ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Friday 13 July 2012

ತ್ರಿ-ಸಂಗಮ…

(ಬೆಳಕು ಅಡರಿರುವ ಜಾಗಗಳಲ್ಲಿ ನಾಲ್ಕು ಗೋಡೆ ಮತ್ತು ಮೇಲೆ ಮಾಡನ್ನಿಟ್ಟುಬಿಟ್ಟರೆ ಇಲ್ಲದ ಕತ್ತಲು ಹಠಾತ್ತನೇ ಕೂಡಿಕೊಳ್ಳುತ್ತದೆ. ಆ ಕತ್ತಲೆಲ್ಲಿತ್ತು? ಅಂದರೆ ಬೆಳಕಿನೊಂದಿಗೆ ಕತ್ತಲ ಸವಾರಿಯಿತ್ತು. ಹಾಗೆಯೇ ಪ್ರತಿ ಜೀವದೊಳಗೆ ನಡೆಸುವ ಭಾವ ಮತ್ತು ನಡೆವ ಭಾವವನ್ನು ಕೆಡವಿ ಹಾಕುವ ಭಾವವಿರುತ್ತದೆ.(ಬೇಂದ್ರೆ ಅಜ್ಜ ಹೇಳಿದ್ದು- ನಾಕುತಂತಿಗಳು, ನಾನು, ನೀನು, ಆನು ಮತ್ತು ತಾನು - ನಾನು ಎಂದರೆ ಗಂಡ, ನೀನು ಎಂದರೆ ಹೆಂಡತಿ, ಆನು ಎಂದರೆ ಮಗ ಮತ್ತು ತಾನು ಎಂದರೆ ಈ ಎಲ್ಲಾ ವಿಚಾರಗಳನ್ನೂ ನಿಯಂತ್ರಿಸುವ ಯಾವುದೋ ಶಕ್ತಿ. ಹಾಗೆಯೇ ಇಲ್ಲಿ, ನಾನು ಎಂಬುದರೊಳಗೆ ಅವನು ಮತ್ತು ಇವನು ಎಂಬ ಎರಡು ವಿರುದ್ಧಾರ್ಥಕ ಭಾವವನ್ನು ಎಣಿಕೆ ಮಾಡಿಕೊಂಡಿದ್ದೇನೆ) ಉದಾಹರಣೆಗೆ: ಮನಸ್ಸು ಒಂದು ನಿರ್ಧಾರ ಪ್ರಕಟಿಸಿದರೆ, ಕೆಲವೇ ದಿನ ಅಥವಾ ಕ್ಷಣಗಳಲ್ಲಿ ಅದೇ ನಿರ್ಧಾರ ಕೊನೆಗೊಳ್ಳುತ್ತದೆ. ಅಲ್ಲಿ ನಿರ್ಧಾರ ಪ್ರಕಟಿಸುವ 'ಅವನಿಗು' ಮತ್ತು ನಿರ್ಧಾರ ಕೊನೆಗೊಳ್ಳಿಸುವ 'ಇವನಿಗು' ನಿರಂತರ ಜಗಳ, ಗದ್ದಲವಿದೆ. ಹಸಿರ ಮರದೆಲೆಗೆ ಸೂರ್ಯನ ಬೆಳಕು ಬಿದ್ದರು, ಆ ಎಲೆಯ ಕೆಳಗಡೆ ಕತ್ತಲಿರುತ್ತದೆ. ಬಲ್ಬುರಿಸಲು ಕತ್ತಲು ಬೇಕು, ಕತ್ತಲೊಳಗೇ ಸ್ವಿಚ್ಚನ್ನು ಹುಡುಕಬೇಕು)

೧.

ಅವನಿಯೊಳವನಿವನ
ಗಹನ ಭಾವ ವಿಹೀನ
ವಿರುದ್ಧಾರ್ಥಕ-
ಕದನಕ್ಕೆ ದಹನ ನಾ
ಮರೆತು ತನನsನ

ಬೇಂದ್ರೆ ‘ನಾ’ ನಿಗೆ, ನಿನಗೆ
ಬೀಜಾಕ್ಷರ ಹೆಣಿಗೆ
ನಾವು ನೀವಿಗವ ಇವ
ದ್ವಿ-ಬಿರಡೆ ತಂತಿಗೆ
ಅಜ್ಜ ನೆನಪಿಸಿಕೊಳ್ಳದ
ವಿದ್ವತ್ತಲ್ಲದದ್ವಾನಕೆ

ಅಡಿಗಡಿಗೆ ಘಟದಡಿ ಮುಡಿಗೆ
ನುಡಿ ನುಡಿಸಲವ-ನುಡಿ
ಕೆಡಿಸಲಿವ-ನಡು ನಡುವೆ
ನಡು ನಡುಗಿ ಗುಡು
ಗುಡುಗೆದೆ ಬಡಿದೆ ನಾನಡಗಿ!

ತಂತ್ರಿ ಮಂತ್ರ ಕೆಡಿಸೇ
ಕುತಂತ್ರಿಯೋರ್ವ
ಮಂತ್ರಿ
ಮಹೋದಯನ ಸಂಘ
ಅಸ್ವತಂತ್ರಿ ಬಜಂತ್ರಿ-
ಭಂಜಕ, ಕು-ತಂತ್ರಿ,
ಅತಂತ್ರಿ ನಾನವನಿವನತಂತ್ರಕೆ

೨.

ಅ.

ಹಸಿರ ಹಾಸಿಗೆ ಮರ ಮರ
ಉಸಿರ ಚಿಮ್ಮಿಸಿತ್ತಮರ
ಬಸಿದೆಲೆಗೆ ರವಿ ತೇಜೊಸಗೆ
ಕುಸುರಿ ಕೊಸರಿತೊಣಗೆ
ಕೃಷ್ಣ ವರ್ಣದವರ್ಣ ದಾರಿಗೆ

ಆ.

ಆ ಗೂಡಿಗೆ ನಾಲ್ಕು ಗೋಡೆ
ಮೇಲೆ ಮಾಡಿನಡೆ
ಬೆಳಕ ತಡೆ
ತಿಮಿರ ವಿಜಯ ನಡೆ
ಒಳಗರ್ಭ ನಾ ನೋಡೆ

ಇ.

ಸೂಲಗಿತ್ತಿ ಹೆರಿಸಲು
ಕಾಲನಿತ್ತ ಕತ್ತಲು
ಮರೆತು ಜಗವೊತ್ತಲು
ಹೊರ ತದ್ರೂಪದಳು
ಬೆಳಕ ಚೀತ್ಕಾರ
ಸಾವಿನವಸರದಲ್ಲಿ
ಘೋರಾಂಧಕಾರ ಪೂರ

ಈ.

ಬಲ್ಬುರಿಸಲು ಕೆಡಿಸಲು
ಸ್ವಿಚ್ಚಿನ ಸಾಲು
ಉರಿದ ಬಲ್ಬಡಿಯಲ್ಲಿ
ಗುಂಡಿ ಗೋಚರ
ಕತ್ತಲೊಳ ಸ್ವಿಚ್ಚೊತ್ತು
ಹೊತ್ತಿಗೆ ಬೆಳಕ ಮುತ್ತು

೩.

ಖಂಡ ತುಂಡ ಭೂಮಂಡಲದೊಳ್
ನನ್ನೊಳಿಬ್ಬರ ಜಗಳವಖಂಡ
ಸುಪ್ತಾಪ್ತತೃಪ್ತ ಜಾಗೃತ ಭಂಡ
ಮಸ್ತಿಷ್ಕದೊಳಶೇಷ ಹಳವಂಡ

ಒಪ್ಪಿಕೊಂಡಪ್ಪಿದ ಶತ ಶೃತ ಭಾವ
ಉದುರುವವು ಹೂ ಪಕಳೆಯಂತೆ
ಡೊಗ್ಗು ಸಲಾಮು ಹುಗ್ಗಿಗೆ ಬಗ್ಗದ
ಕುಗ್ಗದ ಕುಗ್ಗಿಸುವೆಗ್ಗಿಲ್ಲದೊಳ ಚಿಂತೆ

ಮೊನ್ನೆ ಕೂಡಿದೆದೆ ಹಂದರ ಭಾವ
ನಿನ್ನೆ ಹಾಳು ಗೋಳು ಮಸಣ ಹೂ
ಇಂದರಳಿತು ನಾಳೆ ದಿನದುರಿ
ಸೂರ್ಯನಿಗೆ ಚಾಚದರರಿ ಬಾಹು

ಒಬ್ಬರನ್ನೊಬ್ಬರು ತೊರೆಯದಿಬ್ಬರ ಗದ್ದಲಕ್ಕೆ
ಮೂರನೆ ದೇಹದುರಿ ನರ ಬಿಗಿತ
ಬೆಂಕಿ ಹಚ್ಚಿ ಮೆರೆದ ಕಾಣದಡಗುಡುಗಿದ
ಕಂಡರೂ ಕಾಣದೊಪ್ಪದಿಂಗಿತ

೪.

ಒಳ ತಿರುಳ ಕೆರಳಿಸೆ
ನಗುವ ಒಬ್ಬನ
ಎದೆ ಬಗೆವ ಇನ್ನೊಬ್ಬನ
ನಡುವೆ ನಿಂತೆ 'ನಾ'

ಒಬ್ಬನ ದಬ್ಬಿ ಇನ್ನೊಬ್ಬನ ತಬ್ಬಿ
ಬದುಕುವುದಸಾಧ್ಯ ದುರ್ಗಮ
ಕಾಯದೊಳಗೆ ಬೇಯುವ ತ್ರಿಸಂಗಮ

3 comments:

  1. ತ್ರಿ ಸಮ್ಗಮ ತುಸು ಅಡಿಗರ ಭೂಮಿ ಗೀತವನ್ನು ನೆನಪಿಸುವಂತಿದೆ.

    ಬದುಕನ್ನು ವಿಶ್ಲೇಷಲು ಹೊರಟ ನಾವಿಕನಂತಿದೆ.

    ReplyDelete
  2. ಅಪೂರ್ಣವಾಯಿತೇ? ಒಳ್ಳೆಯ ಕವನ.

    ReplyDelete
    Replies
    1. ನಮಸ್ತೆ ಕಿರಣ್ ಜೀ... ಅಂತರ್ಜಾಲ ಸಂಪರ್ಕದಲ್ಲಿ ತೀವ್ರ ವ್ಯತ್ಯಯವಿದ್ದುದ್ದರಿಂದ ನಿಮ್ಮ ಮಾತುಗಳನ್ನು ಗಮನಿಸಿರಲಿಲ್ಲ... ನನಗೂ ಆ ರೀತಿ ಅನ್ನಿಸಿದ್ದು ಸತ್ಯ. ಕವಿತೆ ಒಂದು ಹದಕ್ಕೆ ಬರುತ್ತಿದ್ದರೂ ಕೊನೆ ಮುಟ್ಟಲಿಲ್ಲವೆಂಬ ಗೊಂದಲವಿತ್ತು. ಕೊನೆಗೆ ಆ 'ತ್ರಿಸಂಗಮ'ಗಳ ಇರುವಿಕೆ ಮತ್ತು ಅದಕ್ಕೆ ಒಂದು ಚೌಕಟ್ಟು ತೊಡಿಸಿ ಪುಷ್ಠೀಕರಿಸಬೇಕಾಗಿತ್ತು... ವಂದನೆಗಳು ತಮ್ಮ ಹಾಗು ಬದ್ರಿ ಸರ್ ಪ್ರತಿಕ್ರಿಯೆಗಳಿಗೆ... :)

      Delete