ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Sunday 18 September 2011

ಅಗೋಚರ...

ಇರುಳ ಹೊರಳಿಕೆಯಲ್ಲಿ
ಮನೆಗಳಿಗೆ ದರಿದ್ರ ನಿದ್ದೆ
ನಿಶಬ್ದದ ಸವಿ ನೀರವತೆ
ಅನುಭವಿಸಿದೆ ಆರ್ದ್ರತೆ
ಆದರೆ ಕಣ್ಣಿಗೆ ಕಾಣಲಿಲ್ಲ

ಮನದ ಕಾರ್ಮೋಡದೊಳಗೆ
ಕೋಟಿ ನಕ್ಷತ್ರ ಶಯನ
ಹಾದು ಹೋದ ನೆಮ್ಮದಿ
ಸ್ವಲ್ಪದರಲ್ಲೇ ಪಕ್ಷಿಗೂಡು
ನನ್ನ ಮುಂದೆ ನಿಲ್ಲಲಿಲ್ಲ

ತಂತಿಯಿಂದ ಹರಿದು ಸಾಗಿ
ಬೆಳಕು ಮನೆಯ ಕೂಡಿತು
ಗೋಡೆ ಮೇಲೆ ಚೀಲ ಹಾಸಿ
ಅದರ ಚೂರು ಹಿಡಿಯಲಿಲ್ಲ
ಹರಿದ ಪರಿ ಗೋಚರಿಸಲಿಲ್ಲ

ಹರಿವ ನದಿಗೆ ಅಡ್ಡಗೋಡೆ
ಸಿಡಿದ ಬಾವಿ, ಹೃದಯಾಘಾತ
ಕುಡುಗೋಲಿನ ಅಲಗಿನಲ್ಲಿ
ಮೇಲೆ ನಿಂತ ಮುಷ್ಠಿಬುದ್ಧಿ
ನೆಗೆದ ಜೀವ ಕಾಣಲಿಲ್ಲ!

ಕಣ್ಣು ಕೂಡಿ, ತುಟಿ ಸೇರಿ
ನಡುವಲ್ಲಿ ಕಾಮ ಘರ್ಷಣೆ
ಬಯಕೆ ಬೆವರು ಕಲೆತು
ಜೀವವೊಂದು ಮೊಳೆಯಿತು
ಅದೆಲ್ಲಿತ್ತೋ ತಿಳಿಯಲಿಲ್ಲ

ಮನೆಯ ಸೂರಿನಲ್ಲಿ ಮಲಗಿ
ಒಂಬತ್ತು ದಿನ ಅಲ್ಲೇ ತಂಗಿ
ಲೋಕ ಬಿಟ್ಟು ಮತ್ತೆ ಬಂದು
ಗೂಡು ಹುಡುಕಿ ಒಳಗೆ ಸಾರಿ
ಪುನರ್ಜನ್ಮ, ಮನವು ನಂಬಲಿಲ್ಲ

2 comments:

  1. ಒಂದು ಅನಿರ್ವಚನೀಯ ಕಾವ್ಯ ಪುಳಕಕ್ಕೆ ಮನ ಈಡಾಯಿತು.

    ಶಕ್ತ ಕಾವ್ಯದ ಓದಿನಲ್ಲಿ ಸಿಗುವ ಪದ ಙ್ಞಾನ ಸಂಚಯ ನನ್ನದಾಯಿತು.

    ReplyDelete
  2. ನಿಮ್ಮ ಪ್ರತಿ ಕವನಗಳೂ ವಿಶೇಷ ಅರ್ಥವನ್ನು ಹೊಂದಿ ಹೊಸ ಅನುಭೂತಿಯನ್ನು ನೀಡುತ್ತವೆ.ಕವಿತೆಯ ಆಳಕ್ಕಿಳಿದು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕಾಗುತ್ತದೆ.ಪ್ರಾಮಾಣಿಕವಾಗಿ ಹೇಳ ಬೇಕೆಂದರೆ ನಿಮ್ಮ ಕವನಗಳನ್ನು ಓದಿ ಅರ್ಥಮಾಡಿಕೊಳ್ಳಲು ಬಹಳ ಪ್ರಯತ್ನ ಮಾಡಿದ್ದೇನೆ.ಆದರದು ಸಾಧ್ಯವಾಗಿಲ್ಲ.................
    ಕಣ್ಣು ಕೂಡಿ, ತುಟಿ ಸೇರಿ
    ನಡುವಲ್ಲಿ ಕಾಮ ಘರ್ಷಣೆ
    ಬಯಕೆ ಬೆವರು ಕಲೆತು
    ಜೀವವೊಂದು ಮೊಳೆಯಿತು
    ಅದೆಲ್ಲಿತ್ತೋ ತಿಳಿಯಲಿಲ್ಲ.......ಈ ಸಾಲುಗಳಂತೂ ಇನ್ನೂ ಚೆನ್ನ. ಅಗೋಚರವಾಗಿ ಅನುಭವಕ್ಕೆ ಬಂದು ಸೃಷ್ಟಿಯ ಹುಟ್ಟಿಗೆ .ಸಾವಿಗೆ ಕಾರಣವಾಗುವ ಜೀವನ ರಹಸ್ಯವನ್ನು ಭೇದಿಸುವ ಪ್ರಯತ್ನ ಮಾಡಿದೆ.ಇಷ್ಟವಾದ ಕವನ.ಆದರೂ ಕವಿ ಆಶಯ ಕವಿಯಿಂದಲೇ ತಿಳಿದರೆ ಚೆನ್ನ!

    ReplyDelete