ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Tuesday 24 January 2012

ಹೆಜ್ಜೆ ಗುರುತು...

ಬಾಳೆ ಬಾಗಿದ ದೇಹ
ಆನೆ ಸೊಂಡಿಲು
ಒಂದಂಕುರಕ್ಕೆ ಕಾದ ಸೃಷ್ಟಿ
ಅಲ್ಲಲ್ಲಿ ದೃಷ್ಟಿಬೊಟ್ಟಿಟ್ಟು
ಬಳಸಿ ಮೈ ಸವರಿ
ಹಳ್ಳದಿಣ್ಣೆ ಕೊರೆದು
ಮೆಲ್ಲನೆ ಕೆತ್ತಿತ್ತು ಬೆಣ್ಣೆ ಮುದ್ದೆಯ

ಅಮ್ಮನುದರದೊಳಗದು
ವಿಲವಿಲನೊದ್ದಾಡಾಗಾಗೊದ್ದರೆ
ನಗುತ್ತಿದ್ದಳಂತೆ ಅಮ್ಮ
ಸೃಷ್ಟಿಗೆ ನಿಟ್ಟುಸಿರು

ತಡವರಿಸಿ ತಾಯಗರ್ಭದಿಂದ
ಹೊರಬಂದ ಹಸುಳೆಗೆ
ಪ್ರತಿದಿನ ಎಣ್ಣೆ ಸ್ನಾನ
ನೆತ್ತಿ ಸವರಿ ಪ್ರಾಣ ಕಾಪಾಡಿ
ಧನುರ್ವಾಯುವಿಗೆ ಮೈ ಕಾಯಿಸಿ
ಹಚ್ಚಡೌಷಧಿ ಹಚ್ಚಿ
ನುಣುಪು ಮಾಡಿದರೊನೊಪೊಯ್ಯಾರಕ್ಕೆ

ಹೀಗೆ ಸಾಲು ಸಾಲಿಗೂ
ಅದರೋರೆ ಕೋರೆಗಳ
ತಿದ್ದಿ ತೀಡಿ, ಸಿಂಬಳ ಒರೆಸಿ
ಯವ್ವನಕ್ಕೆ ತಂದರು
ಅವಳಿಗಾಗ ದೇಹದೊನಪು
ಬಾಗಿ ಬಳುಕಿ ನೋಡುತ್ತಾಳೆ
ಹಳ್ಳದಿಣ್ಣೆಗಳ ಕಳ್ಳಿಯಂತೆ
ಹಾದಿಬೀದಿಯ ಕಳ್ಳರಿಗೆ
ಮೈ ಐಶ್ವರ್ಯ ಪ್ರದರ್ಶನ

ಒಂದು ಕಲೆ, ಸುಕ್ಕಿಗೆ
ಒಂದು ದಿನದ ಚಿಂತೆ
ಫೇರ್ ಅಂಡ್ ಲವ್ಲಿ
ಅದ್ಯಾವುದೋ ಸುಣ್ಣ ಮೆತ್ತಿ
ತುಟಿರಂಗಿಗೆ ಬಣ್ಣ ಹಚ್ಚಿ
ತುಂಡುಡುಗೆಯೊಳಗಿಳುಗಿ
ತುಂಟರ ತಂಟೆಯಾಗಿದ್ದಳು

ಈಗ ನೋಡಿ
ಅದೇ ಸೌಂದರ್ಯ ಒನಪೊಯ್ಯಾರ
ಬೆಂಕಿಗುರಿಯುತಿದೆ
ಬೂದಿಯಾಗಿ ಸುರಿಯುತಿದೆ
ಬಾಗಿ ಬಳುಕಿದದೆ ಅಂಗಾಂಗಳು
ಭಗ್ನಗೊಂಡಿವೆ ಸೃಷ್ಟಿಯ ವಿಘ್ನಕ್ಕೆ
ಸೌಂದರ್ಯ ಕದ್ದ ಅದೇ ಕಳ್ಳರು
ಮೂಗು ಮುಚ್ಚಿದ್ದಾರೆ ದುರ್ವಾಸನೆಗೆ!

ಊರ ದಾರಿಯಲ್ಲೆಲ್ಲ
ಆ ದೇಹ ನಡೆದಿತ್ತು
ಸಣ್ಣ ಮಳೆಗೆ ಹೆಜ್ಜೆ
ಗುರುತಳಿಸಿಹೋಗುವಂತೆ!

3 comments:

  1. ಅದ್ಭುತ ನಿರೂಪಣೆ...ಬಹಳ ಚೆನ್ನಾಗಿದೆ....

    ReplyDelete
  2. ಮೋಹನಣ್ಣ ನಿಮ್ಮ ಕವನ ರಚನಾ ಶೈಲಿಯೇ ಸೋಜಿಗವಾದುದು.ಬದುಕಿನ ಆಯಾಮಗಳೆಲ್ಲ ಕವನವಾಗಿ ಮೈದಳೆದು ನಿಂತಿದೆ.ಇಡೀ ಕವನಕ್ಕೆ ಈ
    ಊರ ದಾರಿಯಲ್ಲೆಲ್ಲ
    ಆ ದೇಹ ನಡೆದಿತ್ತು
    ಸಣ್ಣ ಮಳೆಗೆ ಹೆಜ್ಜೆ
    ಗುರುತಳಿಸಿಹೋಗುವಂತೆ!.............. ಸಾಲುಗಳು ಜೀವನ ಅಂತ್ಯವಾಗುವ ಬಗೆಯನ್ನು ಬಹು ಸೊಗಸಾಗಿ ಬಣ್ಣಿಸಿವೆ.ತಾಯಿಯ ಮಮತೆಯ ಆ ಬಂಧನದ ಸನ್ನೀವೇಷಗಳು ಮನಸನ್ನು ಭಾವುಕತನಕ್ಕೆ ಒಯ್ಯುತ್ತಾ ಅವಳ ಜೀವನಗಾಥೆಯನ್ನು ಸೊಗಸಾಗಿ ಅರ್ಥೈಸಿದೆ.ತುಂಬಾ ಇಷ್ಟವಾಯಿತು.

    ReplyDelete
  3. ಮೋಹನಣ್ಣ ಪ್ರಬುದ್ಧತೆ ನಿಮ್ಮ ಕಣ ಕಣಗಳಲ್ಲಿ ತುಂಬಿಕೊಂಡಿದೆ ಎಂದು ಕಾಣುತ್ತದೆ.. ಒಂದು ಉತ್ಕೃಷ್ಟವಾದ ಕವಿತೆ ಅಷ್ಟೇ ಅಚ್ಚುಕಟ್ಟಾಗಿ ಓದುಗರ ಮುಂದಿಟ್ಟಿದ್ದೀರಿ.. ಒಂದು ಹೆಣ್ಣು ಎಂಬುವಳು ಹೇಗಿರಬಾರದು ಎಂಬ ಚಿತ್ರಣವನ್ನು ಮನಸ್ಸಿಗೆ ಅಚ್ಚೊತ್ತಿಸಿದೆ ಕವಿತೆ.. ಕವಿತೆಯಲ್ಲಿ ನೂರಾರು ಭಾವಗಳ ಸಾಲು ಮೆರವಣಿಗೆಯಿದೆ.. ಮಗು ಹುಟ್ಟುವುದಕ್ಕಿಂತ ಪೋಷಕರಿಗಿರುವ ಆಸೆ, ಕನಸು, ತಮ್ಮದೇ ಕರುಳ ಬಳ್ಳಿಯಿದು ಎಂಬ ಬಾಂಧವ್ಯ, ಮತ್ತು ಆ ಪುಟ್ಟ ಮಗುವನ್ನು ಆಡಿಸಿ ಮುದ್ದಿನಿಂದ ಬೆಳೆಸುವ ಪರಿಗಳನ್ನು ಬಿಂಬಿಸಿದೆ ಕವಿತೆ.. ಹಾಗೆ ಬೆಳೆದು ದೊಡ್ಡವಳಾದ ಹುಡುಗಿ ತನ್ನ ಹರೆಯದಲ್ಲಿ ತನಗೇ ತಿಳಿಯದ ಹುಚ್ಚು ಹೊಳೆಯಲ್ಲಿ ಬಿದ್ದು ಬೀದಿ ಕಾಮಣ್ಣರಿಗೆ ಅಹಾರವಾಗುವ ಬಗೆ ಮರುಕ ಹುಟ್ಟಿಸುವಂತದ್ದು.. ಈ ಗಂಡಸರಿಗೆ ತಪ್ಪು ಮಾಡಿದರೂ ತಪ್ಪಿಸಿಕೊಳ್ಳುವ ಕಳ್ಳಗಿಂಡಿಗಳಿವೆ ಸಮಾಜದಲ್ಲಿ ಆದರೆ ಹೆಣ್ಣಿಗೆ ಕಾಲು ಜಾರಿದರೂ ಸಾಕು ’ಯಾರದು ತಪ್ಪು’ ಎಂದೂ ವಿಶ್ಲೇಷಿಸದೆ ಗಲ್ಲಿಗೇರಿಸಿಬಿಡುತ್ತದೆ ಈ ಸಮಾಜ..:( ಆ ಹೆಣ್ಣು ಮಗಳ ಸಮಾಧಿಯ ಮೇಲೆ ನನ್ನದೊಂದು ಕಪ್ಪು ಗುಲಾಬಿ..

    ReplyDelete