ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Sunday, 20 November 2011

ಬನ್ನಿರಪ್ಪ ಬನ್ನಿ..

ಬನ್ನಿರಪ್ಪ ಬನ್ನಿ, ಓಡೋಡಿ ಬನ್ನಿ
ಅಕ್ಕ ನೀವು ಬನ್ನಿ, ಬನ್ನಿ ಹಿರಿಯರೆ
ಇಲ್ಲೊಬ್ಬ ಸತ್ತಿದ್ದಾನೆ ನೋಡಿ
ಚಟ್ಟಕಟ್ಟಿ ಭವ್ಯ ಮೆರವಣಿಗೆ
ಬಂದು ಕೂಡಿಕೊಳ್ಳಿ, ಬನ್ನಿ

ಸುಕ್ಕುಗಟ್ಟಿದ ಬದುಕನ್ನು ನುಂಗಿ
ನೂರು ಎಕ್ಕಡ ನೆಕ್ಕಿ ಗದ್ದುಗೆ ಏರಿ
ಸತ್ಯವನ್ನತ್ಯಾಚಾರ ಮಾಡಿದವನು
ಉಂಡ ಮನೆಗೆ ಊಸುಬಿಟ್ಟ
ಭಂಡನಿವನು ಎಚ್ಚರವಾಗಿಬಿಟ್ಟಾನು
ಬನ್ನಿ ಹೂತುಬಿಡೋಣ

ಬದುಕೊಂದು ದಿನ ಅತ್ತಿತ್ತು
ಅತ್ತು ಅತ್ತು ಇವನ ಹೆತ್ತಿತ್ತು
ಇಂದು ಸತ್ತನಪ್ಪ
ಸಾವಿರ ಜನರ ರಕ್ತ ಕುಡಿದು
ಮಸಣದ ಮೇಲೆ ಮನೆ ಕಟ್ಟಿದ್ದ
ಕೇರಿ ಕೇರಿಯ ಮುಂಡೆಯರು
ಇವನ ಹೆಂಡಿರಂತೆ
ಅವರೂ ಕುಣಿಯುತ್ತಿದ್ದಾರೆ

ಊರೆ ನುಂಗಿದ್ದ
ಮಾರಿಯನ್ನು ಬಿಡದೆ
ನೂರು ಮಲ್ಲಿ ಗೆ ಬಾಡಿಸಿ
ಇಂದು ನಾರುತ್ತಿದ್ದಾನೆ
ಬನ್ನಿ ಬನ್ನಿ ಅನ್ಯಾಯವನ್ನು
ಹೂತು ಸಂಭ್ರಮಿಸೋಣ

ಮರೆಯದೇ ಶ್ರಾದ್ಧಕ್ಕೆ ಬಂದುಬಿಡ್ರಪ್ಪ
ನರಕಕ್ಕೆ ಹೋಗದೆ
ಮಣ್ಣಲ್ಲೂ ಕೊಳೆಯದೆ
ನನ್ನ ಮನೆ ಸೂರಿನಲ್ಲಿ ಉಳಿದುಬಿಟ್ಟಾನು?
ಆಯಿತು, ಆಯಿತು, ಒಪ್ಪಿಕೊಂಡೆ
ತಿಥಿಗೆ ಅವನ ಭಾವಚಿತ್ರವಿಡುವುದಿಲ್ಲ
ನನಗೂ ಮುಖ ನೋಡಲಿಷ್ಟವಿಲ್ಲ ಮಾರಾಯ್ರೆ
ರಾಮ ರಾಮ ಸಾಕಪ್ಪ ಇವನಾಟ

12 comments:

 1. ಹತಾಶೆಯ ಕೊನೆಯ ಮೆರವಣಿಗೆಯಾಗಲಿ. ಬಂಡಾಯವನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದು.

  ReplyDelete
 2. Somashekhar Banavasi ಮನದ ವೇದನೆಯನ್ನು ಕಕ್ಕಿ ಹೊರಹಾಕಿ ಹೃದಯದ ಭಾರ ಹಗುರ ಮಾಡಿಕೊಂಡಿದ್ದೀರಿ.ಸತ್ಯವನ್ನು ಅತ್ಯಾಚಾರ ಮಾಡ ಹೊರಟವನ ಮೇಲಿನ ಆಕ್ರೋಷ ಮುಗಿಲು ಮುಟ್ಟಿದೆ.ಇಂಥ ನಿರ್ಮಾನುಷ ವ್ಯಕ್ತಿಗಳು ಸಮಾಜದಲ್ಲಿ ಇದ್ದರೆಷ್ಟು-ಬಿಟ್ಟರೆಷ್ಟು ಇವರಿಗೆ ಚಟ್ಟ ಕಟ್ಟುವುದೇ ಒಳಿತೆನ್ನುವ ರೋಷಾಗ್ನಿ ಜ್ವಾಲೆ ಕವನದಲ್ಲಿ ಅಚ್ಚೊತ್ತಿದೆ.

  ReplyDelete
 3. ಪಟ್ಟಭದ್ರ ಹಿತಾಸಕ್ತಿಗಳಿಗೆ ಒಳ್ಳೆಯ ಮಾತು ನಿಮ್ಮ ಸಾಲುಗಳಲ್ಲಿ ಇಣುಕಿದವು. ಹಾಗೇ ಬರಬೇಕು.ಹೊಡೆದರೆ ಮಾತ್ರ ಸಾಲದು. ಅದು ಒಳಿತನ್ನು ಮಾಡಬೇಕು,ಇತರರಿಗೆ ಸಂದೇಶ ಸಾರುವಂತಿರಬೇಕು. ಅದು ನಿಮ್ಮ ಕವಿತೆಯಲ್ಲಿ ಉಂಟು.ಚೆನ್ನಾಗಿದೆ.

  ReplyDelete
 4. ವಂದನಗಳು...

  ReplyDelete
 5. Rudresh Rajashekarai22 November 2011 at 18:24

  Mohan V Kollegal ರವರಿಗೆ ನನ್ನ ಆತ್ಮೀಯ ಅಭಿನಂದನೆ... ನಿಮ್ಮಲ್ಲಿರುವ ಎಲ್ಲ ಕವನಸಂಕಲನಗಳು ತುಂಬಾ ಅತ್ಯದ್ಭುತವಾಗಿವೆ... ಬರೆಯಿರಿ ಬರೆಯುತ್ತಾ ಇರಿ... ಸಮಾಜವನ್ನು ತಿದ್ದುವಂತಹ ಬರಹಗಳು ಹೆಚ್ಚು ಇವೆ... ಅವೇ ಈಗ ನಮ್ಮ ಆಧಾರ... ಅದರ ಮೊಲಕ ಸ್ವಸ್ಥ ಸಮಾಜದ ಕನಸ್ಸನ್ನು ಕಾಣೋಣ

  ReplyDelete
 6. ಆಕಾಶ ಭೂಮಿ ತಲೆ ಕೆಳಗಾದರೂ, ಜಯ ಸತ್ಯಕ್ಕೇ.. ಇದು ಖಂಡಿತ.. ಸತ್ಯದಲ್ಲಿದ್ದವನು ಯಾರಿಗೂ ಹೆದರಬೇಕಂತಿಲ್ಲ..
  "ಸತ್ಯಕ್ಕೇ ಸಾವಿಲ್ಲ, ಸುಳ್ಳಿಗೆ ಜಯವಿಲ್ಲ" ಎಂಬ ಗಾದೆ ಸಾರ್ವಕಾಲಿಕ.. ಮನದ ಕದ ತಟ್ಟುವ ಕವಿತೆ..

  ReplyDelete
 7. ಇವನು ರಕ್ತಬೀಜಾಸುರ ವಂಶದವನು, ಒಬ್ಬ ಸತ್ತರೆ ಇನ್ನೊಬ್ಬ ಹುಟ್ಟುತ್ತಾನೆ... : ( .. ಸಾಮಾನ್ಯ ಪ್ರೇಮಗವನಗಳಿಗಿಂತ, ವಿಭಿನ್ನ ವಸ್ತುವಿನ ಆಯ್ಕೆ.. ಸೊಗಸಾಗಿಗೆ..

  ReplyDelete
 8. ದಾವಣಗೆರೆಯಲ್ಲಿದ್ದಾಗ, ನನ್ನ ಸ್ನೇಹಿತರು, "ಬಗಣಿ ಗೂಟ" ದ ಕಥೆ ಹೇಳುತ್ತಿದ್ದರು. ಒಂದು ಊರಿನಲ್ಲಿ ಒಬ್ಬ. ತಂದೆ ತಾಯಿ ಯಾರು ಎಂದು ಯಾರಿಗೂ ಗೊತ್ತಿಲ್ಲ.
  ಅವರಿವರ ಮನೆ ಚಾಕರಿ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ. ಅವನಿಗೊಂದು ಕೆಟ್ಟ ಚಾಳಿ. ಅವರಿವರಿಗೆ ಹಚ್ಚಿ ಹಾಕಿ, ತರಲೆ ಮಾಡಿ, ಜಗಳ ಹುಟ್ಟಿಸಿ, ಮಜಾ ತೊಗೊಳ್ತಾ ಇದ್ದ.
  ಅವನಿಂದ ಜನ ಬೇಸತ್ತಿದ್ದರು. ಕಾಲಾನುಕಾಲಕ್ಕೆ ಅವನ ಉಪಟಳ ಜಾಸ್ತಿಯಾಗಿ ಜನ ಇವ ಸತ್ತರೆ ಸಾಕು ಅಂತ ಅಂದ್ಕೊತಾ ಇದ್ರಂತೆ. ಅವನಿಗೂ ವಯಸ್ಸಾಗಿ, ಸಾಯೋ ಕಾಲ
  ಬಂದಾಗ, ಊರ ಜನರನ್ನು ಕರೆದು, ಅವ" ನಂಗೆ ಅಪ್ಪ ಅಮ್ಮ ಇಲ್ಲ. ಹಿಂದಿಲ್ಲ ಮುಂದಿಲ್ಲ. ನಿಮಗೆಲ್ಲ ಶಾನೆ ತೊಂದರೆ ಕೊಟ್ಬುತ್ತೆ. ನಾ ಸತ್ತ ಮೇಲೆ ನನ್ನ ಬುಲ್ಡೆಗೆ ಒಂದು ಗೂಟ ಹೊಡೆದು ಬಿಡಿ.ನನಗೆ ಮುಕ್ತಿ ಸಿಗ್ತೈತೆ" ಅಂದ. ಸರಿ ಇವ ಸತ್ತರೆ ಸಾಕಪ್ಪ ಅಂದ್ಕೊಂಡು, " ಆಯ್ತು" ಅಂದರು. ನಾಲ್ಕಾರು ದಿನ ಆದ ಮೇಲೆ ಅವ ಸತ್ತ. ಅವ ಕೇಳಿದ್ದಿ ಮಾಡ್ದೆ ಹೋದ್ರೆ ಎಲ್ಲಿ ಪಿಶಾಚಿ ಯಾಗಿ ಕಾಡ್ತಾನೋ ಅಂತ ಅವನ ಬುಲ್ಡೆಗೆ ಒಂದು ಬಗಣಿ ಗೂಟ ಹೊಡೆದು ಹೂತಾಕಿದ್ರಂತೆ. ಊರು ನಿರಾಳ ಆಯ್ತು ಅಂತ ಎಲ್ಲರೂ ನಿಟ್ಟುಸಿರು ಬಿಡೋ ಹೊತ್ಗೆ ನಾಲ್ಕು ದಿನ ಕಳೆದು ಪೋಲೀಸ್ ನವರು ಬಂದರಂತೆ. " ಊರವರೆಲ್ಲ ಸೇರ್ಕೊಂಡು ನನ್ನ ಸಾಯಿಸಬೇಕು ಅಂತೆ ಹುನ್ನಾರ ಮಾಡ್ತಾ ಇದ್ದಾರೆ. ನಂ ತಲೆಗೆ ಬಗಣಿ ಗೂಟ ಹೊಡೀತೀವೆ ಅಂತೆ ಹೆದ್ರಸ್ತಾ ಇದ್ದಾರೆ" ಅಂತ ಒಂದು ಕಂಪ್ಲೈಂಟ್ ಬರೆದು ಹಾಕಿ ಸತ್ತೋಗಿದ್ದ.
  ಆಮೇಲೆ ಏನಾಯ್ತು ಅಂತ ಬೇರೆ ಹೇಳಬೇಕಾ. ಊರ್ ಜನರ ಪಾಡು ನಾಯಿ ಪಾಡು ಆಗೋಯ್ತು. ಅನ್ತಾವ್ನೆ ಇವನೂ ಒಬ್ಬ. ನಮ್ ಸುತ್ಮುತ್ಲೂ ಅಂತಾವ್ರು ಬೇಕಾದಷ್ಟು ಜನ ಆ ತರಾವ್ರು ಇರ್ತಾರೆ. ಹುಷಾರಾಗಿರಿ.

  ReplyDelete
 9. ಸಖ್ಖತ್ ಮೋಹನಣ್ಣ.. ಅವನಜ್ಜಿ ಅಂತವ್ರನ್ನ ಸಯ್ದಿದ್ರೂ ಮೂರ್ಛೆ ಹೋಗಿದ್ರೂ ಸಾಕು ಗುಂಡಿಗಾಕಿ ಮುಚ್ಬಿಡ್ಬೇಕು ಆಗ್ಲೇ ಅಂತಹವ್ರಿಗೆಲ್ಲ ಬುದ್ಧಿ ಬರೋದು.. ನಿಮ್ಮ ಪ್ರತಿಭಟನೆಯ ಧ್ವನಿ ಕಿವುಡರನ್ನೂ ಬಡಿದೆಬ್ಬಿಸುತ್ತದೆ.. ನೀಮ್ಮ ಈ ಧಾಟಿಯ ಕವನಗಳು ನನ್ನನ್ನು ಮಂತ್ರ ಮುಗ್ಧನನ್ನಾಗಿಸಿಬಿಡುತ್ತವೆ.. ಇನ್ನಷ್ಟು ಬರೆಯಿರಿ..

  ReplyDelete
 10. prashasti Prashanthavanam22 November 2011 at 18:30

  ಚೆನ್ನಾಗಿದೆ ಮೋಹನಣ್ಣ.. ಅಂತವ್ರ ತಿಥಿಯನ್ನಂತೂ ತಪ್ಪಿಸಲೇಬಾರದು :-)

  ReplyDelete
 11. Rudrappa Madagunki22 November 2011 at 18:31

  ಕವಿ ಸಿದ್ದಲಿಂಗಯ್ಯನವರ ನೆನಪಿಸಿದಿರಿ, ನೀತಿಗೆಟ್ಟವರಿಗೆ ನಿಷ್ಟುರವಾಗಿ ಚುಚ್ಚುವ ಬಂಡಾಯಕ್ಕೆ ಭಂಡರಾಗಬೇಕಿಲ್ಲ , ಲೇಖನಿ ಹಿಡಿದು ಕವಿಗಳಾದರೆ ಸಾಕು ಎಂಬುದು ಮೇಲೆ ಕಂಡ ಸ್ಪಂದನೆಗಳ ಓದಿದರೆ ಗೊತ್ತಾಗುತ್ತದೆ...ಅಭಿನಂದನೆಗಳು

  ReplyDelete
 12. Präthäp ßrähmävär22 November 2011 at 18:31

  ವಾಸ್ತವ ವಸ್ತು ವಿಷಯ... ಚೆನ್ನಾಗಿದೆ... ಪದಗಳನ್ನು ಇನ್ನು ದುಡಿಸಿಕೊಳ್ಳಬಹುದು... ಸತ್ತ ದೊಡ್ಡ ಮನುಶ್ಯನಂತೆ... ಪದಗಳನ್ನು ನುಂಗಿ ಇನ್ನಸ್ಟು ಚಿಕ್ಕದಾಗಿಸೊ ಪ್ರಯತ್ನ ಮಾಡಬಹುದು. ಧನ್ಯವಾದಗಳು.

  ReplyDelete