ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Wednesday, 22 February 2012

ನಮ್ಮೂರ ಸಿದ್ದಕ್ಕ....(ಕನ್ನಡ ಪ್ರಭದವರ 'ಸಖಿ' ಪಾಕ್ಷಿಕದಲ್ಲಿ ಪ್ರಕಟಿತ)

ಅದ್ಯಾವುದೋ ತರಂಗ ಹಂಚಿಕೆಯಲ್ಲಿನ ಸಂಚು
ಕಮಲ ಕೈಗಳ ಪ್ರತಿನಿತ್ಯದ ಹೊಂಚು
ಭೂಕಬಳಿಕೆ, ರಾಜಕೀಯದಬ್ಬಾಳಿಕೆ
ಅಣ್ಣಾಹಜಾರೆಯುಪವಾಸ__ಸದನದಶ್ಲೀಲ ದುಸ್ಸಾಹಸ
ಯಾರೋ ಸತ್ತದ್ದು__ಮತ್ಯಾರೋ ಅತ್ತದ್ದು
ಐಶ್ವರ್ಯ ರೈಳ ಹೆತ್ತದ್ದು, ಲಾಡೆನ್ ಸತ್ತದ್ದು
ಲೋಕ ಹೊಳೆಯುತ್ತಿರುವುದು ಬೆಳೆಯುತ್ತಿರುವುದು
ನವತಂತ್ರ ಕುತಂತ್ರ ಮೈದಳೆಯುತ್ತಿರುವುದು
ಒಳ್ಳೆಯತನ ಕಾಲಡಿ ಕೊಳೆಯುತ್ತಿರುವುದು
ಯಾವುದರ ಪರಿವೆಯೂ ಇಲ್ಲ ನಮ್ಮೂರ ಸಿದ್ದಕ್ಕನಿಗೆ

ಕೋಳಿ ಕೂಗಿಗೆ ಕಾಯಲ್ಲವಳು
ಲೋಕ ಕಣ್ತೆರೆವ ಮುಂಚೆ ಮನೆ ಗುಡಿಸಿ ತಾರಿಸಿ
ಅಂಗಳಕ್ಕೆ ಸಗಣಿ ನೀರೆರಚಂಗಳಕ್ಕೆ ರಂಗವಲ್ಲಿಯಿಟ್ಟು
ಕ್ಷಣಹೊತ್ತು ಸೂರ್ಯನಿಗೆ ಮೈಕೊಟ್ಟು
ಹೊಗೆಗೂಡನ್ನೂದಿ ಊದಿ
ಮುಂಜಾನೆಗೆ ಮುದ್ದೆ ಜಡಿದು, ಸೊಪ್ಪುಪ್ಪೆಸರು ಬಸಿದು
ಕುಡಿದ ಒಣ ಎದೆ ಗಂಡನನ್ನೆಬ್ಬಿಸಿ
ನಿದ್ದೆಗಣ್ಣಿನ ಹೈಕಳ ಮಲ ತೊಳೆದು
ಮೂರಕ್ಷರ ಕಲಿಯಲು ಗೋಡೆ ಇಲ್ಲದ
ಶಾಲೆಗೆ ಕಳುಹಿಸಿ, ತೂಕಲಿಗೆ ಮುದ್ದೆ ಮುರಿದು
ಪುಡಿಗಾಸಿನೊಡೆತನಕ್ಕೆ ಓಡುತ್ತಾಳೆ
ಬಸವಳಿದು ದುಡಿಯುತ್ತಾಳೆ, ಬಿಸಿಲಿನಲ್ಲುರಿಯುತ್ತಾಳೆ

ರಸ್ತೆಯ ಗುಡ್ಡ ಏರಿ ಬಂದ ನಾಲ್ಕರ ಬಸ್ಸು
ಪಡುವಣ ದಿಗಂತದೆದೆಯಲ್ಲಿ ಕುಳಿತ ರವಿ
ಆಗಷ್ಟೇ ಬಂದ ಗೌಡನ ಕೈ ಸನ್ನೆಗೆ ಕಾದು
ಸುಸ್ತಾಗಿ ಬೆವೆತು ತಡವರಿಸಿ ಬರುತ್ತಾಳೆ ಸಿದ್ಧಕ್ಕ
ಅರಳುಗಣ್ಗಳ ಮಕ್ಕಳ ಮೊಗವರಮನೆ
ಎಂಟಾಂಟಾಣೆ ಕೊಟ್ಟು, ಮುಂದೆ ಮಂಡಕ್ಕಿ ತಂಬಿಟ್ಟಿಟ್ಟು
ಮತ್ತದೇ ಕೆಲಸಕ್ಕೆ ಮೈ ಮುರಿಯುವ ಸರದಿ
ಕತ್ತಲಾದಂತೆ, ಜಗತ್ತಿಗೆ ಚಂದ್ರ ಬೆತ್ತಲಾದಂತೆ
ಕುಡುಕ ಗಂಡನ ತಡಕಿ, ಗಲ್ಲಿ ಗಲ್ಲಿಯಲ್ಲಿಣುಕಿ
ಚರಂಡಿ ಛಾವಡಿಯಲ್ಲಿ ಹುಡುಕಿ
ಹೆಗಲಿಗೆ ಕೈ ಏರಿಸಿ ಹೊತ್ತು ತರುತ್ತಾಳೆ
ಅತ್ತತ್ತು ತುತ್ತು ತಿನ್ನಿಸಿ, ಮುದ್ದಿಸಿ ಮೈ ಒರೆಸಿ
ಒಪ್ಪಿಕೊಂಡಪ್ಪಿಕೊಂಡು ಕಾಮ ಪ್ರೇಮದ
ವಾಸನೆಯಲ್ಲೆಲ್ಲಾ ಮರೆತು ಬಿಡುತ್ತಾಳೆ

ಅವಳಿಗೀ ಜೀವನ ಬಟಾಬಯಲಲ್ಲ
ಮನಸ್ಸು ಮನೆಮಂದಿ ಮೀರಲ್ಲ
ನೋವಿನುರಿಯಲ್ಲಿ ಬೇಯುತ್ತಾಳೆ, ನೋಯುತ್ತಾಳೆ
ಮರೆತೆಲ್ಲ ಸಂಕಟ ಬಾಳನೊಗ ಹೊರುತ್ತಾಳೆ
ಸಂಜೆಯಾದಂತೆ ಛಾವಡಿಯಲ್ಲಿ ಕುಳಿತು
ಕೀರ್ತನೆ, ಭಜನೆಯಲ್ಲಿ ಲೋಕವನ್ನೇ ಮರೆತು
ಪಾರಮಾರ್ಥದ ಜೇನಲ್ಲಿ ಕರಗುತ್ತಾಳೆ
ಮನೆಗೆ ಬಂದ ಚಣದಲ್ಲಿ ಮೂರು ಕಡ್ಡಿ ಹಚ್ಚಿ
ಎಲ್ಲಾ ಭಗವಂತನಿಚ್ಚೆ 'ಶಿವಾ' ಎನ್ನುತ್ತಾಳೆ
ಊರ ನೂರು ದಾರಿಯಲ್ಲಿ ಎಲ್ಲರಂತೆ
ಪೆಪ್ಪರುಮೆಂಟು ಚಪ್ಪರಿಸಿ, ಚರಕ್ಕೆನೆ ಸಂಡಿಗೆ ತಿಂದು
ತಂಗಳು ಪಂಗಳು ಸೇವಿಸಿ ಬೆಳೆಯುತ್ತವೆ ಮಕ್ಕಳು
ಹಡೆವ ಕಾಲಕ್ಕೆ ಹಡೆಯುತ್ತವೆ ತೊಡೆದೆಲ್ಲ ನೋವ
ಗಂಡನ ಹಾದರವ ಕೊಳೆ ತೊಳೆಯಲು
ಒಂದು ಪಂಚಾಯಿತಿ ಸಾಕು, ಅಲ್ಲೇ ಕೈ ಹಿಡಿಯುತ್ತಾಳೆ
ಒಟ್ಟಿನಲ್ಲಿ ದುಃಖವನ್ನಪ್ಪಿಕೊಂಡೊಪ್ಪಿಕೊಂಡ ಸುಖಜೀವಿ
ಎಲ್ಲೆ ಮೀರದಲ್ಲೇ ಇರುವ ಮೊಲ್ಲೆ ಮನದವಳು

4 comments:

 1. ಸಿದ್ಧಕ್ಕನ ಚಿತ್ರಣ ಮತ್ತು ಇಂದಿನ ಸುದ್ಧಿ ಸಂಚಯ ಸೊಗಸಾಗಿದೆ.

  ಹಳ್ಳಿಗಾಡಿನ ಹೆಣ್ಣುಮಗಳನ್ನು ಪ್ರತಿಮೆಯಾಗಿಟ್ಟುಕೊಂಡು ಇಂದಿನ ಸೋಮಾರಿ ಜಗತ್ತನ್ನು ಸರಿಯಾಗಿಯೇ ಝಾಡಿಸಿದ್ದೀರಾ.

  ನನ್ನ ಬ್ಲಾಗಿಗೂ ಸ್ವಾಗತ.

  ReplyDelete
 2. ಪಕ್ಕದೂರಿನ ಮಿಲ್ಲಿನ ಶಬ್ದ ಧಿಕ್ಕರಿಸಿ ಸಿದ್ದಕ್ಕನ ಬೀಸುಕಲ್ಲಿನ ತಿರುಗೋ ರಾಗಕ್ಕೆ ದನಿಗೂಡಿಸಿದ್ದೀರ. ಹೃದ್ಯ ರಚನೆ.

  ReplyDelete
 3. ಮೋಹನಣ್ಣ ಮಾತಿಗೆ ಮೊದಲೇ ಕೈಮುಗಿದು ಬಿಡುತ್ತೇನೆ ಸ್ವೀಕರಿಸಿಬಿಡಿ ಮಾರಾಯ್ರೆ..:))) ಸಿದ್ದಕ್ಕ ಒಂದು ಪ್ರತಿಮೆಯಾಗಿ ನಿಲ್ಲುತ್ತಾಳೆ ಮಾನವೀಯತೆಯ ಇಂಬಿನೊಳಗೆ ಆಕೆ ಒಬ್ಬ ಹೆಣ್ಣುಮಗಳ ಪ್ರತಿಮೆ ಎನ್ನುವುದಕ್ಕಿಂತ ನಮ್ಮ ನಿಮ್ಮೆಲ್ಲರ ನಡುವೆ ಇರುವ ಮುಗ್ದ ಜನರ ಪ್ರತಿಮೆಯಾಗಿ ನಿಲ್ಲುತ್ತಾಳೆ.. ಆಕೆಯಿಂದ ಹೇಳಿಸಹೊರಟ ವಸ್ತುವಿನ ವಿಸ್ತಾರ ಅದ್ಭುತ, ಒಬ್ಬ ಸೃಜನಶೀಲ ಕವಿಮನದ ಸಂಪೂರ್ಣ ತಾಕತ್ತು ಬಿಂಬಿತವಾಗಿದೆ ಕವಿತೆಯಲ್ಲಿ.. ಜನ ಈ ಹಾಳು ವಿಷಯಗಳಿಗೆ ಕಿವಿಯಗಲಿಸುವುದನ್ನು ಬಿಟ್ಟು ಜೀವನದ ಸಂತೋಷಗಳಿಗೆ ಮನಸ್ಸನ್ನು ತೆರೆದಿಡಬೇಕು.. ಬದುಕನ್ನು ಬದುಕುವುದರೊಟ್ಟಿಗೆ ಅನುಭವಿಸಬೇಕು, ಬೇರೆಯವರ ಬದುಕಿಗೆ ಪ್ರೇಕ್ಷಕರಾಗುವುದನ್ನು ಬಿಟ್ಟು ತಮ್ಮ ಬದುಕನ್ನು ಅನುಭವಿಸಬೇಕು ಎಂಬ ಪಠವನ್ನು ಹೇಳುವುದರೊಟ್ಟಿಗೆ ಜೀವನ ಸುಖದ ಚೆಂದದ ಚಿತ್ರಣವನ್ನೂ ಕೊಟ್ಟಿದ್ದೀರಿ.. ಹಳ್ಳಿಗಾಡ ಹೆಣ್ಣು ಮಗಳ ಜೀವನದ ಕಷ್ಟ ಸುಖಗಳ ಚಿತ್ರಣದ ಲೇಪವಿದೆ ಕವಿತೆಗೆ.. ನಮ್ಮೂರಿನ ಸಿದ್ದಕ್ಕನನ್ನು ಕಣ್ಣ ಮುಂದೆ ಕಟ್ಟಿಕೊಟ್ಟ ಅನುಭವ ನೀಡಿತು ಕವಿತೆ.. ಸರ್ವ ಕಾಲಕ್ಕೂ ಸಾರ್ವತ್ರಿಕವಾಗಿ ನಿಲ್ಲುವ ಪ್ರಯತ್ನ ಇದು..
  ಕುಡುಕ ಗಂಡನನ್ನೆಬ್ಬಿಸಿ, ನಿದ್ದೆಗಣ್ಣಿನೈಕಳ ಮಲ ತೊಳೆದು
  ಮೂರಕ್ಷರ ಕಲಿಯಲು ಗೋಡೆ ಇಲ್ಲದ
  ಶಾಲೆಗೆ ಕಳುಹಿಸಿ, ತೂಕಲಿಗೆ ಮುದ್ದೆ ಮುರಿದು
  ಪುಡಿಗಾಸಿನೊಡೆತನಕ್ಕೆ ಓಡುತ್ತಾಳೆ
  ಬಿಸಿಲಿನಲ್ಲಿ ಬಸವಳಿದಳಿದು ದುಡಿಯುತ್ತಾಳೆ
  ಈ ಸಾಲುಗಳು ಮನಸ್ಸಿನಲ್ಲುಳಿದು ಕಾಡುತ್ತಿವೆ..

  ReplyDelete
 4. ತಡವಾಗಿ ಪ್ರತಿಕ್ರಿಯೆ ಮಾಡಿದ್ದಕ್ಕೆ ಕ್ಷಮೆ ಇರಲಿ.. ಕವಿತೆ ತುಂಬಾ ಉದ್ದ ಇದೆ ಹಾಗು ಓದೋಕ್ಕೆ ಮತ್ತು ಅರ್ಥ ಮಾಡಿಕೊಳ್ಳೋಕ್ಕೆ ತುಂಬಾ ಸಮಯ ಬೇಕು ಅಂತ ಚಿಂತಿಸಿ.. ಹೆಚ್ಚಿನ ಬಿಡುವಿನ ಸಮಯ ಸಿಕ್ಕಾಗ ಓದೋಣವೆಂದು ಸುಮ್ಮನೆ ಬಿಟ್ಟಿದ್ದೆವು.. ಮತ್ತು ಒಂದೆರಡು ದಿನಗಳ ಹಿಂದೆಯೇ ಓದಿದರೂ ಸಹ ಆಗಿಲ್ಲಿ ಪ್ರತಿಕ್ರಿಯೆ ಹಾಕಲು ಸಾಧ್ಯ ಆಗಿರಲಿಲ್ಲ.. ಆದರೆ ನಿಜಕ್ಕೂ ಇದು ಸರಸರನೇ ಸಾಲು ಸಾಲಿನಲ್ಲೂ ಕುತೂಹಲ ಕಲ್ಪಿಸುತ ಓದುವಂತೆ ಮಾಡುತ್ತದೆ.. ನಿಮ್ಮೂರ ಸಿದ್ದಕ್ಕನ ದಿನನಿತ್ಯದ ಒಂದು ಜೀವನವನ್ನು ಕಾವ್ಯ ಕಥಾನಕವಾಗಿ ಮಾಡಿದ ನಿಮ್ಮ ಆಲೋಚನೆಯಲ್ಲಿ ಒಂದು ಉತ್ತಮ ಸಂದೇಶವನ್ನು ಸಹ ಸಾರುವ ಪ್ರಯತ್ನ ಇದೆ.. ತುಂಬಾ ಖುಷಿಯಾಗಿದೆ ಈ ನಿಮ್ಮ ಕವಿತೆಯ ಉದ್ದೇಶವನ್ನು ತಿಳಿದು .. ಹಾಗು ಶುಭದಿನ ಸರ್.. :)

  ReplyDelete