ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Monday, 2 January 2012

ಡಿಸೆಂಬರ್ ಜನವರಿ ತುಟಿಗಳು...


ಬರಿದಾದ ನದಿ ತುಟಿ ಬಾಯ್ಬಿಟ್ಟಿದೆ
ಇಕ್ಕೆಲಗಳಲ್ಲಿ ಸುಟ್ಟ ತ್ಯಾಪೆಗಳು
ಚಾಪೆಗಳು
ನೋವಿಗೆ ಎಣ್ಣೆ ಬೆಣ್ಣೆ ಹಚ್ಚುವ ಮಾತು
ಆದರೂ ಅಳುತ್ತಿದೆ ಸೋತು
ಮಲಗೆದ್ದರೆ ಸುಮ್ಮನೇ ಕಿರಿಕಿರಿಗಳು
ಸಾಕಪ್ಪ ಡಿಸೆಂಬರ್ ಜನವರಿ
ತಿಂಗಳ ತುಟಿಗಳು

ಅದೇನೋ ಅಂತೆ ವ್ಯಾಸಲಿನ್
ಬಯೋಲಿನ್
ಏನೇ ಹಚ್ಚಿದರೂ ತುಟಿ ಮಾತ್ರ
ಕುಯ್ಯೋ ವಯಲಿನ್
ನಾಲಗೆ ನೆಕ್ಕಿ ನೇವರಿಸುತ್ತದೆ
ಆದರೆ ಅದರ ಬಳ್ಳಿ ಇದರೊಡನೆ
ಇದು ತುಯ್ದರದಕ್ಕೆ
ಉಶ್ಶಪ್ಪ ಎನ್ನುವ ಬೇನೆ
ತುಟಿ ಕೈ ಬೆರಳ ಸುಟ್ಟ ಕೆಂಡ
ಮನಸ್ಸು ಮಹಾನ್ ಹಳವಂಡ

ಒಡೆದಧರ ಕಿತ್ತು ಕಿತ್ತು ಬರುತ್ತದೆ
ಹೆಪ್ಪುಗಟ್ಟದ ರಕ್ತ ಒಸರಿಸಿ
ಮೇಲೇ ಇರುವ ಕಣ್ಣಿಂದ
ಜಾರಿದ ನೋವ ಹನಿಯೊಂದು
ಬೆರಳನ್ನೆಳೆದಿದೆ ತುಟಿಗೆ
ಸಂತೈಸುವ ನೆಪದಿ
ಹೃದಯಕ್ಕೆ ಜೊತೆಯಾದ
ಬೆರಳುಗಳೋ ತುಟಿ ಕಿತ್ತಿವೆ, ದುಃಖದಿ

ನಿದ್ರೆ ಇರದ ರಾತ್ರಿಗಳಲ್ಲಿ
ಹಾಸಿಗೆ ಜಾಡಿಸಿ
ಕಂಬಳಿ ಹೊದ್ದು ಮನೆ ಮುಂದೆ
ಬೆಂಕಿ ಹಚ್ಚಿದಾಗ
ಭಗ್ಗನೆ ಬುಗಿಲೆದ್ದ ನೆನಪು
ಬೆಂಕಿಯೊಳಗಿಂದ ಮೂಡಿಬಂದ
ನನ್ನವಳ ಮುಖದ ಕುರುಡಂದ

ದೂರದ ತೀರದಿಂದ ಬೀಸಿಬಂದ
ಗಾಳಿತೇವದಲ್ಲೂ
ಮೈ ಕೊರೆಯುವ ಚಳಿ ನೆನಹು
ಚಳಿಗಾಲದಲ್ಲಿಯೂ ಬಿರಿಯುತ್ತಿರಲಿಲ್ಲ
ನನ್ನವಳ ತುಟಿ ಚೆಂದುಟಿ
ಸಿಹಿ ಕಿತ್ತಳೆ ತೊಳೆ
ಚಳಿ ಮೈ ಕೊರೆಯುವ ಘಳಿಗೆಯಲ್ಲಿಯೇ
ತೆಕ್ಕೆತೊರೆದು ಬಿಕ್ಕಳಿಸಿ ಹೊರಟಿದ್ದು
ಎದೆಗೂಡಿಗೊದ್ದು
ಅವಳ ತುಟಿ ಚೆಲುವಿಗೆ
ಕಟ್ಟಿದ ಕವಿತೆಗಳಿಗೆ
ಕಂಬಳಿ ಹೊದಿಸಿರುವೆ ಚಳಿಗೆ

ದೂರದ ಬಯಲಿನೊಳಗಿನ ಗುಡಿಸಲುಗಳಲ್ಲಿ
ಮಂಜು ಹರಡಿಕೊಂಡಿದೆ
ನನ್ನ ಕಾಲಿಗೂ ತಾಕಿ
ಹಸುಗೂಸುಗಳ ಕೈಕಾಲು ಬಿರಿದು
ಹರಿದ ಅರಿವೆಯೊಳಗಿನ
ದೇಹಗಳು ಕೂಗಿವೆ
ತಟ್ಟೆಮೇಲೆ ಇದ್ದ ನಾಲ್ಕಗಳನ್ನ
ಈಗವರಿಗೆ ಕೈಗೆಟುಕದ ಚಿನ್ನ
ಗರಿಕೆ ಮಾಳದ ಕುರಿಮಂದೆ
ಕಾಯುವವನ ಕೈಗಳೆರಡೂ ಒಂದೇ
ಬಿಗಿಯಾಗಿವೆ ಚಳಿಗದುರಿ

ಹರಿದ ಸೀರೆಯುಟ್ಟು ಗೋಡೆಗಂಟಿ ಕುಳಿತು
ಮುದ್ದೆ ಜಡಿಯಲು ಕುಳಿತಿರುವ
ಸಿದ್ಧಕ್ಕನನ್ನು ನೋಡು ದಿನಕರ
ಬೇಗ ಬಾರೋ ಕನಿಕರ!

2 comments:

  1. ಅವಳ ತುಟಿ ಚಲುವಿಗೆ, ಕಟ್ಟಿದ ಕವಿತೆಗೆ ಕಂಬಳಿ ಹೊದಿಸಿರುವೆ ಚಳಿಗೆ ಎನ್ನುವ ಸೊಗಸಾದ ಕಲ್ಪನೆಯು ಭಾವಸ್ಪುರಣತೆಯ ಉತ್ತುಂಕ್ಕೆ ಕೊಂಡ್ಯೊಯವುದು.ಚಳಿಯ ಪ್ರತಿಮೆಯಲ್ಲೂ ಚಾಟೀ ಏಟನ್ನು ನೀಡುವ ಕವಿಯ ಮನ್ನೋಟವೇ ಸೋಜಿಗವಾಗಿದೆ.

    ReplyDelete
  2. ಮೋಹನಣ್ಣ ನಿಮ್ಮಿಂದ ಒಂದು ವಿಭಿನ್ನವಾದ ಪ್ರಯತ್ನವಿದು, ತುಂಬಾ ಮಜ ಕೊಡುತ್ತದೆ ಕವಿತೆ..:))) ಬಹಳ ರಸವತ್ತಾಗಿ ತುಟಿಯ ಪರಿಪಾಟಲುಗಳನ್ನು ವರ್ಣಿಸಿದ್ದೀರಿ.. ಕವಿತೆಯಲ್ಲಿ ಬಹುವಾಗಿ ಮೆಚ್ಚಿದ ಅಂಶಗಳೆಂದರೆ ಕವಿತೆ ಸಮಯೋಚಿತವಾಗಿದೆ, ಕವಿತೆಯಲ್ಲಿನ ರಸಿಕತೆ ಮತ್ತು ತುಂಟತನದ ನಿರೂಪಣೆ ಮಜ ನೀಡುತ್ತದೆ.. ಮತ್ತು ಸಕಾಲಿಕವಾಗಿ ಮೂಡಿ ಬಂದಿರುವ ಕವಿತೆ ಈ ಚಳಿಗಾಲದಲ್ಲಿ ತುಟಿಗಳ ಆರೈಕೆಯ ಅಗತ್ಯತೆಯ ಬೆಗ್ಗೆ ಬೆಳಕು ಚೆಲ್ಲಿದೆ.. ಹಿಡಿಸಿತು ಈ ಪ್ರಯತ್ನ..:)))

    ReplyDelete