ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Tuesday, 27 December 2011

ನನ್ನ ಗೆಳತಿಗೊಂದು ಗಂಡು ಬೇಕು... (ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿತ)

ಬಿಳಿ ಆಗಸದ ಸೀರೆಸೆರಗಿನಲ್ಲಿ
ಕೋಟಿ ನಕ್ಷತ್ರದುಂಗುರಗಳು
ಸೆರಗ ಹಾಸಿ ಕಣ್ಣರಳಿಸಿ ನಿಂತರೆ
ಹಸಿರ ರಾಶಿ, ಬೆಟ್ಟ ಗುಡ್ಡ
ಭೋರ್ಗರೆದ ನೀರ
ಬೆಣ್ಣೆ ನೊರೆಯು ನಿನ್ನ ಹಣೆಯಲ್ಲಿ

ನಿನ್ನೆ ಸಂಜೆ ಬಿಡದೇ ಸುರಿದ
ಬಿರು ಬಿರು ಬಿರುಗಾಳಿ ಮಳೆಗೆ
ಅಳಿಸಿಹೋಗಿದೆ ನೊಸಲ ಬಿಂದಿಗೆ
ಹೊಡೆದ ಕೈಗಾಜುಗಳು ರಕ್ತ ಹೀರಿ
ಲೋಕರೂಢಿ ದಾರ್ಷ್ಯ ಮೀರಿ
ತಾಳಿ ಕಿತ್ತಿದ್ದಾರೆ, ಮೊನ್ನೆಯಷ್ಟೇ ಇತ್ತು

ಆದರೂ ಅವಳ ಮೊಗದಂಚಿನ
ರವಿಕಿರಣ ಮೈಬಟ್ಟೆ ಕಳಚಿಲ್ಲ
ಮರಳು ಗಾಡಿನ ಓಯಸಿಸ್ ಅವಳು
ಒಮ್ಮೊಮ್ಮೆ ಸಮುದ್ರವಾಗುವಳು
ಕುಡಿಯಲು ಮಾತ್ರ ತೊಟ್ಟು ನೀರಿಲ್ಲ
ಬಿಳಿ ಸೀರೆಯುಟ್ಟರೆ ಲಕ್ಷಣವಲ್ಲ

ಕಾಮದ ವಾಸನೆಗೆ ದುಂಬಿ ಬಂತು
ಅವಳಿಗೆ ಹಳೆ ಗಂಡನ ವಾಸನೆ
ಮೊನ್ನೆ ಮೊನ್ನೆ ಗಿಳಿ ಕಚ್ಚಿದ್ದ ಹಣ್ಣು
ಸ್ವಲ್ಪ ಎಂಜಲಾಗಿ ಹೊಳೆವ ಕಣ್ಣು
ಮುರುಟಿರುವ ಹೂವಾಗಿದ್ದಾಳೆ, ಮುದುಡಿಲ್ಲ
ನನ್ನ ಗೆಳತಿಗೊಂದು ಗಂಡು ಬೇಕು

ಶ್ವೇತ ಸೀರೆಯಂಚಿನಲ್ಲಿ
ಬದುಕಿನ ಕಪ್ಪು ಮಸಿ ಮೆತ್ತಿದೆ
ಬೋಳು ಕೈ ಜೊತೆ ಬರಿದು ಹಣೆ
ಸಾವಿನವಸರಕ್ಕೆ ಯಾರು ಹೊಣೆ?
ಶುದ್ಧ ಮನಸ್ಕ ಹೆಣ್ಣುಮಗಳಿಗೆ
ಗಂಡು ಬೇಕು ಗಂಡನಾಗಲು

7 comments:

 1. ಸೂಕ್ಷ ಆಲೋಚನೆಯ ವಿಷಯ.. ಮತ್ತು ಸೂಕ್ತವಾದ ವಿವರಣೆಯ ವರ್ಣನೆ .. ಮನಸ್ಸಿಗೆ ನಾಟಿತು ನಿಮ್ಮ ಈ ಕವಿತೆಯ ಭಾವನೆ.. ಸೊಗಸಾಗಿದೆ ರಚನೆ.. :)

  ReplyDelete
 2. ಎಂದಿನಂತೆ ಸಮಾಜಮುಖಿಯಾದ ಧಾರೆಯಿಡಿದು ಬಂದಿದ್ದೀರಿ ಮೋಹನಣ್ಣ, ಅದ್ಭುತವಾದ ಕವಿತೆ..:))) "ವಿಧವಾ ವಿವಾಹ" ದಂತಹ ಸೂಕ್ಷ್ಮ ವಿಷಯಗಳನ್ನು ಕವನದ ತೆಕ್ಕೆಗೆ ತೆಗೆದುಕೊಳ್ಳುವಾಗ ತುಂಬಾ ಜಾಗರೂಕರಾಗಿರುವ ಅವಶ್ಯವಿದೆ ಅದನ್ನು ತುಂಬ ಚೆಂದವಾಗಿ ಕವಿತೆ ನಿಭಾಯಿಸಿದೆ.. ವಿಷಯ ವಸ್ತು ತುಂಬಾ ಮೆಚ್ಚಿದೆ, ಮನಸ್ಸಿನಲ್ಲಿ ಹಾಗೆಯೇ ನಾಟಿಬಿಟ್ಟಿದೆ.. ಆಕೆ ತನ್ನ ಹರಿಶಿನ-ಕುಂಕುಮ ಮತ್ತು ತನ್ನ ತಾಳಿಯನ್ನು ತನ್ನ ಗಂಡನ ಸಾವಿನೊಂದಿಗೆ ಕಳೆದುಕೊಂಡಳು ಎಂಬುದನ್ನು ತುಂಬಾ ಮಾರ್ಮಿಕವಾಗಿ ನುಡಿದಿದೆ ಕವಿತೆ.. ಆಕೆ ವಿಧವೆಯಾದ ನಂತರದಲ್ಲಿ ಮನದಲ್ಲಿ ಮೂಡಿ ನಿಲ್ಲುವ ಭಾವಗಳನ್ನು ಅದ್ಭುತವಾಗಿ ಚಿತ್ರಿಸಿದ್ದೀರಿ..
  ಕಾಮದ ವಾಸನೆಗೆ ದುಂಬಿ ಬಂತು
  ಅವಳಿಗೆ ಹಳೆ ಗಂಡನ ವಾಸನೆ
  ಮೊನ್ನೆ ಮೊನ್ನೆ ಗಿಳಿ ಕಚ್ಚಿದ್ದ ಹಣ್ಣು
  ಸ್ವಲ್ಪ ಎಂಜಲಾಗಿ ಹೊಳೆವ ಕಣ್ಣು
  ಮುರುಟಿರುವ ಹೂವಾಗಿದ್ದಾಳೆ, ಮುದುಡಿಲ್ಲ
  ನನ್ನ ಗೆಳತಿಗೊಂದು ಗಂಡು ಬೇಕು
  ಈ ಸಾಲುಗಳಲ್ಲಿನ ಭಾವ ತೀವ್ರತೆ ನಿಮ್ಮ ಕವಿತೆಯಲ್ಲಿನ ಸೂಕ್ಷ್ಮತೆಗಿಡಿದ ಕೈಗನ್ನಡಿ.. ಕಾಮದ ವಾಸನೆಗೆ ದುಂಬಿ ಬಂದಾಗ ಆಕೆಯಲ್ಲಿ ಕಾಡಿದ ಗಂಡನ ವಾಸನೆ ಅದ್ಭುತವಾದ ಭಾವ, ನಮ್ಮ ಭಾರತೀಯ ಸಂಸ್ಕೃತಿಯಲ್ಲುಟ್ಟಿದ ಹೆಣ್ಣು ಮಗಳೊಬ್ಬಳ ಭಾವಗಳನ್ನು ಬಿಂಬಿಸಿವೆ.. ಯಾರೋ ವಿಧವೆ ಎಂಬ ಕಾರಣದಿಂದ ಸುಲಭವಾಗಿ ಒಲಿಯುವಳೆಂದು ಬಂದಾಗ, ಆಕೆ ತನ್ನ ಗಂಡನ ಧ್ಯಾನದಲ್ಲಿ ಮುಳುಗಿ ಈತನಿಗೊಲಿಯದ ಗಗನ ಕುಸುಮವಾಗುತ್ತಾಳೆ.. ಕವಿತೆ ಇಂತಹ ಹತ್ತಾರು ಸೂಕ್ಷ್ಮಗಳನ್ನು ಬಿಚ್ಚಿಡುವ ಪ್ರಯತ್ನ ಮಾಡಿದೆ.. ಮನಗೆಲ್ಲುವ ಕವಿತೆ.. ಆಕೆಗೊಂದು ಗಂಡ ಬೇಕು ಎಂದೇಳುವ ಕವನದ ಆಶಯ ಮೆಚ್ಚಿ ಹೊಗಳಲೇಬೇಕು.. ಸಮಾಜದಲ್ಲಿ ಇಂತಹ ವಿಷಯಗಳ ಬಗ್ಗೆ ಅರಿವು ಮೂಡಿ ಆ ಹುಡುಗಿಗೊಂದು ಹುಡುಗ ಸಿಗುವ ದಿನಗಳು ಬರಲಿ..

  ReplyDelete
 3. ಸೂಕ್ಷ್ಮ ವಿಷಯದ ನಿರೂಪಣೆಯನ್ನು ಸಮರ್ಥವಾಗಿ ಮಾಡಿದ್ದಿರಿ..
  ಮಾನವೀಯ ನೆಲೆಯಲ್ಲಿ ನಿಮ್ಮ ಕವಿತೆ ಹೆಚ್ಚು ಪ್ರಭಾವಶಾಲಿಯಾಗಿದೆ..ಸಮಾಜದ ಡೊಂಕನ್ನು ತಿದ್ದುಲು ಸಮರ್ಥನಾದ ಗಂಡು ಬೇಕು ಎಂಬುದು ಕೊನೆಯ ಸಾಲು ನೇರವಾಗಿ ಬೊಟ್ಟು ಮಾಡುತ್ತದೆ..
  ಇಷ್ಟವಾಯ್ತು...

  ReplyDelete
 4. ಪ್ರೌಢಿಮೆ ಎದ್ದು ಕಾಣುತ್ತಿದೆ ಕವಿತೆಯಲ್ಲಿ. ಕ್ಲಿಷ್ಟವಾದ ವಿಷಯವಸ್ತುವಿನ ಸುತ್ತ ಇಷ್ಟು ಸುಂದರವಾದ ಕವಿತೆ ಶ್ರೀಷ್ಟಿಸುವುದು ನಿಜಕ್ಕೂ ಸವಾಲೇ ಸರಿ. ಅಪರೂಪದ ಅದ್ಭುತ ಕವಿತೆ ಮೋಹನಣ್ಣ.

  ReplyDelete
 5. ಜತನದಿಂದ ಆರಿಸಿ ಪೊಣಿಸಿದ್ದೀರಿ ಶಬ್ದಗಳನ್ನ
  ನಾಜೂಕಾದ ವಿಷಯ ಅನುಭವದಾಚೆಗೂ ಬರಹ ಬೆಳೆದಿದೆಯೇ..?

  "ಒಮ್ಮೊಮ್ಮೆ ಸಮುದ್ರವಾಗುವಳು
  ಕುಡಿಯಲು ಮಾತ್ರ ತೊಟ್ಟು ನೀರಿಲ್ಲ
  ಬಿಳಿ ಸೀರೆಯುಡಲವಳಿಗಿಷ್ಟವಿಲ್ಲ" - ಪೂರ್ಣ ಕವನದ ಭಾವವನ್ನ ವ್ಯಕ್ತಪಡಿಸಬಹುದಾದ
  ಶಕ್ತ ಸರಳ ಸಾಲುಗಳಿವು

  ಇಷ್ಟವಾಯಿತು ಕವನ...

  ReplyDelete
 6. ಚಿಂತನೆಗೆ ಹಚ್ಚುವ ಖಾಳಜೀ ತುಂಬಿದ ಕವನ.ಕವಿಯ ಕೂಗು ಕರುಣೆಯುಕ್ಕಿಸುವುದು.ಸಮಾಜದಲ್ಲಿ ಆಳವಾಗಿ ಬೇರೂರಿರು ಕಂಧಾಚಾರಗಳೆಲ್ಲ ಕವಿಗೆ ಕಳವಳವನ್ನುಂಟು ಮಾಡಿವೆ.ಈ ಮೂಢ ಸಂಸ್ಕೃತಿ ತೊಲುಗುವ ಬಗೆಯಾದರೂ ಹೇಗೆಂಬ ಚಿಂತೆ ಕವಿಯನ್ನು ಕಾಡುತ್ತದೆ.ಹೆಣ್ಣುತಾಯಿ ಅನುಭವಿಸುವ ನೋವು,ಯಾತನೆಗಳೆಲ್ಲ ಚಿಂತಾಕ್ರಾಂತನ್ನಾಗಿಸಿವೆ.ಸಮಾಜಮುಖಿಯಾದ ಈ ಕವನ ಜಾಗೃತಿಯ ಸಂದೇಶವನ್ನು ಸಾರಿ ಸಾರಿ ಹೇಳಿದೆ.ಧನ್ಯ ಕವಿ.

  ReplyDelete
 7. ನೊಸಲ ಬೊಟ್ಟನ್ನು ಅಳಿಸಿ ಹೋದ ಒಂದು ಅರಳು ಮಲ್ಲಿಗೆಯ ವಸ್ತು ವಿಷಯ ಆರಿಸಿಕೊಂಡು ಅದರ ಸುತ್ತ ಇಷ್ಟು ಪ್ರೌಡಿಮೆಯಲ್ಲಿ ಕವನ ಬರೆಯುವ ಚಾಕಚಕ್ಯತೆಗೆ ನಿಮಗೆ ನೀವೇ ಸಾಟಿ. ಬದುಕು ಎಲ್ಲಿಂದ ಎಲ್ಲಿಗೋ ಸಾಗಿ ಆಧುನಿಕತೆ ಎಂಬ ನೆಲೆಗಟ್ಟಿನಲ್ಲಿ ಪ್ರಸ್ತುತ ನಿಂತಿದ್ದರೂ ಒಂದು ಕುರುಡು ಕಟ್ಟುಕಟ್ಟಳೆಗೆ ಗಂಟು ಹಾಕುವ ಬುದ್ಧಿ ಇನ್ನೂ ತೊಲಗಿಲ್ಲ ಎಂದರೆ ಅದೊಂದು ವಿಪರ್ಯಾಸ. ದುರದೃಷ್ಟವೆಂದರೆ ಈ ನಿಟ್ಟಿನಲ್ಲಿ ಯಾರೂ ಕಣ್ಣು ಹಾಯಿಸದೆ ಇರುವುದು. ಅದೊಂದು ದುಖ:ದ ಸಂಗತಿ.
  ಒಂದು ಸೂಕ್ಷ್ಮ ಎಳೆಯನ್ನು ಹಿಡಿದು ಅದರ ಸುತ್ತ ಕವನ ಕಟ್ಟಿದ ಪರಿ, ಅದರೊಳಗಿರುವ ಆಶಯ ಎಲ್ಲವನು ಪರಿ ಪರಿಯಾಗಿ ಹೊಗಳುವಂತಾದ್ದೆ.

  ReplyDelete