ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Tuesday 22 May 2012

ಧರ್ಮ ಮತ್ತು ಇತರೆ ಕಥೆಗಳು..


ಧರ್ಮ

ಗುರುಗಳು: 'ಧರ್ಮಕ್ಕೆ ವಿರುದ್ಧ ಪದ ಹೇಳಿ'
ವಿದ್ಯಾರ್ಥಿ: 'ನಿಮ್ಮ ಪ್ರಶ್ನೆಯೇ ಧರ್ಮಕ್ಕೆ ವಿರುದ್ಧವಾದದ್ದು'

--

ಅವಸರ

ಗುರುಗಳು: 'ಹೇ ಕತ್ತೆ, ಉತ್ತರ ನಿಧಾನವಾಗಿ ಹೇಳು, ಜೀವನದಲ್ಲಿ ಅವಸರವಿರಬಾರದು'

ವಿದ್ಯಾರ್ಥಿ: 'ವರ್ಷವೆಲ್ಲಾ ಓದಿದ ವಿಚಾರವನ್ನು ಕೇವಲ ಮೂರು ಘಂಟೆಯಲ್ಲಿ, ಬರೆಯಿರಿ ಎಂದು ಹೇಳುವುದೂ ಅವಸರವಲ್ಲವೇ?? ಒತ್ತಡ ಹೇರಿ ನಮ್ಮೆಲ್ಲರ ಜ್ಞಾನ ಸಾಮರ್ಥ್ಯವನ್ನು ಪರೀಕ್ಷಿಸುವ ಅವಸರವೇಕೆ??'

--

ಮೂಢನಂಬಿಕೆ

ಊಟವಾದ ತಕ್ಷಣ ಒಂದು ಬಾಳೆಹಣ್ಣು ತಿನ್ನಬೇಕು ಎಂದು ಅಪ್ಪ ಹೇಳಿದ್ದನ್ನು ಮಗ ಪಾಲಿಸುತ್ತಿದ್ದ.
ಆತನೂ ತನ್ನ ಮಕ್ಕಳಿಗೆ ಅದನ್ನೇ ಹೇಳಿಕೊಟ್ಟಿದ್ದ..
ದಿನ ಕಳೆದಂತೆ ಇವರೆಲ್ಲರೂ ಬಾಳೆಹಣ್ಣು ಸಿಗದಿದ್ದರೆ ಊಟವನ್ನೇ ಮಾಡುತ್ತಿರಲಿಲ್ಲ....!

--

ಸಾವು

ರಾಯರ ಪಕ್ಕದ ಮನೆಯಲ್ಲಿ ಒಂದು ಸಾವಾಗಿತ್ತು. ರಾಯರು ಮನೆ ಮಂದಿಗೆಲ್ಲ ಸಮಾಧಾನ ಮಾಡುತ್ತಿದ್ದರು.
'ಸಾವೆಂಬುದೊಂದು ಅಳಿಸಲಾಗದ ಸತ್ಯ, ಒಪ್ಪಿಕೊಳ್ಳುವ ಗಟ್ಟಿತನ ಬೇಕು, ಸುಮ್ಮನೆ ಅತ್ತರೆ ಏನೂ ಪ್ರಯೋಜವಿಲ್ಲ' ಎನ್ನುವಷ್ಟರಲ್ಲಿ, ಮನೆ ಕೆಲಸದವನು ಓಡೋಡಿ ಬಂದು
'ರಾಯರೇ ನಿಮ್ಮ ಮಗ ಅಪಘಾತದಲ್ಲಿ ತೀರಿಕೊಂಡನಂತೆ' ಎಂದ
ಎಷ್ಟೇ ಕಷ್ಟಪಟ್ಟರೂ ತಡೆದುಕೊಳ್ಳಲಾಗದ ರಾಯರ ಕಣ್ಣಂಚಲ್ಲಿ ಕಣ್ಣೀರು ಜಿನುಗಿತು'

--

ಪ್ರೀತಿ

ಆಕೆ ಆತನನ್ನು ಪ್ರೀತಿಸುತ್ತಿದ್ದಳು. ಆತನಿಗೂ ಅವಳೆಂದರೆ ತುಂಬಾ ಇಷ್ಟ, ಆದರೆ ಸ್ಫುರದ್ರೂಪಿಯಲ್ಲ, ಕಪ್ಪಗಿದ್ದ.
ಆತ ನೋಡಲು ಚೆನ್ನಾಗಿಲ್ಲವೆಂದು ಮತ್ತೊಬ್ಬ ಸುಂದರನಿಗೆ ಮದುವೆ ಮಾಡಿಬಿಟ್ಟರು
'ಹುಟ್ಟಿದ ಮಕ್ಕಳೆಲ್ಲಾ ಕಪ್ಪಗೇ ಇದ್ದವು'

--

ಜಾತಿ...

ಜಾತಿಯ ಕಾರಣಕ್ಕೆ ಅಲ್ಲೊಂದು ದೊಡ್ಡ ಗಲಭೆ. ಚಾಕು ಚೂರಿಯಿಂದ ಒಬ್ಬರನ್ನೊಬ್ಬರು ಇರಿದುಕೊಂಡು ಸಾವಿರಾರು ಜನ ಸತ್ತರು. ಹೆಣದ ರಾಶಿಯಿಂದ ಬೀದಿ ತುಂಬಿಹೋಗಿತ್ತು. ಕೆಲವರು ವಿಭೂತಿ ಧರಿಸಿದ್ದರೆ, ಹಲವರು ನಾಮ ಬಳಿದುಕೊಂಡಿದ್ದರು, ಒಂದಷ್ಟು ಜನ ಜನಿವಾರವನ್ನೂ ಧರಿಸಿದ್ದರು. ಊರಿನ ಕಕ್ಕಸು ಮನೆ ತೊಳೆಯುವ ಮಾಚನೂ ಅಲ್ಲೆ ಹೆಣವಾಗಿ ಬಿದ್ದಿದ್ದ. ಜಾತಿ ಜಾತಿ ಎಂದುಕೊಂಡು ಮತ್ತೆ ಮತ್ತೆ ಮೊರೆಯುತ್ತಿದ್ದರು.

ಆಶ್ಚರ್ಯವೇನೆಂದರೆ 'ಅವರೆಲ್ಲರ ರಕ್ತದ ಬಣ್ಣ ಮಾತ್ರ ಒಂದೇ ಆಗಿತ್ತು. ಎಲ್ಲಾ ಮರೆತು ಸಾವಿನ ಅಂಗಳದಲ್ಲಿ ಒಟ್ಟಿಗೆ ಕೂಡಿಕೊಳ್ಳುತ್ತಿದ್ದವು'

1 comment:

  1. ಮೋಹನಣ್ಣ ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ!
    ನಿಮ್ಮ ಕವಿತೆಗಳು! ನಿಮ್ಮ ನ್ಯಾನೋ ಕಥೆಗಳು!
    ನಿಜಕ್ಕೂ ನೀವು ದೊಡ್ಡ ಬರಹಗಾರರ ಸಾಲಿನಲ್ಲಿ ನಿಲ್ಲುತ್ತಿರ!
    ನನಗೆ ನಿಮ್ಮ ಕವಿತೆ! ನ್ಯಾನೋ ಕಥೆಗಳು ತುಂಬಾ ಇಷ್ಟ!'
    ನಿಮ್ಮ ಕವನಗಳು ಕಥೆಗಳು ಎಲ್ಲ ಕನ್ನಡಿಗರ ಮನವನ್ನೂ ತಲುಪಲಿ!
    ಎಂದು ಹಾರೈಸುತ್ತೇನೆ! ನಿಮಗೆ ಶುಭವಾಗಲಿ !

    ReplyDelete