ ಈ ರೀತಿ ಅಡ್ಡ ಮಾತಾಡೋದ್ರಿಂದಾನೆ ನಿಮ್ಮಪ್ಪ ತನ್ನ ಜೀವ ತಿಂದ್ಕೊಂಡ’ – ಯಾರೋ ಹೇಳಿದ ಈ ಮಾತಿಗೆ ಮತ್ಯಾರೋ ‘ಹೇ, ಎಂಥ ಮಾತು ಅಂತ ಆಡ್ತೀರಿ, ಆ ಪುಣ್ಯಾತ್ಮ ಹೋಗೋನು ಹೋದ, ಇದ್ದವರನ್ನ ಯಾಕೆ ಗುರಿ ಮಾಡ್ತೀರಿ? ಕರೆಂಟಿಲ್ಲದ ಕಾರಣ ಆ ದೀಪದೊಳಗೇನಿದೆ ಅನ್ನೋದು ಕಾಣ್ತಾ ಇಲ್ಲ, ಆ ಮುನುಷ್ಯನನ್ನ ಮತ್ತೆ ಮತ್ತೆ ನೆನಪಿಸಿ ಯಾಕೆ ರತ್ನವ್ವಳ ಕಣ್ಣಲ್ಲಿ ನೀರು ತರಿಸ್ತೀರಾ?’ ಎನ್ನುವಷ್ಟರಲ್ಲಿ ರತ್ನವ್ವಳÀ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು.

ಅಷ್ಟಕ್ಕೆ ಪುರೋಹಿತರು ಬಂದು ರತ್ನವ್ವನ ಮಗನನ್ನು ಕೂರಿಸಿಕೊಂಡು ಒಂದಷ್ಟು ಮಂತ್ರ, ಮತ್ತೊಂದು ಇನ್ನೊಂದು ಹೇಳಿಸಿ, ಆತ್ಮವನ್ನು ಸ್ವರ್ಗಕ್ಕೆ ಕಳುಹಿಸುವ ನೆಪದಲ್ಲಿ ಗೋಮೂತ್ರ, ಹಾಲು, ಮೊಸರು ಕುಡಿಸಿ, ಕಾಲಿಗೆ ಅಡ್ಡ ಬೀಳಿಸಿಕೊಂಡು, ಕಾಣಿಕೆ ಅದು ಇದು ಮಗದೊಂದು ಎಲ್ಲವನ್ನೂ ತುಂಬಿಕೊಂಡು ಪುಣ್ಯತೀರ್ಥವನ್ನು ಎಲ್ಲರ ಮೇಲೂ, ಗೋಡೆಯ ಮೇಲೂ ಚಿಮುಕಿಸಿ, ಬಾಟಲಿಗೆ ತುಂಬಿ ಹೋದರು. ಉಳಿದವರೆಲ್ಲಾ ಗಂಧದಕಡ್ಡಿ ಕರ್ಪೂರ ಹಚ್ಚಿ ‘ಸ್ವರ್ಗಕ್ಕೆ ಹೋಗು ಆತ್ಮವೇ’ ಎಂದು ಗರ್ಕರಾಗಿ ಮೂರು ಮೂರು ಬಾರಿ ಉಚ್ಚರಿಸಿ ಒಂದಷ್ಟು ಜನ ವಾಡಿಕೆಯಂತೆ ಕಣ್ಣೀರು ಸುರಿಸಿದರು. ಅಲ್ಲೇ ನಿಂತಿದ್ದ ಕೆಂಚಿಯ ಮುಖವಿನ್ನೂ ಕೆಂಪಾಗಿಯೇ ಇತ್ತು. ಕೋಪತಾಪಗಳ ಬೆಂಕಿಯಲ್ಲಿಯೇ ಬೇಯುವ ಆ ಹುಡುಗಿ ಇನ್ನೂ ಪೂಜೆ ಮಾಡಿರಲಿಲ್ಲ. ಮತ್ತೆ ಯಾರೋ ಬೈದರು. ಕೊನೆಗೂ ಬಂದು ಪೂಜೆ ಮಾಡಿ ‘ಅಪ್ಪಯ್ಯಾ’ ಎಂದು ಫೋಟೋ ನೋಡಿಕೊಂಡು ಕಣ್ಣೀರು ಸುರಿಸಿದಳು. ಸೀಮೆ ಹೆಂಚಿನ ಮೇಲೆ ಸುರಿದಿದ್ದ ಕೆಂಡದ ಮೇಲೆ ಬಿದ್ದು ಕರಗಿ ಹೊಗೆಯಾಡಿದ ಸಾಂಬ್ರಾಣಿ, ಧೂಪ ಹೊರಡಿಸಿದ ಘಮಲಿನ ಹೊಗೆ, ಹೂ ಪರಿಮಳ, ಘಂಟೆ ಜಾಗಟೆ ಶಬ್ದದೊಂದಿಗೆ ವಾತಾವರಣ ಮತ್ತೂ ಭಾವುಕವಾಯಿತು.
‘ಎಂಥ ಮನುಷ್ಯ ನಮ್ಮ ಬೀದಿಯಿಂದ ನಮ್ಮನ್ನ ಬಿಟ್ಟು ಹೊರಟುಹೋದನಪ್ಪ, ಆ ದೇವ್ರಿಗೆ ಕರುಣೆ ಅನ್ನೋದೆ ಇಲ್ವೇ?’ ಎಂದು ಸೀರೆ ಕೆದರಿಕೊಂಡು ಗೋಳಾಡಲು ಶುರುವಿಟ್ಟುಕೊಂಡ ರತ್ನವ್ವನ ಅತ್ತಿಗೆಯನ್ನು ನೆರೆಮನೆಯವಳು ತಬ್ಬಿಕೊಂಡು ಎದೆಗೆ ಒರಗಿಸಿಕೊಂಡು ಸಮಾಧಾನ ಮಾಡಲು ಹೋದವಳು ತಾನೂ ಅತ್ತುಬಿಟ್ಟಳು.

ಅಷ್ಟರಲ್ಲಿಯೇ ಹಿರಿಯರೆನಿಸಿಕೊಂಡ ಕೆಲವರು ಬಂದು ಗೋಳಾಡುತ್ತ ಸಮಯ ವ್ಯರ್ಥ ಮಾಡುತ್ತಿದ್ದ ಇವರನ್ನೆಲ್ಲಾ ತರಾಟೆಗೆ ತೆಗೆದುಕೊಂಡು ‘ಗಂಡಸರೆಲ್ಲಾ ಸಮಾಧಿ ಬಳಿ ನಡೆಯಿರಿ, ಯಮಗಂಡ ಕಾಲ ಬರುವ ಮುಂಚೆ ಎಡೆಗಿಡಬೇಕು, ಪೂಜೆ ಪುನಸ್ಕಾರ ಎಲ್ಲ ಮುಗಿಸಬೇಕು, ನಡೆಯಿರಿ’ ಎಂದವರೇ ಪೂಜೆ ಮತ್ತು ಎಡೆಗಿಡಬೇಕಾದ ಸಾಮಾಗ್ರಿಗಳನ್ನು ತುಂಬಿಕೊಂಡಿದ್ದ ಬುಟ್ಟಿಯನ್ನು ಹೊತ್ತುಕೊಂಡು, ಒಂದು ಚರಿಗೆ ನೀರನ್ನೂ ಹೆಗಲಿಗೇರಿಸಿಕೊಂಡು ಹೊರಟುಬಿಟ್ಟರು.

ಅತ್ತ ಸಮಾಧಿಯಲ್ಲಿ ಉಳಿದ ಕಾರ್ಯಗಳು ಸಾಗುತ್ತಿರಲು, ಇತ್ತ ನೆಂಟರಿಷ್ಟರು ಒಬ್ಬೊಬ್ಬರಾಗಿಯೇ ಬಂದು ಸೇರಿಕೊಂಡು ರತ್ನವ್ವನಿಗೆ ಸೀರೆ ಉಡಿಸಿ, ಹೂ ಮುಡಿಸಿ, ಹಣೆಯಷ್ಟಗಲ ಅರಿಶಿಣ ಕುಂಕುಮ ಉಜ್ಜಿ ತಬ್ಬಿಕೊಂಡು ಗೊಳೋ ಎಂದು ಅತ್ತರು. ಆ ಮನೆಯೊಳಗೆ ಹೆಜ್ಜೆ ಇಟ್ಟರೆ ಅಳುವ ಹೆಂಗಸರ ಹಿಂಡು ಹಿಂಡು. ದಿಂಡು ದಿಂಡು ಹೂವನ್ನು ಮುಡಿದುಕೊಂಡ ರತ್ನವ್ವನನ್ನು ನೋಡಿ ಬಿಕ್ಕುವ ಅನೇಕರು. ಕೆಲವರಂತೂ ಅಳು ಬರದಿದ್ದರೂ ತಮ್ಮ ಸೀರೆ ಸೆರಗನ್ನು ಕಣ್ಣಿಗೆ ಒರೆಸಿಕೊಳ್ಳುತ್ತ ತಾವೂ ಕೂಡ ಈ ದುಃಖದಲ್ಲಿ ಭಾಗಿಯಾಗುತ್ತಿದ್ದೇವೆ ಎಂಬುದನ್ನು ಖಾತ್ರಿ ಪಡಿಸುತ್ತಿದ್ದಾರೆ.

ಅಷ್ಟಕ್ಕೇ ಸಮಾಧಿ ಬಳಿ ತೆರೆಳಿದ್ದ ಗಂಡಸರೆಲ್ಲಾ ಮನೆಗೆ ಬರುವವರಿದ್ದರು. ಎಲ್ಲವನ್ನೂ ಸಿದ್ಧತೆ ಮಾಡಿಕೊಂಡಿದ್ದ ಹೆಂಗಸರು ರತ್ನವ್ವನನ್ನು ಹೊಳೆ ದಂಡೆಗೆ ಕರೆದುಕೊಂಡು ಹೋಗಿ ಬಳೆ ಹೊಡೆದು, ಕುಂಕುಮ ಅಳಿಸಿ, ತಾಳಿ ಕೀಳುವ ಶಾಸ್ತ್ರಕ್ಕೆ ಆಣಿಯಾದರು. ಹೊಳೆಯ ದಂಡೆಯೂ ಸ್ಮಶಾಣದಂತೆ ಆರ್ತನಾದಕ್ಕೆ ಸಾಕ್ಷಿಯಾಯಿತು.
‘ಅಯ್ಯೋ! ನಿನ್ನ ಹೆಂಡ್ತಿ ಮಕ್ಕಳನ್ನೆಲ್ಲಾ ಈ ರೀತಿ ಒಂಟಿ ಮಾಡಿ ಹೊರಟೋದಲ್ಲಪ್ಪ, ಈ ಮುಂಡೆಗೆ, ಮುಂಡೆ ಮಕ್ಕಳಿಗೆ ಇನ್ನಾರಪ್ಪ ಗತಿ? ನಿನ್ನ ಹೆಂಡ್ತಿಗೆ ಮುತ್ತೈದೆ ಸಾವಿನ ಪುಣ್ಯ ಕೊಡ್ದೆ, ಈ ರೀತಿ ಬಳೆ ಹೊಡೆದು, ತಾಳಿ ಕಿತ್ತು, ಕುಂಕುಮ ಅಳಿಸೋದು ನೋಡೋಕೆ ಮೇಲಕ್ಕೆ ಹೊರಟೋದಾ?’ - ಎದೆ ಬಡಿದುಕೊಂಡು ರತ್ನವ್ವನನ್ನು ಹಿಡಿದುಕೊಂಡು ಯಾರೋ ಅಳಲು ಪ್ರಾರಂಭಿಸಿದ್ದೇ ಕೆಲವರು ಬಿಕ್ಕಿ ಬಿಕ್ಕಿ ಇಲ್ಲೂ ಕಣ್ಣೀರಾದರು.

ಬಳೆ ಹೊಡೆದು, ತಾಳಿ ಕೀಳುವಾಗಲಂತೂ ಅಳುವ ರತ್ನವ್ವನ ಬೋಳು ಕೈ, ಕುತ್ತಿಗೆ, ನೊಸಲು ಕಂಡು ಎಲ್ಲರ ಅಳು ಮತ್ತೂ ಹೆಚ್ಚಾಯಿತು. ‘ಇನ್ಯಾರವ್ವ ನಿಂಗೆ ಗತಿ?’ ಎಂದು ಹೇಳಿ ತಬ್ಬಿಕೊಳ್ಳುತ್ತಿದ್ದರು. ‘ನಿನ್ ಜೀವನ ಹಿಂಗಾಗ್ಬಾರದಾಗಿತ್ತು ಕಣವ್ವ’ ಎಂದು ತಲೆ ನೇವರಿಸಿದರು. ‘ಮುಂದೆ ನಿನ್ ಕಷ್ಟ ಸುಖ ಯಾರ ಜೊತೆ ಹಂಚ್ಕೋತೀಯವ್ವ’ ಎಂದವರೇ ಸೆರಗಿನಿಂದ ತಮ್ಮ ಕಣ್ಣೀರು ಒರೆಸಿಕೊಂಡರು. ‘ನಿನ್ ಮನೆ ತೊಲೆನೇ ಬಿದ್ದು ಹೋಯ್ತಲ್ಲವ್ವ’ ಎಂದವರು ಕೆದರಿಕೊಂಡಿದ್ದ ಕೂದಲನ್ನು ಸರಿ ಮಾಡಿದರು. ‘ಏನೇ ಆಗ್ಲಿ ಗಂಡ ಇರಬೇಕು ಕಣವ್ವ’ ಎಂದ ಕೆಲವು ಗಂಡಸತ್ತ ಹೆಂಗಸರು ಕಣ್ಣಿನಲ್ಲಿ ನೀರು ತುಂಬಿಸಿಕೊಂಡು ರತ್ನವ್ವನ ಬಳಿ ನಿಂತುಕೊಂಡು ಸಮಾಧಾನಿಸಿದರು. ‘ಓದ್ತಾ ಇರೋ ನಿನ್ ಗಂಡು, ಮದ್ವೆ ಆಗ್ದೇ ಇರೋ ನಿನ್ ಹೆಣ್ಣಿಗೆ ಇನ್ಯಾರವ್ವ ಗತಿ?’ ಎಂದು ಕೆಲವರು ದೇವರಿಗೆ ಹಿಡಿಶಾಪ ಹಾಕಿದರು. ಅಲ್ಲಿಯೇ ಇದ್ದ ಕೆಂಚಿಯನ್ನು ತಬ್ಬಿಕೊಂಡ ಕೆಲವರು ‘ಅಯ್ಯೋ! ವರದಕ್ಷಿಣೆ ಕೊಟ್ಟು ನಿನ್ ಮದ್ವೆ, ಬಾಣಂತನ, ನಾಮಕರಣ ಮಾಡೋರು ಯಾರವ್ವ, ನಿಮ್ ಮನೆ ನಾಯ್ಕಾನೇ ಹೇಳ್ದೆ ಕೇಳ್ದೆ ಹೋಗ್ಬಿಟ್ಟನಲ್ಲವ್ವ’ ಎನ್ನುತ್ತ ಕಣ್ಣೀರಾದರು.

ಅಳುವ, ಅಳಿಸುವ, ಕೀಳುವ, ಹೊಡೆಯುವ ಶಾಸ್ತ್ರವೆಲ್ಲಾ ಮುಗಿದ ಬಳಿಕ ಮನೆಗೆ ಹಿಂದಿರುಗಿದವರೇ ಗಡತ್ತಾಗಿ ಮಾಂಸದೂಟ ಉಂಡು ಅವರವರ ಊರಿಗೆ ಎಲ್ಲರೂ ಕಾಲು ಕಿತ್ತರು. ತಡರಾತ್ರಿಗೆ ಫೋಟೋದ ಮುಂದೆ ನಿಂತು ಎಲ್ಲರೂ ಮರುಪೂಜೆ ಮಾಡಿ ಆತ್ಮವನ್ನು ವೈಕುಂಠಕ್ಕೆ ಕಳುಹಿಸುವ ‘ವೈಕುಂಠ ಸಮಾರಾಧನೆ’ ಎಂಬ ಅಂತಿಮ ಕಾರ್ಯವನ್ನು ಮಗಿಸಿದರು. ಮತ್ತೆ ಕಣ್ಣೀರು ಕಚ್ಚಿಕೊಂಡ ಒಂದಷ್ಟು ಜನ ‘ಧೈರ್ಯ ತಂದ್ಕೋ, ಭಗವಂತ ಕಾಪಾಡ್ತಾನೆ’ ಎಂದು ರತ್ನವ್ವನಿಗೆ ಧೈರ್ಯಮಾತು ಹೇಳಿ ತಮ್ಮ ಮನೆಗಳಿಗೆ ಹೊರಟುಬಿಟ್ಟರು.

ಫೋಟೋ ಮುಂದೆ ಮಲಗಿಕೊಂಡ ರತ್ನವ್ವನ ಕಣ್ಣಿನಲ್ಲಿ ನೀರು ಜಿನುಗುತ್ತಿತ್ತು. ಬಾಗಿಲ ಬಳಿ ಕೆಂಚಿ ಮಲಗಿಕೊಂಡರೆ, ಹೊರಗಿನ ದಿಣ್ಣೆಯ ಮೇಲೆ ರತ್ನವ್ವನ ಮಗ ಲಕ್ಷ್ಮಣ್ ಮಲಗಿಕೊಂಡ. ಆ ಶಾಸ್ತ್ರ, ಈ ಶಾಸ್ತ್ರ, ನೆಂಟರಿಷ್ಟರು ಎಂದುಕೊಂಡು ಹಲವು ದಿನಗಳಿಂದ ನಿದ್ದೆಯೆನ್ನುವುದನ್ನೇ ಮರೆತುಬಿಟ್ಟಿದ್ದ ರತ್ನವ್ವನಿಗೆ ಕಣ್ಣು ಮುಚ್ಚಿದ್ದೇ ನಿದ್ರಾದೇವತೆ ಆವಾಹಿಸಿಕೊಂಡಳು. ಕೆಂಚಿ ಮತ್ತು ಲಕ್ಷ್ಮಣ್ ಅದಾಗಲೇ ಗಾಢನಿದ್ರೆಗೆ ಜಾರಿಕೊಂಡಿದ್ದರು.
***
‘ಅವ್ವ ಅವ್ವ’ – ರತ್ನವ್ವಳ ತೋಳನ್ನು ಜಾಡಿಸಿದ ಲಕ್ಷ್ಮಣ್. ಹತ್ತದಿನೈದು ನಿದ್ದೆ ಮಾತ್ರೆಯನ್ನು ನುಂಗಿದ ಮೊಸಳೆಯಂತೆÉ ಬಿದ್ದುಕೊಂಡಿದ್ದ ರತ್ನವ್ವ ‘ಥೂ! ನಿನ್ನ ಕಾಟ ನಿನ್ನ ಸಾವಿನಲ್ಲೇ ಕೊನೆಯಾಗೋದೇನೋ’ ಎಂದು ಹೇಳುತ್ತ ಹೇಳುತ್ತ ಕಣ್ಬಿಟ್ಟೊಡನೇ ಆಶ್ಚರ್ಯಚಕಿತಳಾದಳು. ಎಬ್ಬಿಸುತ್ತಿದ್ದವನು ತನ್ನ ಮಗನಲ್ಲ ಬೇರೆ ಯಾರೋ ಎಂದೆಣಿಸಿಕೊಂಡಿದ್ದಳು. ರತ್ನವ್ವನ ಸೀರೆಯೆಲ್ಲಾ ಒದ್ದೆಯಾಗಿತ್ತು, ಮುಖದ ಮೇಲೆ ಯಾರೋ ನೀರೆರೆಚಿದ್ದರು. ಇದ್ದಕ್ಕಿದ್ದಂತೆ ಏನೋ ಕಿವಿ ಸಿಡಿಸುವಂತಹ ಶಬ್ದ. ನಿದ್ದೆ ಮಾಡಿ ತುಂಬಾ ದಿನಗಳಾದ್ದರಿಂದ ರತ್ನವ್ವ ಇನ್ನೂ ತೂಕಡಿಸುತ್ತಿದ್ದಳು.
‘ಏನ್ ಸದ್ದಪ್ಪ ಅದು?’ – ಮಗನನ್ನು ಕೇಳಿದಳು
‘ಮಳೆ ಬತ್ತೈತೆ ಕಣವ್ವ, ಸರಿಯಾಗಿ ಕಣ್ಣು ಬಿಡು ಮೊದ್ಲು’
ಕೆಂಚಿ ಮುಖಕ್ಕೆ ನೀರೆರೆಚಿದಳು. ಮಳೆ ಎಂಬ ಶಬ್ದ ಕಿವಿಗೆ ಬಿದ್ದೊಡನೆ ರತ್ನವ್ವ ಗುಡೀರನೆ ಎದ್ದು ನಿಂತುಬಿಟ್ಟಿದ್ದಳು. ಹಚ್ಚಿಟ್ಟಿದ್ದ ಬುಡ್ಡಿಯ ಬೆಳಕಿನಲ್ಲಿ ತನ್ನ ಮಕ್ಕಳನ್ನೊಮ್ಮೆ ನೋಡಿದಳು. ಅವರೂ ನೆಂದದ್ದು ಕಂಡು, ವಲ್ಲಿಯಲ್ಲಿ ಕೈಕಾಲೊರೆಸಿ ಎಂದಿನಂತೆ ಮೂಲೆಯಲ್ಲಿಟ್ಟಿದ್ದ ಒಂದಷ್ಟು ಮಸಿ ಮೂಟೆಗಳನ್ನು ದಮ್ಮುಕಟ್ಟಿ ನಡುಮನೆಗೆಳೆದಳು. ಅಲ್ಲಿಯೇ ಇದ್ದ ನಾಲ್ಕೈದು ಸೈಜುಗಲ್ಲನ್ನು ತಬ್ಬಿ ಹೊಟ್ಟೆಯ ಮೇಲೆ ಮಲಗಿಸಿಕೊಂಡು ಮತ್ತೊಂದು ಮೂಲೆಗೆ ಬಿಸಾಕಿದಳು. ಖಾಲಿಯಾದ ಮೂಲೆಗೆ ಒಂದು ಹರಕು ಚಾಪೆ ಹರಡಿ ತನ್ನ ಮಕ್ಕಳನ್ನು ಮಲಗಿಸಿ, ಆರಲು ಹಾಕಿದ್ದ ಹುಣಸೆ, ಕಾಳು, ಅಕ್ಕಿಯನ್ನೆಲ್ಲಾ ಚೀಲಕ್ಕೆ ತುಂಬಿ, ಅಲ್ಲಲ್ಲಿ ಗುಂಡಿಕಟ್ಟುತ್ತಿದ್ದ ನೀರನ್ನು ಕಾಲಿನ ಮೂಲಕ ಹೊರಕ್ಕೆರಚಿ, ಸುರಿಯುತ್ತಿದ್ದ ಜಾಗಗಳಿಗೆ ಪಾತ್ರೆ ತಟ್ಟೆಗಳನ್ನಿಡುವ ಕೆಲಸ ಪ್ರಾರಂಭಿಸಿ ಕೊನೆಗೆ ಮನೆಯಲ್ಲಿರುವ ಪಾತ್ರೆ ಪಗಡೆಗಳೇ ಸಾಲದಾದಾಗ ವಿಧಿಯಿಲ್ಲದೇ ಮೂಟೆಗೊರಗಿ ಅವಚಿ ಕುಳಿತುಕೊಂಡಳು. ಮಣ್ಣಿನ ಗೋಡೆ ಮೇಲೆಲ್ಲಾ ರೈಲು ಕಂಬಿಯಂತೆ ಮಳೆ ಹರಿಯುತ್ತಿತ್ತು. ಕೈಯಾಡಿಸಿ ದಶಕಗಳೇ ಕಳೆದ ಹೆಂಚುಗಳಿಂದ ಸುರಿದ ನೀರು, ಅಟ್ಟಳಿನ ಗಳಗಳ ಮೂಲಕ ಒಳಗಡೆಗೆ ತೊಟ್ಟಿಕ್ಕಿ ಅಲ್ಲಲ್ಲಿ ನೀರಿನ ಸಣ್ಣ ಸಣ್ಣ ಗುಂಡಿಗಳಾಗಿದ್ದವು. ತೊಟ್ ತೊಟ್ ಎಂದು ತೊಟ್ಟಿಕ್ಕುತ್ತಿದ್ದ ದಪ್ಪ ಹನಿಗಳು ಪಾತ್ರೆ, ಪುಟ್ಟೆ, ಗುಂಡಿ ನೀರಿನ ಮೇಲೆ ಬಿದ್ದು ನೀರಾಗದ ಒಂದಗಲ ಜಾಗದಲ್ಲಿ ಮಲಗಿದ್ದ ಮಕ್ಕಳ ಮೇಲೆ ಚದುರುತ್ತಿದ್ದವು. ಹರಕು ರಗ್ಗಿನೊಳಗಿದ್ದ ಮಕ್ಕಳು ಕಾಲಿಗೆ ನೀರು ಬಿದ್ದೊಡನೆ ಮಡಚಿಕೊಂಡು, ಅವಚಿಕೊಂಡು ಮಲಗಿಕೊಳ್ಳುತ್ತಿದ್ದವು. ನಿದ್ದೆ ಹತ್ತದ ರತ್ನವ್ವಳ ಕಣ್ಣುಗಳು ಮಾತ್ರ ತುಂಬಿಕೊಳ್ಳುತ್ತಿದ್ದ ಪಾತ್ರೆ, ತಟ್ಟೆಗಳ ಮೇಲೇ ಇತ್ತು. ಹೊರಗೆ ರಭಸವಾಗಿ ಹರಿಯುತ್ತಿದ್ದ ಬಚ್ಚಲಿಗೆ ಆಗಾಗ ನೀರನ್ನು ಸುರಿದು ಪಾತ್ರೆಗಳನ್ನು ಖಾಲಿ ಮಾಡಿ ಮತ್ತೆ ಇಡುತ್ತಿದ್ದಳು.

ಇಂದೇಕೋ ಮಳೆ ನಿಲ್ಲುವ ಸೂಚನೆಯೇ ಕಾಣ ಬರಲಿಲ್ಲ. ಹೊದಿಸಿದ್ದ ಲಂಗವೊಂದನ್ನೂ ಬೇಧಿಸಿ ಮಳೆಯ ಹನಿಗಳು ಒಡೆದ ಕಿಟಕಿಗಳ ಮೂಲಕ ಒಳಗಡೆಗೆ ತೂರುತ್ತಿದ್ದವು. ಗುಡುಗು ಮಿಂಚು ಹೆಚ್ಚಾದ ಕಾರಣ ಬಾಗಿಲ ಬಳಿ ಕುಡುಗೋಲನ್ನಿಟ್ಟು ಬರಲು ತೆರಳಿದ ರತ್ನವ್ವಳಿಗೆ ಹೊರಗೆ ಹಚ್ಚಿಟ್ಟಿದ್ದ ದೀಪ ಆರಿಹೋಗಿರುವುದು ಕಂಡಿತು. ಆ ದೀಪವನ್ನು ಮನೆಬುಡ್ಡಿಯಿಂದ ಹಚ್ಚಿ ಮತ್ತೆ ಬಂದಾಗ ತಾನು ಕುಳಿತಿದ್ದ ಜಾಗ ತೇವವಾದ ಕಾರಣ ಮೂಟೆಯ ಮೇಲೆ ಕುಳಿತುಕೊಂಡಳು. ಮಕ್ಕಳು ಮಲಗಿದ್ದ ಮಂದಲಿಗೆ ಒದ್ದೆಯಾಗುತ್ತಿದ್ದರೂ ಅವರನ್ನು ಎಬ್ಬಿಸುವ ರೇಜಿಗೆ ಹೋಗಲಿಲ್ಲ. ಅವರನ್ನು ಎಬ್ಬಿಸಿಬಿಟ್ಟರೆ ಮಲಗಿಸಲು ಜಾಗವಾದರೂ ಎಲ್ಲಿದೆ ಅಲ್ಲಿ? ಮೈಯೊದ್ದೆಯಾಗಿ ಎಚ್ಚರವಾದಾಗ ಮೂಟೆ ಮೇಲೆಯೇ ಮಲಗಿಸೋಣವೆಂಬುದು ಅವಳ ಲೆಕ್ಕಾಚಾರವಾಗಿತ್ತು.

ಗೋಡೆ ಮೇಲೆ ತೂಗು ಹಾಕಿದ್ದ ತನ್ನ ಫೋಟೋವನ್ನು ನೋಡಿಕೊಂಡು ಹೃದಯಭಾರವೆನಿಸಿ ರತ್ನವ್ವ ಮುಖ ಮುಚ್ಚಿಕೊಂಡು ಅತ್ತುಬಿಟ್ಟಳು. ಈ ರೀತಿಯ ವಿಷಣ್ಣ ಸ್ಥಿತಿ ರತ್ನವ್ವಳಿಗೆ ಹಳತು. ಇದೇ ತರಹನಾಗಿ ಧಾರಾಕಾರವಾದ ಮಳೆ ಎಷ್ಟೋ ದಿನ ಸುರಿದಿದೆ. ವಾಸ್ತವದಲ್ಲಿ, ರತ್ನವ್ವಳಿಗೆ ಮೊದಲಿಗಿಂತ ಈಗ ಈ ವಿಚಾರದಲ್ಲಿ ಕಷ್ಟ ಕಡಿಮೆಯಾಗಿದೆ. ಹಿಂದೆಲ್ಲಾ ಈ ರೀತಿ ಮಳೆ ಸುರಿದರೆ, ಮಕ್ಕಳನ್ನು ಸಂಭಾಳಿಸಿ ಮಲಗಿಸುವುದರ ಜೊತೆಗೆ ಕುಡುಕ ಗಂಡನೇನಾದರೂ ಅದೃಷ್ಟಕ್ಕೆ ಮಲಗಿಕೊಂಡಿದ್ದರೆ, ಆತನನ್ನು ತಬ್ಬಿಕೊಂಡು ಅತ್ತಿತ್ತ ದರದರನೆ ಎಳೆದು ಮಲಗಿಸಬೇಕಾಗಿತ್ತು. ದುರದೃಷ್ಟಕ್ಕೆ ಆತನಿಗೆ ಎಚ್ಚರಾಗಿಬಿಟ್ಟರೆ ಕಾರಣವಿಲ್ಲದೇ ಕಾಲು ಕೆರೆದುಕೊಂಡು ನಿಲ್ಲುವ ಹುಂಜದಂತೆ ಜಗಳಕ್ಕೆ ನಿಂತುಬಿಡುತ್ತಿದ್ದ. ಕಾರಣವೇ ಇಲ್ಲದೇ ಮಕ್ಕಳನ್ನು ಬಡಿಯುವುದು ಆತನ ಕುಡುಕ ಸಂಸ್ಕøತಿ! ಮಳೆಗಾಲದ ಅದೆಷ್ಟು ದಿನಗಳಲ್ಲಿ ಆತನ ಕಾಲು ಹಿಡಿದುಕೊಂಡು ರತ್ನವ್ವ ‘ಹೆಂಚಿಗೆ ಕೈಯಾಡಿಸಿಬಿಡೊಮ್ಮೆ, ಮಳೆ ಬಂದ್ರೆ ಹೈಕ್ಳಿಗೆ ಮಲ್ಗೋಕು ತಾವಿಲ್ಲ’ ಎಂದು ಕೇಳಿಕೊಂಡಿದ್ದಾಳೆ. ಆದರೆ, ಮುಂಜಾನೆಯೇ ಕಂಠಮಟ್ಟ ಕುಡಿದು ಬರುತ್ತಿದ್ದ ಆತ ಒಮ್ಮೆಯೂ ಕೂಡ ಆಕೆಯ ಮಾತಿಗೆ ಓಗೊಡಲಿಲ್ಲ. ಹೆಂಚು ಹಾದು ಹೋಗಿರುವ ಗೋಡೆಯ ಜಾಗಕ್ಕೆ ಹಣವಿಲ್ಲದೇ ಮಡ್ಡಿ ಹಾಕುವುದಿಲ್ಲವೆಂದು ಗಾರೆ ಕೆಲಸದವರು ಮುಖ ತಿರುಗಿಸಿದ್ದರು. ಪ್ರತಿ ಮಳೆಯಲ್ಲೂ ರತ್ನವ್ವಳ ಮನೆಯೊಳಗೆ ದಪ್ಪ ಹನಿಯ ಸಣ್ಣ ಮಳೆ, ಈ ರೀತಿಯಾಗಿ ಪಾತ್ರೆಪಗಡೆಗಳನ್ನು ಜೋಡಿಸಿ ರಾತ್ರಿಯೆಲ್ಲಾ ಕಾಲ ಕಳೆಯುವ ಕೆಲಸ ರತ್ನವ್ವಳಿಗೆ.

ತನ್ನ ಕಷ್ಟವನ್ನೆಲ್ಲಾ ನೆನಪಿಸಿಕೊಂಡ ರತ್ನವ್ವ ತನ್ನ ಮಗನ ಮುಖ ನೋಡಿದಳು. ಪ್ರಪಂಚದ ನೋವನ್ನು ಗಂಟು ಕಟ್ಟಿ ಸಮುದ್ರಕ್ಕೆಸೆದು ನಿರಾಳನಾಗಿ ಮಲಗಿದಂತೆ ಕಾಣುತ್ತಿದ್ದಾನೆ. ಆತನನ್ನು ಎಂದಿನಂತೆ ಜೀತ ಮಾಡಿ ಓದಿಸಿ ದೊಡ್ಡವನನ್ನಾಗಿ ಮಾಡಿ ಒಂದೊಳ್ಳೆಯ ಜಾಗಕ್ಕೆ ಕೊಂಡೊಯ್ಯಬೇಕೆಂಬ ಅವಳಾಸೆ ಸ್ವಲ್ಪ ನೆಮ್ಮದಿ ತಂದಿತು. ಅದಕ್ಕಾಗಿ ಆಕೆ ಪಡಬಾರದ ಪಾಡನ್ನು ಪಡುತ್ತಿದ್ದಾಳೆ. ಎರಡು ವರ್ಷ ಗೌಡರ ಜೀತಕ್ಕೆ ಕುರಿ ಮೇಯಿಸಲು ಬಿಟ್ಟಿದ್ದು ನಂತರ ಅವರಿವರ ಕಾಲು ಕೈ ಹಿಡಿದು ಮತ್ತೆ ಶಾಲೆಯ ಮೆಟ್ಟಿಲನ್ನು ಹತ್ತಿಸಿದ್ದಾಳೆ. ಕುಡಿದು ಚಾವಡಿಯಲ್ಲೋ, ಅರಳಿಕಟ್ಟೆಯಲ್ಲೋ ಕಾಲ ಕಳೆದು ಊಟದ ಹೊತ್ತಿಗೆ ಮನೆಗೆ ಬರುತ್ತಿದ್ದ ಗಂಡನ ಪುಡಿಗಾಸು ಆಕೆಗೆ ಎಂದಿಗೂ ನೆರವಾಗಲಿಲ್ಲ. ಮುಂಜಾನೆ ಎದ್ದೊಡನೆ ಮನೆ ಮುಂದೆ ಸಗಣಿ ನೀರೆರೆಚಿ, ರಂಗವಲ್ಲಿ ಇಟ್ಟು, ಅಡುಗೆ ಮಾಡಿ, ರಾತ್ರಿ ಉಳಿದ ತಂಗಳು ಪಂಗಳನ್ನು ತೂಕಲಿಗೆ ತುಂಬಿಕೊಂಡು ಕೂಲಿ ಕಂಬಳಕ್ಕೆಂದು ಹೊರಟುಬಿಟ್ಟರೆ ಮತ್ತೆ ಬರುತ್ತಿದ್ದದ್ದು ಸಂಜೆಗೆ. ಹಗಲೆಲ್ಲಾ ಬಿಸಿಲಿನ ಝಳದಲ್ಲಿ ದುಡಿದು ಬೆವರಾಗಿ, ಒಣಗಿಹೋಗಿದ್ದರೂ ಸಂಜೆ ಮಕ್ಕಳ ಮೊಗವನ್ನು ಕಂಡೊಡನೆ ಅರಳಿಬಿಡುತ್ತಿದ್ದಳು. ಒಮ್ಮೊಮ್ಮೆ ಅವುಗಳನ್ನು ತಬ್ಬಿಕೊಂಡು ಮುದ್ದಾಡಿ, ಕೈಗೆ ಒಂದೈದು ರೂಪಾಯಿ ಇಟ್ಟು ಖುಷಿ ಪಡಿಸುತ್ತಿದ್ದಳು. ದಿನಕ್ಕೆ ಹೆಚ್ಚೆಂದರೆ ಐವತ್ತರಿಂದ ಅರವತ್ತು ರೂಪಾಯಿಯನ್ನು ಸಂಪಾದಿಸುತ್ತಿದ್ದ ಆಕೆಯ ಕೂಲಿ ಇತ್ತ ಅಡುಗೆಗೂ ಅತ್ತ ಹರಿದ ಬಟ್ಟೆಗಳನ್ನು ಹೊಲಿಸಲೂ ಸಾಕಾಗುತ್ತಿರಲಿಲ್ಲ. ಸ್ಟೋರ್ ದಿನಸಿ, ಕಳ್ಳ ಮಡಿಲಿನ ತರಕಾರಿಗಳನ್ನೆಲ್ಲಾ ಬೆರೆಸಿ ಅಡುಗೆ ಮಾಡಿ ಹತ್ತೋ ಇಪ್ಪತ್ತೋ ಉಳಿಸಿಕೊಳ್ಳುತ್ತಿದ್ದವಳಿಗೆ ಕುಡುಕ ಗಂಡ ಅಪರೂಪಕ್ಕೆ ಇಪ್ಪತ್ತು ಮೂವ್ವತ್ತು ಕೊಟ್ಟರೆ ಆಗಾಗ ಅದಕ್ಕಿಂತಲೂ ಹೆಚ್ಚು ಕಾಸನ್ನು ಹೊಡೆದು ಬಡೆದು ಇಸಿದುಕೊಳ್ಳುತ್ತಿದ್ದ. ಆತನ ಸಾವಿನ ಮೂಲಕ ರತ್ನವ್ವಳಿಗೆ ಈಗ ಸ್ವಲ್ಪ ಹಣ ಉಳಿಸುವ ಉಮೇದು ಹೆಚ್ಚಾಗಿದೆ! ಸೌಖ್ಯ ನೀಡದಾತನ ಗೋಳು ರತ್ನವ್ವ ಮತ್ತು ಮಕ್ಕಳಿಗೆ ಪ್ರತಿದಿನವೂ ಸೊಳ್ಳೆಕಾಟದಂತಿತ್ತು. ಕುಡಿದು ಮನೆಗೆ ಬಂದವನೇ ಗೊಣ ಗೊಣ ಎಂದು ನಿದ್ದೆಯಲ್ಲೂ ಪೇಚುತ್ತ ಮನೆ ಮಂದಿಯ ನಿದ್ದೆಯನ್ನು ಹಾಳುಗೆಡವೋದು ಆತನ ಮತ್ತೊಂದು ಕುಡುಕ ರೂಢಿ. ಆತ ಸತ್ತು ಹನ್ನೊಂದು ದಿನಗಳಾಗಿರುವ ಈ ಹೊತ್ತಿನಲ್ಲಿ ಆ ಮನೆಯವರಿಗೆ ಆ ದರಿದ್ರ ಕಾಟವಿಲ್ಲ. ಅಪ್ಪನಿಲ್ಲದ ಕಾರಣ ಮಕ್ಕಳು ಸ್ವಲ್ಪ ನಿದ್ದೆ ಮಾಡಿವೆ, ಆತನಾರ್ಭಟ, ಕಾಟದ ಮುಂದೆ ಈ ಮಳೆಯ ಹೊಡೆತ ಆಕೆಗೆ ದೊಡ್ಡದೆನಿಸುತ್ತಿಲ್ಲ.

ಸಾವಿನ ದಿನದಿಂದ ವೈದಿಕ ಕ್ರಿಯೆ ಮುಗಿಯುವವರೆವಿಗೂ ಪ್ರತಿ ಖರ್ಚಿಗೂ ಬೀದಿ ಜನಗಳ ಬಳಿ ಸಾಲಕ್ಕಾಗಿ ಕೈಯೊಡ್ಡಬೇಕಾಯಿತು. ರತ್ನವ್ವಳ ಗಂಡ ಒಂದು ರೀತಿ ಮನೆಗೆ ಮಾರಿ ಊರಿಗೆ ಉಪಕಾರಿಯೆಂಬಂತೆ ಹೊರಗಿನವರೊಡನೆ ಚೆನ್ನಾಗಿಯೇ ಇದ್ದವ. ಯಾವ ರೀತಿ? ದುಡಿದದ್ದನ್ನು ಒಂದಷ್ಟು ಜನಗಳಿಗೆ ಬಿಟ್ಟಿಯಾಗಿ ಭಟ್ಟಿ ಸಾರಾಯಿ ಕುಡಿಸುವ ಮಟ್ಟಿಗಷ್ಟೇ. ಎಲ್ಲರೂ ಕುಡುಕ ಚೇಲಗಳು. ಈಗ ಸಾಲ ಕೊಟ್ಟವರನ್ನೂ ಕೂಡಿಸಿಕೊಂಡು! ಪ್ರತಿಸಂಜೆ ಕುಡಿದು ಇದ್ದಬದ್ದ ದುಡ್ಡನ್ನೆಲ್ಲಾ ಸಾರಾಯಿ ಗಲ್ಲಕ್ಕೆ ಸುರಿದು ಬರುತ್ತಿದ್ದವನಿಗೆ ಮತ್ತೆ ಕುಡಿಯಬೇಕೆನಿಸುವ ಹಠ, ಚಟ. ರತ್ನವ್ವ ಮತ್ತು ಮಕ್ಕಳಿಗೆ ಇನ್ನಿಲ್ಲದ ಉಪದ್ರವ. ‘ನನ್ನ ಹತ್ರ ಹಣ ಇಲ್ಲ, ನಿನ್ನನ್ನ ನಿನ್ ಮಕ್ಳನ್ನ ಸಾಕ್ತಾ ಇರೋದು ನಾನು ಮೈಮುರಿದು ಸಂಪಾದ್ಸೋ ದುಡ್ಡು’ ಎಂದರೆ, ‘ಬರಿ ಸುಳ್ಳನ್ನೇ ಹೇಳ್ಬೇಡಮ್ಮಿ, ನಾನ್ ಕೊಟ್ಟಿದ್ದ ದುಡ್ಡೆಲ್ಲಾ ನುಂಗಿ ನೀರು ಕುಡಿದ್ಬುಟ್ಟಾ? ನೀನ್ ದುಡ್ದಿದ್ದನ್ನ ಆ ನಿನ್ ಮಿಂಡಂಗೆ ಕೊಡ್ತೀಯ’ ಎಂದು ಗೋಳು ತೆಗೆಯುತ್ತಿದ್ದವ ಕೆಂಚಿಯ ಕಿವಿಯಲ್ಲಿದ್ದ ಓಲೆಗಳನ್ನು ಮಾರಿ ನುಂಗಿ ಕುಡಿದು, ರತ್ನವ್ವಳ ತಾಳಿಯನ್ನೂ ಎಷ್ಟೋ ಬಾರಿ ಅಡವಿಗಿಟ್ಟು ದುಡ್ಡನ್ನು ವ್ಯರ್ಥವಾಗಿ ಜೀರ್ಣಿಸಿದ್ದ. ಗಂಡ ಸತ್ತ ನಂತರದ ಈ ಎಲ್ಲಾ ಮುತುವರ್ಜಿ ಗಾಬರಿಗಳಲ್ಲಿ ಆಕೆ ನಿದ್ದೆ ಮಾಡದೇ ಇರಬಹುದು, ಆದರೆ ಹೆಂಡತಿ ಎಂಬ ಪಟ್ಟದಲ್ಲಿ ಆಕೆಗಿದ್ದ ನೋವು, ಈಗ ವಿಧವೆ ಎಂಬ ಪಟ್ಟದಲ್ಲಿಲ್ಲ. ವಿಧವೆ ಎಂಬ ಪದ ಆಕೆಗೆ ಗೌರವ ಸೂಚಕವಾಗಿ ಕಾಣುವುದರ ಜೊತೆಗೆ ಅದು ನೀಡುತ್ತಿರುವ ನಿರಾಳತೆಯ ಮುಂದೆ ಹೆಂಡತಿ ಎಂಬ ಪಟ್ಟ ಕೊಟ್ಟ ನೋವು ಸಂಕಷ್ಟಗಳು ನೆನಪಿಗೆ ಬಂದರೆ ಸಾಕು ಈ ಮಳೆಯನ್ನೂ ಮೀರಿಸುವಂತೆ ಕಣ್ಣೀರು ಹರಿಯುತ್ತದೆ.

ಮಳೆ ನಿಲ್ಲಲೇ ಇಲ್ಲ. ಅಷ್ಟಕ್ಕೆ ಕೆಂಚಿ ಒದ್ದಾಡಿಕೊಂಡು ಎದ್ದು ಬಿಟ್ಟಳು.
‘ಯಾಕವ್ವಾ ಮಲಗು’ – ಎಂದು ಹೇಳುತ್ತ ಅವ್ವನ ತೊಡೆ ಮೇಲೆ ತಲೆ ಇಟ್ಟಳು.
‘ಮಲ್ಗೋಕೆ ತಾವೆಲ್ಲೈತವ್ವ?’ – ಅವ್ವ ಆ ರೀತಿ ಹೇಳುತ್ತಿದ್ದಂತೆ ಮಗಳು ಕಣ್ಣೀರು ಕಚ್ಚಿಕೊಂಡಳು.
‘ಅಳಬೇಡ ಕಣವ್ವಾ, ನನಗಾದಂಗೆ ನಿನಗಾಗ್ಬಾರದು, ಒಂದೊಳ್ಳೆ ಸಂಬಂಧ ನಿನ್ನನ್ನ ಹುಡ್ಕೊಂಡು ಬರುತ್ತೆ, ನೀನು ಸುಖವಾಗಿ ಮಾರಾಣಿ ತರ ಬಾಳ್ತೀಯ’
‘ಏಟ್ ಸಂಬಂಧ ಬಂದಿತ್ತವ್ವ?’
‘ಅದೆಲ್ಲ ನೆಪ್ಪಲ್ಲಿಡ್ಬೇಡ ಕಂದಾ, ಬಂದಿದ್ದ ನೆಂಟಸ್ತನ ಎಲ್ಲಾ ನಿನ್ ಕುಡುಕಪ್ಪನಿಂದ ಮುರ್ದೋಯ್ತು, ಕುಡುಕನ ಮನೆಯಿಂದ ಹೆಣ್ಣು ತಂದ್ರೆ ಏಳ್ಗೆ ಆಗುತ್ತಾ? ನೆಮ್ಮದಿ ಇರುತ್ತ ಅಂದ್ಕೊಂಡಂದ್ಕೊಂಡೇ ಎಲ್ಲಾ ನಮ್ಮನ್ನ ಕೈ ಬಿಟ್ರವ್ವ’ – ಎಂದು ಹೇಳುತ್ತಿದ್ದಂತೆ ಇಬ್ಬರೂ ಅಳಲು ಶುರುವಿಟ್ಟುಕೊಂಡರು.
‘ಆ ಗಾಯಕ್ಕೆ ಮುಲಾಮು ಹಚ್ದವ್ವ?’ – ಮುಂಜಾನೆ ಬಳೆ ಹೊಡೆಯುವಾಗ ಬಳೆಯ ಸಿವುರು ಚುಚ್ಚಿ ಆಗಿದ್ದ ಗಾಯ ನೋಡುತ್ತ ಕೆಂಚಿ ಕೇಳಿದಳು. ‘ಇಲ್ಲ ಕಣವ್ವ’ ಎಂದೊಡನೆ ಗೊಣಗಿಕೊಂಡ ಕೆಂಚಿ ಮುಲಾಮು ಔಷಧಿಯಿಲ್ಲದೇ ಮುಖಕ್ಕೆ ಬಳಿದುಕೊಳ್ಳಲು ಇದ್ದ ಪೌಡರನ್ನೇ ತಂದು ಸುರಿದಳು.
ಸರಿಯಾದ ಔಷಧಿ ಸಲಕರಣೆ ಸಿಗದೆ ಆತ ಮಾಡಿದ್ದ ಇಂತಹ ಗಾಯಗಳು ಒಣಗಿ ಒಣಗಿ ಗಂಟುಗಳಾಗಿ ಸತ್ತು ನೆಮ್ಮದಿ ತಂದವನ ಮತ್ತೆ ಮತ್ತೆ ಅಣಕಿಸುತ್ತಿದ್ದವು. ಒಮ್ಮೆ ಮೂಗಿಗೆ ಗುದ್ದಿ ರಕ್ತ ಸೋರಿಸಿದ್ದಾಗ ಕೋಪದಲ್ಲಿ ಕೊಂದೇ ಬಿಡುತ್ತೇನೆ ಎಂದು ರತ್ನವ್ವ ಕುಡುಗೋಲೊಂದನ್ನು ಹಿಡಿದುಕೊಂಡಿದ್ದಳು. ‘ಸಾಯ್ಸಮ್ಮಿ, ಬದುಕಿ ನೀನು ಕೆಟ್ಟವಳಾಗು, ಸತ್ತು ನಾನು ಒಳ್ಳೆಯವನಾಗ್ಬಿಡ್ತೀನಿ’ ಎಂದಿದ್ದ. ಈಗ ನಿಜಕ್ಕೂ ಸತ್ತು ಒಳ್ಳೆವನಾಗಿಯೇ ಹೋದ!

‘ಅವ್ವಾ’ – ಕೆಂಚಿ ಕೂಗಿದಳು.
‘ಏನು ಕಂದಾ’
‘ನಾನು ಮದ್ವೆ ಆಗೋದಾದ್ರೆ, ಅವನನ್ನೇ ಆಗೋದು, ಇಲ್ಲಾಂದ್ರೆ...’
‘ಹೇ, ಥೂ! ನಿನ್ ಜನ್ಮಕ್ಕೆ ಬೆಂಕಿ ಹಾಕ, ಈಗ ತಾನೇ ಒಸಿ ಸುಧಾರಿಸ್ಕೊಂಡು ಇನ್ನಾದ್ರೂ ನೆಮ್ಮದಿ ಕಾಣೋಣ ಅಂಥ ಇದ್ದೀನಿ, ಮತ್ತೆ ಅವನ ವಿಚಾರ ತಂದಾ ನೀನು, ಗುಡ್ಸಟ್ಟಿ’

ಕೆಂಚಿ ಬಿಕ್ಕಿ ಬಿಕ್ಕಿ ಅಳುತ್ತ, ಎದೆ ಭಾರಗೊಳಿಸಿಕೊಂಡು ಮೌನವಾದಳು. ತಾಯಿಯ ತೊಡೆಯಲ್ಲಿ ತಲೆ ಇಟ್ಟಿದ್ದ ಅವಳಿಗೆ ಇರುಸು ಮುರುಸಾಯಿತು. ತಲೆ ಬದಲಿಸಿ ಮಸಿಯ ಚೀಲದ ಮೇಲಿಟ್ಟಳು. ಆಕೆಯನ್ನು ನೋಡಿ ಗೊತ್ತು ಮಾಡಿಕೊಂಡು ಹೋಗಲು ಹತ್ತಾರು ಸಂಬಂಧಗಳು ಬಂದಿವೆ. ಎಲ್ಲವೂ ಕುದುರುವಲ್ಲಿರುವಾಗಲೇ ಅವಳಪ್ಪನ ಕಾಟದಿಂದ ಅರ್ಧಕ್ಕೆ ಮುರಿದುಬಿದ್ದಿವೆ. ಇರುವಷ್ಟು ದಿನ ಆತ ಈಕೆಯ ಮದುವೆ ಬಗ್ಗೆ ಯೋಚಿಸಿದವನೇ ಅಲ್ಲ, ಮೈಮೇಲೊಂದಷ್ಟು ಒಡವೆ ಹಾಕಿಸಿದವನಲ್ಲ, ಬದಲಾಗಿ ಇರುವುದೆಲ್ಲವ ಶುದ್ಧವಾಗಿ ಕೇರಿ ಮಾರಿದವನು. ಇದೆಲ್ಲದರ ನಡುವೆಯೂ ಆಕೆಗೆ ಕೆಳಬೀದಿಯ ಹುಡುಗನೊಬ್ಬನ ಮೇಲೆ ಪ್ರೇಮಾಂಕುರವಾಗಿತ್ತು. ಸ್ವಲ್ಪ ಹೆಚ್ಚೇ ಪ್ರೀತಿಸಿದ್ದರೂ ಅನ್ನಿ. ನಡುಗುವ ಮೈ ದನಿಯೊಂದಿಗೆ ಆ ವಿಚಾರವನ್ನು ಎಷ್ಟೋ ದಿನ ಮನೆಯಲ್ಲಿ ಪ್ರಸ್ತಾಪಿಸಲು ಪ್ರಯತ್ನಿಸಿ, ಸೋತು ಕೊನೆಗೊಂದು ದಿನ ಧೈರ್ಯ ತಂದು ಹೇಳಿಯೇಬಿಟ್ಟಾಗ ಕುಡುಕ ಅಪ್ಪ ಜಾಡಿಸಿ ಹೊಟ್ಟೆಗೆ ಒದ್ದಿದ್ದು ಬಾವುಕಟ್ಟಿ ಹಾಗೇ ಇದೆ. ಆ ಹುಡುಗನ ಹಟ್ಟಿವರೆವಿಗೂ ಹೋಗಿದ್ದ ಅಪ್ಪ ಅಂದು ಮಾಡಿಕೊಂಡು ಬಂದಿದ್ದ ರಾದ್ಧಾಂತಕ್ಕೆ ಕೆಲವು ದಿನಗಳವರೆವಿಗೂ ಕೆಂಚಿ ಮನೆಯಿಂದ ಹೊರಗೆ ಬಂದಿರಲಿಲ್ಲ. ‘ಅವರು ನಮ್ಮ ಮಟ್ಟದವರಲ್ಲ, ಅವರು ನಾವು ಬೇರೆ ಬೇರೆ ಕೇರಿಯವರು, ಈ ಮದ್ವೆ ಮಾಡ್ಸೋ ಬದಲು ನಿನ್ನನ್ನ ಯಾವಾದಾದ್ರೂ ಪಾಳುಬಾವಿಗೆ ನೂಕ್ಬಿಡ್ತೀನಿ’ ಎಂದು ರತ್ನವ್ವ ಹೇಳಿದ್ದಾಗ ತನ್ನ ಮನೆಯ ಮುರುಕು ಗೋಡೆ, ಕಿಟ್ಟ ಹಿಡಿದ ಕಂಬ ಗಳಗಳನ್ನು ನೋಡಿ ಕೆಂಚಿ ‘ಇದ್ಯಾವ ಮೇಲ್ಮಟ್ಟವೋ?’ ಎಂದುಕೊಂಡಿದ್ದಳು.

ಮಳೆಯ ರಭಸ ನಿಲ್ಲದ ಕಾರಣ ಕೆಂಚಿಯ ಸಣ್ಣನೆ ಬಿಕ್ಕಳಿಗೆ ರತ್ನವ್ವಳಿಗೆ ಕೇಳಿಸುತ್ತಿರಲ್ಲಿಲ್ಲ. ಆದರೂ ನೊಂದುಕೊಂಡ ತಾಯ ಮನಸ್ಸು ಆಕೆಯ ತಲೆ ಸವರಲು ಕೈ ಚಾಚಿತು. ಕೈ ಒದರಿದ ಕೆಂಚಿ ‘ನಂದು ಒಂದು ಬಾಳಾ?’ ಎಂದುಕೊಂಡಳು. ಆಕೆಯನ್ನು ಒಳ್ಳೆಯೆಡೆಗೆ ಮದುವೆ ಮಾಡಿ, ಆಕೆಯ ಸುಖವನ್ನು ಬಯಸುವ ರತ್ನವ್ವ, ಆಕೆ ತನ್ನ ಸುಖದ ಪುರುಷನನ್ನು ಬಯಸಿಬಿಟ್ಟರೆ ಸಾಕು ಕೆಂಡವಾಗುತ್ತಿದ್ದಳು. ಕುಡುಕಪ್ಪನೊಪ್ಪಿಗೆ ಕೆಂಚಿಗೆ ಉಮೇದಾಗಿರಲಿಲ್ಲ, ಬದಲಾಗಿ ಅಮ್ಮನೊಪ್ಪಿಗೆಗೆ ಕಾದಿದ್ದಳು. ಆದರೆ, ಈ ವಿಚಾರದಲ್ಲಿ ಆಕೆಗೆ ಇಬ್ಬರ ನಡುವೆ ವ್ಯತ್ಯಾಸವೇನೂ ಕಂಡಿರಲಿಲ್ಲ!

ಅಷ್ಟಕ್ಕೇ ‘ಥೂ! ಬಟ್ಟೆಯೆಲ್ಲಾ ಒದ್ದೆಯಾಗಿಹೋಯಿತು’ ಎಂದು ಚೀರಿಕೊಂಡು ಲಕ್ಷ್ಮಣ ಎದ್ದುಬಿಟ್ಟ. ಚರಂಡಿಯ ನೀರು ಉಕ್ಕಿ ಮುಂದಿನ ಮನೆಗೆ ತುಂಬಿಕೊಂಡು, ನಡುಮನೆಗೆ ಬಾಗಿಲ ಮೂಲಕ ಒಸರುತ್ತಿತ್ತು. ದಡದಡನೆ ಎದ್ದ ರತ್ನವ್ವ, ಒಂದು ಗಳ ಹಿಡಿದುಕೊಂಡು, ಸೀರೆ ಸೆರಗನ್ನೇ ತಲೆಗೆ ಟೊಪ್ಪಿ ಮಾಡಿಕೊಂಡು, ಮಗನನ್ನು ಒಳಗಡೆಗೆ ಎಳೆದು ಮುಂದಿನ ಮನೆಯೊಳಗೆ ನುಗ್ಗಿದ ನೀರನ್ನು ತಪ್ಪಲೆ ಮೂಲಕ ಹೊರಕ್ಕೆ ಎರಚಿ, ಗಳದ ಮೂಲಕ ಕೆಸರು ಕಡ್ಡಿ ಮಡ್ಡಿಯನ್ನೆಲ್ಲಾ ತಳ್ಳಲು ನಿಂತಳು. ಆಕೆಯ ತೋಳು ಕೈ ಕಾಲುಗಳು ಇನ್ನಿಲ್ಲದ ವೇಗ ಪಡೆದುಕೊಂಡು ತಳ್ಳುತ್ತಿದ್ದರೂ ನಿಲ್ಲದ ನೀರು ನಡುಮನೆಗೆ ಮತ್ತೆ ನುಗ್ಗುವುದರಲ್ಲಿತ್ತು. ಅಷ್ಟಕ್ಕೆ ಎಡಗಡೆಯ ಗೋಡೆ ಧಪ್ಪನೆ ಕೆಳಕ್ಕೆ ಬಿತ್ತು. ಕೂಡಲೇ ಮತ್ತೊಂದು ಗೋಡೆ ಬದಿಗೆ ಅವಚಿಕೊಂಡರೂ ರತ್ನವ್ವಳ ಕಾಲಿನ ಮೇಲೆ ಗೋಡೆಯ ದಪ್ಪನೆಯ ಹಿಂಟೆ ಬಿದ್ದು ರಕ್ತ ಚಿಮ್ಮಿತು. ಮೂಲೆಯಲ್ಲಿ ಹಚ್ಚಿಟ್ಟಿದ್ದ ದೀಪ ಮಾತ್ರ ಚೂರು ಚೂರಾಗಿ ಗೋಡೆಯ ಮಣ್ಣಿನೊಳಗೆ ಬೆರೆತುಹೋಯಿತು. ಗುಡುಗು ಮಿಂಚಿಗೆ ಹೆದರಿ ಬಾಗಿಲ ಬಳಿ ಇಟ್ಟಿದ್ದ ಕುಡುಗೋಲನ್ನೂ ಅದಾಗಲೇ ನೀರು ಹೊತ್ತುಕೊಂಡು ಹೋಗಿತ್ತು. ನೆಲಕಂಡ ಗೋಡೆ ಎರಚಿದ ನೀರಿಗೆ ಸಂಪೂರ್ಣ ಒದ್ದೆಯಾದ ರತ್ನವ್ವ ನೀರನ್ನು ಹೊರಗೆ ತಳ್ಳಲು ಮತ್ತೆ ಮತ್ತೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮೂಟೆ ಮೇಲೆ ಕುಳಿತಿದ್ದ ಮಕ್ಕಳು ತೂಕಡಿಸುತ್ತಿದ್ದದ್ದನ್ನು ಕಂಡಳು. ಒಳಬಂದವಳೇ ಮಕ್ಕಳನ್ನು ಎಬ್ಬಿಸಿ ತನ್ನ ಸೀರೆ ಸೆರಗಿನಿಂದ ತಲೆಗೆ ಕೊಡೆ ಮಾಡಿ ಬಾಗಿಲ ಬಳಿ ಬಂದು ‘ವೆಂಕ್ಟಕ್ಕ, ವೆಂಕ್ಟಕ್ಕ, ರಾಮಣ್ಣ, ರಾಮಣ್ಣ’ ಎಂದು ಜೋರಾಗಿ ಕೂಗಿದಳು. ಮುಂದಿನ ಮನೆಯ ರಾಮಣ್ಣ ವೆಂಕ್ಟಕ್ಕಳಿಗೆ ಎಚ್ಚರವಾಗಲಿಲ್ಲ. ‘ವೆಂಕ್ಟಕ್ಕ, ವೆಂಕ್ಟಕ್ಕ, ವೆಂಕ್ಟಕ್ಕೋ’ ಎಂದು ಮತ್ತೆ ಶಕ್ತಿಯೆಲ್ಲಾ ಉಪಯೋಗಿಸಿ ಜೋರಾಗಿ ಕೂಗಿದೊಡನೆ ಆ ಮನೆಯಿಂದ ‘ಓ...’ ಎಂಬ ಶಬ್ದ ಬಂತು.
ಕೂಡಲೇ ಕಿಟಕಿ ತೆರೆದ ವೆಂಕ್ಟಕ್ಕ ‘ಏನವ್ವ?’ ಎಂದಳು.
‘ಸ್ವಲ್ಪ ನಮ್ಮ ಐಕ್ಳನ್ನ ನಿನ್ ಮನೇಲಿ ಮಲಗಿಸ್ಕೋ, ಮನೆಯೆಲ್ಲಾ ಸುರಿತಾ ಇದೆ, ಮುಂದಿನ ಮನೆ ಗೋಡೆ ಬಿದ್ದೋಗೈತೆ’
‘ಅಯ್ಯೋ ಶಿವ್ನೇ, ಕಳ್ಸವ್ವ, ಆ ಪುಣ್ಯಾತ್ಮ ನಿನ್ ಗಂಡ ಇದ್ದಿದ್ರೆ ಈ ರೀತಿ ಆಗೋಕೆ ಬಿಡ್ತಿದ್ನವ್ವ, ಗಂಡ ಇಲ್ದೇ ಇರೋ ಮನೆ ಕಣವ್ವಾ ನಿಂದು’ ಎಂದಾಗ ಆಕೆಯ ಮಾತಿಗೆ ಕಿವಿ ಕೊಡದ ರತ್ನವ್ವ ಕೂಡಲೇ ತನ್ನ ಮಕ್ಕಳನ್ನು ಮುಂದಿನ ಮನೆಗೆ ಬಿಟ್ಟುಬಂದು, ನಡುಬಳಸಿ ಸೀರೆಕಟ್ಟಿ, ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಚರಂಡಿಗೆ ಚಾಚಿಕೊಂಡಿದ್ದ ರಾಶಿ ರಾಶಿ ಕಸ ಕಡ್ಡಿಯನ್ನೆಲ್ಲಾ ತಳ್ಳುತ್ತಾ ನಿಂತುಬಿಟ್ಟಳು.

1 comment:

  1. ಶೀರ್ಷಿಕೆಗೆ ಅರ್ಧ ಅಂಕಗಳು. ರತ್ನವ್ವನ ವಿಭಿನ್ನಾ ಪಾತ್ರ ಇಲ್ಲಿ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ.

    ReplyDelete