ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Thursday 31 May 2012

ಅಣ್ಣ ಬರಲೇ ಇಲ್ಲ.........!

ರೇಷ್ಮೆ ಸೀರೆಯುಟ್ಟು
ಮುಡಿ ತುಂಬ
ಮೊಲ್ಲೆ ಮುಡಿದು ನಲಿದು
ಒಂಟಿದ್ದಳಾಕೆ ಬಳುಕಿ

ನಮ್ಮಮ್ಮನಷ್ಟು ವಯಸ್ಸಾಗಿಲ್ಲ
ನನಗಿಂತ ದೊಡ್ಡವಳು
"ಬಾ ಮಗು"
ಎಂದು ಕೈ ಚಾಚಿದಳು
ದಿಣ್ಣೆ ಮೇಲೊರಗಿದ್ದಣ್ಣ ನೆಗೆದೇಬಿಟ್ಟ

ಹುರಿ ಹರಿದು ಗಳ ಮುರಿದು
ಕಿಟ್ಟ ಸುರಿದು
ಸೀಮೆ ಹೆಂಚ ಚೂರಿನೊಳಗೆ
ಧೂಳಾವರಿಸಿದ ಮನೆ
ಕಿಟಕಿಯೊಳಗಮ್ಮ ಕಂಡಳು

ಉಸಿರುಗಟ್ಟಿ ನೆಗೆವ ಘಟದಂತೆ
ಅದುರಾಡಿದ ಸೊಳ್ಳಿನ
ಮಂದ ಬೆಳಕಿನಲ್ಲಿ
ಕಂಡಮ್ಮನ ನೊಸಲಲ್ಲಿ ಚಂದನ
ಹೊದೆಯಲು ಮಾತ್ರ ಹರಕು ರಗ್ಗು
ಅಜ್ಜಿ ಬಿಟ್ಟಿದ್ದ ಹರಕು ಸೀರೆ
ಉದುರಿದ ಚದುರಿದ ತಲೆಗೂದಲು

ಅಲುಗಾಡಿತು
ನೆಲವೂರಿದ ಬೆವೆತ ಪಾದ
ರೇಷ್ಮೆ ಸೀರೆಯ
ಹೊಳಪಂಚಲ್ಲಿಣುಕಿ
ಅಣ್ಣನೂ ಕರೆದ
ಭಾವುಕಮ್ಮನ ಮಂಕುಗಣ್ಣು
ನಾಲಗೆ ಮೇಲಿನ ಹುಣ್ಣು
ಕಾಲಂಟಿಸಿಬಿಟ್ಟಿದ್ದವು ಕೀಳದೆ

ಹಠಾತ್ತನೆರಗಿದ ಬಿರುಗಾಳಿ
ಅವಳ ಕಂಕುಳಿಗೆನ್ನ ತಳ್ಳಿತು
ಪ್ರಪಂಚ ಕಂಡವಳವಳು
ತಲೆ ನೇವರಿಸಿ
ಹಣೆಗೆ ಮುತ್ತಿಟ್ಟು
ಮನಸ್ಸನ್ನೊಮ್ಮೆ ಸಾರಿಸಿ
ಕಸುವ ಮೆಚ್ಚಿ
ದುಡಿಸಿದಳೆನ್ನನ್ನು ‍ಬದುಕಿಗೆ

ಸೂರ್ಯ ವಿದಾಯದೊಂದಿಗೆ
ರೇಷ್ಮೆಸೀರೆ ಕಾಲಿಗೆ ನಮಿಸಿ
ಓಡೋಡಿ ಬಂದು
ಎನ್ನಮ್ಮನನ್ನಪ್ಪಿಕೊಂಡೆ
ಪ್ರಪಂಚ ಕಾಣಿಸಿ
ಶಶಿಯೆದೆಗೆ ಕುಳ್ಳಿರಿಸಿ
ರೇಷ್ಮೆ ಸೀರೆಯುಡಿಸಿ
ಪೂಜಿಸಿದೆ ಪ್ರೇಮಿಸಿದೆ
ನನ್ನವ್ವ ಮುದ್ದು ಕನ್ನಡವ್ವನ!

ಈಗಲೂ ಬಿರುಗಾಳಿ
ಆಕೆಯೆಡೆಗೆನ್ನನ್ನು ತಳ್ಳುತ್ತದೆ
ಆಕೆಯೆಷ್ಟೆ ಸಲಹಿದರೂ
ನನ್ನವ್ವನೇ ನನ್ನ ದೇವತೆ
ಅಣ್ಣ ಬರಲೇ ಇಲ್ಲ.........!

3 comments:

  1. ಮನಸ್ಸಿಗೆ ನಾಟಿದ ಕವನ.

    ReplyDelete
  2. ಮಾರ್ಮಿಕ ಕವಿತೆ ಮೋಹನಜೀ.ನಿಮ್ಮ ಬರವಣಿಗೆ,ಕಲ್ಪನೆಯ ತಾಕತ್ತು ನೀವೆ.ಒಂದು ಸುಂದರ ಪರಿ ಪೂರ್ಣ ಕವಿತೆ ಎಂದಷ್ಟೇ ಹೇಳ ಬಲ್ಲೆ.ಓದಿ ಆಸ್ವಾದಿಸಿದೆ.

    ReplyDelete
  3. ನಿಮ್ಮ ಭಾಷೆ ನಿಮ್ಮ ಆಸ್ತಿ ಮೋಹನಣ್ಣ.. ಕವಿತೆಯ ವಸ್ತುವಿನ ಬಗ್ಗೆ ನಿಮ್ಮ ವಿಶಿಷ್ಟವಾದ ದೃಷ್ಠಿಕೋನ ಕವಿತೆಯನ್ನು ಮತ್ತಷ್ಟು ಎತ್ತರಕ್ಕೇರಿಸುತ್ತದೆ.. ಮಾರ್ಮಿಕವಾಗಿ ಅರಳಿ ನಿಂತ ಪ್ರತಿಮೆ.. ಚೆನ್ನಾಗಿದೆ ಕವಿತೆ..:)

    ReplyDelete