ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Thursday 24 January 2013

ಗೆದ್ದೋನ್ಯಾರು? (ಉದಯವಾಣಿಯ ಸಾಪ್ತಾಹಿಕ ಸಂಪದ ಮತ್ತು ವಿಜಯnext ನಲ್ಲಿ ಪ್ರಕಟಿತ)

ಗುಡ್ಡಗಾಡು ಪ್ರದೇಶಗಳ ತಪ್ಪಲಿನಲ್ಲಿರುವ ನಮ್ಮ ಹಳ್ಳಿಗಳಲ್ಲಿ ಸಂಜೆ ಏಳಕ್ಕೆಲ್ಲಾ ನೀರವ ಮೌನ ಕೂಡಿಕೊಳ್ಳುತ್ತದೆ. ಗಿಡ ಮರ ಹೂಗಳ ಮೇಲೆ ಚೆಲ್ಲಿದ ಬೆಳದಿಂಗಳ ಭಾಷೆ ಅರ್ಥ ಮಾಡಿಕೊಳ್ಳಬಹುದು. ಆದರೆ ಆ ಹಳ್ಳಿಯಲ್ಲಿ ಸಂಜೆ ಆರಕ್ಕೆಲ್ಲಾ ಮೌನ ಕೂಡಿಕೊಂಡಿತ್ತು. ಕೆರೆ ಕಡೆಗೆ ಹೋಗುವವರು ಬೇಗ ಮುಗಿಸಿ ಬಂದುಬಿಟ್ಟಿದ್ದರು, ರೋಡಿನ ಪಕ್ಕದಲ್ಲಿ, ಅಲ್ಲಲ್ಲಿರುವ ದಿಣ್ಣೆಗಳಲ್ಲಿ ಬೀಡಿ ಸೇದುತ್ತ ಕುಳಿತಿದ್ದವರೆಲ್ಲಾ ‘ನಡಿರ್ಲಾ, ನಡಿರ್ಲಾ’ ಎಂದುಕೊಂಡವರೇ ಮನೆಗಳಿಗೆ ಕಾಲ್ಕಿತ್ತಿದ್ದರು. ಬೇಲಿ ಮೆಳೆ ಸಂದಿಯಲ್ಲಿ ಕುಳಿತುಕೊಳ್ಳುತ್ತಿದ್ದ ಹೆಂಗಸರಿಗೆ ವಿಧಿಯಿಲ್ಲದ ಪ್ರಾಣ ಸಂಕಟ. ಸಂಜೆಯಾದಂತೆ ಕಳ್ಳ ಪೋಲೀಸ್ ಎಂಬ ಕೇರಿ ಕೇರಿಗೆ ಓಡುವ, ಅಟ್ಟಿಸಿಕೊಂಡು ಹೋಗುವ ಆಟವಾಡುತ್ತಿದ್ದ ಮಕ್ಕಳೆಲ್ಲಾ ಭಯ ಕೂಡಿಕೊಂಡು ಮನೆ ಮೂಲೆಗವಚಿ ಮಲಗಿಬಿಟ್ಟಿದ್ದಾರೆ. ತೊಟ್ಟಿ ಮನೆಯವರು, ಕೊಟ್ಟಿಗೆಯಿಂದ ದನಕರು, ಕುರಿಕೋಳಿಗಳನ್ನೆಲ್ಲಾ ಅಟ್ಟಿಕೊಂಡು ಬಂದು ಹಜಾರದ ಕಂಬಗಳಿಗೆ ಕಟ್ಟಿಕೊಂಡಿದ್ದಾರೆ.

ಕಳೆದ ಹತ್ತು ದಿನಗಳಿಂದ ಹುಲಿಗಳೆರಡು ದಾರಿ ತಪ್ಪಿಯೋ ಅಥವಾ ಹಸಿವು ಹೆಚ್ಚಾಗಿಯೋ ಊರಿಗೆ ಬಂದುಬಿಟ್ಟಿದ್ದವು. ನಿನ್ನೆವರೆವಿಗೂ ಒಟ್ಟು ಹತ್ತು ಜಾನುವಾರು ಮತ್ತು ಕೆಳಗಲ ಕೇರಿಯ ಮಾಚ, ಸಿದ್ಧ, ಸಿದ್ಧನ ಮಗುವನನ್ನು ಕೊಂದು ತಿಂದು ಹಾಕಿದ್ದವು. ಕೊಟ್ಟಿಗೆಗಳನ್ನು ಹುಡುಕಿಕೊಂಡು ಬರುವ ಹುಲಿಗಳಿಗೆ ಒಂದೆರಡು ಬಾರಿ ಪಕ್ಕದ ಗುಡಿಸಲಿನೊಳಗಿದ್ದ ಮನುಷ್ಯರೇ ಹೆಚ್ಚು ರುಚಿಯಾಗಿ ನಾಲಗೆ ಚಪ್ಪರಿಸಿಕೊಂಡಿದ್ದವು. ನಿನ್ನೆ, ಸೂರ್ಯ ಮುಳುಗಿ ಊರನ್ನು ಕತ್ತಲು ನುಂಗುವುದರಲ್ಲಿತ್ತು. ಅಷ್ಟರಲ್ಲಿಯೇ ಕೆಳಬೀದಿಯ ರಂಗಿ ಚಿಟಾರನೆ ಚೀರಿಕೊಂಡಳು. ಓಡೋಡಿ ಹೋಗಿ ನೋಡಿದ ಜನರಿಗೆ ಅವಳ ಗಂಡ ಕೆಂಚಪ್ಪ ಮತ್ತು ಮಗುವಿನ ದೇಹದ ಅಳಿದುಳಿದ ಅಂಗಾಂಗಳು ಕೊಟ್ಟಿಗೆಯ ಅಂಗಳದಲ್ಲಿ ರಕ್ತ ಸಿಕ್ತವಾಗಿ ಬಿದ್ದಿದ್ದವು. ಊರಿಗೆ ಊರೇ ಬೆಚ್ಚಿ ಬಿದ್ದಿತ್ತು.

ಬೇಗ ಮಲಗಿಕೊಳ್ಳುವ ನಮ್ಮ ಹಳ್ಳಿಗರಿಗೆ ಮುಂಜಾನೆಯೂ ಬೇಗ ಎಚ್ಚರಗೊಳ್ಳುವ ಅಭ್ಯಾಸ. ಎಚ್ಚರಗೊಂಡಿದ್ದೆ ಒಂದು ರಗ್ಗನ್ನು ಹೊದ್ದುಕೊಂಡು ರುದ್ರಣ್ಣನ ಹೋಟೆಲ್ ಗೆ ಹೋಗಿ ಒಂದೆರಡು ಬೀಡಿ ಸೇದಿ ಟೀ ಕುಡಿಯುತ್ತಾ ಕುಡಿಯುತ್ತಾ ಸೂರ್ಯನ ಎಳೆ ಬಿಸಿಲನ್ನು ಮೈ ಕೈ ಗೆ ತಾಕಿಸಿಕೊಂಡು ಬೆಚ್ಚಗಾಗುತ್ತಾರೆ. ಹೆಂಗಸರು ಮಬ್ಬಿನಲ್ಲಿಯೇ ಹೊಲಗಳಿಗೆ ತೆರಳಿ ಅವರೆ, ಹಲಸಂದೆ ಕೊಯ್ದು ಪಟ್ಟಣದ ಸಂತೆಗೆ ಕಳುಹಿಸಬೇಕು. ಆದರೆ, ಈಗೀಗ ದಿನ ಬೆಳಗಾದಾಗ ಯಾರೂ ಹೊರ ಬರಲೊಲ್ಲರು. ಅದೇ ಹೆದರಿಕೆ. ಮೇಲೆ ಬಿದ್ದೊಡನೆ ಏಕ್‍ದಂ ಕತ್ತಿಗೆ ಬಾಯಿ ಹಾಕುವ ಪ್ರಾಣಿಯನ್ನು ಕಂಡರೆ ಯಾರಿಗೆ ತಾನೇ ಭಯವಾಗುವುದಿಲ್ಲ.

ಕೊನೆಗೂ ಕಷ್ಟಪಟ್ಟು ನಿದ್ದೆ ತಂದುಕೊಂಡ ಜನ ಬೆಳಗ್ಗೆ ಬೆಳಕಾದ ನಂತರ ಹೊರಗೆ ಬಂದರು. ಪ್ರಪಂಚ ಮುಳುಗಿಹೋದರೂ ತಮ್ಮನ್ನು ಜಗ್ಗಿಸಲು ಸಾಧ್ಯವಿಲ್ಲ ಎಂದುಕೊಂಡಿದ್ದ ಒಂದಷ್ಟು ಜನ ಎಂದಿನಂತೆ ಮುಂಜಾನೆಯೇ ಕೆರೆ ಪಕ್ಕದಲ್ಲಿರು ಆಲದಮರದ ಕೆಳಗಿನ ಸೋಂಬೇರಿಕಟ್ಟೆಯ ಮೇಲೆ ಕುಳಿತುಕೊಂಡರು. ಆಗಷ್ಟೇ ಕೆರೆಕಡೆಗೆ ಹೋಗಿ ನೀರು ಮುಟ್ಟಿಕೊಂಡು ಬಂದಿದ್ದರು. ನಿನ್ನೆಯ ಹಳಸಲು ಸಾರಾಯಿ ಬಾಯಿಗಳೆಲ್ಲಾ ಬೀಡಿ ಕಚ್ಚಿಕೊಂಡಿದ್ದವು.

‘ಅಲ್ಲಾ ಕಣ್ರಲಾ, ಇದೆಷ್ಟ್ ದಿನ ಅಂತ ನಾವು ಈ ಹುಲಿಗೆ ಅಂಜ್ಕಂಡು ಹಿಂಗ್ ಬದುಕ್ಬೇಕು ಅಂತೀನಿ’ ನಮ್ಮ ನಿಂಗಣ್ಣ ಕೇಳಿದ.
‘ಓ... ಇವ್ನ್ ಮನೇಲಿ ಕೋವಿ ಇಟ್ಕಂಡವ್ನೆ, ತಗಬಂದು ಢುಂ ಅನ್ನಸ್ಬುಡ್ತಾನೆ’ ಎಂದು ಹೇಳಿದ ರಾಚಪ್ಪ ‘ಹಿ ಹಿ’ ಎಂದು ಕಿಸಿದುಬಿಟ್ಟ. ಅವನ ದಂತಪಂಕ್ತಿಯ ಕೆಳಗಿನ ಸಾಲಿನಲ್ಲಿ ನಾಲ್ಕು ಹಲ್ಲುಗಳೇ ಇಲ್ಲ. ಊರಿನವರಿಗೆಲ್ಲಾ ಆತನ ನಗು ಚಿರಪರಿಚಿತ.
‘ಲೋ ಬುಡ್ಲಾ, ಇನ್ನೊಂದು ವಾರ ಆದ್ಮೇಲೆ ಅವೇ ಹೋಗ್ತವೆ, ಎಲ್ಲೋ ದಾರಿ ತಪ್ಕಂಡ್ ಬಂದವೆ’ ಎಂದು ಮಾದೇವ ಹೇಳಿದ ತಕ್ಷಣ ‘ನೋಡ್ರಲೋ, ಹುಲಿಗಳು ಯಾವ್ದೋ ಟೂರಿಗ್ ಬಂದವೆ, ಇನ್ನೊಂದೆರ್ಡ್ ಮನೇಲಿ ಮಟನ್ ಊಟ ಮಾಡ್ಕಂಡ್ ತಕ್ಷ್ಣ ಹೊರ್ಟೋಯ್ತವೆ ಅನ್ನಂಗ್ ಮಾತಾಡ್ತಾವ್ನೆ, ನೀನೂ ಒಂದಿನ ಬಾಡೂಟ ಹಾಕ್ಸ್ ಬಿಡಪ್ಪ’- ರಾಚಪ್ಪ ಮತ್ತೆ ಮಧ್ಯೆ ಗಹ ಗಹಿಸಿ ನಕ್ಕು ಮಾತನಾಡಿದ. ಉಳಿದವರೆಲ್ಲಾ ‘ಗೊಳ್’ ಎಂದು ನಕ್ಕುಬಿಟ್ಟು ತಮ್ಮ ಹಳದಿ, ಕಪ್ಪು ಹಲ್ಲುಗಳನ್ನು ಒಬ್ಬರಿಗೊಬ್ಬರು ತೋರಿಸಿಕೊಂಡರು.

ಅಷ್ಟಕ್ಕೆ ರೇಡಿಯೋ ಹಿಡಿದುಕೊಂಡು ಇಂಗ್ಲೀಷ್ ವಾರ್ತೆ ಕೇಳುತ್ತ ರಾಮಣ್ಣ ಅಲ್ಲಿಗೆ ಬಂದ. ಖಾಲಿ ಮಡಕೆಗೆ ಉದಾಹರಣೆ ಕೊಡಿ ಎಂದರೆ ಸೂಕ್ತವಾಗಿ ನಮ್ಮ ರಾಮಣ್ಣನ ಹೆಸರು ಕೊಡಬಹುದು ನೋಡಿ. ದಿನದಲ್ಲಿ ಐವತ್ತು ಪೈಸೆ ದುಡಿಯಲು ಲಾಯಕ್ಕಲ್ಲದವನು. ಹೆಂಡತಿ ದುಡಿದು ಅಡುಗೆ ಮಾಡಿದ ತಕ್ಷಣ ಹೋಗಿ ಚೆನ್ನಾಗಿ ಉಂಡು ಬಂದುಬಿಡುತ್ತಾನೆ. ಕಾಳಿನ ಉಸುಲಿಯಿಲ್ಲದೆ ಮುದ್ದೆ ಗಂಟಲಿಗೆ ಇಳುಗುವುದಿಲ್ಲ. ಆದರೆ, ಊರಿನ ತುಂಬೆಲ್ಲಾ ತನ್ನದೇ ಒಂದು ರೀತಿಯ ಘನತೆ ಉಳಿಸಿಕೊಂಡಿದ್ದಾನೆ. ಎದೆ ನಿಗುರಿಸಿಕೊಂಡು ರೇಡಿಯೋ ಹಿಡಿದುಕೊಂಡು ನಡೆಯುವುದು ಅವನ ರೂಢಿ.
‘ಓ ಬಾ ರಾಮಣ್ಣ, ಏನ್ ಸಮಾಚಾರ?’ ಎಲ್ಲರೂ ಒಟ್ಟಿಗೆ ಕೇಳಿದರು
‘ಏನೂ ಇಲ್ಲ ಮಾತಾಡ್ರಲಾ, ಬಡ್ಡೆತವ ಬೆಳ್ ಬೆಳಗ್ಗೆನ ಮಾಡೋಕ್ ಬೇರೆ ಕೇಮೆ ಇಲ್ಲ ನಿಮ್ಗೆ’ ಎಂದ ರಾಮಣ್ಣ. ತಾನೇನೋ ಕಡಿದು ಗುಡ್ಡೆ ಹಾಕಿಬಂದವನಂತೆ ಮಾತನಾಡಿದವನು ಸುಮ್ಮನೆ ಕುಳಿತುಕೊಂಡು ಇವರ ಮಾತೆಲ್ಲಾ ಕೇಳಿಸಿಕೊಂಡ. ಇದ್ದಕ್ಕಿದ್ದಂತೆ ಆತನ ಖಾಲಿ ತಲೆಗೆ ಒಂದು ಹೊಸ ಐಡಿಯಾ ಹೊಳೆಯಿತು. ಒಂದು ಬಾರಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತುಕೊಂಡು ಗೆದ್ದು ಊರನ್ನಾಳಬೇಕು ಎಂಬ ಕನಸ್ಸು ಇಟ್ಟುಕೊಂಡಿದ್ದಾತನಿಗೆ ಈ ಸಂದರ್ಭವನ್ನು ಯಾಕೆ ಉಪಯೋಗಿಸಿಕೊಳ್ಳಬಾರದೆನಿಸಿತು.
‘ಅಲ್ಲಾ ಕಣ್ರಲಾ, ಅದ್ಯಾವನೋ ಮನೆ ಒಳ್ಗಡೆ ಕುಂತ್ಕಂಡು ವಿದಾನ್ ಸೌದದ್ ಮೆಟ್ಲತ್ತಿನಿ ಅಂತಿದ್ನಂತೆ, ಹಂಗಾಯ್ತು ನಿಮ್ ಕತೆ’ ರಾಮಣ್ಣ ಮಾತನಾಡಿದ.
‘ಅದೇನ್ ಒಸಿ ಅರ್ಥ ಆಗಂಗ್ ಹೇಳಣ್ಣ’ ಇವರ ಜೊತೆಗೆ ಇದ್ದ ಪಾಪಣ್ಣ ತಲೆ ಕೆರೆದುಕೊಳ್ಳುತ್ತ ಕೇಳಿಕೊಂಡ. ಎಲ್ಲರೂ ಒಮ್ಮೆ ಎಂಜಲು ಕೊಳವೆಯನ್ನು ಕಚ್ಚಿ ಕಚ್ಚಿ ಗಾಂಜಾ ಸೇದಿ ‘ಆಹಾ’ ಎಂದುಕೊಂಡು ಉಸಿರುಬಿಟ್ಟರು.
‘ನಾಳೆ ನನ್ ಜೊತೆ ಪಟ್ಣಕ್ ಬನ್ರಲಾ, ಅಲ್ಲಿ ಪಾರೆಸ್ಟ್ ಡಿಪಾಟ್ಮೆಂಟ್ ಹತ್ರ ಎಲ್ರೂ ಉಪ್ವಾಸ ಕುಂತ್ಬಿಡಾನ’ ರಾಮಣ್ಣ ಹೇಳಿದ.
‘ನಾವಿಷ್ಟೇ ಜನ ಹೋಗ್ಬಿಟ್ರೆ ಒಪ್ ಬುಡ್ತಾರಾ ರಾಮಣ್ಣ?’ ಬುದ್ಧಿವಂತನಂತೆ ನಿಂಗಣ್ಣ ಕೇಳಿದ.
‘ಜಾಸ್ತಿ ಜನ ಇದ್ದಷ್ಟು ಉಪ್ವಾಸ ಬೇಗ ಮುಗಿಯುತ್ತೆ ಕಣ್ರಲಾ, ಇಲ್ಲಾಂದ್ರೆ ಹಸ್ಕೊಂಡ್ ಸಾಯ್ಬೇಕಷ್ಟೆ, ನಿಮ್ ಹೆಂಡ್ರು ಮಕ್ಳು, ಅಕ್ ಪಕ್ದವ್ರನೆಲ್ಲಾ ಕರ್ಕೊಂಡು ನಾಳೆ ಬೆಳಗ್ಗೆ ಒಂಬತ್ ಗಂಟೆ ಬಸ್ಗೆ ಬಂದ್ಬುಡ್ರಲಾ’ ಎಂದ ರಾಮಣ್ಣ ಆಗಲೇ ಚುನಾವಣೆ ಕನಸ್ಸು ಕಾಣತೊಡಗಿದ.
ಮುಖ ಮುಖ ನೋಡಿಕೊಂಡ ಎಲ್ಲರೂ ಒಟ್ಟಿಗೆ ‘ಆದದ್ದಾಗ್ಲಿ ಮಾದಪ್ಪನ್ ಜಾತ್ರೆ, ಬತ್ತಿವಿ ಬುಡಣ್ಣ, ಮನ್ಸನ್ ತಿನ್ನೋ ಪ್ರಾಣಿಗಳು ಅವು, ನಾಳೆದಿನ ನಮ್ ಕುತ್ಗೆಗೇ ಬಾಯ್ ಹಾಕ್ಬಿಟ್ರೆ’ ಎಂದರು

‘ಬೆಳಗ್ಗೆನೆ ಚೆನ್ನಾಗ್ ತಿನ್ಕಳಿ ಬಡ್ಡೆತವ, ಅಲ್ಲಿ ಹೋದ್ಮೇಲೆ ಒಂದಕ್ಕೆ ಅಂತ ಎದ್ದೆದ್ ಹೋಗಿ ಚೆನ್ನಾಗ್ ಉಂಡ್ಕಂಡ್ ಬರ್ಬೇಡಿ’ ಎಂದ ರಾಮಣ್ಣನ ಹೊಟ್ಟೆ ತಾಳ ಹಾಕಿದಂತಾಗಿ ಮನೆಕಡೆ ನಡೆದ.

ರಾತ್ರಿಯೆಲ್ಲಾ ಈ ಯಾವತ್ತೂ ವಿಚಾರಗಳು ಹಳ್ಳಿಯ ಮೂಲೆ ಮೂಲೆಗೂ ಹರಡುವಂತೆ ರಾಮಣ್ಣ ನೋಡಿಕೊಂಡ. ಮಕ್ಕಳು ಮರಿಗಳೊಂದಿಗೆÉ ಬದುಕುತ್ತಿದ್ದ ನಮ್ಮ ಜನ ಹುಲಿಗಳಿಗೆ ತುಂಬಾ ಹೆದರಿದ್ದರು. ರಾಮಣ್ಣನಂತ ತಿಳಿದವರ ಜೊತೆ ಹೋಗಿ ನಮ್ಮ ನಮ್ಮ ಕುಡಿಗಳನ್ನು ಉಳಿಸಿಕೊಳ್ಳೋಣ ಎಂದುಕೊಂಡವರೇ ಬೆಳಗ್ಗೆ ಒಂಭತ್ತು ಘಂಟೆಯ ಬಸ್ಸಿಗೆ ಹೊರಡಲು ಅನುವಾದರು.

ಬೆಳಗ್ಗೆ ಒಂಭತ್ತು ಘಂಟೆ ಬಸ್ಸಿಗೆ ಒಂದಷ್ಟು ಜನಗಳನ್ನು ಕೂಡಿಕೊಂಡ ರಾಮಣ್ಣ ಫಾರೆಸ್ಟ್ ಆಫೀಸ್ ಮುಂದೆ ಕುಳಿತು ಧಿಕ್ಕಾರ ಕೂಗಿದ. ಆಫೀಸಿನಲ್ಲಿದ್ದ ಅಧಿಕಾರಿಗಳು ರಾಮಣ್ಣನನ್ನು ಒಳಗೆ ಕರೆದು ‘ಅಲ್ಲಾ ರೀ, ಮೊದ್ಲೆ ಎಲ್ಲಾ ಡಿಸೈಡ್ ಆಗಿದೆ, ಈ ಭಾನುವಾರ ನಿಮ್ಮ ಹಳ್ಳಿಗೆ ಬಂದು ಹುಲಿಗಳನ್ನ ಹಿಡಿಯೋ ಕೆಲ್ಸ ಆಗುತ್ತೆ, ಪೇಪರ್ ನಲ್ಲಿ ಬಂದಿತ್ತು, ನೋಡಿಲ್ವಾ?’ ಎಂದರು. ನಿಜ ಹೇಳಬೇಕೆಂದರೆ ರಾಮಣ್ಣನಿಗೆ ಅದು ಗೊತ್ತಿರಲಿಲ್ಲ, ಆದರೂ ಆತ ಚಾಲಾಕಿ ಮನುಷ್ಯ.
‘ಕಾಲಿಗ್ ಬೀಳ್ತಿನಿ ಬುದ್ಯೋರ, ದಮ್ಮಯ್ಯ ಅಂತೀನಿ, ಏನೇನೋ ಸಬೂಬ್ ಹೇಳಿ ಊರ್ ಜನಗೋಳ್ನೆಲ್ಲಾ ಕರ್ಕಂಡ್ ಬಂದ್ಬುಟ್ಟಿವ್ನಿ, ಈಗ ಸುಮ್ನೆ ಕರ್ಕಂಡ್ ಹೊರ್ಟೋಯ್ತಿನಿ, ಅವರ್ ತಾವ ಏನೂ ಹೇಳ್ಬೇಡಿ ಸ್ವಾಮಿ’ ಎಂದು ಕೇಳಿಕೊಂಡ ರಾಮಣ್ಣ ಹೊರಗೆ ಬಂದು ಗತ್ತಿನಿಂದ ‘ನಡ್ರಲಾ ನಡ್ರಲಾ, ಇದೇ ಆಯತ್ವಾರ ಊರಗ್ ಬೋನ್ ತಂದು ಹುಲಿಗೊಳ್ನ ಹಿಡ್ಕಂಡ್ ಹೋದರಂತೆ, ಸಾಯೇಬ್ರು ಹೇಳವ್ರೆ, ನಡ್ರುಲಾ’ ಎಂದ. ಎಲ್ಲರೂ ಖುಷಿಯಿಂದ ಅಲ್ಲಿಂದ ಬೀಳ್ಕೊಟ್ಟರು. ರಾಮಣ್ಣನ ಈ ಸಾಹಸದ ಬಗ್ಗೆ ಗುಸು ಗುಸು ಹೆಚ್ಚಾಗಿ ಆತನ ಬಗ್ಗೆ ಗೌರವ ಹೆಚ್ಚಾಯಿತು.

ಮತ್ತೆ ಎಲ್ಲರನ್ನೂ ಬಸ್ಸು ಹತ್ತಿಸಿಕೊಂಡ ರಾಮಣ್ಣ ಬಸ್ಸಿನಲ್ಲಿ ತನ್ನ ಹುಸಿ ಸಾಹಸಗಳನ್ನು ವರ್ಣಿಸತೊಡಗಿದ. ‘ಸಾಯೇಬ್ರು, ಮೊದ್ಲು, ರೀ ಆಗಲ್ಲಾರೀ, ನೀವೇ ಏನಾರು ಮಾಡ್ಕಳ್ಳಿ ಅಂದ್ರು, ಆಗ ನಾನು ಯಾರ್ ಹತ್ರ ಹೋಗ್ಬೇಕು ಅಂತ ಗೊತ್ತು ಸ್ವಾಮಿ, ಸಂದೆ ಒಳ್ಗಡೆ ಎಮ್ಮೆಲ್ಲೆ ಶಾಮಪ್ಪೋರೆ ಬತ್ತಾರೆ ಬುಡಿ, ನಮ್ ಜನಗೋಳ್ ಏನ್ ಕಡ್ಮೆ ಬಂದಿಲ್ಲ, ಇನ್ನೆರ್ಡ್ ದಿನ್ದಲ್ಲೇ ಈ ಇಚಾರ ವಿದಾನ್ ಸೌದಕ್ಕೂ ಮುಟ್ಟುತ್ತೆ, ನಿಮ್ ಟ್ರಾನ್ಸ್ಪರ್ ಆಗೋವರ್ಗು ನಾವ್ ಬಿಡಕಿಲ್ಲ, ಹೀಗೆ ಮಾತಾಡುದ್ದೇ ಮಾತಾಡುದ್ದು ಕಣ್ರಲಾ’-ಬೊಂಬಡ ಬಿಡುತ್ತಾ ಹೋದ. ಎಲ್ಲರೂ ತುಟಿ ಮೇಲೆ ಬೆರಳಿಟ್ಟು ಕೇಳಿಸಿಕೊಂಡರು. ರಾಮಣ್ಣ ಕಛೇರಿ ಒಳಗಡೆ ಹೋಗಿದ್ದಾಗ ಒಂದಷ್ಟು ಜನ ಸೈಡಿಗೆ ಹೋಗಿ ಒಂದೆರಡು ಬಾಟಲ್ ಸಾರಾಯಿ ಪೀರಿಕೊಂಡು ಉಪ್ಪಿನಕಾಯಿ ನೆಕ್ಕಿಕೊಂಡು ಬಂದಿದ್ದರು. ‘ನೀನು ನಮ್ ದ್ಯಾವ್ರಿದ್ದಂಗೆ ಅಣ್ಣೋ’ ಎಂದು ಕೂಗುತ್ತಾ ಕಾಲು ಹಿಡಿದುಕೊಳ್ಳಲು ಬಂದರು. ‘ತೂ ಬಡ್ಡೆತವ, ಸಂದಿಗೋಗಿ ಅದೇನೋ ನೆಕ್ ಬಂದ್ಬಿಡ್ತವೆ, ಹೆಂಡ್ರು ಮಕ್ಳಿಗೆ ಹೊತ್ತಗ್ ಸರಿಯಾಗಿ ಉಣ್ಣಕ್ಕಿಕ್ಕರ್ಲಾ’ ಎಂದು ತನ್ನ ಗತ್ತನ್ನು ಮತ್ತೆ ತೋರಿಸಿಕೊಂಡ. ಈ ಮಾತನ್ನು ಕೇಳಿಸಿಕೊಂಡ ರಾಮಣ್ಣನ ಚಡ್ಡಿಜೇಬಿನೊಳಗಿದ್ದ ವಿಸ್ಕಿ ಬಾಟಲ್ ನಗುತ್ತಿತ್ತು.

ಊರಿನಲ್ಲಿ ರಾಮಣ್ಣನ ಹವಾ ಹಬ್ಬತೊಡಗಿತ್ತು. ಭಾನುವಾರ ಸಂಬಂಧಪಟ್ಟ ಅಧಿಕಾರಿಗಳು ಬಂದು ಹುಲಿಗಳನ್ನು ನಿರಾಯಾಸವಾಗಿ ಹಿಡಿದು ಬೋನಿನೊಳಗೆ ಹಾಕಿಕೊಂಡು ಹೋದರು. ಹುಲಿ ಹತ್ತಿರ ಬಂದಂತೆ ಓಡುತ್ತಿದ್ದ ರಾಮಣ್ಣ ದೂರ ನಿಂತುಕೊಂಡು ‘ಹಿಡಿರ್ಲಾ ಹಿಡಿರ್ಲಾ, ಚೂ ಚೂ’ ಎನ್ನುತ್ತಿದ್ದ.

ಹುಲಿಗಳು ಬೋನಿಗೆ ಸೇರಿಕೊಂಡಿದ್ದೇ ಊರಿನ ಜನಗಳು ನಿಜಕ್ಕೂ ನಿಟ್ಟುಸಿರು ಬಿಟ್ಟರು. ರಾಮಣ್ಣ ಎಲ್ಲರನ್ನೂ ಕರೆದುಕೊಂಡುಹೋಗಿ ಫಾರೆಸ್ಟ್ ಆಫೀಸಿನ ಮುಂದೆ ಕುಳಿತುಕೊಳ್ಳದಿದ್ದರೂ ಇಷ್ಟು ಹೊತ್ತಿಗೆ ಹುಲಿಗಳನ್ನು ಹಿಡಿದುಕೊಂಡು ಹೋಗುತ್ತಿದ್ದರು. ಜನಗಳು ಕತ್ತಲಾದ ನಂತರ ಮನೆಯಿಂದ ಹೊರಗೆ ಧೈರ್ಯವಾಗಿ ಬಂದರು, ಮುಂಜಾನೆ ಬೇಗ ಎದ್ದು ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾದರು. ಹಳ್ಳಿ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ಚುನಾವಣೆಯೂ ಹತ್ತಿರವಾಯಿತು. ಊರ ಜನರನ್ನು ನಿರಾತಂಕಗೊಳಿಸಿದ ರಾಮಣ್ಣನ ಪರವಾಗಿ ಜನ ನಿಂತಿದ್ದರು. ಮೂರು ಹೊತ್ತು ಎದೆಮಟ್ಟ ತಿಂದು ಬರಿ ಕನಸ್ಸು ಕಾಣುವುದಷ್ಟೇ ರಾಮಣ್ಣನ ಕೆಲಸ ಆಗಿಹೋಗಿತ್ತು.

ರಾಮಣ್ಣನ ಊಸರವಳ್ಳಿ ಆಟದಿಂದ ತನ್ನ ಜನಪ್ರಿಯತೆ ಕಳೆದುಕೊಂಡವನು ಮಾತ್ರ ಗ್ರಾಮ ಪಂಚಾಯಿತಿಯ ಹಾಲಿ ಅಧ್ಯಕ್ಷನಾದ ಸಿದ್ಧಣ್ಣ. ಆತನೇನು ಹೇಳಿಕೊಳ್ಳುವಂತ ಕೆಲಸವೇನು ಮಾಡಿಸಿರಲಿಲ್ಲ. ಮಳೆ ಬಂದು ಮೇಲಿನಿಂದ ಬರುವ ಕಸ ಚರಂಡಿಗೆ ತುಂಬಿಕೊಂಡಾಗ ಬೀದಿಯ ಒಂದಷ್ಟು ಬಾಯಿ ಬಡುಕ ಹೆಂಗಸರ ಸದ್ದು ಕಿವಿಗೆ ಬಿದ್ದಾಗ ಮಾತ್ರ ಬಂದು ಮುಂದೆ ನಿಂತುಕೊಂಡು ಕಸ ಎತ್ತಿಸುವ ಕೆಲಸ ಮಾಡಿಸುತ್ತಿದ್ದ. ಆದರೆ ಆತ ರಾಮಣ್ಣನಿಗಿಂತ ದೊಡ್ಡ ಊಸರವಳ್ಳಿ. ಹೇಗಾದರೂ ಮಾಡಿ ರಾಮಣ್ಣನ ಬಗೆಗಿನ ಜನಗಳ ಆಸಕ್ತಿ ಕಡಿಮೆಗೊಳಿಸಿ ತನ್ನ ಕಡೆಗೆ ತಿರುಗಿಸಿಕೊಳ್ಳಬೇಕೆಂದು ಹೊಂಚುಹಾಕಿದ.

ತನಗೆ ನಿಷ್ಠವಾಗಿದ್ದ ಒಂದೈದು ಜನರನ್ನು ಕೂರಿಸಿಕೊಂಡು ‘ಹಿಂಗ್ ಮಾಡ್ರುಲಾ’ ಎಂದು ಹೇಳಿಕೊಟ್ಟ. ಬೆಳಗ್ಗೆ ಆದದ್ದೇ ಊರಿನಲ್ಲಿ ಗುಸು ಗುಸು ಪ್ರಾರಂಭವಾಯಿತು. ಮತ್ತೆ ಆಲದಮರದ ಕೆಳಗಿನ ಸೋಂಬೇರಿಕಟ್ಟೆ ಚಟುವಟಿಕೆ ಪಡೆದುಕೊಂಡಿತು.

‘ಅಲ್ಲಾ ಕಣ್ರಲಾ, ಈ ರಾಮಣ್ಣ ನಮ್ ಹೆಸ್ರುನಾಗೆ, ನಮ್ ದನ ಕುರಿ ಹೊಲದ್ ಮ್ಯಾಗೇ ಹುಲಿಕಾಟದ್ ನೆಪ್ದಲ್ಲಿ ಸರ್ಕಾರ್ದವ್ರಿಂದ ತುಂಬಾ ದುಡ್ ತಿಂದವ್ನಂತೆ ಕಲಾ’
‘ಲೋ ಹುಲಿ ಹಿಡಿಯೋಕೆ ಮೇಲ್ನವ್ರಿಂದ ಮೊದ್ಲೆ ಆರ್ಡರ್ ಆಗಿತ್ತಂತೆ ಕಣ್ರುಲಾ’
‘ಬಸಪ್ಪನ್ ಬಸ್ರು ರಾಮಪ್ಪನ್ ಹೆಸ್ರು ಅನ್ವಂಗೆ ಇವ ಹಿಂಗ್ ಮಾಡಿ ನಮ್ ಮುಕಕ್ ಬೂದಿ ಎರ್ಚವ್ನೆ, ನಮ್ ದುಡ್ನೆಲ್ಲಾ ನುಂಕಂಡವ್ನೆ, ಇವ್ನ್‍ಗೆ ಓಟ್ ಹಾಕೋದೆ ಬೇಡ ಕಣ್ಲಾ'-ಹೀಗೆ ಸಾಗಿತ್ತು. ಈ ಮಾತುಗಳು ಕಿವಿಯಿಂದ ಕಿವಿ ಹಬ್ಬಿ ರಾಮಣ್ಣನ ವಿಚಾರದಲ್ಲಿ ಜನಗಳಿಗೆ ಗೊಂದಲ ಮೂಡಿಬಿಟ್ಟಿತು. ಕೆಲವು ಜನ ಒಪ್ಪಿಕೊಂಡರೆ, ಒಂದಷ್ಟು ಜನ ಮಾತ್ರ ‘ಇವೆಲ್ಲಾ ಸುಳ್ಳು ಕಣ್ರಲಾ, ಪಾಪ ಆವಯ್ಯಾ ಹುಲಿ ಹಿಡಿಸಿ ನಮ್ ಐಕ್ಳು ಪ್ರಾಣ ಉಳ್ಸವ್ನೆ’ ಎಂದರು.

ಕೊನೆಗೆ, ಒಂದು ಕಡೆ ಸಿದ್ಧಣ್ಣ ಜನಗಳ ಸಭೆ ಕರೆದು ‘ರಾಮಣ್ಣ ಮೋಸ ಮಾಡವ್ನೆ, ನಾನೇ ಸಿಟಿಗೋಗಿ ಆಪಿಸರ್ನ ವಿಚಾರ್ಸ್ ಕೊಂಡ್ ಬಂದಿವ್ನಿ, ಬೇಕಾದ್ರೆ ಈ ಪೇಪರ್ನೆ ನೋಡಿ’ ಎಂದು ಜನಗಳಿಗೆ ಸಾಕ್ಷಿ ಸಮೇತ ತೋರಿಸಿದ. ಒಂದೆರಡು ಘಂಟೆ ಮಾತನಾಡಿದ. ಜನಗಳೆಲ್ಲಾ ‘ಸಿದ್ದಣ್ಣನಿಗೆ ಜೈ, ಇಲಿ ಗುರುತ್ಗೆ ಜೈ’ ಎಂದರು. ಇತ್ತ ರಾಮಣ್ಣನೂ ಸಭೆ ಕರೆದಿದ್ದ. ‘ನಾನೇನಾರು ಸುಳ್ ಹೇಳಿದ್ರೆ ಆ ಮಾರವ್ವ ನನ್ನನ್ ನುಂಗ್ಕಳ್ಳಿ, ನಾನ್ ಯಾರ್ ದುಡ್ಡೂನು ನುಂಗಿಲ್ಲ, ಬೇಕಾರೆ ಸಿಟಿಗೋಗಿ ಆಪಿಸರ್‍ಗಳ್ನೆ ವಿಚಾರ್ಸ್‍ಕೊಂಡ್ ಬನ್ನಿ, ಇದ್ರಲ್ಲೇ ಗೊತ್ತಾಯ್ತದೆ ಅವ್ನ್ ಎಂತ ದಗಾಕೋರ ಅಂತ, ಐದೊರ್ಷದಲ್ಲಿ ಐದಾಣೆ ಕೆಲ್ಸಾನು ಅವ ಮಾಡಿಲ್ಲ’ ಎಂದ. ಜನಗಳೆಲ್ಲಾ ‘ರಾಮಣ್ಣನಿಗೆ ಜೈ, ‘ಕಪ್ಪೆ’ ಗುರುತ್ಗೆ ಜೈ’ ಎಂದರು. ನಿಜಕ್ಕೂ ಸಿದ್ಧಣ್ಣ ಐದಾಣೆಯಲ್ಲಿ ಒಂದಾಣೆಯ ಕೆಲಸವನ್ನೂ ಮಾಡಿರಲಿಲ್ಲ.

ಚುನಾವಣೆಗೆ ಇನ್ನೂ ಒಂದು ವಾರ ಬಾಕಿ ಇತ್ತು. ಊರಿನ ತುಂಬೆಲ್ಲಾ ಇವೆ ಗುಸು ಗುಸು ಆಗಿಹೋದವು. ಸಿದ್ಧಣ್ಣನ ಕಡೆಯವರು ರಾಮಣ್ಣನ ಮೇಲೆ, ರಾಮಣ್ಣನ ಕಡೆಯವರು ಸಿದ್ಧಣ್ಣನ ಮೇಲೆ ಸಿಕ್ಕ ಸಿಕ್ಕದ್ದನ್ನೆಲ್ಲಾ ಹಬ್ಬಿಸುತ್ತಿದ್ದರು. ಯಾವುದನ್ನು ನಂಬುವುದು, ಯಾವುದನ್ನು ಬಿಡುವುದು ಎಂಬುದೇ ತಿಳಿಯದ ಮುಗ್ಧ ಜನ ಗೊಂದಲಕ್ಕೆ ಬಿದ್ದರು. ಆದರೆ, ಇಬ್ಬರೂ ನೀಡಿದ ದುಡ್ಡು, ಹೆಂಡವನ್ನು ಗುಟ್ಟು ಗುಟ್ಟಾಗಿಯೇ ತೆಗೆದುಕೊಂಡರು.

ಚುನಾವಣೆ ದಿನ ಬಂದೇ ಬಿಟ್ಟಿತು. ಎಲ್ಲಾ ಜನಗಳು ಹೋಗಿ ಮುದ್ರೆ ಒತ್ತಿಬಂದರು. ಕುಡಿದು ತೂರಾಡಿದ ಕೆಲವರು ಸಿದ್ಧಣ್ಣ ಕಂಡರೆ ‘ಸಿದ್ದಣ್ಣನಿಗೆ ಜೈ’ ರಾಮಣ್ಣ ಕಂಡರೆ ‘ರಾಮಣ್ಣನಿಗೆ ಜೈ’ ಎಂದರು. ಚುನಾವಣೆ ಮುಗಿಯಿತು. ಹಳ್ಳಿಯ ಜನಗಳೆಲ್ಲಾ ಮೌನಕ್ಕೆ ಶರಣಾದರು. ಒಬ್ಬರಿಗೊಬ್ಬರು ಯಾರಿಗೆ ಓಟ್ ಹಾಕಿದ್ದು ಎಂದು ಹೇಳಿಕೊಳ್ಳಲೇ ಇಲ್ಲ. ಇಬ್ಬರನ್ನೂ ನಿಷ್ಠುರ ಮಾಡಿಕೊಳ್ಳುವ ಇರಾದೆ ಅವರಿಗಿರಲಿಲ್ಲ. ಓಟ್ ಒತ್ತಿದ್ದ ವಿಚಾರದಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಅನುಮಾನವೆಂಬಂತೆ ಬದುಕಿದರು.

ಕೊನೆಗೂ ಮತ ಎಣಿಕೆಯೂ ಮುಗಿಯಿತು. ಜನಗಳೆಲ್ಲಾ ಉಸಿರು ಬಿಗಿ ಹಿಡಿದು ಕಾದು ಕುಳಿತಿದ್ದರು. ರಾಮಣ್ಣ ಸಿದ್ಧಣ್ಣನ ಮುಂದೆ, ಸಿದ್ಧಣ್ಣ ರಾಮಣ್ಣನ ಮುಂದೆ ಮೀಸೆ ತಿರುವಿದ್ದರು. ಆದರೆ, ಬಂದ ಫಲಿತಾಂಶ ಹಳ್ಳಿಯನ್ನೇ ಅಚ್ಚರಿಯಲ್ಲಿ ಮುಳುಗಿಸಿತ್ತು. ಗೆದ್ದವನು ಮಾತ್ರ ನನ್ನದೂ ಒಂದು ಜೂಜಿರಲಿ ಎಂದು ಚುನಾವಣೆಗೆ ನಿಂತು ಇವರಿಬ್ಬರ ಗದ್ದಲ, ಅಬ್ಬರದಲ್ಲಿ ತನ್ನ ಹೊಲದ ಕೆಲಸ ಮಾಡಿಕೊಂಡು ಸುಮ್ಮನೇ ಇದ್ದ ‘ಕಾಗೆ’ ಗುರುತಿನ ನಮ್ ‘ಯೆಂಕ್ಟ’!.

No comments:

Post a Comment