ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Monday, 5 December 2011

ರಂಜಕದ ಕಡ್ಡಿಗಳು... (ತರಂಗದಲ್ಲಿ ಪ್ರಕಟವಾಗಿದ್ದ ಕವಿತೆ)


ಮಗುವಿನ ನುಗುವಿನ
ಸುಳ್ಳು ಮೊಗದಲ್ಲಿ
ಹಿಕ್ಕೆಯಿಕ್ಕಿದ ಖಗದಲ್ಲಿ
ಹಾದಿಬೀದಿಯ ಜನರೆದೆಯಲ್ಲಿ
ಪರಾಕು ಮಾರಮ್ಮನ
ಬಲಿಕಂಬದ ನೆತ್ತರಲ್ಲಿ
ಹಿಟ್ಲರ್ ನ ಜಾಗ ಮೊಗೆದು
ಮರೆದ ರಕ್ತ ಪಿಪಾಸುಗಳ
ಒಣಗಿದ ಒಡೆದ ಕವಲು ನಿಯಮಗಳಲ್ಲಿ

ದುಡಿಯುತಿರುವ ಮನೆಯೊಳಗೆ
ಹತ್ತಿಹಣ್ಣಿನೊಡಲು ತುಂಬಿ
ಅಲ್ಲಿಂದಿಲ್ಲಿಗೆ ತಂದು ಹಾಕಿ
ರಕ್ತ ಹೀರುವ ಜಿಗಣೆಗಳು
ಕಚ್ಚುವ ಶಕ್ತಿಯಿರದೆ ಬೊಗಳಿ
ಬೊಗಳದೇ ನೂರೆಂಟು ಗಾಯಮಾಡಿ
ಹುಟ್ಟಿಸಿದ ಮರಿ ಕುನ್ನಿಗಳನ್ನು
ಮುಕ್ಕಿದ ಶ್ವಾನ ನಂಬಿಕೆಯಲ್ಲಿ

ಮೂಗಿಗೆ ಕಾಮದ ಬಣ್ಣ ಬಳಿದು
ಕೊಳೆತು ರಸ್ತೆಯಲ್ಲಿ ಬಿದ್ದು
ಹೊಸಕಿಹೋದ ಮಲ್ಲಿಗೆಯೊಡಲ
ಸಲುಗೆಯ ನುಂಗಿದ ರಾಕ್ಷನಲ್ಲಿ
ನೆರೆಮನೆಗೆ ಹೊರೆಯಾಗಿ ನಿಂತು
ಬೆಳೆದ ಮರವನ್ನು ಕತ್ತರಿಸಿ
ರಕ್ತ ತೊಟ್ಟಿಕ್ಕಿಸಿದ ಕುಡುಗೋಲಿನಲ್ಲಿ
ಹೊಳೆದಲುಗಿನಲ್ಲಿ, ಪ್ರಭೃತಿಯಟ್ಟಹಾಸದಲ್ಲಿ

ಅಲ್ಲಿ ಇಲ್ಲಿ ಗಲ್ಲಿಯಲ್ಲಿ, ನನ್ನಲ್ಲಿ, ನಿನ್ನಲ್ಲಿ
ಅವನೆದೆ ಸುಟ್ಟ ಅವಳೆದೆಯಲ್ಲಿ
ಇತಿಹಾಸದ ಕರಾಳ ನಿದ್ದೆಯಲ್ಲಿ
ಟಾಮ್ ನನ್ನು ಕಾಡುವ ಜೆರ್ರಿಯ
ಪುಂಡ ಹುಡುಗಾಟಿಕೆಯಲ್ಲಿ
ಗಾಳಿಯಲ್ಲಿ ನಿಂತಾಗ ಕಾಣ್ವ ಪ್ರತಿ
ಜೀವ ಸೆಟೆಸಿದ ಎದೆಯಲ್ಲಿ
ಸುಡುತ್ತಿದ್ದವು ದೇವ ನೀಡದ
ರಂಜಕದ ಕಡ್ಡಿಗಳು ಗೀಚಿಕೊಂಡು
ನೂರಾರು ಮಂದಿ, ಹೊತ್ತಿಸಿ ದೊಂದಿ,
ಅಡ್ಡಾಡುತ್ತಿದ್ದರು, ಕೊಳ್ಳಿದೆವ್ವಗಳ ದೊಂದುಭಿ

ಹಚ್ಚಿ ಹಬ್ಬಿಸಿ ಕೇರಿ ಕೇರಿಗೆ
ಎರಚಿ ಸೀಮೆಎಣ್ಣೆ ಊರಿಗೆ
ನಡೆವ ದಾರಿಯಗೆದು, ತೊಡೆದರು
ಲೋಕಕ್ಕನ್ಯಾಯವ ಹಡೆದರು
ಪಾಪದ ಕೂಸುಗಳವು
ರಂಜಕದ ಕಡ್ಡಿಯ ಪೆಟ್ಟಿಗೆಯಲ್ಲಿ
ನೆಗೆದು ನೆಗೆದು ಗೀಚಿಕೊಂಡವು
ಭಂಡ ಗಂಡ, ಅಮ್ಮ ಸೇರಿ
ಸೊಸೆ ಕೊಂದು ಮತ್ತೊಂದ ತಂದಂತೆ

ಕಾಣ್ವ ಕಣ್ಣಿಗೊಂದು ದೇವ
ಬೇಡ್ವ, ಬೇಡಿ ತೊಡೆವ ಮಾನವ
ಕಾಣದೇ ಬೇಡದೆ ನೆಮ್ಮದಿ
ಅರುಹಿದ ಕೋಟಿ ಜೀವ
ಇದೆಲ್ಲವ ಕೊಂದು ಮೆರೆದ
ಜಗತ್ತು ನುಂಗಿದ ದುಷ್ಟಭಾವ
ಪ್ರಳಯಕ್ಕೇನು ದಿನಬಾಕಿಯಿಲ್ಲ
ಮರೆತ ಕೃಷ್ಣ ತನ್ನ ಸೊಲ್ಲ
ಗುಹೆಯಾಗಿದೆ ಜಗ, ಗುಹೇಶ್ವರನಿರುವನೆಂಬ
ನಂಬಿಕೆಯಲ್ಲಿ, ವೀಣೆಯಾಗಿ
ವೈಣಿಕನ ಬೆರಳಿಲ್ಲದೆ, ಕಾಯುತ್ತ

3 comments:

  1. ಮೋಹನ್, ರವರೆ ತುಂಬಾ ಚೆನ್ನಾಗಿದೆ, ಈ ರಂಜಕದ ಕಡ್ಡಿಗಳು ಕತ್ತಲಿಗೆ ಬೆಂಕಿ ಹಿಡಿದು ಬೆಳಕ ಚೆಲ್ಲಿದಂತೆ ಭಾಸವಾಯಿತು,... ಅಭಿನಂದನೆಗಳು ...

    ReplyDelete
  2. ಮೋಹನಜೀ,ನೀವೊಬ್ಬ ಅದ್ಭುತ ಕವನ ಕೌಶಲ್ಯವಿರುವ ಮೌಲಿಕ ಕವಿ.ಇದಕ್ಕೆ ತರಂಗದಲ್ಲಿ ಪ್ರಕಟವಾದ ಈ ಕವಿತೆಯೇ ಸಾಕ್ಷಿ.ಕನ್ನಡ ಸಾಹಿತ್ಯದ ಒಲವು-ಚೆಲುವನ್ನು ಪಳಗಿಸಿಕೊಂಡಿರುವ ನೀವು ಸಮಾಜಮುಖಿಯಾದ ನೂರಾರು ಸಾಹಿತ್ಯವನ್ನು ಸೃಷ್ಟಿಸಬಲ್ಲ ಸಾಮರ್ಥ್ಯ ಹೊಂದಿದ್ದೀರಿ.ಸಮಾಜದ ಓರೆ ಕೋರೆಗಳಿಗೆ ಕನ್ನಡಿ ಹಿಡಿಯುವ ನೀವು ಸಮುದಾಯದ ಭಾವನೆಗಳಿಗೂ ಜೀವತುಂಬ ಬಲ್ಲವರಾಗಿದ್ದೀರಿ.ಅನ್ಯಾಯ,ಶೋಷಣೆ,ಕ್ರೌರ್ಯ,ದಬ್ಬಾಳಿಕೆಗಳನ್ನು ಖಂಡತುಂಡವಾಗಿ,ಕಠೋರವಾಗಿ ಖಂಡಿಸಿ ಛಾಟಿ ಏಟು ನೀಡುವ ನೀವು ನವ ಸಮಾಜದ ಹೆಮ್ಮೆಯ ಕೊಡುಗೆಯಾಗಿದ್ದೀರಿ.ನಿಮ್ಮನ್ನು ಪಡೆದ ನಾವೆಲ್ಲರೂ ಧನ್ಯ.ನಿಮ್ಮ ಅಭಿಮಾನಿಯಾಗಿದ್ದು ನಿಮ್ಮ ಸಾಹಿತ್ಯ ಕೃಷಿಯನ್ನು ಆಸ್ವಾದಿಸುತ್ತೇನೆ.ಅಭಿನಂದನೆಗಳು.

    ReplyDelete
  3. ಸಮಾಜದ ನಮ್ಮೆಲ್ಲರ ನಡುವೆ ಇರುವ ರಂಜಕದ ಕಡಿಗಳ ಬಗ್ಗೆ ತುಂಬಾ ಸವಿಸ್ತಾರವಾಗಿ ಕವಿತೆಯೊಂದನ್ನು ಕಟ್ಟಿಕೊಟ್ಟಿದ್ದೀರಿ.. ಅಕ್ಕ ಪಕ್ಕದವರು ಚೆನ್ನಾಗಿರುವುದನ್ನು ಸಹಿಸದ ರಂಜಕದ ಕಡ್ಡಿಗಳು ಮನಸ್ಸುಗಳ ನಡುವೆ ಕಿಡಿಯೊತ್ತಿಸಿ ಊರನ್ನೇ ಉರಿಸುವ ಪರಿಯನ್ನು ಮನಮುಟ್ಟುವಂತೆ.. ನಿಮ್ಮ ಶೈಲಿಯಲ್ಲಿನ ನಜೂಕಿನಾಟ ಮನಸ್ಸನ್ನು ಸೆಳೆಯುತ್ತದೆ.. ಒಂದು ಗಟ್ಟಿ ಭಾವಗಳನ್ನು ಹೊತ್ತಿರುವ ಉತ್ಕೃಷ್ಟ ಕವಿತೆಯಿದು..

    ReplyDelete