ಕವಿತೆಗಳ ಹಾದಿಯಲ್ಲಿ ಸಾಗಿರುವ ನಿಮ್ಮ ಬಂಡಿಯಲ್ಲಿ ಕುಳಿತುಕೊಳ್ಳಲು ಒಂದಿನಿತು ಜಾಗ ನೀಡಿ, ದುಡ್ಡು ಕೇಳಲು ನೀವು ಬಂಡಿಯ ನಿರ್ವಾಹಕನಲ್ಲ, ನೀಡಲು ನಾನೇನು ಪ್ರಯಾಣಿಕನಲ್ಲ ಸ್ನೇಹದ ಕೊಂಡಿಯಲ್ಲಿ ನೀವು ತೂಗುತಿದ್ದಿರಿ, ಆತ್ಮೀಯನಿಗೆ ಬೇಸರವಯಿತೇನೋ ಎಂದೆನಿಸಿ ನಾನೂ ಕೂಡಿಕೊಂಡೆ...
ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!
Friday, 9 December 2011
ಬನ್ನಿ ಇವನನ್ನು ಪರಿಚಯಿಸುತ್ತೇನೆ...
ಪಡಸಾಲೆಯಲ್ಲಿ ಪವಡಿಸಿ
ಇಣುಕುವ ಬಾಗಿಲ ಬಳಿ
ನನ್ನೊಡನೆ ಹುಟ್ಟಿದ ತಳಿ
ನಾವು ಅವಳಿ ಜವಳಿ
ಬನ್ನಿ ಇವನನ್ನು ಪರಿಚಯಿಸುತ್ತೇನೆ
ಊರೆಲ್ಲ ಸುತ್ತಿ ಯಾರ್ಯಾರನ್ನೋ
ಕೊಲ್ಲುವುದವನ ಕೆಲಸ
ಕಪ್ಪೆಯೂರ ಹಾವು
ನಮ್ಮ ಮನೆಯೆಲ್ಲರೆದೆಗೂ
ಕೊಳ್ಳಿ ಇಟ್ಟಿದ್ದಾನೆ ಮಳ್ಳ
ಕೈಗೆ ಸಿಗದೆ ಹರಿವ ಹಳ್ಳ
ನೆರೆಮನೆಯ ರಂಗವ್ವನ
ತಾಳಿ ಎಳೆದ ಮೊನ್ನೆ
ಎದುರು ಮನೆಯ ರಂಗಿಯ
ಮದರಂಗಿ ಮಗುವನ್ನು
ನೀರಿಗೆಸೆದ, ಅವಳ ಕತ್ತಿಗೂ
ಹಗ್ಗ ಬಿಗಿದು ಹೆದರಿ ಓಡಿದ್ದ
ಹೆತ್ತಮ್ಮನನ್ನೋ ಎಂದೋ
ನುಂಗಿ, ತೋರಿಸಿ ತನ್ನ ಭಂಗಿ
ಅಪ್ಪನೆದೆಗೊದ್ದು ಕದ್ದೋಡಿದ್ದ
ನಿಜಕ್ಕೂ ಅವನೊಬ್ಬ ಕಳ್ಳ
ಸತ್ಯರೂಪಿ ಹೇಳನು ಸುಳ್ಳ
ತುಂಬುವನು ನನ್ನರಿವಿನ ಬಳ್ಳ
ಒಮ್ಮೆ ತಂಗಾಳಿಯಲ್ಲಿ ಹೊರನಿಂದು
ನನ್ನ ರಕ್ತಿಯನ್ನು ಎಲ್ಲೆಲ್ಲೂ ಕಂಡೆ
ಹಸಿರ ಹಾಸಿ ಮಲಗಿ
ನೀರಿನೊಳಿಣುಕಿ
ಎಲ್ಲರ ಕತ್ತು ಹಿಡಿದದುಮಿದ್ದನು
ಹತ್ತಿರ ಸುಳಿಯದ ಹಾವವನು
ಕಪ್ಪೆಯಪ್ಪನು, ಬಳಿ ಸಾರೇ ನುಂಗುವನು
ಹೆಂಡ ಕುಡಿಯನೊಳಗಿರುವನು
ಧೂಮದ ರಕ್ಕಸ
ವಾಹನದ ವೇಗದ ರಾಕ್ಷಸ
ಕೈಯಲ್ಲಿ ಹಿಡಿದೊಂದು ಹಗ್ಗ
ತೋರಿಸಿಕೊಡುವನು ಕೆಲವರಿಗೆ ಸಗ್ಗ
ನನ್ನಣ್ಣನೆಂಬುವ ಖುಷಿಯೋ
ಕೊಲೆಗಡುಕನೆಂಬ ವಿರಸವೋ
ಅರಿಯದೆ ಕಂಡೆನು ಸೋಲು
ಕೈಬೆರಳ ನುಲಿದ ತಿಳಿನೂಲು
ಹೆತ್ತಮ್ಮನಾಣೆ ನಾವು ಅವಳಿ ಜವಳಿ
ನನ್ನ ದೇಹಕ್ಕೆ ಹೆಸರಿಟ್ಟವರು ನೀವು
ಅವನ ಹೆಸರು ಯಮ ಉಸುರಿದ ಸಾವು
Subscribe to:
Post Comments (Atom)
ಕವಿತೆಯ ಭಾಷೆ ಚೆನ್ನಾಗಿದೆ. ಪ್ರತಿಮೆಯನ್ನು ಕಣ್ಣಿನಲ್ಲಿ ನೋಡುವಾಗ ಸಿಗುವ ಅನುಭವವೇ ಬೇರೆ.ಅದೇ ಪ್ರತಿಮೆಯನ್ನು ಪದಗಳಲ್ಲಿ ಕೆತ್ತುವಾಗ ಕಣ್ಣಿನಲ್ಲಿ ನೋಡಿದ ಅನುಭವವೇ ಆಗಬೇಕು. ಅದು ಪದಗಳ ಕರಾಮತ್ತು. ಅದು ಈ ಕವಿತೆಯಲ್ಲಿ ನೋಡಿ ಖುಷಿ ಪಟ್ಟೆ. ಹೀಗೆ ಕೆತ್ತಬೇಕು ಪದಗಳ ಶಿಲ್ಪಕಲೆಯಲ್ಲಿ. ಚೆಂದ ಬಂದಿದೆ. ಓದುತ್ತಾ ಓದಂತೆ ಎಲ್ಲಿಯೂ ಮನ ಬದಲಿಸಿದ ಕಟ್ಟು ನಿಟ್ಟಿನ ಭಾವ ದಾರಿ.ಒಂದೇ ಉಸಿರಿಗೆ ಎಳೆದೊಯ್ಯುತ್ತದೆ. ಕವಿತೆ ಹೀಗೆ ಬರಬೇಕು.ತಡವಾದರೂ ಚಿಂತಿಲ್ಲ.ಸಾರ್ವಕಾಲಿಕವಾಗಿ ನಿಲ್ಲಲಿ.
ReplyDelete