ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Tuesday, 14 August 2012

ಅಮ್ಮ ಸ್ವಾತಂತ್ರ್ಯವೆಲ್ಲಿದೆ..?

ಐಷಾರಾಮಿ ವರ್ತುಲ ರಸ್ತೆಯುಬ್ಬಿನಲ್ಲಿ ಸರ್ಕಾರದ ಬೆವರು
ಹೆಣದ ಮೇಲಿನ ಸಿಂಗಾರ ಮಳೆ ತೋಡಿದ್ದ ಗುಂಡಿ
ಸಾಕಿದ ಸೊಳ್ಳೆ ಕಚ್ಚಿಸಿಕೊಂಡಲ್ಲೇ ಇದ್ದ
ಮುದ್ದು ಮಗು ಕೇಳಿತು "ಅಮ್ಮ ಸ್ವಾತಂತ್ರ್ಯವೆಲ್ಲಿದೆ?"

ಅದಾರೋ ಕೊಟ್ಟಿದ್ದ ಕೊಳೆ ಕಂಬಳಿ ಕೊಡವಿ ಹುಡುಕಿದಳು
ಹರಿದ ಸೀರೆ ತೂತಿನಲ್ಲಿ ಜೋತುಬಿದ್ದ ಮೊಲೆ
ಚೀಪುತ್ತ ಮಗು ಉಚ್ಚೆ ಹೊಯ್ದು ರಚ್ಚೆ ಮಾಡಿತು
'ಇನ್ನೂ ಸಿಕ್ಕಿಲ್ಲ ಮಗನೆ, ನೀ ಉಚ್ಚೆ ಹೊಯ್ದದ್ದು ಮಾತ್ರ ಸ್ವೇಚ್ಛಾಚಾರ!'

ಮಗು ಒದ್ದ ಸಿಲ್ವರ್ ತಟ್ಟೆ ಮೊಗಚಿತು, ಒಳಗಿದ್ದನ್ನದಾತನಳು ಗೋಳು
ಹೆಗಲ ನೇಗಿಲು ತರಚಿದ ಗಾಯದ ರಕ್ತದಲ್ಲಿರಲಿಲ್ಲ
ಹೊತ್ತಿ ಉರಿಯಿತು ಬೆಳಗಿ ತಡಿ ಭವ್ಯ ಬಂಗಲೆ ಮಹಲು ಕಮಾಲು
'ಮಗನೇ ಅಲ್ಲಿರಬಹುದು, ಒಂದಷ್ಟು ಬೆಳಕು ಕಂಡಿದೆ' ಬಾ ನೋಡೋಣ

ಬಂಗಲೆ ಬಂಗಲೆಯಲ್ಲಿ ವಿದ್ಯಾದಾನ ಮುಖವಾಡ ಗರ್ಭಪಾತ ಫಲಕ
ಜಾತಿ ತೊಲಗಲಿ ಸರಿ ನೀತಿ ಬರಲಿ ಎಂದವರ ಹತ್ತಿರ
ಕಂತೆ ಕಂತೆಯಲ್ಲಿ ಹೆಣದ ಮೇಲಿನ ಹಣ, ಜಾತಿ ಪ್ರಮಾಣ ಪತ್ರ
ಹುಣಸೇಮರದ ಕೊಂಬೆಗೆ ಜಾತಿ ಚೂರಿಯಲಗಿನ ಕೋಟಿಯಾತ್ಮ ಚೀತ್ಕಾರ ವಿಚಿತ್ರ

ಅಮ್ಮ ಹರಿದ ಸೀರೆ ಚಾಚಿದಳು ಕಂದನ ತುತ್ತಿನ ಹೊಟ್ಟೆ ಚೀಲ ಉಬ್ಬಲು
ಮುಂಜಾನೆಯ ಗಂಜಿ ಹಣ, ಕಸಿದ ಪೊಲೀಸ್ ಮಗನ ಹೆಣ'ದ ವಾಸನೆ
ರಸ್ತೆಯಿಳಿಜಾರಿನ ಮಲಪೈಪಿನೊಳಗೆ ಮಂತ್ರಿವರ್ಯ ನಿರ್ವೀರ್ಯ
ಶೂರರ ರಕ್ತಭ್ಯಂಜನದಲ್ಲಿ ಹುಟ್ಟಿದ ಸ್ವಾತಂತ್ರ್ಯ ನೀ ಯಾರ ಮನೆ ಹೊಸ್ತಿಲು?

ಮಗನೇ ಅಂದು ಇಲ್ಲೇ ಸಿಕ್ಕಿತ್ತು, ರಾತ್ರಿ ಮುತ್ತು ನೀ ಹುಟ್ಟಿರಲಿಲ್ಲವಿನ್ನು
ನಿನ್ನಣ್ಣಂದಿರಗೇ ಕೊಟ್ಟಿದ್ದೆ, ಅಂಧರು ತಂದಿಟ್ಟರು ತಲೆ ನೋವನ್ನು
ಬಿಡಬೇಡ ಕಂದಾ, ನನ್ನಾನಂದ ಹುಡುಕು ದುಡುಕಬೇಡ, ಮನೆ ಗುಡಿಸು
ಕೊಳೆ ಉಡುಗಿ ಹೋದಂತೆ, ಹೊಳೆವುದು ಮುತ್ತು, ಬಿಡು ಚಿಂತೆ...

1 comment:

  1. ತಾಯಿ ಭಾರತಿಯು ವಿವರಿಸಿದಂತೆ ಬಿಚ್ಚಿಕೊಳ್ಳುತ್ತಾ ಹೋಗುವ ಈ ಕವನದಲ್ಲಿ ಇಂದಿನ ವೈರುಧ್ಯದ ವ್ಯವಸ್ಥೆಯ ತೀವ್ರ ವ್ಯಂಗ್ಯ ಮತ್ತು ಅವರು ತಂದಿತ್ತ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವ ಘೋಷ ವಾಕ್ಯ ನವಿರೇಳಿಸುತ್ತದೆ.

    ReplyDelete