ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Friday, 13 January 2012

ಕತ್ತರಿ...


ಅಲ್ಲಾ ಕಣಯ್ಯಾ ಮಹಾಶಯ
ಶರ್ಟನ್ನು ಕತ್ತರಿಸು
ಎಂದು ನಿನಗೆ ಹೇಳಿದವರಾರು?
ಆಯ ನೋಡಿ ತುಂಡರಿಸಿಯೇ
ಆ ಅಂಗಿಯನ್ನು ಹೊಲೆದಿದ್ದು
ನನ್ನನ್ನು ಹಿಡಿದುಕೊಂಡಿದ್ದವನು ನೀನಲ್ಲವೆ!

ಪಾರ್ಥೇನಿಯ ಗಿಡದಂತೆ
ಮತ್ತೆ ಮತ್ತೆ ಬೆಳೆಯುವ
ಕೆದರಿದ ಕೇಶವನ್ನು ಹಾಗೆ
ಸವಟಿದರೆ ಸುಂದರ ವಿನ್ಯಾಸ
ಎಲ್ಲೆಂದರಲ್ಲಿ ಹೆರೆದು
ಬೋಳು ಮಾಡಿಕೊಂಡು
ನನ್ನನ್ನು ದೂರಿದರೆ ಹೇಗಯ್ಯಾ?

ಅವ ಕ್ಷೌರಿಕನನ್ನು ನೋಡಿ ಕಲಿ
ನಾಜೂಕಿನಾಟ ಅವನಿಂದ ತಿಳಿ
ಗುಂಗುರು ಕತ್ತರಿಸಿ
ಕಸವ ಮೂಲೆ ಒತ್ತರಿಸಿ
ತಿಕ್ಕಿ ತೀಡಿ ಕೂಡಿ ಬಾಚಿ
ಭೇಷ್! ಎನಿಸಿಕೊಳ್ಳುವನು

ಎಂದೋ ಮೂಲೆ ಸೇರಿದ್ದ ಕತ್ತರಿ
ಕೇಳಿದಂತೆ ಬಳುಕದು
ಹಿಡಿದು ತುಕ್ಕು, ಮೈಯೆಲ್ಲಾ ಕೊಳಕು
ಹಚ್ಚಿಲ್ಲ ಕೀಲಿ ಎಣ್ಣೆ
ಕಾರಣ ನೀನೇ ಮಂಕುದಿಣ್ಣೆ

ಮತ್ತೆ ಅಳುವೆ ಯಾಕೆ ಪೆದ್ದು
ಹಿಡಿದುಕೊಂಡ ಕೈ ನಿನ್ನದು
ನೀ ಆಡಿಸಿದಂತೆ ಆಡುವ ಕಾಯಕವೆನ್ನದು
ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ
ಸಿಕ್ಕಿದ್ದನ್ನು ತುಂಡರಿಸಿ
ನನ್ನನ್ನು ಮೂಲೆಗೆಸೆದರೆ ಹೇಗೆ?
ದೀಪ್ತಿಯಂಗಳದಲ್ಲೊಮ್ಮೆ ದಿಟ್ಟಿಸು
ಸಾಣೆ ಹಿಡಿ, ಹಚ್ಚು ಎಣ್ಣೆಯೆಂಬ ದಿರಿಸು

ಒಳಗಣ್ಣಲ್ಲೊಮ್ಮೆ ನೋಡು
ನನ್ನ ದೇಶವನ್ನು ಕಾಪಾಡು
ಸುಂದರ ಕಾರ್ಯಕ್ರಮವೊಂದಕ್ಕೆ
ಪಟ್ಟಿ ಕತ್ತರಿಸು ನನ್ನ್ನನ್ನು ಹಿಡಿದು

1 comment:

  1. ಬಹಳಾ ಚೆನ್ನಾಗಿದೆ.. ಮನಸ್ಸಿನ ಆಲೋಚನೆಯಲ್ಲಿ ಏನೇನೋ ನೆನೆಯುತ್ತಾ ಸ್ನೇಹ ಸಂಭಂದಗಳ ಕತ್ತರಿಸುವ ಮನಸ್ಸುಗಳಿಗೆ ಇದೊಂದು ಕಿವಿಮಾತು.. ಅತಿಯಾದ ಮಾತುಗಳ ಜಗಳಕ್ಕಿಂತ ಮಾತನ್ನು ಕತ್ತರಿಸುವುದೇ ಸರಿ.. ಮೌನವೇ ಅಲ್ಲಿನ ಮನಸ್ಸುಗಳ ತಂಪಾಗಿಸುವ ದಾರಿ.. ಉತ್ತಮ ಸಂದೇಶ ತುಂಬಿದಾ ಕವಿತೆಯಂತೆ ಕಂಡಿದೆ .. ವಿಷಯ ಸೊಗಸಾಗಿದೆ.. :)

    ReplyDelete