ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Saturday, 12 November 2011

ಸಮತೋಲನ...

ಕಣ್ಣಿನ ನಡುವೆ
ಮೂಗನ್ನಿಟ್ಟು
ಅದರಡಿ ಬಾಯಿಟ್ಟು
ಕೈ ತುದಿಯಲ್ಲಿ
ಐದು ಬೆರಳು ಮೂಡಿಸಿ
ನಕ್ಕನವನು
ಬೆರಳಿಗನ್ನವ ತೋರಿಸಿ
ಮೂಗಿಗೆ ವಾಸನೆ
ಗ್ರಹಿಸಿ
ಬಾಯಿಗನ್ನವನಿಡುವುದು
ಕಣ್ಣು
ಮೂಗು ಬೆನ್ನಿಗಿದ್ದು
ಬಾಯಿ ಮಂಡಿಗಿರೆ
ಕೈ ಸುತ್ತಿಸಿ ಬಾಯಿಗೆ
ತರಬೇಕಾಗಿತ್ತು
ತುತ್ತು ಅನ್ನಕ್ಕೆ ಅಷ್ಟು ಹೊತ್ತು

ಕೈಎರಡು ಕೂಡಿಸಿ
ಬೊಗಸೆ ಮೂಡಿಸಿದ
ಜಲದಾಹ ಇಂಗಲು
ಅವೆರೆಡು ಕಳೆದು
ದುಡಿದನು ತಿನ್ನಲು
ನಾಸಿಕದಲ್ಲಷ್ಟು ಕೇಶ
ಸ್ವಚ್ಚ ಗಾಳಿಗೆ
ಗೋಡೆ ಧೂಳಿಗೆ
ತೊಗಲಿನ ತುದಿಗೆ
ಚೂಪು ಕೂದಲು
ಕಣ್ರೆಪ್ಪೆ ಕಾವಲುಗಾರ
ಕನಸಿನೂರಿನ ಮಹಾದ್ವಾರ

ಹೆಬ್ಬೆರಳು ಹೆಬ್ಬೆಟ್ಟು
ಕೈಬೆರಳ ನಾಯಕನೊಬ್ಬ
ಮತ್ತೊಬ್ಬ ಕಾಲು
ನಡೆಸುವ ಸೇವಕ
ರಾಶಿ ಹಿಡಿಯಲಾಗದಿವನಿರದಿರೆ
ಕೊಂಚ ಕ್ರಮಿಸಲಾಗದವನಿರದಿರೆ


ಪೀಳಿಗೆಯಿಂದ ಪೀಳಿಗೆಗೆ
ತನ್ನ ಸೃಷ್ಠಿ ಉಳಿಯಬೇಕಲ್ಲ
ಕಾಮವೆಂಬ ಪ್ರೇಮವಿಟ್ಟ
ಕಣ್ಣು ಕಣ್ಣು ನೋಡಲು
ತುಟಿ ತುಟಿ ಕೂಡಲು
ಕಾಮತೃಷೆಯಂಗಗಳ
ಗೊಂಬೆಗಳ ನಡುವೆ ಇಟ್ಟ
ಬ್ರಹ್ಮ ಕೆತ್ತಿದಂಗಗಳ
ತಾಳ್ಮೆಯೊಡಗೂಡಿ ಜೋಡಿಸಿ
ಸಮತೋಲನ ಕೊಟ್ಟ
ಹೌದು ಸಮತೋಲನ ಕೊಟ್ಟ
ಸಮತೋಲನ

ಕುದುರೆ ಹತ್ತಿಸಿ ಹಗ್ಗ ಹಿಡಿಸಿ
ಜೀವಾತ್ಮನನ್ನು ತಂದ
ಪರಮಾತ್ಮನನ್ನು ಮರೆತ
ವೇಗದ ಸವಾರಿ ಜೀವಾತ್ಮನದು
ಅಲ್ಲೆಲ್ಲೋ ಕಾದಿದ್ದು
ಹತ್ತಿರ ಬಂದಂತೆ ಕೊಂದ

ಕೋಟಿ ಕೋಟಿ
ಬೊಂಬೆಗಳೊಳಗೆ ಸಮತೋಲನವನ್ನು
ಕೆತ್ತಿ ಮೆರೆದಿದ್ದ ಮೌನವಾಗಿ

3 comments:

  1. ಗೌರವಾನ್ವಿತ ಮೋಹನಣ್ಣನಿಗೆ ನಮಸ್ತೆ. ಕನ್ನಡ ಬ್ಲಾಗ್ ನಲ್ಲಿ ಇಂತಹದ್ದೊಂದು ಅಪ್ರತಿಮ ಕವಿತೆಯನ್ನು ನಿರೀಕ್ಷಿಸಿರಲಿಲ್ಲ. ಓದಿ ಪಾವನನಾದೆ.ಪ್ರತಿಮೆಗಳು ಹಾಗೆ ಎದ್ದು ಬಂದು ಮಾತಾಡುತ್ತಿವೆ. ಯಾವುದೇ ಪ್ರಶಸ್ತಿ ವಿಜೇತರ ಕವಿತೆಗೆ ಸದ್ದು ಹೊಡೆಯುವಂತ ಕವಿತೆ ಇದು ಅಂತ ಆನಂದ ಪಡುತ್ತಿದ್ದೇನೆ.ಕವಿ ಹೃದಯದ ಕವಾಟವನ್ನು ಕಟಕಟಿಸುತ್ತಿದೆ. ಮೊದಲ ಸಾಲಿನಿಂದ ಆರಂಭವಾದ ಪದಗಳ ಜೀವ ತುಂಬುವಿಕೆ ಹಾಗೇ ಮುಡಿಯಿಂದ ಪಾದದವರೆಗೆ ಮೈದಳೆದು ವೈಭವವನ್ನು ಮೆರೆಯಿತು.ಕವಿತೆ ಹೀಗೆ ಬರಬೇಕು ಅನ್ನುವುದಕ್ಕೆ ಉದಾಹರಣೆ ಇದು. ನಿಮ್ಮ ಜೀವಾತ್ಮದ ತುಡಿತ ಬೇರೆ. ನನ್ನ ಅಂದಾಜು ನಿಜವಾಯಿತು.ಸಾರ್ವಕಾಲಿಕ ಕವಿತೆ ಕಟ್ಟುವ ಕವಿಮಿತ್ರ ನೀವು.ನಿಮಗೆ ನನ್ನ ನಮಸ್ಕಾರಗಳು.

    ReplyDelete
  2. ನಮ್ಮ ದೇಹದ ಎಲ್ಲಾ ಆಂಗಾಂಗಳು ಹೇಗೆ ನಮ್ಮ ಜೀವನಕ್ಕೆ ಹೊಂದಿಕೊಳ್ಳುತ್ತದೆ, ಅದರ ರಚನೆಗೆ ನಾವು ಹೊಂದಿಕೊಂಡಿದ್ದಿವೂ ಅವು ನಮಗೆ ಹೊಂದಿಕೊಂಡಿದೆಯೂ ಎನ್ನುವಷ್ಟು ವಿಸ್ಮಯವಾಗುತ್ತದೆ. ಆದರೆ ನಿಮ್ಮ ಕವಿತೆಯ ಆಶಯ ಬರೆ ಮನುಷ್ಯನ ಅನಾಟಮಿಯನ್ನಷ್ಟೇ ವಿವರಿಸುವುದಷ್ಟೆ ಅಲ್ಲ ಬದುಕಿನ ಇತಿಮಿತಿಗಳ ಬಗ್ಗೆ ವಿವರಿಸಿದ್ದೀರಿ. ನಿಮಗೆ ಧನ್ಯವಾದಗಳು

    ReplyDelete
  3. ನಾನು ಈ ಕವಿತೆಯನ್ನು ಹತ್ತು ಸಲವಾದರೂ ಓದಿರಬಹುದು ಆದರೆ ಅದನ್ನು ಪ್ರತಿ ಸಲ ಓದುವಾಗಲೂ ನನ್ನನ್ನೇ ನಾನು ಮರೆತು ಓದುತ್ತೇನೆ.. ಸರ್ವಕಾಲಿಕ ಶ್ರೇಷ್ಟ ರಚನೆ ಎಂದರೆ ಖಂಡಿತಾ ಅತಿಶಯೋಕ್ತಿಯಲ್ಲ.. ದೇಹದ ಸಮತೋಲನದೊಂದಿಗೆ ಅಧ್ಯಾತ್ಮದ ಹದವಾದ ಮಿಶ್ರಣ ಕವಿತೆಗೆ ವಿಭಿನ್ನತೆಯೊಂದಿಗೆ ಕವಿಯ ಸೃಜನಾತ್ಮಕತೆಯನ್ನು ವೇಧ್ಯವಾಗಿಸುತ್ತದೆ.. ನಿಮ್ಮ ಕವಿತೆಗಳಲ್ಲೆಲ್ಲಾ ತುಂಬಾ ಹಿಡಿಸುವ ಕವಿತೆ ಇದು..:))) ನಿಮ್ಮೊಳಗಿನ ಕಾವ್ಯ ಸರಸ್ವತಿಗೊಂದು ಸಲಾಂ ಮೋಹನಣ್ಣ..

    ReplyDelete