ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Wednesday, 23 November 2011

ಡಾಂಬಿಕನಾಗಬೇಡ...

(ಇಂದು ಸತ್ಯ ಬಯಲು ಮಾಡಲು ನಿಂತಾಗ ಆದ ಪರಿಸ್ಥಿತಿಯ ವಿವರಣೆ ಇದು. ಸನ್ಯಾಸಿಯೊಬ್ಬನನ್ನು ಪೂಜಿಸಲು ನಿಂತು ಮಹಾನ್ ವ್ಯಕ್ತಿಗಳ ಜಯಂತಿ, ದೇಶದ ಸಂಭ್ರಮಾಚರಣೆ ನಗಣ್ಯ ಮಾಡಿ ಆತನನ್ನು ಕೊಂಡುಕೊಳ್ಳಲು ನಿಂತಾಗ ನನ್ನ ಕೆಲವು ಪ್ರಶ್ನೆಗಳು)

ಪೂಜಿಸಲವನೊಬ್ಬನೇ ಕಂಡನೇ?
ಗಾಂಧಿ ನೆಹರು ನೆನಪಾಗಲಿಲ್ಲವೇ?
ಭಗತ್, ಸುಖದೇವ್, ರಾಜ್, ಅಣ್ಣ?
ದೇವರ ಮನೆಯಲ್ಲಿ ಹೆಂಡತಿಗೆ
ಗಂಡ ಒದೆಯಲು
ದೂರದ ಗಡಿಯಲ್ಲಿ ನಿಂತ
ಸೈನಿಕರು ನಿನ್ನನ್ನು ಕಾಯಲಿಲ್ಲವೇ
ಅವರ ಮೊಗವನ್ನೊಮ್ಮೆ ಕಾಣು
ಈ ಪ್ರಶ್ನೆ ಇಡುವವರು ನಿಂದಕರೆ?

ದೇವಸ್ಥಾನದೆದುರಲ್ಲಿ
ನೂರಾರು ತಿರುಕರು
ಚಪ್ಪಲಿ ಕಾಯಲಷ್ಟು ಜನ
ಅದ ಕದಿಯಲಷ್ಟು ಜನ
ಎಂಜಲನ್ನಕ್ಕೆ ನೂರು ಕೈ
ಯಾತನೆಯ ಕೊಚ್ಚೆಯಲ್ಲಿ ಬಿದ್ದು
ಬಾಡಿಲ್ಲವೇ ಮಲ್ಲಿಗೆ ನೂರು

ಪವಾಡ ನೋಡಿ ಮರುಳಾದರು
ಬಯಲು ಮಾಡಿದವರಿಗುರುಳಾದರು
ಮುರಿದ ಮೂಳೆ ಜೋಡಿಸಿದ ದೇವ
ಮುರಿದುಕೊಳ್ಳುವಾಗೆಲ್ಲಿದ್ದ?
ಖಾಯಿಲೆ ಗುಣಪಡಿಸಿದಾತನಿಗೆ
ಬಂದದ್ದು ನಿಲುಕಲಿಲ್ಲವೇಕೆ?
ಇವೇ ಪವಾಡ ರಹಸ್ಯ ಬಯಲು

ಸುಳ್ಳನ್ನು ಸತ್ಯ ಮಾಡಬೇಡ
ಮುರಿಯಲು ವಿಜ್ಞಾನ ತುದಿಗಾಲಲ್ಲಿ
ಸೆಟೆದು ನಿಂತಿದೆ
ದೇವನೆಂಬುವನೊಬ್ಬ ನಾಮವಿಲ್ಲದ
ನಿರ್ವಿಕಾರ ಅಶರೀರ
ಜಗತ್ತಿನ ಸಮತೋಲನದಲ್ಲಿದ್ದಾನೆ
ನಿನ್ನ ನಂಬಿಕೆ ನಿನ್ನ ಕಾಯಲಿ
ಬೀದಿಗೆ ತಂದದನು ಡಾಂಬಿಕನಾಗಬೇಡ

18 comments:

 1. "ಈವತ್ತಿನ ಮೆಚ್ಚಿಗೆಯಾದ ಕವನ"

  ದೇವತಾ ಪುರುಷರಿಗಿಂತ ಲೇಸು
  ಮಾನವನ ದೈವಿಕ ಮುಖ

  ಭೇಷ್... ಭೇಷ್!

  ನನ್ನ ಬ್ಲಾಗಿಗೂ ಸ್ವಾಗತ.

  ReplyDelete
 2. ಚೆಂದ ಬಂದಿದೆ ಕವಿತೆ.ಎಷ್ಟೇ ಸಂದೇಶ ಸಾರಿದರೂ ಹಳ್ಳಿಗಳಿಗೆ ನುಗ್ಗಿಲ್ಲ ಮಾತುಗಳು.ದೇವರ ಅಸ್ಥಿತ್ವವನ್ನು ವ್ಯಾಪಾರೀಕರಣಕ್ಕೆ ಜೀವಂತಗೊಳಿಸಿದ್ದು ನಮ್ಮ ವ್ಯವಸ್ಥೆಗಳು. ಢಾಂಬಿಕತೆ ಧಾರಾಳವಾಗಿ ಮೆತ್ತಿಕೊಂಡಿದ್ದು ಇಲ್ಲೇ. ಅದರಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವುದು ನಮ್ಮಿಂದ ಮುಚ್ಚಿಟ್ಟಿಲ್ಲ. ಶುದ್ಧ, ದೈವೀಕತೆ,ಸಂಸ್ಕಾರದ ಹೆಸರಿನಲ್ಲಿ ಮಾರೆ ಮಾಚಿಕೊಳ್ಳುವ ಸಮಾಜದ ಹಲವು ಸತ್ಯಗಳು ಬೆತ್ತಲೆಯಾಗಿದ್ದು ಇಲ್ಲೆ. ಅದರಲ್ಲಿ ಹಣ,ಹೆಣ್ಣು ಮತ್ತು ಅಧಿಕಾರಗಳು ಭದ್ರವಾಗಿದೆ.

  ReplyDelete
 3. Sharath Chakravarthi24 November 2011 at 06:12

  ದೇವಸ್ಥಾನದೆದುರಲ್ಲಿ
  ನೂರಾರು ತಿರುಕರು
  ಚಪ್ಪಲಿ ಕಾಯಲಷ್ಟು ಜನ
  ಅದ ಕದಿಯಲಷ್ಟು ಜನ
  ಎಂಜಲನ್ನಕ್ಕೆ ನೂರು ಕೈ
  ಯಾತನೆಯ ಕೊಚ್ಚೆಯಲ್ಲಿ ಬಿದ್ದು
  ಬಾಡಿಲ್ಲವೇ ಮಲ್ಲಿಗೆ ನೂರು

  ನಿಮ್ಮೇಲ್ಲಾ ಪದ್ಯಗಳಲ್ಲೂ ಸಮಾಜದ ವಿಕೃತಿಯ ದರ್ಶನ ಮಾಡಿಸಿರುತ್ತೀರ. ಸಮಾಜದ ಹುಳುಕುಗಳನು ಖಾರವಾಗಿ ನೇರವಾಗಿ ನಿಮ್ಮ ಸಾಲುಗಳಲ್ಲಿ ಕಾಣಬಹುದು, ಚೆನ್ನಾಗಿದೆ ಪದ್ಯ.

  ReplyDelete
 4. ‎"ದೇವನೆಂಬುವನೊಬ್ಬ ನಾಮವಿಲ್ಲದ
  ನಿರ್ವಿಕಾರ ಅಶರೀರ
  ಜಗತ್ತಿನ ಸಮತೋಲನದಲ್ಲಿದ್ದಾನೆ"
  ಈ ಪದಗಳು ತುಂಬಾ ಚೆನ್ನಾಗಿವೆ ಮೋಹನ್.
  ಪದ್ಯದಲ್ಲಿನ, ಆಕ್ರೋಶ, ಆವೇದನೆ ಎಲ್ಲವೂ ಅರ್ಥವಾಗುತ್ತೆ.
  ಅದಕ್ಕೆ ನಿಮ್ಮನ್ನು ಮೋಹನ ಎನ್ನುವುದು. ಮನಕ್ಕೆ ಮುದ ನೀಡುವವನೆ ಮೋಹನ
  ಗುಡ್ ಬಾಯ್. ನಮಸ್ಕಾರ.

  ReplyDelete
 5. Prakash Srinivas ‎.24 November 2011 at 06:14

  ಪವಾಡ ನೋಡಿ ಮರುಳಾದರು
  ಬಯಲು ಮಾಡಿದವರಿಗುರುಳಾದರು
  ಮುರಿದ ಮೂಳೆ ಜೋಡಿಸಿದ ದೇವ
  ಮುರಿದುಕೊಳ್ಳುವಾಗೆಲ್ಲಿದ್ದ?
  ಖಾಯಿಲೆ ಗುಣಪಡಿಸಿದಾತನಿಗೆ
  ಬಂದದ್ದು ನಿಲುಕಲಿಲ್ಲವೇಕೆ?
  ಇವೇ ಪವಾಡ ರಹಸ್ಯ ಬಯಲು

  ತುಂಬಾ ಚೆನ್ನಾಗಿದೆ ಗೆಳೆಯ .........

  ReplyDelete
 6. ಮೆಚ್ಚಿದೆ.

  ReplyDelete
 7. ದೇವನೆಂಬುವನೊಬ್ಬ ನಾಮವಿಲ್ಲದ
  ನಿರ್ವಿಕಾರ ಅಶರೀರ
  ಜಗತ್ತಿನ ಸಮತೋಲನದಲ್ಲಿದ್ದಾನೆ
  ಒಳ್ಳೆಯತನ ಕಾಣುವಾಸೆಯಿದ್ದರೆ
  ಒಬ್ಬನೇ ಒಳ್ಳೆಯವನಲ್ಲ
  ನೆಲ ನುಡಿ ಮಣ್ಣಿಗೊಮ್ಮೆ ಕೈ ಜೋಡಿಸು.... ಸತ್ಯವಾದ ಮಾತುಗಳು... : )

  ReplyDelete
 8. Guruprasad Acharya24 November 2011 at 06:16

  ಮೋಹನ್ ಸರ್ ಈ ಕವಿತೆಯನ್ನು ವಿಮರ್ಷಿಸುತ್ತಿಲ್ಲ. ಆದ್ರೆ ವಿಜ್ನಾನ ಯುಗದಲ್ಲಿ ಡಾಂಬಿಕತೆ ಬೇಡ ಂದಿರಲ್ಲ ಅದು ಯಾವುದು ಅನ್ನುವುದು ಸ್ಪಷ್ಟವಾಗಲಿಲ್ಲ.

  ReplyDelete
 9. Guruprasad Acharya ರವರೇ... ನೀವು ಈ ಕವಿತೆಯನ್ನು ವಿಮರ್ಶೆ ಮಾಡಿದರು ಬೇಸರವಿಲ್ಲ. ವಿಮರ್ಶೆ ಎಂದೇ ಹೇಳಿ. ನೀವು ವಿಮರ್ಶೆ ಮಾಡಿದರೆ ಕೆಲವು ಕೊರತೆಗಳನ್ನು ತಿಳಿದುಕೊಳ್ಳಬಹುದು. ಬೇಸರಿಸಿಕೊಳ್ಳುವಂತಹುದು ಏನೂ ಇಲ್ಲ. ಡಾಂಬಿಕತೆ ಎಂದರೆ ಒಣ ಮೆಚ್ಚುಗೆ. ಕೆಲವರು ಮಾಡಬೇಕಾದ ಕೆಲಸವನ್ನು ಬಿಟ್ಟು ತಾವು ಮೆಚ್ಚಿಕೊಂಡ ವ್ಯಕ್ತಿಯ ಪವಾಡಗಳನ್ನು (ಉದಾಹರಣೆಗೆ ಖಾಲಿ ಕೈಯಲ್ಲಿ ವಿಭೂತಿ ಮೂಡಿಸುವುದು, ಸತ್ತವರನ್ನು ಬದುಕಿಸುವುದು, ಖಾಲಿ ಕೊಡದಲ್ಲಿ ನೀರು ಸುರಿಸುವುದು ಹೀಗೆ) ಬೀದಿಯಲ್ಲಿ ಹಂಚಲು ಬರುತ್ತಾರೆ. ಅಂತಹ ಡಾಂಬಿಕತನವನ್ನು ನಂಬಿ ಅವರು ಮುಂದುವರೆದಿರಲೂ ಬಹುದು. ಕೆಲವೊಮ್ಮೆ ನಂಬಿಕೆ ಮನಸ್ಸನ್ನು ಗಟ್ಟಿಗೊಳಿಸುತ್ತದೆ. ಆದರೆ ವಿಜ್ಞಾನ ಇಂತಹ ವಿಚಾರಗಳನ್ನು ಬೆತ್ತಲೆ ಮಾಡುತ್ತಲೇ ಬರುತ್ತಿದೆ. ಅನೇಕೆ ಸಂಘಸಂಸ್ಥೆಗಳು (ಉದಾಹರಣೆಗೆ ಜ್ಞಾನ ವಿಜ್ಞಾನ ಭಾರತಿ, ಬೆಂಗಳೂರು) ಅವುಗಳನ್ನು ಬಯಲು ಮಾಡಲು ತುದಿಗಾಲಲ್ಲಿ ನಿಂತಿವೆ. ಆ ಅರ್ಥದಲ್ಲಿ ಬೀದಿಗೆ ತಂದು ಸುಳ್ಳು ಪವಾಡಗಳನ್ನು ಹಂಚಿ ಡಾಂಬಿಕನಾಗಬೇಡ ಎಂದು ಹೇಳಿದೆ.

  ReplyDelete
 10. ಮನಸ್ಸು ನಾಟಿತು ಈ ಕವಿತೆ.. ಮನದ ಭಾವನೆಯನ್ನು ವ್ಯಕ್ತ ಪಡಿಸಿದ ಶೈಲಿ ಅಧ್ಬುತ..

  ReplyDelete
 11. ಹೌದು.. ನಿಮ್ಮ ಮಾತು ಸತ್ಯ... ಪವಾಡ ಮಾಡುವ ಒಬ್ಬ ವ್ಯಕ್ತಿ ಸಾಮಾಜಿಕ ಕಳಕಳಿಯಿಂದಲೂ ಉತ್ತಮವಾಗಿರಬಹುದು. ಅಂತಹ ಉದಾಹರಣೆಗಳು ತುಂಬಾ ಇವೆ. ಸಾಮಾಜಿಕ ಕಳಕಳಿಯನ್ನು ಮುಂದಿಟ್ಟುಕೊಂಡು ಅವರ ಸುಳ್ಳನ್ನು ಪ್ರಬುದ್ಧರು ಸತ್ಯವೆಂದು ಒಪ್ಪಿಕೊಳ್ಳಬೇಕೆಂದೇನೂ ಇಲ್ಲವಲ್ಲ. ಸಾಮಾನ್ಯ ಮನುಷ್ಯನಂತೆ ಹಸಿವು ತೃಷೆ ಸಾವು ಹೊಂದಿರುವ ಆ ವ್ಯಕ್ತಿಯನ್ನು ದೇವರು ಎಂದು ಅವರು ಕರೆದು ನಮ್ಮ ಮೇಲೆ ಅದನ್ನು ಹೇರುವುದು ಸರಿಯಲ್ಲ. ದೇಶದ ಒಳಿತಿಗೆ ಶ್ರಮಿಸಿ ಸ್ವಾತಂತ್ರ್ಯ ತಂದುಕೊಟ್ಟ ಸೇನಾನಿಗಳಿಗೆ ಗೌರವ ಸಮರ್ಪಿಸದೇ, ಸಮಾಜದ ತೊಡಕುಗಳನ್ನು ನಮ್ಮದಲ್ಲ ಹಾಳಾಗಿಹೋದರೆ ಹೋಗಲಿ ಎಂದಂದುಕೊಂಡು, ಹೋರಾಟ ಮಾಡುವವರಿಗೂ ಕಿಂಚಿತ್ತೂ ಗೌರವ ಕೊಡದೆ, ರಾಷ್ಟ್ರೀಯ ಹಬ್ಬಗಳನ್ನು ಕಡೆಗಣಿಸಿ, ಹಣದ ಆಸೆಗೆ ಆ ವ್ಯಕ್ತಿಯ ಹೆಸರಲ್ಲಿ ಸಂಸ್ಥೆ ನಡೆಸಿಕೊಂಡು ಆತನನ್ನೂ ಮಾತ್ರ ವೈಭವೀಕರಿಸಿಕೊಂಡು ಹೋದಾಗ ಅದು ಡಾಂಬಿಕತನವಲ್ಲದೇ ಇನ್ನೇನು. ಅದಕ್ಕೆ ಕವಿತೆಯ ಮೊದಲ ಸಾಲು ನೋಡಿ. ಪೂಜಿಸಲು ಅವರೊಬ್ಬರೇ ಕಾಣುವರೇ? ಎಂದು ಪ್ರಶ್ನಿಸಿರುವುದು...

  ReplyDelete
 12. Rudrappa Madagunki24 November 2011 at 06:21

  ವೈಜ್ಞಾನಿಕ ದೃಷ್ಟಿಕೋನದ ಸಮರ್ಥನೆಯ, ಸಮರ್ಥ ಸಾಲುಗಳು,

  ಮುರಿದ ಮೂಳೆ ಜೋಡಿಸಿದ ದೇವ
  ಮುರಿದುಕೊಳ್ಳುವಾಗೆಲ್ಲಿದ್ದ?

  ಎಷ್ಟೋ ಜನರು ನಮ್ಮ ನಿಮ್ಮಲಿರುವ ದೇವನ ಅರಿಯದೆ ವಂದಿಸದೆ ಅಜ್ಞಾನಿ ಗಳಾಗುವರು... ಕೂಡಿ ಹಿಡಿದ ಶ್ರಮಕ್ಕೆ ಅಭಿನಂದನೆಗಳು...

  ReplyDelete
 13. Pramod Shrinivasa24 November 2011 at 06:22

  ವಿಭಿನ್ನ ವಸ್ತುವುಳ್ಳ ಕವನ ... ಸೂಕ್ಷ್ಮವಾದ ಸಾಮಾಜಿಕ ಕಳಕಳಿಯಿದೆ ...

  ಆದರು ಈ ತರಹದ ಕವನಗಳು ಕಾವ್ಯದ ಅಲಂಕಾರಗಳು ಕಡಿಮೆಯಾಗಿ ತುಸು ಬೋಧನೆಯ ಶೈಲಿಗೆ ಜಾರಿದೆ ಎಂದೆನಿಸುತ್ತದೆ .. ಇದು ನಿಜವೆ ?? ನಿಜವೆ ಆದರೆ ಕಾರಣವೇನು ??? ಅಥವ ನನ್ನ ಅನಿಸಿಕೆಯಲ್ಲಿ ಹುರುಳಿಲ್ಲವೆ ... ಸ್ವಲ್ಪ ವಿವರಿಸುತ್ತೀರ

  ... ಒಟ್ಟಿನಲ್ಲಿ ಇಷ್ಟವಾಯಿತು ಮಿತ್ರರೆ :) :) :)

  ReplyDelete
 14. ನವೋದಯ ಶೈಲಿಯ ಕವನಗಳಲ್ಲಿ ಅಲಂಕಾರ, ರಮ್ಯ ಮತ್ತು ಪ್ರಾಸಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ. ನವ್ಯ ಶೈಲಿಯಲ್ಲಿ ಮಾನವೀಯ ಮೌಲ್ಯ, ತತ್ವ, ಸತ್ಯಗಳ ಉದ್ದೇಶ ಮೂಡಿಸುತ್ತ ಹೋಗುತ್ತಾರೆ. ದಲಿತ ಬಂಡಾಯ ನವ್ಯದ ಪ್ರಕಾರವಾದರೂ ಒಂದು ಮಿತಿಯಲ್ಲಿರುತ್ತದೆ. ಇಲ್ಲಿ ಹರಿತ ಪದಗಳ ಮೂಲಕ ಸಮಾಜಕ್ಕೊಂದು ಸಂದೇಶವನ್ನು ಸಾರುವುದು ಧ್ಯೇಯವಾಗಿರುತ್ತದೆ. ಆ ನಿಟ್ಟಿನಲ್ಲಿ ಬಂಡಾಯ ಕವಿತೆಗಳು ಬರೆಯುವಾಗ ವಿಚಾರಗಳನ್ನು ಮುಟ್ಟಿಸುವೆಡೆಗೆ ಬರಹಗಾರನ ಮನಸ್ಸಿರಬೇಕು. ನಾನು ಆ ನಿಟ್ಟಿನಲ್ಲಿ ಪ್ರಯತ್ನಿಸಿದ್ದೆ. ಆದರೂ ನಿಮ್ಮ ಪ್ರೀತಿ ಪೂರ್ವಕ ಅಭಿಪ್ರಾಯವನ್ನು ಸ್ವೀಕರಿಸಿ ಪರಿಷ್ಕರಿಸಿಕೊಳ್ಳುತ್ತೇನೆ. ವಂದನೆಗಳು... .

  ReplyDelete
 15. Pramod Shrinivasa24 November 2011 at 06:23

  ಧನ್ಯವಾದ ಮಿತ್ರ.... ನನಗಿದರ ವ್ಯತ್ಯಾಸದ ಅರಿವಿರಲಿಲ್ಲ ..

  ReplyDelete
 16. ಕವಿತೆ ಬರೆಯುವಾಗ ಈ ರೀತಿಯ ನಿಯಮಗಳನ್ನು ಮನಸ್ಸಿನಲ್ಲಿಟ್ಟು ಬರೆಯಬೇಕೆಂದೇನಿಲ್ಲ. ಕಾಲದಿಂದ ಕಾಲಕ್ಕಾದ ಬದಲಾವಣೆಗಳೇ ಅಲ್ಲವೇ ಅವುಗಳು. ಅವುಗಳು ಒಂದೊಂದು ಘಟ್ಟದ ಕವಿಗಳು ಹುಟ್ಟುಹಾಕಿದ ಪ್ರಕಾರಗಳು. ಹಳೆಗನ್ನಡದ ಕವಿತೆಗಳಿಗಿದ್ದ ವೃತ್ತ ಈಗೆಲ್ಲಿದೆ. ನಾವು ಬರೆದ ಕವಿತೆಗಳು ತನ್ನಿಂತಾನೇ ಈ ನಿಯಮಗಳಿಗೆ ತೂರಿಕೊಳ್ಳುತ್ತವಷ್ಟೆ. ನೀವು ಕೇಳಿದ ಪ್ರಶ್ನೆಗೆ ಉತ್ತರಿಸಿದೆ ಅಷ್ಟೆ. ವಂದನೆಗಳು... .

  ReplyDelete
 17. ಚೆಂದ ಬಂದಿದೆ ಕವಿತೆ.ಎಷ್ಟೇ ಸಂದೇಶ ಸಾರಿದರೂ ಹಳ್ಳಿಗಳಿಗೆ ನುಗ್ಗಿಲ್ಲ ಮಾತುಗಳು.ದೇವರ ಅಸ್ಥಿತ್ವವನ್ನು ವ್ಯಾಪಾರೀಕರಣಕ್ಕೆ ಜೀವಂತಗೊಳಿಸಿದ್ದು ನಮ್ಮ ವ್ಯವಸ್ಥೆಗಳು. ಢಾಂಬಿಕತೆ ಧಾರಾಳವಾಗಿ ಮೆತ್ತಿಕೊಂಡಿದ್ದು ಇಲ್ಲೇ. ಅದರಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವುದು ನಮ್ಮಿಂದ ಮುಚ್ಚಿಟ್ಟಿಲ್ಲ. ಶುದ್ಧ, ದೈವೀಕತೆ,ಸಂಸ್ಕಾರದ ಹೆಸರಿನಲ್ಲಿ ಮಾರೆ ಮಾಚಿಕೊಳ್ಳುವ ಸಮಾಜದ ಹಲವು ಸತ್ಯಗಳು ಬೆತ್ತಲೆಯಾಗಿದ್ದು ಇಲ್ಲೆ. ಅದರಲ್ಲಿ ಹಣ,ಹೆಣ್ಣು ಮತ್ತು ಅಧಿಕಾರಗಳು ಭದ್ರವಾಗಿದೆ.

  ReplyDelete
 18. Mallikarjuna Gowdru24 November 2011 at 06:40

  ‎"ಸುಳ್ಳನ್ನು ಸತ್ಯ ಮಾಡಬೇಡ
  ಮುರಿಯಲು ವಿಜ್ಞಾನ ತುದಿಗಾಲಲ್ಲಿ
  ಸೆಟೆದು ನಿಂತಿದೆ
  ದೇವನೆಂಬುವನೊಬ್ಬ ನಾಮವಿಲ್ಲದ
  ನಿರ್ವಿಕಾರ ಅಶರೀರ
  ಜಗತ್ತಿನ ಸಮತೋಲನದಲ್ಲಿದ್ದಾನೆ
  ನಿನ್ನ ನಂಬಿಕೆ ನಿನ್ನ ಕಾಯಲಿ
  ಬೀದಿಗೆ ತಂದದನು ಢಾಂಬಿಕನಾಗಬೇಡ" :)

  ಸುಂದರ ಸಾಲುಗಳು ಮೋಹನಣ್ಣಾ..!
  ನಿಮ್ಮಲ್ಲಿನ ಕವಿತಾಶಕ್ತಿ ಅದ್ಭುತವಾಗಿದೆ..!

  ReplyDelete