ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Saturday 11 August 2012

ದೇವಕಣ…

ಅದಾವುದದು ಕಾಣದಲೆ
ಊರ್ಣನಾಭನ ಬಲೆ
ಜಗ ಬಿಗಿದ ಸಂಕೋಲೆ, ಅಂಡಲೆ?!

ರೆಪ್ಪೆಯೊಳ ಶೂನ್ಯಾಂತ್ಯ ಮಣ್ಣು
ಕಣಕ್ಕುರುಳುರುಳು ಕಣ್ಣು
ಕೆರಳಾಡಿ ಕೆಂಪನೆ ಹಣ್ಣು
ಮೂಲೆಗೊತ್ತರಿಸಿಕೊಂಡ ಗೋಣು
ಕಂಡ ಕಣ ಕೊಂಡ ಕಾಣದ ಕಣದಣು

ಅಣುವಣು ಭಾಗಿಸೊಳಗಣು
ಕಣ ಕಣವೆಂಬುದ ಕಾಣೆ, ನನ್ನಾಣೆ
ಕಣದೊಳಗೆ ಕಣ ಹಲಗುಣ
ಕೊರೆ ಕೊರೆದಂತೆ ಕಣ
ಕಾಣದ ಕಣ ಕಂಡರೆ ನಿಧಿ ಹಣ
ಕೊನೆ ಕಣದೊಳಗುಳಿದಣು ಕ್ಷಣ!

ಕಾಣದ ಕಣ ನೀ ಕಂಡ
ಕಡಲೊಡಲೊಳು ಬಂಧಿ
ಅಪ್ರಬುದ್ಧ ಮೆಟ್ಟಿಲಿಟ್ಟ
ಕಿಟ್ಟ ಸುರಿದಟ್ಟಣಿಗೆಯೊಳಗೆ
ಮಾನವ ನಿರ್ಮಿತ ಸಂಬಂಧಿ

ಅಂಶಕ್ಕೆ ತಟಸ್ಥ ಸಂಖ್ಯೆ
ಛೇದಕ್ಕೆ ಬೇಡವಂಕೆ ಶಂಕೆ
ಚಲಿಸಲಿ ವಿಶ್ವಾಂತ್ಯಕ್ಕೆ
ಗಣಿತ ಭಾಗಲಬ್ದ ಸೊನ್ನೆ
ಲೋಪವಾಯಿತು ಕ್ಷಮಿಸಿ
ಸೊನ್ನೆಯಲ್ಲ, ಶೂನ್ಯ ಸಮೀಪ
ನಿನ್ನೆಗೆ ನಿನ್ನೆ ಮೊನ್ನೆಗೂ ಮೊನ್ನೆ

ಅಳೆಯಲಾಗದಪರಿಮಿತಳತೆಯ
ಗಟ್ಟಿಕಣ ನೀ ವ್ಯಾಸ ಶೂನ್ಯ
ಸಚಿತ್ರ ಭ್ರಮೆಯಲ್ಲಿ ಚಿತ್ರ ಬರೆದು
ವಿಚಿತ್ರ ಕಟ್ಟು ಕಟ್ಟಿ
ಮೊಳೆ ಕುಟ್ಟಿ ಊರ ತಡಿಕೆಗೆ
ಬಂಧಿಸುವಿರಾದೆಯೇ ಜಗ ತುಟ್ಟಿ

2 comments:

  1. ಇಡೀ ವಿಜ್ಞಾನವೇ ಮುಗಿ ಬಿದ್ದಿರುವ ಹೊಸ ಪರಿಯ ಅನ್ವೇಷಣೆ ಇಲ್ಲಿ ಉತ್ಕೃಷ್ಟ ಕವಿತೆಯಾಗಿ ಹೊರ ಹೊಮ್ಮಿದೆ.

    ReplyDelete
  2. ಕಳೆದು ಕೂಡಿ ಗುಣಿಸಿ ಭಾಗಿಸಿದರೂ ಸಿಗಲಿಲ್ಲ ಈ ಸೂಕ್ಷ್ಮ! ಎಲ್ಲವೂ ನಿಗೂಢ ಇನ್ನೂ ನನಗೆ!

    ReplyDelete