ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Thursday, 8 December 2011

ಸಿಕ್ಕ ಸಿಕ್ಕ ಹೂಗಳ ಆಯ್ದು ತಂದೆ...

ಅಲ್ಲಿ ಇಲ್ಲಿ ಗಲ್ಲಿಯಲ್ಲಿ, ಬೇಲಿಯಲ್ಲಿ
ಮಾರುಕಟ್ಟೆಯ ಮೊಗಸಾಲೆಯಲ್ಲಿ
ಚೆಂಗುಲಾಬಿ, ಸಂಪಿಗೆಯಸಳು
ಕನಕಾಂಬರ ಜಾಜಿ ಮಲ್ಲಿಗೆಯರಳು
ಬಿರಿದು ಬಿಕರಿಗೆ ನಿಂತಳುತ್ತಿದ್ದವು
ಇನ್ನೂ ಮುಡಿಗಿಡದ ಎಳಸು ಹೂವು

ಹೊಟ್ಟೆ ತೀಟೆಗೆ, ಬಟ್ಟೆ, ತಾವಿಗೆ
ಕಂಡವರು ಕೊಂಡವರು
ಸಿಹಿಯುಂಡವರ ವಾಂಛೆ ಕಟ್ಟೆಗೆ
ಭೋರ್ಗರೆಸಿದ ಜಲಪಾತಕ್ಕೆ
ಹೊಸಕಿಹೋದವು ಚೆಂಗುಲಾಬಿಗಳು
ಬೆಂಕಿಯೂರಲ್ಲಿ ಬೆವರು ಸುರಿಸಿ

ಕೊಯ್ದು ದಾರಕ್ಕವನು ಪೋಣಿಸಿ
ಹಾದಿ ಬೀದಿಯವರಿಗೆ ಕಾಣಿಸಿ
ಮಾರಲಿಟ್ಟವರದು ಚೇಳುಮೊಗ
ಹೊತ್ತು ಗಂಜಿಗೆ, ತುತ್ತು ಜೀವಕ್ಕೆ
ಮಧುಮಂಚದಲ್ಲಿ ವಿಷಪ್ರಾಷನ
ಅತ್ತಿತು ಕಾಡು ಸಂಪಿಗೆ, ಬಾಡಿ ಮೆಲ್ಲಗೆ

ತೂ.. ಈ ಹೂಕಟ್ಟುವ ಮಾರಾಯ್ತಿ
ತೆನೆಕಟ್ಟಲಿಲ್ಲ, ಮೊನೆ ಕಾಣಿಸಲಿಲ್ಲ
ದೇವರ ಹಾರದ ಗೆಳತಿಯೊಡಗೂಡಿ
ಒಡನಾಡಿಯಾಗುವಲ್ಲಿದ್ದೆ, ಪಾಪಿಯವಳು
ಕೈಜಾರಿಸಿ ಬೀಳಿಸಿ ಬೀಳಿಸಿಬಿಟ್ಟಳು
ವಿಷಯವಾಸನೆಯ ವಿಷಕೂಪಕ್ಕೆ

ಅಲ್ಲಿನೋಡಿ ನಶ್ವರ ಬೀಜದೊಗಲು
ಒಳಗಿರುವನಂತೆ ಈಶ್ವರ ಕಾಯಲು
ಒಂದು ಮೊಳೆಸಿ ನೂರು ಹುಟ್ಟಿಸಿ
ಮತ್ತೆ ಬೆಳೆಸಿ ಕೊಂಡೊಯ್ಯುವುದು
ಅಸಮನಾತೆಯಲ್ಲಿ ತೂಗುವುದು
ಮ್.. ಇದರ ಬಗ್ಗೆ ಮತ್ತೆ ಮಾತನಾಡೋಣ

ಒಮ್ಮೊಮ್ಮೆ ಕಾಲಿಗೆ ಸಿಕ್ಕುತ್ತವೆ ಮೊಲ್ಲೆ
ನಾಸಿಕದಂಗಿಗೆ ಉಗಿಯುತ್ತೇನೆ ಅಲ್ಲೆ
ಎದುರು ಗುಡಿಯಲ್ಲಿ ಪೂಜೆಗಷ್ಟು ಹೂಗಳು
ಕೊಳೆತ ಇವು ಕಾಲಿಗೆ ಸಿಕ್ಕ ಹೆಣಗಳು
ಜಗವನ್ನು ಕಾಯೋ ಪರಾಕು ತಂದೆ
ಪೂಜೆಗೆಂದು ಸಿಕ್ಕ ಸಿಕ್ಕ ಹೂಗಳ ಆಯ್ದು ತಂದೆ!

1 comment:

  1. ಒಂದು ಸುಂದರ ಬಾವದೊಂದಿಗೆ ಹೂವುಗಳ ಲೋಕ ಸಾಗಿದೆ. ಮಾಧುರ್ಯ ತುಂಬಿದ ಪುಷ್ಪಗಳು ಬಿಕರಿಗೆ ನಿಂತು ಅಳುತ್ತಿದ್ದವು ಎನ್ನುವ ಕವಿ ಭಾವದಲ್ಲಿ ಅದೇನೋ ಕೊರಗು ಇದೆ. ಈ ಕವನದಲ್ಲಿ ರಮ್ಯ ಮನೋಹರವಾದ ಪದಗಳು ಚಿತ್ತಾಕರ್ಷಕವಾಗಿ ನಲಿದಾಡಿವೆ.

    ReplyDelete