ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Sunday 18 December 2011

ತಳವಿಲ್ಲದವರು...

ಆಡಿಕೊಳ್ಳುವವರೆಲೆಯಡಿಕೆ ಬಾಯಲ್ಲಿ
ಹುಟ್ಟಿದ ಶತ ಹೊಲಸು ಕಥೆಯಲ್ಲಿ
ನಿಮ್ಮನ್ನೆಲ್ಲ ಕಂಡೆ

ಇವರೋ ರೇಷ್ಮೆ ಸೀರೆಯುಟ್ಟವರ
ಮೇಲೆ
ಹರಿದ ಸೀರೆ ಕಥೆ ಕಟ್ಟಿದವರು
ಹರಿದ ಸೀರೆಯುಟ್ಟವರಿಗೆ
ಹರಿದವರವರೇ ಎಂದು
ಬೊಂಬೆ ಕೆತ್ತಿಕೊಟ್ಟವರು
ಸೆರಗು ಜಾರಿದ್ದು ಕಂಡು
ಮರ್ಯಾದೆಯನ್ನು
ಸೆರೆಮನೆಗೆ ಹಂಚಿದವರು
ಗಂಡ ಹೆಂಡತಿ ನಡುವೆ
ಕೆಂಡ ಸುರಿದು
ಹಾಯಿರಿ ಎಂದು ದೇವರ
ಹೆಸರಿಟ್ಟವರು
ಅಕ್ಕನ ಜೊತೆ ಒಂಟವನ
ಪಕ್ಕವೇ ನಿಂತು
ಸಂಬಂಧಕ್ಕೆ ಕೆಸರೆರೆಚಿದವರು
ಗಾಂಧಿ ಗಾದಿಗೆ
ಹಿಂಸೆಯ ಟೊಂಕ ಕಟ್ಟಿ
ಹರಿದ ನೆತ್ತರಿಗೆ ಬೆರಳಜ್ಜಿ
ಕುಂಕುವ ಇಟ್ಟುಕೊಂಡವರು
ಶುದ್ಧ ಬುದ್ಧನಲ್ಲಿ ನಿರ್ಬುದ್ಧತೆ
ತಂದ ಸಿದ್ಧ ಕೊಳಕು ಹಸ್ತರು
ತಳವಿಲ್ಲದವರು ತಳ ಸುಡುವವರು
ಮಗು ನಗುವಿನ ಸುಳ್ಳು ಮೊಗದವರು

ಜಾತಿ ಜಾತಿಯೆಂದು
ನೀತಿ ಕೊಂದು
ದೇಶ ದೇಶದ ನಡುವೆ
ದ್ವೇಷ ತಂದು
ಮತ ಮತದ ನಡುವೆ
ಪಂಥ ಬಂದು
ಇತಿಹಾಸವನ್ನು ಕೊಡಲಿಯಲ್ಲಿ
ಕೊಚ್ಚಿದವರು
ಹಿಂಸೆ ಪಿಪಾಸುಗಳು
ಬಂಧನದ ಗಟ್ಟಿಗಂಟು ಬಿಚ್ಚಿ
ಚಂದ್ರಗೆ ಸೂರ್ಯನ ತಂದು
ನೂರ್ಕಾಲ ಬಾಳಿ ಎಂದವರು

ಒಂದು ಹೃದಯ
ಮತ್ತೊಂದೆದೆಗೆ ಸೋತಿರಲು
ಆ ಸೋಲನ್ನು ನುಂಗಿ
ಗೆಲವು ಕಂಡೆವೆಂದು ಬೀಗುವವರು
ಇಷ್ಟಪಟ್ಟವನ ಭಾವ
ಗೋರಿಯೊಳಗೆ ಹೂತು
ಅನಿಷ್ಟಕ್ಕೆ ಕತ್ತು ಕೊಡಿಸಿ
ಕಷ್ಟದಲ್ಲಿ ಬಾಳುವಾಗ, ಉಬ್ಬಸದಿ
ಮತ್ತೆ ಮತ್ತೆ ನಕ್ಕವರು
ದೇವದಾಸನಿಗೆ ಪಾರ್ವತಿಯನ್ನು
ತರದೇ ಕೈಗೆ ಮದಿರೆ ನೀಡಿ
ರೋಮಿಯೋ ಜೂಲಿಯಟ್ ಮುಂದೆ
ನಿಗಿ ನಿಗಿ ಬೆಂಕಿ ಸುರಿದು
ತಾಜ್ ಮಹಲ್ ಗೆ
ಕತ್ತಲಲ್ಲಿ ಮಸಿ ಬಳಿಯುವವರು
ಭಗ್ಗೆನ ಬೆಂಕಿ ಹಚ್ಚಿದವರು

ನಾವೆಲ್ಲ ಇಲಿಗಳಿವರಿಗೆ
ಪ್ರಾಣಸಂಕಟದರಿವಿಲ್ಲದ ಮಾರ್ಜಾಲ
ಹನಿಮಳೆಯಿವರಲ್ಲ
ಸುನಾಮಿಯ ಕೊಳೆ
ತೊಳೆಯುತ್ತೇವೆಂದು ಒಂದು ಕಟ್ಟು ಬೀಡಿಯಲ್ಲಿ
ಪ್ರಪಂಚವನ್ನುರಿದವರು
ಅನುಭೂತಿಗಳ ಕೊಚ್ಚೆಯಲ್ಲಿ ಹೊಸಕಿ
ಬಾಡದ ಮೊಲ್ಲೆಯೊಂದಿಗೆ
ಕೂಡದ ಪರಿಮಳದ ಹಂಗಿಗೆ
ಬದುಕ ತಳ್ಳಿಸಿದವರು

7 comments:

  1. Mohan,
    As usual the words used are lovely. No need to understand the lines. just the words are enough to get the feel. Keep it up buddy.

    Santhu.

    ReplyDelete
  2. ಪರಿಣಾಮಕಾರಿಯಾದ ಸುಂದರ ನಿವೇದನೆ ಕವಿತೆಯಲ್ಲಡಗಿದೆ.ನ್ಯಾಯ,ನೀತಿ.ತತ್ವ ನಂಬಿಕೆ.ಸಿದ್ಧಾಂತಗಳೆಲ್ಲ ಹಸಿ ಸುಳ್ಳುಗಳಾಗಿ ಅಟ್ಟಹಾಸ ಮೆರೆದಿವೆ.ಜಾತಿಯ ಸಂಕೋಲೆಯಲ್ಲಿ ಬಂಧಿಯಾದ ಬದುಕಿನ ಚಿತ್ರಣವೇ ಬುಡಮೇಲಾದ ಕಥೆ ಕವಿತೆಯಲ್ಲಿ ತಳವೂರಿದೆ.ಜನ ಸಾಮಾನ್ಯನ ಜೀವನ ಮಾತ್ರ ನೆರಳು ಬೆಳಕಿನಾಟವಾಗಿ ಸೊರಗಿ ಹೋಗುತ್ತಿರುವ ದುರಂತಮಯ ಸನ್ನೀವೇಷ ಕವಿತೆಯಲ್ಲಿ ಪ್ರತಿಬಂಬಿಸಿದೆ.ಅನ್ಯಾಯ,ಶೋಷಣೆಗಳಿಗೆ ಸೆಟೆದು ನಿಂತು ಧೈರ್ಯದಿಂದ ಪ್ರಶ್ನಿಸುವ ಬಂಡಾಯ ತನ್ನಿಂದ ತಾನೆ ಒಡಮೂಡಿದೆ.

    ReplyDelete
  3. ಪರಿಣಾಮಕಾರಿ ಪದಗಳಲ್ಲಿ ಭಾವವನ್ನು ವಿಸ್ತರಿಸಿದ್ದೀರಿ. ರೂಪಕಗಳು ಒಂದಕ್ಕೊಂದು ಹಾಗೇ ಬೆಳೆದು ಕಿಚ್ಚು ಹತ್ತಿಸಿದ ಭಾವವನ್ನು ತಣಿಸುವಂತ ಶಕ್ತಿ ನಿಮ್ಮ ಕವಿತೆಯಲ್ಲಿ ಇದೆ ಅಂತ ಸಂತಸ ಪಟ್ಟೆ.ನೇರವಾಗಿ ನಾಟಿದೆ ದಿನನಿತ್ಯ ಹರಿ ಹಾಯುವ ಮರ್ಮರಗಳು. ಶುಭವಾಗಲಿ.

    ReplyDelete
  4. ಸಮಾಜಘಾತಕತೆಯ ಹಲವು ಮಜಲುಗಳನ್ನು ತೆರೆದಿಟ್ಟ ಕವಿತೆ.. ನೇರ, ಪರಿಣಾಮಕಾರಿ ಮತ್ತು ಮನಸ್ಸಿಗೆ ನಾಟುವಂಥ ಕ್ರಾಂತಿಕಾರಿ ಶೈಲಿ ಬಹಳ ಹಿಡಿಸಿತು. ತಳವಿಲ್ಲದವರು ಮೇಲೆ ಬಾರದಷ್ಟು ತಳಕ್ಕೆ ಹೋಗಲಿ..

    ReplyDelete
  5. ಕೆಲ ಕವನಗಳೂ ತಮ್ಮ ಭಾವ ಸ್ಖಲದಲ್ಲಿ ಸುದೀರ್ಘವಾಗುತ್ತ ಸಾಗುತ್ತವೆ. ಅದು ತಪ್ಪೇನಿಲ್ಲ ಯಾಕೆಂದರೆ ಹೇಳ ಬೇಕಾದ ವಿಚಾರವನ್ನು ಮಂಡಿಸುವ ಕವಿ ಮನಸ್ಸಿಗೆ ಪದಗಳ ಲೆಕ್ಕದ ಹಂಗಿರುವುದಿಲ್ಲ. ಒಂದು ಉತ್ತಮ ಕಾವ್ಯ ಓದಿದ ಅನುಭವಕೊಟ್ಟ ಕವನವಿದು.

    ReplyDelete
  6. tumba chandada kavite annodakkintha maarmika kavite. arthavattagide. nimma blog nodi kushi aatyu...

    ReplyDelete
  7. ಧನ್ಯವಾದಗಳೆಲ್ಲರಿಗೂ.... :)

    ReplyDelete