ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Friday, 17 February 2012

ನಿರ್ನಾಮ..

ಮೊನ್ನೆ ಮೊನ್ನೆ ಪಾಯ ತೆಗೆದು
ನಿನ್ನೆ ಚಿತ್ತಾರ ಬಣ್ಣ ಬಳಿದು
ಶ್ರೀಗಂಧ ಕಿಟಕಿ ಬಾಗಿಲು ಅಗುಳಿ ಜಡಿದು
ಶೃಂಗಾರಗೊಳಿಸಿಹೆನಿಂದು
ಗೃಹಪ್ರವೇಶಕ್ಕೆನ್ನ ಮನೆಯ

ಆದರೆ...

ಕೈ ಕಾಲು ಹಿಡಿದಿದ್ದಾಳೆ
ಬೀದಿ ಸುತ್ತಿ ಮುಸುರೆ ತೊಳೆದ
ಹರಕು ಬಟ್ಟೆಯ ಕೊರಗು ಕಣ್ಗಳ
ಮುರುಕು ಗುಡಿಸಲ ಪುಟ್ಟಿ

ಚಿತ್ತಾರ ತುಂಬೆದೆ ಸೆಟೆಸಿ ನಿಂತ
ಶ್ರೀಗಂಧ ಕೋಡಿನ ಹೆಬ್ಬಾಗಿಲ
ಗಬ್ಬುವಾಸನೆಯಲ್ಲಿ ಕರಗಿಬೀಳುತ್ತಿವೆ
ಹೊತ್ತು ಕೂಳಿಲ್ಲದೆ ಚಳಿ ಕೊರೆದು
ಲಾಠಿ ಏಟು ತಿಂದ ಕಂದಮ್ಮಗಳು

ಮನೆಯೋಳಗೆ ಎಂತದೋ ಆರ್ತನಾದ
ಓಹ್.. ರಸ್ತೆಬದಿ ಕೆಸರಲ್ಲಿ
ಹೊರಳಾಡಿ ಅರೆತೆರೆದ ಕಣ್ಗಳಲ್ಲಿ
ಅರೆಬರೆ ನಿದ್ದೆ ಮಾಡುವ ತಿರುಕರು
ಕೀಲುಮರಿದ ಸದ್ದಿಗೆ
ಯಾರೋ ಕೊಟ್ಟ ಗುದ್ದಿಗೆ
ಹೆದರಿ ಮನೆದಾಟಿ ಹೊರನಿಂದೆ

ಮಹಡಿಯ ತೂಗುಯ್ಯಾಲೆ ಮೇಲೆ ಕುಳಿತು
ಹಸುಗೂಸನ್ನೆದೆಗಪ್ಪಿಕೊಂಡು
ಕೂದಲು ಕೆದರಿಕೊಂಡು
ಅಳುತ್ತಿದ್ದಳು ಕೆಳಕೇರಿಯ ಸಿದ್ಧಿ
ಅಪ್ಪ ಅಪ್ಪ ಎನ್ನುತ್ತಿತ್ತು ಮಗು ನನ್ನನ್ನೆ ಗುದ್ದಿ

ಗೋಡೆಗೆ ಮೊಳೆಜಡಿದು
ಯಾರೋ ಊರ ಜನರೆಲುಬು ಸಿಕ್ಕಿಸಿದ್ದಾರೆ
ಅವು ಸುರಿಸಿದ ನೆತ್ತರ ಕಲೆ
ತೋರಿಸುತಿವೆ ನೂರಾರು ಕೊಲೆ
ಅಲ್ಲೇ ಕಣ್ಣೀರಿಟ್ಟ ಹೃದಯಗಳು

ಕೀಲು ಮುರಿದುಕೊಂಡಳುತ್ತಾ
ಗಡಗಡ ನಡುಗಿ ಕುಸಿಯುತ್ತಿದೆ ಮನೆ
ನೆತ್ತರು ಸುರಿಸಿ, ಜ್ವಾಲಾಮುಖಿಯೆಬ್ಬಿಸಿ
ಬೆಂಕಿಯುಂಡೆಯೆರಚಿದೆ ಊರಿಗೆ
ಕನ್ನಡಿಯಾಗಿ ನಡೆವ ದಾರಿಗೆ
ಧೊಪ್ಪನೆ ಕುಸಿದುಹೋಯಿತು
ಏಳಂತಸ್ತೂ ಮಣ್ಣಲ್ಲಿ ಹೂತುಹೋಯಿತು

ಮೆಲ್ಲನೆ ಮೇಲಕೆದ್ದ ಧೂಳಿನ ನಡುವೆ
ಊರಿನ ದೆವ್ವಗಳ ಕುಣಿತ, ಕೆನೆತ

4 comments:

 1. ಮೋಹನ್...

  ಕ್ರಾಂತಿಕಾರಕ ಭಾವನೆಗಳು ಮನಸ್ಸಿನಲ್ಲಿ ತುಂಬಿಕೊಂಡ ಸಂದರ್ಭದಲ್ಲಿ ಇಂತಹ ಘಾಟು ಕವನಗಳು ಸಾಮಾನ್ಯವಾಗಿ ಹೊರಬರುತ್ತವೆ. ಇದನ್ನು ಓದುತ್ತಿರುವ ಹಾಗೆಯೇ ನಿಮ್ಮ ಮನದಾಳದ ಆಕ್ರೋಶವನ್ನು ಅರ್ಥಮಾಡಿಕೊಳ್ಳಬಹುದು. ಸಮಾಜದ ಮೇಲು ಕೀಳು, ಸಿರಿತನ ಬಡತನದ ಅಂತರವನ್ನು, ತಾರತಮ್ಯವನ್ನೂ ಚೆನ್ನಾಗಿ ಪ್ರತಿಬಿಂಬಿಸಿದೆ ನಿಮ್ಮ ಕವನ. ಆದರೆ ಅದನ್ನು ಹೇಳುವಾಗ ಓದುಗರ ಮನಸ್ಸಿಗೆ ಬೋರು ಹೊಡಿಸದೆ ಬರೆಯುವ ಕೌಶಲ್ಯದ ಕೊರತೆ ಕಂಡಂತಾಯಿತು ನನಗೆ. ಈ ಬಗ್ಗೆ ಮುಂದಿನ ಕವನಗಳಲ್ಲಿ ಚಿಂತಿಸಿ, ಶುಭವಾಗಲಿ.

  ReplyDelete
  Replies
  1. ನಮಸ್ತೆ ಕಬ್ಬಿಗ ಸರ್... ನಿಮ್ಮ ಸಂದೇಶವನ್ನು ನೋಡಿರಲಿಲ್ಲ... ಧನ್ಯವಾದ ತಮ್ಮ ಸಲಹೆಗೆ... ಈ ಕವಿತೆಯಲ್ಲಿ ಆ ಕೊರತೆ ಖಂಡಿತಾ ಇದೆ... ಸರಿಪಡಿಸಿಕೊಳ್ಳುತ್ತೇನೆ...

   Delete
 2. ವ್ಯವಸ್ಥೆಯ ವೈರುಧ್ಯಗಳ ಸಮರ್ಥ ಚಿತ್ರಣ. ಹಸಿವಿನ ಮತ್ತು ಅನ್ನ ಚೆಲ್ಲಾಟದ ಎರಡು ವಿಭಿನ್ನ ಆರ್ಥಿಕ ಜನಸ್ತೋಮದ ಕಾವ್ಯ ಪ್ರತಿಪಾಧನೆ.

  ReplyDelete
 3. ನಿಮ್ಮ ಕವಿತೆಗಳ ವೈಶಿಷ್ಟ್ಯ, ಕವಿತೆ ಕೇವಲ ಸುಮ್ಮನೆ ಅಲಂಕಾರಿಕವಾಗಿ ತೆರೆದುಕೊಳ್ಳುವುದಿಲ್ಲ.. ಬದಲಾಗಿ ಅರ್ಥಗರ್ಭಿತವಾಗಿ, ಮಾರ್ಮಿಕವಾಗಿ ತೆರೆದುಕೊಳ್ಳುತ್ತದೆ.. ಮತ್ತು ಅದಕ್ಕೆ ನೀವು ಕೊಡುವ ಸಾಮಾಜಿಕ ಚಿಂತನೆಯ ಸ್ಪರ್ಶ ಅಬ್ಬಾ ಮೈನವಿರೇಳಿಸುವಂತದ್ದು.. ನಿಮಗೇ ನೀವೇ ಸಾಟಿ ಮೋಹನಣ್ಣ.. ಜನರು ತಮ್ಮ ತಮ್ಮ ಸ್ವಾರ್ಥವನ್ನು ನೋಡಿಕೊಂಡು ತಾವಾಯ್ತು ತಮ್ಮ ಮನೆಯಾಯ್ತು ಎಂಬ ಭಾವ ತಳೆದಿರುತ್ತೇವೆ ಆದರೆ ಬೇಕಾದಷ್ಟು ಜನ ತಮಗೆ ಮನೆಯೇ ಇಲ್ಲದೆ ಬೀದಿಪಾಲಾಗಿರುವ ಚಿತ್ರಣ ಮನಕಲಕುವಂತದ್ದು..
  ಚಿತ್ತಾರ ತುಂಬೆದೆ ಸೆಟೆಸಿ ನಿಂತ
  ಶ್ರೀಗಂಧ ಕೋಡಿನ ಹೆಬ್ಬಾಗಿಲ
  ಗಬ್ಬುವಾಸನೆಯಲ್ಲಿ ಕರಗಿಬೀಳುತ್ತಿವೆ
  ಹೊತ್ತು ಕೂಳಿಲ್ಲದೆ ಚಳಿ ಕೊರೆದು
  ಲಾಠಿ ಏಟು ತಿಂದ ಕಂದಮ್ಮಗಳು
  ನಂತರದಲ್ಲಿ ಕವಿತೆಗೆ ಇನ್ನಷ್ಟು ಸೂಕ್ಷ್ಮ ಹರಿವು ಒದಗಿಸಿದ್ದೀರಿ.. ಜನರ ದುಡಿತ ಮತ್ತು ಶ್ರಮಗಳನ್ನು ಬಸಿದು ಸುಂದರ ಮಹಲನ್ನು ನಿರ್ಮಿಸಿಕೊಂಡರೂ ಅವರ ನಿಟ್ಟುಸಿರ ಭಾರಕ್ಕೆ ಆ ಮಹಲು ಕುಸಿಯುತ್ತದೆ ಎಂಬ ಪರಿಕಲ್ಪನೆಗಳು ಮನಮುಟ್ಟುವಂತೆ ಮೂಡಿ ಬಂದಿದೆ.. ನೀವೇ ಹೇಳಿದಂತೆ ಮೂರನೆಯ ವ್ಯಕ್ತಿಯಿಂದ ಹೇಳಿಸಿದ್ದರೆ ಮತ್ತಷ್ಟು ಪ್ರಖರವಾಗಿ ಮೂಡಿ ಬರುತ್ತಿತ್ತು..

  ReplyDelete