ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Wednesday 28 December 2011

ಆಣತಿ

ಪ್ರಾಣಿ ಕೊಲ್ಲದ ಜನರು
ಸಸ್ಯಾಹಾರಿಗಳಿವರು
ಜೀವವಿರುವ ಸಸ್ಯ ತಿಂದರು
ಸೊಪ್ಪಿನ ಸಾರು
ಜೊತೆಗೆ ಕೆನೆಮೊಸರು
ಕೆಚ್ಚಲ ಹಾಲು ಕರೆದರು

ತತ್ತಿಗರ್ಭ
ನಾಲಗೆ ಮೇಲಿನ ರುಚಿ
ಹೋದದ್ದು ಒಂದು ಕೋಳಿ
ಒಂದು ಶೇಂಗಾ ಪೊರಟೆಯೊಳಗೆ
ಎರಡು ಬೀಜ
ಅವಳಿ ಜವಳಿ ಸಾವು
ಎಲ್ಲರೂ ಕೊಲೆಗಡುಕರೇ
ಪಕ್ಷಪಾತಿಗಳಷ್ಟೇ!

ಜಿಂಕೆ ತಿಂದ ಹುಲಿ
ಹಿಕ್ಕೆ ಹಿಕ್ಕಿತು
ಜಿಂಕೆ ತಿನ್ನುವ ಹುಲ್ಲು
ಬೆಳೆಯಲು
ಮತ್ತೊಂದು ಕೊಬ್ಬಬೇಕಲ್ಲ!
ಆವಿಯಾದ ನೀರು
ಮಳೆಯಾಗಿ ಸುರಿಯಿತು
ಲೋಕಕ್ಕೆಲ್ಲ
ಹರಡಬೇಕಲ್ಲ

ಬದುಕೊಂದು ವೃತ್ತದೊಳಗಿನ
ವೃತ್ತಾಂತ
ಸರಿ ಎಂದದ್ದಷ್ಟು
ಅದಕ್ಕೆ ಎದೆಗೊಟ್ಟು ನಿಂತ
ಮತ್ತಷ್ಟು ತಪ್ಪುಗಳಾದವು
ಸರಿ ತಪ್ಪುಗಳ ಸರಮಾಲೆ
ಮಾನವ ನಿರ್ಮಿತ ಬಲೆ
ಜೀವನವೆಂಬುದೊಂದು ಅಣತಿ

4 comments:

  1. ವ್ವಾವ್ವವ್ವ...ಜೀವನ ವೃತ್ತಾಂತ ವನ್ನು ಸೊಗಸಾಗಿ ಹೇಳಿದಿರಿ..ಎಲ್ಲರೂ ಪಕ್ಷಪಾತಿಗಳಷ್ಟೇ ಎನ್ನೋ ಮಾತಿನೊಳಗೆ ಎಲ್ಲರೊಳಗಿನ ಸಮಾನ ಅಂಶ ಗುರಿತಿಸ ಬಹುದು..
    ಚೆನ್ನಾಗಿದೆ ಸರ್...

    ReplyDelete
  2. ಸೂಕ್ಷ್ಮ ಸಂವೇಧನೆಗಳನ್ನು ಹಾಗೆಯೇ ಬಿಡಿಸಿ ಕಣ್ಣ ಮುಂದಿಡುತ್ತದೆ ನಿಮ್ಮೀ ಕವಿತೆ ಮೋಹನಣ್ಣ.. ಅದ್ಭುತವೆನಿಸುವ ಕವಿತೆ, ಪ್ರತಿಯೊಂದು ಪ್ರಾಣಿಯೂ ಆಹಾರ ಸರಪಣಿಯಲ್ಲಿ ಯಾವುದಾದರೊಂದು ಜೀವವನ್ನು ಕೊಂದೇ ಬದುಕುತ್ತದೆ ಅದು ಸಹಜವೂ ಹೌದು ಏಕೆಂದರೆ ಪ್ರಕೃತಿ ನಮಗೇ ತಿಳಿಯದೆ ತನ್ನ ಸಮತೋಲನವನ್ನು ಹೀಗೆ ಕಾಯ್ದುಕೊಂಡಿರುತ್ತದೆ.. ಹಾಗೆ ಕಾಯ್ದುಕೊಳ್ಳುವಾಗ ಡಾರ್ವಿನ್ ನ ವಾದವನ್ನು ಅನುಸರಿಸಿಕೊಳ್ಳುತ್ತದೆ ಆದ್ದರಿಂದ ಬೇರೆಯ ಪ್ರಾಣಿಗಳ ಅಹಾರ ಪದ್ದತಿಯ ಬಗ್ಗೆ ಹೇಗೆ ಪ್ರಶ್ನಿಸಲು ನಮಗೆ ಅಧಿಕಾರವಿಲ್ಲವೋ ಹಾಗೆಯೆ ಮತ್ತೊಬ್ಬ ಮಾನವನ ಆಹಾರ ಪದ್ಧತಿಯನ್ನು ಪ್ರಶ್ನಿಸಿಕೊಳ್ಳುವ ಹಕ್ಕೂ ಇರದು ಎಂಬ ಮಾರ್ಮಿಕ ಸಂದೇಶ ಕವಿತೆಯಿಂದ ರವಾನೆಯಾಗಿದೆ.. "ಎಲ್ಲರೂ ಕೊಲೆಗಡುಕರೆ, ಆದರೆ ಪಕ್ಷಪಾತಿಗಳಷ್ಟೆ" ಸರಿಯಾದ ಪದ ಬಳಕೆಯಾಗಿದೆ.. ಕವಿತೆ ಕಟ್ಟುವಾಗಿನ ನಿಮ್ಮ ಪದಪ್ರಯೋಗಗಳು ಎಷ್ಟೆಷ್ಟೋ ಯುವ ಕವಿಗಳಿಗೆ ಕಲಿಕೆಯ ವಿಷಯಗಳಾಗುತ್ತವೆ.. ಚೆಂದವಾದ ಕವಿತೆ, ಪ್ರಬುದ್ಧತೆಯಿಂದ ಮೂಡಿ ಬಂದಿದೆ..:)))

    ReplyDelete
  3. ಪ್ರಾಣಿ ಹಿಂಸೆಯ ವಾದ ವಿವಾದಗಳ ಒಂದು ಸಣ್ಣ ಕಲ್ಪನೆ ಇಲ್ಲಿ ಇದನ್ನು ಓದಿದಾಗ.. ಅಣು ಅಣುವಿನಲ್ಲೂ ಪ್ರಾಣ .. ಭಗವಂತನ ವಾಸಸ್ಥಾನ.. ಎಂದು ಅಧ್ಯಾತ್ಮ ವಿಚಾರದಲ್ಲಿ.. ಇದರ ಪ್ರಕಾರ ಸಸ್ಯಹಾರಿಯೋ ಅಥವಾ ಮಾಂಸಹಾರಿಯೋ.. ಒಟ್ಟಿನಲ್ಲಿ ಆ ದೇವರ ನೆಲೆಯನ್ನೇ ಇಲ್ಲದಾಗಿಸುವಂತೆ ಮಾಡುತ್ತಿರುವರೇನೋ ಎಂದು ನಿಮ್ಮ ಈ ಕವನ ಹೇಳುವಂತಿದೆ.. ಪ್ರೀತಿಯಲ್ಲಿ ಒಂದು ಮಾತು ಹೇಳುವಂತೆ... ನಿನಗಾಗಿ ನಾನು .. ನನಗಾಗಿ ನೀನು .. ನನ್ನ ಪ್ರಾಣ ನಿನಗಾಗಿ.. ನಿನ್ನ ಉಸಿರು ನನ್ನ ಪ್ರೀತಿಯಾಗಿ... ಎನ್ನುವ ಕಲ್ಪನೆ ಇಲ್ಲಿ ಕಾಣುತ್ತದೆ.. ಒಂದು ಪ್ರಾಣಕ್ಕೆ ಮತ್ತೊಂದು ಪ್ರಾಣ.. ಕಾಣದ ಪ್ರಾಣಬಲಿಯ ಒಂದು ಚಿತ್ರಣ ನಿಮ್ಮ ಕವನ ಕಾಣುವಂತೆ ಮಾಡಿದೆ.. ಹುಲ್ಲು ತಿನ್ನುವ ಜಿಂಕೆ .. ಜಿಂಕೆಯ ತಿನ್ನಲು ಹುಲಿ... ಹುಲಿ ಏಕೆ ಹುಲ್ಲನ್ನು ತಿನ್ನುವುದಿಲ್ಲ.. ?
    ಕಾರಣ ಬದುಕಿನ ಆಸೆ ಇರಬಹುದೇನೋ .. ವಿಷಪೂರಿತ ಹುಲ್ಲು ಸಿಕ್ಕರೆ ಎನ್ನುವ ಪ್ರಾಣ ಭಯವೇನೋ... ಹುಲ್ಲು ತಿಂದು ಬದುಕಿದ ಜಿಂಕೆಯನ್ನು ಕಂಡು ಜೀವಕ್ಕೆ ತೊಂದರೆಯಿಲ್ಲ ಎಂಬ ಯೋಚನೆಯಲ್ಲಿ ಆ ಜಿಂಕೆಯನ್ನು ತಿನ್ನಬಹುದೇನೋ... ಒಟ್ಟಾರೆ ಕೊನೆಯಲ್ಲಿ ಹೇಳಿದ ಆ ಸರಿ ತಪ್ಪುಗಳ ಗೊಂದಲದಲ್ಲೇ ಜಗದೊಳು ಜೀವನ... ನಮ್ಮ ಶಾಲಾ ದಿನಗಳ ವಿಜ್ಞಾನ ವಿಷಯಗಳ ಮತ್ತು ಆ ಸಮಯದಲ್ಲಿ ಬರುತ್ತಿದ್ದ ಈ ನಿಮ್ಮ ಕವನದ ವಿಷಯ ಈಗ ಆ ದಿನಗಳ ನೆನೆದು ಮನದಲ್ಲೇ ಒಂದು ಕಿರುನಗೆಯನ್ನು ತಂದಿದೆ... ಓದಿದ ತಕ್ಷಣವೇ ಹೇಳುವ ಮನಸ್ಸಿದ್ದರೂ ಸಹ ಕೆಲಸದ ಒತ್ತಡಗಳ ನಡುವೆ ವಿಸ್ತಾರವಾಗಿ ಬರೆಯಲು ಸಾಧ್ಯವಾಗಿರಲಿಲ್ಲ.. ಒಂದೆರಡು ಸಾರಿ ಸುಮ್ಮನೆ ಹಾಡುವ ಪ್ರಯತ್ನ ಮಾಡುವಂತೆ ಪ್ರೇರೇಪಿಸುತ್ತಿದೆ ಕವನದ ಸರಳ ವಿಷಯ ಮೇಲ್ನೋಟಕ್ಕೆ .. ಆದರೆ ಪ್ರಾಣ ಪ್ರಾಣಗಳ ಚಿಂತೆಯಲ್ಲಿ ಆಳವಾಗಿ ಅಡಗಿದ ಜೀವನ ಅರ್ಥ.. ಬದುಕೇ ಮತ್ತೊಬ್ಬರ ಮೇಲೆ ಅವಲಂಬಿತ ಎನ್ನುವಂತೆ ಈ ಕವನದ ಒಂದು ಸಂಕೇತ ಇರುವಂತೆ... ಹಸಿವಿಗಾಗಿ ಕೊಲೆ .. ಭಯದಲ್ಲಿ ಕೊಲೆ.. ಅಧಿಕಾರದ ವ್ಯಾಮೋಹಕ್ಕೆ ಕೊಲೆ.. ಏನೂ ಅಲ್ಲದಿದ್ದರೂ ನಾನು ನನ್ನದು ಎನ್ನುತ ತನ್ನತನವನ್ನು ಉಳಿಸಿಕೊಳ್ಳಲು ಒಂದು ವಿಧದಲ್ಲಿ ಮತ್ತೊಂದು ಕೊಲೆ.. ಒಂದು ಪ್ರಾಣವೇ ಮತ್ತೊಂದಕ್ಕೆ ಜೀವಾಮೃತವಿದ್ದಂತೆ.. ನಿಮ್ಮ ಕವನದಲ್ಲಿನ ವಿಷಯ ಒಂದು ಪ್ರಶ್ನೆಯಂತೆ.. ಉತ್ತರವೂ ಸಹ ಅಲ್ಲೇ ಇದೆ.. ಅತೀ ಸೊಗಸಾದ ರಚನೆ... ಹೋಲಿಕೆ ಮತ್ತು ಪದಪ್ರಯೋಗ ವಿಷಯ ನೆನೆದಾಗ ನಿಮ್ಮ ನೆನಪಲ್ಲಿ ಇರುವ ಕವಿತೆ.. :)

    ReplyDelete
  4. ಇದು ಜಗದ ನಿಯಮ. ಬಲಿಷ್ಠತೆಗಳು ತಲೆ ಎತ್ತಿ ನಿಲ್ಲುತ್ತದೆ. ಇದನ್ನು ಪ್ರಶ್ನಿಸಲಾಗುವುದಿಲ್ಲ. ಆಹಾರ ಕಾಲಚಕ್ರದಲ್ಲಿ ನಿರಂತರ ಕ್ರಿಯೆ.
    ಇಂಥ ಸೂಕ್ಷ್ಮ ವಿಷಯಗಳ ಚಿಂತನೆ ಅಂದರೆ ಅದನ್ನು ನಿಮ್ಮಿಂದ ಕಲಿಯಬೇಕು ಮೋಹನ್.

    ReplyDelete