ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Thursday, 24 May 2012

ಅನೈತಿಕತೆಯ ತೀರದಲ್ಲಿ... (ಕಥಾಕಾಲ)

“ಬೆಳಗ್ಗೆಯಿಂದ ಏನೋ ಗೊಂದಲದಲ್ಲಿದ್ದಂತಿದೆ, ಏನಾಯಿತು? ಏನಾದರೂ ತೊಂದರೆಯೇ?” ಗಂಡನ ಆ ಪ್ರಶ್ನೆಗೆ ಉತ್ತರಿಸುವಷ್ಟೂ ಮಾನಸಿಕ ಸ್ವಾಸ್ಥ್ಯ ಅವಳಲ್ಲಿರಲಿಲ್ಲ.
“ಆ...?” ಅಂದಳು... ಆತ ಮತ್ತೆ ಅದೇ ಪ್ರಶ್ನೆ ಕೇಳಿದ.
“ಏನೂ ಇಲ್ಲ...” ಎಂಬಂತೆ ನಾಟಕೀಯವಾಗಿ ತಲೆ ಆಡಿಸಿ ಮಗುವಿನ ಕಡೆ ತಿರುಗಿ ಬಟ್ಟೆ ತೊಡಿಸುತ್ತಿದ್ದಳು.
“ಇಂದೇಕೋ ಮೈ ಹುಷಾರಿಲ್ಲ ಅತ್ತೆ, ನಿಮ್ಮ ಮಗನಿಗೆ ನೀವೇ ತಿಂಡಿ ಮಾಡಿಕೊಡಿ” ಎಂದು ಅತ್ತೆಗೆ ಬೆಳಗ್ಗೆಯೇ ಹೇಳಿದ್ದಳು.
ಅಮ್ಮನ ಕೈ ರುಚಿ ತಿನ್ನುವ ಭಾಗ್ಯಕ್ಕೆ ಶಶಿಧರ ಒಳಗೊಳಗೆ ಖುಷಿ ಪಟ್ಟಿದ್ದ !

ಗಂಡ ಹೋಗುವುದನ್ನೇ ಕಾಯುತ್ತಿದ್ದ ಚಂದ್ರಕಲಾ “ಉಷ್...” ಎಂದುಕೊಂಡು ಧೊಪ್ಪನೇ ಸೋಫಾ ಮೇಲೆ ಬಿದ್ದುಕೊಂಡಳು. ನಿನ್ನೇ ಸಾಯಂಕಾಲದಿಂದಲೂ ಅವಳಿಗೆ ಒಂದೇ ಗೊಂದಲ. “ಆತನನ್ನು ಸಂಧಿಸಲು ಹೋಗುವುದೋ, ಬೇಡವೋ?” ಬದುಕೆಂಬ ವ್ಯವಸ್ಥಿತ ಪರಿಧಿಯೊಳಗೆ ಒಳ್ಳೆಯದು ಮತ್ತು ಕೆಟ್ಟದ್ದನ್ನು ವಿಭಜಿಸುವ ಶಕ್ತಿ ಅವಳಲ್ಲಿರಲಿಲ್ಲ.

ನಿನ್ನೆ ಮಧ್ಯಾಹ್ನ ಗೆಳತಿ ಭಾನುಪ್ರಿಯ ಬಂದಿದ್ದಾಗ ಮಾತಿನ ಮಧ್ಯದಲ್ಲಿ ಇವಳೇ ರಾಮಚಂದ್ರನ ವಿಚಾರ ತೆಗೆದಿದ್ದಳು. ಅವನ ತುಂಬು ಸಂಸಾರ ಮತ್ತು ಇಬ್ಬರು ಮಕ್ಕಳ ಬಗ್ಗೆ ಕಣ್ಣರಳಿಸಿ ಕೇಳಿಸಿಕೊಂಡಿದ್ದಳು. ಎಲ್ಲೋ ಒಂದು ಕಡೆ “ಅವನ ಸಂಸಾರ ಅವನಿಗಾಯಿತು, ನನ್ನ ಸಂಸಾರ ನನಗಾಯಿತು” ಎಂದುಕೊಂಡರೂ ಆತನ ಮೊಬೈಲ್ ನಂಬರ್ ತೆಗೆದುಕೊಳ್ಳುವುದು ಮರೆಯಲಿಲ್ಲ. ಅವಳು ಹೋಗುವುದನ್ನೇ ಕಾಯುತ್ತಿದ್ದಳು. “ಹೋಗಿ ಬರ್ತೀನಿ ಕಣೆ” ಎಂದು ಭಾನುಪ್ರಿಯ ಹೇಳಿದಾಗ ಸೌಜನ್ಯಕ್ಕಾದರೂ “ಉಳಿದುಕೊಳ್ಳೇ” ಎಂದು ಹೇಳಲಿಲ್ಲ. ಅವಳು ಹೋದದ್ದೇ ತಡ ತನ್ನ ಮೊಬೈಲ್ ತೆಗೆದುಕೊಂಡು ಕೂಡಲೇ ರಾಮಚಂದ್ರ ನಿಗೆ ಫೋನಾಯಿಸಿದಳು.
“ಹಲೋ...!”
“ಯಾರೂ?, ರಾಮು ನಾ??”
“ಹೌದು.. ತಾವು?”
“ನಾನು ಚಂದ್ರಕಲಾ... ಇಷ್ಟು ಬೇಗ ಮರೆತುಬಿಟ್ಟಾ??”
“ಯಾವ ಚಂದ್ರಕಲಾ, ಅದೇ ನಿನ್ನೇ ಬಸ್ ಸ್ಟ್ಯಾಂಡ್ ನಲ್ಲಿ ಸಿಕ್ಕಿದ್ದಲ್ಲಾ ಅವಳೇ?”
“ಇಲ್ಲ, ನಮ್ಮಂತವರನ್ನೆಲ್ಲಾ ಎಲ್ಲಿ ನೆನಪಿನಲ್ಲಿ ಇಟ್ಕೋತೀಯಾ ನೀನು, ನಾನು ಕಣೋ ನಿನ್ನ ಚಂದು”
“ಶ್.. ಓಹೋ.. ಹೇಗಿದ್ದೀಯಾ ಚಂದು..” ಆತನ ಧ್ವನಿ ಸ್ವಲ್ಪ ಗದ್ಗದಿತವಾಯಿತು.
ಮಾತಿನ ಮಧ್ಯೆ ಆತ “ನಾಳೆ ನನ್ನ ಮನೆಯಲ್ಲಿ ಸಿಗು, ಹೆಂಡತಿ ಮಕ್ಕಳು ತವರಿಗೆ ಹೋಗಿದ್ದಾರೆ” ಎಂದ. ಏನೂ ಮಾತನಾಡದೇ ಈಕೆ ಸ್ವಲ್ಪ ಖುಷಿಯಿಂದಲೇ ಒಪ್ಪಿಕೊಂಡಿದ್ದಳು.

ಮತ್ತೆ ಅವಳಿಗೆ ಅದೇ ದ್ವಂದ್ವ ಕಾಡಿತು, ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಗಂಡ ಮತ್ತು ತೆವಳುವ ಮಗುವಿರುವಾಗ ಮಾಜಿ ಪ್ರಿಯಕರನ ಬಳಿಗೆ ಹೋಗುವುದು ಯಾಕೋ ಸರಿ ಇಲ್ಲ ಎಂದೆನಿಸಿದರೂ ಎಲ್ಲೋ ಒಂದು ಕಡೆ “ಚೆ! ಅವನ ಜೊತೆಯೇ ಹೊರಟುಹೋಗಬೇಕಾಗಿತ್ತು” ಎಂದುಕೊಂಡಳು. ಆತ ಇವಳನ್ನು “ನಾನು ನಿನ್ನನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತೇನೆ” ಎಂದು ಹೇಳಿಕೊಂಡಿದ್ದ. ಕೈ ಹಿಡಿದು ಕಾಡಿನ ನಡುವೆ ಅಲೆದಾಡಿಸಿದ್ದ, ನದಿ ತೊರೆಗಳಲ್ಲಿ ಮುಳುಗಿ ಆಲಂಗಿಸಿಕೊಂಡಿದ್ದ. ಕೊನೆಗೆ ಜಾತಿಯ ನೆಪ ಹೇಳಿ ಆತ ಈ ಭಾವಯಾನದಿಂದ ಕಳಚಿಕೊಂಡಾಗ ಈಕೆ ಮರು ಮಾತನಾಡದೇ ಮನೆಯವರಿಗೆ ಹೆದರಿ ಶಶಿಧರನನ್ನು ಮದುವೆಯಾಗಿದ್ದಳು.

ಯಾಕೋ ಆತ ಮತ್ತೆ ಮತ್ತೆ ಕಾಡತೊಡಗಿದ. “ವೇರ್ ಆರ್ ಯೂ?” ಎಂಬ ಸಂದೇಶ ಬಂದಿತು. ಕೂಡಲೇ “ಕಮಿಂಗ್...” ಎಂದು ಪ್ರತಿಕ್ರಿಯಿಸಿಬಿಟ್ಟಳು.
ದಡ ದಡನೆ ಹೋಗಿ ಸ್ನಾನ ಮಾಡಿಕೊಂಡು, ದೇವರ ದೀಪ ಹಚ್ಚಿ ಕನ್ನಡಿ ಮುಂದೆ ನಿಂತಳು. “ನೀನು ಹಸಿರು ಸೀರೆಯಲ್ಲಿ ರಂಭೆಯಂತೆ ಕಾಣುತ್ತೀಯೆ” ಎಂದು ಆತ ಹೇಳಿದ್ದು ನೆನಪಿಸಿಕೊಂಡ ಕೂಡಲೇ ಸೀರೆ ಬದಲಿಸಿದಳು. ಕೇಶವಿನ್ಯಾಸ ಎಂದಿನಂತಿರದೆ ಆತ ಬಾಚುತ್ತಿದ್ದಂತೆ ಬಾಚಿಕೊಂಡು ತುಟಿ ರಂಗಿಗೆ ಬಣ್ಣ ಮೆತ್ತಿ ಕೊನೆಗೂ ಹೊರಡಲನುವಾದಳು.

“ಗೆಳತಿ ಭಾನುಪ್ರಿಯ ಮನೆಗೆ ಬರಲು ಹೇಳಿದ್ದಾಳೆ, ಹೋಗಿ ಬರುತ್ತೇನೆ, ಮಗುವನ್ನು ನೋಡಿಕೊಳ್ಳಿ ಅತ್ತೆ” ಎಂದು ಸುಳ್ಳು ಹೇಳಿ ಹೊರಟುಬಿಟ್ಟಳು.

ಒಂದು ಹಾಸಿಗೆ ಕೋಣೆ ಇರುವ ಬಾಡಿಗೆ ಮನೆಯಲ್ಲಿ ರಾಮಚಂದ್ರ ಆಲಿಯಾಸ್ ರಾಮು ವಾಸವಿದ್ದದ್ದು. ಮನೆ ಮತ್ತು ಮನೆಯೊಳಗಿನ ವಸ್ತುಗಳು, ಗಂಡ ಹೆಂಡತಿ ಮಕ್ಕಳ ಫೋಟೋ ನೋಡಿದಾಕ್ಷಣ ಚಂದ್ರಕಲಾಳಿಗೆ ಆತನ ಸಂಸಾರದ ಸಾರ, ಅನ್ಯೋನ್ಯತೆ ಅರ್ಥವಾಯಿತು. ಟೀ ಕಾಯಿಸಿಕೊಂಡು ಬಂದವನೇ ಚಂದ್ರಕಲಾಳ ಪಕ್ಕದಲ್ಲಿಯೇ ಕುಳಿತುಕೊಂಡ. ತಮ್ಮ ಹಳೆಯ ದಿನಗಳನ್ನೆಲ್ಲಾ ಇಬ್ಬರೂ ಮೆಲುಕಿದರು.
“ಮತ್ತೇ? ಇನ್ನೇನು ಸಮಾಚಾರ ಚಂದು?’ ಎಂದ ರಾಮಚಂದ್ರ
“ಎಲ್ಲಾ ನೀನೇ ಹೇಳಬೇಕು”
“ಮಗು ಮತ್ತು ಗಂಡ ಹೇಗಿದ್ದಾರೆ?”
“ಈಗೇಕೆ ಆ ಮಾತು? ಕಷ್ಟವಾದರೂ ಸರಿಯೇ ಇಷ್ಟ ಪಟ್ಟವರೊಂದಿಗೆ ಜೀವನ ನಡೆಸಬೇಕು” ಎನ್ನುತ್ತಿದ್ದಂತೆ ರಾಮಚಂದ್ರ ಚಂದ್ರಕಲಾಳ ಕೈ ಮೇಲೆ ಕೈ ಹಾಕಿದ. ಆಕೆ ಭಯಪಟ್ಟು ಸ್ವಲ್ಪ ನಾಚಿಕೆಯಿಂದ ನಿಂತುಕೊಂಡಳು. ಎದ್ದು ನಿಂತವನೇ ಅವಳ ತೋಳುಗಳನ್ನು ಮುಟ್ಟಿದ
“ಇದು ಸರಿ ಇಲ್ಲ”
“ಯಾವುದು?”
“ನೀನು ನನ್ನನ್ನು ಮುಟ್ಟುವುದು. ನಾನೀಗ ಮತ್ತೊಬ್ಬರ ಸ್ವತ್ತು”
”ಮತ್ತೊಬ್ಬರ ಸ್ವತ್ತು ಸದ್ಯಕ್ಕೀಗ ನನ್ನ ಮನೆಯಲ್ಲಿದೆ”
ಆಕೆ ಏನೂ ಮಾತನಾಡಲಿಲ್ಲ. ಆತನೇ ಮುಂದುವರಿದ.

“ಹೇ ಹೆಣ್ಣೇ, ಒಳ್ಳೆಯದೂ ಕೆಟ್ಟದ್ದೆಂಬುದಿಲ್ಲ! ಒಮ್ಮೆ ವಿಶಾಲವಾಗಿ ಯೋಚಿಸು” ಆತ ಆಕೆಯ ತುರುಬು ಬಿಚ್ಚಿ ಕೊರಳ ಬಳಿ ತುಟಿ ತಂದ.
ಉಸಿರ ಗಾಳಿ ಸೋಕಿ ಕ್ಷಣ ಕಾಲ ನಿಂತಲ್ಲಿಯೇ ಅಲುಗಾಡಿದಳು. ಏನೋ ಅನುಭೂತಿ. ಕಣ್ಮುಚ್ಚಿದ್ದಳು.
ಹೀಗೆ ಆತ ಆಕೆಯನ್ನು ಮಾತಿನ ಹಂದರದಲ್ಲಿಯೇ ಕಟ್ಟಿ ಅನೇಕ ಬಾರಿ ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದ, ಸೋಲುವ ಸಮಯದಲ್ಲಿ ಮೈ ಕೊಡವಿಕೊಂಡು ಚಂದ್ರಕಲಾ ತನ್ನನ್ನು ತಾನೇ ಬಿಡಿಸಿಕೊಂಡುಬಿಡುತ್ತಿದ್ದಳು. ಪ್ರೇಮದ ಹೆಸರಿನಲ್ಲಿ ಕಾಮ ಮೊಗೆಯಲು ಪ್ರಯತ್ನಿಸುತ್ತಿದ್ದ ಶೂರನವನು. ಆದರೆ ಯಾಕೋ ಇಂದು ಮಾತ್ರ ಸೋತು ನೀರಾದಳು. ನೈತಿಕತೆಯ ಕೋಟೆಯನ್ನು ದಾಟಿದ ದೈಹಿಕ ಅನೈತಿಕತೆಯನ್ನು ಮುಚ್ಚಿಕೊಳ್ಳುವ ಧೈರ್ಯವನ್ನು ಅವರವರ ಮದುವೆಯೇ ಕೊಟ್ಟಿತು ಎಂದರೆ ತಪ್ಪಿಲ್ಲವೇನೋ! ಆದರೂ ದೇಹದೊಳಗಿನ ಅವರವರ ಆತ್ಮ ಮಾತ್ರ ಇಬ್ಬರಲ್ಲೂ ವಿಭಜನೆಯಾಗಿರಲಿಲ್ಲ!

ಪಕ್ಕದ ಮನೆಯ ಮಗುವಿನ ಅಳು ಕೇಳಿಸಿತು. ಕೂಡಲೇ ತನ್ನ ಮಗುವಿನ ನೆನಪಾಗಿ ಹೊರಡಲು ತಯಾರಾದಳು ಚಂದ್ರಕಲಾ.
“ಸಂಜೆವರೆವಿಗೂ ಇರಬಹುದಾಗಿತ್ತು, ಇಂದು ನಿನಗೆಂದೇ ಕೆಲಸಕ್ಕೆ ರಜೆ ಹಾಕಿದ್ದೆ” ಆತನುವಾಚ
“ಮತ್ತೆ ಯಾವಾಗಲಾದರೂ ಬರುತ್ತೇನೆ, ನನ್ನ ಮಗು ಅಳುತ್ತಿದೆ, ನಾನು ಹೊರಡುತ್ತೇನೆ” ಎಂದವಳೇ ಮನೆಯಿಂದ ಹೊರಬಂದು ಬಸ್ಸಿನಲ್ಲಿ ಹೊರಟಳು

ಕೆನ್ನೆ ಮೇಲೆ ಏನೋ ಕುಳಿತಂತೆ ಆಕೆಗೆ ಭಾಸವಾಯಿತು. ಒರೆಸಿಕೊಂಡಳು. ಕೈಗೆ ಆತನ ಎಂಜಲು ಮೆತ್ತಿಕೊಂಡಿತು. ಕೈ ತುಂಬಾ ಕೊಳೆ ಮೆತ್ತಿಕೊಂಡಂತೆ ಅನಿಸಿ ಕೈಯನ್ನು ಬಟ್ಟೆಗೆ ತಾಕಿಸಿ ಮತ್ತೆ ಗಟ್ಟಿಯಾಗಿ ಕೆನ್ನೆಯನ್ನುಜ್ಜಿಕೊಂಡಳು. ಎಷ್ಟೇ ಉಜ್ಜಿಕೊಂಡರೂ ಆಕೆಗೆ ಯಾಕೋ ಸಮಾಧಾನವೇ ಆಗಲಿಲ್ಲ. ಅಷ್ಟಕ್ಕೇ ಫೋನ್ ರಿಂಗಣಿಸಿತು. ನೋಡಿದರೆ ಶಶಿಧರನ ಕರೆ. ಸ್ವಲ್ಪ ಭಯದಿಂದಲೇ “ಹಲೋ” ಎಂದಳು.
“ಎಲ್ಲಿದ್ದೀಯಾ ಡಿಯರ್...?”
“ನಾನು ಮತ್ತು ಗೆಳತಿ ಭಾನುಪ್ರಿಯ ಸಿನಿಮಾ ನೋಡಲು ಹೋಗಿದ್ದೆವು” ಧ್ವನಿ ನಡುಗುತ್ತಿತ್ತು.
“ಹೌದೇ..? ವೆರಿಗೂಡ್... ನೀ ಖುಷಿಯಿಂದಿರಬೇಕು. ಹಾಗೇ ನಿನ್ನ ಗೆಳತಿ ಮನೆಗೆ ಹೋಗಿ ಸಂಜೆವರೆವಿಗೂ ಇದ್ದು ಬಾ, ನನ್ನದು ಮಧ್ಯಾಹ್ನದ ಊಟ ಇಲ್ಲೇ ಆಯಿತು” ಎಂದ ಶಶಿಧರ.
ಈಕೆಗೆ ಏನು ಹೇಳಬೇಕು ಎಂಬುದೇ ತಿಳಿಯದೇ ಸುಮ್ಮನೆ “ಹ್ಞೂಂ” ಎಂದಳು.

ತನ್ನ ಗಂಡನ ಪ್ರೀತಿ ವಾತ್ಸಲ್ಯ ಕಂಡು ಆಕೆಗೆ ತಡೆದುಕೊಳ್ಳಲಾಗದ ಅಳು ಬಂದಿತು. ಎಲ್ಲೋ ಒಂದು ಕಡೆ ದಾರಿ ತಪ್ಪಿ ಅಡ್ಡದಾರಿ ಹಿಡಿದೆ ಎಂದೆನಿಸಿತು. ಒಂದು ವಿಶ್ವಾಸವನ್ನು ಪಾತಾಳಕ್ಕೆ ತಳ್ಳಿ ವಿಶ್ವಾಸಘಾತುಕಿಯಾಗಿಬಿಟ್ಟೆನಲ್ಲ ಎಂದೆನಿಸಿ ಬಸ್ಸಿನಲ್ಲಿಯೇ ಬಿಕ್ಕುತ್ತಿದ್ದಳು. ನೈತಿಕತೆಯ ತಿರುಳು ಅವಳ ಮನಸ್ಸನ್ನು ವ್ಯಾಪಿಸಿತ್ತು. ನಿರ್ವಸ್ತ್ರಗೊಳಿಸುವ ಹಕ್ಕನ್ನು ಹಂಚಿದ್ದು ತನ್ನಲ್ಲೇ ತಾನು ಕಂಡ ಧೂರ್ತ ಅಭಿಲಾಷೆ ಎಂಬುದನ್ನು ಮನಗಂಡುಕೊಂಡಳು. ಎದೆ ನಡುಗಿತು, ತುಟಿ ಅದುರಿತು. ಮೈ ಮೇಲೆಲ್ಲಾ ಚರಂಡಿ ಹುಳುಗಳು ಹರಿದಾಡಿದಂತೆ ಭಾಸವಾಯಿತು. ಅನೈತಿಕ ವಾಸನೆ ಮೂಗಿಗೆ ಬಡಿಯುತ್ತಿತ್ತು. ಆತ ಸೋಕಿದ ಗುರುತುಗಳೆಲ್ಲಾ ಮೈಮೇಲೆ ಹಾಗೆ ಇದ್ದವು. ಆ ಮನೆಯ ಬೆವರ ಹೊತ್ತು ಸಾಗಿದ್ದಳು. ಮನೆಗೆ ಬಂದವಳೇ ಅಳುತ್ತಿದ್ದ ಮಗುವನ್ನು ಮುಟ್ಟಲಿಲ್ಲ. ಸ್ನಾನದ ಮನೆಗೆ ಓಡಿಹೋದಳು. ಉಟ್ಟ ಬಟ್ಟೆಯೊಂದಿಗೇ ಒಂದತ್ತು ಕೊಡ ನೀರು ಬಗ್ಗಿಸಿಕೊಂಡಳು. ಮೈ ಕೈಗೆ ಸಮಾಧಾನವಾಗುವವರೆವಿಗೂ ಸಾಬೂನು ಹಚ್ಚಿಕೊಂಡು ಗಟ್ಟಿಯಾಗಿ ತಿಕ್ಕಿಕೊಂಡಳು. ಇದ್ದ ಸಾಬೂನೆಲ್ಲಾ ಮುಗಿದುಹೋಯಿತು. ಉಟ್ಟ ಬಟ್ಟೆಯನ್ನೂ ಅಷ್ಟೇ, ಸಾಬೂನು ಮುಗಿಯುವವರೆವಿಗೂ ತಿಕ್ಕಿದಳು. ಎಲ್ಲೋ ಒಂದು ಕಡೆ ಬೆಂಕಿಯಲ್ಲಿ ಸುಟ್ಟು ಹಾಕಿಬಿಡೋಣ ಎಂದುಕೊಂಡಳಾದರೂ ಗಂಡ ಮತ್ತು ಅತ್ತೆಗೆ ಹೆದರಿ ಅಲ್ಲೇ ಅಡರಿ ಒಣ ಹಾಕಿದಳು. ಹೊರ ಬಂದವಳೇ “ಇನ್ನು ಸ್ವಲ್ಪ ಇದ್ದು ಬರಬಹುದಾಗಿತ್ತು”ಎಂಬ ಅತ್ತೆ ಮಾತಿಗೆ ಕರಗಿ ಅಡುಗೆ ಮನೆಗೆ ಧಾವಿಸಿ ಮುಖ ಮುಚ್ಚಿ ಅತ್ತಳು. ಸಾವರಿಸಿಕೊಂಡು ಹೊರ ಬಂದು ಮಗುವನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತಿಕ್ಕಿದಳು. ಮಗುವಿನ ಕೆನ್ನೆಗೆ ಅವಳ ಎಂಜಲು ಮೆತ್ತಿಕೊಂಡಿತು. ಯಾಕೋ ತನ್ನ ಮಗು ಕೊಳಕಾಗಿ ಹೋಯಿತು ಎಂದೆನಿಸಿತು. “ಬೆಳಗ್ಗೆಯೇ ಸ್ನಾನ ಮಾಡಿಸಿದ್ದೇನೆ” ಎಂದು ಅತ್ತೆ ಹೇಳಿದರೂ ಕೇಳದೆ ಮಗುವಿಗೆ ಸ್ನಾನ ಮಾಡಿಸಿದಳು. ತಾನೂ ಮತ್ತೊಮ್ಮೆ ಸ್ನಾನ ಮಾಡಿದಳು.

ಶಶಿಧರ, ಡಾಕ್ಟರ್ ಮುಂದೆ ಕಣ್ಣೀರಿಡುತ್ತ ಕುಳಿತಿದ್ದ “ಡಾಕ್ಟರೇ... ನನ್ನ ಸಮಸ್ಯೆಯನ್ನು ದಯವಿಟ್ಟು ಪರಿಹರಿಸಿ. ನನ್ನ ಹೆಂಡತಿ ಮಗುವೆಂದರೆ ನನಗೆ ಇನ್ನಿಲ್ಲದ ಪ್ರೀತಿ. ಅವಳ ಕೂದಲೂ ಕೊಂಕದಂತೆ ನೋಡಿಕೊಂಡಿದ್ದೇನೆ. ನನ್ನ ಸುಖ ಸಂಸಾರಕ್ಕೆ ಹಠಾತ್ತನೆ ಬಿರುಗಾಳಿ ಎರಗಿದೆ. ಹೆಂಡತಿ ಮೊದಲಿನಂತಿಲ್ಲ. ನನ್ನೊಟ್ಟಿಗೆ ಮಲಗಿ ಎರಡು ತಿಂಗಳ ಮೇಲಾಯಿತು. ಮಗುವನ್ನಂತು ಹತ್ತಿರಕ್ಕೇ ಸೇರಿಸುತ್ತಿಲ್ಲ. ಯಾರಿಗಾದರೂ ಹೆದರಿ ಮಗುವನ್ನು ಮುಟ್ಟಿದರೆ ಕೂಡಲೇ ಸ್ನಾನ ಮಾಡಿಸಿಬಿಡುತ್ತಾಳೆ. ಯಾವಾಗಲೂ ಮೈ ಕೈಯನ್ನು ಉಜ್ಜಿಕೊಳ್ಳುತ್ತಿರುತ್ತಾಳೆ. ಮೂಲೆಯಲ್ಲವಚಿ ಕುಳಿತು ಸುಮ್ಮನೇ ಅಳುತ್ತಾಳೆ. ಇದ್ದಕ್ಕಿದ್ದಂತೆ ರೇಗುತ್ತಾಳೆ, ಒಮ್ಮೊಮ್ಮೆ ಅಷ್ಟೇ ಕನಿಕರಿಸಿ ಮಾತನಾಡಿಸುತ್ತಾಳೆ. ತಡರಾತ್ರಿಯಲ್ಲಿ ಸುಮ್ಮನೇ ಎದ್ದು ಕುಳಿತು ಮಂಕಾಗಿ ಏನನ್ನೋ ದಿಟ್ಟಿಸುತ್ತಿರುತ್ತಾಳೆ. ದೇವರ ಮನೆಗೆ ದೀಪ ಹಚ್ಚಿಯೂ ಎರಡು ತಿಂಗಳಾಯಿತು. ಮೊನ್ನೆ ಅವಳ ತಲೆ ನೇವರಿಸಿ ಮಾತನಾಡಿಸಲು ಹೋದಾಗ ಕೂಡಲೇ ನನ್ನ ಕೈ ತೊಳೆಸಿದಳು. ಸಾಬೂನು ಉಜ್ಜಿ ಅವಳ ಸಮಾಧಾನಕ್ಕೆ ಮೂರು ಬಾರಿ ತೊಳೆದೆ. ಊಟ ತಿಂಡಿ ಎಲ್ಲಾ ಬಿಟ್ಟು ಸೊರಗುತ್ತಿದ್ದಾಳೆ“

ಆತ ಬಿಕ್ಕುತ್ತಿದ್ದರೆ, ತಾನೂ ಸಾಕ್ಷಿಯೆಂಬಂತೆ ತೊಡೆ ಮೇಲಿದ್ದ ಮಗುವೂ ಅಳಲು ಪ್ರಾರಂಭಿಸಿತು....

10 comments:

 1. ಅದ್ಬುತ ಮೋಹನ್, ತುಂಬಾ ಚೆನ್ನಾಗಿತ್ತು... ನಿಮ್ಮ ಮನದಾಳದಿಂದ ಇಂತಹ ಕಥಾಗುಂಚ ಹೊರಬಂದಿರುವುದು ನನಗೆ ತುಂಬ ಖುಷಿ ಕೊಟ್ಟಿದೆ. ಸಮಾಜದಲ್ಲಿ ಹೆಣ್ಣುಮಕ್ಕಳು ತಮ್ಮ ಅನೈತಿಕತೆಯ ಚಟುವಟಿಕೆಯಲ್ಲಿ ತೊಡಗಿದ್ದರೇ ಅದನ್ನು ಸಾರಸಗಟಾಗಿ ತಳ್ಳಿಹಾಕಬೇಕು, ನಮ್ಮನ್ನು ನಂಬಿದವರಿಗೆ ಮೋಸ ಮಾಡಿದಂತೆ ಎನ್ನುವುದು ಅರಿವಾಗಬೇಕು ಮತ್ತು ಅಂತವರು ತಮ್ಮ ಮನಸ್ಸಿಗೆ ಕೊಡುವ ಘಾಸಿ ಎನ್ನುವುದನ್ನು ಚೆನ್ನಾಗಿ ಅರ್ಥೈಸಿದ್ದೀರಾ... ನಿಜವಾಗಲು ಸಮಾಜದ ಅಂಕುಡೊಂಕುಗಳನ್ನು ಬರಹದ ಮೊಲಕ ಹೊರಹಾಕಲು ಸಾಧ್ಯ ಎನ್ನುವುದು ನಿಮ್ಮಂತಹವರಿಂದ ಎಲ್ಲರೂ ಕಲಿಯಬೇಕು. ಇಂತಹ ಸಮಾಜಮುಖಿ ಬರಹಗಳು ಇನ್ನಷ್ಟು ಬರುವಂತಾಗಲಿ... ಶುಭವಾಗಲಿ ಮುಂದಿನ ಬರಹಗಳಿಗೆ

  ReplyDelete
 2. ಅದ್ಭುತ ಮೋಹನಣ್ಣ..
  ೧) ಮೊದಲಾಗಿ ಕಥೆಯ ಬರಹದ ಶೈಲಿ: ಯಾವುದೇ ತೊಡಕಿಲ್ಲದೆ ಸರಾಗವಾಗಿ ಓಡಿಸಿಕೊಂಡು ಹೋಯಿತು. ಪ್ರತಿಯೊಂದು ಸಾಲು ಓದುವಾಗಲೂ ಮುಂದಿನ
  ಸಾಲು ಓದುವ ಹವಣಿಕೆ ಇತ್ತು.
  ೨) ಕಥೆಯ ವಸ್ತು: ಬಹಳ ಸೂಕ್ಷ್ಮವಾದ ವಸ್ತು ಇದು. ಪ್ರೇಮ ಮತ್ತು ಕಾಮದ ನಡುವಿನ ಸೂಕ್ಷ್ಮತೆಯನ್ನು ಬೆಣ್ಣೆಯಿಂದ ಕೂದಲು ತೆಗೆದಂತೆ ಪ್ರಸ್ತುತ ಪಡಿಸಿದ್ದೀರ.
  ೩) ಪ್ರಸ್ತುತಿ: ಪ್ರತಿಯೊಂದು ಸಾಲಲ್ಲೂ ಒಂದೊಂದು ಭಾವವಿದೆ. ಸಂಧಿಸುವ ಮುನ್ನ ಮನದಲ್ಲಿ ತಾಕಲಾಟ. ಸಂಧಿಸಿದ ಮೇಲೆ ಸರಿ ತಪ್ಪುಗಳ ನಡುವಿನ ಗೊಂದಲ.
  ಆಮೇಲೆ ಒಂದು ಅಪರಾಧ ಪ್ರಜ್ಞೆ. ಸುಖ ಕ್ಷಣಿಕ. ಆದರೆ ಅಪರಾಧ ಪ್ರಜ್ಞೆಯ ಮಡಿಲಲ್ಲಿರುವ ದುಃಖ, ಅದರಿಂದ ಮನಸ್ಸಿಗಾಗುವ ಕಿರುಕುಳ ನಿರಂತರ.
  ಶುಭವಾಗಲಿ :)

  ReplyDelete
 3. ಮೋಹನ್ ಜೀ. ಒಂದು ಒಳ್ಳೆಯ ಪ್ರಯತ್ನ. ನೀವೆಂದಂತೆಯೇ Heavy ವಸ್ತುವನ್ನ ಲಗುಬಗೆಯಿಂದ ಮುಗಿಸಿದ್ದೀರಿ. ಇನ್ನೂ ಸಮಕಟ್ಟಾಗಿ ಬರೆಯಬಹುದಿತ್ತು.

  ಇನ್ನೊಮ್ಮೆ ಏಕೆ ಪ್ರಯತ್ನಿಸಿ ಎನ್ನುವ ವಿನಂತಿ.

  ReplyDelete
 4. ಒಂದೊಳ್ಳೆಯ ಕಥೆ. ಅಂತ್ಯ ಮಾತ್ರ ಮನಸ್ಸು ಮುಟ್ಟುವಂತಿದೆ ಮೋಹನಣ್ಣ

  ReplyDelete
  Replies
  1. This comment has been removed by the author.

   Delete
 5. This comment has been removed by the author.

  ReplyDelete
 6. ಸಾಹಿತ್ಬತಯ ವಿಮರ್ಶಕ ನಾನನಲ್ಲ. ಒಳ್ಳೆಯ ಕಥೆಗಳನ್ನು ಓದಿ ಆನಂದಿಸಬಲ್ಲ ಸಾಮಾನ್ಯ ಓದುಗ ನಾನು. ಬಲು ಹಿಂದೆ ಓದಿದ್ದ (ದಿ) ತ್ರಿವೇಣಿ ಅವರ ಕಾದಂಬರಿಗಳನ್ನು ನೆನಪಿಸಿತು ನಿಮ್ಮ ಕಿರುಕಥೆ. ಅವರ ಕಾದಂಬರಿಗಳನ್ನು ನೀವು ಓದಿದ್ದೀರಿ ಎಂದು ಭಾವಿಸಿದ್ದೇನೆ. ಓದದೇ ಇದ್ದರೆ ಓದಿ. ನಿಮಗೆ ಅಗತ್ಯವಾದ ಮಾರ್ಗದರ್ಶನ ದೊರೆಯುತ್ತದೆ.

  ReplyDelete
 7. Sunitha Manjunath Says25 May 2012 at 06:22

  ಮೋಹನ್......ಯಾರಿಗೆ ಹೆದರದೆ ಇದ್ದರು ಮನಸ್ಸಿಗೆ ಹೆದರುವ ಮನಸಿನ ಕಥೆ......(ಹೆಣ್ಣಿನ )ಮನಸ್ಸು ಗಾಜಿನಂತೆ,.....ನೈತಿಕತೆ ....ಪ್ರೀತಿಸುವ ಗಂಡ ...ಮನಸಾಕ್ಷಿ ಎಲ್ಲಾ ಒಟ್ಟಾಗಿ ಅವಳನ್ನ ಹಿಂಡಿಬಿಟ್ಟಿದೆ...ಇದೊಂದು ಮನೋ ವೈಜ್ಞಾನಿಕ ಕತೆ ಎನ್ನಲು ಅಡ್ಡಿ ಇಲ್ಲ...ಕಥೆಯ ಓಘ ಓದಿಸಿಕೊಂಡು ಹೋಗುತ್ತದೆ...:))))

  ReplyDelete
 8. ಕಥೆಯ ಬಗ್ಗೆ ಎರಡು ಮಾತಿಲ್ಲ ಮೋಹನಣ್ಣ.. ಬಹಳ ಸೂಕ್ಷ್ಮವಾದ ವಿಷಯದ ಸುತ್ತಾ ಮನಸ್ಸಿಗೆ ನಾಟುವಂತೆ ಹರಡಿದ್ದೀರಿ.. ಚಂದ್ರಕಲಾಳ ಮನಸ್ಸಿನ ದ್ವಂದ್ವಗಳು ಮತ್ತು ತುಮುಲಗಳ ಬಗ್ಗೆ ಬೆಳಕು ಚೆಲ್ಲಿದ್ದೀರಿ.. ಮೆಚ್ಚುಗೆಯಾಯ್ತು ಕಥೆಯ ಓಘ.. ಆದರೆ ಕಥೆಯನು ಬೇಗ ಮುಗಿಸಿಬಿಟ್ಟಿದ್ದೀರಿ ಎನಿಸಿತು.. ಅವಳ ಮನಸ್ಸಿಗೊಂದಷ್ಟು ಸಾಂತ್ವಾನ ನೀಡಿದ್ದರೆ ಕಥೆ ಇನ್ನಷ್ಟು ಸಂಪೂರ್ಣವಾಗುತ್ತಿತ್ತು ಎನಿಸುತ್ತದೆ..

  ReplyDelete
 9. ಅದ್ಭುತವೇ ಸರಿ ಚನ್ನಾಗಿದೆ...

  ReplyDelete