ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Friday, 10 August 2012

ಸುದ್ದಿ...

ಮೊನ್ನೆ ಕಾಗೆ ನೆತ್ತಿಯೊತ್ತಿ
ನನ್ನ ಮುಂದೆ ಕಾ ಕಾ
ಎಂದರಚಿದಾಗ
ತಿನ್ನಲೆರಡಗಳೆಸೆದದ್ದು
ದೊಡ್ಡ ಕೆಟ್ಟ ವಾರ್ತೆಯಾಯ್ತು

ಹಾದರಗಿತ್ತಿ ಹೆತ್ತ ಮಗು
ಊರಾಶ್ಚರ್ಯಸಹ್ಯ
ತೂ ಎಂದ ಮಂದಿ
ಬೀದಿಯಲ್ಲಿ ದೊಂದಿ
ಅವಳ ಮನೆ ಭಿತ್ತಿ ಮೇಲೆ
ಅಸ್ಪಷ್ಟ ವೀರ್ಯ
ಡಿ.ಎನ್.ಎ ಸುದ್ದಿ ನಿರ್ವೀರ್ಯ!

ಐಶ್ವರ್ಯ ರೈಗೂ ಹೆರಿಗೆ ಬೇನೆ
ಹೆಣ್ಣು ಇಲ್ಲವೆ ಗಂಡು ತಾನೆ?
ಬೇರೇನಾಗುವುದಿತ್ತು?
ಆಗುವುದರಾಗಲಿ ಜಗಮಾತು
ಅವಳಾಡಂಬರ ಮನೆ
ಹೊಸ್ತಿಲ ಕಾಲು ಹಿಡಿದ
ಕಿಟಕಿ ಗೋಡೆ ಮೇಲೆ ಜೋತ
ಹರಕು ಬಟ್ಟೆ ನಮ್ಮ ಪುಟ್ಟಿ
ಆಧುನಿಕ ಕ್ಯಾಮರಾಕ್ಕೂ ತುಟ್ಟಿ!

ಮಂತ್ರಿ ಭವ್ಯ ಬಂಗಲೆ ಮುಳ್ಳು
ಹೂವಿನ ಮೇಲೆ ಕುಳಿತ ಸಿದ್ಧಿ
ಅಪ್ಪ ಎನ್ನುತ್ತಿತ್ತು ಮಗು
ಮನೆ ಮಾಲೀಕನ ಗುದ್ದಿ
ಬ್ರೇಕಿಂಗ್ ನ್ಯೂಸ್ ನಲ್ಲಿ
ತಾಯಿ ಮಗು ಸಂಬಂಧ ಬ್ರೇಕ್
ಹುಚ್ಚಾಸ್ಪತ್ರೆ ಪಕ್ಕ ಅತ್ತನಾಥಾಶ್ರಮ

ಬಚ್ಚಲ ಮನೆಯೊಳಗಿಣುಕಿದ
ಕರಿ ನಾಗರಕ್ಕೆ
ದೇವರ ನಾಮ ಎಳೆದು
ನೆರೆ ಮನೆ ಜಿರಲೆಯ
ಆರು ಕಾಲಿಗೊಂದೊಂದು
ಸುದ್ದಿ ಕಟ್ಟಿದವನು
ದೋಷೋದ್ಧಾರಕ ಪ್ರಚೋದಕ
ಅರೆಬೆಂದನ್ನಕ್ಕೆ ಮೊಸರು

ಸದ್ದಿಲ್ಲದೆ ಗುದ್ದಲಿ ಪಿಕಾಸಿ ಚೂರಿ
ಹಿಡಿದ ಸುದ್ದಿಗಾರರು
ಹೆಗ್ಗಣ ಬಿಟ್ಟಗೆದರು ಬೆಟ್ಟ
ಹಿಡಿದರಿಲಿ
ಘರ್ಜಿಸಿದಂತೆ ಸತ್ತ ಹುಲಿ
ತಂತಿಗೆ ನೇತುಹಾಕಿ ಬಾವಲಿ
ಮಾಂಸವೇ ಇಲ್ಲದೆಲುಬಿಗೆ
ಇಳೆ ಸೀರೆ ಸೆರಗಿಗೆ ಕೈ
ಈ ಹಾಳು ಸೂರ್ಯನದೋ ಎಂದಿನ ನಗು

3 comments:

 1. ಮಾಧ್ಯಮಗಳನ್ನು ಸರಿಯಾಗೇ ಝಾಡಿಸಿದ್ದೀರ. ಪಾಪ ನಮ್ಮ ಮಾಧ್ಯಮ ಛಾಯಾಗ್ರಾಹಕರ ಪರಿಪಾಟಲು ಯಾರಿಗೆ ಅರ್ಥವಾಗುತ್ತದೆ ಗೆಳೆಯ?

  ReplyDelete
 2. ಸುದ್ದಿ ಬಂದು ಹೋದದ್ದು ತಿಳಿಯಲೇ ಇಲ್ಲ ಈ ಎಲ್ಲ ಗದ್ದಲದೊಳಗೆ. ಇರಲಿ. ಕೆಲವೊಮ್ಮೆ ಸುಡುವ ಸೂರ್ಯನನೂ ನುಂಗುವ ಕಡಲಂತೆ ನಾವೂ ಇರಬೇಕು.

  ಒಳ್ಳೆಯ ಪ್ರಸ್ತುತಿ.

  ReplyDelete
 3. ಸುದ್ದಿಯ ವಿಡಂಬನೆ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಅಭಿನಂದನೆಗಳು :-)

  ReplyDelete