ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Sunday 29 January 2012

ಕೆಲವು ಸೂಕ್ಷ್ಮಗಳಿಗೆ ಮನ ದೊಂದಿಯಾಗುತ್ತದೆ...

ತತ್ತಿಯೊಡೆದು ಮರಿ ಬಂದು
ಬೆಳೆದು ಮೈದಳೆದು ಹುಂಜಕ್ಕೆ ಮೈಯೊಡ್ಡಿ
ಒಂದೈದು ಮೊಟ್ಟೆ ಇಕ್ಕಿ ಮೇಲೆ
ಕುಳಿತು ಕಾವು ಕೊಡುವಾಗ
ಮರದಿಂದ ಬೀಜವುದರಿ ನೀರುನುಂಗಿ
ಸೂರ್ಯನಿಗೆ ಮೊಗಕೊಟ್ಟು
ಚಿಗುರಿ ಬೆಳೆದು ಮೈಗೆದರಿ
ಒಂದಷ್ಟು ಬೀಜವುದುರಿದಾಗ
ಒಂದು ಸೂಕ್ಷ್ಮದರಿವಿಗೆ ಮನ ದೊಂದಿಯಾಗುತ್ತದೆ

ಕೈನಲ್ಲಿದ್ದ ಮಂಜುಗಡ್ಡೆ
ಕರಗಿ ನೀರಾದರೂ ಅದೇನೋ ಜಿಜ್ಞಾಸೆ
ಮತ್ತದೇ ನೀರು ಪ್ರತಿಬಿಂಬ ಕೊರೆದು
ನೀರ್ಗಲ್ಲಾದಾಗ,ಗಂಟಿಕ್ಕಿದ ಬಲದ
ಸಂದರ್ಶನಕ್ಕೆ ಮತ್ತೆ ಮತ್ತೆ ಮನ ತಡಕಾಡುತ್ತದೆ

ಸಕ್ಕರೆ ಮಿಠಾಯಿ ಚಪ್ಪರಿಸಿದ ನಾಲಗೆ
ಕಟಕ್ಕನೆ ಕಡಿಯುವ ಹಲ್ಲು
ಅದೇ ಹಲ್ಲು ಕಲ್ಲು ಜಗಿಯದು
ಅದಕ್ಕೇನೋ ನಾಲಗೆಗೆ ರುಚಿಸದು
ತಪ್ಪಿ ನುಂಗಿದರೂ ಪಚನವಾಗದು

ಒಂದನುಭಾವ ಅನುಭವಿಸುವಾಗ
ಕಾಣದೊಂದು ಮೌನಕ್ಕೆ ಮನ ಮೊರೆಯುತ್ತದೆ
ಹುಲಿಗೆ ರುಚಿಸಿದ ಜಿಂಕೆ, ಹಾವು ನುಂಗಿದ ಕಪ್ಪೆ
ನನ್ನ ನಾಲಗೆ ಮೇಲಿಟ್ಟ
ಕುರಿ ಕೋಳಿ ಮೀನಿನ ರುಚಿ ತಪ್ಪೇ?
ತಿಂದರೆ ಕರಗಿಹೋಗುವುದಲ್ಲ ಮತ್ತೆ

ಒಂದು ವೀಣೆಯಲ್ಲಿ ಒಂದು ಮಾತಿದೆ
ಬೆರಳಾಡಿಸಿಬಿಟ್ಟರೆ ಸಾಕು
ಚೊಂಬಿಗೆ ಮಳೆ ಹನಿ ತೊಟ್ಟಿಕ್ಕಿದಂತೆ
ಟಳ್ ಟಳ್ ಎಂದು ಮೊಳಗುತ್ತದೆ
ಅದೇ ತಂತಿಯು ಧಾತುವಾಗಿ
ಮಣ್ಣಿನಲ್ಲಿ ಮಲಗಿದ್ದಾಗ ಸಂಗೀತ ಅಡಗಿತ್ತಲ್ಲ,
ಅದರೊಳಗೊಂದು ಹಾಡು ಮುಚ್ಚಿದ್ದು
ನನ್ನ ಮನಕ್ಕೆ ಬೆಂಕಿ ಹಚ್ಚಿದ್ದು ಏನು?

ಬುದ್ಧನುತ್ತರಿಸದ ಪ್ರಶ್ನೆಗೆ
ಅಜ್ಞಾನಿಯ ಬಾಲಿಶ ಸಬೂಬು
ವಿಜ್ಞಾನಿ ಅಣು ಭಾಗಿಸಿ ಹೌದು
ಭಾಗಿಸುತ್ತಲೇ ಕುಳಿತಿದ್ದಾನೆ
ಕಾಲಿಗಲ್ಲ, ಶರವೇಗದ ನಾಗರಹಾವಿಗೂ
ಸಿಗದ ಮಧು ಸುರಿಸಿದ ಮರವದು

Tuesday 24 January 2012

ಹೆಜ್ಜೆ ಗುರುತು...

ಬಾಳೆ ಬಾಗಿದ ದೇಹ
ಆನೆ ಸೊಂಡಿಲು
ಒಂದಂಕುರಕ್ಕೆ ಕಾದ ಸೃಷ್ಟಿ
ಅಲ್ಲಲ್ಲಿ ದೃಷ್ಟಿಬೊಟ್ಟಿಟ್ಟು
ಬಳಸಿ ಮೈ ಸವರಿ
ಹಳ್ಳದಿಣ್ಣೆ ಕೊರೆದು
ಮೆಲ್ಲನೆ ಕೆತ್ತಿತ್ತು ಬೆಣ್ಣೆ ಮುದ್ದೆಯ

ಅಮ್ಮನುದರದೊಳಗದು
ವಿಲವಿಲನೊದ್ದಾಡಾಗಾಗೊದ್ದರೆ
ನಗುತ್ತಿದ್ದಳಂತೆ ಅಮ್ಮ
ಸೃಷ್ಟಿಗೆ ನಿಟ್ಟುಸಿರು

ತಡವರಿಸಿ ತಾಯಗರ್ಭದಿಂದ
ಹೊರಬಂದ ಹಸುಳೆಗೆ
ಪ್ರತಿದಿನ ಎಣ್ಣೆ ಸ್ನಾನ
ನೆತ್ತಿ ಸವರಿ ಪ್ರಾಣ ಕಾಪಾಡಿ
ಧನುರ್ವಾಯುವಿಗೆ ಮೈ ಕಾಯಿಸಿ
ಹಚ್ಚಡೌಷಧಿ ಹಚ್ಚಿ
ನುಣುಪು ಮಾಡಿದರೊನೊಪೊಯ್ಯಾರಕ್ಕೆ

ಹೀಗೆ ಸಾಲು ಸಾಲಿಗೂ
ಅದರೋರೆ ಕೋರೆಗಳ
ತಿದ್ದಿ ತೀಡಿ, ಸಿಂಬಳ ಒರೆಸಿ
ಯವ್ವನಕ್ಕೆ ತಂದರು
ಅವಳಿಗಾಗ ದೇಹದೊನಪು
ಬಾಗಿ ಬಳುಕಿ ನೋಡುತ್ತಾಳೆ
ಹಳ್ಳದಿಣ್ಣೆಗಳ ಕಳ್ಳಿಯಂತೆ
ಹಾದಿಬೀದಿಯ ಕಳ್ಳರಿಗೆ
ಮೈ ಐಶ್ವರ್ಯ ಪ್ರದರ್ಶನ

ಒಂದು ಕಲೆ, ಸುಕ್ಕಿಗೆ
ಒಂದು ದಿನದ ಚಿಂತೆ
ಫೇರ್ ಅಂಡ್ ಲವ್ಲಿ
ಅದ್ಯಾವುದೋ ಸುಣ್ಣ ಮೆತ್ತಿ
ತುಟಿರಂಗಿಗೆ ಬಣ್ಣ ಹಚ್ಚಿ
ತುಂಡುಡುಗೆಯೊಳಗಿಳುಗಿ
ತುಂಟರ ತಂಟೆಯಾಗಿದ್ದಳು

ಈಗ ನೋಡಿ
ಅದೇ ಸೌಂದರ್ಯ ಒನಪೊಯ್ಯಾರ
ಬೆಂಕಿಗುರಿಯುತಿದೆ
ಬೂದಿಯಾಗಿ ಸುರಿಯುತಿದೆ
ಬಾಗಿ ಬಳುಕಿದದೆ ಅಂಗಾಂಗಳು
ಭಗ್ನಗೊಂಡಿವೆ ಸೃಷ್ಟಿಯ ವಿಘ್ನಕ್ಕೆ
ಸೌಂದರ್ಯ ಕದ್ದ ಅದೇ ಕಳ್ಳರು
ಮೂಗು ಮುಚ್ಚಿದ್ದಾರೆ ದುರ್ವಾಸನೆಗೆ!

ಊರ ದಾರಿಯಲ್ಲೆಲ್ಲ
ಆ ದೇಹ ನಡೆದಿತ್ತು
ಸಣ್ಣ ಮಳೆಗೆ ಹೆಜ್ಜೆ
ಗುರುತಳಿಸಿಹೋಗುವಂತೆ!

Monday 23 January 2012

ಫೆಬ್ರವರಿ 14….

ಪ್ರಿಯೆ…
ನಮಗೂ ಒಂದು ದಿನವಂತೆ
ನಗಬೇಕಂತೆ ಮರೆತೆಲ್ಲ ಚಿಂತೆ

ಇತಿಹಾಸದ ಬರಿ ಎಲುಬುಗಳು
ಒಳತೋಟಿಯಲ್ಲಿ ಅತ್ತು
ಕಾಲು ಚುಚ್ಚುತ್ತಿವೆ ನೆಲ ಬಗೆದು
ಅಲ್ಲೇ ಷಹಜಹಾನ್ ಅಳುತ್ತಿದ್ದಾನೆ
ಮಮತಾಜಳ ಪುಪ್ಪುಸ ಹಿಡಿದು
ಕತ್ತಲಲ್ಲಿ ಮಸಿ ಬಳಿದ ತಾಜ್ ಮಹಲ್ ಗೆ
ಭಗ್ಗನೆ ಬುಗಿಲೆದ್ದ ಬೆಂಕಿ

ಯಾರೋ ಮುಡಿದ ಮಲ್ಲಿಗೆ
ಈಗಲೂ ಪ್ರಿಯ ಆ ದೇವದಾಸ್ ಗೆ
ಹೂದಳದ ಮೈಮೃದು ಮರೆತರೂ
ಮಲ್ಲಿಗೆಯ ಮಂಪರು ಪರಿಮಳ ಎಡತಾಕುತಿದೆ

ಅಳಬೇಡೆಂದು ನಾನತ್ತಿದ್ದೆ
ಕೆನ್ನೆ ಒರೆಸಿದ ನೀನಿಂದು
ದಾರ್ಷ್ಯದೆತ್ತರದ ನೆತ್ತರಲ್ಲಿದ್ದಿಹೋಗಿರುವೆ
ನಡುವೆ ನೂರು ಗೋಡೆ ಕಟ್ಟಿ
ಬೊಗಳಿದ ಸನ್ನಿಗಳು, ಕುನ್ನಿಗಳು
ಪಹರೆಯಲ್ಲಿವೆ
ಸೂರ್ಯನಿಗೆ ಚಂದ್ರನನ್ನು ತಂದು

ಜಾತಿ ಜಾತಿ ಎಂದು
ಬಾಳ ನೀತಿ ಕೊಂದು
ದೇಶ ದೇಶದ ನಡುವೆ
ದ್ವೇಷ ಹಚ್ಚಿ
ಮತ ಮತದ ನಡುವೆ
ಪಂಥವಿಟ್ಟು
ಇತಿಹಾಸವನ್ನು ಕೊಡಲಿಯಲ್ಲಿ
ಕೊಚ್ಚಿದವರ ನಡುವೆ
ನಾನು ನೀನಿದ್ದೇವೆ

ಆದರೂ ಪ್ರಿಯೆ
ಮನಸ್ಸನ್ನೊಮ್ಮೆ ಗಾಳಿಗೆ ತೇಲಿಸು
ಇಬ್ಬರೂ ಬಿಡದಪ್ಪಿಕೊಂಡು
ಈ ದಿನದ ಸಂಭ್ರಮಕ್ಕಾದರೂ
ಲೋಕ ಮರೆತು ತೇಲಿಬಿಡೋಣ

ಶೀಲಾಶ್ಲೀಲ

ಹೊಂಡದಲ್ಲಿ ತುಂಬಿರುವ
ಲಕ್ಷಧಾತು ಕ್ಯಾಮರಾದ
ಕಳ್ಳಗಿಂಡಿಯಲ್ಲಿ..
ಇಟ್ಟವನಾರು? ಹೌದವನೇ!

ಇತಿಹಾಸದ ರಕ್ತ ಹೀರಿದ
ಹೊಲಸು ಕೈಗಳೇ ಸರಿ
ಶೀಲಾಶ್ಲೀಲ ಮಾಡಿ ತಬ್ಬಿಕೊಂಡಿತು
ರಾಕ್ಷಸ ಕರಗಳು
ಒಂದು ತೊಟ್ಟು ಹನಿಗೆ
ಮಳೆ ಸುರಿಸಿ ಕೊಚ್ಚಿತು
ಎದೆಗೆ ಬೆಂಕಿ ಹಚ್ಚಿತು

ಜಗದ ದೂರದರ್ಶನದಲ್ಲಿ
ಯಾವುದಾವುದೋ ಮನೆಯ
ವಾಸನೆ ಬಡಿದ ಹಾಸಿಗೆಗಳು
ಯಾವುದೋ ಬೀದಿಯ
ಗಲ್ಲಿಗಳು
ಕಾಲ್ದಾರಿಗೆಟುಕದ ಜಾಗಗಳು
ನಾರಿ ಗಬ್ಬಿಟ್ಟ ಕಕ್ಕಸ್ಸು
ಮನೆಗಳು
ಅಲ್ಲೆಲ್ಲೋ ಕಾಲೆತ್ತಿಕೊಂಡ
ಜೋಡಿಗಳು
ಕೆಂಡಕ್ಕೆ ಮುತ್ತಿಟ್ಟ ಇರುವೆಗಳು

ಮತ್ತೆ ರುಚಿಸಿದ ಸರ್ಕಾರಿ ಯೋಜನೆ
ಉಚಿತವಾಗಿ ಸಿಕ್ಕ ನಿರೋಧಕ
ಹತ್ತಿರವಿಲ್ಲದ ಹೆತ್ತವರು
ತುಟಿಯಲ್ಲೇ ತುತ್ತು ತಿನ್ನೋ ತವಕ
ಕೈ ಸೋತಿತು ಮೈಮೃದುತ್ವಕ್ಕೆ

ಚೂರು ಕಾಮಕ್ಕೆ ಪ್ರೇಮಬಲಿ
ಅದಿರಲಿ, ಎಲ್ಲಿ?
ಪ್ರೇಮದ ಕೊನೆಯ ಮೆಟ್ಟಿಲಲ್ಲಿ
ಕಾಮಕ್ಕೆಂದೇ ಪ್ರೇಮವಿರದಿರಲಿ

Friday 13 January 2012

ಕತ್ತರಿ...


ಅಲ್ಲಾ ಕಣಯ್ಯಾ ಮಹಾಶಯ
ಶರ್ಟನ್ನು ಕತ್ತರಿಸು
ಎಂದು ನಿನಗೆ ಹೇಳಿದವರಾರು?
ಆಯ ನೋಡಿ ತುಂಡರಿಸಿಯೇ
ಆ ಅಂಗಿಯನ್ನು ಹೊಲೆದಿದ್ದು
ನನ್ನನ್ನು ಹಿಡಿದುಕೊಂಡಿದ್ದವನು ನೀನಲ್ಲವೆ!

ಪಾರ್ಥೇನಿಯ ಗಿಡದಂತೆ
ಮತ್ತೆ ಮತ್ತೆ ಬೆಳೆಯುವ
ಕೆದರಿದ ಕೇಶವನ್ನು ಹಾಗೆ
ಸವಟಿದರೆ ಸುಂದರ ವಿನ್ಯಾಸ
ಎಲ್ಲೆಂದರಲ್ಲಿ ಹೆರೆದು
ಬೋಳು ಮಾಡಿಕೊಂಡು
ನನ್ನನ್ನು ದೂರಿದರೆ ಹೇಗಯ್ಯಾ?

ಅವ ಕ್ಷೌರಿಕನನ್ನು ನೋಡಿ ಕಲಿ
ನಾಜೂಕಿನಾಟ ಅವನಿಂದ ತಿಳಿ
ಗುಂಗುರು ಕತ್ತರಿಸಿ
ಕಸವ ಮೂಲೆ ಒತ್ತರಿಸಿ
ತಿಕ್ಕಿ ತೀಡಿ ಕೂಡಿ ಬಾಚಿ
ಭೇಷ್! ಎನಿಸಿಕೊಳ್ಳುವನು

ಎಂದೋ ಮೂಲೆ ಸೇರಿದ್ದ ಕತ್ತರಿ
ಕೇಳಿದಂತೆ ಬಳುಕದು
ಹಿಡಿದು ತುಕ್ಕು, ಮೈಯೆಲ್ಲಾ ಕೊಳಕು
ಹಚ್ಚಿಲ್ಲ ಕೀಲಿ ಎಣ್ಣೆ
ಕಾರಣ ನೀನೇ ಮಂಕುದಿಣ್ಣೆ

ಮತ್ತೆ ಅಳುವೆ ಯಾಕೆ ಪೆದ್ದು
ಹಿಡಿದುಕೊಂಡ ಕೈ ನಿನ್ನದು
ನೀ ಆಡಿಸಿದಂತೆ ಆಡುವ ಕಾಯಕವೆನ್ನದು
ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ
ಸಿಕ್ಕಿದ್ದನ್ನು ತುಂಡರಿಸಿ
ನನ್ನನ್ನು ಮೂಲೆಗೆಸೆದರೆ ಹೇಗೆ?
ದೀಪ್ತಿಯಂಗಳದಲ್ಲೊಮ್ಮೆ ದಿಟ್ಟಿಸು
ಸಾಣೆ ಹಿಡಿ, ಹಚ್ಚು ಎಣ್ಣೆಯೆಂಬ ದಿರಿಸು

ಒಳಗಣ್ಣಲ್ಲೊಮ್ಮೆ ನೋಡು
ನನ್ನ ದೇಶವನ್ನು ಕಾಪಾಡು
ಸುಂದರ ಕಾರ್ಯಕ್ರಮವೊಂದಕ್ಕೆ
ಪಟ್ಟಿ ಕತ್ತರಿಸು ನನ್ನ್ನನ್ನು ಹಿಡಿದು

Tuesday 10 January 2012

ನಾಲ್ಕು ಹೂ... (ಒಂದು ಹಳೆಯ ಕವಿತೆ)

ನಾಲ್ಕು ಹೂವು ಕೊಯ್ದು ತಂದೆ
ಒಂದು ಮುಡಿಗೆ, ಇನ್ನೊಂದು ಕಾಲಡಿಗೆ
ಮತ್ತೊಂದು ದೇವರ ಗುಡಿಗೆ
ಉಳಿದಿದ್ದು ಹೆಣದ ಮರೆವಣಿಗೆಗೆ
ಹಿತ್ತಲಿನ ಬೇಲಿಯಲ್ಲಿ ಬೆಳೆದು
ಕತ್ತಲಿನ ಮೌನದಲ್ಲಿ ನಲಿದು
ನೆರೆಮನೆಗೆ ದಿನ ನೆರಳಾಗಿ
ಮುಡಿಯೇರಿ ನಲಿಯಿತೊಂದು

ಅರಳು ಹೂಗಳು ಹಲವು
ಸುಟ್ಟ ಬೆಟ್ಟದ ಬೂದಿಯಲ್ಲಿ
ಕೆರೆಯ ದಂಡೆಯ ಕೊಳಕಿನಲ್ಲಿ
ಕೆಸರಿನ ತೊಟ್ಟಿಕ್ಕಿದ ನೀರಿನಲ್ಲಿ
ವಿದ್ಯುತ್ ಕಂಬದ ಬುಡದಲ್ಲಿ
ಕೈಗಳ ಕಾಮದ ವಾಂಛೆಯಲ್ಲಿ
ಪೋಲಿದನಗಳ ಬಾಯಿಯಲ್ಲಿ
ಮುದುಡದಿದ್ದರೂ ಕಾಲಿಗೆ ಸಿಕ್ಕಿದ್ದೊಂದು

ಹುಟ್ಟಿನೊಂದಿಗೆ ಸಾವು
ಹಟ್ಟಿಯಲ್ಲಿ ಮುರಿದ ಹಂದರ
ತೊಗಲಿನ ಚಾದರದಡಿ ಆತ್ಮ
ಮೋಡಗಳಾಚೆ ತೂರಿತು
ಸುಖವ ತೊರೆದ ಕುಸುಮವೊಂದು
ಆತ್ಮನಿಗಲ್ಲ ಒಣಗಿದ ಎದೆಗೆ

ಪಂಚಾಕ್ಷರಿ ತಾರಕ್ಕಕ್ಕೇರಿರಿಲು
ಗಂಟೆಗಳ ನಿನಾದದ ಸವಿ
ಪಾದದಡಿಯಲ್ಲಿ ಪಾವನವಾಗಿ
ದಿಕ್ಕಿಗೆ ಪರಿಮಳ ಪಸರಿಸಿ
ಭಗವಂತನನ್ನು ತೋರಿಸಿತೊಂದು
ಪಾರಮಾರ್ಥದ ನೆರಳಿನಲ್ಲಿ ಮಿಂದು

ಮುಡಿದ ಹೂ ಜಾರಿತ್ತು
ಕಾಲಿನ ಹೂ ಸತ್ತಿತ್ತು
ದೇವರ ಹೂ ಬಾಡಿತ್ತು
ಹೆಣದ ಹೂ ಗುಂಡಿಯಲ್ಲಿತ್ತು
ಬೀಜ ಒಡೆದು ಕೋಗಿಲೆ ಕೂಗಿ
ಚೈತ್ರ ಚಿಗುರಿ ಶಲಾಕ ಉದುರಿ
ನಕ್ಕವು ಹಲವು ಹೂ ಮುಖವ ತೋರಿ
ಕಾಲನ ಕೈಗೆ ಮತ್ತೆ ಸವೆಸುವ ಕೆಲಸ

ಶೂನ್ಯದಪ್ಪುಗೆ (ಒಂದು ಹಳೆಯ ಕವಿತೆ)

ಒಂದನ್ನು ಉಳಿಸಲು ಅದನ್ನು
ಎರಡರಿಂದ ಬಂಧಿಸಿದೆ
ಎರಡನ್ನು ಉಳಿಸಲು ಅದನ್ನು
ಮೂರರಿಂದ ಬಂಧಿಸಿದೆ
ಮೂರನ್ನು ಇನ್ನೊಂದು
ಒಂದರಿಂದ ಬಂಧಿಸಿದ್ದೆ

ಕೊನೆಯ ಒಂದು ಒಂದುದಿನ
ಕಳೆದು ಹೋಯಿತು
ಅಷ್ಟರಲ್ಲಿ ಯಾವ ಬಾಗಿಲು
ತೆರೆಯಲಾಗದೆ ಕುಳಿತುಬಿಟ್ಟೆ

ಮೂರೂ ಹತ್ಲ ಎಷ್ಟು ಎಂದಾಗ
ಗುಣಿಸುವ ಬದಲು
ಮೂರನ್ನು ಹತ್ತು ಬಾರಿ ಕೂಡಿದೆ
ಮೂರರಿಂದ ಎರಡು ಕಳೆದರೆ
ಎಷ್ಟು ಎಂದಾಗ ಕಳೆಯಲಿಲ್ಲ
ಮೂರಕ್ಕೆ ಋಣ ಎರಡನ್ನು
ಕೂಡಿಸಿ ಉತ್ತರ ಕಂಡುಕೊಂಡೆ

ಕೂಡುವುದೇ ಮರೆತುಹೋಯಿತು
ಗುಣಾಕಾರ, ವ್ಯವಕಲನ
ಎಲ್ಲ ಮರೆತು ನಿಂತುಬಿಟ್ಟೆ

ಅಪ್ಪನನ್ನು ಪ್ರೀತಿಸಲು ಹೋದೆ
ಅಪ್ಪನನ್ನೇ ಅಪ್ಪಿದ ಅಮ್ಮ ಕಂಡಳು
ಅಮ್ಮನನ್ನೇ ಪ್ರೀತಿಸಲು ಹೋದೆ
ವಾತ್ಸಲ್ಯ ತುಂಬಿದ ಗೆಳೆಯರು ಕಂಡರು
ಕಣ್ಣಲ್ಲಿ ತುಂಬಿಕೊಳ್ಳಲು ಹೋದೆ
ಇವರೆಲ್ಲರೂ ನಿನ್ನ ಮನದಲ್ಲಿ ಕಂಡರು
ನಿನ್ನನ್ನೇ ಒಪ್ಪಿಕೊಂಡು ಅಪ್ಪಿಕೊಂಡೆ

ಈಗ ನೀನೆ ದೂರ ಹೋದೆ
ಎಲ್ಲರನ್ನು ಕಳೆದುಕೊಂಡು
ಶೂನ್ಯದೆಡೆಗೆ ಮುಖ ಮಾಡಿಬಿಟ್ಟೆ..

Sunday 8 January 2012

ರಂಗವಲ್ಲಿ...


ಅಂದೊಂದು ದಿನ
ಬಿಡಿಸಿ ರಂಗವಲ್ಲಿ ಮನದಲ್ಲಿ
ಹಸಿರಿಕ್ಕೆಲಗಳಿಗೆ ಹೂ ಚೆಲ್ಲಿ
ಕಾದಿದ್ದೆ ಅವಳಿಗೆ
ಕಣ್ಣೋಟದಲ್ಲೇ ಬರುತ್ತೇನೆಂದಿದ್ದಳು

ಬರಲೇ ಇಲ್ಲ ಚೆಲುವೆ
ಕಿಟಕಿಯಲ್ಲಿಣುಕಿಣುಕಿ
ತಿಣುಕುವ ಮನಸ್ಸನ್ನೊಮ್ಮೆ ಕೆಣಕಿ
ಬಗ್ಗಿ ಬಾಗಿ ನೋಡುವುದೇ ಆಯಿತು
ಊಹೂಂ... ಬರಲಿಲ್ಲ

ಕುಣಿದು ಕುಪ್ಪಳಿಸಿ
ಸಾಕಾಗಿ ಮಲಗಿದೆ ಆ ರಂಗವಲ್ಲಿ
ಬಗೆ ಬಗೆ ಬಣ್ಣ ಬಳಿದು ಬರೆದಿದ್ದು
ಹೌದು ಅದು ನನ್ನ ತಪ್ಪು
ಮಾಡಿದ್ದ ಮೃಷ್ಟಾನ್ನ ಭೋಜನ
ಹಳಸಿದೆ ಅರೆಗಳಿಗೆಗೆ
ಪ್ರೇಮತುಂಬಿದ ಪ್ರಪಂಚಕ್ಕೆ
ಆಗಾಗ ರಕ್ತದಭ್ಯಂಜನ

ಯವ್ವನ ಚಿಗುರಿ ಕೊರಡಾಗಿದ್ದಾಗ
ಸೆರಗಿನಂಚಿನಲ್ಲಿ ನೋಡಿದ್ದವಳು
ನಿಂತ ನೀರು ಕಟ್ಟೆಯೊಡೆದು ಧುಮ್ಮಿಕ್ಕಿ
ಭೋರ್ಗರೆವ ಜಲಪಾತವಾದಾಗ
ಮಳೆಯಂತೆ ಸುರಿದು ಭೋರ್ಗರೆಸಿದವಳು

ಸರಸರನೆ ಹಬ್ಬಿಕೊಂಡ
ಚುರುಚುರು ಸೊಪ್ಪಿನ
ನುಣುಪಾದ ಸವೆತಕ್ಕೆ
ಸಿಂಬಳ ಸುರಿಸಿ ಮತ್ತೆ ಮತ್ತೆ ಒರೆಸಿಕೊಂಡರೂ
ಪರಿಪರಿಯಾಗಿ ಉರಿದಳು

ಭಯಾನಕ ಭಯಾತಂಕವೇನು ಗೊತ್ತು
ಈ ಹಾಳು ಹೃದಯಕ್ಕೆ
ಆದರೂ ಬಡಬಡನೆ ಬಡಿಯುತ್ತದೆ

ಸಾರಸ್ವತ ಲೋಕಕ್ಕೊಮ್ಮೆ
ತಳ್ಳಿದಳು ನನ್ನನ್ನು
ಅನುದಿನದನುಭವ ಕಲಿಸಿ
ನನ್ನಿಂದ ನನ್ನನ್ನು ಕೆತ್ತಿಸಿದಳು
ನೋವೆಂದರೇನೆಂದುತ್ತರಿಸಿದಳು

ಈಗವಳಿಲ್ಲ
ಅಲ್ಲೆಲ್ಲೋ ದೂರದಲ್ಲಿ
ಯಾರದೋ ಎದೆಗೆ ಒರಗಿ
ಹಾಲುಣಿಸುತ್ತಿದ್ದಾಳೆ ಮಗುವಿಗೆ

ಆದರೂ ಈ ದರಿದ್ರ ಕನಸಿಗೆ
ಆಗಾಗ ಅವಳ ಹೆಜ್ಜೆ ಸಪ್ಪಳ ಕೇಳಿಸಿದಂತೆ
ಬರೀ ರಂಗೋಲೆ ಬಿಡುವುದೇ ಆಯಿತು....

Friday 6 January 2012

ಕಣಿವೆಯ ಹಾದಿ


ಕಣಿವೆಯ ಹಾದಿಗೆ
ಒಡೆಯನ ಪಹರೆಯಿಲ್ಲ
ಹೆಜ್ಜೆ ಇಡಲು ಭಯ
ಅದೆಂತಹ ನೀರವತೆ
ಚಿಂತನೆಯಿರದೇಕತಾನತೆ
ಬಾಹ್ಯ ಸುಸ್ಪಷ್ಟ
ಅಂತರಾಳವಸ್ಪಷ್ಟ
ಬವಣೆ ತುಂಬಿದ ನೋಟ

ಅಮ್ಮ ಹೇಳುತ್ತಿದ್ದಳು
ಅಲ್ಲಿ ದೆವ್ವವಿದೆಯಂತೆ
ಹೌದೌದು ಒಮ್ಮೊಮ್ಮೆ
ಸ್ನಿಗ್ದ ಚೀರಾಟ
ಇದ್ದಕ್ಕಿದ್ದಂತೆ ಭಗ್ನ
ಗೋಳಾಟ
ಮಂಜಿನ ಹನಿಗಳ
ಹೀರುವ ಕಿರಣಗಳ
ನುಂಗದೇ ಸುಟ್ಟಿದೆ
ಅದರೊಡಲು
ಬಿರುಗಾಳಿ ಬೀಸಲು
ಪಕ್ಕದಲ್ಲೇ ಇರುವ
ಪಾಪಾಸುಕಳ್ಳಿಯ
ಗುಡಿಸಿಟ್ಟರೂ
ದಾರಿಗೆ ಬಿದ್ದಿರುತ್ತದೆ
ತಡೆಯಲಾಗುತ್ತಿಲ್ಲ
ಪಾರ್ಥೇನಿಯಂ ಬೀಜಾಂಕುರ
ಪೊಟರೆ ಸಂದುಗಳಿಂದ
ಹರಿದು ಸರಿದು
ಹೆಡೆ ಎತ್ತಿ ನಿಂತಿರುತ್ತದೆ ನಾಗರ
ಕಾಲಿಗೆ ತಾಕುವ ಹೆಬ್ಬಾವಿನ ಸರ

ಎರಡೂ ಇಕ್ಕೆಲಗಳಲ್ಲಿ
ದಾರಿಗುಂಟ ಸಾವಿರ ಮರ
ಎಲೆಯುದುರಿ ಬೋಳಾಗಿ
ನೆರಳು ನೀಡದ
ಅದರ ನೋವಮರ
ದಾರಿಯಂತ್ಯದಲ್ಲಿ
ಹೌದು ಅದೇ ಸ್ಮಶಾಣ
ಹೆಣ ಹೊತ್ತಷ್ಟೇ ಬರುವುದು ಜನ
ಮೇಲೆ ಎರಚಿದ
ಮಂಡಕ್ಕಿ ಆಯಲು
ನೂರು ಹುಳಗಳ ಕಾವಲು

ನೋಡಲಷ್ಟೇ ನೀರವತೆ
ಗಮ್ಯತೆ ತುಂಬಿದ ಸಭ್ಯತೆ
ಸಾವಿರ ಮಾರುದ್ದ ದಾರಿ
ಅಳುತ್ತಿದೆ ನೋವು ಸೋರಿ
ಕೆಂಡದ ಬಿಸಿ ಬಿಸಿ ಬಿಸಿಗೆ
ನೊಂದಿದೆ ಕೆಂಡಸಂಪಿಗೆ
ನಗು ನಗುತ್ತಲೇ
ಮುದುಡಿ ಕುಳಿತ ಮನಸ್ಸಿನಂತೆ

Tuesday 3 January 2012

ಪಕ್ಷಿ ಮತ್ತು ಸಿದ್ಧ...

ಕಾಳನು ಹೆಕ್ಕಿ ಕುಕ್ಕಿ ಮೆಲ್ಲಗೆ ಮೆಲ್ಲಿ
ಪಟಪಟನೆ ಅದುರಿತು ರೆಕ್ಕೆ ಚೆಲ್ಲಿ
ಬಿಚ್ಚದೇ ಮುಚ್ಚಿದರೆ ಬೆವರು
ಹೊತ್ತು ಹಾರಾಡಿದರೆ ತುತ್ತು
ಎಲ್ಲಿದೆ ನೀರು ತನ್ನನ್ನು ಅದ್ದಲು
ಗಹ್ಯ ಲೋಕದಲ್ಲೊಮ್ಮೆ ಮೀಯಲು

ದೂರದಲ್ಲಿ ನೆಲ ಅಗೆದ ಸಿದ್ಧನಿಗೂ
ಅದೇ ಚಿಂತೆ
ಅಗೆದರೂ ಬಗೆದರೂ ಕಾಣದೊರತೆ
ಹ್ಯಾಪೆ ಮೊಗದಲ್ಲಿ ಬೀಡಿ ಕಚ್ಚಿ
ದಾಡಿ ಬಿಟ್ಟಿದ್ದಾನೆ
ಮುಖ ತೊಳೆಯನು
ಹಲ್ಬಿಟ್ಟರೆ ಹಲ್ಕಟ್ ವಾಸನೆ
ಅಲ್ಲಿ ಇಲ್ಲಿ ಗಲ್ಲಿ ಗೋರಿ
ಸಂಜೆಗೊಂದಷ್ಟು ಹೆಂಡ ಹೀರಿ
ಮುಂಜಾನೆ ದಿಬ್ಬ ಏರಿ
ಸೂರ್ಯನನ್ನು ನೋಡಿ ನಕ್ಕುಬಿಡುತ್ತಾನೆ

ಮಳೆಗಾಲದಲ್ಲಿ ಮೈ ಅದ್ದಲು
ರೆಕ್ಕೆ ಬಿಚ್ಚಲ್ಲ
ಸುಯ್ ಎನ್ನುವ ಗಾಳಿಗೊದರಿ ಮೈ
ಬೆನ್ನು ಕೆರೆಯುತ್ತದೆ ಕೊಕ್ಕಿನ ಕೈ
ಈಚಲು ಪೀಚಲು ಹತ್ತಿ
ಆಲ ಹಣ್ಣು ಮೇಯ್ದು
ಪಿಕ್ಕೆಯೊಂದಿಗೆ ಬೀಜವುದುರಿಸಿ
ಒಂದಂಕುರವಿಟ್ಟ ಜೀವ ಮೊಳೆಯುತ್ತದೆ

ಅವ ಸಿದ್ಧನೂ ಅಷ್ಟೆ, ಹೊಲ
ಉತ್ತುತ್ತಾನೆ ಅದೇನೋ ಬಿತ್ತುತ್ತಾನೆ
ಸಂಜೆ ಮಳೆಗೆ ನೆಂದು ನಿಂದು
ಏಳಕ್ಕೆ ಬಾಗಿಲು ಮುಚ್ಚಿ
ಹೆಂಡತಿ ತಬ್ಬಿ ಬಟ್ಟೆ ಒಣಗಿಸಿಬಿಡುತ್ತಾನೆ!
ಅವಳದು ಬಿರುಗಾಳಿ ಮೊಗ
ಸಣ್ಣ ದಿಣ್ಣೆಯ ಮೈದಾನದೆದೆ
ಉಗುರ ಸಂದುಗಳಲ್ಲಿ ತಲೆ ಹೇನು
ಹಲ್ಲಿನ ಗಿಂಡಿಯಲ್ಲಿ ಕಳೆದ ವಾರದ ಮೀನು
ಬಿಸಿಲಿನಲ್ಲೊಣಗಿದ ಮುದ್ದೆಯ ಕರಿ
ಆದರೂ ಅವಳೇ ಅವನಿಗೆ ವಿಶ್ವ ಸುಂದ್ರಿ

ನೆತ್ತಿ ಕಚ್ಚಿ ಬೆನ್ನ ಮೇಲೆ ಕುಳಿತು
ಸ್ಖಲಿಸಿಬಿಟ್ಟರೆ ಗಂಡು ಪಕ್ಕಿ
ಉದುರುತ್ತದೆ ನಾಲ್ಕು ತತ್ತಿ
ಹಾವು ಬರಬಹುದು ಮರ ಹತ್ತಿ
ಅದಕ್ಕೆ ಜೀವನೋಪಾಯ
ಹಕ್ಕಿಗಿಲ್ಲವಪಾಯ, ಬಯಸಿದ್ದಲ್ಲವದು
ಸಿದ್ಧನ ಮಕ್ಕಳು ಹಾಗೆ
ಊರ ನೂರು ದಾರಿಯಲ್ಲೆಲ್ಲೋ
ಕುಳಿತ್ತಿರುತ್ತವೆ
ದುಡಿದುಣ್ಣುತ್ತವೆ, ಹಡೆವ
ಕಾಲ ಬಂದಾಗ ಹಡೆಯುತ್ತವೆ

ರೀತಿ ರಿವಾಜುಗಳೊಡಮೂಡಲ್ಲ
ಯಂತ್ರ ಸಾಕು ತಂತ್ರ ಅವರಿಗೆ ಸಲ್ಲ
ಮನಸ್ಸಿಗೆ ಕಾಡದ ದೊಂದಿ
ಸಮತೆಯ ಹಾದಿಯಲ್ಲಿರುವ ಮಂದಿ
ಹರಿವ ನದಿ ತಟದಲ್ಲಿದ್ದರು
ಗೊಡವೆಗೆ ಹೋಗದೆ ದಾಟರು
ಮುರುಟದ ಮನಸ್ಸುಗಳವು
ಗಿಳಿಯಂತೆ, ಕಾಗೆ ಗೂಗೆ
ಬಕ ಪಕ್ಷಿಯಂತೆ, ನಮ್ಮ ಸಿದ್ಧನಂತೆ
ಬಗೆದು ಒಗೆಯದ ಕೌಪೀನದೊಳಗೆ
ಚಂದವಿರುತ್ತದೆ ಬದುಕು ನಡೆಸುವ ಬಗೆ

ನಾವು ನೀವೇ ಅದೇನೇನೋ
ಸಾಧಿಸಲು ಹೋಗಿ
ಜಗವನ್ನೇ ಮಸೆದು
ಮನಸ್ಸದು ಸವೆದು, ಹೌದು
ಸವೆದು ಸವೆದು ಸಾಯುತ್ತಿರುವುದು

Monday 2 January 2012

ಡಿಸೆಂಬರ್ ಜನವರಿ ತುಟಿಗಳು...


ಬರಿದಾದ ನದಿ ತುಟಿ ಬಾಯ್ಬಿಟ್ಟಿದೆ
ಇಕ್ಕೆಲಗಳಲ್ಲಿ ಸುಟ್ಟ ತ್ಯಾಪೆಗಳು
ಚಾಪೆಗಳು
ನೋವಿಗೆ ಎಣ್ಣೆ ಬೆಣ್ಣೆ ಹಚ್ಚುವ ಮಾತು
ಆದರೂ ಅಳುತ್ತಿದೆ ಸೋತು
ಮಲಗೆದ್ದರೆ ಸುಮ್ಮನೇ ಕಿರಿಕಿರಿಗಳು
ಸಾಕಪ್ಪ ಡಿಸೆಂಬರ್ ಜನವರಿ
ತಿಂಗಳ ತುಟಿಗಳು

ಅದೇನೋ ಅಂತೆ ವ್ಯಾಸಲಿನ್
ಬಯೋಲಿನ್
ಏನೇ ಹಚ್ಚಿದರೂ ತುಟಿ ಮಾತ್ರ
ಕುಯ್ಯೋ ವಯಲಿನ್
ನಾಲಗೆ ನೆಕ್ಕಿ ನೇವರಿಸುತ್ತದೆ
ಆದರೆ ಅದರ ಬಳ್ಳಿ ಇದರೊಡನೆ
ಇದು ತುಯ್ದರದಕ್ಕೆ
ಉಶ್ಶಪ್ಪ ಎನ್ನುವ ಬೇನೆ
ತುಟಿ ಕೈ ಬೆರಳ ಸುಟ್ಟ ಕೆಂಡ
ಮನಸ್ಸು ಮಹಾನ್ ಹಳವಂಡ

ಒಡೆದಧರ ಕಿತ್ತು ಕಿತ್ತು ಬರುತ್ತದೆ
ಹೆಪ್ಪುಗಟ್ಟದ ರಕ್ತ ಒಸರಿಸಿ
ಮೇಲೇ ಇರುವ ಕಣ್ಣಿಂದ
ಜಾರಿದ ನೋವ ಹನಿಯೊಂದು
ಬೆರಳನ್ನೆಳೆದಿದೆ ತುಟಿಗೆ
ಸಂತೈಸುವ ನೆಪದಿ
ಹೃದಯಕ್ಕೆ ಜೊತೆಯಾದ
ಬೆರಳುಗಳೋ ತುಟಿ ಕಿತ್ತಿವೆ, ದುಃಖದಿ

ನಿದ್ರೆ ಇರದ ರಾತ್ರಿಗಳಲ್ಲಿ
ಹಾಸಿಗೆ ಜಾಡಿಸಿ
ಕಂಬಳಿ ಹೊದ್ದು ಮನೆ ಮುಂದೆ
ಬೆಂಕಿ ಹಚ್ಚಿದಾಗ
ಭಗ್ಗನೆ ಬುಗಿಲೆದ್ದ ನೆನಪು
ಬೆಂಕಿಯೊಳಗಿಂದ ಮೂಡಿಬಂದ
ನನ್ನವಳ ಮುಖದ ಕುರುಡಂದ

ದೂರದ ತೀರದಿಂದ ಬೀಸಿಬಂದ
ಗಾಳಿತೇವದಲ್ಲೂ
ಮೈ ಕೊರೆಯುವ ಚಳಿ ನೆನಹು
ಚಳಿಗಾಲದಲ್ಲಿಯೂ ಬಿರಿಯುತ್ತಿರಲಿಲ್ಲ
ನನ್ನವಳ ತುಟಿ ಚೆಂದುಟಿ
ಸಿಹಿ ಕಿತ್ತಳೆ ತೊಳೆ
ಚಳಿ ಮೈ ಕೊರೆಯುವ ಘಳಿಗೆಯಲ್ಲಿಯೇ
ತೆಕ್ಕೆತೊರೆದು ಬಿಕ್ಕಳಿಸಿ ಹೊರಟಿದ್ದು
ಎದೆಗೂಡಿಗೊದ್ದು
ಅವಳ ತುಟಿ ಚೆಲುವಿಗೆ
ಕಟ್ಟಿದ ಕವಿತೆಗಳಿಗೆ
ಕಂಬಳಿ ಹೊದಿಸಿರುವೆ ಚಳಿಗೆ

ದೂರದ ಬಯಲಿನೊಳಗಿನ ಗುಡಿಸಲುಗಳಲ್ಲಿ
ಮಂಜು ಹರಡಿಕೊಂಡಿದೆ
ನನ್ನ ಕಾಲಿಗೂ ತಾಕಿ
ಹಸುಗೂಸುಗಳ ಕೈಕಾಲು ಬಿರಿದು
ಹರಿದ ಅರಿವೆಯೊಳಗಿನ
ದೇಹಗಳು ಕೂಗಿವೆ
ತಟ್ಟೆಮೇಲೆ ಇದ್ದ ನಾಲ್ಕಗಳನ್ನ
ಈಗವರಿಗೆ ಕೈಗೆಟುಕದ ಚಿನ್ನ
ಗರಿಕೆ ಮಾಳದ ಕುರಿಮಂದೆ
ಕಾಯುವವನ ಕೈಗಳೆರಡೂ ಒಂದೇ
ಬಿಗಿಯಾಗಿವೆ ಚಳಿಗದುರಿ

ಹರಿದ ಸೀರೆಯುಟ್ಟು ಗೋಡೆಗಂಟಿ ಕುಳಿತು
ಮುದ್ದೆ ಜಡಿಯಲು ಕುಳಿತಿರುವ
ಸಿದ್ಧಕ್ಕನನ್ನು ನೋಡು ದಿನಕರ
ಬೇಗ ಬಾರೋ ಕನಿಕರ!