ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Sunday, 20 November 2011

ಪುಂಸತ್ವದ ಮಕ್ಕಳು...

ಪುಂಸತ್ವದ ಮಕ್ಕಳು...

ಅಲ್ಲೊಬ್ಬಳು ಹೆತ್ತರೆ
ಪ್ರಪಂಚಕ್ಕೆಲ್ಲ ಹೊಸಗೆ
ಹುಟ್ಟಿದ್ದು ಮಂಗ
ಹಡೆದವಳು ಸಾರಂಗ
ಸಾರಂಗದ ಹಿಕ್ಕೆಯೂ
ಫಸಲಿಗೆ ರಸದೂಟ
ಹೆತ್ತದ್ದು ಗಂಡಸೇ?

ನಾನೋ ತುಂಬು ಗರ್ಭಿಣಿ
ರಾತ್ರೋರಾತ್ರಿ ಪ್ರಸವ
ಕೊಸರುತ್ತಿದೆ ನೋವು
ಕವಿತೆಯೊಂದ ಹೆರಲು
ಹುಟ್ಟಿದ ಮಕ್ಕಳೆಲ್ಲ
ಸತ್ತರು ಸರತಿಯಲ್ಲಿ
ಹಳಸಲು ಭಿಕ್ಷೆ, ಮುಷ್ಟಿ ಕೂಳಿಲ್ಲ

ಪದಗಳ ದುಡಿವ ಗಂಡ
ಹದ ಮಾಡುವುದು
ಕಲಿತಿಲ್ಲ
ಶಾಯರಿ ಸುರಿಸಿ
ನಗುವ ಮಗು ನೀಡಲಿಲ್ಲ

ಮಿಲನಕ್ಕೆರಡಾದರೂ
ಸಿಂಬಳ ಸುರಿಸಿ
ಯಾರೂ ಮುಟ್ಟಲಿಲ್ಲ
ತೊಗಲಿಲ್ಲದ ಪಕಳೆ
ಮತ್ತೆ ಮತ್ತೆ ಹುಟ್ಟುತ್ತಿವೆ
ಪುಂಸತ್ವದ ಮಕ್ಕಳು
ಭ್ರೂಣಹತ್ಯೆ ಮಹಾಪಾಪ

ಆದರೆ ಅವಳಿಜವಳಿ
ಕಸದ ತೊಟ್ಟಿಗೊಂದು
ವ್ಯಂಗ್ಯದ ಬುಟ್ಟಿಗೊಂದು
ಮತ್ತೆ ಹೆರಿಗೆಬೇನೆ
ಎಷ್ಟು ಹೆರಲವ್ವ
ಒಂದು ಮುದ್ದು ಮಗುವಿಗೆ
ಕೆನ್ನೆ ಲೊಚಗುಡಬೇಕು
ಮುಟ್ಟಿದವನು ಮತ್ತೆ ಮುಟ್ಟಿ
ಕೆನ್ನೆ ಕಿವಿ ಕಚ್ಚಿ
ಅಸೂಯೆ ಪಡಬೇಕು
ಬೀದಿಯಲ್ಲಿ ತುಂಟನಾಗಿರಲೆಂದರೆ
ಎಲ್ಲರೂ ಒದೆಯುವವರೇ

ತುಂಬಿದುದರದೊಳಗಿರುವ
ನನ್ನ ಮುಂದಿನ ಮಗುವನ್ನು
ಬೆಳೆಸುವೆನೆದೆ ಸೆಟೆಸಿ
ಹುಟ್ಟಿ ಹುಲಿಯಾಗಿ
ಕಟ್ಟುವನು, ಹೌದು ಕಟ್ಟುವನು
ಕುಟ್ಟಿ ಕುಟ್ಟಿ ಹದಕ್ಕೆ ತರುವನು

ತೆಗಳಿದವ ಬಾಯಿಗೆ
ಅಂಟಾಗಿ, ಹೃದಯಕ್ಕೆ ನಂಟಾಗಿ
ಬಾಳುವನು
ಜಗವ ಗೆಲ್ಲುವನು
ನನ್ನ ಮಗನು, ಜಗವಾಗುವನು
ಜಗವಾಗಿ ನಗುವನು
ಮಿಲನದುತ್ತಂಗದಲ್ಲಿ

6 comments:

 1. ಮೋಹನ್ ಜೀ, ಇವತ್ತು ಬ್ಲಾಗ್ ನೋಡಿದ್ದು.. ಕೆಲವೊಂದು ಮೊದಲು ಓದಿದ್ದೇನೆ. ಸ್ಪಷ್ಟವಾಗಿ ಯಾವುದು ಎನ್ನಲಾಗದಷ್ಟು ಇದೆ.

  ಸ್ವಾಭಾವಿಕವಾಗಿ ನೀವು ಬರೆಯುವುದಕ್ಕೂ ನಾನು ಓದುವುದಕ್ಕೂ ಸಾಮ್ಯತೆ ಇದೆ. ಈ ಬ್ಲಾಗ್ ಕೂಡ.
  ಕವನಗಳು ಚೆನ್ನಾಗಿದೆ.

  ReplyDelete
 2. ಸಮರ್ಥ ಪದಗಳು ಬಳಕೆಯಾಗಿವೆ ನಿಮ್ಮ ಭಾವಕ್ಕೆ. ಕೆಲವು ಭಾವಾರ್ಥಗಳು ಸೊಗಸಾಗಿ ಬೆಳಕು ಚೆಲ್ಲಿವೆ. ಆಸ್ವಾಧಿಸಿದ ನಂತರವೂ ಕುಳಿತುಕೊಳ್ಳುವ ಸರಿಯಾದ ಮಾತು."ತೆಗಳಿದವರ ಬಾಯಿಗೆ ಅಂಟಾಗಿ, " ಹೊಸ ಪದ ಪ್ರಯೋಗ ಅನ್ನಿಸಿತು. ಪ್ರತೀ ಕವಿತೆಯಲ್ಲಿ ಇಂತಹ ನಿಮ್ಮ ಸಾಲುಗಳು ಗಮನ ಸೆಳೆಯುತ್ತಿದೆ. ಅದು ಸಾಹಿತ್ಯಕ್ಕೆ ನಿಮ್ಮ ಪಯಣವನ್ನು ಸುದೀರ್ಘಗೊಳಿಸಲಿ ಅಂತ ಹಾರೈಸುತ್ತೇನೆ. ಶುಭವಾಗಲಿ.

  ReplyDelete
 3. ಚನ್ನಾಗಿದೆ ಮೋಹನ್ ಸರ್.ಪುಂಸತ್ವದ ಮಕ್ಕಳು ಮಿಲನದುತ್ತುಂಗದಲ್ಲಿ ಜಗವಾಗಿ ನಗುವರೆಂಬ ಆತ್ಮ ಸಂತೃಪ್ತಿಯ ಭಾವವನ್ನು ಬಹು ಸೊಗಸಾಗಿ ಪ್ರತಿಬಿಂಬಿಸಿದ್ದೀರಿ.

  ReplyDelete
 4. ನಿಜವಾದ ಅನಿಸಿಕೆಗಳು... ಮುಚ್ಚಿಡಲು ಒಪ್ಪದ ಮನಸ್ಸು ಹೇಳಿಯೇ ಬಿಟ್ಟಿತ್ತು ಈ ಸತ್ಯವ...
  ನಿಮ್ಮ ಕವಿತೆ ಸುಂದರತೆಯಲ್ಲಿ ಅತಿ ಸುಂದರ ... ವಿಷಯ ವಸ್ತು ಚಿಂತನೆ ಮಾಡುವ ಅಂಶವಾಗಿದ್ದರೂ ಸಹ.. ಪದ ಪ್ರಯೋಗ ಅದನ್ನು ಸುದರವಾಗಿ ಮಾಡಿದೆ.. :)

  ReplyDelete
 5. ಹೊಸ ಹೊಸ ಪದಗಳ ಪ್ರಯೋಗ ಚೆನ್ನಾಗನಿಸಿತು ....ಕವನ ತುಂಬಾನೇ ಚೆನ್ನಾಗಿ ಮೂಡಿಬಂದಿದೆ ..! ಅಭಿನಂದನೆ !

  ReplyDelete
 6. ಕವಿತೆಯಲೇ ಗರ್ಭ ಕಟ್ಟಿ, ಓದುಗರಿಗೆ ಪ್ರಸವ ವೇದನೆಯ ಸುಖ(!) ನೀಡುವವರು ನೀವು ಮೋಹನ್.... ಎಳೆ ಎಳೆಯಾಗಿ ಹೆರಿಗೆಯಾಗಿವೆ ಪದಪುಂಜಗಳು...ಖುಷಿ ನೀಡಿದೆ....

  ReplyDelete