ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Wednesday 22 February 2012

ನಮ್ಮೂರ ಸಿದ್ದಕ್ಕ....(ಕನ್ನಡ ಪ್ರಭದವರ 'ಸಖಿ' ಪಾಕ್ಷಿಕದಲ್ಲಿ ಪ್ರಕಟಿತ)

ಅದ್ಯಾವುದೋ ತರಂಗ ಹಂಚಿಕೆಯಲ್ಲಿನ ಸಂಚು
ಕಮಲ ಕೈಗಳ ಪ್ರತಿನಿತ್ಯದ ಹೊಂಚು
ಭೂಕಬಳಿಕೆ, ರಾಜಕೀಯದಬ್ಬಾಳಿಕೆ
ಅಣ್ಣಾಹಜಾರೆಯುಪವಾಸ__ಸದನದಶ್ಲೀಲ ದುಸ್ಸಾಹಸ
ಯಾರೋ ಸತ್ತದ್ದು__ಮತ್ಯಾರೋ ಅತ್ತದ್ದು
ಐಶ್ವರ್ಯ ರೈಳ ಹೆತ್ತದ್ದು, ಲಾಡೆನ್ ಸತ್ತದ್ದು
ಲೋಕ ಹೊಳೆಯುತ್ತಿರುವುದು ಬೆಳೆಯುತ್ತಿರುವುದು
ನವತಂತ್ರ ಕುತಂತ್ರ ಮೈದಳೆಯುತ್ತಿರುವುದು
ಒಳ್ಳೆಯತನ ಕಾಲಡಿ ಕೊಳೆಯುತ್ತಿರುವುದು
ಯಾವುದರ ಪರಿವೆಯೂ ಇಲ್ಲ ನಮ್ಮೂರ ಸಿದ್ದಕ್ಕನಿಗೆ

ಕೋಳಿ ಕೂಗಿಗೆ ಕಾಯಲ್ಲವಳು
ಲೋಕ ಕಣ್ತೆರೆವ ಮುಂಚೆ ಮನೆ ಗುಡಿಸಿ ತಾರಿಸಿ
ಅಂಗಳಕ್ಕೆ ಸಗಣಿ ನೀರೆರಚಂಗಳಕ್ಕೆ ರಂಗವಲ್ಲಿಯಿಟ್ಟು
ಕ್ಷಣಹೊತ್ತು ಸೂರ್ಯನಿಗೆ ಮೈಕೊಟ್ಟು
ಹೊಗೆಗೂಡನ್ನೂದಿ ಊದಿ
ಮುಂಜಾನೆಗೆ ಮುದ್ದೆ ಜಡಿದು, ಸೊಪ್ಪುಪ್ಪೆಸರು ಬಸಿದು
ಕುಡಿದ ಒಣ ಎದೆ ಗಂಡನನ್ನೆಬ್ಬಿಸಿ
ನಿದ್ದೆಗಣ್ಣಿನ ಹೈಕಳ ಮಲ ತೊಳೆದು
ಮೂರಕ್ಷರ ಕಲಿಯಲು ಗೋಡೆ ಇಲ್ಲದ
ಶಾಲೆಗೆ ಕಳುಹಿಸಿ, ತೂಕಲಿಗೆ ಮುದ್ದೆ ಮುರಿದು
ಪುಡಿಗಾಸಿನೊಡೆತನಕ್ಕೆ ಓಡುತ್ತಾಳೆ
ಬಸವಳಿದು ದುಡಿಯುತ್ತಾಳೆ, ಬಿಸಿಲಿನಲ್ಲುರಿಯುತ್ತಾಳೆ

ರಸ್ತೆಯ ಗುಡ್ಡ ಏರಿ ಬಂದ ನಾಲ್ಕರ ಬಸ್ಸು
ಪಡುವಣ ದಿಗಂತದೆದೆಯಲ್ಲಿ ಕುಳಿತ ರವಿ
ಆಗಷ್ಟೇ ಬಂದ ಗೌಡನ ಕೈ ಸನ್ನೆಗೆ ಕಾದು
ಸುಸ್ತಾಗಿ ಬೆವೆತು ತಡವರಿಸಿ ಬರುತ್ತಾಳೆ ಸಿದ್ಧಕ್ಕ
ಅರಳುಗಣ್ಗಳ ಮಕ್ಕಳ ಮೊಗವರಮನೆ
ಎಂಟಾಂಟಾಣೆ ಕೊಟ್ಟು, ಮುಂದೆ ಮಂಡಕ್ಕಿ ತಂಬಿಟ್ಟಿಟ್ಟು
ಮತ್ತದೇ ಕೆಲಸಕ್ಕೆ ಮೈ ಮುರಿಯುವ ಸರದಿ
ಕತ್ತಲಾದಂತೆ, ಜಗತ್ತಿಗೆ ಚಂದ್ರ ಬೆತ್ತಲಾದಂತೆ
ಕುಡುಕ ಗಂಡನ ತಡಕಿ, ಗಲ್ಲಿ ಗಲ್ಲಿಯಲ್ಲಿಣುಕಿ
ಚರಂಡಿ ಛಾವಡಿಯಲ್ಲಿ ಹುಡುಕಿ
ಹೆಗಲಿಗೆ ಕೈ ಏರಿಸಿ ಹೊತ್ತು ತರುತ್ತಾಳೆ
ಅತ್ತತ್ತು ತುತ್ತು ತಿನ್ನಿಸಿ, ಮುದ್ದಿಸಿ ಮೈ ಒರೆಸಿ
ಒಪ್ಪಿಕೊಂಡಪ್ಪಿಕೊಂಡು ಕಾಮ ಪ್ರೇಮದ
ವಾಸನೆಯಲ್ಲೆಲ್ಲಾ ಮರೆತು ಬಿಡುತ್ತಾಳೆ

ಅವಳಿಗೀ ಜೀವನ ಬಟಾಬಯಲಲ್ಲ
ಮನಸ್ಸು ಮನೆಮಂದಿ ಮೀರಲ್ಲ
ನೋವಿನುರಿಯಲ್ಲಿ ಬೇಯುತ್ತಾಳೆ, ನೋಯುತ್ತಾಳೆ
ಮರೆತೆಲ್ಲ ಸಂಕಟ ಬಾಳನೊಗ ಹೊರುತ್ತಾಳೆ
ಸಂಜೆಯಾದಂತೆ ಛಾವಡಿಯಲ್ಲಿ ಕುಳಿತು
ಕೀರ್ತನೆ, ಭಜನೆಯಲ್ಲಿ ಲೋಕವನ್ನೇ ಮರೆತು
ಪಾರಮಾರ್ಥದ ಜೇನಲ್ಲಿ ಕರಗುತ್ತಾಳೆ
ಮನೆಗೆ ಬಂದ ಚಣದಲ್ಲಿ ಮೂರು ಕಡ್ಡಿ ಹಚ್ಚಿ
ಎಲ್ಲಾ ಭಗವಂತನಿಚ್ಚೆ 'ಶಿವಾ' ಎನ್ನುತ್ತಾಳೆ
ಊರ ನೂರು ದಾರಿಯಲ್ಲಿ ಎಲ್ಲರಂತೆ
ಪೆಪ್ಪರುಮೆಂಟು ಚಪ್ಪರಿಸಿ, ಚರಕ್ಕೆನೆ ಸಂಡಿಗೆ ತಿಂದು
ತಂಗಳು ಪಂಗಳು ಸೇವಿಸಿ ಬೆಳೆಯುತ್ತವೆ ಮಕ್ಕಳು
ಹಡೆವ ಕಾಲಕ್ಕೆ ಹಡೆಯುತ್ತವೆ ತೊಡೆದೆಲ್ಲ ನೋವ
ಗಂಡನ ಹಾದರವ ಕೊಳೆ ತೊಳೆಯಲು
ಒಂದು ಪಂಚಾಯಿತಿ ಸಾಕು, ಅಲ್ಲೇ ಕೈ ಹಿಡಿಯುತ್ತಾಳೆ
ಒಟ್ಟಿನಲ್ಲಿ ದುಃಖವನ್ನಪ್ಪಿಕೊಂಡೊಪ್ಪಿಕೊಂಡ ಸುಖಜೀವಿ
ಎಲ್ಲೆ ಮೀರದಲ್ಲೇ ಇರುವ ಮೊಲ್ಲೆ ಮನದವಳು

Friday 17 February 2012

ನಿರ್ನಾಮ..

ಮೊನ್ನೆ ಮೊನ್ನೆ ಪಾಯ ತೆಗೆದು
ನಿನ್ನೆ ಚಿತ್ತಾರ ಬಣ್ಣ ಬಳಿದು
ಶ್ರೀಗಂಧ ಕಿಟಕಿ ಬಾಗಿಲು ಅಗುಳಿ ಜಡಿದು
ಶೃಂಗಾರಗೊಳಿಸಿಹೆನಿಂದು
ಗೃಹಪ್ರವೇಶಕ್ಕೆನ್ನ ಮನೆಯ

ಆದರೆ...

ಕೈ ಕಾಲು ಹಿಡಿದಿದ್ದಾಳೆ
ಬೀದಿ ಸುತ್ತಿ ಮುಸುರೆ ತೊಳೆದ
ಹರಕು ಬಟ್ಟೆಯ ಕೊರಗು ಕಣ್ಗಳ
ಮುರುಕು ಗುಡಿಸಲ ಪುಟ್ಟಿ

ಚಿತ್ತಾರ ತುಂಬೆದೆ ಸೆಟೆಸಿ ನಿಂತ
ಶ್ರೀಗಂಧ ಕೋಡಿನ ಹೆಬ್ಬಾಗಿಲ
ಗಬ್ಬುವಾಸನೆಯಲ್ಲಿ ಕರಗಿಬೀಳುತ್ತಿವೆ
ಹೊತ್ತು ಕೂಳಿಲ್ಲದೆ ಚಳಿ ಕೊರೆದು
ಲಾಠಿ ಏಟು ತಿಂದ ಕಂದಮ್ಮಗಳು

ಮನೆಯೋಳಗೆ ಎಂತದೋ ಆರ್ತನಾದ
ಓಹ್.. ರಸ್ತೆಬದಿ ಕೆಸರಲ್ಲಿ
ಹೊರಳಾಡಿ ಅರೆತೆರೆದ ಕಣ್ಗಳಲ್ಲಿ
ಅರೆಬರೆ ನಿದ್ದೆ ಮಾಡುವ ತಿರುಕರು
ಕೀಲುಮರಿದ ಸದ್ದಿಗೆ
ಯಾರೋ ಕೊಟ್ಟ ಗುದ್ದಿಗೆ
ಹೆದರಿ ಮನೆದಾಟಿ ಹೊರನಿಂದೆ

ಮಹಡಿಯ ತೂಗುಯ್ಯಾಲೆ ಮೇಲೆ ಕುಳಿತು
ಹಸುಗೂಸನ್ನೆದೆಗಪ್ಪಿಕೊಂಡು
ಕೂದಲು ಕೆದರಿಕೊಂಡು
ಅಳುತ್ತಿದ್ದಳು ಕೆಳಕೇರಿಯ ಸಿದ್ಧಿ
ಅಪ್ಪ ಅಪ್ಪ ಎನ್ನುತ್ತಿತ್ತು ಮಗು ನನ್ನನ್ನೆ ಗುದ್ದಿ

ಗೋಡೆಗೆ ಮೊಳೆಜಡಿದು
ಯಾರೋ ಊರ ಜನರೆಲುಬು ಸಿಕ್ಕಿಸಿದ್ದಾರೆ
ಅವು ಸುರಿಸಿದ ನೆತ್ತರ ಕಲೆ
ತೋರಿಸುತಿವೆ ನೂರಾರು ಕೊಲೆ
ಅಲ್ಲೇ ಕಣ್ಣೀರಿಟ್ಟ ಹೃದಯಗಳು

ಕೀಲು ಮುರಿದುಕೊಂಡಳುತ್ತಾ
ಗಡಗಡ ನಡುಗಿ ಕುಸಿಯುತ್ತಿದೆ ಮನೆ
ನೆತ್ತರು ಸುರಿಸಿ, ಜ್ವಾಲಾಮುಖಿಯೆಬ್ಬಿಸಿ
ಬೆಂಕಿಯುಂಡೆಯೆರಚಿದೆ ಊರಿಗೆ
ಕನ್ನಡಿಯಾಗಿ ನಡೆವ ದಾರಿಗೆ
ಧೊಪ್ಪನೆ ಕುಸಿದುಹೋಯಿತು
ಏಳಂತಸ್ತೂ ಮಣ್ಣಲ್ಲಿ ಹೂತುಹೋಯಿತು

ಮೆಲ್ಲನೆ ಮೇಲಕೆದ್ದ ಧೂಳಿನ ನಡುವೆ
ಊರಿನ ದೆವ್ವಗಳ ಕುಣಿತ, ಕೆನೆತ

Sunday 12 February 2012

ಹುಳಗಳು...

ಹಸಿರಾಗಿ ಬಿದ್ದರೇನು
ಒಣಗಿ ಮುರುಟಿ ತೂರಿ
ನೆಲ ಕಂಡರೇನು
ಅದ್ಯಾವುದೋ ಡೊಂಬರು
ಒಡೆಯುವ ಹುಳಗಳಿಗೆ ಆಹಾರವಷ್ಟೆ ಮರದೆಲೆ
ನಿನ್ನೆ ಸೂಸಿದೆಲರೊಂದು ಸುಂದರ ನೆನಪು

ನೆಲ ಬಗೆದು ಹೊರ ಕಿತ್ತರು
ಊರೆಲ್ಲ ಬಳುಕಿದ ಅದೇ
ಸಿದ್ಧಿ ದೇಹವ ಕಳೆದ ತಿಂಗಳು
ಅಲ್ಲಿದ್ದದ್ದು ಬರೀ ಅವಳತ್ತ
ಊರ ಜನರ ವೀರ್ಯ ಹೊತ್ತ
ಒಂದಷ್ಟು ಇತಿಹಾಸ ಬಗೆದೆಲುಬು

ಕೆರೆ ಏರಿಯ ಒಣ ಮಣ್ಣಿನ ಮೇಲೆ
ಸತ್ತು ಬಿದ್ದ ಕರುವಿನ
ಹಾಸು ಮಾಂಸಕ್ಕೆ ಕಾಗೆ ಹದ್ದಿನ ರಣಹಿಂಡು
ಕೀಳಲು ಬಿಡದ ಜನರ ನಾಲಗೆ
ತೆವಲಿನ ಜಗಳದ ನಡುವೆ
ಕಾಗೆಗೂ ಸಿಗದ ಮೈಚರ್ಮ
ಅಳಿದೇ ಹೋಯಿತು ಅದೇ ಹುಳಗಳಿಗೆ

ಜಿಂಕೆಯನ್ನು ಚಪ್ಪರಿಸಿ
ಅವಗಳ ಸಂಖ್ಯೆ ಸಮೀಕ್ಷಿಸಿ
ಮೂಲೆಯಲ್ಲಿ ಸತ್ತ ಹುಲಿ
ಮೂರು ದಿನಕ್ಕೆ ಎಡತಾಕದು ಕಾಲಿಗೆ
ಅದೇ ಸಮತೋಲನ ಹುಳಗಳಿಂದ
ಇದೇ ಗತಿ ದೈತ್ಯ ಆನೆ ತಿಮಿಂಗಲಕ್ಕೆ
ಹೌದು ಕಾಲಿಗೆ ಸಿಗಬಾರದು ಹೆಣಗಳು

ಕೋಟಿ ಶತಮಾನ
ಹಿಂದಕ್ಕುರುಳಿಸಿ ಇತಿಹಾಸ ಮೀಟಿದರೂ
ಹುಳಗಳದ್ದೇ ರಾಜ್ಯಭಾರ
ಮೀಸೆ ತಿರುವಿ ರಾಜ್ಯ ಹರವಿ
ಕೊಬ್ಬೇರಿಸಿ ಬಬ್ಬಿರಿದವರನ್ನಾಳಿ
ಗಿಡ ಮರ ಬಳ್ಳಿ ಮೈ ಹಬ್ಬಿ
ಕಣ್ಣ ಮುಂದೆ ನಾಲಗೆ ಚಾಚಿ
ಕಾಲ್ಬೆರಳು ನೆಕ್ಕಿದೆ ಉಪ್ಪುಕಾರ ಸಮೀಕ್ಷೆಗೆ
ಸಿಗದು ಒಸಾಮನ ಬಂದೂಕದೇಟಿಗೆ

ನಾನಲ್ಲದ ನನ್ನಬಿಂಬವಿರುವ ಕನ್ನಡಿ
ನಿರ್ವಾಣ ತೋರುತಿದೆ ಹುಳ ಹರಿದಾಡಿಸಿ
ಹಿಂದೆ ಇದ್ದ ತುರುಮಂದಿ, ಜಗದೊಂದಿ
ಮಾಂಸ ಕರಗಿಸುತಿದೆ
ನವೋದಯಕ್ಕೆ ಹೊಸ ರುಚಿಗೆ
ನಾಲಗೆ ತೀಟೆಗಲ್ಲ, ಲೋಕರೂಢಿಗೆ