ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Saturday 31 March 2012

ಗೋಡೆ


ನನ್ನ ಅವಳ ನಡುವೆ ಒಂದು ಗೋಡೆಯಿದೆ
ಎಲ್ಲಾ ಧರ್ಮದ ಚಿಹ್ನೆಗಳು
ಚಿಹ್ನೆಗಳೊಳಗಿನ ನೂರು ಚುಕ್ಕೆಗಳು
ಒಂದಕ್ಕೊಂದು ಢಿಕ್ಕಿಸಿಕೊಂಡು ಭೂಕಂಪಿಸಿದೆ

ಕತ್ತಲಾದಂತೆ ಜಗತ್ತಿಗೆ ಚಂದ್ರ ಬೆತ್ತಲಾದಂತೆ
ನೆನಪುಗಳ ನಕ್ಷತ್ರಗುಳುದುರುವ ಹೊತ್ತಿನಲ್ಲಿ
ನೀಲಾಕಾಶ ತುಂಬಿದ ಮೋಡಗಳ
ಅಂಚಿನಲ್ಲಿ ನನ್ನವಳು ಕೈ ನೀಡಿ
ಮುಕ್ಕೋಟಿ ದೇವರುಗಳನ್ನು ಬೇಡಿ
ಎಳೆಯುತ್ತಾಳೆನ್ನನ್ನು ಗಮ್ಯಕ್ಕೆ, ಅದಮ್ಯಕ್ಕೆ

ಸಂಜೆಯಾದಂತೆ ಮಹಡಿ ಮೇಲೆ ನಿಲ್ಲುವೆನಗೆ
ಅದೆಲ್ಲಿಂದಲೋ ಎದೆ ಕೊಯ್ಯುವ ಸಂಗೀತ
ಜಾರಿದ ಕಣ್ಣೀರು ಸ್ಫೋಟಗೊಂಡು
ವಿಹ್ವಲ ಹೃದಯ ಮತ್ತೆ ಆಸ್ಫೋಟಗೊಂಡು
ನಡುಗುವ ಹೊತ್ತಿಗೆ
ಅಂದು ಬೊಗಳಿದ ಆ ನಾಯಿಗಳು
ಗೋಡೆ ಎಡೆಗೆ ಬಂದು ನಿಂತಿವೆ ದರಿದ್ರಗಳು

ಕೆಳಬೀದಿಯವು ಮೇಲ್ಬೀದಿಯವು
ನೂರು ಕೇರಿಯಿಂದ ಸಾರಿಬಂದಿವೆ ಜೊಲ್ಲು ಸುರಿಸಿ
ಬಳಸೊಂದು ವೃತ್ತ ಎಳೆದು
ಹಣೆ ಮೇಲೆ ಜಾತಿ ಜಾತಿ ಎಂದು ಬರೆದು
ಗಾಂಧಿ ನಕ್ಕ ಹಣಕ್ಕೆ ನಾಲಗೆ ನೊಣೆದು
ಸುರಿಸಿದ ಕೊಳಕು ಜೊಲ್ಲಿಗೆ
ಹಚ್ಚಿಕೊಂಡ ಬೆಂಕಿಗೆ ಅವೇ ಸುಟ್ಟುಹೋಗುತ್ತಿವೆ
ನೆಗೆದು ತಪ್ಪಿಸಿಕೊಳ್ಳಲಾಗದು
ಅವೇ ಕಟ್ಟಿದ ಗೋಡೆಗೆ ಬಾಗಿಲೇ ಇಲ್ಲ

ಥೂ... ಅವು ಹುಚ್ಚು ನಾಯಿಗಳು
ಅವುಗಳ ಕಾಲ್ಧೂಳೆಬ್ಬಿಸಿದ ಮಸುಕಿಗೆ
ನನ್ನವಳ ಮೊಗ ಅದೆಲ್ಲೋ ಮುಚ್ಚಿಹೋಗಿವೆ
ಹಲುಬುವ ನಾಯಿಗಳ ಕೋರೆ ಹಲ್ಲಿನಲ್ಲಿ
ಸುರಿದ ಬಿಸಿ ರಕ್ತದ ಕಣದಲ್ಲಿ
ಅದೇ ಹೃದಯ ಬಡಬಡ ಬಡಿಯುತ್ತಿದೆ
ಹೃದಯ ಬಿರುಗಾಳಿಯೆಬ್ಬಿಸಿದ ನೋವಿಗೆ
ಮನ ನೊಂದು ಬೆಂದು ನಡುಗಿದೆ, ಗುಡುಗಿದೆ

ಕೈ ನೀಡಿದ್ದೇನೆ ಪ್ರಿಯೆ
ಬೆರಳು ಸೋಕು ಸಾಕು ಎಳೆದುಕೊಳ್ಳುತ್ತೇನೆ
ಬೆನ್ನ ಮೇಲೆ ಹೊತ್ತು, ಖುಷಿಯಲ್ಲಿ ಅತ್ತು
ಮೋಡಗಳಾಚೆ ತೇಲಿಹೋಗುತ್ತೇನೆ
ಅಲ್ಲೆಲ್ಲೋ ಹಕ್ಕಿಯಂತೆ ಹಾರಾಡೋಣ
ಎಲ್ಲಾ ಮರೆತು ಮೋಡಗಳೊಟ್ಟಿಗೆ ತೇಲೋಣ
ತಟ್ಟಿ ನಿಲ್ಲುತ್ತೇನೆ ತೊಡೆ
ಪುಡಿಪುಡಿಯಾಗಿ ಹೋಗಲಿ ಕೈಗಳ ನಡುವಿನ ಗೋಡೆ

4 comments:

  1. ಮೋಹನ್...

    ನಿಜವಾಗಿಯೂ ನೀವರಿಸುವ ಲಹರಿ ನನಗೇಕೆ ಒಲಿದಿಲ್ಲ ಅನ್ನುವ ಮತ್ಸರದ ಜೊತೆ ನಿಮ್ಮ ಕವಿತೆಯನ್ನು ಹೊಗಳುವ ಮನಸಾಗಿದೆ...ನಿಮ್ಮ ಕವಿತೆಗಳಿಗೆ ಭಾವನೆಗಳ ಮಿತಿಯರಿವ ಶಕ್ತಿ ಇದೆ...ಅಬ್ಬಬ್ಬಾ!!! ನಾನೂ ನಿಮ್ ಕವಿತೆಯ ಜಾಡ ಹಿಡಿದು ಬರಲಪ್ಪಣೆಯೇ...?

    --ಹನಿಯೂರು ಚಂದ್ರೇಗೌಡ, ಚನ್ನಪಟ್ಟಣ.

    ReplyDelete
  2. ಪ್ರೇಮಕ್ಕೆ ಅಸಲು ಅಡ್ಡ ಗೋಡೆಗಳೇ ಇರಬಾರದು ಗೆಳೆಯ.

    ಇಂತಹ ಧಾರ್ಮಿಕ ವಿರೋಧದ ನಡುವೆಯೂ ತೊಡೆ ತಟ್ಟುವ ನಾಯಕನ ಧೀ ಶಕ್ತಿಗೆ ಶರಣು.

    ಒಳ್ಳೆಯ ಕವನ.

    ReplyDelete
    Replies
    1. ಈ ಕವಿತೆ ಚೆನ್ನಾಗಿದೆ. ಪಲವಳ್ಳಿ ಅಣ್ಣ ನಿಮ್ಮ ಮಾತಿಗೆ ನನ್ನ ಸಹಮತವಿದೆ. ನಾವಿಬ್ಬರೂ ತೊಡೆ ತಟ್ಟುವಾಗ , ಮೋಹನಣ್ಣ ರಟ್ಟೆ ಗಟ್ಟಿಯನ್ನು ಮುಟ್ಟಿ ನೋಡಿಕೊಳ್ಳಲಿ.

      Delete
  3. Arathi Ghatikar20 April 2012 at 04:17

    ಮೋಹನ್ ! ಬಹಳ ಅರ್ಥಗರ್ಭಿತವಾದ ಕವನ ! ನನಗೆ ಈ ಸಾಲುಗಳು ಬಹಳ ಇ ಷ್ಟ ಆದವು ಕೈ ನೀಡಿದ್ದೇನೆ ಪ್ರಿಯೆ
    ಬೆರಳು ಸೋಕು ಸಾಕು ಎಳೆದುಕೊಳ್ಳುತ್ತೇನೆ
    ಬೆನ್ನ ಮೇಲೆ ಹೊತ್ತು, ಖುಷಿಯಲ್ಲಿ ಅತ್ತು
    ಮೋಡಗಳಾಚೆ ತೇಲಿಹೋಗುತ್ತೇನೆ
    ಅಲ್ಲೆಲ್ಲೋ ಹಕ್ಕಿಯಂತೆ ಹಾರಾಡೋಣ
    ... ಎಲ್ಲಾ ಮರೆತು ಮೋಡಗಳೊಟ್ಟಿಗೆ ತೇಲೋಣ
    ತಟ್ಟಿ ನಿಲ್ಲುತ್ತೇನೆ ತೊಡೆ
    ಪುಡಿಪುಡಿಯಾಗಿ ಹೋಗಲಿ ಕೈಗಳ ನಡುವಿನ ಗೋಡೆ !

    ReplyDelete