ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Sunday, 23 September 2012

ಚಕ್ರೀಯ ಸಮಸಂಗತಿ…

ಗರ್ಭಿಣಿ ಮಗಳ ಹೆರಿಗೆ ನೋವು
ಪಡಸಾಲೆಯಜ್ಜನ ಸಾವು
ಹೆರಿಗೆ ಕೋಣೆಯ ಮಗು-
ಮೊಗದಲ್ಲಿ ಅಜ್ಜ ಬಿಟ್ಟ ನಗು!

ಅಜ್ಞಾನಿ ರಕ್ತನಾಳದೊಳಗೂ
ಅಪ್ಪನ ರಕ್ತದ ಹರಿವಿಗೆ
ವಿಘ್ನವಿಲ್ಲ ಭಗ್ನವಿಲ್ಲ
ವಿಜ್ಞಾನದ ಡಿ.ಎನ್.ಎ ಸಾಕ್ಷಿ!

ನೀರೊಳ ಮೇಘನಿಗೆ ಸ್ಖಲನ ಸಿರಿ
ಕೆರೆ ತೊರೆ ತುಂಬು ಬಸುರಿ
ಬೇವು ಬೀಜದೊಳಗೆ
ಹೆತ್ತು ಹೊತ್ತ ತರು ತವರ ಸಿರಿ

ಎಂದೋ ಸತ್ತು ಮರೆಯಾಗಬೇಕಿದ್ದವರ
ವೀರ್ಯಾಣು ಅಂಡಾಣು
ಅಲೆದಾಡುತ್ತಿವೆ ಬೀದಿಗಳಲ್ಲಿ
ಉದುರಿದೆಲೆ ಮರ ಬೆಳೆಸುವ ಗೊಬ್ಬರದಲ್ಲಿ!

(ಪ್ರತೀ ವಸ್ತುವಿನ ಗುರುತು ಈ ಪ್ರಪಂಚದಲ್ಲಿಯೇ ಗಿರಕಿ ಹೊಡೆಯುತ್ತಿರುತ್ತದೆ ಎಂಬ ಆಧಾರದಲ್ಲಿ ಬರೆದಿರುವುದು... ನೀರು ಆವಿಯಾಗಿ ಮತ್ತೆ ಮೇಘವಾಗಿ, ನೀರಾಗಿ ಹರಿಯುತ್ತದೆ, ನೀರೊಳಗೆ ಮೋಡದ ಬಿಂಬವಿರುತ್ತದೆ, ಹಾಗೆ... )

1 comment:

  1. ಕವಿತೆಯ ಹೂರಣವನ್ನು ಕೊನೆಗೆ ನೀಡಿದ್ದು ಹೊಸ ಪರಂಪರೆ, ಭೇಷ್.

    ಅನುವಂಶೀಯತೆ, ಪುರಾಣಗಳ ಸುತ್ತ ಪುನರಪಿ ಪ್ರಾಪ್ತ ವಿಷಯಂ ನಿರೂಪ್ಸಿದ್ದು ಇಷ್ಟವಾಯಿತು.

    ReplyDelete