ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Sunday, 25 March 2012

ರಸ್ತೆ

ನಮ್ಮಜ್ಜಿ ಅಮ್ಮನ ತಲೆ ನೇವರಿಸಿ ಅತ್ತಂತೆ
ಸೂರ್ಯನಳುತ್ತಿದ್ದಾನೆ, ಚಣವಷ್ಟೇ ನಾಟಕ
ತಂಗಾಳಿ ಬೀಸಿ ತಂಪೆರದರೂ ಧೂಳೆದ್ದಿದೆ
ಇಕ್ಕೆಲಗಳಲ್ಲಿ ಕ್ಯಾಕರಿಸಿ ಉಗಿದು
ಮೂಗು ಮುಚ್ಚಿಕೊಂಡು ಮುಂಜಾನೆಗೆ
ಬಹಿರ್ದೆಸೆಗೆ ಕೂರವವರು ಬಂದಿದ್ದಾರೆ

ಹೌದು
ಸಾವಿರ ವರ್ಷ ಆಯಸ್ಸು ಈ ರಸ್ತೆಗೆ
ಹಳ್ಳ ಕೊಳ್ಳ ಹೆಗ್ಗು ಸಿಗ್ಗು
ಅಲ್ಲಲ್ಲಿ ಗಾಯದ ಈ ದಾರಿಗೆ
ಹಾವಂತೆ ಬಳುಕಿ ಹರಿದರೂ ಹಸುವಿನೊಲವು
ಇಕ್ಕೆಲಗಳ ಕಸುವಿನ ಬೆಳೆಯ ಮುಟ್ಟದ ಛಲವು

ಕಷ್ಟದ ಮೂಟೆ ಹೊತ್ತು, ನೋವಿನಲ್ಲಿ ಅತ್ತು
ಒಂದಷ್ಟು ಬಸ್ ಗಳು ಓಡಿದರೆ
ಒಳಗಿನವರಿಗೆ ಸುಖಗನಸು
ಟೈರ್ ಸರಿಸಿದ ಸೆರಗ ಮೆಲಕ್ಕೆತ್ತಿ
ಇಕ್ಕೆಲಗಳ ಪಾರ್ಥೇನಿಯಂನ ನಗುವಿಗೆ ನಿರುಮ್ಮಳಿಸಿ
ಬೆನ್ನು ಕೊಟ್ಟ ರಸ್ತೆಯಿಂದ ಎದ್ದ ಧೂಳಿಗೆ
ಅಸಹ್ಯಸಿ ಜನರುಗಿದ ಎಂಜಲಿಗೆ
ಬೇಸರಿಸದು ರಸ್ತೆ, ಅದೇ ಅದರವಸ್ಥೆ

ನಿನ್ನೆ ತಾನೇ ತೆಗೆದುಕೊಂಡ ಹೊಸ ಬೈಕ್
ಆ ಭೂಪ ಹತ್ತಿಸಿಕೊಂಡ ನಲ್ಲೆಯನ್ನು ಅದೇ ರಸ್ತೆಯಲ್ಲಿ
ಆತನಿಗೋ ಹರೆಯದ ಕಸುವು
ರಸ್ತೆ ಚಿಮ್ಮಿಸಿದ ಧೂಳನ್ನು ಕೊಡವಿ
ಮತ್ತೆ ಅಲ್ಲೇ ಹರವಿ, ಟೈರ್ ತಿರುವಿ
ಹಳ್ಳಕೊಳ್ಳ ಬಳಸಿ ಹೋದ
ಆದರೆ ಅದೂ ರಸ್ತೆಲ್ಲಿನ ಕೆತ್ತಿದ ಗಾಯ
ಅಪ್ಪಿತಪ್ಪಿ ತಪ್ಪಿಸದೇ ಗುಂಡಿಗೆ ಬಿಟ್ಟರೂ
ನಲ್ಲೆಯ ಎದೆ ಸೋಕಿದ ಮಜ
ರಸ್ತೆಗೋ ನೋವುಣುವ ಲಿಖಿತ ಸಜ

ಈ ರಸ್ತೆ ಇಂದು ನಿನ್ನೆದಲ್ಲ, ಮೊನ್ನೆಯದೂ ಅಲ್ಲ
ಆಯಸ್ಸಿರಬಹುದು ಸಾವಿರ ವರ್ಷ
ತಣ್ಣಗಾಗುತ್ತದೆ ಸುರಿಸಿದರೆ ಮೋಡ ವರ್ಷ
ಆದರದು ಕ್ಷಣಿಕವಷ್ಟೆ
ನೋಡಿದಲ್ಲೆಲ್ಲಾ ಬರೀ ಗಾಯಗಳೇ
ಸುಯ್ಯನೇ ಬಂದ ಲಾರಿ
ಹುತ್ತದ ಬಿಲದೊಳಗಿಣುಕಿದ ಹಾವಿನ ತಲೆಯ
ನೂರಾರು ಮನುಷ್ಯರಿಣುಕಿದ ಬಸ್ಸು
ನಮ್ಮೂರಿನ ಮಾಚನೋಡಿಸಿದ ಬಂಡಿ
ಅದರ ಗಾಯದ ಮೇಲೆ ನೆಗೆ ನೆಗೆದು
ಮತ್ತೊಂದಷ್ಟು ಗಾಯ ಬಗೆ ಬಗೆದು
ಓಡುವುದೇ ಆಯಿತು
ಗಮ್ಯ ಸೇರುವಾಸೆ ಮರೆತು ಅಲ್ಲೇ ಮಲಗಿದೆ
ಬಂದವರಿಗೆ ಮುಂದಿನ ದಾರಿ ಬೇಕಷ್ಟೆ

ಬೇಸಗೆ ಬಂತೆಂದರೆ ಸುಟ್ಟ ಇಕ್ಕೆಲಗಳು
ಅತ್ತ ಸೂರ್ಯ ಮೈ ಉರಿಯುತ್ತಾನೆ
ಮಳೆಗಾಲಕ್ಕೆ ಬಳುಕಿದ ಅದೇ ಇಕ್ಕೆಲ ಜಲ
ರಸ್ತೆಗೆ ನುಗ್ಗಿ ಮೈತುಳಿದು ಚರ್ಮ ಸೆಣೆದು
ಗುಮ್ಮನಂತೆ ಮಲಗಿಕೊಳ್ಳುತ್ತದೆ
ಪಕ್ಕಿ ಪಿಕ್ಕೆ, ಮೇಲೊರಗುವ ಮರದ ಹೆಣ
ಸುಂಟರಗಾಳಿ ಸುರಿವ ಕಾಡು ಕೊಳೆ
ಕೊಚ್ಚೆ ಮೇಲೆ ರಚ್ಚೆ ಹಿಡಿವ ಮಳೆ
ಎಲ್ಲವೂ ಸೇರಿ ರಸ್ತೆಯನ್ನು ಮಲಗಿಸಿವೆ ಏಳದಂತೆ
ಡಾಂಬರು ಸೀರೆಯುಡಿಸಲು ಬಂದವನ ಮಾತು
ನಿಮಗೆ ಗೊತ್ತಲ್ಲ ಬರೀ ಮಾತಿನ ಮಂತ್ರ
ಅದೂ ಐದು ವರ್ಷಕ್ಕೊಮ್ಮೆ ಮಾತ್ರ

ಪಾಪ
ಆ ರಸ್ತೆ ನೋಡಿದಾಗ ಅಮ್ಮನ ನೆನಪಾಗುತ್ತದೆ

4 comments:

 1. ರಸ್ತೆಯ ಅವ್ಯವ್ಸ್ಥೆಯ ಹಿನ್ನಲೆಯಲ್ಲಿ ರಾಜಕೀಯ ಮತ್ತು ಸಾಮಾಜಿಕ ಏರುಪೇರುಗಳನ್ನು ಅಮೋಘವಾಗಿ ಜಾಲಾಡಿದ್ದೀರಿ.

  ಭೇಷ್!

  ನನ್ನ ಬ್ಲಾಗಿಗೂ ಸ್ವಾಗತ.

  ReplyDelete
 2. ಪಾಪ
  ಆ ರಸ್ತೆ ನೋಡಿದಾಗ ಅಮ್ಮನ ನೆನಪಾಗುತ್ತದೆ.. ಚೆನ್ನಾಗಿದೆ ಮೋಹನ್ ಜೀ :)

  ReplyDelete
 3. ರಸ್ತೆಯ ಅನ್ವರ್ಥ ಭಾವಗಳು ಚೆನ್ನಾಗಿದೆ. ರಸ್ತೆಯನ್ನು ಅಮ್ಮನಿಗೆ ಹೋಲಿಸಿದ್ದೀರಿ.ಇದು ಕವಿಗಳಿಗೆ ಬೇಕು. ಇನ್ನಷ್ಟು ಬೇಕು. ವಂದನೆಗಳು.

  ReplyDelete
 4. ಪ್ರವೀಣ್ ಕುಲಕರ್ಣಿ20 April 2012 at 04:20

  ಅಬ್ಬ ಎಂದೆನ್ನಿಸದೆ ಇರದು ಈ ಕವನ ಓದಿ. ರಸ್ತೆಯ ಆತ್ಮವನ್ನು ಸೇರಿದ ಭಾವ. ಒಂದೊಂದು ಚಿತ್ರಗಳೂ ಕಣ್ಣ ಮುಂದೆ ಹಾದು ಹೋದಷ್ಟು ನಿಖರ ನಿಮ್ಮ ನಿರೂಪಣೆ. ರಾಬರ್ಟ್ ಫ್ರಾಸ್ಟ್ ಅವರ Stopping By Woods on a Snowy Evening ಕವನದ And miles to go before I sleep ಸಾಲನ್ನು ನೆನಪಿಸಿಕೊಟ್ಟಿತು

  ReplyDelete