ಕವಿತೆಗಳ ಹಾದಿಯಲ್ಲಿ ಸಾಗಿರುವ ನಿಮ್ಮ ಬಂಡಿಯಲ್ಲಿ ಕುಳಿತುಕೊಳ್ಳಲು ಒಂದಿನಿತು ಜಾಗ ನೀಡಿ, ದುಡ್ಡು ಕೇಳಲು ನೀವು ಬಂಡಿಯ ನಿರ್ವಾಹಕನಲ್ಲ, ನೀಡಲು ನಾನೇನು ಪ್ರಯಾಣಿಕನಲ್ಲ ಸ್ನೇಹದ ಕೊಂಡಿಯಲ್ಲಿ ನೀವು ತೂಗುತಿದ್ದಿರಿ, ಆತ್ಮೀಯನಿಗೆ ಬೇಸರವಯಿತೇನೋ ಎಂದೆನಿಸಿ ನಾನೂ ಕೂಡಿಕೊಂಡೆ...
ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!
Sunday, 18 December 2011
ಐಶ್ವರ್ಯ ರೈ ಕರೆ ಮಾಡಿದ್ದಳು..
ಕೆನ್ನೆ ಮೇಲೆ ಕೆಸರು
ಮುಸುರೆ ತೊಳೆದಳು ಪುಟ್ಟಿ
ಹೊಸತು ಕನಸು ಕಾಣುವ
ಪುರುಷೋತ್ತಿಲ್ಲ
ಮಿಣುಕು ಹುಳ ಅಣಕಿಸಲು
ಇರುಳ ಮಸಿ ಮೆತ್ತಿಕೊಂಡು
ಅರಳುಗಣ್ಣಲ್ಲಿ ನೋಡಿದವು
ಕೆಸರು ಹರಿಸಿದ ತೊರೆಯಲ್ಲಿ
ಪ್ಲಾಸ್ಟಿಕ್ ವಸ್ತು,ಅವಕ್ಕೆ ಮುತ್ತು
ಕಸದಿಂದಲೇ ಸಂಜೆಯ ತುತ್ತು
ಅಲ್ಲಲ್ಲಿ ಅಳುತ್ತಿದ್ದವು
ಕಂದಮ್ಮಗಳು
ಕಾಮ ಕಸಿವಿಸಿಗೊಂಡು
ಕಸದಲ್ಲಿ ಬಿದ್ದ ಪಾಪಗಳು!
ಬೆಂಕಿ ಬಿದ್ದಿದೆ ಅಮ್ಮನೆದೆಗೆ
ಒಲೆಗೆ ಮಾತ್ರ ಅಟ್ಟಿಲ್ಲ
ಸೌದೆಯಿದ್ದರಷ್ಟೇ ಸಾಕೆ?
ಹುಟ್ಟಿಸಿದ ಈ ಮಹಾತ್ಮ
ಮನೆ ಮೆಟ್ಟಿದರೆ ಅದೇ ಜಗಳ
ಮೂಲೆಯಲ್ಲಿ ಕುಳಿತು ಬಾಡಿತೊಂದು ಮನ
ನಾನೇ ಮುಟ್ಟಲು ಹೇಸುವ ಬೂಟು
ಅವುಗಳು ಮುಟ್ಟಿ ಎದೆ ತಟ್ಟಿದವು
ಗಲ್ಲಿ ಗಲ್ಲಿಯಲ್ಲಿ, ಬಸ್ ನಿಲ್ದಾಣದಲ್ಲಿ
ಕೈಚಾಚಿ ನಿಂತಿವೆ
ಕನಸುಗಳ ಹೊತ್ತು
ಅಲೆದಾಡುವವರ ನೋಡುತ್ತಾ
ಮುತ್ತಿದ ನೊಣಗಳ ಕೊಲ್ಲುತ್ತಾ
ನೀರು ಕಾಣದೆ ನೂರು ದಿನವಾಯ್ತು
ನಾರುತ್ತವೆ ಕೊಳೆ ಪದರವ ಹೊತ್ತು
ಅಲ್ಲ...!!!
ಹಲ್ಲು ಮೂಡಿಲ್ಲ, ಗಲ್ಲ ಚಿಗುರಿಲ್ಲ
ಬೆಲ್ಲದಂತ ಮೊಣಕೈ ಬಿಡಿಸಿಲ್ಲ
ಅರೆ ತೆರೆದ ಕಣ್ರೆಪ್ಪೆಯೊಳು
ಮಿಣ ಮಿಣ ಮಿಣುಕುವ ಕಣ್ಣು
ಹುಟ್ಟಿ ಮೂರು ದಿನವಾಗಿಲ್ಲ
ಆಗಲೇ ಐಶ್ವರ್ಯ ರೈ ಹೆಣ್ಣು ಕುಡಿಯ
ಭಾವ ಚಿತ್ರಕ್ಕೈದು ಕೋಟಿಯಂತೆ!
ಮೊನ್ನೆ ಕರೆ ಮಾಡಿದ್ದಳು
ನೋಡಲೆಂದು ಹೋಗಿದ್ದೆ
ಅವಳ ಮನೆಯ ಗೋಡೆಯ ಮೇಲೆಲ್ಲ
ಈ ಮಕ್ಕಳುಗಳ ಚಿತ್ರವೇ ಇತ್ತು
ಆಕಳಿಸುತ್ತಾ ಅಳುತ್ತ ನಿಂತಿದ್ದವು
ಬಾಳ ಮಂಪರಿನಲ್ಲಿ....
Subscribe to:
Post Comments (Atom)
ನಿಮ್ಮ ಅನುಕಂಪ ಪೂರ್ಣ ಈ ಕವನ ಮನ ಮುಟ್ಟುವಂತಿದೆ. ಅಬ್ಬೇಪಾರಿ ಮಕ್ಕಳ ದಯನೀಯ ಸ್ಥಿತಿಯನ್ನು ಬಿಂಬಿಸಿದ್ದೀರಿ.
ReplyDeleteಅಬ್ಬಾ ಮೋಹನಣ್ಣ ಅದ್ಭುತವಾದ ಕವಿತೆ.. ಕವಿತೆಯನ್ನು ತುಂಬಾ ಸೂಕ್ಷ್ಮವಾಗಿ ಹೆಣೆದಿದ್ದೀರಿ.. ಐಶ್ವರ್ಯಳ ಮಗುವನ್ನು ವಿಡಂಬನಾತ್ಮಕವಾಗಿ ಚಿತ್ರಿಸುತ್ತಾ ಯಾವುದೇ ಅತಿಶಯವಾದ ಪೋಷಣೆಯಿಲ್ಲದೆ, ಸಾಮಾನ್ಯ ಜನಜೀವನದಲ್ಲಿ ಬೆಳೆಯುವ ಮತ್ತು ಕೂಳು ತುತ್ತಿಗೂ ಕಷ್ಟಪಡುವವರ ಮನೆಯ ಮಕ್ಕಳು ಬೆಳೆಯುವ ಮತ್ತು ಆಪ್ಪ-ಅಮ್ಮ ಯಾರೆಂಬ ಅರಿವೇ ಇಲ್ಲದ ಕೆಲವರ ಕಾಮದ ಕುರುಹುಗಳಾಗಿ ಜನ್ಮ ತಳೆದ ಮಕ್ಕಳ ಶೋಚನೀಯ ಸ್ಥಿತಿಗಳ ಬಗ್ಗೆ ಮನದೊಳಗೆ ಅಚ್ಚೊತ್ತಿಸಿಬಿಟ್ಟಿದ್ದೀರಿ.. ಕಷ್ಟ ಕಾರ್ಪಣ್ಯಗಳಲ್ಲೇ ಆ ಮಕ್ಕಳು ಅರಳುತ್ತಿದ್ದರೂ ತಾಯಿಯ ಮಮತೆಗೆ ಕೊರತೆಯಿಲ್ಲ ಮತ್ತು ಮಗ ಎಷ್ಟೇ ಕಷ್ಟ ನೀಡಿದರೂ ತಾಳಿಕೊಳ್ಳುವ ಆ ತಾಯಿಯ ಹೃದಯದ ವೈಶಾಲ್ಯಕ್ಕೆ ಕೊರತೆಯಿಲ್ಲ.. ಕೇವಲ ಐಶ್ವರ್ಯಳ ಉದರದಿಂದರಳಿದ ಕಾರಣಕೆ ಈ ಹೆಣ್ಣು ಕೂಸಿನ ಭಾವಚಿತ್ರಕ್ಕೆ ಐದು ಕೋಟಿ ಕೊಟ್ಟು ಖರೀದಿಸುವ ಈ ಜನರ ಆಶಾಡಭೂತಿಗೆ ಏನೆಂದು ಹೇಳಬೇಕು.. ನಿರೂಪಣೆ ಮತ್ತು ಪದಗಳ ಪ್ರಯೋಗ ಅದ್ಭುತವೆನಿಸುತ್ತವೆ..
ReplyDeleteಮಿಣುಕು ಹುಳ ಅಣಕಿಸಲು
ಇರುಳ ಮಸಿ ಮೆತ್ತಿಕೊಂಡು
ಅರಳುಗಣ್ಣಲ್ಲಿ ನೋಡಿದವು
ಕೆಸರು ಹರಿಸಿದ ತೊರೆಯಲ್ಲಿ
ಪ್ಲಾಸ್ಟಿಕ್ ವಸ್ತು,ಅವಕ್ಕೆ ಮುತ್ತು
ಕಸದಿಂದಲೇ ಸಂಜೆಯ ತುತ್ತು
ಅಲ್ಲಲ್ಲಿ ಅಳುತ್ತಿದ್ದವು
ಕಂದಮ್ಮಗಳು
ಕಾಮ ಕಸಿವಿಸಿಗೊಂಡು
ಕಸದಲ್ಲಿ ಬಿದ್ದ ಪಾಪಗಳು!
ಈ ಸಾಲುಗಳು ಹಾಗೇ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತುಬಿಟ್ಟಿವೆ.. ಕವಿತೆ ತುಂಬಾ ಹಿಡಿಸಿತು..:)))
ಒಡಲ ದಳ್ಳುರಿಯನ್ನು ಕವಿತೆಯಾಗಿಸಿ ನುಡಿ ನಮನದ ಮೂಲಕ ಅನಾಥರ ದನಿಯಾಗಿ ಓರಣವಾಗಿ ಮೂಡಿದ ಕವಿತೆ ಇದು.ಬಡವರು-ಶ್ರೀಮಂತರ ನಡುವಿನ ಕಂದಕವನ್ನು,ದಿಕ್ಕಿಲ್ಲದವರ ದಯನೀಯ ಸ್ಥಿತಿಯನ್ನು ಮನೋಜ್ಙವಾಗಿ ಚಿತ್ರಿಸಿದ ಕವಿತೆ ಇದು.ಸಮಾಜದಲ್ಲಿ ಪ್ರತಿ ನಿತ್ಯ ನೋಡುವ ನಿರ್ಗತಿಕರ ನೋವನ್ನು ಅತ್ಯಂತ ಭೀಭತ್ಸವಾಗಿ ಹೃದಯ ಮುಟ್ಟುವಂತೆ ಅನಾವರಣಗೊಳಿಸಿದ ಕವನವಿದು.
ReplyDelete