ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Monday 21 November 2011

ವಿಕೃತ ಮನೆ

ವಿಕೃತ ಮನೆ

ಬಾಗಿಲೆದೆಯಲ್ಲಿ ಹೃದಯ
ಪಕ್ಕದಲ್ಲೇ ಅಶ್ಲೀಲ ಭಿತ್ತರ!
ಕಣ್ಮುಚ್ಚುವುದೋ ಬಿಡುವುದೋ
ತೂಕಡಿಸಿ ತೊಟ್ಟಿಕ್ಕುವ ನೀರು
ಡಬ್ಬ ತುಂಬಿಸುವ ಅವಸರ

ಎಡ ಬಲ ಹಿಂದೆ ಮುಂದೆ
ಬಿಟ್ಟಿಲ್ಲ ತುಂಟ ಮಕ್ಕಳು
ಬೀದಿ ಗೌರಮ್ಮನ ಹೆಸರು
ನೀವೂ ಸಂಧಿಸಬಹುದು
ಪಕ್ಕದಲ್ಲೇ ಫೋನ್ ನಂಬರು!

ಬಂದ ಕೆಲಸವೇ ಮರೆತೆ
ಕುಳಿತುಬಿಟ್ಟೆ ಏನೋ ವ್ಯಥೆ
ಹೊರಗೆ ಹೊಟ್ಟೆ ನುಲಿದಿತ್ತು
ಒಳಗೆ ವಾಂಛೆ ಬಿರಿದಿತ್ತು
ಸುಮ್ಮನೆ ಮನಸ್ಸು ಕೆಡಿಸಿತ್ತು!

ಪ್ರೀತಿಯನ್ನೊಬ್ಬ ಕೂಗಿದ್ದನಲ್ಲಿ
ಕಾಮದನುಭವ ಗೀಚಿದ್ದನೊಬ್ಬ
ನನಗೊಂದು ಅವಕಾಶ ಸಿಕ್ಕಿತ್ತು
ಮೂರು ಭಿತ್ತಿ, ಏಕ ದ್ವಾರ
ಕತ್ತಲೆಯಲ್ಲಷ್ಟು ಸತ್ಯ ಮಿಥ್ಯ

ಐದು ನಿಮಿಷ ಐವತ್ತಾಯಿತು
ನನ್ನಂತವರು ನೂರು ಜನ
ಕಾಯಲಿಲ್ಲ ಹೊರಟೇಬಿಟ್ಟಿತು
ನನ್ನೂರಿನ ಬಸ್, ಸಾಕಪ್ಪ
ಬಸ್ ನಿಲ್ಚಾಣದ ಮಲದ ಮನೆಯ ಸಹವಾಸ

7 comments:

  1. ಸತೀಶ್ ಡಿ. ಆರ್. ರಾಮನಗರ27 November 2011 at 03:43

    ದೇಹದ ಹಸಿವು ನೀಗಲು ಹಲವು ಒಳದಾರಿ, ಹೊಟ್ಟೆಯ ಹಸಿವನ್ನು ಮತ್ತೊಬ್ಬರಿಗೆ ವರ್ಗಾಯಿಸಲು ಸಾಧ್ಯವಿಲ್ಲ. ದೇಹದ ಹಸಿವು ಕೂಡ. ಆದರೆ ವಾಂಛೆ, ವಿಕೃತಿಯ ಮಟ್ಟಕ್ಕೆರಿದಾಗ ಚಿತ್ತ ಚಂಚಲತೆ ಏನೆಲ್ಲೇ ಮಾಡಬಹುದು ಎಂಬುದನ್ನು ಅರ್ಥವತ್ತಾಗಿ ತಿಳಿಸಿದ್ದೀರಿ. ಕಾಮಾತುರಣಂ ನ ಭಯಂ ನ ಲಜ್ಜಾ.

    ReplyDelete
  2. ಅಪರೂಪದ ವಿಷಯ ಆರಿಸಿ ಬರೆದಿದ್ದೀರಿ.. ಅಭಿನಂದನೆಗಳು..

    ReplyDelete
  3. ಇಷ್ಟವಾಯಿತು ಮೋಹನಣ್ಣ... ಕವಿತೆಯ ವಸ್ತುಗಳು ಬರೀ ಪ್ರೀತಿ ಪ್ರೇಮ ಇವುಗಳೇ ಆಗಿರಬಾರದು. ಹೀಗೆ ವೈವಿಧ್ಯತೆಯಲ್ಲಿ ಕೂಡಿರಬೇಕು. ಇದನ್ನು ನೀವೇ ಯಾರಿಗೋ ಹೇಳಿದ್ದು. ಈಗ ಅದನ್ನು ನಿರೂಪಿಸಿರುವಿರಿ. ಒಂದು ವಿಚಾರವನ್ನು ಮಂಡಿಸಲು ಕವಿತೆ ಹೆದರಿಕೆ ನಾಚಿಕೆ ಇರಬಾರದು. ಅದನ್ನು ನಿಮ್ಮಲ್ಲಿ ಕಂಡಿದ್ದೇನೆ. ನೀವು, ರವಿ ಮುರ್ನಾಡ್, ಹೃದಯಶಿವ, ಪುಷ್ಪರಾಜ್, ಪ್ರಸಾದ್ ವಿ ಮೂರ್ತಿ ಮುಂತಾದ ಕೆಲವರು ಎಂತಹ ವಸ್ತುವಿನ ಮೇಲೆ ಬೇಕಾದರೂ ಕವಿತೆ ಬರೆಯಬಲ್ಲಿರಿ. ಹಾಗಿರಬೇಕು. ನಮಸ್ಕಾರ

    ReplyDelete
  4. ಸುತ್ತು ಪರಿಸರವ ಸೂಕ್ಷ್ಮವಾಗಿ ಗಮನಿಸಿ ಸ್ಪಂದಿಸುವ ನಿಮ್ಮ ಕವನ ಸಾಲು ಸ್ವಲ್ಪವಾದರೂ ಅರುಹುವ ವಿಚಾರ ಅಗಾಧ. ಚೆನ್ನಾಗಿದೆ ಮುಂದುವರೆಸಿ.

    ReplyDelete
  5. ಇದು ಎಲ್ಲರಿಗೂ ಗೊತ್ತಿರುವ ಕಹಿ ಸತ್ಯ, ಒಪ್ಪಿಕೊಳ್ಳದೇ ವಿಧಿಯಿಲ್ಲ.ಆದರೂ ನೀವು ಚೆನ್ನಾಗಿ ವಿವರಿಸಿದ್ದೀರಿ. ಅಭಿನಂದನೆಗಳು.

    ReplyDelete
  6. ವಿಕೃತ ಮನಸಿನ ವಿರಾಟ ರೂಪಗಳು ಅಲ್ಲಲಿ ಅಲ್ಲ ಎಲ್ಲ ಕಡೆಯೂ, ಅಷ್ಟರ ಮಟ್ಟಿಗೆ ನಮ್ಮ ಇಂದಿನ ಸಮಾಜ 'ಬೆಳೆದು' ನಿಂತಿದೆ. ಉತ್ತಮ ನಿದರ್ಶನ ಪ್ರಕಟಿಸಿದ್ದೀರಿ ಮೋಹನ್.

    Laxmi Kanth Nayak,
    ಲಕ್ಷ್ಮಿ ಕಾಂತ್ ನಾಯಕ್ ಅವರೇ, ನಿಮ್ಮ ಅಭಿಮಾನಕ್ಕೆ ನಾವುಗಳು ಚಿರಋಣಿ. ಅದು ನಿಮ್ಮಂತವರ ಸದೃಢ ವಿಮರ್ಶೆಯಾ ಗಟ್ಟಿ ತಳಹದಿ ನಮ್ಮ ಕವನಗಳಿಗೆ.

    ReplyDelete
  7. ವಿಕೃತ ಅಂತ ತಲೆ ನೋಡಿದಾಗಲೇ ಗೊತ್ತಾಗುವುದು ಜಗದ ಕೃತ್ಯದಲ್ಲಿ " ವಿ"ಯ ವಿಸ್ತೃತ ನರ್ತನ.ಮನಸ್ಸು ತುಂಬಾ ಸೂಕ್ಷ್ಮ ಅಂತ ಹೇಳಿದಾಗಲೇ ಅಲ್ಲಿ ಪಿಪಾಸುಗಳು ಇಣುಕುವುದು ಸಹಜ.ನಿಮ್ಮ ಎಲ್ಲಾ ಕವಿತೆಗಳಲ್ಲಿ ಜಗತ್ತಿನ ವೈರುಧ್ಯಗಳ ಮಾತುಗಳು ಸ್ಪಷ್ಟವಾಗುತ್ತದೆ.ಅಗತ್ಯವಾಗಿ ಸಮಾಜದ ಓರೆಕೋರೆಗಳನ್ನು ಅಣಕಿಸಿದ ಸಾಹಿತ್ಯವನ್ನು ಅಭ್ಯಾಸಿಸಿ.ಅದರಲ್ಲೂ ಬಂಡಾಯ ಸಾಹಿತ್ಯವನ್ನು ಹೆಚ್ಚಾಗಿ ಆಯ್ದುಕೊಳ್ಳಿ.ನಿಮ್ಮ ಬರವಣಿಗೆಯ ಸಂವೇಧನೆಗೆ ಒಂದು ಹೊಸ ಆಯಾಮ ಲಭಿಸುವ ಸಾಧ್ಯತೆಯಿದೆ. ಪ್ರಯತ್ನಿಸಿ.

    ReplyDelete