ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Friday, 21 September 2012

ಏಳು ದೇವತೆಗಳೂ ಒಟ್ಟಿಗೆ “Vibration” ಎಂಬ ಆಂಗ್ಲ ಪದಕ್ಕೆ ಹೆದರಿದ್ದು..!

ಕೆಲವರಿಗೆ ನಾನೆಂದರೆ ಭಯ. ಕಾರಣ ಖಂಡಿತವಾಗಿಯೂ ಸಣ್ಣಕ್ಕಿರುವ ನಾನಲ್ಲ, ಬದಲಾಗಿ ನನ್ನೂರು ಕೊಳ್ಳೇಗಾಲ. ಕರ್ನಾಟಕದ ಪ್ರತಿಷ್ಠಿತ “ಮೈಸೂರು ವಿಶ್ವವಿದ್ಯಾನಿಲಯ”ವಿರುವ ಮಾನಸ ಗಂಗೋತ್ರಿಯಲ್ಲಿ ನಾನು ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿದ್ದಾಗ ಅನೇಕ ಪ್ರಾಧ್ಯಾಪಕ ಮಹನೀಯರು ನನ್ನನ್ನು ತಮ್ಮ ನೆರೆಹೊರೆಯವರಿಗೆ, “ಇಂತವರಿಗೆ” ಮಾಟ ಮಾಡಿಸಿಕೊಡಲು ಸಾಧ್ಯವೇ ಎಂದು ಕೇಳಿ ಉಗಿಸಿಕೊಂಡಿದ್ದಾರೆ. ಒಂದೆರಡು ವರ್ಷ ಸುಂದರ ಚಿಕ್ಕಮಗಳೂರಿನಲ್ಲಿದ್ದೆ. ಅಲ್ಲೂ ಕೂಡ ಅದೇ ರಗಳೆ. “ನೀವು ಮಾಟ ಮಂತ್ರಕ್ಕೆ ಫೇಮಸ್ ಅಲ್ವಾ” ಎಂದು ದಿನಕ್ಕೆ ಒಂದಿಬ್ಬರಾದರೂ ನನ್ನಲ್ಲಿ ಕೇಳಿದ್ದುಂಟು. ಹಾಗಾದರೆ ಕೊಳ್ಳೇಗಾಲದಲ್ಲಿ ಮಾಟಮಂತ್ರ ನಡೆಯುತ್ತಿಲ್ಲವೇ ಎಂಬ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತದೆ. ಖಂಡಿತವಾಗಿಯೂ ‘ಇಲ್ಲ’ ಎಂದಷ್ಟೇ ಹೇಳಬಲ್ಲೆ. ಅವಶ್ಯವಿದ್ದರೆ ಅದರ ಬಗ್ಗೆ ಸವಿಸ್ತಾರವಾಗಿ ಮತ್ತೆ ತಿಳಿಸಿಕೊಡುತ್ತೇನೆ.

ಕೊಳ್ಳೇಗಾಲದೊಳಗೆ ವಾಮಮಾರ್ಗದಲ್ಲಿ ಏನೇ ನಡೆದರೂ ಅದಕ್ಕೆ ತನ್ನದೇ ಆದಂತಹ ಪೊಳ್ಳು ಘನತೆಯಿರುತ್ತದೆ. ಘನತೆ ಎನ್ನುವ ಬದಲು ಅದನ್ನು ನಾನು “ತಿಳಿದವರು, ತಿಳಿಯದವರ ದೌರ್ಬಲ್ಯಗಳನ್ನು(ಕೆಲವೊಮ್ಮೆ ತಿಳಿಯದವರು ವ್ಯಕ್ತಪಡಿಸುವ ಮತ್ತೊಬ್ಬರ ಮೇಲಿನ ದ್ವೇಷವನ್ನು) ಉಪಯೋಗಿಸಿಕೊಳ್ಳುವ ರೀತಿ” ಎಂದು ವ್ಯಾಖ್ಯಾನಿಸುತ್ತೇನೆ. ಇದೇ ಕೊಳ್ಳೇಗಾಲದಲ್ಲಿ ಮಾಂತ್ರಿಕ ಬೀದಿ ಎನಿಸಿಕೊಂಡ ಒಂದು ಜನಾಂಗವಿರುವ ಬೀದಿಯಲ್ಲಿಯೇ ನಮ್ಮ ಮನೆಯಿರುವುದು. ಮೊದಲಿನಿಂದಲೂ ಜಿಜ್ಞಾಸೆಯಲ್ಲಿಯೇ ಬೆಳೆದ ನಾನು ಯಾವುದನ್ನೂ ಒಪ್ಪಿಕೊಂಡವನಲ,್ಲ ಜೊತೆಗೆ ಶೂನ್ಯದಿಂದ ಏನೂ ಉತ್ಪತ್ತಿಯಾಗುವುದಿಲ್ಲವೆಂಬುದನ್ನು ಅಲ್ಲಗಳೆದವನೂ ಅಲ್ಲ. ದೇವರು ಎಂಬ ಹೆಸರಿನಲ್ಲಿ ನಿಯಮ ಸಂಪ್ರದಾಯ ಚೋದಗಳನ್ನು ಹೇರುವುದನ್ನು ನೇರವಾಗಿ ವಿರೋಧಿಸುತ್ತೇನೆ, ಜೊತೆಗೆ ಈ ಪ್ರಪಂಚವೆಂಬ ಅಂಗಡಿಯಲ್ಲಿ ದಿನಸಿ, ಇತರೆ ವಸ್ತುಗಳು ತನ್ನಿಂತಾನೇ ಮಾರಾಟವಾಗಿ, ಮುಗಿದಾಗ ಮತ್ತೆ ಕೂಡಿಕೊಳ್ಳುತ್ತವೆ, ಹೃದಯವೆಂಬ ಕಪಾಟು ಯಾರ ಅನುಮತಿಯೂ ಇಲ್ಲದೇ ಬಾವಿಯಲ್ಲಿ ಹೆಂಗಸೊಬ್ಬಳು ನೀರು ಸೇದಿದಂತೆ ರಕ್ತವನ್ನು ಬಸಿಯುತ್ತದೆ ಎಂಬುದನ್ನು ಒಪ್ಪಿಕೊಳ್ಳಲು ನನ್ನ ಮೆದುಳು ತಯಾರಿಲ್ಲ. ಈ ರೀತಿ ಈ ಮೆದುಳನ್ನು ಆಟವಾಡಿಸುತ್ತಿರುವವ ಶಕ್ತಿಗೋ, ಕಾಣದ ಕೈವಲ್ಯವನ್ನು ಧಿಕ್ಕರಿಸುವ ಮನ ಒಂದೆಡೆಯಾದರೆ, ಗಾಂಭೀರ್ಯವಾಗಿ ನಗುವ, ಈ ಜಗದ ಸೂಕ್ಷ್ಮಗಳಿಗೆ ಸೋಲುವ ಮತ್ತೊಂದೆಡೆಯ ನನ್ನ ಮನವೇ ನನಗೆ ಅರ್ಥವಾಗಿಲ್ಲ. ಕಾಂಪಾಸ್ಸಿಲ್ಲದೇ ದೋಸೆ ಉಯ್ಯುವ ನಮ್ಮಮ್ಮನಂತೆ!

ತುಂಬಾ ಹಿಂದೆ ವ್ಯಾಪಾರ-ಸಂತೆ ನಡೆಯುತ್ತಿದ್ದ ನಮ್ಮ ಬೀದಿಗೆ ಈಗಲೂ ‘ಸಂತೆ ಬೀದಿ’ಯೆಂಬ ಹೆಸರಿದೆ. ಎಲ್ಲಾ ಊರಿನ ಎಲ್ಲಾ ಬೀದಿಗಳಂತೆ ಈ ಬೀದಿಯಲ್ಲೂ ಅದೇ ಆಗುಹೋಗುಗಳಿವೆ, ಬೇಡದ ಜಾತಿ ಧರ್ಮ ವ್ಯತ್ಯಾಸಗಳಿವೆ, ಶ್ರೀಮಂತರ ಅಟ್ಟಹಾಸ, ಬಡವರ ನೋವು, ಡೊಗ್ಗು ಸಲಾಮೆಲ್ಲಾ ಇದೆ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಒಮ್ಮೆ ಬಾಬಾ ಎನಿಸಿಕೊಂಡ ಒಬ್ಬ ವ್ಯಕ್ತಿ ಅಕ್ಕಿಗೆ ತಣ್ಣನೆಯ ನೀರು ಸುರಿದು ಅನ್ನ ಮಾಡಿದ್ದನ್ನು ಯಾರೋ ವೇದಿಕೆ ಮೇಲೆ ವೈಭವೀಕರಿಸಿದಾಗ ನಾನೂ ಖಾಲಿ ಮಡಕೆಯ ಅರ್ಧ ಸುಣ್ಣ (Calcium Carbonate) ಮತ್ತರ್ಧ ನೀರು ತುಂಬಿ ತಣ್ಣೀರು ಸುರಿದು ಎಲ್ಲರ ಮುಂದೆ ಅನ್ನ ಮಾಡಿದ್ದೆ(ಪುಣ್ಯ, ಬಾಬಾ ಮತ್ತು ನಾನು ಇಬ್ಬರೂ ಯಾರಿಗೂ ಆ ಅನ್ನವನ್ನು ತಿನ್ನಿಸಿ ಎದೆ ಉರಿಸಲಿಲ್ಲ). ಈ ನಮ್ಮ ಬೀದಿಯಲ್ಲಿ ಮೂಲವಾಗಿ “ವೇಶ್ಯೆ” ಎನಿಸಿಕೊಂಡ (ಜೊತೆಗೆ ತಾನೂ ಒಪ್ಪಿಕೊಂಡ) ಒಬ್ಬಾಕೆಯ ಮೇಲೆ “ದೇವರ” ಆವಾಹನೆಯಾಗುತ್ತಿತ್ತು. “ದೇವರು” ಬರುವುದು ಎಂಬುದು ಸಾಮಾಜಿಕವಾಗಿ ಒಂದು ಜಿಜ್ಞಾಸೆಯಾದರೆ, ವ್ಶೆಜ್ಞಾನಿಕವಾಗಿ ಅದೊಂದು ಮಾನಸಿಕ ಅಸಮತೋಲನವಷ್ಟೆ. ದೇವರಾವಾಹನೆ ಎಂಬ ಪ್ರಕ್ರಿಯ ಸಾಮಾನ್ಯವಾಗಿ ನಡೆಯುವುದು ಕುಡುಕರ ಮೇಲೆ, ನಡತೆಗೆಟ್ಟವರ ಮೇಲೆ, ಬಾಲ್ಯದಿಂದಲೂ ಭಾದಿತರಾದವರ ಮೇಲೆ. ಇಂತಹ ದೇವರುಗಳಿಗೂ ನನಗೂ ಮೊದಲಿನಿಂದಲೂ ಕೂಡಿ ಬರದಿದ್ದದ್ದು ಇಂದಿಗೂ ವಿಪರ್ಯಾಸ. ತಾನೇ ಸೃಷ್ಠಿಸಿದ ಜೀವಗಳೊಳಗೆ ಯಾರಿಗೂ ಕಾಣದಂತೆ ಕದ್ದು ಬರುವ ಅವಶ್ಯಕತೆಯಾದರೂ ಏನು? ಈ ಪ್ರಪಂಚವನ್ನೇ ಸಮತೋಲನದಲ್ಲಿ ತೂಗುವ ಶಕ್ತಿಯೊಂದು ಈ ಹುಲುಮಾನವನ ಮೇಲೆ ಆವಾಹನೆಯಾದಾಗ ಮನುಷ್ಯನಿಗೆ ತಡೆದುಕೊಳ್ಳುವ ಶಕ್ತಿಯಾದರೂ ಇದೆಯೆಂದರೆ ನಂಬಲಾಗುವುದಿಲ್ಲ.

ಆಕೆಯ ಮೇಲೆ ಬರುವ ದೇವತೆಯ ಹಾವಭಾವಗಳನ್ನು ನಾನು ಮೊದಲಿನಿಂದಲೂ ಗಮನಿಸುತ್ತಿದ್ದೆ. ಪ್ರಾರಂಭದಲ್ಲಿ ಕೇವಲ ಒಬ್ಬಳೇ ಮಹಾತಾಯಿ ಆವಾಹನೆಯಾಗುತ್ತಿದ್ದದ್ದು ತ್ವರಿತಗತಿಯಲ್ಲಿಯೇ ಅದು ಏಳು ದೇವತೆಗಳು ಒಮ್ಮೆಲೇ ಆ ಒಂದೇ ದೇಹದ ಮೇಲೆ ಆವಾಹನೆಯಾಗುವ ಮಟ್ಟಕ್ಕೆ ಬಂದು ನಿಂತಿತ್ತು. ಆಕೆಯ ಮೇಲೆ ಏಳೇಳು ದೇವತೆಗಳು ಒಟ್ಟಿಗೆ ಬರುವುದಂತೆ ಎಂಬ ಟೊಳ್ಳು ನುಡಿ ಬೆಳಕಿಗಿಂತಲೂ ವೇಗವಾಗಿ ಮನೆ ಮನೆ ಕಿಟಕಿ, ಹೆಂಚು ತೂತುಗಳ ಮೂಲಕ ಹರಡಿಕೊಂಡು ಆಕೆಗೆ ಒಳ್ಳೆಯ ಪ್ರಚಾರ ದೊರಕಿತು. ಏಳೂ ದೇವತೆಗಳು ಆವಾಹನೆಯಾದ ಸಂದರ್ಭದಲ್ಲಿ ಆಕೆ ತನ್ನ ಮೈ ಕೈ ಪ್ರಜ್ಞೆಯನ್ನು ಸಂಪೂರ್ಣವಾಗಿ ಮರೆತುಬಿಡುತ್ತಿದ್ದಳು ಎಂಬುದು ಎಲ್ಲರೂ ಗ್ರಹಿಸಿಕೊಳ್ಳಬಹುದಾದ ವಿಚಾರವೇ ಹೌದು. ಏಳೂ ದೇವತೆಗಳ ಆವಾಹನೆಗೋಸ್ಕರ ಊಟ ತಿಂಡಿ ಬಿಟ್ಟು ಕಾದು ಕುಳಿತ ಜನಗಳಿಗಂತೂ ಇನ್ನಿಲ್ಲದ ಭಯ ಭಕ್ತಿ. ಆಕೆಯನ್ನು ಸಾಧ್ಯವಾದಷ್ಟೂ ಕೊಳಕು ದೃಷ್ಟಿಯಲ್ಲಿ ನೋಡಿದವರೆಲ್ಲಾ ಅಡ್ಡಬಿದ್ದು ಪಾದ ಸ್ಪರ್ಶಿಸಿ ಪುನೀತರಾದೆವು ಎಂಬ ಭ್ರಮೆಯಲ್ಲಿರುತ್ತಿದ್ದರು. ಈ ವಿಷಯದಲ್ಲಿ ನನಗೆ ಮತ್ತು ನನ್ನ ಕೆಲ ಗೆಳೆಯರಿಗೆ ಬೇಸರ ತಂದ ವಿಚಾರವೆಚಿದರೆ, ಈ ದೇವತೆಗಳು ನಮ್ಮ ಕ್ಷೇತ್ರದ ‘ಕೌನ್ಸಿಲರ್’ ಬರುವವರೆವಿಗೂ ಮೈ ಮೇಲೆ ಬರುತ್ತಲೇ ಇರಲಿಲ್ಲ! ಆವಾಹನೆಗೊಂದು ಆವಾಹನೆ ಬೇಕಾಗಿತ್ತು ಎಂಬುದು ನಿಜಕ್ಕೂ ಹಾಸ್ಯಾಸ್ಪದ. ಮೈಮೇಲೆ ಬಂದ ದೇವರುಗಳೇ ಮನೆ, ಜಮೀನು, ದೇವಾಸ್ಥಾನ ಇತ್ಯಾದಿ ಬೇಡಿಕೆಗಳನ್ನು ‘ಕೌನ್ಸಿಲರ್’ ಮುಂದೆ ಆಕೆಯ ಪರವಾಗಿ ಮಂಡಿಸುತ್ತಿದ್ದವು.

ಇದೊಂದು ಪ್ರತಿದಿನದ ಬೀದಿ ನಾಟಕವಾಗಿ ಹೋಗಿತ್ತು. ಎಲ್ಲೆಲ್ಲಿಂದಲೋ ಜನ ಬಂದು ತಮ್ಮ ಅರಿಕೆ ಇಟ್ಟು ಅತ್ತು ಕರೆದು ಹೋಗುತ್ತಿದ್ದರು. ಆಸ್ಪತ್ರೆಗೆ ಹೋಗುವ ಬದಲು ಇಲ್ಲಿಗೆ ಬಂದು ಆಕೆ ಕೊಟ್ಟ ವಿಭೂತಿ ನುಂಗಿ ಒಂದಷ್ಟು ಹಣ ಸುರಿದು ಹೋಗುತ್ತಿದ್ದರು. ಕಂತೆ ಕಂತೆ ಹಣದಲ್ಲಿ ಒಂದು ಪೈಸೆಯನ್ನೂ ಮೈಬಿಟ್ಟು ಹೋಗುತ್ತಿದ್ದ ಆ ದೇವತೆಗಳು ಮುಟ್ಟುತ್ತಿರಲಿಲ್ಲ. ಅದೊಂದು ರೀತಿ ದೇವತೆಗಳೇ ನಡೆಸಿಕೊಡುತ್ತಿದ್ದ ಸಾಮಾಜಿಕ ಸೇವೆಯಿದ್ದಂತೆ.

ಒಮ್ಮೆ ನಾನೂ ಸಾವರಿಸಿ ಜಾಗ ಮಾಡಿಕೊಂಡು ದೇವರ ಬಳಿ ಹೋದೆ. ತಾಯೇ ನಮಸ್ಕಾರ ಎಂದೆ. ಆ ದೇವತೆಗಳೆಲ್ಲಾ ಒಟ್ಟಿಗೆ ‘ಆಹಾ ಹ ಹ ಉಶ್ಸ್.......’ ಎಂದವು. ಎಂದಿನಂತೆ ‘ನಿನ್ನ ತೊಂದರೆ ಹೇಳು ಶಿಸು’ ಎಂದಾಗ ನಾನು ಅಂಜಿಕೆ ಅಳುಕಿಲ್ಲದೇ ನೇರವಾಗಿಯೇ “ತಾಯಂದಿರೇ, ನೀವೆಲ್ಲಾ ಕೇವಲ ‘ಕೌನ್ಸಿಲರ್’ ಇರುವಾಗ ಮಾತ್ರವಷ್ಟೇ ಬರುವುದು ಯಾಕೆ? ಆತನ ಬಳಿ ಮನೆ, ಜಮೀನು ಮಂಜೂರಾತಿಗೆ ಪೀಡಿಸಿ ಹೆದರಿಸುವುದು ಯಾಕೆ? ಪ್ರಪಂಚವನ್ನೇ ಕಾಯುವ ನಿಮಗೆ ಈ ದಕ್ಷಿಣೆಯಾದರೂ ಯಾಕೋ?’ ಎಂದದ್ದೇ ತಡ ಆಕೆಗೆ ಮೈಯುರಿ ಜಾಸ್ತಿಯಾಗಿ ಹೋಯಿತು. “ಮ್ ಮ್ ಮ್... ಈ ಶಿಶು-ಮಗು ನನ್ನನ್ನೇ ಅನುಮಾನಿಸುತ್ತಿದೆ, ನಾನು ಸುಮ್ಮನೇ ಬಿಡುವುದಿಲ್ಲ, ಈ ಅಮಾವಾಸ್ಯೆಯ ಒಳಗಡೆ ಅದರ ಹೆಣ ಬೀಳುತ್ತದೆ” ಎಂದು ಹೇಳಿಯೇ ಎರಡು ವರ್ಷವಾಗಿದೆ. ಅಷ್ಟಕ್ಕೇ ಕೆಲ ಜನರು ನನ್ನನ್ನೇ ಏನೇನೋ ಹೇಳಿ ಚದುರಿಸಿದ್ದರು. ಆದರೆ ಅದೇ ಜನಗಳು ತಿರುಗಿ ಬಿದ್ದದ್ದೂ ಇದೆ, ನನ್ನನ್ನು ಮೆಚ್ಚಿಕೊಂಡು ಪ್ರಬುದ್ಧರಾಗಿ ಯೋಚಿಸಿದ್ದೂ ಇದೆ. ಹೀಗೆ ಒಂದೆರಡು ಬಾರಿ ಆ ದೇವರುಗಳ ಜೊತೆ ಈ ರೀತಿಯ ಅವುಗಳಿಗೆ ಇಷ್ಟವಿಲ್ಲದ “ಸಂಕಷ್ಟ ಸಂದರ್ಶನ” ಮಾಡಿದ್ದೆ. ಆ ದೇವತೆಗಳಿಗೆ ನಾನು ಎಂದರೆ ಇನ್ನಿಲ್ಲದ ಕೋಪ ಮತ್ತು ದ್ವೇಷವಿತ್ತು.

ಒಮ್ಮೆ ಈಕೆ ಇದೇ ನಾಟಕ ಹೊತ್ತು ಮೆರವಣಿಗೆಯೊಂದರಲ್ಲಿ ಸಾಗುವಾಗ, ಆಕೆಯ ಕೈಯಲ್ಲಿ ಬಳೆ ಮತ್ತು ಕುಂಕುಮ ತುಂಬಿದ ಒಂದು ತಟ್ಟೆಯಿತ್ತು. ಕೈಗಳು ಯತೇಚ್ಛವಾಗಿ ನಡುಗುತ್ತಿದ್ದುದ್ದರಿಂದ ಬಳೆಗಳೆಲ್ಲಾ ಕೆಳ ಬಿದ್ದು ಬಿದ್ದು ಹೊಡೆದು ಹೋಗುತ್ತಿದ್ದವು. ನಾನು ಬಳೆ ಬಿದ್ದು ಬಿದ್ದು ಹೊಡೆದು ಹೋಗುತ್ತಿರುವುದನ್ನು ನೋಡಲಾಗದೆ ‘ಅಮ್ಮಾ, ಕೈ ‘Vibration’ ಆಗೋದು ಬೇಡ’ ಎಂದೆ. ಅಷ್ಟೇ ಸಾಕಾಗಿತ್ತು ಆ ದೇವತೆಗಳಿಗೆ ನನ್ನ ಮೇಲೆ ಎಗರಿ ಎಗರಿ ಬೀಳಲು. “ಈ ಶಿಶು ಹಾಗೇ ಹೀಗೆ” ಎಂದುಕೊಂಡು ಬಾಯಿಗೆ ಬಂದಂತೆ ನನ್ನ ವಿರುದ್ಧವಾಗಿ ಮಾತಿಗಿಳಿದದ್ದೇ ತಡ, ಇದನ್ನೇ ಕಾಯುತ್ತಿದ್ದ ಕೆಲವರು ನನ್ನ ಮತ್ತು ಗೆಳೆಯರ ವಿರುದ್ಧ ತಿರುಗಿ ಬಿದ್ದಾಗ ಉಳಿದವರೆಲ್ಲಾ ಸೇರಿ ಆ ಕ್ಷಣಕ್ಕೆ ನಮ್ಮನ್ನೆಲ್ಲಾ ಶಾಂತಗೊಳಿಸಿದರು. ಹೀಗೆ ಸಾಗಿದ ಮೆರವಣಿಗೆಯಲ್ಲಿ ಬಳೆ ಬಿದ್ದು ಹೊಡೆದುಹೋಗುವ ಕೆಲಸ ಮಾತ್ರ ನಿಲ್ಲಲಿಲ್ಲ. ಇದನ್ನೆಲ್ಲಾ ನೋಡಿ ನೋಡಿ ಬೇಸರಗೊಂಡ ಆಕೆಯ ಪರಮ ಭಕ್ತ!ನೊಬ್ಬ “ಅಮ್ಮಾ, ಕೈ ಅಳ್ಳಾಡಿಸಬಾರದು” ಎಂದ. ಆ ದೇವತೆಗಳೂ ಏನೂ ಮಾತನಾಡಲಿಲ್ಲ. ನಾನು ಮತ್ತೆ ದೇವರ ಬಳಿ ಹೋಗಿ ಮತ್ತೆ ನೇರವಾಗಿಯೇ ಕೇಳಿದೆ.
“ಅಮ್ಮಾ, Vibration ಎಂಬ ಇಂಗ್ಲೀಷ್ ಪದಕ್ಕೆ, ಕನ್ನಡದಲ್ಲಿ “ಅಳ್ಳಾಡಿಸು ಅಥವಾ ಅಲುಗಾಡಿಸು” ಎನ್ನುತ್ತಾರೆ”. ಇಂಗ್ಲೀಷ್ ನಲ್ಲಿ ಹೇಳಿದಾಗ ನನ್ನ ಮೇಲೆ ಬಂದ ಕೋಪ, ಅದೇ ವಿಚಾರವನ್ನು, ಅದೇ ಧಾಟಿಯಲ್ಲಿ ಕನ್ನಡದಲ್ಲಿ ಹೇಳಿದ ಆತನ ಮೇಲೆ ಬರದಿರಲು ಕಾರಣ ವೇನು?” ಎಂದೆ. ಮತ್ತೆ ಆಕೆಯ ಆರ್ಭಟ ಜೋರಾಯಿತು. ಈ ಬಾರಿ ನಾನು ಮತ್ತು ನನ್ನ ಗೆಳೆಯರು ಬಿಡಬಾರದೆಂದೇ ವಾಗ್ವಾದಕ್ಕಿಳುಗಿದ್ದೆವು. ಆದರೆ ಅಚ್ಚರಿಯ ಸಂಗತಿಯೆಂದರೆ, ಆ ಏಳು ದೇವತೆಗಳು ನಮ್ಮ ಜೊತೆ ಮಾತನಾಡಲಾಗದೇ, ಆ ಮೆರವಣಿಗೆಯನ್ನೂ ಸಂಪೂರ್ಣಗೊಳಿಸಿಕೊಡದೇ ಮೈ ಬಿಟ್ಟು ಹೆದರಿ ಹೊರಟೇ ಹೋದವು. ಮತ್ತೆ ಕರೆದರೂ ಬರಲಿಲ್ಲ!

ಆ Vibration ವಿಚಾರದಲ್ಲಿನ ನನ್ನ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ. ಪ್ರಪಂಚದ ಎಲ್ಲಾ ಜನರನ್ನೂ ಉದ್ಧರಿಸುವಂತೆ ಆಡುತ್ತಿದ್ದ ಆಕೆಗೆ ಇದೇ ಪ್ರಪಂಚದೊಳಗಿನ ಎರಡು ಭಾಷೆಗಳ ಸಾಮ್ಯತೆ ತಿಳಿಯಲಿಲ್ಲ. ಈ ಘಟನೆ ನಡೆದ್ದದ್ದು 2005 ರಲ್ಲಿ. ಘಟನೆಯ ನಂತರ ನಾನಿದ್ದರೆ ಸಾಕು ದೇವರ ಆವಾಹನೆಯೇ ಆಗುತ್ತಿರಲಿಲ್ಲ. ಇಂದಿಗೂ ಅಷ್ಟೇ, ಅಪರೂಪಕ್ಕೊಮ್ಮೆ ನಾನು ಕೊಳ್ಳೇಗಾಲಕ್ಕೆ ಹೋದರೆ ಅಂದು ಆ ಏಳು ದೇವತೆಗಳಿಂದ ಅಘೋಷಿತ ರಜೆ!

1 comment:

  1. ಮೈಮೇಲೆ ದೇವರು ಬಂದರು ಎಂದು ಸುಲಿಯುವವರಿಗೆ ಛಡೀ ಏಟಿನಂತಹ ಬರಹ.

    ReplyDelete