ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Sunday, 29 January 2012

ಕೆಲವು ಸೂಕ್ಷ್ಮಗಳಿಗೆ ಮನ ದೊಂದಿಯಾಗುತ್ತದೆ...

ತತ್ತಿಯೊಡೆದು ಮರಿ ಬಂದು
ಬೆಳೆದು ಮೈದಳೆದು ಹುಂಜಕ್ಕೆ ಮೈಯೊಡ್ಡಿ
ಒಂದೈದು ಮೊಟ್ಟೆ ಇಕ್ಕಿ ಮೇಲೆ
ಕುಳಿತು ಕಾವು ಕೊಡುವಾಗ
ಮರದಿಂದ ಬೀಜವುದರಿ ನೀರುನುಂಗಿ
ಸೂರ್ಯನಿಗೆ ಮೊಗಕೊಟ್ಟು
ಚಿಗುರಿ ಬೆಳೆದು ಮೈಗೆದರಿ
ಒಂದಷ್ಟು ಬೀಜವುದುರಿದಾಗ
ಒಂದು ಸೂಕ್ಷ್ಮದರಿವಿಗೆ ಮನ ದೊಂದಿಯಾಗುತ್ತದೆ

ಕೈನಲ್ಲಿದ್ದ ಮಂಜುಗಡ್ಡೆ
ಕರಗಿ ನೀರಾದರೂ ಅದೇನೋ ಜಿಜ್ಞಾಸೆ
ಮತ್ತದೇ ನೀರು ಪ್ರತಿಬಿಂಬ ಕೊರೆದು
ನೀರ್ಗಲ್ಲಾದಾಗ,ಗಂಟಿಕ್ಕಿದ ಬಲದ
ಸಂದರ್ಶನಕ್ಕೆ ಮತ್ತೆ ಮತ್ತೆ ಮನ ತಡಕಾಡುತ್ತದೆ

ಸಕ್ಕರೆ ಮಿಠಾಯಿ ಚಪ್ಪರಿಸಿದ ನಾಲಗೆ
ಕಟಕ್ಕನೆ ಕಡಿಯುವ ಹಲ್ಲು
ಅದೇ ಹಲ್ಲು ಕಲ್ಲು ಜಗಿಯದು
ಅದಕ್ಕೇನೋ ನಾಲಗೆಗೆ ರುಚಿಸದು
ತಪ್ಪಿ ನುಂಗಿದರೂ ಪಚನವಾಗದು

ಒಂದನುಭಾವ ಅನುಭವಿಸುವಾಗ
ಕಾಣದೊಂದು ಮೌನಕ್ಕೆ ಮನ ಮೊರೆಯುತ್ತದೆ
ಹುಲಿಗೆ ರುಚಿಸಿದ ಜಿಂಕೆ, ಹಾವು ನುಂಗಿದ ಕಪ್ಪೆ
ನನ್ನ ನಾಲಗೆ ಮೇಲಿಟ್ಟ
ಕುರಿ ಕೋಳಿ ಮೀನಿನ ರುಚಿ ತಪ್ಪೇ?
ತಿಂದರೆ ಕರಗಿಹೋಗುವುದಲ್ಲ ಮತ್ತೆ

ಒಂದು ವೀಣೆಯಲ್ಲಿ ಒಂದು ಮಾತಿದೆ
ಬೆರಳಾಡಿಸಿಬಿಟ್ಟರೆ ಸಾಕು
ಚೊಂಬಿಗೆ ಮಳೆ ಹನಿ ತೊಟ್ಟಿಕ್ಕಿದಂತೆ
ಟಳ್ ಟಳ್ ಎಂದು ಮೊಳಗುತ್ತದೆ
ಅದೇ ತಂತಿಯು ಧಾತುವಾಗಿ
ಮಣ್ಣಿನಲ್ಲಿ ಮಲಗಿದ್ದಾಗ ಸಂಗೀತ ಅಡಗಿತ್ತಲ್ಲ,
ಅದರೊಳಗೊಂದು ಹಾಡು ಮುಚ್ಚಿದ್ದು
ನನ್ನ ಮನಕ್ಕೆ ಬೆಂಕಿ ಹಚ್ಚಿದ್ದು ಏನು?

ಬುದ್ಧನುತ್ತರಿಸದ ಪ್ರಶ್ನೆಗೆ
ಅಜ್ಞಾನಿಯ ಬಾಲಿಶ ಸಬೂಬು
ವಿಜ್ಞಾನಿ ಅಣು ಭಾಗಿಸಿ ಹೌದು
ಭಾಗಿಸುತ್ತಲೇ ಕುಳಿತಿದ್ದಾನೆ
ಕಾಲಿಗಲ್ಲ, ಶರವೇಗದ ನಾಗರಹಾವಿಗೂ
ಸಿಗದ ಮಧು ಸುರಿಸಿದ ಮರವದು

2 comments:

  1. ಅರಿವಿನ ಪದರಗಳ ಅನ್ವೇಷಣೆಯಂತಿದೆ ಈ ಕವನ.

    ಹಲವು ಪ್ರಶ್ನೆಗಳಿಗೆ ನಿಸರ್ಗವೂ ಮತ್ತು ಜ್ಞಾನಿಗಳಷ್ಟೇ ಉತ್ತರಿಸಬಲ್ಲರು ಮಿತ್ರ!

    ReplyDelete
  2. ಇದಕ್ಕೆ ಉತ್ತರಿಸಬಹುದು. ಒಂದು ಒಳ್ಳೆಯ ನೋಟ ನಿಮ್ಮದು. ಚೆನ್ನಾಗಿದೆ ಮೋಹನ್ ಜೀ:)

    ReplyDelete