ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Sunday, 12 February 2012

ಹುಳಗಳು...

ಹಸಿರಾಗಿ ಬಿದ್ದರೇನು
ಒಣಗಿ ಮುರುಟಿ ತೂರಿ
ನೆಲ ಕಂಡರೇನು
ಅದ್ಯಾವುದೋ ಡೊಂಬರು
ಒಡೆಯುವ ಹುಳಗಳಿಗೆ ಆಹಾರವಷ್ಟೆ ಮರದೆಲೆ
ನಿನ್ನೆ ಸೂಸಿದೆಲರೊಂದು ಸುಂದರ ನೆನಪು

ನೆಲ ಬಗೆದು ಹೊರ ಕಿತ್ತರು
ಊರೆಲ್ಲ ಬಳುಕಿದ ಅದೇ
ಸಿದ್ಧಿ ದೇಹವ ಕಳೆದ ತಿಂಗಳು
ಅಲ್ಲಿದ್ದದ್ದು ಬರೀ ಅವಳತ್ತ
ಊರ ಜನರ ವೀರ್ಯ ಹೊತ್ತ
ಒಂದಷ್ಟು ಇತಿಹಾಸ ಬಗೆದೆಲುಬು

ಕೆರೆ ಏರಿಯ ಒಣ ಮಣ್ಣಿನ ಮೇಲೆ
ಸತ್ತು ಬಿದ್ದ ಕರುವಿನ
ಹಾಸು ಮಾಂಸಕ್ಕೆ ಕಾಗೆ ಹದ್ದಿನ ರಣಹಿಂಡು
ಕೀಳಲು ಬಿಡದ ಜನರ ನಾಲಗೆ
ತೆವಲಿನ ಜಗಳದ ನಡುವೆ
ಕಾಗೆಗೂ ಸಿಗದ ಮೈಚರ್ಮ
ಅಳಿದೇ ಹೋಯಿತು ಅದೇ ಹುಳಗಳಿಗೆ

ಜಿಂಕೆಯನ್ನು ಚಪ್ಪರಿಸಿ
ಅವಗಳ ಸಂಖ್ಯೆ ಸಮೀಕ್ಷಿಸಿ
ಮೂಲೆಯಲ್ಲಿ ಸತ್ತ ಹುಲಿ
ಮೂರು ದಿನಕ್ಕೆ ಎಡತಾಕದು ಕಾಲಿಗೆ
ಅದೇ ಸಮತೋಲನ ಹುಳಗಳಿಂದ
ಇದೇ ಗತಿ ದೈತ್ಯ ಆನೆ ತಿಮಿಂಗಲಕ್ಕೆ
ಹೌದು ಕಾಲಿಗೆ ಸಿಗಬಾರದು ಹೆಣಗಳು

ಕೋಟಿ ಶತಮಾನ
ಹಿಂದಕ್ಕುರುಳಿಸಿ ಇತಿಹಾಸ ಮೀಟಿದರೂ
ಹುಳಗಳದ್ದೇ ರಾಜ್ಯಭಾರ
ಮೀಸೆ ತಿರುವಿ ರಾಜ್ಯ ಹರವಿ
ಕೊಬ್ಬೇರಿಸಿ ಬಬ್ಬಿರಿದವರನ್ನಾಳಿ
ಗಿಡ ಮರ ಬಳ್ಳಿ ಮೈ ಹಬ್ಬಿ
ಕಣ್ಣ ಮುಂದೆ ನಾಲಗೆ ಚಾಚಿ
ಕಾಲ್ಬೆರಳು ನೆಕ್ಕಿದೆ ಉಪ್ಪುಕಾರ ಸಮೀಕ್ಷೆಗೆ
ಸಿಗದು ಒಸಾಮನ ಬಂದೂಕದೇಟಿಗೆ

ನಾನಲ್ಲದ ನನ್ನಬಿಂಬವಿರುವ ಕನ್ನಡಿ
ನಿರ್ವಾಣ ತೋರುತಿದೆ ಹುಳ ಹರಿದಾಡಿಸಿ
ಹಿಂದೆ ಇದ್ದ ತುರುಮಂದಿ, ಜಗದೊಂದಿ
ಮಾಂಸ ಕರಗಿಸುತಿದೆ
ನವೋದಯಕ್ಕೆ ಹೊಸ ರುಚಿಗೆ
ನಾಲಗೆ ತೀಟೆಗಲ್ಲ, ಲೋಕರೂಢಿಗೆ

4 comments:

 1. ವಿಷ ಜಂತುಗಳ ಬಗ್ಗೆ ಎಚ್ಚರಿಕೆಯ ಕರಪತ್ರ ಈ ಕವನ. ತುಂಬಾ ಇಷ್ಟವಾಯಿತು.

  ReplyDelete
 2. ಹುಳುಗಳ ಪ್ರತಿಮೆಯು ಅರ್ಥಪೂರ್ಣ ಆಶಯದೊಂದಿಗೆ ಮೈದಾಳಿದೆ.ವಿಶಾಲಾರ್ಥದಲ್ಲಿ ಇಳೆಯ ಕೊಳೆ ತೊಳೆವ ನೈಜ ಚಿತ್ರಕಾವ್ಯವಿದು.ಕವಿಗಿರುವ ಬದ್ಧತೆಯು ಸಾರ್ವಕಾಲಿಕವಾದುದು.ಹತ್ತಾರು ಅರ್ಥಹೊಂದಿ ಮೈದಾಳಿದೆ.ತುಂಬಾ ಇಷ್ಟವಾಗುವುದು.

  ReplyDelete
 3. ಮೋಹನಣ್ಣ ನಿಮ್ಮ ಕಾವ್ಯ ಪ್ರೌಢಿಮೆಗೆ ಕೈ ಎತ್ತಿ ಮುಗಿಯುತ್ತೇನೆ.. ಹುಳಗಳ ವಿಸ್ತಾರ ಮರದೆಲೆ, ಮನುಷ್ಯರ ಕಾಮವಾಂಛೆ, ಕಾಡು ಮತ್ತು ಕಾಡು ಪ್ರಾಣಿಗಳನ್ನು ಮಾತ್ರವಲ್ಲದೆ ಇತಿಹಾಸವನ್ನೂ ಸುತ್ತಿ ಬರುತ್ತದೆಂದು ನಾನು ಯೋಚಿಸಿಯೂ ಇರಲಿಲ್ಲ.. ಅದು ನನಗೆ ಅಚ್ಚರಿಯ ಪ್ಯಾಕೇಜ್ ಮತ್ತು ಆ ವಿಷಯವೇ ನನ್ನ ಮನಸ್ಸನ್ನು ಕವಿತೆಯಲ್ಲಿಡಿದು ಹಿಂಡಿ, ಹಿಪ್ಪೆ ಮಾಡಿದ್ದು.. ನಾವು ಈ ಪ್ರಪಂಚದಲ್ಲಿ ನೋಡಬಹುದಾದ ಎಲ್ಲಾ ಹುಳುಗಳನ್ನು ಪರಿಚಯಿಸಿ ಅವುಗಳ ಬಗ್ಗೆ ಎಚ್ಚರದಿಂದಿರುವಂತೆ ಕಟ್ಟೆಚ್ಚರಿಕೆ ಒರಡಿಸಿದಂತಿದೆ ಕವಿತೆ.. ಜೊತೆಗೆ ಇತಿಹಾಸದಲ್ಲಿ ತಮ್ಮ ರಾಜ್ಯ ದಾಹದ ತೆವಲಿಗೆ ಅಸಾಯಕರಾದ ಜನರ ಬಡ ಜೀವಗಳನ್ನೂ ಹುಳುಗಳೊಂದಿಗೆ ಸಮೀಕರಿಸಿದ್ದು ಹಿಡಿಸಿತು..
  ನಾನಲ್ಲದ ನನ್ನಬಿಂಬವಿರುವ ಕನ್ನಡಿ
  ನಿರ್ವಾಣ ತೋರುತಿದೆ ಹುಳ ಹರಿದಾಡಿಸಿ
  ಹಿಂದೆ ಇದ್ದ ತುರುಮಂದಿ, ಜಗದೊಂದಿ
  ಮಾಂಸ ಕರಗಿಸುತಿದೆ
  ನವೋದಯಕ್ಕೆ ಹೊಸ ರುಚಿಗೆ
  ನಾಲಗೆ ತೀಟೆಗಲ್ಲ, ಲೋಕರೂಢಿಗೆ
  ಈ ಸಾಲುಗಳು ತುಂಬಾ ಕಾಡುತ್ತಿವೆ.. ತುಂಬಾ ಹಿಡಿಸಿತು ಕವಿತೆ..

  ReplyDelete
 4. ಸುಂದರ ಕವಿತೆ ಮೋಹನಣ್ಣ.ಸಾಧರಣವಾಗಿ ಕಂಡ ತರಗೆಲೆಯಲ್ಲಿ ಅಸಾದರಣವನ್ನು ತೆರೆದು ಬಿಟ್ಟಿದ್ದೀರಿ. ನಿಮ್ಮಲ್ಲಿ ಅದ್ಭುತ ಪದ ಭಂಡಾರವನ್ನು ಗಮನಿಸಿದ್ದೇನೆ. ಕಾವ್ಯದ ತೆಕ್ಕೆಯಲ್ಲಿ ಆಲೋಚಿಸಿದಾಗ ತುಂಬಾ ಸಲೀಸಾಗಿ ಪದಗಳು ನಿಮ್ಮನ್ನು ಆಲಂಗಿಸಿಕೊಳ್ಳುವುದನ್ನು ನಿಮ್ಮ ಎಲ್ಲಾ ಕವಿತೆಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸುತ್ತವೆ. ಕವಿತೆಗೆ ಇದು ಬೇಕೇ ಬೇಕು.ಪದ ತಾಕತ್ತು ಇಲ್ಲದೆ ಕಾವ್ಯ ಎದೆಯೊಳಗೆ ಅವಿತುಕುಳಿತುಕೊಳ್ಳುತ್ತವೆ. ಯಾವಾಗ ಸಿಕ್ಕಿ ಬಿಡುತ್ತದೋ ಆಗ ವಿಜೃಂಭಿಸುತ್ತವೆ. ಚೆನ್ನಾಗಿದೆ ಈ ಕವಿತೆ.

  ReplyDelete