ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Sunday, 8 January 2012

ರಂಗವಲ್ಲಿ...


ಅಂದೊಂದು ದಿನ
ಬಿಡಿಸಿ ರಂಗವಲ್ಲಿ ಮನದಲ್ಲಿ
ಹಸಿರಿಕ್ಕೆಲಗಳಿಗೆ ಹೂ ಚೆಲ್ಲಿ
ಕಾದಿದ್ದೆ ಅವಳಿಗೆ
ಕಣ್ಣೋಟದಲ್ಲೇ ಬರುತ್ತೇನೆಂದಿದ್ದಳು

ಬರಲೇ ಇಲ್ಲ ಚೆಲುವೆ
ಕಿಟಕಿಯಲ್ಲಿಣುಕಿಣುಕಿ
ತಿಣುಕುವ ಮನಸ್ಸನ್ನೊಮ್ಮೆ ಕೆಣಕಿ
ಬಗ್ಗಿ ಬಾಗಿ ನೋಡುವುದೇ ಆಯಿತು
ಊಹೂಂ... ಬರಲಿಲ್ಲ

ಕುಣಿದು ಕುಪ್ಪಳಿಸಿ
ಸಾಕಾಗಿ ಮಲಗಿದೆ ಆ ರಂಗವಲ್ಲಿ
ಬಗೆ ಬಗೆ ಬಣ್ಣ ಬಳಿದು ಬರೆದಿದ್ದು
ಹೌದು ಅದು ನನ್ನ ತಪ್ಪು
ಮಾಡಿದ್ದ ಮೃಷ್ಟಾನ್ನ ಭೋಜನ
ಹಳಸಿದೆ ಅರೆಗಳಿಗೆಗೆ
ಪ್ರೇಮತುಂಬಿದ ಪ್ರಪಂಚಕ್ಕೆ
ಆಗಾಗ ರಕ್ತದಭ್ಯಂಜನ

ಯವ್ವನ ಚಿಗುರಿ ಕೊರಡಾಗಿದ್ದಾಗ
ಸೆರಗಿನಂಚಿನಲ್ಲಿ ನೋಡಿದ್ದವಳು
ನಿಂತ ನೀರು ಕಟ್ಟೆಯೊಡೆದು ಧುಮ್ಮಿಕ್ಕಿ
ಭೋರ್ಗರೆವ ಜಲಪಾತವಾದಾಗ
ಮಳೆಯಂತೆ ಸುರಿದು ಭೋರ್ಗರೆಸಿದವಳು

ಸರಸರನೆ ಹಬ್ಬಿಕೊಂಡ
ಚುರುಚುರು ಸೊಪ್ಪಿನ
ನುಣುಪಾದ ಸವೆತಕ್ಕೆ
ಸಿಂಬಳ ಸುರಿಸಿ ಮತ್ತೆ ಮತ್ತೆ ಒರೆಸಿಕೊಂಡರೂ
ಪರಿಪರಿಯಾಗಿ ಉರಿದಳು

ಭಯಾನಕ ಭಯಾತಂಕವೇನು ಗೊತ್ತು
ಈ ಹಾಳು ಹೃದಯಕ್ಕೆ
ಆದರೂ ಬಡಬಡನೆ ಬಡಿಯುತ್ತದೆ

ಸಾರಸ್ವತ ಲೋಕಕ್ಕೊಮ್ಮೆ
ತಳ್ಳಿದಳು ನನ್ನನ್ನು
ಅನುದಿನದನುಭವ ಕಲಿಸಿ
ನನ್ನಿಂದ ನನ್ನನ್ನು ಕೆತ್ತಿಸಿದಳು
ನೋವೆಂದರೇನೆಂದುತ್ತರಿಸಿದಳು

ಈಗವಳಿಲ್ಲ
ಅಲ್ಲೆಲ್ಲೋ ದೂರದಲ್ಲಿ
ಯಾರದೋ ಎದೆಗೆ ಒರಗಿ
ಹಾಲುಣಿಸುತ್ತಿದ್ದಾಳೆ ಮಗುವಿಗೆ

ಆದರೂ ಈ ದರಿದ್ರ ಕನಸಿಗೆ
ಆಗಾಗ ಅವಳ ಹೆಜ್ಜೆ ಸಪ್ಪಳ ಕೇಳಿಸಿದಂತೆ
ಬರೀ ರಂಗೋಲೆ ಬಿಡುವುದೇ ಆಯಿತು....

2 comments:

  1. ಕವನದ ವಸ್ತು ಚೆನ್ನಾಗಿದೆ. ಪ್ರತೀಕಗಳ ಬಳಕೆ ಇನ್ನೂ ಚೆನ್ನಾಗಿ ಬರಬೇಕು ಮೋಹನ್ ಜೀ. ನಿಮ್ಮ ಕವನಗಳು ವಿಷಯಗಳನ್ನ ಆಧರಿಸಿ ಬರೆಯಲ್ಪಡುತ್ತದೆ. ಕೊನೆಗೆ ಸ್ವಲ್ಪ ಗೊಂದಲಿಸುವಂತಿದೆ.

    ReplyDelete
  2. Mohan V Kollegal9 January 2012 at 08:47

    ಧನ್ಯವಾದ ಕಿರಣ್ ಸರ್... ನಿಮ್ಮ ಸಲಹೆಯನ್ನು ಗಮನದಲ್ಲಿಟ್ಟುಕೊಂಡಿರುತ್ತೇನೆ. ನನ್ನ ಬೆಳವಣಿಗೆಗೆ ಅವು ಸಹಕಾರಿಯಾಗುತ್ತವೆ.... ವಂದನೆಗಳು.....

    ReplyDelete